ಧರ್ಮ ಅಂದರೇನು?
– ಸಚ್ಚಿದಾನಂದ ಹೆಗ್ಡೆ
ಫೇಸ್ ಬುಕ್ಕೂ ಸೇರಿದಂತೆ ನಮ್ಮ ಮಾತುಗಳಲ್ಲಿ, ಬರಹಗಳಲ್ಲಿ ಮತ್ತು ನಿತ್ಯದ ನಮ್ಮ ವ್ಯವಹಾರಗಳಲ್ಲಿ “ಧರ್ಮ” ಶಬ್ದ ಅಪಾರವಾದ ಅಪಾರ್ಥದಲ್ಲಿ ಬಳಕೆಯಾಗುತ್ತಿರುವುದನ್ನು ಕಂಡು ಮನಸ್ಸಿಗೆ ಅಸಹನೀಯವಾದ ಕಿರಿಕಿರಿ ಉಂಟಾಗುತ್ತದೆ. ಧರ್ಮಗುರುಗಳೂ ಸಹ ಈ ಶಬ್ದವನ್ನು ತಪ್ಪರ್ಥದಲ್ಲಿ ಬಳಸುವುದನ್ನು ಕಂಡಾಗ ಸಂಕಟವಾಗುತ್ತದೆ.
ಎಲ್ಲರೂ ಧರ್ಮ ಶಬ್ದವನ್ನು ಹೇಗೆ ಬಳಸುತ್ತಿದ್ದಾರೆ? ಕ್ರೈಸ್ತ ಧರ್ಮ, ಇಸ್ಲಾಮ್ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ, ವೀರಶೈವ ಧರ್ಮ, ಸಿಖ್ ಧರ್ಮ ಇತ್ಯಾದಿ ಇತ್ಯಾದಿ. ನಿಜಕ್ಕೂ ಇವು ಧರ್ಮಗಳೇ? ಅಸಲಿಗೆ ಇವೆಲ್ಲ ಏನು?
ಧರ್ಮ ಶಬ್ದವನ್ನು ತಪ್ಪರ್ಥದಲ್ಲಿ ಬಳಸುವುದು ಆ ಶಬ್ದಕ್ಕೆ ಮಾಡುವ ಅಪಚಾರವಲ್ಲವೇ? ಅದು ಅಧರ್ಮವಾಗುವುದಿಲ್ಲವೇ? ಇದರ ಬಗ್ಗೆ ತಲಸ್ಪರ್ಶೀ ಚಿಂತನೆಯಾಗಲಿ ಎನ್ನುವುದು ನನ್ನ ಆಶಯ.ನನ್ನ ಅಭಿಪ್ರಾಯದಲ್ಲಿ ಧರ್ಮವು ದೇವರನ್ನು ಹುಡುಕುವ ನಿರ್ದಿಷ್ಟ ಮಾರ್ಗವಲ್ಲ. ಕ್ರೈಸ್ತ, ಇಸ್ಲಾಮ್, ಜೈನ, ಬೌದ್ಧ, ಸಿಖ್, ವೀರಶೈವ ಮುಂತಾದವು ದೇವರನ್ನು ಹುಡುಕುವ ಯಾ ಸಾಕ್ಷಾತ್ಕರಿಸಿಕೊಳ್ಳುವ ನಿರ್ದಿಷ್ಟ ದಾರಿಗಳು. ಆಯಾ ದಾರಿಗಳಲ್ಲಿ ಸಾಗುವವರಿಗೆ ಅವು ಶ್ರೇಷ್ಠ. ಆದರೆ ಎಲ್ಲರಿಗೂ ಎಲ್ಲ ದಾರಿಗಳು ಶ್ರೇಷ್ಠವಲ್ಲ ಮತ್ತು ಏಕಕಾಲದಲ್ಲಿ ಎಲ್ಲ ದಾರಿಗಳಲ್ಲಿ ಹೆಜ್ಜೆ ಹಾಕಲೂ ಸಾಧ್ಯವಿಲ್ಲ.