ವಿಷಯದ ವಿವರಗಳಿಗೆ ದಾಟಿರಿ

Archive for

7
ಫೆಬ್ರ

ಡಬ್ಬಿಂಗ್ ವಿರೋಧ ಎಂಬ ಮೂಲಭೂತವಾದ

– ಡಾ. ಶ್ರೀಪಾದ ಭಟ್

Kannada Dubbingಇದೀಗ ಕನ್ನಡ ಸಿನಿಮಾ ರಂಗದ ಕೆಲವರು ಹಾಗೂ ಕೆಲ ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ವಿರೋಧಿಸಿ ಹೋರಾಟ ನಡೆಸಿದ್ದಾರೆ, ಪ್ರತಿಭಟನೆಗಳು ನಡೆದಿವೆ. ಯಾರ ವಿರುದ್ಧ ಯಾರು ಪ್ರತಿಭಟಿಸುತ್ತಿದ್ದಾರೆ? ಪ್ರತಿಭಟನೆಯ ಪರಿಸ್ಥಿತಿ ಯಾಕೆ ಬಂದಿದೆ ಎಂಬ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿವೆ. ಈ ಪ್ರತಿಭಟನೆ ಸರ್ಕಾರದ ವಿರುದ್ಧವೇ? ಡಬ್ಬಿಂಗ್ ಆದ ಚಿತ್ರ, ಧಾರಾವಾಹಿ, ಇತರೆ ಟಿವಿ ಕಾರ್ಯಕ್ರಮ ನೋಡುವ ಪ್ರೇಕ್ಷಕರ ವಿರುದ್ಧವೇ? ಅಥವಾ ಡಬ್ಬಿಂಗ್ ಚಿತ್ರ ತಯಾರಿಸುವ ಜನರ ವಿರುದ್ಧವೇ? ಡಬ್ಬಿಂಗ್ ವಿರೋಧಿ ಪ್ರತಿಭಟನೆ ಅಂತಿಮವಾಗಿ ಸಾಧಿಸುವುದೇನು? ‘ಕನ್ನಡದಲ್ಲಿ ಡಬ್ಬಿಂಗ್ ತಯಾರಿಸಿದರೆ ನೋಡಿ, ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಇವರೆಲ್ಲರಿಗೂ ಎಚ್ಚರಿಕೆ ಕೊಟ್ಟು ಹೆದರಿಸುವುದೇ? ಬಹುಶಃ ಇದೇ ಉದ್ದೇಶ ಇರಬಹುದು. ಯಾಕೆಂದರೆ ‘ನಿಮ್ಮ ಡಬ್ಬಿಂಗ್ ಸಿನಿಮಾಗಿಂತ ಅತ್ಯುತ್ತಮ ಚಿತ್ರವನ್ನು ಸ್ವತಃ ತಯಾರಿಸಿ ಪ್ರೇಕ್ಷಕರನ್ನು ಸೆಳೆಯುತ್ತೇವೆ. ಯಾರು ಗೆಲ್ಲುತ್ತಾರೋ ನೋಡೋಣ’ ಎಂಬ ಆರೋಗ್ಯಕರ ಸ್ಪರ್ಧೆಯಂತೂ ಇದರಲ್ಲಿ ಕಾಣುತ್ತಿಲ್ಲ. ಕನ್ನಡ ಚಿತ್ರರಂಗದ ಇಂಥ ಬಂದ್ನಿಂತದ, ಪ್ರತಿಭಟನೆಗಳಿಂದ ಕರ್ನಾಟಕದಲ್ಲಿರುವ ಪ್ರೇಕ್ಷಕರಿಗಂತೂ ಖಂಡಿತ ನಷ್ಟವಿಲ್ಲ. ಕಷ್ಟವಾಗುವುದು ವಾಹನ ಸವಾರರಿಗೆ ಹಾಗೂ ವಿವಿಧ ಕೆಲಸಕಾರ್ಯಕ್ಕೆ ಅಡ್ಡಿಯಾಗುವ ಕಾರಣ ಜನಸಾಮಾನ್ಯನಿಗೆ. ಉಳಿದಂತೆ ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರ ಕಾರ್ಮಿಕರಿಗೇ ಅದರ ನೇರ ಹೊಡೆತ ಬೀಳುವುದು. ಇದು ಎಲ್ಲರಿಗೂ ತಿಳಿದಿದೆ. ಆದರೂ ವಿರೋಧ ಏಕೆ? ‘ಕನ್ನಡದ ಭಾಷೆ, ಸಂಸ್ಕೃತಿ ನಾಶವಾಗುತ್ತದೆ ಮತ್ತು ಕನ್ನಡದ ತಂತ್ರಜ್ಞರು, ಕಾರ್ಮಿಕರು ಹಾಗೂ ಕಲಾವಿದರಿಗೆ ಅವಕಾಶಗಳಿರುವುದಿಲ್ಲ’ ಎಂಬುದು ಡಬ್ಬಿಂಗ್ ವಿರೋಧಿಗಳ ವಾದ.

ಹೌದೇ? ವಾಸ್ತವ ಗಮನಿಸಿದರೆ ಡಬ್ಬಿಂಗ್ ವಿರೋಧಿಗಳೇ ಕನ್ನಡದ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದಾರೆ ಅನಿಸದಿರದು. ಕನ್ನಡ ಸಿನಿಮಾ ಜಗತ್ತಿಗೆ ಈಗ 79 ವರ್ಷ ವಯಸ್ಸು. ಈ ಅವಧಿಯಲ್ಲಿ ಪ್ರೇಕ್ಷಕ ವರ್ಗ ಬದಲಾಗಿದೆ. ಜನರ ನಿರೀಕ್ಷೆ, ಅಭಿರುಚಿ ಕೂಡ ಬದಲಾಗಿದೆ. 80 ವರ್ಷದ ಅಜ್ಜನೊಬ್ಬ ಮೊಮ್ಮಕ್ಕಳ ಜೊತೆ ಬೆರೆಯಲು ಬಳಸುವ ಸಮಕಾಲೀನತೆಯ ಉಪಾಯವನ್ನು ಮಾತ್ರ ಕನ್ನಡ ಚಿತ್ರರಂಗ ಅಳವಡಿಸಿಕೊಳ್ಳದೇ ತನ್ನ ವೃದ್ಧಾಪ್ಯವನ್ನೇ ಸಮರ್ಥಿಸಿಕೊಳ್ಳುತ್ತಿದೆ. ಕನ್ನಡ ಪ್ರೇಕ್ಷಕ ವರ್ಗ ಗಾಂಧಿನಗರದ ಹಣವಂತ ನಿರ್ಮಾಪಕ ಜನ ತಿಳಿದಿರುವಂತೆ ಬರೀ ದ್ವಂದ್ವ ಸಂಭಾಷಣೆಯನ್ನೋ ಉದ್ದುದ್ದ ಕತ್ತಿ, ಮಚ್ಚು, ಲಾಂಗುಗಳನ್ನಷ್ಟೇ ಬಯಸುವಂಥದ್ದಲ್ಲ. ಬೇರೆ ಬೇರೆ ಮಾಧ್ಯಮಗಳ ಮೂಲಕ ಅವರ ಮೇಲೂ ಜಾಗತಿಕ ಪರಿಣಾಮ ಉಂಟಾಗುತ್ತಲೇ ಇರುತ್ತದೆ. ಹೊಸದನ್ನು ಅವರೂ ಸದಾ ಬಯಸುತ್ತಾರೆ. ತಥಾಕಥಿತ ಕೌಟುಂಬಿಕ ಕಥಾ ಹಂದರದ ಚಿತ್ರಗಳು ಬೇಸರವಾದಾಗ ‘ಓಂ’ ನಂಥ ಚಿತ್ರಗಳು ಅವರಿಗೆ ಭಿನ್ನ ಅನುಭವ ಕೊಡಬಹುದು. ಕಾಲೇಜು ಹುಡುಗ-ಹುಡುಗಿಯ ಕಿತ್ತು ಹೋದ ಪ್ರೇಮ ಕಥೆಗಳನ್ನು, ತಾಯಿ ಮಮತೆಯ ಹಳಸಲು ಸನ್ನಿವೇಶಗಳನ್ನು ನೋಡಿ ಬೇಸತ್ತಾಗ ‘ಆ ದಿನಗಳೋ’ ಮತ್ತೊಂದು ‘ದುನಿಯಾ’ವೋ ಬದಲಾವಣೆ ನೀಡಬಹುದು. ಅಂದ ಮಾತ್ರಕ್ಕೆ ನಮ್ಮ ಜನಕ್ಕೆ ಏನು ಬೇಕು ಎಂಬುದು ನಮಗೆ ಗೊತ್ತು ಎಂಬಂತೆ ಸದಾ ಕಾಲ ಹಳೆ ಪಾತ್ರೆ, ತಗಡುಗಳನ್ನು ಕೊಡುತ್ತ ಹೋದರೆ ಕೊಡುವುದನ್ನೆಲ್ಲ ಪಡೆಯಲು ಜನರೇನೂ ಮೂರ್ಖರಲ್ಲ.

ಮತ್ತಷ್ಟು ಓದು »