ವಿಷಯದ ವಿವರಗಳಿಗೆ ದಾಟಿರಿ

Archive for

30
ಮಾರ್ಚ್

ಕೃತಘ್ನ ಜಸ್ವಂತ್ ಸಿಂಗ್?

– ನರೇಂದ್ರ ಕುಮಾರ್

ಜಸ್ವಂತ್ ಸಿಂಗ್ಚುನಾವಣೆ ಘೋಷಣೆಯಾದಂತೆ ರಾಜಕಾರಣಿಗಳ ಬಣ್ಣ ಬಯಲಾಗಲು ಆರಂಭಿಸುತ್ತದೆ. ಚುನಾವಣೆಗೆ ಮುನ್ನ ಸಿದ್ಧಾಂತದ ಕುರಿತು ಮಾತನಾಡುವ ರಾಜಕಾರಣಿಗಳಿಗೆ, ಸಿದ್ಧಾಂತವೆನ್ನುವುದು ಕೇವಲ ರಾಜಕೀಯ ಪಕ್ಷದಲ್ಲುಳಿಯಲು ಇರುವ ಸಾಧನವಷ್ಟೇ ಎನ್ನುವುದು ಚುನಾವಣೆಯ ಸಮಯದಲ್ಲಿ ಸಾಬೀತಾಗುತ್ತದೆ. ಪ್ರತಿ ಚುನಾವಣೆಯ ಸಮಯದಲ್ಲೂ ಬಹಿರಂಗಗೊಳ್ಳುವ ಸಂಗತಿಯಿದು. ಇದೀಗ ಈ ರೀತಿ ಮುಖವಾಡ ಕಳಚಿ ನೈಜತೆ ಗೋಚರಿಸಿರುವುದು ಜಸ್ವಂತ್ ಸಿಂಗ್ ಅವರ ವಿಷಯದಲ್ಲಿ!

ಜಸ್ವಂತ್ ಸಿಂಗ್ ಕಳೆದ ಹಲವು ದಶಕಗಳಿಂದ ಭಾಜಪದೊಂದಿಗೆ ಜೋಡಿಸಿಕೊಂಡಿದ್ದಾರೆ. ಅವರು ತಮ್ಮನ್ನು ಭಾಜಪದೊಂದಿಗೆ ಜೋಡಿಸಿಕೊಂಡಿದ್ದಾರೆ ಎನ್ನುವುದಕ್ಕಿಂತ, ಭಾಜಪ ಪಕ್ಷವೇ ಅವರನ್ನು ತನ್ನೊಡನೆ ಸೇರಿಸಿಕೊಂಡಿದೆ ಎಂದು ಹೇಳಿದರೆ ಸರಿಯಾದೀತು. ಜಸ್ವಂತ್ ಸಿಂಗ್ ಎಂದೂ ಜನನಾಯಕರಾಗಿರಲಿಲ್ಲ. ಹೀಗಿದ್ದಾಗ್ಯೂ ಭಾಜಪ ಅವರಿಗೆ ತನ್ನ ಪಕ್ಷದಲ್ಲಿ ಸ್ಥಾನ ನೀಡಿತ್ತು. ವಾಜಪೇಯಿ ಸರಕಾರದಲ್ಲಿ ಅವರು ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನೂ ಪಡೆದರು. ಮುಂದೆ ಅವರ ಮಗನಿಗೂ ಭಾಜಪದಲ್ಲಿ ಸ್ಥಾನ ಸಿಕ್ಕಿತು ಮತ್ತು ವಿಧಾನಸಭೆಯಲ್ಲಿ ಶಾಸಕರಾದರು.

ಜಸ್ವಂತ್ ಸಿಂಗ್ ಅವರಿಗೆ ಒಂಬತ್ತು ಬಾರಿ ಸಂಸದರಾಗಲು ಭಾಜಪ ಅವಕಾಶ ನೀಡಿತು. 1989ರಲ್ಲಿ ಜೋಧಪುರ್ ಮತ್ತು 1991 ಹಾಗೂ 1996ರಲ್ಲಿ ಚಿತ್ತೋರಘರ್ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದರು. ಆದರೆ ಮುಂದಿನ ಚುನಾವಣೆಯಲ್ಲಿ, ಅಂದರೆ 1998ರಲ್ಲಿ ಅವರು ಚುನಾವಣೆಯಲ್ಲಿ ಸೋಲಬೇಕಾಯಿತು. ಹೀಗಿದ್ದಾಗ್ಯೂ ಅವರನ್ನು ರಾಜ್ಯಸಭೆಯ ಮೂಲಕ ಪ್ರವೇಶ ಮಾಡಿಸಿ, ಅವರನ್ನು ವಾಜಪೇಯೀ ಮಂತ್ರಿಮಂಡಲದಲ್ಲಿ ವಿದೇಶಾಂಗ ಮಂತ್ರಿಯನ್ನಾಗಿ ಮಾಡಲಾಯಿತು. ಮುಂದೆ 2002ರಲ್ಲಿ ಅವರು ವಿತ್ತಸಚಿವರಾಗಿ ಎರಡು ಬಾರಿ ಬಜೆಟ್ ಮಂಡಿಸುವ ಅವಕಾಶವನ್ನೂ ಪಡೆದರು. 2004ರಲ್ಲಿ ರಾಜ್ಯಸಭೆಗೆ ಪುನರ್ನಾಮಕರಣಗೊಂಡ ಜಸ್ವಂತ್ ಸಿಂಗ್ ಅವರು, 2009ರಲ್ಲಿ ಲೋಕಸಭಾ ಚುನಾವಣೆಗೆ ಡಾರ್ಜಿಲಿಂಗ್ ಇಂದ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಭಾಜಪಾವು ಗೋರ್ಖಾ ಜನಮುಕ್ತಿ ಮೋರ್ಚಾದೊಡನೆ ಹೊಂದಾಣಿಕೆ ಮಾಡಿಕೊಂಡದ್ದರಿಂದಾಗಿ ಜಸ್ವಂತ್ ಸಿಂಗ್ ಚುನಾವಣೆಯಲ್ಲಿ ಗೆದ್ದರು. 2012ರಲ್ಲಿ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಭಾಜಪಾವು ಚುನಾವಣೆಯಲ್ಲಿ ನಿಲ್ಲಿಸಿತ್ತು. ಆದರೆ, ಭಾಜಪಕ್ಕೆ ಆವಶ್ಯಕ ಬಹುಮತ ಇಲ್ಲದ್ದರಿಂದ ಜಸ್ವಂತ್ ಸಿಂಗ್ ಆ ಚುನಾವಣೆಯಲ್ಲಿ ಗೆಲ್ಲಲಿಲ್ಲ; ಹಮೀದ್ ಅನ್ಸಾರಿಯವರು ಉಪರಾಷ್ಟ್ರಪತಿಯಾದರು.

ಮತ್ತಷ್ಟು ಓದು »

29
ಮಾರ್ಚ್

ಪೋಲಿಸ್ ಸಿಬ್ಬಂದಿ ಮತ್ತು ಚುನಾವಣೆಗಳ ನಡುವೆ

– ಬೆಳ್ಳಿ

ಪೋಲಿಸ್ ಸಮಸ್ಯೆಗಳುಈಗ ಎಲ್ಲೆಲ್ಲೂ ಚುನಾವಣೆಯ ಅಬ್ಬರ.ಹಳ್ಳಿ ಹಳ್ಳಿ ಗಲ್ಲಿ ಗಲ್ಲಿಗಳಲ್ಲಿ ಚುನಾವಣೆಯ ಕಾವು ರಂಗೇರುತ್ತಿದೆ.ಎಲ್ಲರೂ ತಮ್ಮ ಪಾಡಿಗೆ ತಾವು ಹಾಯಾಗಿ ಜೀವನ ಸಾಗಿಸುತ್ತಿದ್ದರೆ,ಕಾನೂನು ಮತ್ತು ಸುವ್ಯವಸ್ಧೆಯ ಅಡಿಯಲ್ಲಿ ಬರುವ ಪೋಲಿಸ್ ವ್ಯವಸ್ಧೆ ಯಾವ ರೀತಿಯಾಗಿ ಅವರಿಗೆ ಒತ್ತಡಗಳಿದ್ರೂ ಕೆಲಸ ಮಾಡುತ್ತದೆಂದು ಯಾರಿಗೂ ಗೊತ್ತಿಲ್ಲ.ಅವರು ನಾಮಪತ್ರ ಸಲ್ಲಿಸುವುದರಿಂದ ಹಿಡಿದು ಚುನಾವಣೆಯ ಫಲಿತಾಂಶ ಬರುವವರೆಗೂ ಸತತವಾಗಿ ಎರಡು ತಿಂಗಳುಗಳ ಕಾಲ ಹಗಲಿರುಳೆನ್ನದೆ ದುಡಿಯುತ್ತಾರೆ.ಚುನಾವಣೆ ಸಮೀಪ ಬಂತೆಂದರೆ ಸಾಕು ಯಾರು ಒಂದು ತಿಂಗಳು ಕಾಲ ರಜೆ ಕೇಳಬಾರದೆಂಬ ಆದೇಶ ಹೊರಡಿಸಿಬಿಟ್ಟಿರುತ್ತಾರೆ.ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಮಾತ್ರ ರಜೆ ಕೇಳಬೇಕು.ಅದೂ ಸಹ ಎಸ್.ಪಿ.ಸರ್ ಅಪ್ಪಣೆ ನೀಡಬೇಕು.

ಇದು ಹಿಂಗಾದರೆ,ಚುನಾವಣೆಯ ಕಾಲಕ್ಕೆ ಯಾವುದೋ ಹಳ್ಳಿಗೆ ಕರ್ತವ್ಯ ಬಂದಿರುತ್ತೆ.ನಮಗೆ ಮೈಯಲ್ಲಿ ಆರಾಮ ಇಲ್ಲದಿದ್ರೂ,ಅಥವಾ ಮನೆಯಲ್ಲಿ ಗಂಡ,ಅತ್ತೆ,ಮಾವ,ಮಕ್ಕಳಗೆ,ಹೆಂಡತಿಗೆ ಮೈಯಲ್ಲಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿ ಸೇರಿದ್ರೂ ಎಲ್ಲ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು.ಮನೆಯ ಕಡೆ ವಿಷಯ ತಿಳಿದುಕೊಳ್ಳೋಣವೆಂದರೆ ಅಲ್ಲಿ ಮೊಬೈಲ್ ನೆಟ್ ವರ್ಕ್ ಬರೋಲ್ಲ.ಅದೇ ಒತ್ತಡಗಳ ಜೊತೆಗೆ ಹಳ್ಳಿಗೆ ಹೋಗಿ ಕೊಟ್ಟಿರುವ ಬೂತ್ ಎನ್ನುವ ಭೂತ ಬಂಗಲೆಗೆ ಕಾಲಿಟ್ಟಾಗ ಮೊದಲು ಅದು ಆ ಗ್ರಾಮದ ಸಾರ್ವಜನಿಕರೆಲ್ಲರ ಶೌಚಾಲಯದ ತಾಣ.ಚುನಾವಣೆಯ ವೇಳೆಯಲ್ಲಿ ಗಿಡ ಕಂಟಿ ಕಡಿದು ಅಲ್ಲಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ,ಒಂದೇ ಒಂದು ಕೋಣೆ ರೆಡಿ ಮಾಡಿ,ಅದರಲ್ಲಿ 60 ವೋಲ್ಟೆಜಿನ ಬಲ್ಬ್ ಹಾಕುತ್ತಾರೆ.ನಲವತ್ಮೂರರಿಂದ ನಲವತ್ತೈದು ಡಿಗ್ರಿ ಬಿಸಿಲ ಧಗೆಯಲ್ಲಿ ಹ್ಯಾಗೆ ಕರ್ತವ್ಯ ಮಾಡಬೇಕು.

ಮತ್ತಷ್ಟು ಓದು »

28
ಮಾರ್ಚ್

ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-3

– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ

ಭಾಗ 1,   ಭಾಗ 2

Social Science Column Logo
ಭ್ರಷ್ಟಾಚಾರ ಮತ್ತು ನೈತಿಕತೆಯ ಚೌಕಟ್ಟು

ಪ್ರಭುತ್ವದ ಚೌಕಟ್ಟಿನಲ್ಲಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸುವುದನ್ನು ಸಾಮಾನ್ಯವಾಗಿ ಭ್ರಷ್ಟಾಚಾರ ಎಂದು ಕರೆಯುತ್ತಾರೆ, ಮತ್ತು ಅದು ಈ ಚೌಕಟ್ಟಿನೊಳಗೆ ಅನೈತಿಕವೆಂದೂ ಸಹ ಗುರುತಿಸಲ್ಪಡುತ್ತದೆ. ಆದರೆ ಸಾಮಾಜಿಕ ನೆಲೆಯಲ್ಲಿ ಹೀಗೆ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಳ್ಳದಿರುವುದಕ್ಕೂ ಅನೈತಿಕತೆಗೂ ಸಂಬಂಧವನ್ನು ಇಲ್ಲಿಯ ಜನರು ಭಾವಿಸಿಕೊಳ್ಳದಿರುವುದನ್ನು ಮೇಲಿನ ಉದಾಹರಣೆಗಳಲ್ಲಿ ಉಲ್ಲೇಖಿಸಿದ್ದೆ. ಪ್ರಭುತ್ವದ ಚೌಕಟ್ಟಿನ ಸಾರ್ವಜನಿಕ ಜೀವನದ ನೆಲೆಯಲ್ಲಿ ಈ ರೀತಿಯ ನಡವಳಿಕೆಯು ಅನೈತಿಕ ಮತ್ತು ಅದರಿಂದಲೇ ಅದು ಭ್ರಷ್ಟಾಚಾರ ಎಂದು ಸಾಮಾನ್ಯವಾಗಿ ಸಮಾಜಶಾಸ್ತ್ರೀಯವಾಗಿ ಮತ್ತು ಮಾದ್ಯಮ ವಲಯದಲ್ಲಿ ಗುರುತಿಸಲ್ಪಡುತ್ತಿದ್ದರೂ ಜನರು ಹಾಗೆ ಪರಿಭಾವಿಸುವುದು ಕಂಡುಬರುವುದಿಲ್ಲ. ಏಕೆ ಹೀಗೆ? ಇದನ್ನೂ ನಾನು ಒಂದು ಸಾಂಸ್ಕೃತಿ ಭಿನ್ನತೆಯ ಪ್ರಶ್ನೆಯಾಗಿಯೇ ನೋಡುವ ಪ್ರಯತ್ನ ಮಾಡಿದ್ದೇನೆ.
ಯಾವುದೇ ವ್ಯಕ್ತಿ ಅಥವಾ ಸಮೂಹದ ಯಾವುದೇ ಒಂದು ನಡವಳಿಕೆ ಭ್ರಷ್ಟನಡವಳಿಕೆ ಎಂದು ಗುರುತಿಸುವುದು ಹೇಗೆ ಆರಂಭವಾಯಿತು? ಈ ಪ್ರಶ್ನೆ ಇಟ್ಟುಕೊಂಡು ಹುಡುಕಿದರೆ ಸಿಗುವ ಉತ್ತರ ವಿಶೇಷವಾದದ್ದು. ಭಾರತದಲ್ಲಿ ಈ ರೀತಿಯ ವಿವರಣೆಗಳು ಬ್ರಿಟೀಷರಿಂದ ಆರಂಭವಾಗುತ್ತದೆ. ಬ್ರಿಟೀಷರು ಸುಳ್ಳು ಆಚರಣೆಗಳನ್ನೇ ಭ್ರಷ್ಟ ಆಚರಣೆಗಳೆಂದು ಗುರುತಿಸುತ್ತಾರೆ. ಇದಕ್ಕೂ ನಿಜ ರಿಲಿಜನ್ ಮತ್ತು ಸುಳ್ಳು ರಿಲಿಜನ್ ಎನ್ನುವ ಪಶ್ಚಿಮದ ಕ್ರಿಶ್ಚಿಯನ್ ಥಿಯಾಲಜಿಯ ಚೌಕಟ್ಟಿಗೂ ಸಂಬಂಧವಿದೆ. ನಿಜವಾದ ರಿಲಿಜನ್ (ಗಾಡ್ನ)ನೈತಿಕ ನಿಯಮಗಳ ಆಧಾರದಲ್ಲಿದ್ದು ಅದನ್ನು ಪಾಲಿಸುವವರು ನೈತಿಕರು ಎಂದಾದರೆ ಸುಳ್ಳು ರಿಲಿಜನ್ ಅನ್ನು ಅನುಸರಿಸುವವರು ನಿಜ ರಿಲಿಜನ್ನ ನೈತಿಕ ನಿಯಮಗಳಿಗೆ ವಿರುದ್ಧವಾದ ಅನೈತಿಕ ಆಚರಣೆಗಳನ್ನು ಮಾಡುವವರು ಎಂದು ಗುರುತಿಸಲಾಗುತ್ತದೆ. ಭ್ರಷ್ಟತೆಯ ಇಂಗ್ಲೀಷ್ ರೂಪವಾದ ಕರಪ್ಟ್ (Corrupt) ಅಂದರೆ ಸತ್ಯವು ಭ್ರಷ್ಟಗೊಳ್ಳುವುದು ಅಥವಾ ವಿರೂಪಗೊಳ್ಳುವುದು ಎಂದರ್ಥ. ಭಾರತೀಯ ಸಮಾಜ ಮತ್ತು ಇಲ್ಲಿಯ ಆಚರಣೆಗಳನ್ನು ವಿವರಿಸಬೇಕಾದರೆ ಅವರು ಬಳಸಿದ ಭ್ರಷ್ಟ ರಿಲಿಜನ್(Corrupt Religion), ಭ್ರಷ್ಟ ಸಮಾಜ(Corrupt Society), ಮತ್ತು ಭ್ರಷ್ಟ ಆಚರಣೆಗಳು(Corrupt Practices) ಎಂಬ ವಿವರಣೆಗಳು ಈ ಹಿನ್ನೆಲೆಯಿಂದಲೇ ಬರುತ್ತವೆ. ಹಾಗಾಗಿ, ಪಾಶ್ಚಿಮಾತ್ಯರ ರಿಲಿಜನ್ ಸಂಸ್ಕೃತಿಯ ಹಿನ್ನೆಲೆಯಲ್ಲಿ ಭ್ರಷ್ಟ ಆಚರಣೆ ಅಥವಾ ನಡವಳಿಕೆ ಎಂದರೇನೆ ಅದು ಅನೈತಿಕ ಆಚರಣೆ ಅಥವಾ ಅನೈತಿಕ ನಡವಳಿಕೆ ಎಂದರ್ಥವಾಗುತ್ತದೆ. ಹಾಗಾಗಿ, ಈ ಸಾಂಸ್ಕೃತಿಕ ಹಿನ್ನೆಲೆಯ ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರೇನೆ ಈ ಚೌಕಟ್ಟಿನ ಪ್ರಕಾರ ಅನೈತಿಕತೆಯಲ್ಲಿ ತೊಡಗಿದ್ದಾರೆ ಎಂದಾಗುತ್ತದೆ. ಆದರೆ ಭಾರತೀಯ ಸಂದರ್ಭದಲ್ಲಿ ಈ ರಿಲಿಜಸ್ ಸಂಸ್ಕೃತಿಯ ಹಿನ್ನೆಲೆ ಇಲ್ಲದಿರುವುದರಿಂದ ಭ್ರಷ್ಟಾಚಾರದಲ್ಲಿ ತೊಡಗಿದ್ದವರು ಅನೈತಿಕ ವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ಮನೋಭಾವನೆ ಜನರಲ್ಲಿ ಬರುವುದಿಲ್ಲ. ಬದಲಾಗಿ ಹೆಚ್ಚೆಂದರೆ ಅವರು ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡು ತಪ್ಪುಮಾಡಿದ್ದಾರೆ ಎಂದುಕೊಳ್ಳುತ್ತಾರೆ ಅಷ್ಟೇ. ಮತ್ತಷ್ಟು ಓದು »

28
ಮಾರ್ಚ್

ಹೀಗೊಂದು ಊರಿನ ಕತೆ:

– ಬಾಲಚಂದ್ರ ಭಟ್

Story of Indiaಅದೊಂದು ಊರು. ಬಡವ-ಬಲ್ಲಿದ, ಬುದ್ದಿವಂತ, ದಡ್ಡ ಎಲ್ಲರೂ ಇದ್ದ ಊರು. ಆ ಊರಿಗೆ ದರೋಡೆಕೋರರ ಕಾಟ. ಹಿಂಸೆ, ಬಲಾತ್ಕಾರ, ದೋಚುವದು ಇವೆಲ್ಲವನ್ನೂ ಮಾಡುತ್ತಿದ್ದರು.ದರೋಡೆಕೊರರನ್ನು ಎದುರಿಸುವದಕ್ಕೆ ಭಯಪಟ್ಟ ಕೆಲವು ಚಿಂತಕರು ದರೋಡೆಕೋರರ ಜೊತೆ ಸಂಧಾನಕ್ಕಿಳಿಯುವ ದಾರಿಯನ್ನು ಯೋಚಿಸಿದರು. ಕೆಲವು ಸಾಹಸಿಗಳು ದಾಳಿಕೋರರಿಗೆ ಅವರದೇ ರೀತಿಯಲ್ಲಿ ಉತ್ತರಿಸುವ ಯೋಜನೆ ಹಾಕಿಕೊಂಡರು.ಒಮ್ಮೆ ದರೋಡೆಕೋರರು ಹಳ್ಳಿಗೆ ಧಾಳಿಯಿಟ್ಟರು. ಚಿಂತಕರು ವಿದ್ಯಾವಂತರೇನೊ ಹೌದು. ಆದರೆ ದರೋಡೆಕೋರರನ್ನು ಎದುರಿಸುವ ಧೈರ್ಯ ಇರಲಿಲ್ಲ. ಹೆದರಿ ಬಾಗಿಲು ಹಾಕಿಕೊಂಡರು.ದರೋಡೆಕೋರರು ಬಗ್ಗದಿದ್ದಾಗ ಚಿಂತಕರು ಊರಿನ ಸಂಪತ್ತನಲ್ಲಿ ಕೆಲವು ಭಾಗವನ್ನು ಹಂಚಿಕೊಳ್ಳುವ ಒಪ್ಪಂದದೊಂದಿಗೆ ಪ್ರಾಣವನ್ನು ಉಳಿಸಿಕೊಂಡರು. ಆದರೆ ಊರಿನ ಕೆಲ ಸಾಹಸಿಗಳು ದರೋಡೆಕೋರರ ಜೊತೆ ಹೋರಾಡಿದರು. ಎರಡೂ ಕಡೆ ಪ್ರಾಣ ಹಾನಿ ಸಂಭವಿಸಿತು.ಇದೆಲ್ಲದಕ್ಕೂ ಚಿಂತಕರ ಮನೆಯ ಮುಚ್ಚಿದ ಬಾಗಿಲುಗಳೆ ಪ್ರೇಕ್ಷಕರಾದವು. ಹಾಗೂ ಹೀಗೂ ಊರಿನ ಹೋರಾಟಗಾರರು ದರೋಡೆಕೋರರನ್ನು ಬಗ್ಗು ಬಡಿದರು. ಕೆಲವು ದರೋಡೆಕೋರರು ಓಡಿ ಹೋದರು. ಸೆರೆಸಿಕ್ಕ ದರೋಡೆಕೋರರನ್ನು ತಳಿಸಲಾಯಿತು. ಊರು ದರೋಡೆಕೋರರಿಂದ ಮುಕ್ತಿ ಹೊಂದಿ ಉಸಿರಾಡುವಂತಾಯಿತು. ಊರಿನ ವಾತಾವರಣ ತಿಳಿಯಾಯಿತು.ಈಗ ಚಿಂತಕರು ಮನೆಯ ಬಾಗಿಲನ್ನು ತೆರೆದು ಹೊರಬಂದರು. ಊರಿನ ಜನರಿಂದ ತಳಿಸಲ್ಪಡುತ್ತಿದ್ದ ದರೋಡೆಕೋರರನ್ನು ನೋಡಿದರು. ಕೂಡಲೇ ದರೋಡೆಕೋರರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ವಿರೋಧಿಸಿದರು. ಈ ಊರಿನಲ್ಲಿ ಮಾನವೀಯ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದು ಆಪಾದಿಸಿದರು. ಮಾನವೀಯತೆಯ ಪಾಠ ಹೇಳಿದರು.ಅವರನ್ನು ಬಲಿಪಶುಗಳೆಂದು ಸಂತೈಸಲಾಯಿತು. ಕ್ರಮೇಣ ದರೋಡೆಕೋರರನ್ನು ಸಾಮಜಿಕ ವಲಯದಲ್ಲಿ ಸಂತೈಸುವದು, ಅವರ ಹಕ್ಕು, ಅಭಿವೃದ್ಧಿ, ಕಲ್ಯಾಣಗಳ ಕುರಿತ ಆಂದೋಲನಗಳು ಆ ಊರಿನ ಸಮಾಜಮುಖಿ ಬೆಳವಣಿಗೆಯಾಗಿ ಮಾರ್ಪಾಟಾಯಿತು. ಆ ಊರಿನ ಕೆಲವು ಭಾಗಗಳನ್ನು ದರೋಡೆಕೋರರಿಗೆ ಸ್ವತಂತ್ರವಾಗಿ ಬಿಟ್ಟುಕೊಡುವಂತೆ ಒತ್ತಡ ಹೇರಿದರು. ದರೋಡೆಕೋರರಿಗಾಗಿಯೇ ಅವರಿಗೆ ಒಪ್ಪಿತವಾದ ನ್ಯಾಯಾಂಗಕ್ಕೆ ಅವಕಾಶ ಒದಗಿಸಬೇಕೆಂದು ಒತ್ತಾಯಿಸಲಾಯಿತು. ದರೋಡೆಕೋರರನ್ನು ವಿರೋಧಿಸುವವರನ್ನು ಮನುಷ್ಯ ವಿರೋಧಿ ಎಂದು ಕರೆಯಲಾಯಿತು. ಆ ಊರಿನ ರಾಜಕೀಯ ಹಿತಾಸಕ್ತಿ ಹಾಗೂ ಪೈಪೋಟಿಯೆ ಇವೆಲ್ಲಕ್ಕೂ ಕಾರಣ ಎನ್ನುವದು ನಿರ್ವಿವಾದವಾಗಿತ್ತು.

ಮತ್ತಷ್ಟು ಓದು »

27
ಮಾರ್ಚ್

ಸಾಹಿತ್ಯ ಕ್ಷೇತ್ರದ ಒಳಹೊರಗು

-ಡಾ.ಶ್ರೀಪಾದ ಭಟ್, ತುಮಕೂರು

ಕನ್ನಡ ಸಾಹಿತ್ಯಕರ್ನಾಟಕ ಸಾಹಿತ್ಯ ಅಕಾಡೆಮಿಗೆ ವರ್ಷಗಟ್ಟಲೆ ಸೂತ್ರಧಾರರಿರಲಿಲ್ಲ. ಇದೀಗ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರನ್ನು ಸರ್ಕಾರ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪತ್ರಕರ್ತನೊಬ್ಬ ಅವರನ್ನು ಸಂದರ್ಶನ ಮಾಡಿದ. ಚಾನೆಲ್ಲೊಂದರಲ್ಲಿ ಅದು ಪ್ರಸಾರವಾಯಿತು. ಆತ ಅವರ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಿದ. ಯುವ ಜನತೆಯನ್ನು, ಹೊಸಬರನ್ನು ಕನ್ನಡ ಭಾಷೆ, ಸಾಹಿತ್ಯದತ್ತ ಸೆಳೆಯುವ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಪ್ರೊ. ಮಾಲತಿಯವರು ಹೇಳಿದರು. ನೀವು ಸಾಹಿತ್ಯದಲ್ಲಿ ಎಡಪಂಥದ ಸಾಹಿತಿಗಳಿಗೆ ಮನ್ನಣೆ ನೀಡುವಿರೋ ಬಲಪಂಥದವರಿಗೋ ಎಂದು ಆತ ಕೇಳಿದ. ನನಗೆ ಕನ್ನಡಕ್ಕೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದು ಮುಖ್ಯವೇ ವಿನಾ ಎಡ, ಬಲ ಪಂಥಗಳಲ್ಲ ಎಂದು ಒಬ್ಬ ನಿಜವಾದ ಸಾಹಿತ್ಯಪ್ರೇಮಿ ಹೇಳುವ ಮಾತನ್ನು ಮಾಲತಿಯವರು ಉತ್ತರವಾಗಿ ನೀಡಿದರು. ಇಂಥ ಸಮ ದೃಷ್ಟಿಕೋನ ಎಷ್ಟು ಜನರಿಗೆ ಇರಬಹುದು? ಹೇಳುವುದು ಕಷ್ಟ.

ಕನ್ನಡ ಸಾಹಿತ್ಯದ ಇಂದಿನ ಪರಿಸ್ಥಿತಿಯನ್ನು ಪತ್ರಕರ್ತನ ಪ್ರಶ್ನೆ ಪ್ರತಿನಿಧಿಸುತ್ತದೆ. ಇದು ನಿಜಕ್ಕೂ ಸಾಹಿತ್ಯಕ ದುರಂತ. ಸಾಹಿತ್ಯ ರಚಿಸುವವರು, ಸಾಹಿತ್ಯ ಓದುವವರು ಇಬ್ಬರೂ ತಾವು ಎಡಪಂಥದವರೋ, ಬಲಪಂಥದವರೋ ಎಂದು ಮೊದಲೇ ನಿರ್ಧರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈಗಾಗಲೇ ಆಯಾ ಪಂಥೀಯರು ಅಥವಾ ಮಾಧ್ಯಮದವರು ಅಥವಾ ಕೊನೆಗೆ ವಿಮರ್ಶಕರು ನಿಮಗೆ ಹಣೆಪಟ್ಟಿ ಹಚ್ಚಿಯೇಬಿಡುತ್ತಾರೆ! ಹೀಗೆ ಹಣೆಪಟ್ಟಿ ಅಂಟಿಸಿಕೊಳ್ಳದವ ಸಾಹಿತಿಯೂ ಆಗಲಾರ ಓದುಗನೂ ಆಗಲಾರ!

ಸುಮ್ಮನೆ ಓದುವ, ಬರೆಯುವ ಪ್ರೀತಿಗಾಗಿ ಸಾಹಿತ್ಯ ಲಭ್ಯವಿಲ್ಲವೇ? ಒಬ್ಬ ನಿಜವಾದ ಸಾಹಿತ್ಯಪ್ರೇಮಿಗೆ ಯಾವ ಪಂಥಗಳೂ ಮುಖ್ಯವಾಗದು. ಆತ ಆ ವಿಷಯ, ಈ ವಿಷಯ, ಆ ಸಿದ್ಧಾಂತ, ಈ ಸಿದ್ಧಾಂತ ಎಂದೆಲ್ಲ ನೋಡಲಾರ. ತನಗೆ ಯಾವುದು ಇಷ್ಟವೋ, ಆಸಕ್ತಿಯೋ ಅದನ್ನೆಲ್ಲ ಆತ ಓದಿ ಅರಗಿಸಿಕೊಳ್ಳುತ್ತಾನೆ, ತನ್ನದೇ ಒಂದು ನಿಲುವಿಗೆ ಆತ ಬರಬಹುದು, ಬರದೆಯೂ ಇರಬಹುದು. ಹೀಗೆ ಯಾವ ಪಂಥ, ಸಿದ್ಧಾಂತಕ್ಕೂ ತನ್ನನ್ನು ಅಡವಿಟ್ಟುಕೊಳ್ಳದ ಸಾಹಿತಿ ಅಥವಾ ಓದುಗನೇ ನಿಜವಾದ ಸಾಹಿತಿ ಅಥವಾ ಓದುಗನಾಗಬಲ್ಲ. ಜನಪ್ರೀತಿಯ ಕವಿ ಜಿಎಸ್‍ಎಸ್ ಅವರ ಕಾವ್ಯವನ್ನು ನವೋದಯ, ನವ್ಯ, ದಲಿತ-ಬಂಡಾಯ ಹೀಗೆ ಯಾವುದಕ್ಕಾದರೂ ತಗುಲಿಸಲೇಬೇಕು ಎಂಬ ವಿಮರ್ಶಕರ, ಮಾಧ್ಯಮದವರ ಹಠ ಕೊನೆಗೂ ಈಡೇರಲೇ ಇಲ್ಲ. ಯಾವುದೂ ದಾರಿ ಕಾಣದೇ ಅವರಿಗೆ ಕೊನೆಗೆ ಸಮನ್ವಯ ಕವಿ ಎಂಬ ಹಣೆಪಟ್ಟಿ ಕಟ್ಟಿದರು. ಜಿಎಸ್‍ಎಸ್ ಅವರಿಗೇ ಸ್ವತಃ ಇದು ಇರಿಸುಮುರಿಸು ತಂದರೂ ನಾವು ಅವರನ್ನು ಹಾಗೆ ಕರೆಯುವುದನ್ನು ಬಿಡಲಿಲ್ಲ! ಜನರನ್ನು ಪ್ರೀತಿಯಿಂದ ಆವರಿಸಿದ ಕೆಎಸ್‍ನ ಅವರನ್ನು, ಅವರದು ಪುಷ್ಪಕಾವ್ಯ, ಅವರು ಕವಿಯೇ ಅಲ್ಲ, ಅವರು ಪುಷ್ಪಕವಿ ಎಂದೆಲ್ಲ ಗೇಲಿ ಮಾಡಲಾಯಿತು. ಕನ್ನಡ ಪ್ರಾಧ್ಯಾಪಕರಾಗಿರದೇ, ಯಾವ ಸಿದ್ಧಾಂತಕ್ಕೂ ಕಟ್ಟುಬೀಳದೇ ಒಬ್ಬ ಸಾಹಿತ್ಯ ಪ್ರೀತಿಯ ಸರ್ಕಾರಿ ನೌಕಕರಾಗಿ ಅವರು ರಚಿಸಿದ ಕಾವ್ಯ ಪಡೆದ ಜನಮನ್ನಣೆ ಸಾಹಿತ್ಯದ ಅಧಿಕೃತ ಗುತ್ತಿಗೆ ಪಡೆದವರ ಹೊಟ್ಟೆಯುರಿಗೆ ಕಾರಣವಾಯಿತೋ ಅಥವಾ ಯಾವುದೇ ಪಂಥಗಳ ಲಕ್ಷಣ ಕಾಣಿಸದೇ ಎರಡೂ ಪಂಥದವರು ಅವರನ್ನು ವ್ಯವಸ್ಥಿತವಾಗಿ ನಿರಾಕರಿಸಲು ಹವಣಿಸಿದರೋ-ಎರಡೂ ಇರಬಹುದು. ಆದರೆ ಇಂದಿಗೂ ಜನ ಮಾತ್ರ ಅವರ ಪುಷ್ಪಕಾವ್ಯ ಪ್ರೀತಿಸುವಷ್ಟು ಸಿಡಿಲ ಕಾವ್ಯವನ್ನು ಪ್ರೀತಿಸುತ್ತಿಲ್ಲ. ಇವೆಲ್ಲ ಸಾಹಿತ್ಯದಲ್ಲಿ ರಾಜಕೀಯ, ಸಾಮಾಜಿಕ ಸಿದ್ಧಾಂತಗಳು ಸೇರಿ ಸಾಹಿತ್ಯವನ್ನು ಕೇವಲ ಸಾಹಿತ್ಯವಾಗಿ ಇರಲು ಬಿಡದಂತೆ ಮಾಡಿದುದರ ಲಕ್ಷಣಗಳು.

ಮತ್ತಷ್ಟು ಓದು »

25
ಮಾರ್ಚ್

ಕಥೆಯಾದರು ಚಿತ್ತಾಲ

– ರಾಘವೇಂದ್ರ ಅಡಿಗ ಎಚ್ಚೆನ್

ಯಶವಂತ ಚಿತ್ತಾಲಕನ್ನಡ ಸಾಹಿತ್ಯ ದಿಗಂತದ ಇನ್ನೊಂದು ತಾರೆ ಅಸ್ತಂಗತವಾಗಿದೆ. ಕವಿ, ಕಥೆಗಾರ, ಶ್ರೀ ಯಶವಂತ ಚಿತ್ತಾಲರು (86) ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಷಃ ತಾವೊಬ್ಬರೇ ಚಿರಶಾಂತಿಯ `ಶಿಕಾರಿ’ ಗಾಗಿ ಹೊರಟಿರುವರೇನೊ? “ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ.” ಎಂದಿದ್ದ ಚಿತ್ತಾಲರಿಲ್ಲದ ಈ ಸಮಯದಲ್ಲಿ ಅವರ ಪುಸ್ತಕಗಳ ಅಪಾರ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಅವರ ಬದುಕಿನ ಕುರಿತು ನಿಮ್ಮೊಡನೆ ನಾಲ್ಕು ಮಾತುಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ

ಯಶವಂತ ಚಿತ್ತಾಲರು ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದಲ್ಲಿ ನವ್ಯ ಯುಗ ಪ್ರಾರಂಭಾವಾಗಿದ್ದ ಕಾಲಘಟ್ಟದಲ್ಲಿ ತಮ್ಮನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡ ಚಿತ್ತಾಲರು ನವ್ಯ ಮಾರ್ಗದಲ್ಲಿನ ಕಥೆಗಳು, ಕಾದಂಬರಿಗಳು ಅಂದು ಸಾಕಷ್ಟು ಪ್ರಸಿದ್ದವಾಗಿದ್ದವು. ‘ಪುರುಷೋತ್ತಮ’, ‘ಛೇದ’, ‘ಶಿಕಾರಿ’ ಗಳಂತಹ ಪ್ರಸಿದ್ದ ಹಾಗೂ ಮಹತ್ವದ ಕಾದಂಬರಿಗಳನ್ನು ರಚಿಸಿದ್ದ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕನ್ನಡದ ಅತ್ಯಂತ ಜನಪ್ರಿಯ ಕಥಾ ಸಂಕಲನಗಳಲ್ಲಿ ಒಂದು.

ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಕುಮಟಾದ ಹನೇಹಳ್ಳಿಯವರಾದ ಚಿತ್ತಾಲರು ತಮ್ಮ ಜೀವನದ ಅರ್ಧಕ್ಕೂ ಹೆಚ್ಚಿನ ಸಮಯವನ್ನು ಮುಂಬೈನಲ್ಲಿ ಕಳೆದಿದ್ದರು. ಹನೇಹಳ್ಳಿಯ ವಿಠೋಬಾ, ರುಕ್ಮಿಣಿ ದಂಪತಿಗಳ ಏಳು ಮಕ್ಕಳುಗಳ ಪೈಕಿ ಐದನೆಯವರಾಗಿದ್ದ ಯಶವಂತ ಚಿತ್ತಾಲರು 1928 ರಲ್ಲಿ ಜನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರೈಸಿದ ಚಿತ್ತಾಲರು ಕುಮಟಾ, ಧಾರವಾಡ್, ಮುಂಬೈ ಹಾಗೂ ನ್ಯೂ ಜರ್ಸಿಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ್ದರು. ಇವರು ವಿಜ್ಞಾನ ಪದವೀಧರರಾಗಿದ್ದು ರಸಾಯನ ಶಾಸ್ತ್ರದಲ್ಲಿ ಉನ್ನತ ಮಟ್ಟದ ಪ್ರೌಢಿಮೆಯನ್ನು ಹೊಂದಿದ್ದರು. ಅದರಲ್ಲಿಯೂ ಪಾಲಿಮರ್ ತಂತ್ರಜ್ಞಾನದಲ್ಲಿ ವಿಶೇಷ ಅನುಭವ ಹೊಂದಿದ್ದ ಚಿತ್ತಾಲರು . ಮುಂಬೈ ವಿವಿಯ ಪ್ಲಾಸ್ಟಿಕ್ ತಂತ್ರವಿಜ್ಞಾನದ ಬಿಎಸ್‌ಸಿಯಲ್ಲಿ ಪ್ರಥಮ ಸ್ಥಾನ ಸುವರ್ಣ ಪದಕ ಪಡೆದಿರು. ನಲ್ವತ್ತ ನಾಲ್ಕನೇ ವಯಸ್ಸಿನಲ್ಲಿ ಅಮೆರಿಕದ ಸ್ಟೂವನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಎ ಪದವಿ ಪಡೆದಿದ್ದ. ಚಿತ್ತಾಲರು ಬೆಕಾಲೈಟ್ ಹೈಲಮ್ ಲಿ. ಕಂಪನಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದಾರೆ. ಇಲ್ಲಿ ಹಲವು ವರ್ಷಗಳ ಕಾಲ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಮುಂಬೈನಲ್ಲಿ ಅದೇ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಡೈರಕ್ಟರ್ ಆಗಿ 1985ರಲ್ಲಿ ನಿವೃತ್ತಿ ಹೊಂದಿದ್ದರು.

ಕವಿ ಗಂಗಾಧರ ಚಿತ್ತಾಲರ ಸಹೋದರರಾಗಿದ್ದ ಯಶವಂತ ಚಿತ್ತಾಲರಿಗೆ ಬಾಲ್ಯದಿಂದಲೂ ಸಾಹಿತ್ಯದ ಕಡೆಗೆ ಒಲವಿದ್ದಿತು. ಪಾಶ್ಚಾತ್ಯ ದೇಶಗಳನ್ನೆಲ್ಲಾ ಸುತ್ತಿ ಅಲ್ಲಿನ ಸಾಹಿತ್ಯದ ಮೌಲ್ಯಗಳ ತೌಲನಿಕ ಚಿಂತನೆಯನ್ನು ನಡೆಸಿ ಕನ್ನಡದಲ್ಲಿ ಕೃತಿಗಳನ್ನು ರಚಿಸಿದ ಯಶವಂತ ಚಿತ್ತಾಲರಿಗೆ ಮನಃಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರಗಳಲ್ಲಿ ಬಹಳ ಆಸಕ್ತಿ ಇದ್ದಿತು. ಇವರು ತಮ್ಮ ವಿಶಿಷ್ಟ ಬಗೆಯ ಸಾಹಿತ್ಯದಿಂದ ಜನರನ್ನು ಸಮ್ಮೋಹಗೊಳಿಸಿದ್ದಲ್ಲದೆ ತಮ್ಮ ಸಜ್ಜನಿಕೆಯ ಜೀವನ ಶೈಲಿ, ಜೀವನ ಪ್ರೀತಿಯಿಂದಲೂ ಅಪಾರ ಜನ ಮೆಚ್ಚುಗೆಗೆ ಭಾಜನರಾಗಿದ್ದವರು.

ಮತ್ತಷ್ಟು ಓದು »

24
ಮಾರ್ಚ್

ಪಾಕೆಟ್ ಮನಿಯೆ೦ಬುದು ಪ್ರೀತಿಯ ಅಭಿವ್ಯಕ್ತಿ ಎ೦ದುಕೊ೦ಡೀರೀ.. ಜೋಕೆ..!!

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಪಾಕೆಟ್ ಮನಿ‘ಅಪ್ಪಾ ನಮಗೆ ಸ್ವಲ್ಪ ದುಡ್ಡು ಬೇಕು’ ಎ೦ದು ಆ ಹುಡುಗರು ಬೆಳಗಿನ ಉಪಹಾರದ ಹೊತ್ತಿನಲ್ಲಿ ಕೇಳಿದಾಗ ಸಿಟ್ಟಾಗುವ ಸರದಿ ಅವರ ಅಪ್ಪನದು.’ ಸಾಧ್ಯವೇ ಇಲ್ಲ.ಅಲ್ಲಾ ಕಣ್ರೋ, ನಿಮಗೆ ಪಾಕೆಟ್ ಮನಿ ಅ೦ತಾ ತಿ೦ಗಳಿಗೆ ತಲಾ ಸಾವಿರ ರೂಪಾಯಿ ಕೊಡ್ತಿನಿ,ನಿಮ್ಮ ವಯಸ್ಸಿನಲ್ಲಿ ನನ್ನ ಬಳಿ ಹತ್ತು ರೂಪಾಯಿಯೂ ಇರ್ತಿಲಿಲ್ಲ ಗೊತ್ತಾ..’? ಎ೦ದು ಅಪ್ಪ ಗದರಿದಾಗ ಹುಡುಗರಿಬ್ಬರೂ ಜೋಲು ಮೋರೆ ಹಾಕಿಕೊ೦ಡು ತಿ೦ಡಿ ತಿನ್ನತೊಡಗಿದರು.ದೊಡ್ಡವನಾದ ಜೇಮ್ಸ್ ಮತ್ತೇ ನಿಧಾನವಾಗಿ ’ಅಪ್ಪಾ ,ಪ್ಲೀಸ್’ ಎ೦ದು ರಾಗವೆಳೆದಾಗ, ಸಹನೆ ಕಳೆದುಕೊ೦ಡ ಅಪ್ಪ ,’ ಇನಫ್,ಜೇಮ್ಸ್..ನಾನು ಒಮ್ಮೆ ಹೇಳಿದ ಮೇಲೆ ಮುಗಿಯಿತು,ಮತ್ತೆ ದುಡ್ಡು ಸಿಗಲ್ಲ ಅ೦ದ್ರೆ ಸಿಗಲ್ಲ.ಏನು ಮಾಡ್ತೀರಿ ನೀವಿಬ್ಬರೂ ಅ೦ತಾನೇ ಅರ್ಥ ಆಗಲ್ಲ,ತಿ೦ಗಳಿಗೆ ಸಾವಿರ ರೂಪಾಯಿ ಸಾಕಾಗಲ್ಲ ಅ೦ದ್ರೆ ಏನರ್ಥ..? ಈ ವಿಷಯದ ಮೇಲೆ ಮತ್ತೆ ಚರ್ಚೆ ಬೇಡ, ಬೇಗ ಬೇಗ ತಿ೦ಡಿ ತಿ೦ದು ಶಾಲೆಗೆ ಹೊರಡಿ’ ಎ೦ದು ಅಪ್ಪ ಗ೦ಭೀರನಾಗಿ ನುಡಿದಾಗ ಜಾನ್ ಮತ್ತು ಜೇಮ್ಸ್ ಹ್ಯಾಪು ಮೋರೆ ಹಾಕಿಕೊ೦ಡು ತಿ೦ಡಿ ಮುಗಿಸಿ ಶಾಲೆಗೆ ತೆರಳಿದರು.

ಜಾನ್ ಮತ್ತು ಜೇಮ್ಸ್ ಇಬ್ಬರೂ ಪೀಟರ್ ಮಸ್ಕರಿನೆಸ್ ರವರ ಮಕ್ಕಳು.ಜಾನ್ ಹನ್ನೆರಡು ವರ್ಷದವನಾದರೇ,ಜೇಮ್ಸ್ ಹದಿನಾರು ವರ್ಷದವನು. ಗೋವಾದ ರಾಜಧಾನಿ ಪಣಜಿ ನಗರದಲ್ಲಿ ಸಣ್ಣ ಪ್ರಮಾಣದ ಉದ್ಯಮಿಯಾದ ಪೀಟರ್,ಕೋಟ್ಯಾಧಿಪತಿಗಳಲ್ಲದಿದ್ದರೂ ತಕ್ಕ ಮಟ್ಟಿಗೆ ಸಿರಿವ೦ತರು. ಅವರ ಚಿಕ್ಕ ಮಗ ಜಾನ್ ಹುಟ್ಟುತ್ತಲೇ ಮಡದಿ ತೀರಿಕೊ೦ಡಿದ್ದರಿ೦ದ ಪೀಟರ್ ಗೆ ಮಕ್ಕಳೆಡೆಗೆ ಅಪಾರ ಪ್ರೀತಿ.ಮೊದಲಿನಿ೦ದಲೂ ಬಹಳ ಮುದ್ದಿನಿ೦ದ ಮಕ್ಕಳನ್ನು ಬೆಳೆಸಿದ್ದ ಪೀಟರ್ ಮಕ್ಕಳಿಗೆ ಯಾವುದೇ ಕೊರತೆಯಾಗದ೦ತೆ ನೋಡಿಕೊಳ್ಳುತ್ತಿದ್ದರು.ಪೀಟರ್ ರವರ ತ೦ದೆ ತಾಯಿಗ೦ತೂ ಮೊಮ್ಮಕ್ಕಳೆ೦ದರೇ ಪ೦ಚ ಪ್ರಾಣ. ತಾಯಿ ಇಲ್ಲದ ಮಕ್ಕಳೆ೦ಬ ಮಮತೆಯಿ೦ದ ,ತ೦ದೆ ತಾಯಿಯ ವಿರೋಧವಿದ್ದರೂ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ತಿ೦ಗಳಿಗೆ ಸಾವಿರ ರೂಪಾಯಿಯಷ್ಟು ಪಾಕೆಟ್ ಮನಿ ಕೊಡುತ್ತಿದ್ದರು ಪೀಟರ್ ಮಸ್ಕರಿನೆಸ್.ಚಿಕ್ಕವಯಸ್ಸಿಗೆ ಕೈತು೦ಬ ಹಣ ಸಿಕ್ಕರೇ ಏನಾಗುತ್ತದೆ..?? ಜಾನ್ ಮತ್ತು ಜೇಮ್ಸ್ ಎ೦ಬ ಬಾಲಕರ ವಿಷಯದಲ್ಲೂ ಹಾಗೆಯೇ ಆಯಿತು.ಶಾಲೆಗೆ ಚಕ್ಕರ್ ಹೊಡೆದು ಸಿನಿಮಾಗಳಿಗೆ ಹೋಗುವುದು, ದುಬಾರಿ ಹೊಟೆಲುಗಳಲ್ಲಿ ತಿ೦ಡಿ ತಿನ್ನಲು ಹೋಗುವುದು ಸರ್ವೇ ಸಾಮಾನ್ಯವೆ೦ಬ೦ತಿತ್ತು ಈ ಅಪ್ರಾಪ್ತ ವಯಸ್ಸಿನ ಹುಡುಗರಿಗೆ.ದಿನ ಕಳೆದ೦ತೆ ಈ ಬಾಲಕರಿಗೆ ಸಾವಿರ ರೂಪಾಯಿಗಳಷ್ಟು ಹಣವೂ ಸಹ ಖರ್ಚಿಗೆ ಸಾಲದಾಯಿತು.ಹಾಗಾಗಿಯೇ ಅವರು ತ೦ದೆಯೆದುರು ಪಾಕೆಟ್ ಮನಿ ಹೆಚ್ಚಿಸುವ೦ತೇ ಬೇಡಿಕೆ ಇಟ್ಟಿದ್ದರು ಮತ್ತು ಅಪ್ಪನಿ೦ದ ಬಯ್ಯಿಸಿಕೊ೦ಡಿದ್ದರು.

ಮತ್ತಷ್ಟು ಓದು »

23
ಮಾರ್ಚ್

ಸಾಯುವ ಕೊನೆ ಕ್ಷಣದಲ್ಲೂ ಆ ಮೂವರ ಬಾಯಲ್ಲಿ ಮೊಳಗಿದ ಮಂತ್ರ…. ಭಾರತ್ ಮಾತಾ ಕೀ ಜೈ!

– ನಿತ್ಯಾನಂದ ವಿವೇಕವಂಶಿ

ಭಗತ್ ಸಿಂಗ್,ರಾಜ್ ಗುರು,ಸುಖ ದೇವ್ಓದುವ ಮುನ್ನ..

ಈ ದೇಶಕ್ಕೆ ಸ್ವಾತಂತ್ರ್ಯವೆಂಬುದು ಸುಮ್ಮನೆ ಬರಲಿಲ್ಲ. ಸುಮಾರು ಆರೂವರೆ ಲಕ್ಷ ವೀರ ವೀರಾಂಗನೆಯರ ಪ್ರಾಣತ್ಯಾಗದ ಫಲವಾಗಿ ಈ ಸ್ವಾತಂತ್ರ್ಯ ದೊರಕಿದೆ. ಅವರು ತಮ್ಮ ನೆತ್ತರು ಹರಿಸಿ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಈ ಸ್ವಾತಂತ್ರ್ಯ ಹೋರಾಟವೆಂಬ ಮಹಾ ಯಜ್ಞದಲ್ಲಿ ತಮ್ಮ ಪ್ರಾಣವನ್ನೇ ಆಹುತಿಯನ್ನಾಗಿ ನೀಡಿದ ವೀರರ ತ್ಯಾಗ ಬಲಿದಾನಗಳು ಅನನ್ಯವಾದವು. ಹೋರಾಟದ ಈ ಇತಿಹಾಸದಲ್ಲಿ ಹಲವಾರು ರೋಚಕ ಘಟನೆಗಳು, ರೋಮಾಂಚನಕಾರಿ ಕಥೆಗಳು, ಅದ್ವಿತೀಯ ತ್ಯಾಗ ಬಲಿದಾನದ ಘಟನೆಗಳಿವೆ. ಅವುಗಳಲ್ಲಿ ಕೆಲವು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದ್ದರೆ, ಇನ್ನು ಕೆಲವು ಅಜ್ಞಾತವಾಗಿ, ಹೊರ ಪ್ರಪಂಚಕ್ಕೆ ಪ್ರಕಟಗೊಳ್ಳದೇ, ಕಾಲಗರ್ಭದಲ್ಲಿ ಹೂತುಹೋಗಿ ಕಣ್ಮರೆಯಾಗಿವೆ. ಹೀಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿ ಉಳಿದಿರುವ ರೋಚಕ ಘಟನೆಗಳಲ್ಲಿ ಭಗತ್‍ಸಿಂಗ್, ರಾಜಗುರು, ಸುಖದೇವ್‍ರ ತ್ಯಾಗ ಬಲಿದಾನಗಳು ಚಿರಸ್ಮರಣೀಯವಾದುದಾಗಿದೆ. ತಮ್ಮ ಮಾತೃಭೂಮಿಯನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಗೊಳಿಸಲು, ದಾಸ್ಯದ ಸಂಕೋಲೆಯನ್ನು ಕಿತ್ತೊಗೆಯಲು ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸಮರವನ್ನೇ ಸಾರಿದ ಈ ಮೂವರು ಕ್ರಾಂತಿಕಾರಿಗಳಿಗೆ ಬ್ರಿಟೀಷ್ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸಿತು. 23 ಮಾರ್ಚ್ 1931 ರಂದು ತಮ್ಮ 23-24 ನೇ ವಯಸ್ಸಿನಲ್ಲಿಯೇ ಈ ಮೂವರು ಕ್ರಾಂತಿಸೋದರರು ನಗುನಗುತ್ತಾ ಬಲಿಗಂಬವನ್ನೇರಿದರು. ದುರದೃಷ್ಟಕರ ಸಂಗತಿಯೆಂದರೆ ನಮಗ್ಯಾರಿಗೂ ಆ ದಿನದ ನೆನಪೇ ಇಲ್ಲ. ಪ್ರತೀ ವರ್ಷ ಮಾರ್ಚ್ 23 ರಂದು ವಾರ್ತಾ ಇಲಾಖೆಯಿಂದ ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಜಾಹಿರಾತು ಬಿಟ್ಟರೆ, ‘ಶಹೀದ್ ಡೇ’ಯನ್ನು ಆಚರಿಸುವ ಕೆಲವು ಸಂಘಟನೆಗಳನ್ನು ಬಿಟ್ಟರೆ ಇಡೀ ದೇಶದಲ್ಲಿ ಎಲ್ಲಿಯೂ ಈ ಅಪೂರ್ವ ಬಲಿದಾನವನ್ನು ಸ್ಮರಿಸಿಕೊಳ್ಳುತ್ತಿಲ್ಲ. ಕಾರಣವೇನೆಂದರೆ ನಮಗೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರೂ ಕೂಡಾ ನೆನಪಿಲ್ಲ.
ಮತ್ತಷ್ಟು ಓದು »

22
ಮಾರ್ಚ್

೨೦೧೪ರ ಚುನಾವಣ ಕಣದ ಸುತ್ತ

– ಡಾ.ಕಿರಣ್ ಎಂ ಗಾಜನೂರು

Modi vs Rahulಭಾರತದಲ್ಲಿ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದೆ.ಹಾಗೆ ನೋಡುವುದಾದರೆ ಭಾರತದಲ್ಲಿ ಇದುವರೆಗೆ ನಡೆದ ಲೋಕಸಭಾ ಚುನಾವಣೆಗಳಿಗಿಂತ ೨೦೧೪ರ ಈ ಲೋಕಸಭಾ ಚುನಾವಣೆ ಹೆಚ್ಚು ಚರ್ಚೆಯಲ್ಲಿದೆ ಮತ್ತು ಜನ ಸಮಾನ್ಯರಲ್ಲಿಯು ಒಂದು ಸಹಜ ಕುತೂಹಲವನ್ನು ಈ ಚುನಾವಣೆ ಹುಟ್ಟುಹಾಕಿದೆ.ಭಾರತದಲ್ಲಿನ ಪ್ರಮುಖ ರಾಜಕೀಯ ಚಿಂತಕರು,ಮಾಧ್ಯಮಗಳು ಈ ವಿದ್ಯಮಾನಕ್ಕೆ ಹಲವಾರು ಕಾರಣಗಳನ್ನು ಗುರುತಿಸಿದ್ದಾರೆ ಅದರಲ್ಲಿ ಬಹಳ ಮುಖ್ಯವಾದದ್ದು

೧) ಆಡಳಿತಾತ್ಮಕ ಮತ್ತು ಭ್ರಷ್ಟಾಚಾರದ ಕಾರಣಕ್ಕಾಗಿ (ಮುಖ್ಯವಾಗಿ ಬೆಲೆ ಎರಿಕೆ) ರೂಪಿತಗೊಂಡ ಕಾಂಗ್ರೆಸ್ಸ್ ವಿರೋಧಿ ನಿಲುವು
೨) ಬಿ.ಜೆ.ಪಿ ತನ್ನ ಪ್ರಧಾನಿ ಆಭ್ಯರ್ಥಿ ನರೆಂದ್ರ ಮೋದಿಯವರ ಹಿನ್ನಲೆಯಲ್ಲಿ ರೂಪಿಸಿಕೊಂಡ ಜನಪ್ರಿಯತೆ.

ಹಾಗಾದರೆ, ೨೦೧೪ ರ ಚುನಾವಣೆ ಈ ಎರಡು ನಿಲುಗಳ ಆಧಾರದಲ್ಲಿಯೆ ನಡೆಯುತ್ತದಾ? ದೇಶದ ಎಲ್ಲಾ ಭಾಗದ ಮತದಾರ ಈ ನಿಲುವುಗಳ ಆಧಾರದಲ್ಲಿಯೆ ಮತ ಚಲಾಯಿಸುತ್ತಾನಾ?  ಎಂಬ ಪ್ರಶ್ನೆಯನ್ನು ಭಾರತದಲ್ಲಿ ಇದುವರೆಗೆ ನಡೆದ ಲೋಕಸಭಾ ಚುನಾವಣೆಗಳ ಹಿನ್ನಲೆಯಲ್ಲಿ ವಿಶ್ಲೇಷಿಸಿ ಕೇಳಿಕೊಂಡರೆ, ’ಖಂಡಿತಾ ಇಲ್ಲಾ’ ಎಂಬ ಉತ್ತರವನ್ನೂ ಯಾರಾದರೂ ನೀರಿಕ್ಷಿಸಬಹುದಾಗಿದೆ…! ಏಕೆಂದರೆ ಕಳೆದ ಹತ್ತು ವರ್ಷಗಳ ಕಾಲ ಈ ದೇಶವನ್ನು ಆಳಿದ ಯುಪಿಎ ಸರ್ಕಾರ ಹಲವಾರು ಹಗರಣಗಳನ್ನು ತನ್ನ ಮೇಲೆ ಎಳೆದುಕೊಂಡಿದ್ದರೂ ಆದರ ಜೊತೆ ಜೊತೆಗೆ ’ಆರ್.ಟಿ.ಐ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನ”ಯಂತಹ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಸಮಾಜದ ಹಲವು ವರ್ಗಗಳ ಜನರ ಬೆಂಬಲವನ್ನು ಗಳಿಸಿಕೊಂಡಿದೆ .ಅದೂ ಅಲ್ಲದೆ, ಈ ದೇಶವನ್ನು ಹೆಚ್ಚು ಕಾಲ ಆಳಿದ ಕಾಂಗ್ರೆಸ್ಸ್ ಪಕ್ಷ ಅದರದ್ದೆ ಆದಂತಹ ಒಂದು ಮತದಾರರ ವರ್ಗ ಮತ್ತು ಬುದ್ದಿಜೀವಿಗಳ ಗುಂಪನ್ನು ಸೃಷ್ಟಿಸಿಕೊಂಡಿದೆ ಅವರು ಎಂದಿಗೂ ಕಾಂಗ್ರೆಸ್ಸ್ ಅನ್ನು ಬೆಂಬಲಿಸುತ್ತಾರೆ ಮತ್ತು ಚುನಾವಣೆಯಲ್ಲಿ ಈ ಅಂಶ ಖಂಡಿತವಾಗಿ ಪ್ರಭಾವ ಬೀರಲಿದೆ.ಇದರ ಜೊತೆಗೆ ದೇಶದ ಭವಿಷ್ಯದ ಪ್ರಧಾನಿ ಎಂದು ಕಾಂಗ್ರೆಸ್ಸ್ ವಲಯದಲ್ಲಿ ಗುರುತಿಸಿಕೊಂಡಿರುವ ರಾಹುಲ್ ಗಾಂಧಿಯವರು ಇತ್ತಿಚೆಗೆ “ಭಾರತಕ್ಕೆ ಬೇಕಿರುವುದು ಇಲ್ಲಿನ ವಿವಿಧತೆಯನ್ನು ಅವುಗಳ ನೆಲೆಯಲ್ಲಿಯೆ ಗುರುತಿಸಿ ಬೆಳೆಸಬೇಕಾದ ರಾಜಕೀಯ ಪಕ್ಷವೆ ಹೊರತು ವ್ಯಕ್ತಿ ಕೇಂದ್ರಿತ ಪಕ್ಷವಲ್ಲ” ಎಂಬ ಮಾದರಿಯ ಪ್ರಜಾಸತ್ತಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಕಾಂಗ್ರೆಸ್ಸಿನಲ್ಲಿ ತಮ್ಮ ಈ ನಿಲುವನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದಕ್ಕೆ ಉದಾಹರಣೆ ಇತ್ತೀಚೆಗೆ ಕಾಂಗ್ರೆಸ್ಸ್ ಪಕ್ಷದೊಳಗೆ ನಡೆದ ಆಂತರಿಕ ಚುನಾವಣೆ.ಈ ಅಂಶವು ದೇಶದ ಮಧ್ಯಮ ವರ್ಗದ ಮತದಾರರನ್ನು ಖಂಡಿತಾ ಸೆಳೆಯುತ್ತದೆ.

ಮತ್ತಷ್ಟು ಓದು »

21
ಮಾರ್ಚ್

ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-2

– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ

Social Science Column Logoಸಾರ್ವಭೌಮ ಪ್ರಭುತ್ವ(State) ಮತ್ತು ಸಾರ್ವಜನಿಕ ವಲಯ

ಇಂದಿನ ಭಾರತೀಯ ಪ್ರಭುತ್ವ ಎನ್ನುವ ಕಲ್ಪನೆಯು ಪಶ್ಚಿಮದ ರಾಜಕೀಯ ವ್ಯವಸ್ಥೆಯಿಂದಲೇ ಎರವಲಾಗಿ ಬಂದಿದೆ. ಈ ವಿಷಯವು ನಿಸ್ಸಂಶಯವಾಗಿ ಇಂದು ರಾಜ್ಯಶಾಸ್ತ್ರದ ವಲಯದಲ್ಲಿ ಒಂದು ಸಾಮಾನ್ಯ ತಿಳುವಳಿಕೆಯೇ ಆಗಿದೆ. ಅದನ್ನು ಒಂದು ರೀತಿಯಲ್ಲಿ ಸಕಾರಾತ್ಮಕವಾಗಿಯೇ ವಿವರಿಸಿಕೊಳ್ಳಲಾಗಿದೆ. ಪಶ್ಚಿಮದ ವಿವಿಧ ರಾಷ್ಟ್ರಗಳಲ್ಲಿ ನೂರಾರು ವರ್ಷಗಳಿಂದ ಪ್ರಾಯೋಗಿಕವಾಗಿ ದೃಢಪಡಿಸಿಕೊಂಡು, ಅಳವಡಿಸಿಕೊಂಡು ಬರಲಾದ ರಾಜಕೀಯ ರಚನೆಗಳಿಂದ ಅತ್ಯುತ್ತಮವಾದ ಅಂಶಗಳನ್ನು ಭಾರತದ ಸಂವಿಧಾನ ಕರ್ತೃಗಳು ಪಡೆದು ಭಾರತಕ್ಕೆ ಅಳವಡಿಸಿದ್ದಾರೆ ಎನ್ನುವುದೇ ಆ ಹೆಗ್ಗಳಿಕೆಯಾಗಿದೆ. ಆದರೆ ಈ ಹೆಗ್ಗಳಿಕೆಯ ಮೇಲೆ ಅಳವಡಿಸಿಕೊಂಡಿರುವ ರಾಜಕೀಯ ರಚನೆಗಳು, ಇಲ್ಲಿಯ ಸಾಮಾಜಿಕ ಸಂದರ್ಭದಲ್ಲಿ ಇಲ್ಲಿಯ ಸಾಂಸ್ಕೃತಿಕ ಹಿನ್ನೆಲೆಯ ಜನರು ಇವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅವುಗಳಿಗೆ ಪೂರಕವಾಗಿ ನಡೆದುಕೊಳ್ಳದೇ ಇರುವುದರಿಂದ, ಅವು ಇಲ್ಲಿ ಅಪಭ್ರಂಶ (distortion) ಕ್ಕೆ ಒಳಗಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆಯೇ ಎನ್ನುವಂತಹ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪಶ್ಚಿಮದಲ್ಲಿ ಪ್ರಭುತ್ವ ಪರಿಕಲ್ಪನೆ ಬೆಳವಣಿಗೆಯ ಸ್ವರೂಪಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ನಮಗೆ ಗೊತ್ತಿರುವ ಹಾಗೆ ಸ್ಟೇಟ್ ಎನ್ನುವುದು ಒಂದು ಸಾರ್ವಭೌಮ ಸಂಸ್ಥೆ. ಯಾರೂ ಪ್ರಶ್ನಿಸಲಾರದ ಅಧಿಕಾರ ಅದಕ್ಕಿದೆ. ಜನರ ಜೀವನವು ಈ ಸ್ಟೇಟ್ನ ಸಾರ್ವಭೌಮ ಕಾನೂನುಗಳ ನಿಯಂತ್ರಣ ಮತ್ತು ನಿರ್ದೇಶನಕ್ಕೆ ಒಳಪಟ್ಟು ನಡೆಯಬೇಕು. ಈ ಸ್ವರೂಪದ ಸ್ಟೇಟ್ ಎಂದೆಂದಿಗೂ ಸಾರ್ವತ್ರಿಕವಾಗಿಯೇ ಇತ್ತೇ? ಖಂಡಿತವಾಗಿಯೂ ಇಲ್ಲ. ಈ ರೀತಿಯ ಸ್ಟೇಟ್ ಬೆಳೆದು ಬಂದಿದ್ದು ಪಶ್ಚಿಮ/ಯೂರೋಪಿನಲ್ಲಿ ಮತ್ತು ಈ ರೀತಿಯ ಸಾರ್ವಭೌಮ ನಿಯಂತ್ರಕ ಮತ್ತು ನಿರ್ದೇಶಕನ ಸ್ವರೂಪವನ್ನು ಪಡೆದುಕೊಂಡಿದ್ದು ಹೆಚ್ಚುಕಡಿಮೆ 17-18ನೇ ಶತಮಾನದ ನಂತರ ಎಂದೇ ಹೇಳಬಹುದು (Mukherji, Partha Nath, 2010). ಮತ್ತಷ್ಟು ಓದು »