ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 3
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಜಾತಿ ವರ್ಗೀಕರಣದ ಬಗ್ಗೆ ಅನೇಕ ಜನಾಂಗ ಅಧ್ಯಯನಕಾರರು ಮತ್ತು ಸಮಾಜಶಾಸ್ತ್ರಜ್ಞರುಗಳು ವಿವರಣೆಗಳನ್ನು ನೀಡಿದರೂ ಸಹ ಅದರ ಬಗೆಗಿನ ಅಸ್ಪಷ್ಟತೆ ಹಾಗೆಯೇ ಮುಂದುವರೆದಿದೆ. ಈ ಸಂಗತಿಯ ಬಗ್ಗೆ ಅಧ್ಯಯನಕಾರರು ನೀಡಿರುವ ವಿವರಣೆಗಳನ್ನು ನೋಡುತ್ತಾ ಹೋದಂತೆ ಮುಖ್ಯವಾದ ಕೆಲವು ಸಮಸ್ಯೆಗಳಿರುವುದು ಕಂಡುಬರುತ್ತವೆ. ಅವುಗಳನ್ನು ಕೆಳಗಿನಂತೆ ನೋಡೋಣ.
ಜಾತಿ, ಉಪ-ಜಾತಿ – ರಚನಾಂಶದ ಸಮಸ್ಯೆ: ಜನಾಂಗ ಮತ್ತು ಸಮಾಜಶಾಸ್ತ್ರ ಅಧ್ಯಯನಕಾರರು ಜಾತಿ, ಉಪ-ಜಾತಿಯ ರಚನಾಂಶಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ನೀಡುವಾಗ ಒಳವಿವಾಹ ಪದ್ಧತಿ(Endogamy)ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದಾರೆ, ಮತ್ತು ಇಂದಿನ ಸಮಾಜಶಾಸ್ತ್ರಜ್ಞರುಗಳು ಜಾತಿ, ಉಪ-ಜಾತಿಯ ರಚನಾಂಶವೆಂದರೆ ಒಳವಿವಾಹ ಪದ್ಧತಿ ಎಂದೇ ನಿಖರವಾಗಿ ಹೇಳುತ್ತಾರೆ. ಅಧ್ಯಯನಕಾರರು ಇಷ್ಟು ನಿಖರತೆಯಿಂದ ಹೇಳಿದರೂ ಸಹ ಜಾತಿಯ ರಚನಾಂಶದ ಕುರಿತಂತೆ ಸ್ಪಷ್ಟತೆಯಿಲ್ಲ. ಒಳವಿವಾಹ ಪದ್ಧತಿಯು ಜಾತಿಯ ರಚನಾಂಶ ಎಂದು ಒಬ್ಬ ಅಧ್ಯಯನಕಾರನು ತನ್ನ ಅಧ್ಯಯನದ ತಿರುಳನ್ನು ಮುಂದಿಟ್ಟರೆ, ಇಲ್ಲ ಒಳವಿವಾಹ ಪದ್ಧತಿಯು ಉಪ-ಜಾತಿಯ ನಿರ್ಣಾಯಕ ರಚನಾಂಶ ಎಂದು ಮತ್ತೊಬ್ಬ ಅಧ್ಯಯನಕಾರನು ಪ್ರತಿವಾದವನ್ನು ಮುಂದಿಡುವುದು ಕಂಡುಬರುತ್ತದೆ. ಇದರ ಜೊತೆಗೆ (ಏಕಕಾಲದಲ್ಲಿಯೇ) ಜಾತಿ, ಉಪ-ಜಾತಿ ಎರಡು ಘಟಕಗಳೂ ಸಹ ಒಳ ವಿವಾಹ ಪದ್ಧತಿಯ ಗುಂಪುಗಳು ಎಂಬ ವಾದಗಳೂ ಕೂಡ ಲಭ್ಯವಿದೆ. ಅಧ್ಯಯನಕಾರರ ವಿವರಣೆಗಳನ್ನು ಗಮನಿಸಿದರೆ ಒಳವಿವಾಹ ಪದ್ಧತಿಯು ಜಾತಿ, ಉಪ-ಜಾತಿ ಮತ್ತು ಕೆಲವೊಮ್ಮೆ ಉಪ-ಉಪ-ಜಾತಿಯ ರಚನಾಂಶವೂ ಸಹ ಆಗುತ್ತದೆ. ಹಾಗೂ ಏಕಕಾಲದಲ್ಲಿಯೇ ಇದು ಜಾತಿ ಮತ್ತು ಅದರ ಉಪ-ಜಾತಿಗಳ ರಚನಾಂಶವೂ ಸಹ ಆಗುತ್ತದೆ. ಈ ವಿವರಣೆಗಳು ಮುಂದಿನ ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತಿವೆ; ಜಾತಿಯು ಒಳವಿವಾಹ ಪದ್ಧತಿಯ ಘಟಕವಾಗಿ ಮತ್ತು ಅದರ ಉಪ-ಜಾತಿಗಳೂ ಸಹ ಒಳವಿವಾಹ ಪದ್ಧತಿಯ ಘಟಕಗಳಾದರೆ ಜಾತಿಯು ಅದರ ಉಪ-ಜಾತಿಗಳೊಡನೆ ಯಾವ ರೀತಿಯ ಸಂಬಂಧ ಹೊಂದಿರುತ್ತದೆ? ಹಾಗೆಯೇ ಒಂದು ಜಾತಿಯ, ಉಪ-ಜಾತಿಗಳು ಮಧ್ಯೆ ವೈವಾಹಿಕ ಸಂಬಂಧ ಏರ್ಪಡುವುದಿಲ್ಲ ಎಂದಾದ ಮೇಲೆ ಉಪ-ಜಾತಿಗಳು ಪರಸ್ಪರ ಯಾವ ರೀತಿಯ ಸಂಬಂಧವನ್ನು ಹೊಂದಿರುತ್ತವೆ? ಆದ್ದರಿಂದ ಯಾವ ನಿರ್ದಿಷ್ಟ ಅಂಶವು ಒಂದು ಜನಗುಂಪನ್ನು ‘ಜಾತಿ’ಯನ್ನಾಗಿಸುತ್ತದೆ ಎಂಬುದರ ಕುರಿತಾಗಲೀ ಅಥವಾ ಯಾವ ಇನ್ನೊಂದು ನಿರ್ದಿಷ್ಟ ಅಂಶವು ಒಂದು ಜನಗುಂಪನ್ನು ‘ಉಪ-ಜಾತಿ’ಯನ್ನಾಗಿಸುತ್ತದೆ ಎಂಬುದರ ಕುರಿತಾಗಲೀ ಸ್ಪಷ್ಟತೆಯಿಲ್ಲ. ಮತ್ತಷ್ಟು ಓದು