ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 3, 2013

6

ದಿನೇ ದಿನೇ ಹೆಚ್ಚುತ್ತಿರುವ ‘ಮೋದಿ ಜಪ’

‍ನಿಲುಮೆ ಮೂಲಕ

– ನರೇಂದ್ರ ಕುಮಾರ ಎಸ್.ಎಸ್

NaModiದಿನಗಳೆದಂತೆ, ೨೦೧೪ರ ಮಹಾ ಚುನಾವಣೆಯು ಹತ್ತಿರ ಬಂದಂತೆ ಭಾರತದಾದ್ಯಂತ ‘ಮೋದಿ ಜಪ’ ಹೆಚ್ಚುತ್ತಿದೆ. ಇದನ್ನು ಕೆಲವರು ‘ಮೋದಿ ಜ್ವರ’, ‘ಮೋದಿತ್ವ’ ಎಂದೂ ಬಣ್ಣಿಸುತ್ತಿರುವರು. ಯಾರು ಏನೇ ಹೇಳಲಿ, ಭಾರತದಾದ್ಯಂತ ನಿತ್ಯವೂ ಚರ್ಚಿಸಲ್ಪಡುತ್ತಿರುವ ಒಂದು ವಿಷಯವೆಂದರೆ “ನರೇಂದ್ರ ಮೋದಿ”. ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಾದ ಟ್ವಿಟ್ಟರ್ ಹಾಗೂ ಪೇಸ್^ಬುಕ್ ಗಳಲ್ಲಿ, ಯುವಕರು ನಡೆಸುವ ಚರ್ಚೆಗಳಲ್ಲಿ, ಕ್ಷೌರಿಕನ ಅಂಗಡಿಯಲ್ಲಿ ನಡೆಯುವ ವಾರ್ತಾಲಾಪಗಳಲ್ಲಿ, ಹಳ್ಳಿಗಳಲ್ಲಿ ನಡೆಯುವ ಸಂಭಾಷಣೆಗಳಲ್ಲಿ – ಎಲ್ಲರೂ ಮೋದಿಯ ಕುರಿತು ಮಾತನಾಡುತ್ತಿದ್ದಾರೆ! ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಜನರ ಚರ್ಚೆಗಳಲ್ಲಿ ಇಷ್ಟರಮಟ್ಟಿಗೆ ಹೊಕ್ಕಿರುವ ಮತ್ತೊಂದು ಹೆಸರಿಲ್ಲ.

ನಾನು ಕೆಲವು ದಿನಗಳ ಹಿಂದೆ, ಬೆಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದೆ. ರಸ್ತೆಗಳೆಲ್ಲ ಗುಂಡಿಗಳಿಂದ ಗಬ್ಬೆದ್ದು ಹೋಗಿದ್ದವು. ಈ ರೀತಿ ಸ್ವಲ್ಪ ಹೊತ್ತು ಪ್ರಯಾಣಿಸಿದ ನಂತರ, ನನಗೆ ನಾನೇ “ಯಾವಾಗ ಸರಿ ಹೋಗುತ್ತೋ ನಮ್ಮ ಬೆಂಗಳೂರು” ಎಂದು ಸ್ವಲ್ಪ ಗಟ್ಟಿಯಾಗಿ ಹೇಳಿಕೊಂಡೆ. ಕೂಡಲೇ, ಆಟೋ ರಿಕ್ಷಾದ ಚಾಲಕ, “ಸಾರ್, ನರೇಂದ್ರ ಮೋದಿಯವರಿಗೆ ಒಂದು ಚಾನ್ಸ್ ಕೊಟ್ಟು ನೋಡಿ, ಎಲ್ಲಾ ಸರಿ ಹೋಗುತ್ತೆ” ಎಂದು ಬಿಡೋದೇ!?

೨೦೦೨ರ ಗೋದ್ರಾ ಹತ್ಯಾಕಾಂಡ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ನಡೆದ ಗಲಭೆಗಳ ನಂತರ, ಭಾರತದ ಮಾಧ್ಯಮಗಳು ನರೇಂದ್ರ ಮೋದಿಯವರೊಡನೆ ಸಮರವನ್ನೇ ಸಾರಿದ್ದವು. ಮೋದಿಯನ್ನು ಒಬ್ಬ ನರಹಂತಕ, ಮುಸಲ್ಮಾನರ ಹಂತಕ, ಇತ್ಯಾದಿ ಬಣ್ಣಹಚ್ಚಿ ಪ್ರಚಾರ ನಡೆಸಿದವು. ಅದಕ್ಕೆಲ್ಲಾ ನರೇಂದ್ರ ಮೋದಿ ತಲೆಕೆಡಿಸಿಕೊಳ್ಳಲಿಲ್ಲ. ಅವರು ಮಾಧ್ಯಮಗಳ ಬಳಿ ಸುಳಿಯಲೇ ಇಲ್ಲ. ಮೌನವಾಗಿ ಗುಜರಾತಿನ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿದರು. ಅವರ ಕೆಲಸವನ್ನು ಮೆಚ್ಚಿ ಗುಜರಾತಿನ ಜನ ಅವರನ್ನು ಎರಡನೇ ಬಾರಿಗೆ ಆಯ್ಕೆ ಮಾಡಿದರು. ಆಗಲೂ ಮಾಧ್ಯಮಗಳು ನರೇಂದ್ರ ಮೋದಿಯವರ ಮೇಲೆ ವಿಷವನ್ನೇ ಕಾರಿದರು. ನರೇಂದ್ರ ಮೋದಿ ತಮ್ಮ “ಗುಜರಾತಿನ ಅಭಿವೃದ್ಧಿ ಕಾರ್ಯ”ವನ್ನು ಮುಂದುವರೆಸಿದರು. ಮಾಧ್ಯಮಗಳು ಭಾರತದ ಎಲ್ಲಾ ಜನರನ್ನೂ ಮೋಸಪಡಿಸಬಹುದು. ಆದರೆ, ಗುಜರಾತಿನಲ್ಲಿ ನಡೆದಿದ್ದ ಕಾರ್ಯವನ್ನು ಪ್ರತ್ಯಕ್ಷ ಕಂಡಿದ್ದ ಜನರೇನು ಮೋಸ ಹೋಗುವರೇ? ಅವರು ಎರಡನೇ ಬಾರಿಯೂ ಮೋದಿಯನ್ನು ಆರಿಸಿದರು. ಮೂರನೇ ಬಾರಿಯಂತೂ ಅನೇಕ ಕಡೆಗಳಲ್ಲಿ ಶೇಕಡಾ ೮೦ರಷ್ಟು ಮುಸಲ್ಮಾನರೂ ನರೇಂದ್ರ ಮೋದಿಯವರಿಗೆ ಮತ ಚಲಾಯಿಸಿಬಿಟ್ಟರು.

ಗುಜರಾತ್ ರಾಜ್ಯ ಅಭಿವೃದ್ಧಿಯತ್ತ ದಾಪುಗಾಲಿಕ್ಕುತ್ತಿದ್ದರೆ, ಭಾರತ ದೇಶವು ಹಿಂದಕ್ಕೆ ಹೆಜ್ಜೆ ಹಾಕಲಾರಂಭಿಸಿಬಿಟ್ಟಿತ್ತು. ಕಳೆದ ೯ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸೋನಿಯಾ-ಮನಮೋಹನ ಸಿಂಗರ ಜುಗಲಬಂದಿ ಯುಪಿಎ ಸರಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗತೊಡಗಿತು. ಭಯೋತ್ಪಾದನೆ, ನಕ್ಸಲ್ ಸಮಸ್ಯೆಗಳು ಹಿಂದೆಂದಿಗಿಂತಲೂ ಹೆಚ್ಚಿಬಿಟ್ಟಿದೆ. ಭಯೋತ್ಪಾದಕರನ್ನು ದಮನಿಸಿದರೆ, ತನ್ನ “ಜಾತ್ಯಾತೀತತೆ”ಗೆ ಭಂಗ ಬಂದುಬಿಡುತ್ತದೇನೋ ಎನ್ನುವ ಆತಂಕದಲ್ಲಿದೆ ಯುಪಿಎ ಸರಕಾರ!! ಪಾಕಿಸ್ತಾನ ಮತ್ತು ಚೀನಾ ದೇಶಗಳು ಭಾರತದೊಳಕ್ಕೆ ನುಸುಳಲು ಪ್ರಯತ್ನಿಸುತ್ತಿರುವುದು ಮತ್ತೆಮತ್ತೆ ಮರುಕಳಿಸುತ್ತಲೇ ಇದೆ. ೧೯೬೨ರ ಯುದ್ಧಕ್ಕೆ ಮೊದಲು ಆಗಿದ್ದಕ್ಕಿಂತಲೂ ಹೆಚ್ಚು ಅತಿಕ್ರಮಣ ಕಳೆದೆರಡು ವರ್ಷಗಳಲ್ಲಿ ನಡೆದಿದೆ! ಪಾಕಿಸ್ತಾನ ಮತ್ತು ಚೀನಾಗಳಿಗೆ ನಮ್ಮ ಪ್ರಧಾನಿಗಳು ಎಚ್ಚರಿಕೆಯನ್ನೇ ನೀಡುವುದಿಲ್ಲ! ಯುಪಿಎ ಸರಕಾರ ಬಂದ ನಂತರ, ಬೋಫೋರ್ಸ್ ಹಗರಣ ಮತ್ತು ಹಿಂದೆ ನಡೆದಿದ್ದ ಎಲ್ಲಾ ಹಗರಣಗಳು ಕ್ಷುಲ್ಲಕವೆನಿಸತೊಡಗಿದೆ – ೨ಜಿ, ಸಿ.ಡಬ್ಮ್ಯು.ಜಿ, ಕೋಲ್ ಗೇಟ್, ಗಳ ಮುಂದೆ ಉಳಿದೆಲ್ಲವೂ ನಗಣ್ಯವಲ್ಲದೆ ಮತ್ತೇನು? ಆದರೆ, ಯುಪಿಎ ಸರಕಾರ ಏನೂ ಆಗಿಲ್ಲವೆನ್ನುವಂತೆ ಎಲ್ಲವನ್ನೂ ತಿಪ್ಪೆಸಾರಿಸಲು ಯತ್ನಿಸುತ್ತಿದೆ. ಭಾರತದ ಆರ್ಥಿಕ ಸ್ಥಿತಿಯೂ ಹಿಂದೆಂದಿಗಿಂತಲೂ ಶೋಚನೀಯವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಕುಳಿತಿವೆ; ಅವು ಕೆಳಗಿಳಿಯುವುದಿರಲಿ, ಮತ್ತಷ್ಟು ಹೆಚ್ಚಿನ ವೇಗದಿಂದ ಮೇಲೇರುತ್ತಲೇ ಇವೆ! ಚೀನಾ ದೇಶವು ತನ್ನ ವಸ್ತುಗಳಲ್ಲು ಭಾರತದಲ್ಲಿ ಸುರಿಯಲು ಭಾರತ ಸರಕಾರವೇ ಅನುವು ಮಾಡಿಕೊಟ್ಟುಬಿಟ್ಟಿದೆ – ಪರಿಣಾಮ, ಇಲ್ಲಿನ ಉದ್ಯಮಗಳೆಲ್ಲಾ ಮುಚ್ಚುವ ಸ್ಥಿತಿಗೆ ಹೋಗುತ್ತಿವೆ. ಆರ್ಥಿಕ ತಜ್ಞರೆನಿಸಿಕೊಂಡ ಮನಮೋಹನ ಸಿಂಗ್ ಮತ್ತು ಚಿದಂಬರಂ ಅವರು ದಿಕ್ಕೇ ತೋಚದಂತೆ ಆಗಿಬಿಟ್ಟಿದ್ದಾರೆ. ಇದೆಲ್ಲಕ್ಕೂ ಪ್ರತ್ಯಕ್ಷ ಸಾಕ್ಷಿಯಾಗಿರುವ ಭಾರತದ ಜನ ರೋಸಿ ಹೋಗಿದ್ದಾರೆ. ಭಾರತವನ್ನು ಈ ಗಂಡಾಂತರದಿಂದ ಪಾರು ಮಾಡಿ, ಮತ್ತೆ ಭಾರತ ಅಭಿವೃದ್ಧಿ ಪಥದತ್ತ ಹೋಗುವಂತೆ ಯಾರು ಮಾಡಬಲ್ಲರು ಎಂದು ಹುಡುಕುತ್ತಿರುವ ಜನರಿಗೆ, ಇಂದು ಕಾಣುತ್ತಿರುವ ಏಕೈಕ ಆಶಾಕಿರಣವೆಂದರೆ ನರೇಂದ್ರ ಮೋದಿ.

ನರೇಂದ್ರ ಮೋದಿ ಹೋದಲ್ಲೆಲ್ಲಾ ಲಕ್ಷೋಪಲಕ್ಷ ಜನ ಸೇರುತ್ತಿದ್ದಾರೆ. ಇದೇ ತಿಂಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೇರಿದ್ದ ಸಭೆಯಲ್ಲೂ ಸುಮಾರು ೫ ಲಕ್ಷ ಜನ ಸೇರಿದ್ದರು. ಬಿಜೆಪಿಗೆ ಎಂದೂ ಮತ ಹಾಕದವರೂ ಸಹ, ಇಂದು ಮೋದಿಗೆ ಮತ ಹಾಕಲು ಕಾಯುತ್ತಿದ್ದಾರೆ. ಮೋದಿಯವರನ್ನು ಶತೃವಂತೆ ಕಾಣುತ್ತಿದ್ದ ಮಾಧ್ಯಮಗಳು, ಇಂದು ಮೋದಿಯ ಪ್ರಚಾರಕ್ಕೆ ಇಳಿದು ಬಿಟ್ಟಿವೆಯೇನೋ ಎನಿಸಲು ಪ್ರಾರಂಭವಾಗಿದೆ. ಭಾರತದ ಉದ್ಯಮ ಜಗತ್ತೂ ನರೇಂದ್ರ ಮೋದಿ ಪ್ರಧಾನಿಯಾಗಲೆಂದು ಕಾಯುತ್ತಿದೆ!

ಭಯೋತ್ಪಾದಕರ ಗುರಿಯೂ ನರೇಂದ್ರ ಮೋದಿಯೇ ಆಗಿದ್ದಾರೆ. ಸೆರೆಸಿಕ್ಕಿರುವ ಭಯೋತ್ಪಾದಕ ಯಾಸಿನ್ ಭಟ್ಕಳ್ ಹೇಳಿಕೆ ಪ್ರಕಾರ, ಅವರ “Top 10 targets” ಎಲ್ಲವೂ ನರೇಂದ್ರ ಮೋದಿಯೇ! ಪಾಟ್ನಾದ “ಹೂಂಕಾರ್ ಸಮಾವೇಶ”ದಲ್ಲಿ ೧೮ ಸ್ಥಳಗಳಲ್ಲಿ ಬಾಂಬುಗಳನ್ನಿಡಲಾಗಿತ್ತು ಎಂದರೆ, ಅವರಿಗೆ ಮೋದಿಯವರ ಕುರಿತಾಗಿ ಯಾವ ಮಟ್ಟದ ಭಯ ಇದೆ ನೋಡಿ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದುಬಿಟ್ಟರೆ ತಮ್ಮ ಆಟ ನಡೆಯುವುದಿಲ್ಲವೆನ್ನುವುದನ್ನು ಅವರು ಎಲ್ಲರಿಗಿಂತ ಚೆನ್ನಾಗಿ ಅರಿತಿರುವರು. ಇದಕ್ಕಾಗಿಯೇ ಹೇಗಾದರೂ ಮಾಡಿ ನರೇಂದ್ರ ಮೋದಿಯವರನ್ನು ಇಲ್ಲವಾಗಿಸಲು ಪಣ ತೊಟ್ಟಿದ್ದಾರೆ!

ನರೇಂದ್ರ ಮೋದಿಯವರನ್ನು ಏನಾದರೂ ಮಾಡಿ ಸಿಕ್ಕಿಹಾಕಿಸಬೇಕೆಂದು ಕಾಂಗ್ರೆಸ್ ಮತ್ತು ಇನ್ನಿತರ “ತಥಾಕಥಿತ ಜಾತ್ಯಾತೀತ ಶಕ್ತಿ”ಗಳು ಇನ್ನಿಲ್ಲದ ಪ್ರಯತ್ನ ನಡೆಸಿವೆ. ಮುಸಲ್ಮಾನರಿಗೆ ನರೇಂದ್ರ ಮೋದಿ ಅವರನ್ನು ಬೆದರು ಬೊಂಬೆಯಂತೆ ತೋರಿಸಿ ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನೂ ಅವರು ಮಾಡುತ್ತಿದ್ದಾರೆ. ಸಿಬಿಐ ಅನ್ನು ಕೂಡಾ ಇದಕ್ಕಾಗಿ ಅವರು ಬಳಸಲು ಯತ್ನಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಅವರ ಪ್ರಯತ್ನಕ್ಕೆ ಯಾವುದೇ ಫಲ ಸಿಕ್ಕಿಲ್ಲ. ಇವರ ಈ ಪ್ರಯತ್ನಗಳಿಂದ, ಅವರ ಹತಾಶತೆ ಪ್ರದರ್ಶನಗೊಳ್ಳುತ್ತಿದೆ ಮತ್ತು ಜನ ಅವರಿಂದ ಹೆಚ್ಚೆಚ್ಚು ದೂರ ಹೋಗುತ್ತಿದ್ದಾರೆ. ಆಶ್ಚರ್ಯವೆಂದರೆ, ಅನೇಕ ಮುಸಲ್ಮಾನ ನೇತಾಗಳು ನರೇಂದ್ರ ಮೋದಿಯವರ ಪರ ಮಾತನಾಡಲು, ಪತ್ರಿಕಾ ಹೇಳಿಕೆ ನೀಡಲು ಆರಂಭಿಸಿಬಿಟ್ಟಿದ್ದಾರೆ! ಒಟ್ಟಿನಲ್ಲಿ ಭಾರತದ ರಾಜಕೀಯ ರಂಗದಲ್ಲಿಂದು ನರೇಂದ್ರ ಮೋದಿಯವರಿಗೆ ಸಾಟಿಯಾಗಬಲ್ಲ ರಾಜಕೀಯ ನೇತಾ ಯಾರೂ ಇಲ್ಲವೆಂದೇ ಹೇಳಬಹುದು. ಇವೆಲ್ಲವೂ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತಿತವಾಗುತ್ತವೆಯೇ, ಬಿಜೆಪಿ ಅಧಿಕಾರಕ್ಕೆ ಬರುತ್ತದೆಯೇ, ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆಯೇ ಎನ್ನುವುದನ್ನು ಚುನಾವಣೆಯೇ ಉತ್ತರಿಸಬೇಕು.

6 ಟಿಪ್ಪಣಿಗಳು Post a comment
  1. SSNK's avatar
    ಡಿಸೆ 3 2013
    ಉತ್ತರ
  2. SSNK's avatar
    ಡಿಸೆ 3 2013

    ಕಾಶ್ಮೀರದ ಮುಸಲ್ಮಾನ ಯುವಕರೂ ನರೇಂದ್ರ ಮೋದಿಯವರತ್ತ ಆಕರ್ಷಿತರಾಗುತ್ತಿದ್ದಾರೆ!
    ಮುಂಬರುವ ಭಾನುವಾರ ಕಾಶ್ಮೀರದಲ್ಲಿ ನಡೆಯಲಿರುವ “ಲಲಕರ್ ಸಮಾವೇಶ”ದಲ್ಲಿ ಸುಮಾರು ೧.೫ ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಮುಸಲ್ಮಾನ ಯುವಕರು ಭಾಜಪ ಸೇರಲಿದ್ದಾರೆ!
    ಅದಕ್ಕೆ ಸಂಬಂಧಿಸಿದ ಈ ಸುದ್ದಿಯ ತುಣಕಗಳನ್ನು ನೋಡಿ:

    “More than 1.5 lakh people, 10,000 of them Muslims – 4,000 from the Kashmir valley — backed by the vibrant social media campaign, will be rolling-out the red carpet for the BJP’s prime ministerial candidate Narendra Modi amid tight security in Jammu on Sunday.”

    “Youth in Jammu and Kashmir wants change. Particularly Muslim youth pin hope on Modi who is dynamic leader and solve all problems,”

    ಉತ್ತರ
  3. SSNK's avatar
    ಡಿಸೆ 3 2013

    ಕಾಂಗ್ರೆಸ್ಸಿಗರು ನರೇಂದ್ರ ಮೋದಿ ಎಂದ ಕೂಡಲೇ ಚೇಳು ಕುಟುಕಿದಂತೆ ಆಡುವುದು ಹೊಸತೇನಲ್ಲ. ನರೇಂದ್ರ ಮೋದಿಯವರ ಗುಜರಾತು ಬೆಳವಣಿಗೆ ಮಾದರಿಯನ್ನೂ ಅವರು ಟೀಕಿಸುವುದರಲ್ಲಿ ಮುಂದು.
    ಆದರೆ, ವಿಪರ್ಯಾಸವೆಂದರೆ, ಕೇರಳದ ಕಾಂಗ್ರೆಸ್ ಸರಕಾರ, ತನ್ನ ಸಚಿವರ ತಂಡವೊಂದನ್ನು ಗುಜರಾತಿನ ಬೆಳವಣಿಗೆಯ ಅಧ್ಯಯನಕ್ಕೆ ಕಳುಹಿಸುತ್ತಿದೆ!
    ಕೆಲವು ದಿನಗಳ ಹಿಂದೆ, ಕೇರಳ ಸರಕಾರವು, ಕೇರಳವನ್ನು ಯಾವ ರೀತಿ ಅಭಿವೃದ್ಧಿ ಪಡಿಸಲಾಗುತ್ತದೆಂದು ಬಿಂಬಿಸಲು, ಜಾಹಿರಾತು ಫಲಕಗಳನ್ನು ಹಾಕಿತ್ತು. ಆ ಫಲಕಗಳಲ್ಲಿ, ಗುಜರಾತಿನ ಉತ್ಕೃಷ್ಟ ರಸ್ತೆಗಳನ್ನು ತೋರಿಸಿದ್ದರು!
    ಕಾಂಗ್ರೆಸ್ಸಿಗರು ಪ್ರಚಾರಕ್ಕಾಗಿ ಏನೇ ಹೇಳಲಿ, ಒಟ್ಟಿನಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಅವರು ನರೇಂದ್ರ ಮೋದಿಯವರ ಮಾದರಿಯನ್ನು ಅನುಸರಿಸುವುದು ತಿಳಿಯುತ್ತಿದೆ.

    http://www.dnaindia.com/india/report-kerala-legislators-to-visit-gujarat-to-study-development-initiatives-1928974

    ಉತ್ತರ
  4. Manjunatha BD's avatar
    Manjunatha BD
    ಡಿಸೆ 6 2013

    ಬದಲಾವಣೆ ಜಗದ ನಿಯಮ, ಹಸತನ್ನು ಮನುಷ್ಯ ಮಾತ್ರವಲ್ಲ ಪ್ರಕೃತಿಯೂ ಬಯಸುತ್ತದೆ, ಆದರೆ ಬದಲಾವಣೆ ಉತ್ತಮ ಭವಿಷ್ಯದತ್ತ ಇರಬೇಕು. ನರೇಂದ್ರ ಮೋದಿಯವರ ಬಗ್ಗೆ ಏನೇ ಆರೋಪ, ಆಸೂಯೆ, ಅಪಪ್ರಚಾರಗಳಿರಲಿ ಅವರು ಮಾತ್ರ ಉತ್ತಮ ಬದಲಾವಣೆಯ ಭವಿಷ್ಯ.

    ಉತ್ತರ
  5. M.A.Sriranga's avatar
    M.A.Sriranga
    ಡಿಸೆ 9 2013

    ನಾಲ್ಕೂ ರಾಜ್ಯಗಳ ಫಲಿತಾಂಶ ಬರುವ ತನಕ ನನಗೆ ನಿಜಕ್ಕೂ ಭಯವಾಗಿತ್ತು.ನಿನ್ನೆ ನೆಮ್ಮದಿಯಾಯ್ತು. ಇನ್ನು ನಮ್ಮ ಭಾರತದ ಜನಗಳು ನಿರ್ಧರಿಸಬೇಕು. ಯಾವುದು ಸಚ್ಚಾ ಯಾವುದು ಜೂಟಾ ಎಂದು. ಮಾಹಾಚುನಾವಣೆ ಹತ್ತಿರ ಬರುತ್ತಿದೆ.

    ಉತ್ತರ
  6. vidya's avatar
    vidya
    ಡಿಸೆ 11 2013

    ನಾಲ್ಕು ರಾಜ್ಯಗಳ ಚುನಾವಣೆ ಚಿತ್ರ ಗಮನಿಸಿಯಾದರೂ ನಮ್ಮ ಇಂಗ್ಲೀಷ್ ಪತ್ರಿಕೆಗಳು ಇಂಗ್ಲೀಷ್ ಟಿ.ವಿ ಗಳು , ಹಾಗೂ ಕನ್ನಡದ ಜ್ಞಾನಪೀಠಿಗಳು, (6,7) ಸೋಕಾಲ್ಡ್ ಬುದ್ಧಿಜೀವಿಗಳು, ಲಡಾಯಿ ಬ್ಲಾಗ್, ವಾರ್ತಾಭಾರತಿ ಪತ್ರಿಕೆ ಇತ್ಯಾದಿಗಳು ಮೋದಿಯನ್ನು ಹುರಿದು ಮುಕ್ಕುವದು ನಿಲ್ಲಿಸುವರೆ?

    ಉತ್ತರ

Leave a reply to Kumar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments