ವಿಷಯದ ವಿವರಗಳಿಗೆ ದಾಟಿರಿ

ಮೇ 29, 2012

5

ರಾತ್ರಿಯ ಕತ್ತಲಿನ ಮೌನ ನನ್ನಲ್ಲಿನ ಪ್ರಶ್ನೆಗಳಿಗೆ ಸಿಕ್ಕ ಉತ್ತರವಾಗಿತ್ತು

‍ನಿಲುಮೆ ಮೂಲಕ

– ಭಾಸ್ಕರ್ ಎಸ್.ಎನ್

ತನ್ನ ಕಂದಮ್ಮನನ್ನು ಕಂಕುಳಲ್ಲಿ ಹೊತ್ತ ಆಕೆಗೆ ಮುಂದಿನ ದಾರಿ ಕಾಣುತ್ತಿಲ್ಲ, ಕೊನೆಯ ಕಣ್ಣ ಹನಿಯೂ ಸಹಾ ಬತ್ತಿ ಹೋಗಿತ್ತು. ಕ್ಷಣದಿಂದ ಕ್ಷಣಕ್ಕೆ ಕಂಕುಳಲ್ಲಿದ್ದ ಮಗುವಿನ ಜ್ವರ ಏರುತ್ತಿತ್ತು.

“ಏನಮ್ಮಾ! ಇಲ್ಲಿ ಸುಮ್ನೆ ನಿಂತಿದ್ರೆ ಕೆಲ್ಷ ಆಗೋಲ್ಲ. ದುಡ್ಡಿದ್ರೆ ಮಾತ್ರ ಇಲ್ಗೆ ಬಾ…ಸುಮ್ನೆ ನಮ್ ತಲೆ ತಿನ್ಬೇಡಾ, ಹೋಗ್..ಹೋಗ್” ಹೀಗೆ ಬಂದ ದ್ವನಿಯಲ್ಲಿದ್ದ ನಿರ್ಭಾವುಕತೆ ಆಕೆಯನ್ನು ಮತ್ತಷ್ಟು ನಿಸ್ಸಹಾಯಕ್ಕೆ ದೂಡುತ್ತಿತ್ತು. ಈ ಮಾತುಗಳನ್ನಾಡಿದವರು ಮತ್ಯಾರೂ ಅಲ್ಲ, ಒಬ್ಬ ಸುಪ್ರಸಿದ್ದ ಡಾಕ್ಟರ್‍, ಡಾ.ಕಷ್ಯಪ್. “ಅನುಗ್ರಹ ನರ್ಸಿಂಗ್ ಹೋಂ” ನ ಒಡೆಯ.

ಇವೆಲ್ಲವನ್ನು ಗಮನಿಸುತ್ತಿದ್ದ ನನಗೆ ಆಕೆಯ ದಯನೀಯ ಸ್ಥಿತಿ ಕಂಡು ಮಾತು ಹೊರಡದಂತಾಗಿತ್ತು. ಒಂದು ರೀತಿಯ ನಿಸ್ಸಹಾಯತೆ ನನ್ನನ್ನು ಆವರಿಸ ತೊಡಗಿತ್ತು.

ಆಕೆಯ ಜೊತೆಯಲ್ಲಿದ್ದ ಮಹಿಳೆಯಿಂದ ತಿಳಿದು ಬಂದ ವಿಷಯವೆಂದರೆ, ಆಕೆಗೆ ಇಬ್ಬರು ಹೆಣ್ಣುಮಕ್ಕಳು, ಈಗ ಇರುವ ಮಗುವಿಗೆ ಒಂದು ವರ್ಷ, ಮತ್ತೊಂದು ಮಗು ಈಗ್ಗೆ ೪ ದಿನಗಳ ಹಿಂದೆ ಸಾವನ್ನಪ್ಪಿತ್ತು..! ಅದೂ ಸಹಾ ಜ್ವರದಿಂದ ಅದ್ಯಾವ ಜ್ವರವೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಈಗ ಮಗುವಿಗೆ ಬಂದಿರುವುದೂ ಸಹಾ ಜ್ವರವೇ.

“ಅಲ್ಲ ಬಡವರಿಗಾಗಿಯೇ ಸರ್ಕಾರಿ ಆಸ್ಪತ್ರೆಗಳಿರುವಾಗ, ನೀವ್ಯಾಕೆ ಅಲ್ಲಿಗೆ ಹೋಗಬಾರದು ? ಇಲ್ಲಿನದು ಶುದ್ದ ವ್ಯವಹಾರ. ಸೇವೆಗೆ ಇಲ್ಲಿ ಪ್ರಾಧಾನ್ಯತೆ ಇರುವುದಿಲ್ಲ. ನಿಮ್ಮಂತವರಿಗೆ ಇದು ಸರಿಯಾದ ಜಾಗವಲ್ಲ” ಎಂಬ ಉಚಿತ ಸಲಹೆಯನ್ನು ನಾನು ನೀಡಿದೆ.

“ಸ್ವಾಮಿ..ಇಲ್ಲಿನದು ವ್ಯವಹಾರವಾದರೆ, ಅಲ್ಲಿ ಅವ್ಯವಹಾರ, ಬ್ರಷ್ಟಾಚಾರ. ಆಕೆಯ ಮೊದಲ ಮಗುವನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ದಾಖಲಿಸಿದ್ದು. ಆದರೆ ಮೂರೇ ದಿನಗಳಲ್ಲಿ ಮಗು ನಮ್ಮ ಕೈಗೆ ಸಿಗದೇ ಹೋಗಿತ್ತು. ಆಕೆಯ ಗಂಡನಂತೂ ವಿಪರೀತ ಕುಡುಕ, ಈಗಲೂ ಸಹಾ ಅದೆಲ್ಲಿ ಕುಡಿದು ಬಿದ್ದಿದ್ದಾನೋ….? ನಮ್ಮಂಥವರ ಬದುಕೇ ಇಷ್ಟು”  ಹೀಗೆ ಬಂದ ದ್ವನಿಯಲ್ಲಿ ಯಾವುದೇ ಭಾವುಕತೆ ಇರಲಿಲ್ಲ. ವ್ಯವಸ್ಥೆಯ ಮೇಲೆ ಆಕೆಗಿದ್ದ ಅಸಹನೆ, ಏನೂ ಮಾಡಲಾಗದ ಸ್ಥಿತಿ, ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ನನ್ನಲ್ಲಿ ಹಲುವು ಪ್ರಶ್ನೆಗಳನ್ನು ಮೂಡಿಸಿತ್ತು.

ಆಸ್ಪತ್ರೆಯಿಂದ ಹೊರ ಬಂದಾಗ ಸಮಯ ರಾತ್ರಿ ೦೯.೦೦ ಗಂಟೆಯಾಗುತ್ತಿತ್ತು. ಆಸ್ಪತ್ರೆಯ ಕಾಂಪೌಂಡ್‌ನ ಮೂಲೆಯಿಂದರಲ್ಲಿ ಅದೇ ಮಹಿಳೆಯನ್ನು ಕಂಡೆ ಮಗುವಿಗೆ ತನ್ನ ಎದೆಹಾಲನ್ನು ಉಣಿಸುತ್ತಿದ್ದ ಆಕೆಯ ದೃಷ್ಠಿ ಶೂನ್ಯದೆಡೆಗೆ ನೆಟ್ಟಿತ್ತು. ಮಗುವಿನ ಅಳು ಸಧ್ಯಕ್ಕೆ ನಿಂತತ್ತಿತ್ತು.

“ಆಸ್ಪತ್ರೆಯ ಗೇಟ್ ಮಚ್ಬೇಕು..ಬೇಗ ಎದ್ದು ಹೋಗಮ್ಮಾ.” ಎಂದು ಹೇಳಿದ ವ್ಯಕ್ತಿ, ತನ್ನ ಬಾಯಲ್ಲಿದ್ದ ಎಲೆ ಅಡಿಕೆಯನ್ನು ಉಗಿಯುತ್ತಿದ್ದ.

ನಿಸ್ಸಹಾಯಕನಾಗಿ ಅಲ್ಲಿಂದ ಹೊರಟೆ.

ಮನೆಗೆ ಬಂದ ನನ್ನ ಮನದಲ್ಲಿ ಆ ಮಹಿಳೆ, ಆಕೆಯ ಮಗು, ಸಾವನ್ನಪ್ಪಿದ ಮೊದಲ ಮಗು, ಕುಡುಕ ಗಂಡ, ಸರ್ಕಾರಿ ಆಸ್ಪತ್ರೆ, ಡಾ.ಕಷ್ಯಪ್ ಇವೆಲ್ಲವುಗಳ ದೃಷ್ಯ ಒಂದಾದಮೇಲೊಂದರಂತೆ ಬರುತ್ತಿತ್ತು. ಹಾಗೆಯೇ ನಿದ್ರೆಗೆ ಜಾರಿದೆ.

ಮರುದಿನ ಎಂದಿನಂತೆ ನನ್ನ ಸಂಸಾರ, ಹೆಂಡತಿ, ಮಗು, ನನ್ನ ಕೆಲಸ ಇವುಗಳೆಡೆಗೆ ಮುಖ ಮಾಡಿ, ಎಂದಿನ ದಿನನಿತ್ಯದ ಜೀವನಕ್ಕೆ ನನ್ನನ್ನು ನಾನು ತೊಡಗಿಸಿಕೊಂಡೆ ಹೀಗೆ ನಾಲ್ಕು ದಿನಗಳು ಕಳೆದವು ದಿನದಿಂದ ದಿನಕ್ಕೆ ಆಸ್ಪತ್ರೆಯ ಆ ಘಟನೆಗಳು ನನ್ನ ಮನದಿಂದ ಮರೆಯಾಗಿತ್ತು.

“ರೀ..ಮಗುವಿಗ್ಯಾಕೋ ನೆಗಡಿ ಬಂದಂತಿದೆ ಡಾ.ಕಷ್ಯಪ್ ಅವರ ಬಳಿ ಹೋಗ್ಬೇಕು” ಎಂದು ನನ್ನ ಹೆಂಡತಿ ಹೇಳಿದಾಗಲೇ ಪುನಃ ಅವೆಲ್ಲಾ ಘಟನೆಗಳು ನನ್ನ ಮನದಲ್ಲಿ ಬಂದು ಮಾಯವಾದವು. ಪರ್ಸಿನಲ್ಲಿ ಹಣವಿರುವುದನ್ನು ಖಾತ್ರಿ ಮಾಡಿಕೊಂಡು ಆಸ್ಪ್ರತ್ರೆಗೆ ಹೊರಡಲು ಸಿದ್ದನಾದೆ.

ಆಗ ರಾತ್ರಿ ೦೯೦೦ ಗಂಟೆಯ ಸಮಯ. ಆಸ್ಪತ್ರೆಯ ಆವರಣಕ್ಕೆ ಬಂದು ಅಲ್ಲಿ ಕಂಡ ದೃಷ್ಯದಿಂದ ಅವಾಕ್ಕಾದೆ.

ಅಂದು ಜ್ವರದಿಂದ ಬಳಲುತ್ತಿದ್ದ ಮಗು ಆಸ್ಪತ್ರೆಯ ಆವರಣದಲ್ಲಿ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಅತ್ತಿಂದಿತ್ತಾ ಆಟವಾಡುತ್ತಿತ್ತು. ತನ್ನದೇ ಆದ ಭಾಷೆಯಲ್ಲಿ ತನ್ನಷ್ಠಕ್ಕೇ ತಾನೇ ಮಾತನಾಡುತ್ತಿತ್ತು. ಆ ಮಗುವಿನ ಮುಗ್ದ ನಗು, ಎಲ್ಲರೆಡೆಗೆ ಪ್ರೀತಿಭರಿತ ನೋಟ, ಅಂತ್ಯವೇ ಇಲ್ಲದಂತಹ ಸಂತೋಷ. ಆ ಮಗುವನ ಆಟವನ್ನೆ ಸ್ವಲ್ಪ ಸಮಯ ಗಮನಿಸಿದ ನಾನು ಆಕೆಯ ತಾಯಿಯನ್ನು ಹುಡುಕಿದೆ ಆದರೆ ಆಕೆ ಎಲ್ಲೂ ಕಾಣಲಿಲ್ಲ. ಮಗುವನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯನ್ನು ನಾನು ಗುರ್ತಿಸಿದೆ. ಮಗುವಿನ ಸ್ಥಿತಿಯ ಬಗ್ಗೆ ನನಗೆ ತಿಳಿಸಿದ್ದ ಮಹಿಳೆಯೇ ಆಕೆ. ಆಕೆಯ ಬಳಿಗೆ ಹೋಗಿ ಪ್ರಶ್ನಿಸಿದೆ.

“ಏನಮ್ಮ ಮಗು ಈಗಾ ತುಂಬಾ ಹುಷಾರಾಗಿದೆ. ತುಂಬಾ ಸಂತೋಷ,”

“ಹೌದು ಸ್ವಾಮಿ, ಮಗುವಿಗೆ ಜ್ವರ ಸಂಪೂರ್ಣ ಗುಣವಾಗಿದೆ. ಐದು ದಿನಗಳ ಕಾಲ ನೀಡಿದ ಚಿಕಿತ್ಸೆ ಮಗುವನ್ನು ಹುಷಾರಾಗಿಸಿದೆ” ಮಗುವಿನ ಬಗ್ಗೆ ಆಕೆಯಲ್ಲೂ ತೃಪ್ತಭಾವ ವ್ಯಕ್ತವಾಗಿತ್ತು.

“ಸರಿ..ಮಗುವಿನ ತಾಯಿ ಎಲ್ಲಿ? ಕಾಣುತ್ತಿಲ್ಲವಲ್ಲ..” ಎಂದ ನನಗೆ ಉತ್ತರವಾಗಿ ಸಿಕ್ಕಿದ್ದು ಆಕೆಯ ಮೌನ, ಆ ಮೌನದ ಹಿಂದಿನ ಅರ್ಥ ತಿಳಿದುಕೊಳ್ಳಲು ನಾನು ಪ್ರಯತ್ನ ಮುಂದುವರೆಸಿದೆ.

“ಅಲ್ಲಮ್ಮಾ..ಮಗುವನ್ನು ಬಿಟ್ಟು ತಾಯಿ ಎಲ್ಲಿ ಹೋಗಿದ್ಧಾಳೆ. ಮಗುವಿನ ಜೊತೆ ಇರಬೇಕಲ್ಲಾ..?” ಎಂದೆ

“ಇಲ್ಲ ಸ್ವಾಮಿ, ಮಗುವನ್ನೀಗ ನಾನೇ ನೋಡಿಕೊಳ್ಳಬೇಕು. ಆಕೆ ಬೆಳಗ್ಗೆ ಬರುತ್ತಾಳೆ. ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಬೇಕಲ್ಲಾ, ಇದ್ದ ಈ ಒಂದು ಮಗುವನ್ನು ಆಕೆ ಕಳೆದುಕೊಳ್ಳಲು ಬಯಸಲಿಲ್ಲ. ಆಕೆಗಿದ್ದ ದಾರಿ ಒಂದೇ. ಮಗುವಿನ ಜೀವಕ್ಕಾಗಿ ತನ್ನ ದೇಹವನ್ನು………..” ಉತ್ತರ ಪೂರ್ಣವಾಗಿ ನೀಡಲಿಲ್ಲ. ಆದರೂ ಪರಿಸ್ಥಿತಿ ನನಗೆ ಸ್ಪಷ್ಠವಾಗಿತ್ತು. ಮಗುವಿನ ಆಟ ಮುಂದುವರೆದಿತ್ತು.

“ನೋಡಿ ಮಿಸ್ಟರ್‍. ತಾಯಿ ಮತ್ತು ಮಗು ಅರೋಗ್ಯವಾಗಿರಲು ಈಗ ಸಿಜೇರಿಯನ್ ಅವಶ್ಯಕ. ಹೆಚ್ಚು ಕಡಿಮೆ ಮೂವತ್ತು ಸಾವರ ಆಗಬಹುದು. ಬೇಗ ನಿರ್ಧಾರ ಮಾಡಿ, ಇಲ್ಲದಿದ್ದರೆ ನಾನು ಜವಾಬ್ದಾರನಲ್ಲ..?” ಎಂಬ ನಿಷ್ಟುರ ನುಡಿಗಳನ್ನು ಆಡಿ ಹೊರಬಂದ ಡಾ.ಕಷ್ಯಪ್ ತನ್ನ ಸ್ಕೋಡಾ ಕಾರನ್ನು ಹತ್ತಿ ಹೊರಟರು.

“ಅಷ್ಟು ಹಣ…ಇಲ್ಲ ಸಾಧ್ಯವಿಲ್ಲ ನಾವು ಸರ್ಕಾರಿ ಆಸ್ಪತ್ರೆಗೆ ಹೋಗುತ್ತೇವೆ..” ಆ ವ್ಯಕ್ತಿ ತನ್ನ ನಿರ್ಧಾರ ತಿಳಿಸಿದ್ದ.

ಸರ್ಕಾರಿ ಆಸ್ಪತ್ರೆಯ ದೃಷ್ಯ ನನ್ನ ಕಣ್ಮುಂದೆ ಬಂದು ಮಾಯವಾಯಿತು. ರಾತ್ರಿಯ ಕತ್ತಲಿನ ಮೌನ ನನ್ನಲ್ಲಿನ ಪ್ರಶ್ನೆಗಳಿಗೆ ಸಿಕ್ಕ ಉತ್ತರವಾಗಿತ್ತು.

ಚಿತ್ರಕೃಪೆ : guardian.co.uk

*****************************************************************************************

Read more from ಲೇಖನಗಳು
5 ಟಿಪ್ಪಣಿಗಳು Post a comment
  1. Pavan Parupattedara's avatar
    ಮೇ 29 2012

    ಅತ್ಯಧ್ಬುತ ನಿರೂಪಣೆ, ಮನ ಕಲಕುವ ಬರಹ ಗೆಳೆಯರೆ, ಸತ್ಯಮೇವ ಜಯತೆಯಲ್ಲಿ ಅಮೀರ್ ಹೇಳಿದ ಹಾಗೆ ಖಾಸಗಿ ಆಸ್ಪತ್ರೆಯ ಕೊಳ್ಳೆ ಬಾಕುತನ ನಿಜಕ್ಕು ಬೇಸರ ತರಿಸುವಂತದ್ದು ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ಉಳಿಯುವುದೇ ಕಷ್ಟ, ತಾಯಿ ತನ್ನ ಮಗುವನ್ನುಳಿಸಿಕೊಳ್ಳಲು ಎಲ್ಲಿಯವರೆಗೂ ಬರಬೇಕಾಯ್ತು ನೋಡಿ ಛೆ, ಮನಸ್ಸು ಘಾಸಿ ಮಾಡಿದೆ ಈ ಕಥೆ

    ಉತ್ತರ
  2. jyoti's avatar
    jyoti
    ಮೇ 29 2012

    Higadare ella asahaka mahileyarige ide gati Adare A kudaka Gandana Sarakari Aspatreya
    Vaidyarige Buddi Kalisuvaru Yaru? Nijakku Kannachinalli Niru taruva kate.

    ಉತ್ತರ
  3. silver price's avatar
    ಜೂನ್ 1 2012

    “ಹೌದು ಸ್ವಾಮಿ, ಮಗುವಿಗೆ ಜ್ವರ ಸಂಪೂರ್ಣ ಗುಣವಾಗಿದೆ. ಐದು ದಿನಗಳ ಕಾಲ ನೀಡಿದ ಚಿಕಿತ್ಸೆ ಮಗುವನ್ನು ಹುಷಾರಾಗಿಸಿದೆ” ಮಗುವಿನ ಬಗ್ಗೆ ಆಕೆಯಲ್ಲೂ ತೃಪ್ತಭಾವ ವ್ಯಕ್ತವಾಗಿತ್ತು.

    ಉತ್ತರ
  4. silver price's avatar
    ಜೂನ್ 9 2012

    ತನ್ನ ಕಂದಮ್ಮನನ್ನು ಕಂಕುಳಲ್ಲಿ ಹೊತ್ತ ಆಕೆಗೆ ಮುಂದಿನ ದಾರಿ ಕಾಣುತ್ತಿಲ್ಲ, ಕೊನೆಯ ಕಣ್ಣ ಹನಿಯೂ ಸಹಾ ಬತ್ತಿ ಹೋಗಿತ್ತು. ಕ್ಷಣದಿಂದ ಕ್ಷಣಕ್ಕೆ ಕಂಕುಳಲ್ಲಿದ್ದ ಮಗುವಿನ ಜ್ವರ ಏರುತ್ತಿತ್ತು.

    ಉತ್ತರ
  5. swati's avatar
    swati
    ಜೂನ್ 27 2012

    atyadbut nirupane. tayigint migilad devrilla nija.aadare tayige bnda pristiti mana klukitu.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments