ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 19, 2013

21

ಭಗವದ್ಗೀತೆಯ ನೈತಿಕ ಜಿಜ್ಞಾಸೆ

‍ನಿಲುಮೆ ಮೂಲಕ

– ರಮಾನಂದ ಐನಕೈ

ಭಗವದ್ಗೀತೆಭಗವದ್ಗೀತೆ ಭಾರತೀಯರ ಅತ್ಯಂತ ಪವಿತ್ರವಾದ ಗ್ರಂಥ. ಆದರೆ ಕಳೆದ ಅನೇಕ ವರ್ಷಗಳಿಂದ ಈ ಗ್ರಂಥ ವಿವಾದಕ್ಕೆ ಎಡೆಯಾಗುತ್ತಲಿದೆ. ಭಗವದ್ಗೀತೆಯನ್ನು ಟೀಕಿಸುವ ಬಹುತೇಕ ಜನ ಅದನ್ನು ಓದಿಯೇ ಇಲ್ಲ. ಇನ್ನೂ ಕೆಲವು ಓದಿದವರಿಗೆ ಅದು ಅರ್ಥವೇ ಆಗಿಲ್ಲ. ಅದನ್ನು ಓದಿ ಅರ್ಥಮಾಡಿಕೊಂಡವರಿಗೆ  ಈ ವಿವಾದ ಎಬ್ಬಿಸಿದವರು ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ. ಇಷ್ಟೆಲ್ಲ ಗೊಂದಲವಾಗಲು ಮುಖ್ಯ ಕಾರಣವೆಂದರೆ ನಾವು ಭಗವದ್ಗೀತೆಯನ್ನು ಗೃಹಿಸುತ್ತಿರುವ ರೀತಿ. ಭಗವದ್ಗೀತೆಯನ್ನುವುದು ಒಂದು ಕತೆಯಲ್ಲ. ಅಥವಾ ಬೈಬಲ್, ಕುರಾನುಗಳಂತೆ ಧರ್ಮಗ್ರಂಥವಲ್ಲ. ಅದು ಸಾಮಾಜಿಕ ವ್ಯವಸ್ಥೆಯನ್ನು ನಿರ್ದೇಶಿಸಲು ಹುಟ್ಟಿಕೊಂಡ ಸಂವಿಧಾನವೂ ಅಲ್ಲ. ಭಗವದ್ಗೀತೆಯೆಂದರೆ ಬದುಕಿನ ಜಿಜ್ಞಾಸೆ. ಮನುಷ್ಯ ನೆಮ್ಮದಿಯಿಂದ ಬದುಕಲು ದಾರಿತೋರಿಸುವ ಮಾರ್ಗದರ್ಶಿ. ಹೀಗೆ ಅರ್ಥೈಸಿಕೊಂಡಾಗ ಭಗವದ್ಗೀತೆ ಪ್ರತಿಯೊಬ್ಬರಿಗೆ ನೀತಿಪಾಠವಾಗಿ ತೆರೆದುಕೊಳ್ಳುತ್ತದೆ.

ವಸಾಹತುಶಾಹಿ ಆಳ್ವಿಕೆಯ ಜೊತೆಗೇ ಭಗವದ್ಗೀತೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಚಿಂತನಾಪರಂಪರೆ ಬೆಳೆದುಬಂತು. ಏಕೆಂದರೆ ಪಾಶ್ಚಾತ್ಯರು ಪ್ರೊಟೆಸ್ಟಾಂಟ್ ವಿಚಾರಧಾರೆಯ ನೆಲೆಯಲ್ಲಿ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರಿಗೆ ಭಗವದ್ಗೀತೆ ರಿಲಿಜನ್ನಿನ ಜಿಜ್ಞಾಸೆಯಾಯಿತೇ ವಿನಃ ಬದುಕಿನ ಜಿಜ್ಞಾಸೆಯಾಗಿ ಕಾಣಲೇಇಲ್ಲ. ಅದಕ್ಕೆ ಮುಖ್ಯ ಕಾರಣ ಸಾಂಸ್ಕೃತಿಕ ವೈರುದ್ಧ್ಯತೆ. ಇದೇ ಮುಂದೆ ಸೆಕ್ಯುಲರ್ ಚಿಂತನಾ ವಿಧಾನದಲ್ಲೂ ಮುಂದುವರಿಯುತ್ತಾ ಬಂತು. ಇದು ಇಂದು ಆಧುನಿಕ ಭಾರತದಲ್ಲಿ ಭಗವದ್ಗೀತೆಯ ಕುರಿತಾಗಿ ಅಖಾಡವನ್ನೇ ನಿರ್ಮಾಣ ಮಾಡುತ್ತಲಿದೆ. ಹಾಗಾಗಿ ಭಗವದ್ಗೀತೆಯಲ್ಲಿ ಏನಿದೆ ಮತ್ತು ಅದು ಏನು ಹೇಳುತ್ತಲಿದೆ ಎಂಬುದನ್ನು ಈ ಶತಮಾನದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಭಗವದ್ಗೀತೆಯಲ್ಲಿ ಇಡೀ ಮನುಕುಲದ ದ್ವಂದ್ವಗಳ ಕುರಿತಾಗಿ ಚರ್ಚಿಸಲಾಗುತ್ತದೆ. ಜಗತ್ತಿನ ರಾಷ್ಟ್ರಗಳೆಲ್ಲ ಇಂದು ಯಾವಯಾವ ರೀತಿಯ ಸಂದಿಗ್ಧಗಳನ್ನು ಎದುರಿಸುತ್ತಿವೆಯೋ ಅವುಗಳಿಗೆಲ್ಲ ಉತ್ತರಿಸುತ್ತದೆ ಭಗವದ್ಗೀತೆ. ಪರಸ್ಪರ ಅವಲಂಭನೆಯ ಮೂಲಕವೇ ಈ ಸೃಷ್ಟಿ ಚಲಿಸುತ್ತಿರುತ್ತದೆ. ಬೇರೆ ಬೇರೆ ರೀತಿಯ ಕೆಲಸಕಾರ್ಯಗಳ ಮೂಲಕ ಈ ಸಮಾಜ ವ್ಯವಸ್ಥೆ ನಡೆಯುತ್ತಿರುತ್ತದೆ. ಹಾಗಾಗಿ ಈ ಭೂಮಿಯಮೇಲೆ ಹಿಂಸೆಯೂ ಇರುತ್ತದೆ, ಅಹಿಂಸೆಯೂ ಇರುತ್ತದೆ. ಯುದ್ಧವೂ ಇರುತ್ತದೆ, ಶಾಂತಿಯೂ ಇರುತ್ತದೆ. ತರತರದ ಜನರೂ ಇರುತ್ತಾರೆ. ಸದಾ ಸಂಘರ್ಷಗಳೂ ಅನಿವಾರ್ಯ.  ಇಂತಹ ವಿಶಿಷ್ಟವಾದ ಪ್ರಪಂಚದಲ್ಲಿ ಮನುಷ್ಯನ ನಿಲುವುಗಳು ಹೇಗಿರಬೇಕು, ವ್ಯಕ್ತಿತ್ವವನ್ನು ಹೇಗೆ ಕಟ್ಟಿಕೊಳ್ಳಬೇಕು ಮತ್ತು ನೆಮ್ಮದಿಯನ್ನು ಹೇಗೆ ಪಡೆಯಬೇಕೆಂಬುದನ್ನು ಭಗವದ್ಗೀತೆ ನಿರ್ದೇಶಿಸುತ್ತದೆ. ಈ ದೃಷ್ಟಿಯಿಂದ ಇದೊಂದು ಅದ್ಭುತವಾದ ಗ್ರಂಥ.

ಭಗವದ್ಗೀತೆ ನೈತಿಕ ಬೋಧನೆ ಮಾಡುತ್ತದೆಯೆಂಬುದೇ ಇಂದಿನ ವಿವಾದಗಳಿಗೆ ಮುಖ್ಯ ಕಾರಣ. ಈ ಅಪವಾದವನ್ನು ಖಂಡಿಸುವಾಗ ಭಾರತೀಯರ ನೈತಿಕ ಸ್ವರೂಪವೇನೆಂಬುದರ ಬಗ್ಗೆ ನಾವು ತಿಳಿದುಕೊಳ್ಳಬೇಕಾಗುತ್ತದೆ. ಪಾಶ್ಚಾತ್ಯರ ನೈತಿಕತೆ ನಾರ್ಮೆಟಿವ್ ಸ್ವರೂಪದ್ದಾಗಿದೆ. ಅದಕ್ಕೆ ಎರಡೇ ಮುಖವಿರುತ್ತದೆ.  ಒಳ್ಳೆಯದು ಕೆಟ್ಟದ್ದು, ಸರಿತಪ್ಪು, ಸತ್ಯಸುಳ್ಳು ಹೀಗೆ ಪರಸ್ಪರ ವಿರೋಧವಾದ ವಾಸ್ತವಗಳಮೂಲಕ ನೈತಿಕತೆಯನ್ನು ನಿರ್ಧರಿಸುತ್ತಾರೆ. ಅಂದರೆ ಅರ್ಧಸತ್ಯ ಎಂಬುದು ಅವರ ನಿಘಂಟುವಿನಲ್ಲಿ ಇಲ್ಲ. ಪೀಟರ್ ಬ್ರೂಕ್ ಮಹಾಭಾರತವನ್ನು ಸಿನೇಮಾ ಮಾಡಿದ. ಅದರಲ್ಲಿ ಗೀತೋಪದೇಶದ ಸನ್ನಿವೇಶ ಬರುತ್ತದೆ. ಕರ್ಮಣ್ಯೇವಾಧಿಕರಸ್ತೆ ಮಾಫಲೇಶು ಕದಾಚನ ಅಂದಾಕ್ಷಣ ಪಾಶ್ಚಾತ್ಯ ಪ್ರೇಕ್ಷಕರೆಲ್ಲ ಗೊಳ್ಳೆಂದು ನಕ್ಕರಂತೆ. ಏಕೆಂದರೆ ಫಲವಿಲ್ಲದೆ ಕೆಲಸಮಾಡು ಎಂದರೆ ಅವರಿಗೆ ಆರ್ಥವೇ ಆಗಲಾರದು. ಕೆಲಸ ಮಾಡಿದಮೇಲೆ ಫಲಪಡೆಯಲೇಬೇಕೆಂಬುದು ಅವರ ನಂಬಿಕೆ. ಆದರೆ ಫಲವಿಲ್ಲದೆ ಕೆಲಸಮಾಡುವುದು ಭಾರತೀಯರಿಗೆ ಆಧ್ಯಾತ್ಮ! ನಮಗೆ ಅದೊಂದು ನೈತಿಕ ಸಿದ್ಧಾಂತ. ಹಾಗಾಗಿ ಇಂದಿಗೂ ನೀತಿ ಎಂದಾಕ್ಷಣ ಸೆಕ್ಯುಲರ್ ಮನಸ್ಸುಗಳಿಗೆ ನಗು ಬರುತ್ತದೆ.

ಹಾಗಾದರೆ ಭಾರತದಲ್ಲಿ ನೈತಿಕತೆ ಅಂದರೆ ಏನು? ಭಾರತದಲ್ಲಿ ನೀತಿ ಅಂದರೆ ನಿರ್ಣಯ ಅಲ್ಲ, ನೀತಿ ಅಂದರೆ ನಿಷ್ಕರ್ಷೆ. ನೀತಿ ಅಂದರೆ ತೆಗೆ ಎಂದು ಅರ್ಥ. ಬದುಕಿನ ಬೇರೆಬೇರೆ ಸಂದರ್ಭದಲ್ಲಿ ಜಿಜ್ಞಾಸೆಯ ಮೂಲಕ ನೀತಿಯನ್ನು ರೂಪಿಸಿಕೊಳ್ಳುತ್ತೇವೆ ನಾವು. ದೃಷ್ಟಾಂತಗಳ ಮೂಲಕ ನೀತಿ ತೆಗೆಯುವುದೇ ನೈತಿಕತೆ. ನೈತಿಕತೆ ಅಂದರೆ ಆಯಾ ವಾಸ್ತವಗಳಿಗೆ ನ್ಯಾಯವೆನ್ನುವಂತೆ ಮನುಷ್ಯ ಪ್ರಕಟಗೊಳ್ಳುವ ರೀತಿ. ಪರಿಸ್ಥಿತಿಯ ಒಳಿತಿಗೋಸ್ಕರ ಮನುಷ್ಯ ತೆಗೆದುಕೊಳ್ಳಬಹುದಾದ ನಿಲುವುಗಳು.  ಧರ್ಮವೇ ನಮ್ಮ ನೀತಿ. ಏಕೆಂದರೆ ಧರ್ಮಕ್ಕೆ ನಾರ್ಮೆಟಿವ್ ಚೌಕಟ್ಟು ಇಲ್ಲ. ವಿಧಿ, ವಿಷೇಧದ ಜೊತೆಗೆ ಆಪದ್ಧರ್ಮವೂ ಇದೆ. ಸತ್ಯಂ ಭ್ರುಯಾತ್, ಪ್ರಿಯಂ ಭ್ರುಯಾತ್ ಜೊತೆಯಲ್ಲಿ ನ ಭ್ರುಯಾತ್ ಸತ್ಯಮಪ್ರಿಯಂ ಎಂದೂ ಹೇಳುತ್ತೇವೆ. ಭಗವದ್ಗೀತೆಯ ತುಂಬ ಇದಕ್ಕೆ ಪರ್ಯಾಯವಾದ ನೈತಿಕ ಪಾಠಗಳು ನಡೆಯುತ್ತವೆ. ಭಗವದ್ಗೀತೆ ಮಾತ್ರವಲ್ಲ ನಮ್ಮ ಪುರಾಣಗಳೆಲ್ಲವೂ ಕೇವಲ ಕಥೆಗಳಲ್ಲ, ಅವು ಬದುಕಿನ ಜಿಜ್ಞಾಸೆಗಳು. ನಮ್ಮ ನೀತಿಗೂ ಪಾಶ್ಚಾತ್ಯರ ಮಾರಲ್ಸಿಗೂ ತುಂಬಾ ವ್ಯತ್ಯಾಸವಿದೆ. ಆದ್ದರಿಂದ ಭಗವದ್ಗೀತೆ ಮಾರಲ್ ಸ್ಟೋರಿಯಲ್ಲ. ಅದೊಂದು ವಾಸ್ತವದ ಮಾರ್ಗದರ್ಶಿ.

ಯುದ್ಧಭೂಮಿಯಲ್ಲಿ ಅರ್ಜುನನೆದುರಿಗೆ ಇರುವುದು ಎರಡೇ ಆಯ್ಕೆ. ಹಿಂಸೆ ಮತ್ತು ಧರ್ಮ. ಅಹಿಂಸೆಯನ್ನು ಬೆಂಬಲಿಸಿದರೆ ಅಧರ್ಮಕ್ಕೆ ಜಯವಾಗುತ್ತದೆ. ಜೊತೆಗೆ ಯುದ್ಧ ಕ್ಷತ್ರಿಯ ಧರ್ಮವೂ ಕೂಡ. ಧರ್ಮವನ್ನು ಸಂರಕ್ಷಿಸಬೇಕೆಂದರೆ ಹಿಂಸೆಯನ್ನು ಬೆಂಬಲಿಸಬೇಕಾಗುತ್ತದೆ. ಎಂಥ ನೈತಿಕ ಸಂದಿಗ್ಧ ನೋಡಿ? ಸಮಕಾಲೀನ ಬದುಕಿನಲ್ಲಿ ನಮಗೂ ಕೂಡ ಇಂತಹ ಅನೇಕ ಸಂದಿಗ್ಧಗಳು ಎದುರಾಗುತ್ತವೆ. ಆಧುನಿಕ ವಿಚಾರವಾದ ಇದರಿಂದ ನಮ್ಮನ್ನು ಬಿಡುಗಡೆಗೊಳಿಸಲು ಸೋಲುತ್ತದೆ. ಆದರೆ ಅರ್ಜುನನ ನೈತಿಕ ಸಂಘರ್ಷಗಳಿಗೆ ಕೃಷ್ಣ ವಿಶಿಷ್ಟವಾಗಿ ಮುಖಾಮುಖಿಯಾಗತ್ತಾನೆ. ಸರಿತಪ್ಪುಗಳ ಮಾರ್ಗ ಮತ್ತು ಅವುಗಳ ಪರಿಣಾಮದ ಕುರಿತಾಗಿ ಹೇಳುತ್ತಾನೆ. ಅಂತಿಮ ನಿರ್ಣಯವನ್ನು ಅರ್ಜುನನಿಗೇ ಬಿಡುತ್ತಾನೆ. ಅಹಿಂಸೆ ಮತ್ತು ಧರ್ಮ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದೇ ನಿಜವಾದ ನೀತಿ. ಈ ನೀತಿ ಸಮಾಜದ ಒಳಿತನ್ನು ನಿರ್ಣಯಿಸಬೇಕು. ಯಾವ ವ್ಯಕ್ತಿ ತಾನು ಎನ್ನುವ ಅಹಂಕಾರ ತೊರೆಯುತ್ತಾನೋ ಅವನಿಗೆ ಪಾಪ-ಪುಣ್ಯಗಳೆರಡೂ ತಟ್ಟಲಾರದು. ವಿಶ್ವರೂಪ ದರ್ಶನದಿಂದ ಅರ್ಜುನನ ಅಹಂಕಾರ ನಾಶವಾಗುತ್ತದೆ. ಯುದ್ಧಕ್ಕೆ ಸಿದ್ಧನಾಗುತ್ತಾನೆ. ಯಾವ ಆಧುನಿಕ ಪಾಠವೂ ಈ ರೀತಿಯಲ್ಲಿ ಬದುಕಿನ ಸಂಘರ್ಷವನ್ನು ಪರಿಹರಿಸಿ ನೆಮ್ಮದಿಯ ಬದುಕಿಗೆ ದಾರಿತೋರಿಸಲಾರದು.

ಭಗವದ್ಗೀತೆಯಲ್ಲಿ ಇದೇ ನೀತಿಯೆಂದು ನೇರವಾಗಿ, ನಿರ್ದಿಷ್ಟವಾಗಿ ಎಲ್ಲೂ ಹೇಳುವುದಿಲ್ಲ. ಅದರಲ್ಲಿಯ ದೃಷ್ಟಾಂತಗಳ ಮೂಲಕ ನಾವು ನೀತಿಯನ್ನು ಕಂಡುಕೊಳ್ಳಬೇಕು. ಭವದ್ಗೀತೆ ನೀತಿಯಾಗುವುದು ನಮ್ಮ ಹೃದಯದಲ್ಲಿ.  ಹಾಗಾಗಿಯೇ ಭಗವದ್ಗೀತೆ ಎಲ್ಲಕಾಲದಲ್ಲಿಯೂ ಪ್ರಸ್ತುತವಾಗುತ್ತದೆ. ಭಗವದ್ಗೀತೆಯ ಮೇಲೆ ಎಷ್ಟೊಂದು ಭಾಷ್ಯಗಳು ಬಂದಿವೆ. ಭಗವದ್ಗೀತೆಯ ತಿರುಳನ್ನು ಉಪಯೋಗಿಸಿಕೊಂಡು ಎಷ್ಟೊಂದು ಸಾಹಿತ್ಯಗಳು ರಚಿತವಾಗಿವೆ. ಗಾಂಧೀಜೀಯವರಿಗೆ ಭಗವದ್ಗೀತೆಯಲ್ಲಿ ಸಿಕ್ಕ ನೀತಿಯೆಂದರೆ ಅಹಿಂಸಾ ಮಾರ್ಗ. ಅದನ್ನೇ ಸತ್ಯಾಗ್ರಹವನ್ನಾಗಿ ಪರಿವರ್ತಿಸಿಕೊಂಡರು. ಸಂಸಾರದಲ್ಲಿದ್ದವರಿಗೂ ಆದ್ಯಾತ್ಮ ಸಾಧನೆ ಮಾಡುವ ಮಾರ್ಗ ತೋರಿಸುತ್ತದೆ ಭಗವದ್ಗೀತೆ. ಅದಕ್ಕಾಗೆ ಭಕ್ತಿ ಪಂಥದವರೂ ಭಗವದ್ಗೀತೆಯ ಮಾರ್ಗ ಅನುಸರಿಸಿದರು.

ಭಾರತೀಯರ ಜೀವನಕ್ರಮಕ್ಕೂ ಪಾಶ್ಚಾತ್ಯರ ಚಿಂತನಾ ವಿಧಾನಕ್ಕೂ ಎಷ್ಟು ವೈರುದ್ಧ್ಯವಿದೆಯೆಂಬುದು ಭಗವದ್ಗೀತೆಯಿಂದ ತಿಳಿದು ಬರುತ್ತದೆ. ಆದ್ದರಿಂದ ಭಗವದ್ಗೀತೆ ಅಂದರೇನೇ ಒಂದು ರೀತಿಯ ನೈತಿಕ ಜಿಜ್ಞಾಸೆ. ಇದರ ಸರಿಯಾದ ಓದಿನ ಮೂಲಕವಾಗಿ ನಾವು ನಮ್ಮ ಸಂಸ್ಕೃತಿಯ ಪ್ರತ್ಯಭಿಜ್ಞಾನ ಮಾಡಿಕೊಳ್ಳಬೇಕಾಗಿದೆ.

ಚಿತ್ರ ಕೃಪೆ : http://www.bhagavad-gita.us

21 ಟಿಪ್ಪಣಿಗಳು Post a comment
  1. SSNK's avatar
    ಡಿಸೆ 19 2013

    [[ಅಥವಾ ಬೈಬಲ್, ಕುರಾನುಗಳಂತೆ ಧರ್ಮಗ್ರಂಥವಲ್ಲ.]]
    ‘ಧರ್ಮ’ಕ್ಕೂ ಬೈಬಲ್ ಮತ್ತು ಕುರಾನುಗಳಿಗೂ ಸಂಬಂಧವಿಲ್ಲ.
    ‘ಧರ್ಮ’ ಎನ್ನುವ ಪದಕ್ಕೆ ಜಗತ್ತಿನ ಯಾವುದೇ ಭಾಷೆಯಲ್ಲೂ ಪರ್ಯಾಯವಿಲ್ಲ ಮತ್ತು ಜಗತ್ತಿನ ಯಾವ ಸಂಸ್ಕೃತಿಯಲ್ಲೂ ಅದರ ಕಲ್ಪನೆಯೇ ಇಲ್ಲ. ಹೀಗಿರುವಾಗ, ಬೈಬಲ್, ಕುರಾನುಗಳನ್ನು ಧರ್ಮಗ್ರಂಥ ಎನ್ನುವುದು ತಪ್ಪಲ್ಲವೇ? ಅವು ಮತೀಯ ಗ್ರಂಥಗಳೆಂದರೆ ಸರಿ ಹೋಗುತ್ತದೆ.

    ನೀವು ಪ್ರಾರಂಭದಲ್ಲಿ ಹೀಗೆ ಹೇಳಿರುವಿರಿ:
    > ಭಗವದ್ಗೀತೆ ಎನ್ನುವುದು ಬೈಬಲ್, ಕುರಾನುಗಳಂತೆ ಧರ್ಮಗ್ರಂಥವಲ್ಲ
    ನಿಮ್ಮ ಬರಹವನ್ನು ಓದಿದವರಿಗೆ, ಭಗವದ್ಗೀತೆ ಎನ್ನುವುದು ಧರ್ಮಗ್ರಂಥವಲ್ಲವೇನೋ ಎನಿಸಿಬಿಡುತ್ತದೆ. ಆದರೆ, ಲೇಖನದ ಮುಂದಿನ ಭಾಗದಲ್ಲಿ ಭಗವದ್ಗೀತೆ ಎನ್ನುವುದು ನಮ್ಮ ಧರ್ಮಗ್ರಂಥ ಎಂದು ಸ್ಪಷ್ತವಾಗಿ ಹೇಳಿರುವಿರಿ. ನಿಮ್ಮ ಈ ವಾಕ್ಯಗಳನ್ನೊಮ್ಮೆ ನೋಡಿ:
    [[ ಭಗವದ್ಗೀತೆಯೆಂದರೆ ಬದುಕಿನ ಜಿಜ್ಞಾಸೆ. ಮನುಷ್ಯ ನೆಮ್ಮದಿಯಿಂದ ಬದುಕಲು ದಾರಿತೋರಿಸುವ ಮಾರ್ಗದರ್ಶಿ.]]
    [[ನಮಗೆ ಅದೊಂದು ನೈತಿಕ ಸಿದ್ಧಾಂತ.]]
    [[ಧರ್ಮವೇ ನಮ್ಮ ನೀತಿ.]]

    ಪ್ರಾಯಶಃ ನೀವು ಈ ರೀತಿ ಹೇಳಬೇಕೆಂದು ಪ್ರಯತ್ನಿಸಿರುವಿರಿ ಎಂದುಕೊಳ್ಳುವೆ (ಅಥವಾ ಈ ಲೇಖನವು ಆಂಗ್ಲಭಾಷೆಯಿಂದ ಅನುವಾದಗೊಂಡಿದೆಯೇ? ಹಾಗಿದ್ದರೆ, ಅನುವಾದಕರು ಉಂಟುಮಾಡಿರುವ ಗೊಂದಲ ಎಂದುಕೊಳ್ಳಲಡ್ಡಿಯಿಲ್ಲ):
    > “ಭಗವದ್ಗೀತೆ ಎನ್ನುವುದು ಬೈಬಲ್, ಕುರಾನುಗಳಂತೆ ಮತಗ್ರಂಥವಲ್ಲ.”
    > “ಅದೊಂದು ಧರ್ಮಗ್ರಂಥ.”

    ಉತ್ತರ
    • ramananda ainkai's avatar
      ramananda ainkai
      ಡಿಸೆ 20 2013

      ಬೈಬಲ್ ಮತ್ತು ಕುರಾನ್ಗಳು ಆಯಾ ರಿಲಿಜನ್ನಿನ ಹೋಲಿ ಬುಕ್ಕುಗಳು. ಭಗವದ್ಗೀತೆಯನ್ನೂ ಅದೇರೀತಿ ಎಂದು ತಿಳಿಯಲಾಗಿದೆ.ಅದು ತಪ್ಪು ಎನ್ನುವುದು ನನ್ನ ಻ಅಭಿಪ್ರಾಯ.

      ಉತ್ತರ
      • Kumar's avatar
        ಡಿಸೆ 24 2013

        ನಾನೂ ಅದನ್ನೇ ಹೇಳುತ್ತಿರುವುದು.
        Religion (ಮತ) ಮತ್ತು ಧರ್ಮವನ್ನು ಹೋಲಿಸುವುದೇ ತಪ್ಪು.
        ಮತಕ್ಕೆ ಪುಸ್ತಕ ಮತ್ತು ಅದರ ಪ್ರವಾದಿಯೇ ಆಧಾರ. ಅವುಗಳಿಲ್ಲದೆ ಅದಕ್ಕೆ ಅಸ್ತಿತ್ವವಿಲ್ಲ.
        ಧರ್ಮಕ್ಕೆ ಯಾವ ಪುಸ್ತಕವೂ ಬೇಕಿಲ್ಲ. ಭಗವದ್ಗೀತೆ ಬರುವುದಕ್ಕೆ ಮುಂಚೆಯೂ ಹಿಂದೂ ಧರ್ಮವಿತ್ತು.
        ಕೃಷ್ಣನೂ ತಾನು ಧರ್ಮ ಪ್ರವರ್ತಕ ಎಂದು ಹೇಳಿಕೊಂಡಿಲ್ಲ. ತಾನು ಧರ್ಮದ ರಕ್ಷಣೆ ಮಾಡುವವನು ಎಂದಷ್ಟೇ ಹೇಳಿಕೊಂಡಿದ್ದಾನೆ.
        ಹೀಗಾಗಿ, Religionಗೆ ಸೇರಿದ ಪುಸ್ತಕ ಮತ್ತು ಧರ್ಮಕ್ಕೆ ಸೇರಿದ್ದೆಂದು ಹೇಳಲಾದ ಪುಸ್ತಕವನ್ನು ಹೋಲಿಸಲಾಗುವುದಿಲ್ಲ.
        ಹಾಗೆಂದ ಮಾತ್ರಕ್ಕೆ, ಭಗವದ್ಗೀತೆ ಧರ್ಮಗ್ರಂಥವಲ್ಲ ಎನ್ನಲಾದೀತೆ?
        ಅದು Religionನ ಪುಸ್ತಕದಂತೆ “ಮತೀಯ ಗ್ರಂಥ”ವಲ್ಲ ಅಷ್ಟೇ.

        ಉತ್ತರ
        • ನವೀನ's avatar
          ನವೀನ
          ಡಿಸೆ 24 2013

          ಧರ್ಮಗ್ರಂಥ ಮತ್ತು ಮತೀಯಗ್ರಂಥದ ನಡುವಿನ ವ್ಯತ್ಯಾಸವೇನೆಂದು ನಿಮ್ಮ ಅಭಿಪ್ರಾಯ?
          ಭಗವದ್ಗೀತೆ ಅನ್ನುವುದು ಹಿಂದೂಗಳ ‘ಒಂದು’ ಗ್ರಂಥ, ಆ ರೀತಿಯವು ಇನ್ನೂ ಹಲವು ಇರುವುದಾಗಿದೆ (ಉದಾ: ವೇದಗಳು,ಉಪನಿಷತ್ತುಗಳು ಇತ್ಯಾದಿ)

          ಉತ್ತರ
  2. Nanjunda Raju's avatar
    ಡಿಸೆ 19 2013

    ಮಾನ್ಯರೇ, ಸಾಮಾನ್ಯವಾಗಿ ಭಗವದ್ಗೀತೆ ಎಂಬುದು ತುಂಬಾ ವಿಸ್ತಾರವಾದ ಗ್ರಂಥ. ಅದನ್ನು ಅರ್ಥಮಾಡಿಕೊಂಡಲ್ಲಿ ಜೀವನ ಸುಗಮ ಸುಲಭ. ಭಗವಧೀತೆಗೆ ಯಾವುದೇ ಕಟ್ಟುಪಾಡು ಇಲ್ಲ ಆಸಕ್ತಿ ವಹಿಸಿ ಯಾರು ಬೇಕಾದರೂ ಯಾವ ಧರ್ಮದವರೂ ಬೇಕಾದರೂ ಓದಬಹುದು. ಸಾಮಾನ್ಯವಾಗಿ ಗೀತೆಯನ್ನು ಓದಿದವರು ದಾನವನದವನು ಮಾನವನಾಗುತ್ತಾನೆ. ಬದುಕನ್ನು ಕಲಿಸಿಕೊಡುತ್ತದೆ. ಒಬ್ಬರಿಗೊಬ್ಬರೊಂದಿಗೆ ಸಾಮರಸ್ಯದಿಂದ ಬಾಳುವುದನ್ನು ಕಲಿಸಿಕೊಡುತ್ತದೆ. ಬರಬರುತ್ತಾ ನಮ್ಮವರು ಇದನ್ನು ತಾತ್ಸಾರ ಮಾಡುತ್ತಾ ಬಂದರು ಧರ್ಮದ ಅರಿವಿಲ್ಲದಿರುವುದರಿಂದ, ಕುಟುಂಬ ಕಲಹ, ದಂಪತಿಗಳಲ್ಲಿ ಕಲಹ, ಗುರು ಹಿರಿಯರೆನ್ನದೆ ಕೀಳಾಗಿ ವರ್ತಿಸುವುದು, ಹೆಣ್ಣೆಂದರೆ ಕೀಳಾಗಿ ಕಾಣುವುದು, ಪ್ರಾಣಿಗಳಿಗಿಂತ ಕೀಳಾಗಿ ವರ್ತಿಸುವುದು, ಅನ್ಯ ಧರ್ಮದವರನ್ನು ದ್ವೇಷಿಸುವುದು, ಮತಾಂತರಗೊಳ್ಳುವುದು, ಮತಾಂತರಗೊಳಿಸುವುದು, ಅಕ್ರಮ ಸಂಬಂಧ, ಅಕ್ರಮ ಸಂಪಾದನೆ, ಪಾಪಪ್ರಜ್ನೇ ಇಲ್ಲದಿರುವುದು. ಎಲ್ಲಕ್ಕಿಂತ ಹಣಕ್ಕೆ ಪ್ರಾಮುಖ್ಯತೆ ಕೊಡುವುದು. ಮುಂತಾದುವು ಹೆಚ್ಚಾಗುತ್ತಿವೆ. ಇದಕ್ಕೆಲ್ಲಾ ಪರಿಹಾರ ಮಾನವನಾಗಿ ಹುಟ್ಟಿದ ಮೇಲೆ ಒಂದು ಬಾರಿಯಾದರೂ ಭಗವದ್ಗೀತೆಯನ್ನು ಓದುವುದು ಅಥವಾ ಕೇಳುವುದು ಸೂಕ್ತ.

    ಉತ್ತರ
  3. vidya's avatar
    vidya
    ಡಿಸೆ 21 2013

    ನಮ್ಮ ಎಡ ವಾದಿಗಳು ಇದು(ಭಗವದ್ಗೀತೆ) ಹಿಂಸೆಯನ್ನು ಪ್ರಚೋದಿಸುತ್ತದೆ ಎನ್ನುತ್ತಾರಲ್ಲಾ?

    ಉತ್ತರ
  4. kumar's avatar
    kumar
    ಡಿಸೆ 26 2013

    sariyagi helidiri yuddada bagge spastha chitrana vide

    nashavada akshoyini sainyagala bagge uttarisuvararu?

    ಉತ್ತರ
  5. GK's avatar
    GK
    ಜನ 14 2014

    ಕೆಟ್ಟತನ ನಾಶವಾಗಬೇಕು, ಒಳ್ಳೆಯತನ ಉಳಿಯಬೇಕು ಅಂದರೆ ಧರ್ಮ ಉಳಿಯಬೇಕು ಎಂಬುದು ಶ್ರೀಕೃಷ್ಣನ ಆಶಯ. ಹಾಗಾಗಿಯೇ ಮಹಾಭಾರತದಲ್ಲಿ ಬಹುತೇಕ ಕಡೆ ಪಾಂಡವರನ್ನು ಪಾರು ಮಾಡುವುದು. ಹಿಂಸೆಯನ್ನು ಪ್ರಚೋದಿಸುತ್ತಿಲ್ಲ, ಕೆಟ್ಟದ್ದರ ನಾಶವಷ್ಟೇ. ‘ಎಡ’ವಟ್ಟಿನವರ ಅಭಿಪ್ರಾಯಗಳನ್ನು ಕೇಳಿದರೆ ಶ್ರೀಕೃಷ್ಣ ಹುಟ್ಟಿಯೇ ಇರಲಿಲ್ಲ. ಯಾರ್ಯಾರದ್ದೋ ಅಂಶಗಳನ್ನು ಸೇರಿಸಿ ಒಬ್ಬ ಕೃಷ್ಣನನ್ನು ಸೃಷ್ಟಿಸಿದ್ದಾರೆ ಅಂಥ ಹೇಳ್ತಾರೆ…

    ಉತ್ತರ
  6. Nagshetty Shetkar's avatar
    Nagshetty Shetkar
    ಡಿಸೆ 14 2014

    “ಭಗವದ್ಗೀತೆ ಭಾರತೀಯರ ಅತ್ಯಂತ ಪವಿತ್ರವಾದ ಗ್ರಂಥ.”

    ಹೌದೇ? ನೋಡಿ: http://gujariangadi.blogspot.in/2014/12/blog-post_9.html
    “ಭಗವದ್ಗೀತೆ ಇಡೀ ಮನುಷ್ಯ ಕುಲವನ್ನು ಚರ್ಚಿಸುತ್ತದೆ ಎಂದೋ ಅಥವಾ ಅದು ಮನುಷ್ಯ ವಿರೋಧಿಯಾಗಿದೆ ಎಂದೋ ಒಂದೇ ಏಟಿಗೆ ನಿರ್ಧರಿಸುವುದು ತಪ್ಪು. ಆದರೆ, ಅದು ಬ್ರಾಹ್ಮಣರ ಹಕ್ಕುಗಳನ್ನು, ಹಿತಾಸಕ್ತಿಗಳನ್ನು ಕಾಪಾಡುತ್ತದೆಯಾದುದರಿಂದ, ಅದು ಬ್ರಾಹ್ಮಣ ಧರ್ಮದ ಗ್ರಂಥವಾಗುತ್ತದೆ ಮತ್ತು ಅದರ ಅನುಷ್ಠಾನದ ಸರ್ವ ಲಾಭಗಳನ್ನು ತಮ್ಮದಾಗಿಸಿಕೊಂಡು ಬಂದಿರುವುದು ಈ ದೇಶದ ಬ್ರಾಹ್ಮಣರೇ ಹೊರತು, ಶೂದ್ರ, ಚಂಡಾಲ, ಮ್ಲೇಚ್ಛ ಸಮುದಾಯಗಳಲ್ಲ. ಅದು ಇಡೀ ಹಿಂದೂ ಸಮುದಾಯದ ಹಿತಾಸಕ್ತಿ ಯನ್ನು ತನ್ನದಾಗಿಸಿ ಕೊಂಡು ರಚಿಸಲ್ಪಟ್ಟಿಲ್ಲ… ಭಗವದ್ಗೀತೆ ತನ್ನ ಆಳದಲ್ಲಿ ಕಾವ್ಯೇತರವಾದ ಕೆಲವು ಅಜೆಂಡಾಗಳನ್ನು ಹೊಂದಿದೆ. ಮತ್ತು ಆ ಅಜೆಂಡಾಗಳು ಈ ದೇಶವನ್ನು ತಲೆತಲಾಂತರಗಳಿಂದ ಗುಲಾಮಗಿರಿಗೆ ಈಡು ಮಾಡುತ್ತಾ ಬಂದಿದೆ. ಅದು ಪ್ರತಿಪಾದಿಸುವ ಹಲವು ನೀತಿ ಸಂಹಿತೆಗಳು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿವೆ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಕರೆಯುವುದೆಂದರೆ, ಗೀತೆ ಪ್ರತಿಪಾದಿಸುವ ವರ್ಣಾಶ್ರಮ ವೌಲ್ಯಗಳನ್ನು ರಾಷ್ಟ್ರದ ಮೇಲೆ ಹೇರುವುದು ಎಂದೇ ಅರ್ಥ. ಅದರ ಲಾಭ ಯಾರಿಗೆ, ನಷ್ಟ ಯಾರಿಗೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ… ಗವದ್ಗೀತೆ ಕಾವ್ಯದ ಉದ್ದೇಶವನ್ನು ಮೀರಿ, ಒಂದು ನಿರ್ದಿಷ್ಟ ಸಂಹಿತೆಯನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ರಚಿತವಾಗಿರುವುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಕರ್ಮ ಸಿದ್ಧಾಂತ ಮತ್ತು ವರ್ಣಾಶ್ರಮ ಸಿದ್ಧಾಂತಗಳ ತಳಹದಿಯ ಮೇಲೆಯೇ ಇಂದು ಜಾತಿ ವ್ಯವಸ್ಥೆ ನಮ್ಮನ್ನು ವಿಷ ವಕ್ಷದಂತೆ ಸುತ್ತಿಕೊಂಡಿದೆ..ಬೇರೆ ಬೇರೆ ಗ್ರಂಥಗಳು, ತತ್ವಗಳು ಈ ಧರ್ಮವನ್ನು ರೂಪಿಸಿವೆ. ಅವೆಲ್ಲವನ್ನು ಬದಿಗೆ ತಳ್ಳಿ, ಭಗವದ್ಗೀತೆಯನ್ನು ಮುಂದಕ್ಕೆ ತಂದಿರುವುದು ಬ್ರಾಹ್ಮಣ್ಯ ಮನಸ್ಸುಗಳು. ಬ್ರಾಹ್ಮಣ್ಯದ ಹಿರಿಮೆಯನ್ನು ಎತ್ತಿ ಹಿಡಿಯುವ ಏಕೈಕ ಉದ್ದೇಶದಿಂದ ಅದನ್ನು ಮುನ್ನೆಲೆಗೆ ತರಲಾಯಿತು. ಇದೀಗ ಅದೇ ಮನಸ್ಸುಗಳು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸುವ ಮೂಲಕ, ಅದು ಪ್ರತಿಪಾದಿಸುವ ವರ್ಣಾಶ್ರಮ ವ್ಯವಸ್ಥೆಯನ್ನು ಮರು ಸ್ಥಾಪಿಸಲು ಯತ್ನಿಸುತ್ತಿವೆ…ಭಗವದ್ಗೀತೆಯೊಂದೇ ಈ ದೇಶದ ಜನರಿಗೆ ಬದುಕುವ ಮಾರ್ಗವನ್ನು ಕೊಟ್ಟುದೇ ಆಗಿದ್ದರೆ, ಈ ದೇಶಕ್ಕೆ ಪರಕೀಯರು ಆಗಮಿಸುತ್ತಲೇ ಇರಲಿಲ್ಲ. ಅಸ್ಪೃಶ್ಯತೆ ತಾಂಡವವಾಡುತ್ತಾ, ಬಹುಸಂಖ್ಯಾತ ಕೆಳ ಜಾತಿಯ ಜನರು ಬೆರಳೆಣಿಕೆ ಜನರ ಕೈಯಲ್ಲಿ ಗುಲಾಮರಾಗಿ ಕೀಳಾದ ಬದುಕನ್ನು ಬದುಕುವ ಸ್ಥಿತಿ ಬರುತ್ತಿರಲಿಲ್ಲ.”

    ಉತ್ತರ
    • SSNK's avatar
      ಡಿಸೆ 15 2014

      [[ಹೌದೇ? ನೋಡಿ: http://gujariangadi.blogspot.in/2014/12/blog-post_9.html%5D%5D
      ಸ್ವಂತಿಕೆ ಇಲ್ಲದ ಮನಸ್ಸುಗಳ ವ್ಯರ್ಥ ಪ್ರಲಾಪ! 😀

      ನೀವು ನೀಡಿರುವ blogನ ಹೆಸರೇ “ಗುಜರಿ ಅಂಗಡಿ”. ಅಲ್ಲಿ ಸಿಗುವ ಅಭಿಪ್ರಾಯಗಳು ಗುಜರಿ ಹಿಡಿದ ಅಭಿಪ್ರಾಯಗಳಲ್ಲದೆ ಮತ್ತೇನು ತಾನೇ ಇರಲು ಸಾಧ್ಯ!?
      ನಿಮ್ಮ ಬುದ್ಧಿಯನ್ನೂ ಅಲ್ಲಿ ಮಾರಿಬಿಡಿ – ಒಂದೆರಡು ಕಾಸು ಸಿಕ್ಕರೂ ಸಿಗಬಹುದು! 😉

      ಉತ್ತರ
      • Nagshetty Shetkar's avatar
        Nagshetty Shetkar
        ಡಿಸೆ 15 2014

        ಹೀಗೆ ಹೀಯಾಳಿಸುತ್ತಾ ಲೇವಡಿ ಮಾಡುತ್ತಾ ಉಡಾಫೆಯಿಂದ ಕಮೆಂಟು ಮಾಡುತ್ತಾ ಇರಿ. ಬಶೀರನ ಪಾಯಿಂಟುಗಳಿಗೆ ನಿಮ್ಮ ಬಳಿ ಉತ್ತರವಿಲ್ಲ ಅಂತ ಸಾಬೀತಾಗಿದೆ.

        ಉತ್ತರ
        • SSNK's avatar
          ಡಿಸೆ 16 2014

          ನಾನಿಲ್ಲಿ ಚರ್ಚಿಸುತ್ತಿರುವುದು ಶೇಟ್ಕರರ ಹತ್ತಿರ.
          ಬಶೀರ ಬೇಕಾದರೆ ಇಲ್ಲಿ ಬಂದು ಕಾಮೆಂಟು ಬರೆಯಲಿ. ಆಗ, ಅದಕ್ಕೆ ಉತ್ತರ ಕೊಡೋಣ.
          ನಿಮಗೆ ಸ್ವಂತ ಬುದ್ಧಿ ಇನ್ನೂ ಸ್ವಲ್ಪ ಉಳಿದಿದ್ದರೆ, ಅವರಿವರ ಕಾಮೆಂಟನ್ನು ಇಲ್ಲಿ ತಂದು ಮೆತ್ತಿ ಉತ್ತರ ಕೇಳಬೇಡಿ.
          ನಿಮ್ಮದೇ ಕಾಮೆಂಟು ಇದ್ದರ ಹಾಕಿ. ಇಲ್ಲದಿದ್ದರೆ ತೆಪ್ಪಗಿರಿ.

          ಉತ್ತರ
          • Nagshetty Shetkar's avatar
            Nagshetty Shetkar
            ಡಿಸೆ 16 2014

            ನಾನು ಕಮೆಂಟು ಮಾಡಿ ಪ್ರಶ್ನೆ ಕೇಳಿದ್ದು ಈ ಲೇಖನದ ಬರಹಗಾರ ರಮಾನಂದ ಅವರಿಗೆ, ನಿಮಗಲ್ಲ. ತೆಪ್ಪಗಿರದೆ ಮೂಗು ತೂರಿಸಿದ್ದು ನೀವು. ತುರಿಕೆ ಇದ್ದರೆ ವೈದ್ಯರ ಹತ್ತಿರ ಸೂಕ್ತ ಚಿಕಿತ್ಸೆ ಪಡೆಯಿರಿ. ನನ್ನ ಮತ್ತು ಲೇಖಕರ ನಡುವಿನ ಸಂವಾದವನ್ನು ಡೀರೈಲ್ ಮಾಡುವ ಯತ್ನ ಬಿಡಿ.

            ಉತ್ತರ
            • SSNK's avatar
              ಡಿಸೆ 16 2014

              ಸ್ವಾಮಿ ಶೇಟ್ಕರರೇ,

              ನೀವು ಚರ್ಚೆಗಳಲ್ಲಿ ಇಲ್ಲಸಲ್ಲದ್ದನ್ನು ತರುವುದು, ನಂತರ “ದರ್ಗಾ ಅವರನ್ನು ಕಂಡರೆ ನಿಮಗಾಗದು” ಎನ್ನುವುದು, ನಿಮ್ಮ ಕಾಮೆಂಟಿಗೆ ನೀವೇ +1 ಕೊಟ್ಟುಕೊಳ್ಳುವುದು, ಯಾರೋ ಎಲ್ಲೋ ಬರೆದ ಕಾಮೆಂಟನ್ನು ಇಲ್ಲಿ ಮೆತ್ತಿ ಉಳಿದವರೆಲ್ಲಾ ಅದನ್ನು ಒಪ್ಪಿಕೊಳ್ಳಲೇಬೇಕೆಂದು ಪೋಸ್ ಕೊಡುವುದು, ಕಡೆಗೆ ನಿಮ್ಮೊಡನೆ ಚರ್ಚಿಸುತ್ತಿಲ್ಲ ಎಂದು ಉತ್ತರ ಹೇಳಿ ಪಲಾಯನಗೈಯ್ಯುವುದು……..ಉತ್ತರನ ಪಾತ್ರಕ್ಕೆ ಹೇಳಿ ಮಾಡಿಸಿದ ಕಲಾವಿದರು ನೀವು!!

              ಲೇಖನ ಬರೆದವರು ಮಾತ್ರ ಚರ್ಚಿಸಬೇಕೆಂದು, ಅವರು ಮಾತ್ರ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಇಲ್ಲೇನೂ ನಿಯಮವಿಲ್ಲ.
              ಚರ್ಚೆಯಲ್ಲಿ ಭಾಗವಹಿಸುವವರೆಲ್ಲರೂ ತಮ್ಮ “ನಿಲುಮೆ”ಯನ್ನು ತಿಳಿಸಬಹುದು, ಚರ್ಚೆಗಳಲ್ಲಿ ಪ್ರಶ್ನೆ ಎತ್ತಬಹುದು, ಉಳಿದವರ ಪ್ರಶ್ಹೆಗಳಿಗೆ ಉತ್ತರಿಸಬಹುದು. ಆದರೆ, ಚರ್ಚಿಸುವವರು ತಮ್ಮ “ನಿಲುಮೆ” ತಿಳಿಸಬೇಕೇ ಹೊರತು, ಈ ಚರ್ಚೆಗೆ ಸಂಬಂಧಿಸಿರದ ಬಶೀರ್, ದರ್ಗಾ, ಇಮಾಂ ಸಾಬಿ, ಇತ್ಯಾದಿಗಳ ಅಭಿಪ್ರಾಯವನ್ನೆಲ್ಲಾ ಇಲ್ಲಿ ತಂದು ಚರ್ಚೆಯನ್ನು ಗಬ್ಬೆಬ್ಬಿಸುವುದು ಸಲ್ಲದು. ‘ಸ್ವಂತ’ದ ಅಭಿಪ್ರಾಯ ಇಲ್ಲದಿದ್ದರೆ ಅಥವಾ ಸ್ವಂತಿಕೆಯನ್ನು ಮಾರ್ಕ್ಸ್^ಗೋ, ಚೈನಾಗೋ, ಮತ್ಯಾರಿಗೋ ಮಾರಿಕೊಂಡಿದ್ದರೆ, ಸುಮ್ಮನಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮಗಾದಂತೆ “ಬಾಯಿಬಿಟ್ಟರೆ ಬಣ್ಣಗೇಡು” ಎನ್ನುವ ಸ್ಥಿತಿಯಾಗಿ ನಗೆಪಾಟಲಿಗೀಡಾಗುತ್ತೀರಿ! 😀

              ಉತ್ತರ
    • ಶಾರೂ's avatar
      ಶಾರೂ
      ಡಿಸೆ 16 2014

      ((…ಭಗವದ್ಗೀತೆಯೊಂದೇ ಈ ದೇಶದ ಜನರಿಗೆ ಬದುಕುವ ಮಾರ್ಗವನ್ನು ಕೊಟ್ಟುದೇ ಆಗಿದ್ದರೆ, ಈ ದೇಶಕ್ಕೆ ಪರಕೀಯರು ಆಗಮಿಸುತ್ತಲೇ ಇರಲಿಲ್ಲ. ಅಸ್ಪೃಶ್ಯತೆ ತಾಂಡವವಾಡುತ್ತಾ, ಬಹುಸಂಖ್ಯಾತ ಕೆಳ ಜಾತಿಯ ಜನರು ಬೆರಳೆಣಿಕೆ ಜನರ ಕೈಯಲ್ಲಿ ಗುಲಾಮರಾಗಿ ಕೀಳಾದ ಬದುಕನ್ನು ಬದುಕುವ ಸ್ಥಿತಿ ಬರುತ್ತಿರಲಿಲ್ಲ.”))
      ನಿಮ್ಮ ಅಭಿಪ್ರಾಯ ನೂರಕ್ಕೆ ನೂರರಷ್ಟು ನಿಜ. ಭಗವದ್ಗೀತೆಯನ್ನು ಎಲ್ಲಾರೂ ಬದುಕುವ ಮಾರ್ಗವಾಗಿ ಸ್ವೀಕರಿಸಿದ್ದರೆ ಈ ದೇಶಕ್ಕೆ ಖಂಡಿತ ಪರಕೀಯರ ಆಗಮನ ಆಗುತ್ತಿರಲಿಲ್ಲ. ಮತ್ತು ದಲಿತ ಅಸ್ಪೃಶ್ಯ ಮುಂತಾದ ಶೋಷಣೆ ಇರದೇ ಸುಂದರ ಸಮಾಜ ಇರುತ್ತಿತ್ತು. ಶೂರ ಆತ್ಮಾಭಿಮಾನ ಇರುವ ಸಮಾಜ ಇರುತ್ತಿತ್ತು. ಅಲ್ಲವೆ? ಅದಕ್ಕೇ ಹೇಳೋದು ಸ್ವಾಮೀ ಇನ್ನಾದರೂ ಎಲ್ಲಾರೂ ಭಗವದ್ಗೀತೆ ಓದಿ ಶೂರ, ವೀರರಾಗಿ ಪರಕಿಯರಿಂದ ಭಾರತ ಮುಕ್ತಿಗೊಳಿಸಿ. ಮತ್ತು ದಲಿತ ಅಸ್ಪೃಶ್ಯ ಬಾಳು ಬಾಳದೇ ಚನ್ನಾಗಿರಿ. ಎಂದು ತಿಳಿಸಲಿಕ್ಕಾಗೇ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಮಾಡಲು ಹೊರಟಿದೆ. ನೀವೂ ಆ ಪ್ರಚಾರದಲ್ಲಿ ಪಾಲ್ಗೊಳ್ಳಿ. ನಿಮ್ಮ ಹೇಳಿಕೆ ನೆರವೇರಿಸಿ. ವಂದನೆಗಳು. ಒಂದಾದರೂ ಒಳ್ಳೆಯ ಅಂಶ ಭಗವದ್ಗೀತೆ ಬಗ್ಗೆ ಹೇಳಿದ್ದಕ್ಕೆ.

      ಉತ್ತರ
    • ರಂಜನಾ ರಾಮ್ ದುರ್ಗ's avatar
      ರಂಜನಾ ರಾಮ್ ದುರ್ಗ
      ಡಿಸೆ 16 2014

      ಅವ್ರ್ದುಕೆ ಬ್ಲಾಗಿನ ಹೆಸರಿಗೆ ತಕ್ಕಂತ “ಗುಜರಿ ಲೇಖನ”

      ಉತ್ತರ
      • Nagshetty Shetkar's avatar
        Nagshetty Shetkar
        ಡಿಸೆ 17 2014

        ಸಿಸ್ಟರ್, ಗುಜರಿ ಅಂಗಡಿಯಲ್ಲೂ ಸಂವೇದನೆ, ಮಾನವೀಯತೆ, ಕರುಳು, ಅಂತಃಕರಣ ಇರುತ್ತದೆ ಎಂಬುದನ್ನು ಮರೆಯಬೇಡಿ.

        ಉತ್ತರ
        • Naani's avatar
          Naani
          ಡಿಸೆ 17 2014

          ನೂರಾರು ಚಿಕ್ಕಮಕ್ಕಳ ಬರ್ಬರ ಹತ್ಯೆಯೂ ಸಹ ಈ ಗುಜರೀ ಅಂಗಡಿಯವ ‘ರಾಜಕಾರಣ’ ಭಾಷಣಕ್ಕೆ ಬಳಸಿಕೊಳ್ಲುತ್ತಿದ್ದಾನೆ. ಅಂತದ್ದರಲ್ಲಿ ಇವನಿಗೆ “ಸಂವೇದನೆ, ಮಾನವೀಯತೆ, ಕರುಳು, ಅಂತಃಕರಣ” ಎನ್ನುವ ಪದಗಳೆಲ್ಲಾ ಇಂತವನ ‘ಕ್ರೂರಮುಖದ ಮುಂದಿನ ಮುಖವಾಡ’ಗಳಷ್ಟೇ!! ಥೋ ಇವನ ಜನ್ಮಕ್ಕಿಷ್ಟು! ಮತ್ತು ಇಂತಹ ಬೌದ್ದಿಕಸೂಳೆಗಾರಿಕೆಯನ್ನು ಸೃಷ್ಟಿಸಿದ ನಿಮ್ಮಮುಖವಾಡ ಹೊತ್ತಿರುವ ಆ ‘ದುರ್ಗ(ತಿ)’ನಂತವರಿಗೂ!!!

          ಉತ್ತರ
          • Nagshetty Shetkar's avatar
            Nagshetty Shetkar
            ಡಿಸೆ 20 2014

            ವಚನ ಸಾಹಿತ್ಯ ಸಂಶೋಧನೆ ಮೂಲಕ ಸಮಾಜಕ್ಕೆ ಒಳಿತಾಗುವಂತಹ ಕೆಲಸವನ್ನು ಮಾಡುತ್ತಿರುವ ದರ್ಗಾ ಸರ್ ಅವರನ್ನು ಕಂಡು ಕರುಬುವವರು ಅನೇಕರಿದ್ದಾರೆ, ನಾಣಿ ಅವರೊಬ್ಬರೇ ಅಲ್ಲ.

            “ಇದಂತೂ ಚಾರಿತ್ರಿಕವಾಗಿ ನಾವು ಅವಲೋಕಿಸಿಕೊಳ್ಳಬೇಕಾದ ಘಟ್ಟವೆಂದೇ ಭಾವಿಸುವೆ. ಇಂಥ ಸಮಯದಲ್ಲೆಲ್ಲಾ ‘‘ಕೆಲವು ದಲಿತರು ನಮ್ಮನ್ನು ಗುಮಾನಿಯಿಂದ ನೋಡುತ್ತಾರೆ.’’ ಎಂದು ಗೆಳೆಯ ರಮಝಾನ್ ದರ್ಗಾ ಅಂಥವರು ಚಿಕ್ಕ ಮಗುವಿನಂತೆ ಅಳುವುದನ್ನು ನಿಲ್ಲಿಸಬೇಕು. ಹಾಗೆಯೇ ಅವನು ಒಬ್ಬ ಉತ್ತಮ ಲೇಖಕನಾಗಿ ಹೆಚ್ಚು ಬರೆಯಬೇಕು. ಪ್ರವಾದಿಯ ರೀತಿಯಲ್ಲಿ ಕೇವಲ ವಚನ ಸಾಹಿತ್ಯದ ಬಗ್ಗೆ ಬರೆಯುವುದನ್ನು ನಿಲ್ಲಿಸಬೇಕು. ಹಿಂದೆಯೂ ಬೆಂಗಳೂರಿನ ಒಂದು ಸಮಾವೇಶದಲ್ಲಿ ವೇದಿಕೆಯ ಮೇಲೆ ಬಿಕ್ಕಿ ಬಿಕ್ಕಿ ಅಳುತ್ತಾ ‘‘ವೀರಶೈವರು ತಿಳಿಯಬೇಕು, ಲಿಂಗಾಯಿತರು ತಿಳಿಯಬೇಕು’’ ಎಂದು ಹೇಳುತ್ತಾ ಹೋದರೆ; ನಾವೇ ಅಪಹಾಸ್ಯಕ್ಕೆ ಒಳಗಾಗುತ್ತೇವೆ.”
            [‘ಬಂಡಾಯ ಗ್ರಹಿಕೆಗಳ ಸೂಕ್ಷ್ಮ ವಿಸ್ತಾರ’, ಲೇ: ಶೂದ್ರ ಶ್ರೀನಿವಾಸ, ಲಡಾಯಿ ಬ್ಲಾಗ್]

            ಉತ್ತರ
        • ರಂಜನಾ ರಾಮ್ ದುರ್ಗ's avatar
          ರಂಜನಾ ರಾಮ್ ದುರ್ಗ
          ಡಿಸೆ 17 2014

          ಪ್ರಿಯ ಸಹೋದರ ಶೆಟ್ಕರ್, ಆ ಗುಜರಿ ಅಂಗಡಿಯಲ್ಲಿ ನೀವು ಹೇಳಿದ ಸಂವೇದನೆ, ಮಾನವೀಯತೆ, ಕರುಳು, ಅಂತಃಕರಣಕ್ಕೆ ಮೂರು ಕಾಸಿನ ಬೆಲೆಯಿಲ್ಲವಾಗಿದೆ.ನಿಮ್ಮಂತ ಶರಣರು ಅವರನ್ನು ಬೆಂಬಲಿಸುವುದು ಸೋಜಿಗವಾಗಿದೆ

          ಉತ್ತರ
  7. shripad's avatar
    shripad
    ಡಿಸೆ 18 2014

    ಭಗವದ್ಗೀತೆ ಅಂತಲ್ಲ, ಮನುಸ್ಮೃತಿಯೂ ಸೇರಿ ಯಾವುದನ್ನೂ ಸ್ವಾಧ್ಯಾಯ ಮಾಡದೇ ಅವರಿವರು ಹೇಳಿದ ಮಾತು ಕೇಳಿಕೊಂಡು ಇಂಥವನ್ನು ವಿರೋಧಿಸುವುದಕ್ಕಾಗಿ ವಿರೋಧಿಸುವವರೇ ನಮ್ಮ ನಡುವೆ ಹೆಚ್ಚಾಗಿರುವುದು. ಭಾರತೀಯ ತತ್ತ್ವವನ್ನು ಮತ್ತಷ್ಟು ಓದಿಬಿಟ್ಟರೆ ನಾನೆಲ್ಲಿ ಪರಿವರ್ತನೆಗೆ ಒಳಗಾಗಿಬಿಡುತ್ತೇನೋ ಎಂಬ ಮ್ಯಾಕ್ಸ್ ಮುಲ್ಲರ್ ಫೋಬಿಯಾ ಇಂಥವರನ್ನು ಕಾಡುತ್ತದೆ ಅನಿಸುತ್ತದೆ!

    ಉತ್ತರ

Leave a reply to Kumar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments