ವಿಷಯದ ವಿವರಗಳಿಗೆ ದಾಟಿರಿ

ಜುಲೈ 10, 2013

ಉತ್ತರಕುಮಾರರ ‘ಚೋರ್’ದಾಮ್ ಯಾತ್ರೆ!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

Naguಸುಂದ್ರಮ್ಮನ ವಠಾರದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಕೈಲಾಸ್ ಟ್ರಾವೆಲ್ಸ್‍ನಲ್ಲಿ ಚಾರ್‍ದಾಮ್ ಯಾತ್ರೆಗೆ ಹೋದ ವಠಾರದ ಕಲಿಗಳಾದ ವೆಂಕ, ಸೀನ,ನಾಣಿ ವಾರವಾದರೂ ಪತ್ತೇನೇ ಆಗಿರಲಿಲ್ಲ. ಟಿವಿನಲ್ಲಿ ಅಲ್ಲಿನ ಪ್ರಚಂಡ ಜಲಪ್ರಳಯ ನೋಡಿದ ಮೇಲೆ, ಅಲ್ಲಿಂದ ಬಚಾವ್ ಆಗಿ ಬಂದೋರು ತಮ್ಮ  ಥರಗುಟ್ಟುವ ಅನುಭವ ಹೇಳಿದ ಮೇಲೆ ಆ ಮಹಾ ಪ್ರಳಯದಲ್ಲಿ ಈ ಮೂವರೂ ಹರೋ ಹರ ಅಂದು ಕೇದಾರನಾಥನ ಪಾದ ಸೇರ್ಕಂಡಿದಾರೆ ಅಂತ ಗ್ಯಾರೆಂಟಿ ಆಗಿತ್ತು. ಸುಂದ್ರಿಗೆ ಒಳಗೊಳಗೇ ಖುಷಿನೇ ಆಗಿತ್ತು. ಮನೆಹಾಳು ಮುಂಡೇವು! ವಠಾರನೂ ಕಾಲಿ ಮಾಡದೆ,ಇಲ್ಲಿರೋರನ್ನ ನೆಮ್ಮದಿಯಾಗಿ ಇರೋಕೂ ಬಿಡದೆ ದಿನಬೆಳಗಾದರೆ ಪ್ರಾಣ ತಿಂತಿದ್ವು. ಈ ನೆವದಲ್ಲಾದರು ನೆಗದು ಬಿದ್ದು ಸತ್ತವಲ್ಲ!

ಪೀಡೆ ತೊಲಗ್ತು ಅಂತ ನಿರಾಳವಾದ್ಲು. ಮೊದ್ಲೇ ಆಸೆಬುರಕ ಮುಂಡೇವು!  ಅರ್ಧದಲ್ಲೇ ಸತ್ತಿವೆ..ಇಷ್ಟು ದಿವಸ ಕಾಡಿದ್ದು ಸಾಲದೆ ಮತ್ತೆಲ್ಲಾದರೂ ಪೀಡೆಯಾಗಿ ಕಾಡಾವು ಎಂದು ಒಂದು ವಡೆ, ಪಾಯಸದ ಊಟ ಹಾಕಿಸಿ ಮೊಸಳೆ ಕಣ್ಣೀರು ಸುರಿಸಿ ಎಳ್ಳು ನೀರು ಬಿಟ್ಟು ಬಿಡಬೇಕು ಅಂತ ತೀರ್ಮಾನ ಮಾಡುದ್ಲು ಸುಂದ್ರಿ. ಅದರಂತೆ ಒಂದು ಸಂತಾಪ ಸೂಚಕ ಸಭೆನೂ ಏರ್ಪಾಡಾಯ್ತು. ಮೂರು ಜನರ ಎಲೆಕ್ಷನ್ ಐಡೆಂಟಿಟಿ ಕಾರ್ಡ್ ಇಟ್ಟು( ದೊಡ್ಡ ಫೋಟೊ ಮಾಡಿಸೋದು ದಂಡ ಅಂತ) ಒಂದೊಂದು ಕಣಗಲೆ, ಚೆಂಡು ಹೂವಿಟ್ಟು ವಠಾರದೋರು ಶೋಕ ಆಚರಿಸುದ್ರು. ಎಲ್ಲಾ ಮೂವರ ( ಇಲ್ಲದ) ಗುಣಗಳ ಗುಣಗಾನ ಮಾಡುದ್ರು.ಇನ್ನೇನು ವಡೆ ಕಡೀಬೇಕು ಅನ್ನುವಷ್ಟರಲ್ಲಿ ವಠಾರದ ಬಾಗಿಲಲ್ಲಿ ನೆರಳು ಕಾಣಿಸ್ಕೊಂತು. ಅತ್ತ ನೋಡುದ್ರೆ ಬಾಗಿಲಲ್ಲಿ ವೆಂಕ, ಸೀನ, ನಾಣಿ ತಟ್ಟಂತ ಪ್ರತ್ಯಕ್ಷ ಆದ್ರು. ಎಲ್ಲಾ ಶಾಕ್ ಆದ್ರು.ಸುಂದ್ರಿ ಅಂತೂ ಧರೆಗಿಳಿದು ಹೋದ್ಲು.ಕೆಲವರಂತೂ ದೆವ್ವ ಅಂತ ಹೆದರಿಕೊಂಡು ಊಟದ ಎಲೆನೂ ಬಿಟ್ಟು ಚಡ್ಡಿಲೇ ಒಂದು ಎರಡು ಮಾಡಿಕೊಂಡು ಓಡಿ ಹೋದ್ರು. ಉತ್ತರಖಂಡ ದುರಂತದಲ್ಲಿ ಮಾಂಸದ ಮುದ್ದೆಯಾಗಿ ಎಲ್ಲೋ ಕೊಚ್ಕಂಡು ಹೋಗಿದಾರೆ ಅಂದ್ಕೊಂಡಿದ್ದ ಈ ಪಾಕಡಾಗಳು ಧಿಡೀರಂತ ಪ್ರತ್ಯಕ್ಷ ಆದರೆ ಹೇಗಾಗಿರಬೇಡ? ಇದ್ದಿದ್ದರಲ್ಲಿ ಸ್ವಲ್ಪ ಧೈರ್ಯ ವಹಿಸಿ ಸುಂದ್ರಿ ಕೇಳುದ್ಲು.

“ ಏನ್ರೋ ಬಂದೇ ಬಿಟ್ರಿ?’
‘ಯಾಕೆ ಬರಬಾರದಾಗಿತ್ತಾ? ‘ ಎಂದ ವೆಂಕ
‘ ಛೇ! ಛೇ! ಹಾಗ್ಯಾಕೆ ಅಂದ್ಕೊತೀರ?ನೀವು ಬದುಕಿ ಬಂದದ್ದು ತುಂಬಾ ಸಂತೋಷ ಆಯ್ತು.. ಹೌದು ಹೇಗಿತ್ತು ಪ್ರವಾಹ?’
‘ ಅದೇನು ಹನಿಮೂನ್ ಟ್ರಿಪ್ಪಾ?’ರೇಗಿದ ನಾಣಿ.

‘ಹೇಗೋ  ಸದ್ಯ ಬಚಾವಾಗಿ ಬಂದ್ರಲ್ಲ..’ಸುಂದ್ರಿ ಒಳಗೊಳಗೇ ಕುದಿಯುತ್ತಾ ನಿಮ್ಮ ಪಿಂಡ ನೀವೇ ತಿಂದು ಸಾಯಿರಿ ಎಂದು ವಡೆ,ಪಾಯಸ ಕೊಟ್ಟು ಮೇಲುಪಚಾರ ಮಾಡಿದಳು.

ರಿಟರ್ನ್ ಆಫ್ ದಿ ಡ್ರಾಗನ್‍ನ ಬ್ರೂಸ್ಲಿಯಂತೆ ನಿಂತಿದ್ದ ಈ ರಿಟರ್ನ್ ಆಫ್ ಕೇದಾರನಾಥ್ ಪುರಿ ಉಸ್ಲಿಗಳನ್ನು ವಠಾರದ ಜನ ನಖಶಿಖಾಂತ ನೋಡುದ್ರು. ಪಾದ ಹಿಂದು ಮುಂದಾಗಿಲ್ಲ, ಇವರು ದೆವ್ವ ಅಲ್ಲ ಅಂತ ಕನ್‍ಫರ್ಮ್ ಆದ ಮೇಲೆ ನಿಧಾನಕ್ಕೆ ಒಬ್ಬೊಬ್ಬರೇ ಹತ್ತಿರ ಬಂದ್ರು.   ಇಷ್ಟು ದಿವಸ ಎಲ್ಲಿದ್ರಿ? ಏನು ಮಾಡ್ತಿದ್ರಿ? ಹೇಗೆ ಬದುಕಿ ಬಂದ್ರಿ? ನಿಮ್ಮ ಅನುಭವ ಹೇಳಿ ಅಂತ ಮುಗಿಬಿದ್ರು. ವೆಂಕ ತನ್ನ ಅನುಭವ ವಾದ್ಯ ಶುರುಮಾಡಿದ:

‘ ಕೇದಾರನಾಥನ ದರ್ಶನ ಮಾಡ್ಕಂಡು ಮೂರು ಜನನೂ ಹೊರುಟ್ವಿ. ಗೌರಿಕುಂಡದ ಸಮೀಪ ಬಂದಾಗ ಭಾರಿ ಮೇಘಸ್ಪೋಟ ಆಯ್ತು. ಪರ್ವತದಿಂದ ಕಲ್ಲುಗಳು ಉರುಳಿ ಬಿದ್ವು.  ಯಾವುದೋ ಅಣೆಕಟ್ಟು ಒಡೆದು ಹೋದ ರೀತಿ  ನದಿ ನೀರು ಸಮುದ್ರದ ತರ ನುಗ್ಗಿ ಬಂತು. ನಾವು ಮೂರು ಜನನೂ ಬೇರೆ ಆದ್ವಿ. ಆಮೇಲೆ  ನಾನು ಒಂದು ತೇಲೋ ಮರದ ರೆಂಬೆ ಹಿಡಿದು  ಈಜ್ಕೊಂಡು ವಾಪಸ್ ಕೇದರನಾಥ ಮಂದಿರಕ್ಕೆ ವಾಪಸ್ ಬಂದೆ. ಇಡೀ ಮಂದಿರದ ತುಂಬಾ ನೀರು ತುಂಬ್ಕೊಂಡಿದೆ. ಹೆಣಗಳು ಒಂದೇ ಸಮ ನನ್ ಪಕ್ಕದಲ್ಲೇ ಸೊಯ್ ಅಂತ ತೇಲಿ ಹೋಗ್ತಿದ್ವು. ನಾನು ಒಂದು ಹೆಣದ ಮೇಲೆ ನಿಂತ್ಕೊಂಡು ಮೇಲೆ ಗಂಟೆ ಹಿಡ್ಕೊಂಡು ಮೂರು ದಿವಸ ನೀರಲ್ಲಿ ಬದುಕುಳಿದಿದ್ದೆ’

“ಅದೇ ಪೇಪರ್ರಲ್ಲಿ ಬಂದಿತ್ತಲ್ಲ ಗಂಟೆ ಹಿಡಿದು ಬದುಕಿದ ಸಾಹಸಿ ಅಂತ ಅದು ನೀನೇನಾ?’ಅಂದ್ರು ಒಬ್ರು.
‘ಹೂ ನಾನೇ! ಇದೇ ನೋಡಿ ಆ ಗಂಟೆ ಒಳಗಿನ ನಾಲಿಗೆ’ಎಂದು ಒಂದು ಕಂಚಿನ ಚೂರನ್ನು ಚಡ್ಡಿ ಜೇಬಿಂದ ತೆಗೆದು ತೋರಿಸಿದ. ಎಲ್ಲಾ ಕಕವಗಳಂತೆ ಮುಟ್ಟಿ ಮುಟ್ಟಿ ನೋಡಿದರು.  ಸೇನೆಯೋರು ಹೆಲಿಕಾಪ್ಟರ್‍ನಲ್ಲಿ ನನ್ನನ್ನ ಎತ್ಕಂಡು ಬರ್ದಿದ್ರೆ ನನ್ನ ಕತೆ ಮುಗಿದು ಹೋಗ್ತಿತ್ತು’ವೆಂಕ ಗಳಗಳ ಅತ್ತ.

‘ ಹೋಗಲಿ ಬಿಡೋ, ಯಾಕೆ ಬಡ್ಕೊತೀಯ! ಬದುಕಿ ಬಂದಿದೀಯಲ್ಲ!’ ಸಮಾಧಾನ ಮಾಡುದ್ಲು ಸುಂದ್ರಿ..
‘ ಬದುಕುದ್ರೆ ಏನಾಯ್ತು? ನಿನ್ನ ವಠಾರದ ಚೀಟಿ ಕಲೆಕ್ಷನ್ ದುಡ್ಡು 2 ಲಕ್ಷ ಜೊತೆಲೇ ಇತ್ತು. ಎಲ್ಲಾ ಕೊಚ್ಕಂಡು ಹೊರಟು ಹೋಯ್ತು..ಈಗ ನಾನು ಯಾರಿಗೆ ಏನು ಕೊಡಲಿ? ನಿಂಗೆ ಹೇಗೆ ಮುಖ ತೋರಿಸ್ಲಿ?’ ಮತ್ತೆ ಗೊರಗೊರ ಎಂದು ಗೊಣ್ಣೆ ಸುರಿಸಿದ.

‘ ಅಯ್ಯೋ! ಅಲ್ಲಿ ಬ್ಯಾಂಕೇ ಉರುಳಿ ಕೋಟ್ಯಾಂತರ ರೂಪಾಯಿ ಕೊಚ್ಕಂಡು ಹೋಗಿದೆಯಂತೆ..ಹೇಗೋ ನೀನು ಬದುಕಿಬಂದ್ಯಲ್ಲ, ಚೀಟಿ ದುಡ್ಡು ಹೋದ್ರೆ ಹೋಯ್ತು ಬಿಡು’ ಅಂದ್ರು ವಠಾರದ ಹಿರಿ ತಲೆ ಶೇಷಪ್ಪ. ವೆಂಕ ಶೇಷಪ್ಪನವರ ಕಾಲಿಗೆ ಬಿದ್ದು ‘ಆ ಕೇದಾರನಾಥ ಮರುಜನ್ಮ ಕೊಟ್ಟ, ಈ ಜನ್ಮದಲ್ಲಿ ಆಗದಿದ್ರೆ ಮುಂದಿನ ಜನ್ಮದಲ್ಲಿ ನಿಮ್ಮೆಲ್ಲರ ಋಣ ತೀರುಸ್ತೀನಿ’ಎಂದು ಮತ್ತೆ ಗಳಗಳ ಅತ್ತ.ಎಲ್ಲಾ ಅಯ್ಯೋ ಪಾಪ! ಅಂತ ಕಣ್ಣಲ್ಲಿ ನೀರು ಹಾಕ್ಕಂಡ್ರು. ಸುಂದ್ರಿ ಒಳಗೊಳಗೇ ಅವಡು ಕಚ್ಚುದ್ಲು!

ಎಲ್ಲಾ ನಾಣಿ ಕಡೆ ನೋಡುದ್ರು. ನಾಣಿ ಶುರು ಮಾಡಿದ: ‘ನನ್ನದೂ ಅದೃಷ್ಟ.  ಏಕಾಏಕಿ ಭಾರೀ ಮಳೆ ಶುರುವಾಯ್ತು. ನಾನಿದ್ದ ರುದ್ರಪ್ರಯಾಗದ ಸಮೀಪ ಹರ್ಶಿಲ್ ಕಣಿವೆ ಎರಡೂ ಬದಿ ಕಟ್ಟಿದ್ದ ಹೋಟೆಲ್‍ಗಳು ಕಟ್ಟಡಗಳು ತರಗೆಲೆ ತರ ಉದುರಿ ಹೋದ್ವು. ನನ್ನ ರೂಂ ಒಂದನ್ನು ಬಿಟ್ಟು ನಾನಿದ್ದ ಲಾಡ್ಜ್  ಪೂರಾ ನೀರಲ್ಲಿ ಕೊಚ್ಕಂಡು ಹೋಯ್ತು.ಅಸಹಾಯಕಳಾಗಿ ಒಬ್ಬಳು ಹುಡುಗಿ ಈಜ್ತಾ ನನ್ನ ರೂಮಿಗೇ ಬಂದ್ಲು. ನನಗೆ ಸಿಕ್ಕಿದ್ದು ಮರದ ರೆಂಬೆ ಅಲ್ಲ, ದಂತದ ರಂಭೆ. ನಾವಿಬ್ರೂ ಸೇರಿ ಒಂದು ಮಗುನ ಸೇವ್ ಮಾಡುದ್ವಿ. ಅದು ಯಾರ ಮಗುನೋ ಗೊತ್ತಿಲ್ಲ. ಆ ಮಗುವಿಗೆ ಗೌರಿ ಹರ್ಶಿಲ್ ಅಂತ ನೇಮ್ ಮಾಡಿದೀವಿ.. ‘
‘ ಎಲ್ಲಿ ಆ ಹುಡುಗಿ?’
ನಾಣಿ ವಾಪಸ್ ಹೋಗಿ ವಠಾರದ ಬಾಗಿಲ ಪಕ್ಕದಿಂದ ಒಂದು ಹುಡುಗಿ, ಒಂದು ಮಗುವನ್ನು ಕರೆದುಕೊಂಡು ಬಂದ. ಎಲ್ಲಾ ಬೆಕ್ಕಸಬೆರಗಾಗಿ ನಿಂತರು. ಸುಂದ್ರಿ ಆ ಹುಡುಗಿ ನೋಡಿ ಶಾಕ್ ಆದ್ಲು.. ‘ಎಲಾ ಇವನ..ಯಾರ ಜೊತೆನೋ ಓಡಿ ಹೋಗಿದ್ದ ನನ್ನ ಮಗಳನ್ನೇ ಕರ್ಕಂಡು ಬಂದಿದಾನಲ್ಲ ಬದ್ಮಾಶ್!’ಎಂದು ಒಳಗೊಳಗೇ ಹಲ್ಲು ಕಡಿದಳು.

‘ ಇವಳನ್ನ, ಈ ಮಗುನ ಏನು ಮಾಡೋದು ಅಂತ ಗೊತ್ತಾಗದೆ ಇಲ್ಲಿಗೆ ಕರ್ಕೊಂಡು ಬಂದೆ. ಸುಂದ್ರಕ್ಕ ಹೆಂಗೆ ಹೇಳುದ್ರೆ ಹಾಗೆ?’ ನಾಣಿ ಕುಹಕ ನಗೆ ಬೀರಿದ.

‘ ಮತ್ತೇನು ಮಾಡ್ತೀಯೋ? ಗುಂಡ್ರುಗೋವಿ ತರ ಇದ್ದೆ..ಆ ದೇವರೇ ಈ ಹುಡುಗಿನೂ,ಮಗುನೂ ಕೊಟ್ಟಿದಾನೆ. ಅಚ್ಚುಕಟ್ಟಾಗಿ ಸಂಸಾರ ಮಾಡ್ಕಂಡು ಇಲ್ಲೇ ಇದ್ದು ಬಿಡು’ ಅಂದ್ರು ಶೇಷಪ್ಪ. ನಾಣಿ ಸುಂದ್ರಿ ಕಡೆ ನೋಡಿ ‘ ಅಕ್ಕಾ, ಇವಳು ನಿನ್ನ ಮಗಳ ಸಮಾನ, ನನ್ನನ್ನೇ ನಿನ್ನ ಅಳಿಯ ಅಂದ್ಕೊ’!ಆಶೀರ್ವಾದ ಮಾಡು ಅಂತ ಕಾಲಿಗೆ ಬಿದ್ದ. ಸುಂದ್ರಿ ಒಳಗೊಳಗೇ ಉರಿದು ಹೋದ್ಲು.

ಸೀನ ಮಾತ್ರ ಮೌನವಾಗೇ ನಿಂತಿದ್ದ. ನಿಂದೇನಪ್ಪ ಕತೆ ?ಅಂದ್ರು ಶೇಷಪ್ಪ. ಸೀನ ಶುರು ಹಚ್ಚಿದ. ‘ಗೋವಿಂದಘಾಟ್ ದಾಟಿ ಬದರಿನಾಥದಿಂದ ಜೋಷಿಮಠಕ್ಕೆ ನಾನು  45 ಕಿ.ಮೀ ನಡ್ಕೊಂಡೇ ಬಂದೆ. ಆಗ ನನಗೊಬ್ಬರು ಸಾಧು ಸಿಕ್ಕುದ್ರು.  ಇಬ್ಬರೂ ಜಾಲಿಗ್ರಾಂಟ್ ಏರ್‍ಪೋರ್ಟ್‍ಗೆ ಒಟ್ಟಿಗೆ ಬಂದ್ವಿ. ಅವರು ತಮ್ಮ ಪೂರ್ವಾಶ್ರಮದ ಕತೆ ಹೇಳುದ್ರು. ಅವರು ಒಂದು ಹುಡುಗಿನ ಪ್ರೀತಿಸಿದ್ರಂತೆ..ಅವಳು ಅವರ ಆಸ್ತಿ, ಮನೆ,ಮಠ,ವಠಾರ ಎಲ್ಲಾ ಹೊಡ್ಕಂಡು ಕೈ ಕೊಟ್ಟು ಓಡಿ ಹೋದ್ಲಂತೆ…ಆ ಪಾಪ! ಅವಳನ್ನ ಹಾಗೆ ಬಿಡಲ್ಲವಂತೆ!’
‘ಹೌದಾ! ಅವರನ್ನೂ ಮನವೊಲಿಸಿ ವಾಪಸ್ ಕರ್ಕೊಂಡು ಬರಬೇಕಾಗಿತ್ತು..’ಅಂದ್ರು ಶೇಷಪ್ಪ.
‘ಸಮಯ ಬಂದಾಗ ಅವರೇ ಬರ್ತಾರಂತೆ..ಅಡ್ರೆಸ್ ಕೊಟ್ಟಿದಾರೆ..’ ಸೀನ ಸುಂದ್ರಿ ಕಡೆ ನೋಡಿದ. ಸುಂದ್ರಿ ಪೂರಾ ಸುಸ್ತಾಗಿದ್ದಳು.

‘ಹೇಗೋ ನೀವೆಲ್ಲಾ ವಾಪಸ್ ಬಂದ್ರಲ್ಲ,ನಂಗೆ ಅಷ್ಟೇ ಸಂತೋಷ..ಆ ಅಡ್ರೆಸ್ ಕೊಡು..ನಾನು ಸ್ವಾಮಿಗಳನ್ನ ನೋಡ್ಕಂಡು ಬರ್ತೀನಿ..’ಅಂದ್ಲು ಸುಂದ್ರಿ.

‘ಅಯ್ಯೋ! ನೀವ್ಯಾಕೆ ಅಷ್ಟು ದೂರ, ಅದೂ ಈ ಪ್ರವಾಹದ ಟೈಮಲ್ಲಿ ಹೋಗ್ತೀರಿ?’

‘ಪರವಾಗಿಲ್ಲ ಕೊಡು. ಸ್ಮಾಮಿಗಳು ದೈವಾಂಶ ಸಂಭೂತರು ಅನಿಸುತ್ತೆ. ನೀವೆಲ್ಲಾ ವಾಪಸ್ ಬಂದ್ರೆ ಕೇದಾರನಾಥನ ದರ್ಶನ  ಮಾಡ್ತೀನಿ ಅಂತ ಹರಕೆ ಕಟ್ಕೊಂಡಿದ್ದೆ. ಸ್ವಾಮಿಗಳೇ ಪ್ರೇರಣೆ ಕೊಟ್ಟಿದಾರೆ’ ಅಂತ ಸುಂದ್ರಿ ಸೀನನ ಪಕ್ಕೆ ತಿವುದ್ಲು. ಸೀನ ಚೀಟಿ ಕೈಗಿಟ್ಟು ಜೈ ಕೇದಾರನಾಥ ಅಂದ.ಚೀಟಿಲಿ ಮಾಜಿ ಪ್ರಿಯಕರನ ತಿರುಮಕೂಡ್ಲು ವಿಳಾಸ ನೋಡಿ ಸುಂದ್ರಿ ‘ಎಲಾ ಬಡ್ಡಿ ಮಕ್ಕಳಾ! ನನಗೇ ಚಳ್ಳೆಹಣ್ಣು ತಿನಿಸಿದೀರಾ?’ ಎಂದು ಕಟಕಟ ಹಲ್ಲು ಕಡುದ್ಲು.

ಚಿತ್ರ ಕೃಪೆ : speedkar.com

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments