ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 30, 2013

12

ಕೇಜ್ರಿವಾಲ್ ಮತ್ತು ಮೋದಿ – ಹೀಗೊಂದು ಮುನ್ನೋಟ

‍ನಿಲುಮೆ ಮೂಲಕ

– ಗಣೇಶ್ ಕೆ. ದಾವಣಗೆರೆ

ಮೋದಿ Vs ಕೇಜ್ರಿವಾಲ್ರಾಹುಲ ಗಾಂಧೀ ಮತ್ತು ಅರವಿಂದ ಕೇಜ್ರಿವಾಲ್ ಒಂದೇ ವಯಸ್ಸಿನವರು. ಇಬ್ಬರಿಗೂ ಎಷ್ಟು ವ್ಯತ್ಯಾಸಗಳಿವೆ. ಒಬ್ಬವ ತೀರಾ ಎಳಸು. ಇನ್ನೊಬ್ಬವ ಜನರ ಗಮನವನ್ನ ತನ್ನ ಮಾತುಗಳತ್ತ ಸೆಳೆದ ಯುವಕ. ಹೊಸ ಹೊಸ ಚಿಂತನೆಗಳನ್ನ ಹರಿಯಬಿಟ್ಟವ. ಆಡಳಿತದಲ್ಲಿ ಪಳಗಿದ ಮೋದಿಗೆ ರಾಹುಲ ಯಾವ ರೀತಿಯಲ್ಲೂ ಸರಿಸಮನಲ್ಲ. ಜೊತೆಗೆ, ಪ್ರತಿಸ್ಪರ್ಧಿಯೂ ಅಲ್ಲ. ರಾಹುಲಗಾಂಧೀ ವಯಸ್ಸಿನವನೇ ಆದ ಕೇಜ್ರಿವಾಲ್ ಯಾವ ರಾಜಕೀಯ ಅನುಭವವೂ ಇಲ್ಲದೇ ಪಕ್ಷವೊಂದನ್ನ ಕಟ್ಟಿ ಆರು ತಿಂಗಳಲ್ಲಿ ಆಧಿಕಾರದ ಹೊಸ್ತಿಲತ್ತ ತಂದು ನಿಲ್ಲಿಸುವುದು ಸಾಮಾನ್ಯ ಸಂಗತಿಯಲ್ಲ.

ನಮ್ಮೆಲ್ಲ ಪೂರ್ವಾಗ್ರಹಗಳನ್ನ ಬದಿಗಿಟ್ಟು ಈ ಯಶಸ್ಸನ್ನ ಗಮನಿಸಬೇಕಾದ ಅಗತ್ಯವಿದೆ. ಕೆಲವರಿಗೆ ಕೇಜ್ರಿವಾಲನನ್ನ ಹೊಗಳಿದರೆ, ಮೆಚ್ಚಿಕೊಂಡರೆ, ಮೋದಿ ಗತಿಯೇನು ಅನ್ನುವ ಚಿಂತೆ. ದೆಹಲಿಯಲ್ಲಿ ಕಾಂಗ್ರೇಸ್ ವಿರೋಧಿ ಅಲೆ ಇತ್ತು ಅನ್ನೋದು ಸರ್ವವಿದಿತವಾದ ಸಂಗತಿ. ಆದರೆ, ಆ ಅಧಿಕಾರ ವಿರೋಧಿ ಅಲೆಯ ಸಂಪೂರ್ಣ ಲಾಭ ಪಡೆಯಲಿಕ್ಕೆ ಬಿಜೆಪಿಗೆ ಏಕೆ ಸಾಧ್ಯವಾಗಲಿಲ್ಲ? ಮೋದಿಯೂ ಕೂಡಾ ಬಂದು ಹೋಗಿದ್ದರಲ್ಲ? ಕಾಂಗ್ರೇಸ್ ಆಡಳಿತ ವಿರೋಧಿ ಅಲೆಯಿರುವಾಗ ಮೋದಿಯವರ ಭಾಷಣಕ್ಕೆ ಸರಳ ಬಹುಮತ ಕೊಡಿಸುವಷ್ಟೂ ಶಕ್ತಿ ಸಾಮರ್ಥ್ಯಗಳಿಲ್ಲವೇ? ಹಾಗಾದರೆ, ಬಿಜೆಪಿ ಎಡವಿದ್ದೆಲ್ಲಿ?
ಅರವಿಂದ ಕೇಜ್ರಿವಾಲ್ ಮೋದಿಗೆ ಯಾಕೆ ಪ್ರತಿಸ್ಪರ್ಧಿ?

ಅರವಿಂದ ಕೇಜ್ರಿವಾಲ್‌ರವರು ಮತ್ತು ಮೋದಿಯವರ target audiens ಮಧ್ಯಮವರ್ಗದ ಜನ. ಆಮ್ ಆದ್ಮಿ ಅಂದರೆ ಅದು ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ, ಕೆಳ ವರ್ಗಗಳೆಲ್ಲದರ ಮೊತ್ತ. ಕಾಂಗ್ರೇಸು ಬಡವರ ಪರವಾಗಿ ನೀತಿ ನಿರೂಪಣೆಗಳನ್ನ ಮಾಡಿ ಅಧಿಕಾರಕ್ಕೇರಲು ಯತ್ನಿಸಿದರೆ ಬಿಜೆಪಿ ಮಧ್ಯಮವರ್ಗದವರನ್ನ ಸೆಳೆದು ಅಧಿಕಾರದ ಗದ್ದುಗೆಗೇರಲು ಯತ್ನಿಸಿತು. ಆದರೆ, ಆಮ್ ಆದ್ಮಿ ಪಾರ್ಟಿ ತನ್ನ ತಳಹದಿಯನ್ನ ಇನ್ನಷ್ಟು ವಿಸ್ತರಿಸಿಕೊಂಡಿತು. ಆಮ್ ಆದ್ಮಿ – ಸಾಮಾನ್ಯ ಜನ – ಅಂದ್ರೆ ಅದು ಬಡವರೂ ಆಯಿತು, ಕಡು ಬಡವರೂ ಆಯಿತು, ಅಲ್ಪ ಸ್ವಲ್ಪ ಅನುಕೂಲಸ್ಥ ಮಧ್ಯಮ ವರ್ಗವೂ ಆಯಿತು. ಹಾಗಾಗಿ ಆಮ್ ಆದ್ಮಿ ಪಾರ್ಟಿಯ ತಳಹದಿ super set ಆಯಿತು. ಕೆಳ ವರ್ಗಗಳು ಮತ್ತು ಮಧ್ಯಮವರ್ಗಗಳು ಪ್ರತ್ಯೇಕ sub set ಗಳಾಗುತ್ತವೆ. ಹಾಗಾಗಿ, ಆಮ್ ಆದ್ಮಿ ಪಾರ್ಟಿ ಇವೆರಡಕ್ಕೂ ಪ್ರಬಲ ಪ್ರತಿಸ್ಪರ್ಧೆ ಒಡ್ಡಿತು.

ಇನ್ನು ಮೋದಿಯವರ ವಿಷಯಕ್ಕೆ ಬರೋಣ. ಗುಜರಾತ್‌ನ್ನ ಅಭಿವೃದ್ಧಿಯ ಪಥದಲ್ಲಿ ಮುಂದುವರಿಸಿ, ರಾಷ್ಟ್ರ ರಾಜಕಾರಣದತ್ತ ಕೈಚಾಚಿರುವ ಮೋದಿಯವರು ಮಧ್ಯಮವರ್ಗದವರನ್ನೇ ನೆಚ್ಚಿಕೊಂಡಿರುವುದು. ಇತ್ತೀಚಿನ ವರ್ಷಗಳಲ್ಲಿ ಯುವಕರ ಕಣ್ಮಣಿಯಾಗಿ ಹೊರಹೊಮ್ಮಿದ್ದಾರೆ. ಕೇಜ್ರಿವಾಲ್‌ರವರನ್ನ ನೀವು ಒಪ್ಪಿ ಬಿಡಿ. ಆದ್ರೆ, ಅವರ ಮಾತಿಗೆ ಚುಂಬಕ ಶಕ್ತಿಯಿದೆ. ಕೇಜ್ರಿವಾಲ್ ಕೂಡಾ ಯುವಕರ ಕಣ್ಮಣಿ. ಕೇಜ್ರಿವಾಲ್ ಇದ್ದಲ್ಲಿ ಜನ ಸೇರುತ್ತಾರೆ. ಆದರೆ, ಕೇಜ್ರಿವಾಲ್ ಮತ್ತು ಮೋದಿ ನಡುವೆ ಒಂದು ವ್ಯತ್ಯಾಸವಿದೆ. ಮೋದಿ ಕೇಂದ್ರೀಕರಣವನ್ನ ಪ್ರತಿಪಾದಿಸುತ್ತಿದ್ದರೆ, ಅರವಿಂದ ಕೇಜ್ರಿವಾಲ್‌ದು ವಿಕೇಂದ್ರೀಕರಣ. ಮೋದಿ ತಾವು super power ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅಸಾಧ್ಯವಾದುದನ್ನ ಮಾಡಿ ತೋರಿಸುವ ಇಮೇಜ್ ಅವರದ್ದಾಗಿದೆ. ಬಿಜೆಪಿಯಲ್ಲಿ ಇನ್ಯಾವ ನಾಯಕರೂ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಅವರನ್ನ ಎತ್ತರದ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಿವೆ. ಮೋದಿಯನ್ನ ಮೆಚ್ಚಿದರೂ ಮೋದಿ ಬೆಂಬಲಿಗರ ಅಟ್ಟಹಾಸವನ್ನ ಕಂಡು ಮೋದಿ ಬಗ್ಗೆ ರೇಜಿಗೆ ಹುಟ್ಟುತ್ತದೆ ಎನ್ನುವ ಹಲವರಿದ್ದಾರೆ. ಇದು ಒಂದು ರೀತಿಯ ಅತಿಯಾದ ಕೇಂದ್ರೀಕರಣ.

ಅರವಿಂದ ಕೇಜ್ರಿವಾಲ್ ಪ್ರತಿಪಾದಿಸುತ್ತಿರುವುದು ವಿಕೇಂದ್ರೀಕರಣ. ತಾನು ದೊಡ್ಡವ, ತನ್ನಿಂದ ಎಲ್ಲ ಸಾಧ್ಯ ಎಂದು ಅರವಿಂದ ಕೇಜ್ರಿವಾಲ್ ಎಂದೂ ಹೇಳಿಕೊಂಡಿಲ್ಲ. ಈ ನಮ್ರತೆಯೇ ಬಹಳಷ್ಟು ಜನ ಇಷ್ಟಪಡುವ ಸಂಗತಿ. ಕೇಜ್ರಿವಾಲ್‌ಗೆ ಆಡಳಿತದ ಅನುಭವವಿಲ್ಲ. ಇಲ್ಲಿಯವರೆಗೂ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನ ಈಡೇರಿಸುತ್ತಾರೋ ಇಲ್ಲವೋ ಇನ್ನೂ ಕಾದು ನೋಡಬೇಕಾದ ಸಂಗತಿ. ಆದರೆ, ಆರು ತಿಂಗಳಲ್ಲಿ ದಿಲ್ಲಿಯ ಗಲ್ಲಿ ಗಲ್ಲಿ ಅಡ್ಡಾಡಿ ಪಕ್ಷ ಕಟ್ಟಿ, ಜನರನ್ನ ಸೇರಿಸಿಕೊಂಡು, ದೊಡ್ಡ ಜನಾಂದೋಲನವನ್ನ ಆಯೋಜಿಸಿ, ಕೇಜ್ರಿವಾಲ್ ಒಬ್ಬ performer ಆಗಿ ಕಾಣಿಸಿಕೊಂಡಿದ್ದಾರೆ. ಪ್ರಾಮಾಣಿಕತೆಯ ಬಗ್ಗೆ ಮಾತಾಡಿದ್ದಾರೆ. ದುಡ್ಡು, ಜಾತಿ, ಧರ್ಮ ಇವೆಲ್ಲವನ್ನ ಮೀರಿ ಜನಸಾಮಾನ್ಯರ ಬದುಕನ್ನ ಆವರಿಸಿರುವ ಸಮಸ್ಯೆಗಳ ಬಗ್ಗೆ ಮಾತಾಡಿದ್ದಾರೆ. ಮೋದಿಯವರಿಗೆ ಹೋಲಿಸಿದರೆ ಕೇಜ್ರಿವಾಲ್ ಏನೂ ಅಲ್ಲದ ವ್ಯಕ್ತಿ. ಏನೂ ಅಲ್ಲದ ವ್ಯಕ್ತಿ ದಿಲ್ಲಿಯ ಮತದಾರ ಪ್ರಭುಗಳನ್ನ ಒಲಿಸಿಕೊಂಡ ರೀತಿ ಅತ್ಯಮೋಘವಾದದ್ದು. ಮೊದಲು ಆಮ್ ಆದ್ಮಿ ಪಾರ್ಟಿ ಪಾರ್ಟಿಯೇ ಅಲ್ಲ ಅಂದವರು ಗೆದ್ದ ಮೇಲೆ ಅಭಿನಂದಿಸಿದರು. ಆಮೇಲೆ, ದೆಹಲಿಯಲ್ಲಿ ಮಾಡಿದ್ದನ್ನ ಇನ್ನುಳಿದ ಭಾರತದ ಭೂಭಾಗಗಳಲ್ಲಿ ಅನುಕರಣೆ ಮಾಡಲಿಕ್ಕೆ ಸಾಧ್ಯವಿಲ್ಲ ಎಂದೂ ಕೊಂಕು ನುಡಿದರು, ಅನುಮಾನ ವ್ಯಕ್ತಪಡಿಸಿದರು. ಕೆಲವರು ಮೋದಿ ಬಗ್ಗೆಗೂ ಇದನ್ನೇ ಅಂದಿದ್ದಾರೆ. ಗುಜರಾತ್ ಮಾದರಿ ಆಡಳಿತವನ್ನ, ಯಶಸ್ಸನ್ನ ಭಾರತದ ತುಂಬೆಲ್ಲ replicate ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಷರಾ ಬರೆದಿದ್ದಾರೆ. ಆದರೆ, ಒಂದನ್ನ ಗಮನಿಸಬೇಕು. ಮೋದಿಯವರು ಹೇಗೆ ಒಬ್ಬ performer ಎಂದು ಬಿಂಬಿಸಲ್ಪಟ್ಟಿದ್ದಾರೋ ಹಾಗೇ ಕೇಜ್ರಿವಾಲ್ ಕೂಡಾ ಒಬ್ಬ performer ಎಂದು ಸಾಧಿಸಿ ತೋರಿಸಿದ್ದಾರೆ(ಇನ್ನೂ ಸವೆಸುವ ಹಾದಿ ಬಹುದೊಡ್ಡದಿದೆ.).

ಇತ್ತೀಚಿನ ಸರ್ವೇ ಪ್ರಕಾರ ನಮ್ಮ ಭಾರತದಲ್ಲಿ ಪ್ರತಿಶತ ೮೦ ಮಂದಿ ಭ್ರಷ್ಟರಲ್ಲ. ಲಂಚ ತೆಗೆದುಕೊಂಡವರಲ್ಲ. ತಮ್ಮ ಪಾಡಿಗೆ ತಾವು ಜೀವಿಸುತ್ತಾ, ಇನ್ ಕಂ ಟ್ಯಾಕ್ಸ್ ಕಟ್ಟುತ್ತಾ ಇರುವ ಮಂದಿ. ಇನ್ನು ಭ್ರಷ್ಟರು ಬರೀ ಪ್ರತಿಶತ ಇಪ್ಪತ್ತು ಮಂದಿ. ಇಷ್ಟು ದಿನ ನಾವು ರಾಜಕೀಯದಲ್ಲಿ ಭ್ರಷ್ಟರನ್ನ ಆರಿಸಬೇಡಿ, ಭ್ರಷ್ಟರು ಅನಿವಾರ್ಯವಾದರೆ, ಅವರಲ್ಲೇ ಸಾಧ್ಯವಾದಷ್ಟು ಕಡಿಮೆ ಭ್ರಷ್ಟರನ್ನ ಆರಿಸಿ ಅನ್ನುತ್ತಿದ್ದೆವು. ನಾವೂ ಕೂಡಾ ಒಂದು ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡುಬಿಟ್ಟಿದ್ದೆವು. ಆದರೆ, ಭ್ರಷ್ಟಾಚಾರದೆಡೆಗೆ zero tolerence ತೋರಿಸಿದ್ದು ಆಮ್ ಆದ್ಮಿ ಪಕ್ಷ (ಇದನ್ನ ಎಷ್ಟು ದಿನ ಮುಂದುವರೆಸಿಕೊಂಡು ಹೋಗುತ್ತಾರೆ? ಕಾದು ನೋಡೋಣ). ಜೊತೆಗೆ, ವಿದ್ಯಾವಂತ, ಸುಶಿಕ್ಷಿತರನ್ನ, ಕ್ರಿಮಿನಲ್ ಹಿನ್ನೆಲೆ ಇಲ್ಲದವರನ್ನ ಚುನಾವಣೆಗೆ ನಿಲ್ಲಿಸಿದ್ದು ಜನರಲ್ಲಿ ಹೊಸ ಆಶಾಭಾವ ಸೃಷ್ಟಿಸಿತು. ವ್ಯವಸ್ಥೆಯ ಅವ್ಯವಸ್ಥೆಯ ವಿರುದ್ಧ ಹತಾಶರಾಗಿದ್ದವರಿಗೆ, ಕಾಂಗ್ರೇಸು ಗೂಂಡಾಗಳಿಗೆ ವಿರುದ್ಧವಾಗಿ ಬಿಜೆಪಿ ಗೂಂಡಾಗಳನ್ನ ತಯಾರಿಸಿದರೆ ಸಮಸ್ಯೆಯ ಪರಿಹಾರವಲ್ಲ ಎಂದು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಯಿತು.

ಈ ಕಾರಣಗಳಿಂದಾಗಿ ಹಣ, ತೋಳ್ಬಲ, ಜಾತಿ, ಧರ್ಮ ಇವೆಲ್ಲವನ್ನ ಬದಿಗಿರಿಸಿ ಜನಸಾಮಾನ್ಯರ ಬದುಕಿಗೆ ಹತ್ತಿರವಾದ ಪಕ್ಷವಾಗಿ ಆಮ್ ಆದ್ಮಿ ಪಕ್ಷ ೨೮ ಸೀಟು ಪಡೆಯಲು ಶಕ್ಯವಾಯಿತು.

ಮುಂದೆ..? ಕಾದು ನೋಡೋಣ.

ಚಿತ್ರ ಕೃಪೆ : indianexponent.com

12 ಟಿಪ್ಪಣಿಗಳು Post a comment
  1. M.A.Sriranga's avatar
    M.A.Sriranga
    ಡಿಸೆ 30 2013

    ನಿಮ್ಮ ವಿಶ್ಲೇಷಣೆಯಲ್ಲಿ ಬೇಸರಪಟ್ಟುಕೊಳ್ಳುವ ವಿಷಯ ಏನಿಲ್ಲ. ಆದರೆ ತಾವು ಒಂದೆರೆಡು ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಿಲ್ಲ.
    ೧. ಬಿಜೆಪಿ ಈಗಾಗಲೇ established ಆಗಿರುವ ಪಕ್ಷ. ಅದು ಲೋಕಸಭೆ ಚುನಾವಣೆಯ ನಂತರ ಅಧಿಕಾರಕ್ಕೆ ಬರುವುದು ಬಿಡುವುದಕ್ಕಿಂತ ಮುಖ್ಯವಾಗಿ ಇನ್ನುಳಿದ ಸುಮಾರು ಐದಾರು ತಿಂಗಳಿನಲ್ಲಿ ಇಡೀ ಭಾರತಾದ್ಯಂತ ಆಪ್ ಪಕ್ಷ ತನ್ನನ್ನು ಗುರುತಿಸಿಕೊಳ್ಳಬಲ್ಲದೆ?
    ೨. ದಿಲ್ಲಿಯಲ್ಲಿ ಇಡೀ ಕೇಂದ್ರಸರ್ಕಾರವೇ ಇದ್ದರೂ ಕಾಂಗೈ ಹೀನಾಯವಾದ ಸೋಲನ್ನಪ್ಪಿತು. ಆಪ್ ಗಿಂತ ಬಿಜೆಪಿ ಎರಡು ಮೂರು ಸ್ಥಾನಗಳನ್ನು ಜಾಸ್ತಿ ಪಡೆದಿದ್ದರೂ,ಸರಳ ಬಹು ಮತವಿಲ್ಲದೆ ಬಾಹ್ಯ ಬೆಂಬಲದಿಂದ ನಡೆಸಿದ ಸರ್ಕಾರಗಳಿಗಾದ ಸ್ಥಿತಿಯನ್ನು ಈಗಾಗಲೇ ಕಂಡಿರುವ ಬಿಜೆಪಿ ತಾನು ಸರ್ಕಾರ ರಚಿಸುವುದಿಲ್ಲ ಎಂದು ಚುನಾವಣಾ ಫಲಿತಾಂಶ ಬಂದ ದಿನವೇ ಘೋಷಿಸಿತು.
    ೩. ಇನ್ನು ಮೋದಿ ಬಂದರೂ ದಿಲ್ಲಿಯಲ್ಲಿ ಮ್ಯಾಜಿಕ್ ಮಾಡಲಿಲ್ಲ ಎಂಬ ಅಂಶ. ನಾಳೆ ಲೋಕಸಭೆಯ ಚುನಾವಣೆಯಲ್ಲೂ ಸಹ ಇಡೀ ಭಾರತದಲ್ಲಿ ಬಿಜೆಪಿಯನ್ನು ಮೋದಿ ಗೆಲ್ಲಿಸುತ್ತಾರೆಂದು ಬಿಜೆಪಿ ಹೇಳಿಕೊಂಡಿದೆಯೇ?
    ೪. ಆಯಾ ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿರುವ ಪಕ್ಷಗಳ ಕಾರ್ಯವೈಖರಿಯ ಮೇಲೆ ಕಾಂಗೈ/ಬಿಜೆಪಿ/ಮತ್ತಿತರ ಪಕ್ಷಗಳ ಭವಿಷ್ಯ ನಿಂತಿದೆ;ಅಷ್ಟೇ.
    ೫. ಆಪ್ ನ ಸಾಧನೆ ಆಶ್ಚರ್ಯ ಮೂಡಿಸಿದೆ;ಇಲ್ಲವೆಂದಲ್ಲ. ಆದರೆ ಆ ಆಶ್ಚರ್ಯ ಮುಂದೆ ವಾಸ್ತವ ಆದರೂ ಸಹ ಲೋಕಸಭೆಯ ಚುನಾವಣೆಯ ವೇಳೆಗೆ ಇಡೀ ಭಾರತದಲ್ಲಿ ಆ ಪಕ್ಷ ಆವರಿಸಿಕೊಂಡುಬಿಡುತ್ತದೆ ಎಂದು ಕೇಜ್ರಿವಾಲರೂ ಹೇಳುವುದಿಲ್ಲ. ಸದ್ಯಕ್ಕೆ ಅವರ ದೃಷ್ಟಿ ದಿಲ್ಲಿ ರಾಜ್ಯ ಅಷ್ಟೇ.

    ಉತ್ತರ
  2. gk's avatar
    gk
    ಡಿಸೆ 30 2013

    ಲೇಖನವನ್ನು ಚೆನ್ನಾಗಿ ನರೇಟ್ ಮಾಡಿದ್ದೀರಿ…
    ಹಾಗೆ ಕೆಲವೊಂದು ಅಂಶಗಳನ್ನು ಗಮನಿಸಿ. ರಾಹುಲ್ ಗಾಂಧಿಯ ಹೆಸರು ಈ ಲೇಖನದಲ್ಲಿ ಕಾಣದಿದ್ದಿದ್ದರೆ ಇನ್ನೂ ಚೆನ್ನಾಗಿತ್ತು. ಹತ್ತು ವರ್ಷಗಳಲ್ಲಿ ತನ್ನನ್ನು ತಾನು ಉತ್ತಮ ನಾಯಕ ಹೇಗೆ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಸಿಕ್ಕ ಅಷ್ಟೂ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಹಾಗಾಗಿ ರಾಹುಲ್ ಹೋಲಿಕೆ ಬೇಡವೆನಿಸಿತು. ಆಪ್ ಗೆದ್ದಿರುವುದು ದೆಹಲಿಯೆಂಬ ಪುಟ್ಟ ಕೇಂದ್ರಾಡಳಿತ ಪ್ರದೇಶದಲ್ಲಿ. ಎರಡನೆ ಸ್ವಾತಂತ್ರ್ಯ ಸಂಗ್ರಾಮ ಎಂದು ಬಿಂಬಿಸಿಕೊಂಡಿದ್ದ ಅಣ್ಣಾ ಹೋರಾಟದ ಪ್ರತಿ ಅಂಶವೂ ಇದರ ಗೆಲುವಿನಲ್ಲಿ ಬಹುದೊಡ್ಡ ಕಾಣಿಕೆ ನೀಡಿದೆ. ನಿಮಗೆ ಗೊತ್ತಿರಬಹುದು, ಲೋಕಸತ್ತಾ ಪಾರ್ಟಿ ಹತ್ತಾರು ವರ್ಷಗಳಿಂದ ಭ್ರಷ್ಟಾಚಾರ ವಿರೋಧಿ ಅಜೆಂಡಾವನ್ನಿಟ್ಟುಕೊಂಡೆ ಚುನಾವಣೆ ಎದುರಿಸುತ್ತಿದೆ. ಈವರೆಗೂ ಸಾಧ್ಯಾವಾಗಿರುವುದು ಆಂಧ್ರದಲ್ಲಿ ಒಂದು ಕ್ಷೇತ್ರ ಗೆಲ್ಲಲು ಮಾತ್ರ. ಅಣ್ಣಾ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದ ಬೆಂಗಳೂರಿನ ಜನರೇ ಲೋಕಸತ್ತಾ ಪಾರ್ಟಿಯ ಕೈಹಿಡಿಯಲಿಲ್ಲ. (ನಾನಿಲ್ಲಿ ಆಪ್, ಲೋಕಸತ್ತಾ ಪಾರ್ಟಿಗಳನ್ನು ದೂಷಿಸುತ್ತಿಲ್ಲ, ಗೆಲುವಿನ ಬಗ್ಗೆಯಷ್ಟೇ ಹೇಳುತ್ತಿರುವುದು)
    ಎಕೆ ವಿಕೇಂದ್ರಿಕರಣಕ್ಕೆ ಪ್ರಾಶಸ್ತ್ಯ ಕೊಡುತ್ತಾರೆ ನಿಜ. ನೀವು ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿಗಳ ಚುನಾವಣೆಗಳನ್ನು ನೋಡಿರಬಹುದು. ನನಗೆ ತಿಳಿದ ಮಟ್ಟಿಗೆ ಅಲ್ಲಿನ ಮತದಾರರ ಭ್ರಷ್ಟಾಚಾರ, ಪ್ರಾಮಾಣಿಕತೆ ಎಂಬ ವಿಚಾರಗಳಿಗಂತೂ ಮೊದಲನೆ ಪ್ರಾಶಸ್ತ್ಯ ಕೊಡುವುದಿಲ್ಲ. ಇದನ್ನೇ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲೂ ಅನುಸರಿಸುತ್ತಾರೆ.
    ಯೋಜನೆಗಳಲ್ಲಿ ಜನಪರ ಮತ್ತು ಜನಪ್ರಿಯ ಎಂಬೆರಡು ರೀತಿಯಲ್ಲಿ ಬರುತ್ತವೆ. ಕರ್ನಾಟಕ ಬಿಜೆಪಿ ಮಾಡಿದ್ದೆಲ್ಲವೂ ಜನಪ್ರಿಯ ಯೋಜನೆಗಳೇ. ಭಾಗ್ಯಲಕ್ಷ್ಮಿ ಅದು ಇದು ಅಂತ. ಈಗ ಸಿದ್ದರಾಮಯ್ಯನವರೂ ಅದನ್ನೇ ಮುಂದುವರೆಸಿದ್ದಾರೆ. ಇವು ಜನರನ್ನು ತಕ್ಷಣ ತಲುಪುತ್ತವೆ. ಅಷ್ಟೇ ವೇಗವಾಗಿ ಮರೆಯಾಗುತ್ತವೆ. ಜನಪರ ಯೋಜನೆಗಳು ಜನರನ್ನು ತಲುಪುವುದು ನಿಧಾನಗತಿಯಲ್ಲಿ. ಮೋದಿ ಜನಪರ ಯೋಜನೆಗಳು ಈಗಾಗಲೇ ಜನರನ್ನು ತಲುಪಿವೆ. ಹಾಗಾಗಿಯೇ ಅವರು ನಾಲ್ಕನೇ ಬಾರಿ ಗೆದ್ದಿದ್ದು. ಎಕೆ ಅಣ್ಣಾ ಹೋರಾಟದ ಪ್ರಭೆಯಲ್ಲಿ ಗೆದ್ದಿರುವುದು. ಅವರಿನ್ನು ತಮ್ಮನ್ನು ಸಾಬೀತುಪಡಿಸಿಕೊಂಡಿಲ್ಲ(ಒಳ್ಳೆಯ ಸರ್ಕಾರವನ್ನು ಎಕೆ ನೀಡಲಿ ಎಂದು ನಾನು ಬಯಸುತ್ತೇನೆ). ನಿಮಗೆ ಪ್ರಫುಲ್ ಕುಮಾರ್ ಮಹಾಂತ ಅವರ ಬಗ್ಗೆ ಗೊತ್ತಿರಬಹುದು. ಅವರಂತೆ ಎಕೆ ಆಗದಿದ್ದರಷ್ಟೇ ಸಾಕು; ಅಣ್ಣಾ ಹಜಾರೆ ಹೋರಾಟವನ್ನು ನೆಲಕಚ್ಚಿಸಿ ರಾಜಕೀಯ ಪಕ್ಷ ಸ್ಥಾಪಿಸಿ ಎಕೆ ಮುಖ್ಯಮಂತ್ರಿಯಾಗಿದ್ದಕ್ಕೂ ಸಾರ್ಥಕ.
    ಈಗಾಗಲೇ ತನ್ನನ್ನು ಸಾಬೀತುಪಡಿಸಿಕೊಂಡಿರುವ ಮೋದಿಯವರೊಂದಿಗೆ ಎಕೆ ಯನ್ನು ಹೋಲಿಸಬೇಕು ಎಂದರೆ ನೀವಿನ್ನು 2016ರವರೆಗೂ ಕಾಯಬೇಕು. ಈಗತಾನೆ ಅಧಿಕಾರ ವಹಿಸಿಕೊಂಡಿದ್ದಾರೆ, ಇನ್ನೇನು ಲೋಕಸಭಾ ಚುನಾವಣೆಯ ನೀತಿಸಂಹಿತೆಯೂ ಬರಲಿದೆ. ಆಗಂತೂ ಯಾವುದೇ ಹೊಸ ಕಾರ್ಯಗಳನ್ನೂ/ಯೋಜನೆಗಳನ್ನೂ ತರುವಂತಿಲ್ಲ. ಲೋಕಸಭೆ ಚುನಾವಣೆಯ ನಂತರ ಮೋದಿ ಪ್ರಧಾನಿಯಾದರೆ ಕಾಂಗ್ರೆಸ್ ಬೆಂಬಲ ಪಡೆದ ಆಪ್ ಕೇಂದ್ರ ಸರ್ಕಾರದೊಂದಿಗೆ ಹೇಗೆ ವರ್ತಿಸುತ್ತೆ ನೋಡಬೇಕು! ದೆಹಲಿ ಮೊದಲೇ ಕೇಂದ್ರಾಡಳಿತ ಪ್ರದೇಶ.
    ಇದೊಂದು ಅಂಶವನ್ನು ಗಮನಿಸಿ, ಎಕೆ ಬೆಂಬಲ ಪಡೆದಿರುವುದು ಒಂದು ಮತದಿಂದ ಸರ್ಕಾರ ಕಳೆದುಕೊಂಡ ವಾಜಪೇಯಿಯವರ ಬಿಜೆಪಿಯ ಬೆಂಬಲವನ್ನಲ್ಲ, ಕಾಂಗ್ರೆಸ್ ನ ಬೆಂಬಲವನ್ನು.
    ಯುಧಿಷ್ಠಿರ ಪಗಡೆ ಆಟದಲ್ಲಿ ಸೋತಂತೆ ಆಗಿದ್ದಿದ್ದರೆ ಸಾಕಷ್ಟೇ.

    ಉತ್ತರ
    • G Dakshina Murthy's avatar
      G Dakshina Murthy
      ಜನ 5 2014

      ಒಳ್ಳೆಯ ಸಮತೋಲನದ ಪ್ರತಿಕ್ರಿಯೆ. ಒಳ್ಳೆಯ ಕೆಲಸ ಮಾಡಲು ಹೊರಟವರನ್ನು ಪ್ರೋತ್ಸಾಹಿಸೋಣ. ಆದರೆ, ಅವರಲ್ಲಿ ಬರೀ ಉದ್ದೇಶಗಳು ಮಾತ್ರವಿದ್ದರೆ ಸಾಲದಲ್ಲ. ಅವರಲ್ಲಿನ ಶಕ್ತಿ ಸಾಮರ್ಥ್ಯಗಳು ಅವರ ಹೊಸ ಪಾತ್ರಕ್ಕೆ ಹೊಂದುವಂತಹುದಿರಬೇಕು. ನೇಗಿಲನ್ನೆಳೆಯುವುದರಲ್ಲಿ ನುರಿತ ಎತ್ತು ಮತ್ತು ಈಗಷ್ಟೆ ಹರೆಯಕ್ಕೆ ಕಾಲಿಟ್ಟ ಹೋರಿಗರು ಎರಡನ್ನೂ ಹೋಲಿಸಲಾಗದು. ‘ಎಳೆಗರುಂ ಎತ್ತಾಗು”ವವರೆಗೂ ಕಾಯಬೇಕು. ಅದೇ ಬುದ್ಧಿವಂತಿಕೆಯ ಲಕ್ಷಣ ಎಂದುಕೊಳ್ಳುತ್ತೇನೆ.

      ಉತ್ತರ
  3. M.A.Sriranga's avatar
    M.A.Sriranga
    ಡಿಸೆ 31 2013

    gk ಅವರಿಗೆ —
    ದೆಹಲಿಯಲ್ಲಿನ ಕೆಲವು ಇಲಾಖೆಗಳು ಕೇಂದ್ರ ಸರ್ಕಾರದ ಅಧೀನದಲ್ಲೂ ಮತ್ತೆ ಕೆಲವು ರಾಜ್ಯ ಸರ್ಕಾರದ ಅಧೀನದಲ್ಲೂ ಬರುತ್ತದೆ ಎಂದು ಲೇಖನವೊಂದರಲ್ಲಿ ಓದಿದ ನೆನಪು. ನೀವು ದೆಹಲಿ ಕೇಂದ್ರಾಡಳಿತ ಪ್ರದೇಶ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ್ದೀರಿ. ಆದರೆ ದೆಹಲಿ ಒಂದು ರಾಜ್ಯದ ಸ್ಥಾನಮಾನ ಗಳಿಸಿ ಹತ್ತು ವರುಷಗಳ ಮೇಲಾಯಿತಲ್ಲವೇ?

    ಉತ್ತರ
  4. Shiva Shankara's avatar
    ಡಿಸೆ 31 2013

    AAP ಪಕ್ಷದ 90ರಷ್ಟು ಕಾರ್ಯಕರ್ತರು ದೇವರು ಧರ್ಮದ ಬಗ್ಗೆ ಅಸಡ್ಡೆ ಉಳ್ಳವರ, ದೇಶವೆಂದರೆ ಕಲ್ಲು ಮಣ್ಣು ಕಾಂಕ್ರೀಟ್ ಎಂದು ತಿಳಿದಿರುವ, ಪಾಶ್ಚಾತ್ಯೀಕರಣ ಕ್ರೈಸ್ತೀಕರಣವೇ ಆಧುನೀಕರಣ ಅದುವೇ ನಾಗರೀಕತೆ ಎಂಬ ಮೂಢ ನಂಬಿಕೆಯ ಸಾಂಸ್ಕೃತಿಕ ದಿವಾಳಿತನದ ಪ್ರತಿನಿಧಿಗಳು. ಮೊದಲು ನಂಬಿಕೆಗಳ ಮೇಲೆ, ಭಾವನೆಗಳ ಮೇಲೆ ಅಪನಂಬಿಕೆ ಹುಟ್ಟಿಸುವುದು ನಂತರ ನಂಬಿಕೆ ಶೂನ್ಯಗೊಳಿಸುವುದು ಆ ನಂತರ ಪಾಶ್ಚಾತ್ಯ ನಂಬಿಕೆಗಳ ದಾಸರನ್ನಾಗಿಸುವುದು ಮತಾಂತರದ ತನ್ಮೂಲಕ ರಾಷ್ಟ್ರಾಂತರ ಇವು ಯೋಜನೆಯ ವಿವಿಧ ಹಂತಗಳು. ಹಿಂದುತ್ವ ವಿಲ್ಲದ ಕರಿ ಬ್ರಿಟೀಷರು ಆಳುವ ಹಿಂದೂಸ್ಥಾನಕ್ಕಿಂತ ಯೂರೋಪಿಯನ್ ಬ್ರಿಟೀಷ್ ಸರ್ಕಾರವೇ ಸಮರ್ಥ ಆಡಳಿತ ನೀಡಬಲ್ಲುದಾಗಿತ್ತು ಭಾರತ ಸ್ವಾತಂತ್ರ ಪಡೆದದ್ದೇ ತಪ್ಪು ಎನ್ನುವ ಕೆಲವು ಹಿರಿಯರ ಬೈಗುಳಕ್ಕೆ ಸಮರ್ಥನೆ ಇವರ ನಡವಳಿಕೆ. ಭಾವ ರಹಿತ ಭಾರತದ ಸುಂದರ ಶವ ಅಲಂಕಾರಿಗಳು ಎನಿಸುವುದಿಲ್ಲವೇ ?

    ಉತ್ತರ
  5. Shiva Shankara's avatar
    ಡಿಸೆ 31 2013

    ನಿಜ BJP ಯಲ್ಲಿ ಸಾಮಾನ್ಯ ಜನರ ಬೇಕು ಬೇಡಗಳನ್ನು ಅರಿತ ಜನ ಸಾಮಾನ್ಯರನ್ನು ಗುರುತಿಸುವ ಅವರನ್ನು ನಾಯಕರಾಗಿಸುವ ಸಾಮಾನ್ಯ ಜನರ ಪ್ರತಿನಿಧಿಗಳನ್ನು ಕಾಣುವುದು ಈಗಿನ ವಾತಾವರಣದಲ್ಲಿ ಸಾಧ್ಯವಿಲ್ಲ ಅಲ್ಲೇನಿದ್ದರೂ ಸ್ಥಾಪಿತ ಬಂಡವಾಳ ಶಾಹಿಗಳ ಮೆರೆದಾಟ ಖಂಡಿತ ಇದ್ದೇ ಇದೆ ಅದೇ ರೀತಿ ಇಂದಿನ ಯುಗಧರ್ಮದಲ್ಲಿ ಸಾಮಾನ್ಯನೊಬ್ಬ ಸಾಮಾನ್ಯರ ಬೇಕು ಬೇಡಗಳನ್ನು ಈಡೇರಿಸುವುದು ಸಾಧ್ಯವೂ ಇಲ್ಲದ ಕ್ಲಿಷ್ಟ ಕ್ಲುಪ್ತ ಸಂಧಿ ಒದಗಿರುವುದೂ ನಿಜ ನೀವು ನಿಮ್ಮ ಲೇಖನದಲ್ಲಿ ದೇಶದ ಶೇ 80 ಜನ ಭ್ರಷ್ಠ ರಲ್ಲ ಎಂದಿರುವುದು ಸತ್ಯವಲ್ಲ ಸಾಮಾನ್ಯ ಅದರಲ್ಲೂ ಕೆಳವರ್ಗದ ಜನರೇ ಇಂದಿನ ದಿನಮಾನಗಳಲ್ಲಿ ತಮ್ಮದೆಲ್ಲವನ್ನೂ ಅನೈತಿಕವಾಗಿ ಮಾರಿಕೊಂಡು ವಸ್ತು ವಿಲಾಸಕ್ಕೆ ಮಾರುಹೋಗುವ ಧರ್ಮ ಭ್ರಷ್ಠತೆಯನ್ನು ನಿರ್ಲಜ್ಜತೆಯಿಂದ ಆಚರಿಸುತ್ತಿರುವುದ ರಿಂದಲೇ ಭ್ರಷ್ಠಾಚಾರದ ಬೇರು ಬೀಜವೂ ಆಗಿದೆ. ಅಂಥವರಿಗೆ AAP ಇಂದು ಅಸಾಧ್ಯ ಮಾರ್ಗದಲ್ಲಿ ಭ್ರಷ್ಠಾಚಾರ ಅಳಿಸುವ ಮಹಾ ಸುಳ್ಳುಗಳನ್ನು ಮಾರಿ ಅಧಿಕಾರದ ಗದ್ದುಗೆ ಏರಿದೆ ಜನರ ಎಲ್ಲಾ ಸಮಸ್ಯೆಗಳನ್ನು ದೇವರಿಗಿಂತ ಮಿಗಿಲಾಗಿ ನಿವಾರಿಸುವ ಭರವಸೆಗಳೊಂದಿಗೆ ಮಹಾತ್ಮನ ಭ್ರಮೆ ಸೃಷ್ಟಿಸಿದೆ, ಇಂಥ ನರಿಗಳು ದೇಶದಲ್ಲಿ ಹಲವು ಬಾರಿ ಅವತರಿಸಿ ಹೇಳ ಹೆಸರಿಲ್ಲದಂತೆ ಹೋಗಿರುವುದು ಇದೆ ಮೊದಲಲ್ಲ ಇದು ಅವರ ಅವಕಾಶ ನೋಡುತ್ತಿರಿ ಎಲ್ಲವೂ ಕಾಲನ ಮದ್ದಿಗೆ ಗುಣ ಆಗಲೇ ಬೇಕಿದೆ ಆಗುತ್ತದೆ.

    ಉತ್ತರ
  6. GK's avatar
    GK
    ಡಿಸೆ 31 2013

    ಎಂ.ಎ. ಶ್ರೀರಂಗ ಅವರೇ, ದೆಹಲಿ; National Capital Territory . ಶಾಸನಸಭೆ, ಹೈಕೋರ್ಟ್, ಸಚಿವ ಸಂಪುಟ ಎಲ್ಲವೂ ಇರುವುದು ನಿಜ. ಹಾಗಂತ ಅದು ‘ಯುನಿಯನ್ ಟೆರಿಟೆರಿ’ ಎಂಬುದರಿಂದ ಮುಕ್ತಿ ಪಡೆದಿಲ್ಲ. ಕೇಂದ್ರಾಡಳಿತ ಪ್ರದೇಶ ಎಂದು ಬಳಸಿದ ಕಾರಣವಿಷ್ಟೇ; ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲವೇ ಕಾಂಗ್ರೆಸ್ ಯಾವುದೇ ಅಧಿಕಾರಕ್ಕೆ ಬಂದರೂ (ಎರಡೂ ಪಕ್ಷಗಳನ್ನು ಸಮಾನಾಂತರವಾಗಿ ಎದುರಿಸಿಯೇ ಆಪ್ ಚುನಾವಣೆಯಲ್ಲಿ ಸ್ಪರ್ಧಿಸಿತ್ತು) ಆಪ್ ಕೇಂದ್ರ ಸರ್ಕಾರದೊಂದಿಗೆ ಹೇಗೆ ವರ್ತಿಸಬಹುದು ಎಂಬುದರ ಮೇಲೆ ಅನುದಾನ, ಯೋಜನೆಗಳು ಲಭ್ಯವಾಗಲಿವೆ.
    ಹಾಗೆ ಇನ್ನೊಂದು ಕಾರಣ; ಆಪ್ ಗೆದ್ದಿರುವುದು ನಗರಾವೃತವಾದ ದೆಹಲಿಯಲ್ಲಿ. ಅಣ್ಣಾ ಹೋರಾಟಕ್ಕೆ ಬೆಂಬಲ ನೀಡಿದ್ದರಲ್ಲಿ ನಗರ ಭಾಗದ ಅದರಲ್ಲೂ ಸುಶಿಕ್ಷಿತ/ಮಧ್ಯಮ ವರ್ಗದ ಯುವ ಜನಾಂಗವೇ ಹೆಚ್ಚು. ಮೇಲಿನ ಲೇಖನದಲ್ಲಿ ಮೋದಿ ಹಾಗೂ ಎಕೆ ನಡುವೆ ಹೋಲಿಕೆ ಮಾಡಲಾಗಿದೆ. ಮೋದಿ ತನ್ನನ್ನು ಸಾಬೀತುಪಡಿಸಿಕೊಂಡಿರುವುದು ಗುಜರಾತ್ ನಂತಹ ರಾಜ್ಯದಲ್ಲಿ. ದೆಹಲಿಯ ಹೊರತಾಗಿ ಬಹುತೇಕ ರಾಜ್ಯಗಳಲ್ಲಿ ಗ್ರಾಮೀಣ ಭಾಗದ ಅದರಲ್ಲೂ ರೈತ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ದೆಹಲಿಯಲ್ಲಿ ಆಪ್ 28 ಸ್ಥಾನ ಗೆದ್ದಿದೆ; ಸಿದ್ಧಾಂತಗಳು ಅದರಂತೆಯೇ ಇರುವ ಲೋಕಸತ್ತಾ ಪಾರ್ಟಿ ಕರ್ನಾಟಕದಲ್ಲಿ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
    ನನಗೆ ತಿಳಿದಿರುವ ಮಟ್ಟಿಗೆ ಅಧಿಕಾರ ಸಿಗದ ಎಲ್ಲಾ ಪಾರ್ಟಿಗಳೂ ಪ್ರಾಮಾಣಿಕತೆ, ಸ್ವಚ್ಛ ಆಡಳಿತದ ಬಗ್ಗೆ ಮಾತನಾಡುತ್ತವೆ. ಅದರೊಳಗೊಂದು ಆಪ್. ಈಗ ಹೇಗಿದ್ದರು ಅಧಿಕಾರ ಸಿಕ್ಕಿದೆ. ಅಷ್ಟರಲ್ಲೇ ನೋಡಿ ಒಬ್ಬರು ಸಚಿವನಾಗಲಿಲ್ಲ ಅಂಥ ಸಿಟ್ಟಿಗೆದ್ದಿದ್ದು ಆಗಿದೆ. ಇನ್ನೂ ಕ್ರಮಿಸುವ ದಾರಿ ಕಠಿಣವಾಗಿರುವಾಗ, ಈಗಾಗಲೇ ಈ ಎಲ್ಲಾ ಹಂತಗಳನ್ನು ದಾಟಿ ಬಂದಿರುವ ಮೋದಿಯವರೊಂದಿಗೆ ಹೋಲಿಸುವುದು ನನ್ನ ಮಟ್ಟಿಗೆ ಸರಿ ಎನಿಸಲಿಲ್ಲ. ಇದು ನನ್ನ ಅಭಿಪ್ರಾಯವಷ್ಟೇ…

    ಉತ್ತರ
  7. udayaravi's avatar
    udayaravi
    ಜನ 1 2014

    AK ಯವರದ್ದು ಏನಿದ್ದರೂ ಹಳಸಿದ ಕಮ್ಯುನಿಷ್ಟ್ ಸಿದ್ಧಾಂತ. ಅದನ್ನು ಹೊಸ ಬಾಟಲಿಯಲ್ಲಿ ಹಾಕಿ ಹೊಸದಾದ ಪ್ಯಾಕೇಜಿನೊಂದಿಗೆ ಪ್ರಚುರ ಪಡಿಸಲಾಗುತ್ತಿದೆ ಆಷ್ಟೆ.ಈ ರೀತಿಯ ಸಿದ್ಧಾಂತಗಳು ಜಗತ್ತಿನಾದ್ಯಂತ ಗಬ್ಬೆದ್ದು ಮೂಲೆ ಸೇರಿರುವಾಗ ಭಾರತದಲ್ಲಿ ಇನ್ನೂ ಉಸಿರಾಡುತ್ತಿವೆ. ಮಮತಾ ಬ್ಯಾನರ್ಜಿ ಕೂಡಾ ಪ.ಬಂಗಾಲದಲ್ಲಿ ಕಮ್ಯುನಿಷ್ಟರನ್ನು ಅವರದೇ ಕೋಲಿನಿಂದ ಬಡಿದು ಬೀಳಿಸಿದ್ದರೂ ಅನುಸರಿಸುತ್ತಿರುವ ಸಿದ್ಧಾಂತಗಳು ಅವೇ. ಈ ಜನಪ್ರಿಯ ಆರ್ಥಿಕ ನೀತಿಗಳು ಕಾಗದದ ಮೇಲಷ್ಟೇ ಜನೋಪಯೋಗಿ ಆಗಿರಬಲ್ಲದು. ಮೂವತ್ತು-ನಲವತ್ತು ವರ್ಷ ಆಳಿದ ಮೇಲೂ ಬಂಗಾಲ ಇಂದು ಕಾರ್ಮಿಕರ ಸ್ವರ್ಗವಾಗದೇ ಆರ್ಥಿಕ ಸಂಕಷ್ಟದಲ್ಲಿ ತೆವಳುತ್ತಿರುವುದು ಇದಕ್ಕೆ ಜೀವಂತ ಉದಾಹರಣೆ. ಆರ್ಥಿಕ ಸಂಪನ್ಮೂಲನಗಳನ್ನು ಕ್ರೋಢೀಕರಿಸಿ ಜನ ಸಮುದಾಯದ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳದೇ ಬೇಕಾಬಿಟ್ಟಿ ಹಂಚಿ ಜನಪ್ರಿಯತೆ ಗಳಿಸಿಕೊಳ್ಳುವುದು ಇಡೀ ದೇಶವನ್ನು ನಮ್ಮ ಪೊರಕೆಯಿಂದ ಗುಡಿಸಿ ರಂಗೋಲಿ ಹಾಕುತ್ತೇವೆ ಎಂಬುವವರು ಮಾಡುವ ಕೆಲಸವಿಲ್ಲ. ಆಳುವ ಹಕ್ಕನ್ನು ಮಂಡಿಸುವವರು ದೇಶದ ಎಲ್ಲಾ ಸಮಸ್ಯೆಗಳಿಗೆ ಸ್ಫಷ್ಟ ನೀತಿ ಹೊಂದಿರಬೇಕು. ಭಯೋತ್ಪಾದನೆ, ವಿದೇಶಾಂಗ, ಆಂತರಿಕ, ಆರ್ಥಿಕ ಸಂಕಷ್ಟ, ಅಂತರ ರಾಜ್ಯ ನೆಲ, ಜಲ, ಭಾಷೆ ವಿವಾದಗಳನ್ನು “ಮೊಹಲ್ಲಾ” ಸಭೆಗಳಿಂದ ಪರಿಹರಿಸಲಾಗುವುದಿಲ್ಲ. ಇದಕ್ಕೆಲ್ಲಾ ನುರಿತ, ಅನುಭವಿ ಆಡಳಿತಗಾರರು ಬೇಕು. ಅದಕ್ಕೆ ಮೋದಿಯವರ ಉದಾಹರಣೆ ನಮ್ಮ ಕಣ್ಣ ಮುಂದಿರುವಾಗ, ಅಗ್ಗದ ಜನಪ್ರಿಯ ನಾಯಕರನ್ನು ನಂಬಿ ಅತಂತ್ರ ಸ್ಥಿತಿಯನ್ನು ತಂದುಕೊಂಡು ೧೯೯೬ರ ಪುನಾರವರ್ತನೆಯಾಗಿ ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ ಆಗಬಾರದು.

    ಉತ್ತರ
  8. ವಿಜಯ್ ಪೈ's avatar
    ವಿಜಯ್ ಪೈ
    ಜನ 1 2014

    – ಮೋದಿ ಮತ್ತು ಕೇಜ್ರಿವಾಲ್ ಹೋಲಿಕೆಯನ್ನು ಸುರು ಮಾಡಿರುವುದು ಕೆಲವು ಮಾಧ್ಯಮದವರು..ಕಾಂಗಿಗಳು ಮತ್ತು ಎಡ ಪಂಥೀಯ ಗುಂಪುಗಳ ಪ್ರೇರಣೆಯಿಂದ ಮತ್ತು ಅವರ ಹಿತಾಸಕ್ತಿ ಕಾಪಾಡಲು.

    – ಕೇಜ್ರಿವಾಲ್ ಬಂದದ್ದು ಅಣ್ಣಾ ಚಳುವಳಿಯ ಜನಪ್ರಿಯತೆಯ ಮೇಲೆ. ಇಂಡಿಯಾ ಅಗೇನ್ಟ್ಟ ಕರಪ್ತನ್ ಚಳುವಳಿಯ ‘ನೇರ’ ಪರಿಣಾಮ ಆದದ್ದು ದೆಹಲಿಯಲ್ಲಿ. ಅದರಿಂದಾಚೆ ಒಂದೆರಡು ಮೆಟ್ರೊಗಳಲ್ಲಿ.

    – ದೆಹಲಿಯಲ್ಲಿ ಬಿಜೆಪಿ ಸೋತಿಲ್ಲ..ಸರಳ ಬಹುಮತಕ್ಕೆ ನಾಲ್ಕು ಸ್ಥಾನ ಕಡಿಮೆ ಆಗಿದೆಯಷ್ಟೆ. ದೆಹಲಿಯಲ್ಲಿ ಅಧಿಕಾರದ ಗದ್ದಿಗೆ ಏರದಿದ್ದದ್ದಕ್ಕೆ ಮೋದಿ ಕಾರಣ ಎನ್ನುವುದು, ಉಳಿದ ಕಡೆಯ ಜಯಕ್ಕೆ ಮೋದಿ ಕಾರಣನಲ್ಲ ಎನ್ನುವುದು ಈ ‘ಜಾತ್ಯತೀತ’ ರಾಜಕಾರಣದ ಗ್ಯಾಂಗ್ ನ ಹತಾಶೆ ತೋರಿಸುವುದಷ್ಟೇ.

    – ಆಪ್ ನದ್ದು ಸೆಂಟರ್ ಲೆಪ್ಟಿಸ್ಟ ವಿಚಾರಗಳು. ಈಗಾಗಲೇ ಕಾಂಗಿ ವರಸೆಯಾಗಿರುವ ಉಚಿತ ಯೋಜನೆಗಳು, ಭಯೋತ್ಪಾದಕರ ಹೆಗಲ ಮೇಲೆ ಕೈ ಹಾಕಿ ಸಹಾನುಭೂತಿ ತೋರುವ ಚಟುವಟಿಕೆಗಳನ್ನು ಮುಂದುವರೆಸಿದರೆ ಮಣ್ಣು ತಿನ್ನುವ ದಿನಗಳು ದೂರವಿಲ್ಲ.

    – ಆಪ್ ದೆಹಲಿಯಲ್ಲಿ ಕಸಿದಿದ್ದು ಕಾಂಗಿ ಮತ್ತು ಅವರ ಪರಿವಾರದ ಇತರರ ಮತಗಳನ್ನು. ದೆಹಲಿಯಲ್ಲಿ ಆಪ್ ನ್ನು ಬೆಂಬಲಿಸಿದವರಲ್ಲಿ ಸಾಕಷ್ಟು ಮೋದಿ ಬೆಂಬಲಿಗರಿದ್ದಾರೆ. ಇವರು ವಿಧಾನಸಭೆಗೆ ಆಪ್..ಲೋಕಸಭೆಗೆ ಮೋದಿ ಎನ್ನುವ ನೀತಿ ಇಟ್ಟುಕೊಂಡವರು. ಮೊದಲೇ ಹರ್ಷವರ್ಧನ್ ರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದಲ್ಲಿ, ಸುಲಭವಾಗಿ ಸರಳ ಬಹುಮತವನ್ನು ಮೀರಿ ಸೀಟಗಳನ್ನು ಗೆಲ್ಲಬಹುದಿತ್ತು.

    – ಬಿಜೆಪಿಯಂತಹ ಪಕ್ಷ ಈಗಾಗಲೇ ಇದ್ದು…ಆದರೂ ಹಳ್ಳಿಗಳಿಗೆ ಮೋದಿ ಮುಟ್ಟಿದ್ದು, ಮೋದಿ ಎಂದರೆ ಯಾರು ಅಂತ ಗೊತ್ತಾಗಲು ಪ್ರಾರಂಭವಾಗಿದ್ದು ಇತ್ತಿಚಿಗೆ. ಅಂತದರಲ್ಲಿ ಈ ಕೇಜ್ರಿವಾಲ್, ಈ ಆಪ್ ಎಲ್ಲ ಲೋಕಸಭೆ ಚುನಾವಣೆ ಹೊತ್ತಿಗೆ ಹಳ್ಳಿಗಳನ್ನು ಮುಟ್ಟುತ್ತಾರೆ ಎನ್ನುವುದು ಉತ್ಪ್ರೇಕ್ಷಿತ ಭ್ರಮೆ. ಯಾರಿಗಾದರೂ ಈ ಬಗ್ಗೆ ಅನುಮಾನವಿದ್ದಲ್ಲಿ ನಿಮ್ಮ ನಗರ/ಊರು/ಹಳ್ಳಿಯಲ್ಲಿ ಒಂದು ಹತ್ತು ಜನರ ಜೊತೆ ಆಪ್/ಕೇಜ್ರಿವಾಲ್ ಬಗ್ಗೆ ಕೇಳಿ ನೋಡಿ.

    – ಆಪ್ ಬಿಜೆಪಿಗೆ ಪರ್ಯಾಯ ಪಕ್ಷವಾಗಿ ಬೆಳೆಯುವುದು, ಮತದಾರನಿಗೆ ಎರಡು ಒಳ್ಳೆಯ ಆಯ್ಕೆ ಸಿಗುವುದು, ಕಾಂಗಿ-ಎಡಪಂಥಿಗಳು ತಿಪ್ಪೆಗುಂಡಿ ಸೇರುವುದು ಸಂತೋಷದ ವಿಚಾರವೆ. ಆದರೆ ವಾಸ್ತವದಲ್ಲಿ ಅದು ಸ್ವಲ್ಪ ಮಟ್ಟಿಗೆ ಸಾಧ್ಯವಾಗಬಹುದಾಗಿದ್ದು ಮೆಟ್ರೊಗಳಲ್ಲಿ ಮಾತ್ರ.

    – ಈಗಷ್ಟೇ ಸುದ್ದಿಯಲ್ಲಿ ನೋಡಿದೆ..ಆಪ್ ೩೦೦ ಲೋಕಸಭಾ ಸ್ಥಾನಗಳಿಗೆ ನಿಲ್ಲಲು ಹೊರಟಿದೆಯಂತೆ!. ಮನೆಯಂಗಳದ ಕ್ರಿಕೆಟ್ ಪ್ರವೀಣ..ಒಮ್ಮಿಂದೊಮ್ಮೆ ನಾನು ಲಾರ್ಡ್ಸ್ ನಲ್ಲಿ ಆಡುತ್ತೇನೆ ಎಂದಂತೆ!

    – ಮೊದಲು ದೆಹಲಿಯಲ್ಲಿ ಒಳ್ಳೆಯ ಆಡಳಿತ ಮಾಡಿ ತೋರಿಸಲಿ..ಮುಂದಿನ ಲೋಕಸಭೆಯ ಹೊತ್ತಿಗೆ ಪರ್ಯಾಯ ಎಂದು ಪರಿಗಣಿಸೋಣ. ಮೊದಲು ಅಂಗಳಕ್ಕೆ ಹಾರಲಿ..ಆಮೇಲೆ ಆಕಾಶಕ್ಕೆ ಜಿಗಿಯಲಿ.

    ಉತ್ತರ
  9. GK's avatar
    GK
    ಜನ 2 2014

    Agree with Udayaravi & Vijay Pai

    ಉತ್ತರ
  10. Manjunath's avatar
    ಜನ 3 2014

    i will not support to a party (AAP) which says kashmir is not an integral part of india!!
    party is sympathizer of SIMI!!
    india will be torn into pieces if this (AAP) comes to power!!
    AAP is nothing but congress mind it..

    ಉತ್ತರ
  11. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ಉತ್ತರ

Leave a reply to gk ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments