ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೧
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ರಾಜಕೀಯ ಸಿದ್ಧಾಂತದಲ್ಲಿ ಅಸ್ಮಿತೆ ರಾಜಕೀಯದ ಪರಿಕಲ್ಪನೆ ಪ್ರಬಲವಾಗಿದ್ದು 20ನೇ ಶತಮಾನದ ಉತ್ತರಾರ್ಧದಲ್ಲಿ. ತಮ್ಮ ಅಸ್ತಿತ್ವ ಸಂಪೂರ್ಣ ಅವಗಣನೆಗೆ ಒಳಗಾಗಿದೆ ಮತ್ತು ಆ ಕಾರಣದಿಂದ ತಮ್ಮನ್ನು ಪ್ರಾತಿನಿಧ್ಯದಿಂದ ವಂಚಿತರನ್ನಾಗಿಸಿ ರಾಜಕೀಯ ಮುಖ್ಯವಾಹಿನಿಯಿಂದ ದೂರವಿರಸಲಾಗಿದೆ ಎನ್ನುವ ಭಾವನೆ ಬೆಳೆಸಿಕೊಂಡ ಒಂದು (ಸಾಮಾಜಿಕ/ಸಾಂಸ್ಕೃತಿಕ) ಗುಂಪು ರಾಜಕೀಯ ಸಂಚಲನೆಗೆ ತೊಡಗುವ ಪ್ರಕ್ರಿಯೆಯನ್ನು ಅಸ್ಮಿತೆ ರಾಜಕೀಯ ಎಂದು ಕರೆಯಲಾಗುತ್ತದೆ. ಸಾರ್ವತ್ರಿಕ ಒಳಿತು ಅಸ್ಮಿತೆ ರಾಜಕೀಯದ ಗುರಿಯಾಗಿರುವುದಿಲ್ಲ ಮತ್ತು ಅಂತಹ ರಾಜಕೀಯ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟ ತನ್ನನ್ನು ಮುಖ್ಯವಾಹಿನಿಯೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುವುದು ಒಂದು ಗುಂಪಿನ ಅಸ್ಮಿತೆ ರಾಜಕೀಯದ ಮುಖ್ಯ ಉದ್ದೇಶವಾಗಿರುತ್ತದೆ.
20ನೇ ಶತಮಾನದ ಉತ್ತರಾರ್ಧದಲ್ಲಿ ಅಮೇರಿಕಾ ದೇಶದಲ್ಲಿ ಪ್ರಾರಂಭವಾದ (ದ್ವಿತೀಯ ಹಂತದ) ಸ್ತ್ರೀವಾದೀ ಚಳುವಳಿ, ಕರಿಯರ ನಾಗರೀಕ ಹಕ್ಕುಗಳ ಹೋರಾಟ, ಸಲಿಂಗಿಗಳು ತಮ್ಮ ಹಕ್ಕಿಗಳಿಗಾಗಿ ಮಾಡಿದ ಹೋರಾಟ ಮೊದಲಾದವುಗಳನ್ನು ಅಸ್ಮಿತೆ ರಾಜಕೀಯ ಎಂದು ಮೊತ್ತ ಮೊದಲ ಬಾರಿಗೆ ಗುರುತಿಸಲಾಯಿತು. ಈ ಎಲ್ಲಾ ಗುಂಪುಗಳು ತಮ್ಮ ವಿಶಿಷ್ಟ ಅಸ್ಮಿತೆಯನ್ನು ಗುರುತಿಸಿ ಗೌರವಿಸದೆ ಆ ಕಾರಣಕ್ಕಾಗಿ ತಾವು ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟ ಪ್ರಕ್ರಿಯೆಯ ವಿರುದ್ಧ ಹೋರಾಟ ಪ್ರಾರಂಬಿಸಿದವು. ತಾವು ಸಾಮಾಜಿಕವಾಗಿ ರಾಜಕೀಯವಾಗಿ ತುಳಿತಕ್ಕೊಳಗಾಗಿದ್ದೇವೆ ಎನ್ನುವ ಭಾವನೆಯನ್ನು ಆಧರಿಸಿ ಅಸ್ಮಿತೆ ರಾಜಕೀಯದ ಸಂಘಟನೆಯು ತನ್ನ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅಸ್ಮಿತೆ ರಾಜಕೀಯ ಎಂದು ಕರೆಯಲ್ಪಡುವ ರಾಜಕೀಯ/ಸಾಮಾಜಿಕ ಚಳುವಳಿಗಳ ವ್ಯಾಪ್ತಿ ವಿಶಾಲವಾದುದಾಗಿದೆ. ರಾಜಕೀಯ ಶಾಸ್ತ್ರದ ಅಧಯಯನಗಳಲ್ಲಿ ಅಸ್ಮಿತೆ ರಾಜಕೀಯಕ್ಕೆ ಸಂಬಂದಿಸಿದ ಬರವಣೆಗೆಗಳು ಪಾಶ್ಚಾತ್ಯ ಬಂಡವಾಳಿಶಾಹಿ ಪ್ರಜಾಪ್ರಭುತ್ವಗಳಿಗೆ ಸಂಬಂದಿಸಿರುತ್ತವೆ. ಬಂಡವಾಳಶಾಹಿ ವ್ಯವಸ್ಥೆಯ ಹಿಡಿತ ಪ್ರಬಲವಾಗುತ್ತಾ ಹೋದ ಹಾಗೆ ಪರಂಪರಾನುಗತವಾಗಿ ಬಂದ ಸಮುದಾಯಗಳು ತಮ್ಮ ಅಸ್ಮಿತೆಗಳನ್ನು ಕಳೆದುಕೊಳ್ಳುತ್ತಾ ಹೋಗಿ ಅಂತಹ ಸಮುದಾಯಗಳ ಸದಸ್ಯರಲ್ಲಿ ಪರಕೀಯತೆಯ ಭಾವನೆ ಹೆಚ್ಚಗುತ್ತಾ ಹೋದದ್ದರ ಪರಿಣಾಮದಿಂದಾಗಿ ಅಸ್ಮಿತೆ ರಾಜಕೀಯ ಹುಟ್ಟಿಕೊಂಡಿದೆ ಎಂದು ಕೆಲವರು ಭಾವಿಸುತ್ತಾರೆ.
ಪಾಶ್ಚಾತ್ಯ ದೇಶಗಳಿಗೆ ಸಂಬಂದಿಸಿಂತೆ ಆಧುನಿಕತೆಯ ಬೆಳವಣಿಿಗೆಗೂ ಅಸ್ಮಿತೆ ರಾಜಕೀಯಕ್ಕೂ ಒಂದು ಬಗೆಯ ಅವಿನಾಭಾವ ಸಂಬಂಧವಿರುವುದಂತೂ ಸ್ಪಷ್ಟವಾಗಿದೆ. ಆದರೆ ಜಗತ್ತಿನಾದ್ಯಂತ ನಡೆಯುತ್ತಿರುವ ಹಲವು ಹೋರಾಟಗಳು ಉದಾಹರಣೆಗೆ ಸ್ಥಳೀಯ ನೆಲೆಯ ಹಕ್ಕುಗಳ ಹೋರಾಟ, ಪ್ರಾದೇಶಿಕ ಹೋರಾಟ, ಭಾರತದಲ್ಲಿ ನಡೆಯುತ್ತಿರುವ ಜಾತಿಯಾದಾರಿತ ಹಿಂದುಳಿದ ವರ್ಗ ಹಾಗೂ ದಲಿತ ಹೋರಾಟ ಮುಂತಾದವುಗಳು ಮುಂದಿಡುವ ಬೇಡಿಕೆಗಳು ಅಸ್ಮಿತೆ ರಾಜಕೀಯವನ್ನೇ ಹೋಲುತ್ತವೆ ಎನ್ನುವುದನ್ನು ನಾವು ಗಮನಿಸಬೇಕು. ಅಂತಹ ಹೋರಾಟಗಳನ್ನೂ ಅಸ್ಮಿತೆ ರಾಜಕೀಯ ಎಂದು ಗುರುತಿಸಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ಸರಿ ಎನ್ನುವುದರ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಜಿಜಾÐಸೆ ನಡೆಯುತ್ತಿದೆ. ಅಸ್ಮಿತೆ ರಾಜಕೀಯ ಎಂದರೇನು ಎನ್ನುವುದರ ಬಗ್ಗೆ ಒಂದು ಸ್ಪಷ್ಟವಾದ ವ್ಯಾಖ್ಯಾನವನ್ನು ಕೊಡಲು ಸಾಧ್ಯವಾಗದೇ ಇರುವುದರಿಂದ ಈ ಬಗೆಗಿನ ಗೊಂದಲ ಮುಂದುವರೆಯುತ್ತಲೇ ಇದೆ. ವಿಶಾಲವಾದ ಅರ್ಥದಲ್ಲಿ ವಿಶಿಷ್ಟ ಸಾಮಾಜಿಕ ನೆಲೆಯಲ್ಲಿ ಗುರುತಿಸಿಕೊಂಡಿರುವ ಹಾಗೂ ತಾವು ತುಳಿತ್ತಕ್ಕೊಳಾಗುತ್ತಿದ್ದೇವೆ ಮತ್ತು ತಮ್ಮ ವಿಶಿಷ್ಟ ಅಸ್ಮಿತೆಯ ಕಾರಣದಿಂದಾಗಿ ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟಿದ್ದೇವೆ ಎನ್ನುವ ಭಾವನೆಯಿಂದ ರಾಜಕೀಯವಾಗಿ ಸಂಘಟಿತವಾಗುವ ಪ್ರಕ್ರಿಯೆಯನ್ನು ಅಸ್ಮಿತೆ ರಾಜಕೀಯ ಎಂದು ಗುರುತಿಸಲಾಗಿದೆ.
ಅಸ್ಮಿತೆ ರಾಜಕೀಯದ ನೈತಿಕ ಪ್ರತಿಪಾದನೆಗಳ ಹಿಂದೆ ಅಸ್ಮಿತೆ, ಸಂಸ್ಕೃತಿ, ರಾಜಕೀಯ ಹಾಗೂ ಅಧಿಕಾರದ ನಡುವಿನ ಸಂಬಂಧಗಳ ಬಗ್ಗೆ ಹಲವು ಪ್ರತಿಸ್ಪರ್ಧಿ ಸಿದ್ಧಾಂತಗಳಿವೆ. ಕೆಲವು ಸಿದ್ಧಾಂತಗಳು ಅಸ್ಮಿತೆ ರಾಜಕೀಯವನ್ನು ಧನಾತ್ಮಕವಾಗಿ ಪರಿಗಣಿಸಿದರೆ ಮತ್ತೆ ಕೆಲವೊಂದರ ಪ್ರಕಾರ ಅಸ್ಮಿತೆ ರಾಜಕೀಯದಿಂದ ಒಳಿತಿಗಿಂತ ಕೆಡುಕೇ ಹೆಚ್ಚು. ನವಮಾರ್ಕ್ಸ್ ವಾದಿಗಳು ಅಸ್ಮಿತೆ ರಾಜಕೀಯ ಹಾಗೂ ವರ್ಗ ರಾಜಕೀಯದ ನಡುವೆ ಭಿನ್ನತೆಯನ್ನು ಗುರುತಿಸುತ್ತಾರೆ. ನವ ಸಾಮಾಜಿಕ ಚಳುವಳಿಗಳ ಧೃಷ್ಟಿಕೋನವು ವರ್ಗಾದಾರಿತ ಚಳುವಳಿಗಳು ಹಾಗೂ ಇತರ ಚಳವಳಿಗಳ ನಡುವಿನ ಭಿನ್ನತೆಯನ್ನು ಗುರುತಿಸುತ್ತದೆ. ಆಧುನಿಕೋತ್ತರ ಹಾಗೂ ರಾಚನಿಕೋತ್ತರವಾದಿಗಳ ಪ್ರಕಾರ ಅಸ್ಮಿತೆ ರಾಜಕೀಯವು ಕೇವಲ ರಾಜಕೀಯ ಸ್ವರೂಪವನ್ನು ಮಾತ್ರ ಪಡೆದಿದ್ದು ಅದಕ್ಕೆ ಸಾಂಸ್ಕೃತಿಕ ಅಂತಸ್ಸತ್ವವಿರುವುದಿಲ್ಲ. ಅಸ್ಮಿತೆ ರಾಜಕೀಯದ ಅಪಾಯಗಳನ್ನು ನವಮಾರ್ಕ್ಸ್ ವಾದಿಗಳು ಹೀಗೆ ಗುರುತಿಸುತ್ತಾರೆ. ಅವರ ಪ್ರಕಾರ ವರ್ಗ ಅಸಮಾನತೆ ಶೋಷಣೆಯ ಮೂಲವಾಗಿದೆ. ಹಾಗಾಗಿ ಆರ್ಥಿಕ ಅಸಮಾನತೆ ಮತ್ತು ವರ್ಗರಚನೆಯ ವಿರುದ್ಧ ಹೋರಾಡುವ ಚಳುವಳಿಗಳು ಮಾತ್ರ ನಿಜವಾದ ಅರ್ಥದಲ್ಲಿ ಬದಲಾವಣೆಗಳನ್ನು ತರಬಲ್ಲವು ಎನ್ನುವುದು ಅವರ ಸಿದ್ಧಾಂತ ಪೂರ್ವ ನಂಬಿಕೆಯಾಗಿದೆ. ಆದ್ದರಿಂದ,ಅಸ್ಮಿತೆ ರಾಜಕೀಯ ಯಾವದೇ ಬಗೆಯಲ್ಲಿ ಅಧಿಕಾರವನ್ನು ಪಲ್ಲಟಗೊಳಿಸತ್ತದೆ ಎಂದು ಅವರು ನಂಬುವುದಿಲ್ಲ. ಅವರ ಪ್ರಕಾರ ಅಸ್ಮಿತೆ ರಾಜಕೀಯ ಚಳುವಳಿಗಳು ಕೇವಲ ಮೇಲ್ಪದರದ ಸಾಂಕೇತಿಕ ಮನೋವೈಜ್ಞಾನಿಕ, ಸಾಂಸ್ಕೃತಿಕ ಮಹತ್ವವನ್ನಷ್ಟೇ ಹೊಂದಿದೆ.
ಸೈದ್ಧಾಂತಕವಾಗಿ ಇವರು ಸಂಸ್ಕೃತಿಯನ್ನು ರಾಜಕೀಯ ಸಂಸ್ಥೆಗಳಿಂದ ಬೇರ್ಪಡಿಸಿ ನೋಡುತ್ತಾರೆ. ರಾಜಕೀಯ ಸಂಘ ಸಂಸ್ಥೆಗಳನ್ನು ರೂಪಿಸಲು ಸಂಸ್ಕೃತಿ ಒಂದು ತಳಹದಿಯನ್ನು ಒದಗಿಸುತ್ತದೆ ಎನ್ನುವುದನ್ನು ಇವರು ಒಪ್ಪುವುದಿಲ್ಲ. ಅಸ್ಮಿತೆ ಹೋರಾಟ ಮತ್ತು ವರ್ಗ ಸಂಘರ್ಷ ಪರಸ್ಪರ ವಿರುದ್ಧ ಧಿಕ್ಕಿನ ಹೋರಾಟಗಳು ಎನ್ನುವುದು ಇವರ ನಿಲುವು. ನವಸಾಮಾಜಿಕ ಚಳುವಳಿಗಳ ಧೃಷ್ಟಿಕೋನವನ್ನು ಪ್ರತಿಪಾದಿಸುವ ವಿದ್ವಾಂಸರುಗಳು 1960 ಹಾಗೂ 70ರ ದಶಕದಲ್ಲಿ ಕಂಡುಬಂದ ನಾಗರೀಕ ಹಕ್ಕುಗಳ ಹೋರಾಟ, ಮಹಿಳಾ ಹೋರಾಟಗಳ ಮುಖ್ಯ ಗುರಿ ಸಾಂಸ್ಕೃತಿಕ ಸಮಸ್ಯೆಗಳನ್ನು ಕುರಿತಾಗಿದ್ದೇ ಹೊರತು ವರ್ಗ ಅಸಮಾನತೆ ಅವುಗಳ ಪ್ರಮುಖ ಗುರಿಯಾಗಿರಲಿಲ್ಲ ಎಂದು ವಾದಿಸುತ್ತಾರೆ. ಇವರು ಸಂಸ್ಕೃತಿಯನ್ನು ಅಸ್ಮಿತೆ ರಾಜಕೀಯದ ಪ್ರಮುಖ ನೆಲೆಯಾಗಿ ಗುರುತಿಸುತ್ತಾರೆ(Kauffman 1990. P.67). ಹಾಗೆಯೇ ಅಸ್ಮಿತೆ ರಾಜಕೀಯವನ್ನು ಕೇವಲ ವೈಯಕ್ತಿಕ ಅಭಿವ್ಯಕ್ತಿಗೆ ಅಥವಾ ಸ್ವ-ಸ್ಥಿತ್ಯಂತರಗಳ ಸಾಧನವಾಗಿ ನೋಡುವದೂ ಸರಿಯಲ್ಲ ಎನ್ನುವುದು ಕಾಫ್‍ಮನ್‍ರವರ ಅಭಿಪ್ರಯವಾಗಿದೆ. ಏಕೆಂದರೆ ಇಲ್ಲಿ ಪ್ರಧಾನವಾಗುವುದು ಸಂಘ ಸಂಸ್ಥೆಗಳಿಗೆ ಸಂಬಂದಿಸಿದ ಸಾಂಸ್ಕೃತಿಕ ಹಕ್ಕುಗಳ ಪ್ರತಿಪಾದನೆಯೇ ಹೊರತು ಮತ್ಯಾವುದೂ ಅಲ್ಲ. ಅಸ್ಮಿತೆ ರಾಜಕೀಯವು ಎತ್ತಿ ಹಿಡಿಯುವ ಇಂತಹ ಕೇಂದ್ರ ವಿಷಯಗಳನ್ನು ಇದೂವರೆವಿಗೆ ರಾಜಕೀಯದ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಇದೂವರೆಗೂ ಯಾವುದನ್ನು ರಾಜಕೀಯ ವಲಯಕ್ಕೆ ಸೇರಿದ್ದಲ್ಲ ಎಂದು ಪರಿಗಣ ಸಲಾಗಿತ್ತೋ ಅದನ್ನು ಅಸ್ಮಿತೆ ರಾಜಕೀಯವು ರಾಜಕೀಕರಣಗೊಳಿಸುತ್ತದೆ ಎಂದು ಹೇಳಬಹುದು.
ಒಂದರ್ಥದಲ್ಲಿ ಅಸ್ಮಿತೆ ಎನ್ನುವುದು ಎಲ್ಲ ಸಾಮಾಜಿಕ ಚಳುವಳಿಗಳಲ್ಲೂ ಬಹಳ ಮುಖ್ಯ ಪಾತ್ರವಹಿಸುತ್ತದೆ. ರೈತ, ಹಿಂದುಳಿದ, ದಲಿತ ಚಳುವಳಿಗಳಲ್ಲಿ ಕ್ರಿಯಾಶೀಲರಾಗುವವರು ರೈತರು, ಹಿಂದುಳಿದ ಜಾತಿಯವರು ಅಥವಾ ದಲಿತ ಎನ್ನುವ ವಿಶಿಷ್ಟ ಸಾಮಾಜಿಕ ಸಾಂಸ್ಕೃತಿಕ ಸಮುದಾಯ ಇದೇ ಎನ್ನುವುದನ್ನು ಗುರುತಿಸಲೇಬೇಕಾಗುತ್ತದೆ. ಆದರೆ ಅಸ್ಮಿತೆ ರಾಜಕೀಯವು ಅಸ್ಮಿತೆಯನ್ನೇ ಪ್ರಧಾನವಾಗಿಸುತ್ತದೆ. ಅಂತಹ ಅಸ್ಮಿತೆ ಹಲವಾರು ಕಾರಣಗಳಿಂದ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಅಥವಾ ಮೊದಲೇ ಹೇಳಿದಂತೆ ಅಂತಹ ಅಸ್ಮಿತೆಯನ್ನು ಪಡೆದುಕೊಂಡ ಕಾರಣದಿಂದಲೇ ಮುಖ್ಯವಾಹಿನಿಯಿಂದ ಹೊರಗುಳಿಯಬೇಕಾದ ಆತಂಕವನ್ನು ಎದುರಿಸುತ್ತಿರುತ್ತದೆ. ಅಂತಹ ಅಸ್ಮಿತೆಯನ್ನು ಹೊಂದಿರುವ ಜನರು ಸಂಘಟಿತರಾಗಿ ಮಾಡಿದ ಹೋರಾಟದಿಂದಾಗಿ ಅದು ಅಸ್ಮಿತೆ ರಾಜಕೀಯ ಎನಿಸಿಕೊಳ್ಳುತ್ತದೆಯೋ ಅಥವಾ ರಾಜಕೀಯ ಸಂಘಟನೆಗೋಸ್ಕರ (ಕೆಲವರ ಲಾಭಕ್ಕಾಗಿ) ಅಂತಹ ಅಸ್ಮಿತೆಯನ್ನು ಹೊರಗಿನಿಂದ ಹೇರಲಾಗುತ್ತದೆಯೋ ಎನ್ನುವ ವಿಷಯದ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಈ ಲೇಖನದ ಎರಡನೆಯ ಭಾಗದಲ್ಲಿ ಈ ಪ್ರಶ್ನೆಯನ್ನೇ ಪ್ರಮುಖವಾಗಿಟ್ಟುಕೊಂಡು ಜಾತಿಯ ಅಸ್ಮಿತೆಯ ಕುರಿತು ಚರ್ಚಿಸಲಾಗುತ್ತದೆ.
ಅದಕ್ಕೂ ಮೊದಲು ವಿವಿಧ ಸಿದ್ಧಾಂತಗಳು ಅಸ್ಮಿತೆ ರಾಜಕೀಯವನ್ನು ಹೇಗೆ ಅರ್ಥೈಸುತ್ತವೆ ಎನ್ನುವುದನ್ನು ನೋಡುವುದು ಅಗತ್ಯ. ಮಾರ್ಕ್ಸ್ ವಾದಿ ಸಿದ್ಧಾಂತ ಮಾರ್ಕ್ಸ್ ವಾದವು ಅಸ್ಮಿತೆ ರಾಜಕೀಯವನ್ನು ವರ್ಗಸಂಘರ್ಷಕ್ಕೆ ಹಾನಿಕಾರಕವಾದ ಬೆಳವಣಿಗೆ ಎಂದು ನೋಡುತ್ತದೆ. ಆದರೆ ನವಮಾರ್ಕ್ಸ್ ವಾದಿಗಳಲ್ಲಿ ಕೆಲವರು ಈ ಬೆಳವಣಿಗೆಯನ್ನು ಕೇವಲ ಸಾಂಕೇತಿಕ ಎಂದು ತೆಗೆದುಕೊಳ್ಳದೆ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಡುತ್ತಾರೆ. ಅಸ್ಮಿತೆ ರಾಜಕೀಯವನ್ನು ಹೊರತುಪಡಿಸಿ ವರ್ಗಸಂಘರ್ಷವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುವುದು ಅವರ ನಿಲುವು. ಕೆಲವು ವಿದ್ವಾಂಸರುಗಳ ಪ್ರಕಾರ ಸಾಂಸ್ಕೃತಿಕ ಭಿನ್ನತೆಗಳ ಆಧಾರದ ಮೇಲೆ ರಚಿತವಾದ ಗುಂಪುಗಳು ಅಸ್ಮಿತೆಯ ಗುಂಪುಗಳೆನಿಸಿಕೊಳ್ಳುತ್ತವೆ. ಅಂದರೆ ರಾಷ್ಟ್ರದ ಸಾಂಸ್ಕೃತಿಕ ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟಿದ್ದೇವೆ ಎನ್ನುವ ಭಾವವನ್ನು ಬೆಳೆಸಿಕೊಂಡ ಗುಂಪುಗಳು ತಮ್ಮ ಅಸ್ತಿತ್ವವನ್ನು ಸಾದರಪಡಿಸಲು ಮತ್ತು ನ್ಯಾಯೋಚಿತವಾದ (ರಾಜಕೀಯ) ಪ್ರಾತಿನಿಧ್ಯ ತಮಗೆ ದೊರಕಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಂಘಟಿತವಾಗುತ್ತವೆ. ತಾವು ಇತರರಿಗಿಂತ ಭಿನ್ನ ಎನ್ನುವ ಭಾವ ಸಂಸ್ಕೃತಿಗೆ ಅಂತರ್ಗತವಾದದ್ದೊ ಅಥವಾ ಬಾಹ್ಯ ಒತ್ತಡದಿಂದ ಸೃಷ್ಟಿಯಾದದ್ದೋ ಎನ್ನುವುದರ ಕುರಿತು ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಕೆಲವರು ಹೇಳುವಂತೆ ಸಂಸ್ಕೃತಿಯ ಆದಾರದ ಮೇಲೆ ಅಸ್ಮಿತೆ ರಾಜಕೀಯದ ಬೆಳವಣಿಗೆಯ ಪ್ರಕ್ರಿಯೆ ಅತ್ಯಂತ ಅಪಾಯಕಾರಿಯಾದುದು. ಇತ್ತೀಚೆಗೆ ಪಶ್ಚಿಮದ ದೇಶಗಳಲ್ಲಿ ಪ್ರಮುಖವಾಗಿ ಕಾಣ ಸಿಕೊಳ್ಳುತ್ತಿರುವ ಬಿಳಿ ಜನಾಂಗದ ಸಂಘಟನೆಗಳನ್ನು ಇದು ಮಾನ್ಯ ಮಾಡುತ್ತದೆ (ಮಸೆಡೊ 1999).
ಹಾಗೆಯೇ,ಹಿಂದೂ ಅಸ್ಮಿತೆಯ ಆದರದ ಮೇಲೆ ಸಂಘಟಿತವಾಗುತ್ತಿರುವ ಹಿಂದುತ್ವ ಸಂಘಟನೆಗಳೂ ಕೂಡ ಮಾನ್ಯವಾಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸ್ಮಿತೆ ರಾಜಕೀಯವು ಹಲವಾರು ಆತಂಕಗಳನ್ನು ನಮ್ಮ ಮುಂದಿಡುತ್ತದೆ. ಪರಸ್ಪರ ಪೂರಕವಲ್ಲದ ವಿಭಿನ್ನ ಕಾಳಜಿಗಳನ್ನು ಮೊಂದೊತ್ತುವ ಅಸ್ಮಿತೆ ರಾಜಕೀಯವು ಸಮಾನವಾದ ಕಾಳಜಿಯನ್ನು ಕಂಡುಕೊಳ್ಳುವ ಸಾಧ್ಯತೆಯನ್ನೇ ತಳ್ಳಿ ಹಾಕುತ್ತದೆಯೆ? ಅಸ್ಮಿತೆ ರಾಜಕೀಯವು ಸಾಮಾಜಿಕ ಸಂಘರ್ಷಗಳಿಗೆ ರಾಜಕೀಯ ಅಭಿವ್ಯಕ್ತಿಯ ಅವಕಾಶ ಮಾಡಿಕೊಡುತ್ತದೆಯೆ ಅಥವಾ ರಾಜಕೀಯವಾಗಿ ಹುಟ್ಟಿಕೊಂಡ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅಸ್ಮಿತೆ ರಾಜಕೀಯಕ್ಕೆ ಚಾಲನೆ ಕೊಡುತ್ತವೆಯೆ? ಈ ಪ್ರಶ್ನೆಗಳಿಗೆ ವಿದ್ವಾಂಸರುಗಳಿಂದ ವಿಭಿನ್ನ ಪ್ರತಿಕ್ರಿಯೆ ಬಂದಿದೆ. ಕಾಫ್‍ಮನ್ ಅವರು ಹೇಳುವಂತೆ ಅಸ್ಮಿತೆಯ ಗುಂಪುಗಳು ಸಂಕುಚಿತಗೊಳ್ಳುತ್ತಾ ಹೋದಂತೆ ಸಮಾನ ಕಾಳಜಿಗಳನ್ನು ಕಂಡುಕೊಳ್ಳುವ ಸಾಧ್ಯತೆ ಕ್ಷೀಣ ಸುತ್ತಾ ಹೋಗುತ್ತದೆ. ಮತ್ತೊಂದು ವಿಧದಲ್ಲಿ ಸಮಾನ ಕಾಳಜಿಗಳನ್ನು ಕಂಡುಕೊಳ್ಳು ಯಶಸ್ವಿಯಾದ ಹಲವು ಅಸ್ಮಿತೆ ಗುಂಪುಗಳು ಒಟ್ಟಾಗಿ ಬಂದಾಗಲೂ ಅವುಗಳ ವಿರೋಧಕ್ಕೆ ಪಾತ್ರವಾದ ಗುಂಪಿಗೆ ರಾಜಕೀಯ ಭಾಗವಹಿಸುವಿಕೆ ಸಾಧ್ಯವೇ ಆಗದಂತೆ ಮಾಡಿಬಿಸುವ ಸಾಧ್ಯತೆಯೂ ಇದೆ (ಕಾಫ್‍ಮನ್ 1990). ಬಿಕ್‍ಫೋರ್ಡ್‍ರವರು ಇದಕ್ಕೆ ವ್ಯತಿರಿಕ್ತವದ ವಾದವನದನು ಮಂಡಿಸುತ್ತಾರೆ. ಅವರ ಪ್ರಕಾರ ಅಸ್ಮಿತೆ ರಾಜಕೀಯದಿಂದ ಸಮಾನ ಹಿತಾಸಕ್ತಿಯನ್ನು ಕಂಡುಕೊಳ್ಳಲಾಗುವುದಿಲ್ಲಎನ್ನುವ ಆತಂಕ ನಿರಾಧಾರವಾದುದು. ಪ್ರತಿಯೊಂದು ಅಸ್ಮಿತೆಯ ಗುಂಪೂ ಸಹ ತನ್ನ ಗುಂಪಿನ ಹಿತಾಸಕ್ತಿಗಳಿಗೆ ಬದ್ಧವಾಗಿದ್ದುಕೊಂಡೆ ಸಮಾನ ಪ್ರಜಾಪ್ರಭುತ್ವ ತಳಹದಿಯನ್ನು ನಿರ್ಮಿಸಲು ಸಾಧ್ಯವಿದೆ (ಬಿಕ್‍ಫೋರ್ಡ್ 1997).
ಅಸ್ಮಿತೆ ರಾಜಕೀಯಕ್ಕೆ ಒಂದು ನಿರ್ಧಿಷ್ಟವಾದ ಗುರಿ ಎನ್ನುವುದಿರುವುದಿಲ್ಲ. ಆರ್ಥಿಕ ಸ್ಥಿತ್ಯಂತರಗಳಿಂಧದ ಸಾಮಾಜಿಕ ಬದಲಾವಣೆಗಳಿಗೆ ಅಸ್ಮಿತೆ ರಾಜಕೀಯ ಒಂದು ಬಗೆಯ ಹುಸಿ ಪ್ರತಿಕ್ರಿಯೆಯಾಗಿದೆ ಎಂದು ಕೆಲವರು ಭಾವಿಸುತ್ತಾರೆ (ಲಾಂಗ್‍ಮನ್ 1994). ರಾಂಗ್‍ರವರು ಇದಕ್ಕೆ ಸ್ವಲ್ಪ ಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಅವರ ಪ್ರಕಾರ ಆರ್ಥಿಕ ಬೆಳವಣಿಗೆಯ ಪರಿಣಾಮದಿಂದ ಅಸ್ಮಿತೆ ರಾಜಕೀಯ ಹುಟ್ಟಿಕೊಂಡಿದೆ ಮತ್ತು ಬಂಡವಾಳಶಾಹಿ ವ್ಯವಸ್ಥೆಗೆ ಸೂಕ್ತ ಪರ್ಯಾಯ ಇಲ್ಲದಿರುವುದನ್ನು ಇದು ಸೂಚಿಸುತ್ತದೆ (ರಾಂಗ್ 2003). ಆದರೆ ಭವಿಷ್ಯದಲ್ಲಿ ಆರ್ಥಿಕ ಕುಸಿತ ಉಂಟಾದರೆ ಅಸ್ಮಿತೆ ರಾಜಕೀಯ ಬದಿಗೆ ಸರಿದು ವರ್ಗಾದಾರಿತ ರಾಜಕೀಯಕ್ಕೆ ಎಡೆಮಾಡಿಕೊಡುತ್ತದೆ ಎನ್ನುವುದರ ಬಗ್ಗೆ ಈ ಇಬ್ಬರಲ್ಲೂ ಸಹಮತವಿದೆ. ಈ ಕುರಿತು ಪಿಯೊರಯವರ ಅನಿಸಿಕೆ ಬೇರೆಯದೇ ಆಗಿದೆ. ಅವರು ಹೇಳುವಂತೆ ಪ್ರಭುತ್ವದ ಆಶಯಕ್ಕನುಗುಣವಾಗಿ ಅಸ್ತಿತ್ವದಲ್ಲಿರುವ ಸಾಮಾಜಿಕ ರಚನೆಗಳಿಂದೆದುರಾಗುವ ತೋಡಕುಗಳನ್ನು ನಿವಾರಿಸಿಕೊಳ್ಳಲು ಸರಕಾರ ರೂಪಿಸುವ ನೀತಿಗಳು ಅಸ್ಮಿತೆ ರಾಜಕೀಯವನ್ನು ಹುಟ್ಟು ಹಾಕುತ್ತವೆ (ಪಿಯೊರೆ 1995). ಒಟ್ಟಿನಲ್ಲಿ ಮಾರ್ಕ್ಸ್ ವಾದಿ ಚಿಂತಕರಲ್ಲಿ ಅಸ್ಮಿತೆ ರಾಜಕೀಯದ ಬಗ್ಗೆ ಹಲವು ರೀತಿಯ ಭಿನ್ನಾಭಿಪ್ರಾಯಗಳಿರುವುದ್ನನು ನಾವು ನೋಡುತ್ತೇವೆ. ಆದರೆ ಅಸ್ಮಿತೆ ರಾಜಕೀಯದ ಬಗೆಗಿನ ನೇತ್ಯಾತ್ಮಕ ಧೊರಣೆ ಅವರಲ್ಲಿ ಕಂಡುಬರುವ ಸಮಾನ ಅಂಶವಾಗಿದೆ. ಎಡಪಂಥೀಯರ ಈ ಧೊರಣೆ ಪ್ರಮುಖವಾಗಿ ಎರಡುರೀತಿಯ ಟೀಕೆಗೊಳಗಾಗಿದೆ: ಒಂದು, ಸಂಸ್ಕೃತಿ ಹಾಗೂ ರಾಜಕೀಯದ ನಡುವಿನ ಸಂಬಂಧದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಅವರು ಅವಿಫಲರಾಗಿದ್ದಾರೆ ಎನ್ನುವುದು ಮತ್ತು, ಎರಡು, ಸಂಸ್ಕೃತಿ ಅಸ್ಮಿತೆಗಳ ರಾಜಕೀಯ ಆಯಾಮವನ್ನು ಅವರು ಅಲ್ಲಗಳೆಯುತ್ತಾರೆ ಎನ್ನುವುದು.
(ಮುಂದುವರೆಯುವುದು…)





ಸ್ವಾಮಿ ಸದಾನಂದರಾಯರೆ, ನಿಮ್ಮ ಬರಹ ಏನು ಹೇಳಲು ಹೊರಟಿದೆ ಎಂಬ ಸ್ಪಷ್ಟತೆ ನಿಮಗಿದೆ ಎಂದು ನಂಬುತ್ತೇನೆ. ಈ ಕಂತು ಓದಿದ ಮೇಲೆ ನನಗಂತೂ ಆ ಸ್ಪಷ್ಟತೆ ಸಿದ್ದಿಸಿಲ್ಲ. ಇದು ನಿಮ್ಮ ಮಹತ್ವಪೂರ್ಣ ಸಂಶೋಧನಾ ಬರಹದ ಮೊದಲ ಭಾಗವಿರಬಹುದು. ಆದರೆ ಸಂಶೋಧನಾ ಬರಹಗಳಲ್ಲೂ ಇರುವ abstract/summary ನಿಮ್ಮ ಈ ಬರಹದಲ್ಲಿಲ್ಲ. ಇನ್ನು ಮುಂದಾದರೂ abstract/summary ಕೊಟ್ಟರೆ ಪಾಮರರಾದ ನನ್ನಂತಹ ಓದುಗರಿಗೆ ಸಹಾಯವಾಗುತ್ತದೆ.
Social science barahagalannu Odhuvudu ond skill…. sahitigala, vimarshakara barahagalannu odhuva (sikapatte odidini yendukolluva)nimage E reeti baredare arthavaguvudadaru hege ? nam kelavu vimarshakarante original author bagge helade tammade yembante baredare nimage tumba ishta anisutte…
ಭಾರತದಲ್ಲಿ ಆಸ್ಮಿತೆ ರಾಜಕೀಯವೇ ರಾಜಕೀಯ ಪಕ್ಷಗಳಾಗಿ ಎದ್ದು ನಿಂತಿವೆ. ಜಾತಿ, ರಿಲಿಜಿಯನ್ ಗಳು ಬಹುತೇಕ ರಾಜಕೀಯ ಪಕ್ಷಗಳ ಬೆನ್ನೆಲುಬಾಗಿರುವದು ಒಂದು ಉದಾರಣೆ ಎನ್ನಬಹುದು. ಹಾಗೂ ಬಹಳ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳೆ ಆಸ್ಮಿತೆ ರಾಜಕೀಯವನ್ನು ಸೃಷ್ಟಿಸಿವೆ. ಉದಾರಣೆಗೆ ಲಿಂಗಾಯಿತ ತತ್ವವನ್ನು ರಿಲಿಜಿಯನ್ ಆಗಿಸಲು ಪ್ರಯತ್ನಿಸುತ್ತಿರುವದು ರಾಜಕೀಯ ಪಕ್ಷಗಳು ಆಸ್ಮಿತೆ ರಾಜಕೀಯವನ್ನು ಬರಿಗೈಲಿ ಸೃಷ್ಟಿಸುವದಕ್ಕೆ ಜ್ವಲಂತ ಉದಾರಣೆ ಅಲ್ಲವೇ? ಬಹುಷಃ ಯಾವ ಪಾಶ್ಚಿಮಾತ್ಯ ಸಮಾಜ ಶಾಸ್ತ್ರಜ್ನನೂ ಆಸ್ಮಿತೆ ರಾಜಕೀಯಗಳ ಈ ವೈಪರೀತ್ಯವನ್ನು ಮುನ್ನುಡಿದಿಲ್ಲವೇನೊ! ಯಾಕೆಂದರೆ ಇದು ಭಾರತದಲ್ಲಿ ಮಾತ್ರ ಸಾಧ್ಯ. ಇದು ಭಾರತದ ಬಹುದೊಡ್ಡ ದುರಂತವೂ ಹೌದು.