ಗಾಳ..
– ಅನಿತ ನರೇಶ್ ಮಂಚಿ
ಎಫ್ ಬಿ ತೆರೆಯುತ್ತಿದ್ದಂತೆ ಬದಿಯಲಿ ಬಂದ ಫ್ರೆಂಡ್ ರಿಕ್ವೆಷ್ಟ್ ಗಳನ್ನು ನೋಡಿದ. ಅಲ್ಲಿ ಕಾಣಿಸಿದ ಸುಂದರಿಯೊಬ್ಬಳ ಭಾವಚಿತ್ರ ನೋಡಿ ದಂಗಾದ ಲಲಿತ್..
ಹೆಸರು ನಿವೇದಿತಾ.. ಕಾಲೇಜು ಕನ್ಯೆ.. ತುಂಟ ನಗುವಿನ ಆ ಮುಖ ತನ್ನ ಗಾಳಕ್ಕೆ ಬೀಳಬಹುದೇ… !! ಅರೆಕ್ಷಣ ಚಿಂತಿಸಿ ,ಕೂಡಲೆ ಕನ್ ಫರ್ಮ್ ಮಾಡಿದ.
ಜೊತೆಗೆ ‘ಬಿ ಮೈ ಫ್ರೆಂಡ್ ಫಾರ್ ಎವರ್’ ಎಂದು ಮೆಸೇಜ್ ಕಳುಹಿಸಿದ.
ಕೂಡಲೇ ಆ ಕಡೆಯಿಂದ ‘ಇಟ್ ಈಸ್ ಮೈ ಪ್ಲೆಶರ್’ ಎಂಬ ಪ್ರತ್ಯುತ್ತರ.
ಕುಳಿತಲ್ಲೇ ನಸುನಗೆ ಬೀರಿದ. ಲಲಿತ್ ಅಗರ್ವಾಲ್ ಹೆಸರು ಯುವ ಪೀಳಿಗೆಗೆ ಪರಿಚಿತವೇ. ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲೂ ರಾರಾಜಿಸುತ್ತಿದ್ದ ತನ್ನ ಮುಖ. ಅಪ್ಪನ ಉದ್ಯಮದ ಕೋಟಿಗಟ್ಟಲೆ ಹಣದ ಏಕೈಕ ವಾರಸುದಾರ, ಯುವತಿಯರ ನಿದ್ದೆ ಕದಿಯುವಂತಿರುವ ಸುಂದರ ಮೊಗ.. ಇಷ್ಟು ಸಾಲದೇ ನನ್ನನ್ನು ಗುರುತಿಸಲು.. ಹೆಮ್ಮೆಯಿಂದ ಬೀಗಿತ್ತು ಮನ.





