ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 4
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಲಿಂಗಾಯತರನ್ನು ಅಥವಾ ವೀರಶೈವರನ್ನು (ಪ್ರಸ್ತುತದಲ್ಲಿ ‘ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆ ಅವೆರಡು ಒಂದೆ ಅಲ್ಲ’ ಎಂಬಂತಹ ವಾದಗಳು ಅಥವಾ ಚರ್ಚೆಗಳು ಮಾಧ್ಯಮಗಳಲ್ಲಿ ಕೇಳಿಬರುತ್ತಿವೆ. ಈ ಕುರಿತು ಮೂರು ರೀತಿಯ ಅಭಿಪ್ರಾಯಗಳಿರುವುದನ್ನು ನೋಡಬಹುದು. ಅವುಗಳೆಂದರೆ, ಒಂದನೆಯದಾಗಿ, ವೀರಶೈವ ಪರಂಪರೆಯು ಹಿಂದೂ ಧರ್ಮದ ಭಾಗವಾಗಿದೆ, ಭಾರತೀಯ ಆಧ್ಯಾತ್ಮ ಚಿಂತನೆಗೆ ಅಪೂರ್ವ ಕೊಡುಗೆಯನ್ನು ನೀಡಿರುವ ಹಾಗೂ ಆಧ್ಯಾತ್ಮ ಮಾರ್ಗದ ಮೂಲಕ ಹೊಸದೊಂದು ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣ ಪರಂಪರೆಯ ಚಿಂತನೆ ಮತ್ತು ಅವರ ಆಚರಣೆಗಳು ಕಾರಣವಾಗಿವೆ. ಹಾಗೆಯೇ ಎರಡನೆಯದಾಗಿ, ಕೆಲವು ಚಿಂತನೆಗಳು ಹಿಂದೂ ಧರ್ಮವನ್ನು ಪ್ರತಿಭಟಿಸಿ, ಸಮಾಜದಲ್ಲಿರುವ ಅನಿಷ್ಠಗಳನ್ನು ವಿರೋಧಿಸಿ, ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು, ಈ ಸಮಾಜದಲ್ಲಿ ಕಲುಷಿತಗೊಂಡಿರುವ ಧಾರ್ಮಿಕ, ಸಾಮಾಜಿಕ ಪರಿಸರದ ವಿರುದ್ಧ ಹೋರಾಡಿದ, ಅನೀತಿಯುತವಾದ ಜಾತಿ ವ್ಯವಸ್ಥೆಯನ್ನು ನಾಶಮಾಡಿ ಉತ್ತಮ ಸಮಾಜವನ್ನು ರಚಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಹುಟ್ಟಿದ ಸ್ವತಂತ್ರ್ಯ ಮತ/ಧರ್ಮವೇ ವೀರಶೈವ ಧರ್ಮವಾಗಿದೆ. ಇದಕ್ಕೆ ಪೂರಕವಾಗಿ ಜಿ.ಎಸ್.ಶಿವರುದ್ರಪ್ಪನವರು ಹೇಳುವಂತೆ, ಕನ್ನಡನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ 12ನೇ ಶತಮಾನ ಒಂದು ಸಂಕ್ರಮಣ ಕಾಲ, ಈ ಸಂಕ್ರಮಣಕ್ಕೆ ಮುಖ್ಯ ಪ್ರೇರಣೆ ವೀರಶೈವ ಧರ್ಮವಾಗಿದೆ ಹಾಗೂ ಇದು ವಿಶಾಲ ಅರ್ಥವನ್ನು ಒಳಗೊಂಡಿದೆ. ಎಂಬಂತಹ ವಿವರಣೆ. ಮತ್ತು ಮೂರನೆಯದಾಗಿ ಕಂಡುಬರುವ ಚಿತ್ರಣಗಳಲ್ಲಿ ಮೇಲಿನ ಎರಡೂ ಮಾರ್ಗಗಳನ್ನು ಒಳಗೊಂಡಿರುವ ವಿವರಣೆಯನ್ನು ನೋಡಬಹುದು. ಅಂದರೆ, ವೀರಶೈವ ಪರಂಪರೆ ಮತ್ತು ವಚನಗಳು ಭಾರತೀಯ ಆಧ್ಯಾತ್ಮ ಮಾರ್ಗಕ್ಕೆ ಕೊಡುಗೆಯನ್ನು ನೀಡಿರುವುದರ ಜೊತೆಗೆ ಸಾಮಾಜಿಕ ಅನಿಷ್ಠಗಳ ವಿರುದ್ಧವೂ ಹೋರಾಡಿದೆ. ತಮ್ಮ ಭಕ್ತಿಯೊಂದಿಗೆ ಸಮಾಜದ ಪಿಡುಗುಗಳ ವಿರುದ್ಧ ಪ್ರತಿಭಟಿಸಿದೆ.
ವಚನ ಸಂಸ್ಕೃತಿಯು ಅತ್ಯಂತ ಸೂಕ್ಷ್ಮವೂ, ಸಂಕೀರ್ಣವೂ, ಬಹುಮುಖಿಯೂ, ಬಹುಸ್ತರೀಯವೂ ಆದ ಒಂದು ಸಾಮಾಜಿಕ ಪ್ರಕ್ರಿಯೆ-ಗತಿಶೀಲತೆಯಾಗಿತ್ತು. ಎಂದು ಹೇಳುವ ಮೂಲಕ ಆಧ್ಯಾತ್ಮ ಹಾಗೂ ಸಾಮಾಜಿಕ ಎಂಬ ಎರಡು ವಲಯಗಳನ್ನು ತಳುಕು ಹಾಕುವ ವಿವರಣೆಗಳನ್ನು ನೋಡಬಹುದು. ಈ ಮೂರು ರೀತಿಯ ವಿವರಣೆಗಳಲ್ಲಿ ಪ್ರಸ್ತುತ ಅಧ್ಯಯನಕ್ಕೆ ಸಂಬಂಧಿಸಿದಂತೆ ನಾವು ಮೊದಲೆರಡು ಅಂಶಗಳನ್ನು ತೆಗೆದುಕೊಂಡು ಗಮನಿಸುವುದಾದರೆ, ಪರಸ್ಪರ ವಿರುದ್ಧವಿರುವ ಎರಡು ರೀತಿಯ ಚಿಂತನೆಗಳು ವಿದ್ವತ್ ವಲಯದಲ್ಲಿ, ರಾಜಕೀಯ ವಲಯದಲ್ಲಿ, ಲಿಂಗಾಯತರು ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ, ಮುಖಾ-ಮುಖಿ ಆಗುತ್ತಿವೆ. ಉದಾಹರಣೆಗೆ, ಚಿದಾನಂದ ಮೂರ್ತಿ ಹಾಗೂ ಕಲ್ಬುರ್ಗಿ. ವಿರಕ್ತ ಪೀಠ/ಮಠಗಳು ಹಾಗೂ ಪಂಚಚಾರಿಪೀಠಗಳು, ಪ್ರಗತಿಪರರು ಹಾಗೂ ಸಾಂಪ್ರದಾಯವಾದಿಗಳು ಮುಂತಾದ ಚಿಂತನೆಗಳು. ಆದರೂ ಪರಸ್ಪರ ವಿರುದ್ಧವಿರುವ ಅಭಿಪ್ರಾಯಗಳು ಒಂದಾಗುತ್ತಿವೆ. ಅಂದರೆ, ಎರಡು ಮಾರ್ಗಗಳು ತಮ್ಮನ್ನು ಲಿಂಗಾಯತರು ಎಂದೇ ಹೇಳಿಕೊಳ್ಳುತ್ತಿದ್ದಾರೆ. ಲಿಂಗಾಯಿತರಲ್ಲಿರುವ ಹತ್ತು ಹಲವು ಜಾತಿಗಳ ನಡುವೆ ಸಮಾನ ಅಂಶ ಯಾವುದು? ಆ ಎಲ್ಲ ಜಾತಿಗಳು ಒಟ್ಟಾಗಿ ಲಿಂಗಾಯಿತ ಅಸ್ಮಿತೆಯನ್ನು ಕಂಡುಕೊಳ್ಳಲು ಸಾಧ್ಯವೆ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ ಸಾಧ್ಯ. ವಿಭಿನ್ನ ಆಚರಣೆ, ವಿಭಿನ್ನ ಕಟ್ಟು ಕಟ್ಟಲೆಗಳು, ಇರುವ ಹಲವು ಜಾತಿಗಳ ನಡುವೆ ಇರುವ ಸಾಮ್ಯತೆ ಏನು ಎನ್ನುವುದನ್ನು ಸ್ಪಷ್ಟಪಡಿಸಲು ಸಾಧ್ಯವಾಗುವುದೇ ಇಲ್ಲ. ಲಿಂಗಧಾರಣೆಯೂ ಸಹ ಸಮಾನ ಆಂಶವಾಗುವುದಿಲ್ಲ ಏಕೆಂದರೆ ಲಿಂಗಾಯಿತರಲ್ಲದ ಕೆಲವು ಜಾತಿಗಳಲ್ಲೂ ಲಿಂಗಧಾರಣೆಯ ಪದ್ಧತಿ ಇದೆ. ಮತ್ತಷ್ಟು ಓದು