Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧
ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್
ಹದಿಮೂರು ವರ್ಷದ ವಿಪುಲ್ ಕೌಲ್ ಜಮ್ಮು ಕಾಶ್ಮೀರ ರಾಜ್ಯದ ಲೋಕೋಪಯೋಗಿ ಇಲಾಖೆಯ ನಾಲ್ಕನೇ ವರ್ಗದ ನೌಕರರೊಬ್ಬರ ಮಗ. ಹಲವು ವ್ಯಾಧಿಗಳಿಂದ ಬಳಲುತ್ತಿರುವ ವಿಪುಲ ಅವನ ಕುಟುಂಬ ತನ್ನ ಭವಿಷ್ಯವನ್ನೇ ಬಲಿಕೊಟ್ಟು ಕೊಡಿಸುತ್ತಿರುವ ಚಿಕಿತ್ಸೆಯ ಕಾರಣದಿಂದಾಗಿ ಇಂದು ಬದುಕಿದ್ದಾನೆ. 2001ರಲ್ಲಿ ಆತನ ಕುಟುಂಬದವರು ಸಹಾಯಕ್ಕಾಗಿ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು, ಅಂತೆಯೇ ಅವರಿಗೆ 20ಲಕ್ಷ ರೂ ಸಹಾಯ ಧನದ ಭರವಸೆಯನ್ನು ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ನಂತರ ಸಹಾಯ ನಿಂತುಹೋಯಿತು. ತತ್ಕಾಲಕ್ಕೆ ಗೃಹ ಮಂತ್ರಾಲಯ ಮಧ್ಯಪ್ರವೇಶಿಸಿ ನೆರವನ್ನು ಮುಂದುವರಿಸುವಂತೆ ಸೂಚಿಸಿತು. ಇಷ್ಟಾದ ಮೇಲೂ ಅವರಿಗೆ ದೊರಕಿದ್ದು ದಿ 24 ಜುಲೈ 2007ರ ಒಂದು ಪತ್ರ, ಪತ್ರದ ಒಕ್ಕಣೆಯಲ್ಲಿ “ಸಂವಿಧಾನದ ವಿಧಿ 370ರ ಅನ್ವಯ ಜಮ್ಮು ಕಾಶ್ಮೀರ ಸರ್ಕಾರ ಗೃಹ ಮಂತ್ರಾಲಯದ ಸೂಚನೆಯನ್ನು ಪಾಲಿಸುವ ಬಾಧ್ಯತೆಯನ್ನು ಹೊಂದಿರುವುದಿಲ್ಲ.” ಎಂದು ಉಲ್ಲೇಖಿಸಲಾಗಿತ್ತು !
ಇದೊಂದು 370ನೇ ವಿಧಿಯ ದುರುಪಯೋಗದ ಪ್ರತ್ಯೇಕ ಪ್ರಕರಣವಲ್ಲ. 1950ರಲ್ಲಿ ಸಂವಿಧಾನ ಜಾರಿಗೆ ಬಂದಾಗಿನಿಂದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾದ ಸ್ವಾರ್ಥ ಉದ್ಧೇಶಗಳ ಪೂರ್ತಿಗಾಗಿ 370ನೇ ವಿಧಿಯ ನಿಂದನೆ ಮತ್ತು ದುರುಪಯೋಗ ಮತ್ತೆ ಮತ್ತೆ ನಡೆಯಲ್ಪಟ್ಟಿದೆ.
ಆಗಿನ ತುರ್ತು ಸನ್ನಿವೇಶಕ್ಕೆ ಹಂಗಾಮಿ ಏರ್ಪಾಡಾಗಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲಾಗಿತ್ತು. ಜಮ್ಮು ಕಾಶ್ಮೀರದ ಮೇಲೆ ಆಕ್ರಮಣವೆಸಗಿದ್ದ ಪಾಕಿಸ್ತಾನ ರಾಜ್ಯದ ಭೂಭಾಗವನ್ನು ನ್ಯಾಯಬಾಹಿರವಾಗಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ವಿಷಯವನ್ನು ವಿಶ್ವಸಂಸ್ಥೆಗೆ ಒಯ್ಯಲಾಗಿ ವಿಶ್ವಸಂಸ್ಥೆಯ ಭದ್ರತಾ ಮಂಢಳಿಯು ಕೆಲವು ಪೂರ್ವಾನ್ವಯ ಷರತ್ತುಗಳೊಂದಿಗೆ ಜನಮತಗಣನೆಯನ್ನು ನಡೆಸುವ ಗೊತ್ತುವಳಿಯನ್ನು ಅಂಗೀಕರಿಸಿತು. ಆ ಷರತ್ತುಗಳೆಂದರೆ ಪಾಕಿಸ್ತಾನ ಆಕ್ರಮಿತ ಪ್ರದೇಶದಿಂದ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಮತ್ತು ತಾನು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ತಗೆದುಹಾಕಬೇಕು. ಹಾಗೆಯೇ ಭಾರತದ ಸಂವಿಧಾನವನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ನಿರಾಕರಿಸಲ್ಪಡುವುದು.
ಈ ಸನ್ನಿವೇಶಗಳ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಭಾರತೀಯ ಗಣರಾಜ್ಯದ ಸಂವಿಧಾನವನ್ನು ವಿಸ್ತರಿಸುವ ಸಲುವಾಗಿ ತಾತ್ಕಾಲಿಕ ಮಾರ್ಗೋಪಾಯವಾಗಿ ಬಂದಿದ್ದು 370ನೇ ವಿಧಿ. 370ನೇ ವಿಧಿಯು ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಪಟ್ಟಂತೆ ಕಾನೂನುಗಳನ್ನು ರೂಪಿಸುವ ಹಾಗೂ ವಿಸ್ತರಿಸುವ ಸಂಸತ್ತಿನ ಅಧಿಕಾರವನ್ನು ‘ವಿಲಯನ ಒಪ್ಪಂದ’ (Instrument of Accession)ದಲ್ಲಿ ಸೂಚಿಸಿರುವ ವಿಷಯಗಳಿಗೆ ಸೀಮಿತಗೊಳಿಸುತ್ತದೆ. ‘ವಿಲಯನ ಒಪ್ಪಂದ’ದ ಪರಿಶಿಷ್ಟದಲ್ಲಿ ಉಲ್ಲೇಖಿಸಿರುವಂತೆ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಮತ್ತು ಪೂರಕ ವಿಷಯಗಳನ್ನು ಹೊರತುಪಡಿಸಿ ಭಾರತೀಯ ಗಣರಾಜ್ಯ ರೂಪಿಸಿದ ಉಳಿದ ಕಾನೂನುಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರದ ಸಮ್ಮತಿಯು ಅಗತ್ಯವಾಗಿದೆ. ವಿಧಿ 370 ಕೇವಲ ಈ ಬದಲಾವಣೆಯನ್ನು ಸುಗಮಗೊಳಿಸುವ ಹೆಚ್ಚುವರಿ ವ್ಯವಸ್ಥೆಯಷ್ಟೇ ಆಗಿತ್ತು. ಆದರೆ 370ನೇ ವಿಧಿಯ ನೆಪದಲ್ಲಿ ನಿರಂತರವಾಗಿ ರಾಜಕೀಯ ವಂಚನೆ ಮತ್ತು ಸಾಂವಿಧಾನಿಕ ನಿಂದನೆ ನಡೆದಿದೆ. ಉದಾಹರಣೆಗೆ, 370ನೇ ವಿಧಿಯು ಜಮ್ಮು ಕಾಶ್ಮೀರ ರಾಜ್ಯ ಪ್ರತ್ಯೇಕ ರಾಷ್ಟ್ರಧ್ವಜ ಹೊಂದುವ ಅಧಿಕಾರವನ್ನು ಪುರಸ್ಕರಿಸುವುದಿಲ್ಲ, ಹಾಗೆಯೇ ಕೇಂದ್ರದ ಕಾನೂನುಗಳನ್ನು ವಿಸ್ತರಿಸಲು ಅಡ್ಡಿಯಾಗುವಂತಹ ಪ್ರತ್ಯೇಕ ಸಂವಿಧಾನವನ್ನೂ ಸಮ್ಮತಿಸುವುದಿಲ್ಲ.
370ನೇ ವಿಧಿಯ ಸಾಂವಿಧಾನಿಕ ಸಿಂಧುತ್ವ
370ನೇ ವಿಧಿಯನ್ನು ಮುಂದುವರಿಸಬೇಕೆಂದು ಪ್ರತಿಪಾದಿಸುವವರು ‘ಸಂವಿಧಾನ (ಜಮ್ಮು ಕಾಶ್ಮೀರ ರಾಜ್ಯದಲ್ಲಿ ಜಾರಿ) ಆದೇಶ 1954’ (‘Constitution (Application to state of J&K) Order, 1954’)ರ ಅನ್ವಯ ಸಂವಿಧಾನದ ಮೂರನೇ ಭಾಗದಲ್ಲಿ ಸೇರಿಸಲಾದ ವಿಧಿ 35Aಯನ್ನು ಸಾಮಾನ್ಯವಾಗಿ ಪ್ರಸ್ತಾಪಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ 35A ವಿಧಿಯು ಪ್ರತ್ಯೇಕವಾಗಿ ಕೇವಲ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಜಾರಿಗೆ ತಂದ ಸಂವಿಧಾನ ಅಳವದಿಸಲಾಗಿದೆ, ಇದೊಂದು ಸೇರ್ಪಡೆ; ತಿದ್ದುಪಡಿಯಲ್ಲ. ‘ಸಂವಿಧಾನ (ಜಮ್ಮು ಕಾಶ್ಮೀರ ರಾಜ್ಯದಲ್ಲಿ ಜಾರಿ) ಆದೇಶ 1954’ವನ್ನು ಹೊರತುಪಡಿಸಿ ಉಳಿದಂತೆ ಭಾರತದ ಸಂವಿಧಾನದಲ್ಲಿ 35A ವಿಧಿಯು ಕಾಣಸಿಗುವುದಿಲ್ಲ. ಈ ವಿಧಿಯು ಉದ್ಯೋಗ, ರಾಜ್ಯದಲ್ಲಿ ಶಾಶ್ವತವಾಗಿ ನೆಲೆಗೊಳ್ಳುವುದು, ಸ್ಥಿರಾಸ್ತಿಯನ್ನು ಹೊಂದುವುದು, ವಿದ್ಯಾರ್ಥಿವೇತನ ಮತ್ತು ಇತರೆ ಸರ್ಕಾರಿ ಸಹಾಯಗಳಿಗೆ ಸಂಭಂಧಿಸಿದಂತೆ ಜಮ್ಮು ಕಾಶ್ಮೀರ ರಾಜ್ಯದ ಶಾಶ್ವತ ನಿವಾಸಿಗಳಿಗೆ ಕೆಲವು ವಿಶೇಷ ಹಕ್ಕು ಮತ್ತು ಅಧಿಕಾರಗಳನ್ನು ಕೊಡುವುದರ ಜೊತೆಗೆ ಬೇರೆ ರಾಜ್ಯಗಳ ಜನರಿಗೆ ಕೆಲವೊಂದು ಪ್ರತಿಬಂಧಗಳನ್ನು ವಿಧಿಸುತ್ತದೆ.
ಸೂಕ್ಷ್ಮವಾಗಿ ಅವಲೋಕಿಸಿದರೆ 1954ರ ಆದೇಶವು ಜಮ್ಮು ಕಾಶ್ಮೀರ ರಾಜ್ಯದಲ್ಲಿ ಜಾರಿಯಾಗುವಾಗ ಸಂವಿಧಾನದ 14ನೇ ವಿಧಿಯ ನಿಬಂಧನೆಗಳನ್ನು ರದ್ದುಮಾಡಿರುವುದಲ್ಲದೇ ಭಾರತದ ರಾಷ್ಟ್ರಪತಿಗೆ ನೀಡಿರುವ ಅಧಿಕಾರಗಳನ್ನು ಮೀರಿರುವುದು ಕಂಡುಬರುತ್ತದೆ. ರಾಜ್ಯ ಶಾಸನಸಭೆಯ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರ ಮತ್ತು ಸಮಾನತೆಯ ಅಧಿಕಾರಗಳಿಂದ ಭಾರತದ ಯಾವ ನಾಗರಿಕನನ್ನೂ ವಂಚಿಸಲಾಗುವುದಿಲ್ಲ. ‘ಕೇಶವಾನಂದ ಭಾರತಿ ವಿರುದ್ಧ/ರು. ಕೇರಳ ಸರ್ಕಾರ’ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶಿಸಿರುವಂತೆ ಭಾರತ ಸಂವಿಧಾನದ ಪ್ರಸ್ತಾವನೆ(Preamble)ಯಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಭರವಸೆ ನೀಡಲಾಗಿರುವ ಸಮಾನತೆಯ ಮತ್ತು ಸಮಾನ ಅವಕಾಶಗಳ ಹಕ್ಕು ಸಂವಿಧಾನಕ ‘ಮೂಲಭೂತ ಸಂರಚನೆ’ (basic structure)ಯ ಭಾಗವಾಗಿದೆ ಮತ್ತು ಸಂವಿಧಾನದ ಮೂಲಭೂತ ರಚನೆಗೆ ಭಂಗ ಬರುವಂತೆ ರಚಿಸಲ್ಪಟ್ಟ ಯಾವುದೇ ತಿದ್ದುಪಡಿ/ಕಾನೂನು ನಿರರ್ಥಕ (void) ಆಗುವುದು.
ಈ ಹಿನ್ನೆಲೆಯಲ್ಲಿ, ಭಾರತ ಸಂವಿಧಾನವು ಎಲ್ಲ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ಕೊಡುವುದರ ಜೊತೆಜೊತೆಗೆ ಒಂದು ರಾಜ್ಯದ ಶಾಶ್ವತ ನಿವಾಸಿಗಳಿಗೆ ಮಾತ್ರ ವಿಶೇಷಾಧಿಕಾರ ನಿಡುವುದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಇದು ಭಾರತೀಯ ನಾಗರಿಕರಿಗೆ ಸಂವಿಧಾನದ 14ನೇ ವಿಧಿಯು ನಿಡುವ ಸಮಾನತೆ (equality before law)ಯ ಅಧಿಕಾರವನ್ನು ಮೊಟಕುಗೊಳಿಸುತ್ತದೆ. ಹಾಗೆಯೇ 15ನೇ ವಿಧಿಯು ಮತ, ಜಾತಿ, ಲಿಂಗ, ಜನ್ಮಸ್ಥಾನ ಹಾಗೂ ಜನಾಂಗಗಳನ್ನು ಆಧರಿಸಿದ ತಾರತಮ್ಯವನ್ನು ನಿಷೇಧಿಸುತ್ತದೆ. ಈ ತರಹದ ವಿಶೇಷಾಧಿಕಾರದ ಆದೇಶವು ಕಳೆದ 65 ವರ್ಷಗಳಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಾದ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಳ್ಳದೇ ರಾಜ್ಯಾಡಳಿತವನ್ನು ಕೆಲವೇ ಜನರ ಸುಪರ್ದಿಗೆ ವಹಿಸುತ್ತಿದೆ. ಈ ವಿಶೇಷಾಧಿಕಾರವು ಪಂಡಿತರುಗಳ ಮಾರಣಹೋಮ, ನಿರಾಶ್ರಿತರ ಬವಣೆಗಳು, ವಿಭಜನೆಯ ಹುಚ್ಚಾಟಗಳು, ಸಮಾನತೆ ಮತ್ತು ವಯಸ್ಕರಿಗೆ ಮತದಾನದ ಹಕ್ಕುಗಳನ್ನು ಆಧರಿಸಿದ ಭಾರತದ ಜನತಂತ್ರದ ಆಶಾಕಿರಣ ಮತ್ತು ನೂರಾರು ವರ್ಷಗಳ ಇತಿಹಾಸ ಇವನ್ನೆಲ್ಲ ಮರೆಮಾಚಿಸುತ್ತಿದೆ.
ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ 1950ರಲ್ಲೇ ಭಾರತ ಸರ್ಕಾರವು ಭಾರತದ ರಾಜ್ಯಗಳ ಮೇಲೆ 370ನೇ ವಿಧಿಯ ಪರಿಣಾಮಗಳನ್ನು ಕುರಿತು ಶ್ವೇತಪತ್ರದಲ್ಲಿ ವಿವರಿಸಿತ್ತು. ಅದರಂತೆ
ಅ) ಈ ಏರ್ಪಾಡಿನಂತೆ (370ನೇ ವಿಧಿ) ಜಮ್ಮು ಕಾಶ್ಮೀರ ಭಾರತದ ಭಾಗವಾಗಿರುವುದು.
ಆ) ಅದು ಭಾರತ ಒಕ್ಕೂಟದ (Indian union) ಭಾಗವಾಗಿರುವುದು ಮತ್ತು ಭಾರತದ ಸಂಸತ್ತಿಗೆ ವಿಲಯನ ಒಪ್ಪಂದದಲ್ಲಿ ಉಲ್ಲಿಖಿತವಾದ ವಿಷಯಗಳಲ್ಲಿ ಹಾಗೂ ಉಳಿದಂತೆ ರಾಜ್ಯ ಸರ್ಕಾರದ ಸಹಮತಿಯೊಂದಿಗೆ ರಾಜ್ಯಕ್ಕೆ ಸಂಭಂಧಿಸಿದ ಕಾನೂನುಗಳನ್ನು ರೂಪಿಸುವ ಅಧಿಕಾರ ಇರುವುದು.
ಇ) 370ನೇ ವಿಧಿಯ ಅಡಿಯಲ್ಲಿ ಈ ಕೆಳಕಂಡ ಅಂಶಗಳಿಗೆ ಸಂಭಂಧಿಸಿದಂತೆ ಆದೇಶಿಸಲಾಗಿದೆ
1) ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ ಸಂಸತ್ತಿಗೆ ಕಾನೂನು ರಚಿಸುವ ಅಧಿಕಾರವಿರುವ ವಿಷಯಗಳು
2) 1ನೇ ವಿಧಿ (ಒಕ್ಕೂಟದ ಹೆಸರು ಮತ್ತು ಕ್ಷೇತ್ರ ವಿಸ್ತಾರ) ಮತ್ತು 370ನೇ ವಿಧಿಯನ್ನು ಹೊರತುಪಡಿಸಿ ರಾಜ್ಯಕ್ಕೆ ಅನ್ವಯವಾಗುವ ನಿಬಂಧನೆಗಳು.
3) ವಿಷಯಗಳನ್ನು ವಿಸ್ತ್ರತವಾಗಿ ಚರ್ಚಿಸುವ ಸಲುವಾಗಿ ಸಂವಿಧಾನ ಸಭೆ(Constituent assembly)ಯನ್ನು ಘಟಿಸಲಾಗುವುದು.
4) ಸಂವಿಧಾನ ಸಭೆಯು ಎಲ್ಲ ವಿಷಯಗಳಲ್ಲಿ ನಿರ್ಣಯಕ್ಕೆ ಬಂದ ನಂತರ 370ನೇ ವಿಧಿಯನ್ನು ರದ್ದುಗೊಳಿಸುವಂತೆ ಅಥವಾ ಬದಲಾವಣೆ ಮತ್ತು ಅಪವಾದಗಳೊಂದಿಗೆ ಜಾರಿಗೊಳಿಸುವಂತೆ ರಾಷ್ಟ್ರಪತಿಯವರಿಗೆ ಶಿಪಾರಸ್ಸು ನೀಡುವುದು.
ಈ ಎಲ್ಲ ಭರವಸೆಗಳ ಹೊರತಾಗಿ ಮತ್ತು 1994ರ “ಜಮ್ಮು ಕಾಶ್ಮೀರ ರಾಜ್ಯ ಭಾರತದ ಅವಿಭಾಜ್ಯ ಅಂಗ” ಎಂದು ಸಂಸತ್ತಿನಲ್ಲಿ ಠರಾವು ಅಂಗೀಕಾರವಾದರೂ, 370ನೇ ವಿಧಿಯ ಹೆಸರಿನಲ್ಲಿ ಎಸಗಲಾಗುತ್ತಿರುವ ತಾರತಮ್ಯಗಳನ್ನು ಸಮ್ಮತಿಸುತ್ತಿರುವ ಹಳೆಯ ಲೋಪಗಳನ್ನು ಸರಿಪಡಿಸಲು ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ.
ಮುಂದುವರೆಯುವುದು …
Article 370ರ ಬಗ್ಗೆ ತಿಳಿಸುವ ಉತ್ತಮವಾದ ಮಾಹಿತಿಯನ್ನು ಒಳಗೊಂಡ ಲೇಖನ. ಇಂಠ ತಾರತಮ್ಯದ ಕಾನೂನನ್ನು ರದ್ದು ಮಾಡುವ ರಾಜಕೀಯ ಇಚ್ಛಾಶಕ್ತಿ ನಮ್ಮ ರಾಜಕೀಯ ಪಕ್ಷಗಳಿಗೆ ಇದೆಯೆ? ಸದ್ಯದ ನಮ್ಮ ರಾಜಕೀಯ ಪರಿಸ್ಥಿತಿ ನೋಡಿದರೆ ಈ ಅರವತ್ತು ವರ್ಷಗಳಲ್ಲಿ ಆಗದೇ ಇದ್ದದ್ದು ಇನ್ನು ಆಗುತ್ತದೆ ಎಂಬ ನಂಬಿಕೆ ಬರಲು ಸಾಧ್ಯವಿಲ್ಲ.
ಉತ್ತಮ ಮಾಹಿತಿಗಳನ್ನುಳ್ಳ ಲೇಖನ ನೀಡಿದ್ದಕ್ಕೆ ಧನ್ಯವಾದಗಳು.
ಸ್ವಾತಂತ್ರ್ಯ ಬಂದಂದಿನಿಂದಲೂ, ಕಾಶ್ಮೀರದ ಸಮಸ್ಯೆ ಎನ್ನುವುದು, ಭಾರತದ ತಲೆಯ ಮೇಲೆ ತೂಗುತ್ತಿರುವ ಕತ್ತಿಯಂತಾಗಿದೆ.
ಕಾಶ್ಮೀರದ ಸಮಸ್ಯೆಗೆ ಕೋಟ್ಯಾಂತರ ಹಣವನ್ನು ಸುರಿಯಲಾಗಿದೆ. ಆದರೆ, ಅದರಿಂದ ಭಾರತಕ್ಕೆ ಯಾವ ಲಾಭವೂ ಆಗಿಲ್ಲ.
೩೭೦ನೇ ವಿಧಿ ಎನ್ನುವುದು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕವಾಗಿಡುವಲ್ಲಿ ಸಫಲವಾಗಿದೆ, ಅಷ್ಟೇ!
೩೭೦ನೀ ವಿಧಿಯನ್ನು ರದ್ದು ಪಡಿಸಬೇಕು; ಪಾಕ್-ಆಕ್ರಮಿತ-ಕಾಶ್ಮೀರವನ್ನು ವಶಪಡಿಸಿಕೊಳ್ಳಬೇಕು; ಅಲ್ಲಿ ಅಣಬೆಗಳಂತೆ ತಲೆಯೆತ್ತಿರುವ ಉಗ್ರಗಾಮಿ ಶಿಬಿರಗಳನ್ನು ನಾಶ ಪಡಿಸಬೇಕು. ಆಗ ಮಾತ್ರ ಕಾಶ್ಮೀರದ ಸಮಸ್ಯೆ ಪರಿಹಾರವಾಗಬಹುದು.
ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಕಾಶ್ಮೀರ ಸಮಸ್ಯೆಯ ಪರಿಹಾರ ಅತ್ಯಂತ ತುರ್ತಾಗಿ ಆಗಬೇಕಿರುವ ಕೆಲಸ.
ಆ ನಿಟ್ಟಿನಲ್ಲಿ ಭಾರತ ಇಡಬೇಕಾದ ಮೊದಲ ಹೆಜ್ಜೆ, ೩೭೦ನೇ ವಿಧಿಯ ರದ್ದತಿ.
ಈ ದಿನದ ಕನ್ನದ ಪ್ರಭ ಪತ್ರಿಕೆಯಲ್ಲಿ Article 370ರ ಬಗ್ಗೆ ಸುದೀರ್ಘವಾದ ಲೇಖನ ಬಂದಿದೆ. ಬಿದುವಾದಾಗ ಓದಿ. ಆ ವಿಚಿತ್ರವಾದ ನಿಯಮಗಳನ್ನು ಯಾರಾದರು ಪ್ರಶ್ನಿಸುವುದೇ ಅಪರಾಧ ಎಂಬಂತಹ ವಾತಾವರಣ ನಿರ್ಮಾಣ ಮಾಡಿಬಿಟ್ಟಿದ್ದಾರೆ.ಹಾಗೆಯೇ ನಮ್ಮ ಮಂಗಳೂರು ತಾಲಿಬಾನ್ ತರಹ ಆಗುತ್ತಿರುವುದರ ಬಗ್ಗೆ ಓದಿದರೆ ನಿಜಕ್ಕೂ ಭಯವಾಗುತ್ತಾದೆ.
Article 370 ಅನ್ನುವುದು ಏನು ಅನ್ನುವುದನ್ನು ತಿಳಿಯದ ರಾಜಕಾರಣಿಗಳು ಅದರ ಬಗ್ಗೆ ಮಾತನಾಡುವುದು ಸೋಜಿಗವಾದುದಾಗಿದೆ
ಕಾಶ್ಮೀರದಲ್ಲಿ ಗಿಡ-ಮರಗಳು ಅಲ್ಲಾಡುವಷ್ಟು ಗಾಳಿ ಬೀಸಿದರೂ ಸಾಕು,ದಿಲ್ಲಿಯಲ್ಲಿ ಬಿರುಗಾಳಿ ಏಳುತ್ತದೆ. ಇದು ಕೋಮುವಾದಿ ವಿರೋಧಪಕ್ಷಗಳ ಸಂಚು ಎಂಬ ಹೇಳಿಕೆಗಳು ಕೂಡಲೇ ಅಧಿಕೃತವಾಗಿ ಪ್ರಸಾರವಾಗುತ್ತದೆ.
sir e Book beku yelli sigutte heli edu nanna number 9880052280
Dhananjaya avare, The MYTH of “Kashmir Problem” (e-book) illi kharidisa bahudu -> http://pothi.com/pothi/book/ebook-jammu-kashmir-study-center-bengaluru-chapter-myth-kashmir-problem J&K bagegina nimma prashNegalige uttara siguttade.
ಕುಲಂಕುಶವಾಗಿ ಬರೆದಿದ್ದೀರಿ . ಧನ್ಯವಾದಗಳು.ಬಹುಷ ಮೋದಿ ಸರಕಾರ ಈ ಕೂಡಲೇ ೩೭೦ ವಿದಿಗೆ ತಿದ್ದುಪಡಿ ತರುವರೆಂದು ಆಶಿಸುವೆನು