ನಿಶ್ಯಬ್ದ …!
– ರಾಘವೇಂದ್ರ ಎಂ. ಸುಬ್ರಹ್ಮಣ್ಯ
ಕಲಾಸಿಪಾಳ್ಯ/ಕೆ.ಆರ್ ಮಾರ್ಕೆಟ್ ಕಡೆ ಹೋದವರಿಗೆ ಗೌಜು ಗದ್ದಲದ ನಿಜಾರ್ಥ ತಿಳಿದಿರುತ್ತೆ. ಹಾಗೆಯೇ ಕೊಡಚಾದ್ರಿ/ಕುಮಾರಪರ್ವತ ಚಾರಣಮಾಡಿದವರಿಗೆ ನಿಶ್ಯಬ್ದದ ಅನುಭವ ಆಗಿರುತ್ತೆ. ಈಗ ಪ್ರಶ್ನೆ ಏನಂದರೇ ಶಬ್ದಕ್ಕೆ ಮತ್ತಷ್ಟು ಶಬ್ದ ಸೇರಿಸಿ ಮತ್ತಷ್ಟು ಹೆಚ್ಚು ಶಬ್ದ ಮಾಡಬಹುದು. ಆದರೆ ನಿಶ್ಯಬ್ದವನ್ನು ಮತ್ತಷ್ಟು ಕಡಿಮೆ ಮಾಡಲು ಸಾಧ್ಯವೇ?
ಬೆಂಗಳೂರಿನ ನಾಲ್ಕು ರಸ್ತೆಗಳು ಸೇರುವಲ್ಲಿ ಗಣಪತಿ ಪೆಂಡಾಲ್ ಹಾಕಿ, ಸಂಜೆ ಕರ್ಣಭಯಂಕರ ಚಿತ್ರಗೀತೆಗಳನ್ನು ಹಾಕಿ, ಅದರ ಮೇಲೆ ಪಟಾಕಿ ಹೊಡೆದು, ಬೆಳಕಿಗಾಗಿ ಜನರೇಟರ್ ಇಟ್ಟು….ಹೇಗೆ ಶಬ್ದಕ್ಕೆ ಶಬ್ದಗಳನ್ನು ಸೇರಿಸುತ್ತಲೇ ಹೋಗಬಹುದು….ಶಬ್ದಮಾಲಿನ್ಯವನ್ನು ತಾರಕಕ್ಕೆ ತೆಗೆದುಕೊಂಡು ಹೋಗಬಹುದು. ಆದರೆ ಅದೇ ತರಹ ಅದರ ವಿರುದ್ದದೆಡೆಗೆ ಹೋಗುತ್ತಾ ಹೋದರೆ, ಅಂದರೆ ಗಣಪತಿ ಹಬ್ಬದ ಕೊನೆಯದಿನದ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ ರಾತ್ರಿ 2:35ಕ್ಕೆ ಪೂರ್ತಿ ನಿಶ್ಯಬ್ದವನ್ನು ನೋಡಬಹುದು. ಆದರೆ ಅದು ಪೂರ್ತಿ ನಿಶ್ಯಬ್ದವಲ್ಲವಷ್ಟೇ? ಎಲ್ಲೋ ಒಂದು ನಾಯಿ ಓಳಿಡುತ್ತಿರುತ್ತದೆ. ಆ ನಾಯಿಯನ್ನು ಓಡಿಸಿದರೆ….ಇನ್ನಷ್ಟೂ ನಿಶ್ಯಬ್ದ. ಆದರೆ ಇನ್ನೆಲ್ಲೋ ಒಂದು ಜೀರುಂಡೆ ಕಿರ್ರೆನ್ನುತ್ತಿರುತ್ತದೆ. ಆ ಶಬ್ಧವನ್ನೂ ಇಲ್ಲವಾಗಿಸಿದರೆ…..ಹೀಗೆ ನಾವು ಎಷ್ಟರಮಟ್ಟಿಗಿನ ನಿಶ್ಯಬ್ದವನ್ನು ಸಾಧಿಸಬಹುದು!? ಶಬ್ದ ಪರಿವಹನಕ್ಕೆ ಯಾವುದೇ ಮಾಧ್ಯಮವಿಲ್ಲ ಬಾಹ್ಯಾಕಾಶ ಹೇಗಿರಬಹುದು? ಎಷ್ಟು ನಿಶ್ಯಬ್ದವಾಗಿರಬಹುದು!?