ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 6, 2014

ಆತ್ಮವಿಶ್ವಾಸ

‍ನಿಲುಮೆ ಮೂಲಕ

– ಮಯೂರಲಕ್ಷ್ಮಿ

ಆತ್ಮವಿಶ್ವಾಸಯಾವುದೇ ಪ್ರಯತ್ನವನ್ನೇ ಮಾಡದೆಯೇ ‘ನಮ್ಮಿಂದಾಗುವುದಿಲ್ಲ” ಎಂದು ಒಪ್ಪಿಕೊಳ್ಳಬಾರದು. ಆರಂಭದಲ್ಲಿ ನಮ್ಮ ಪ್ರಯತ್ನಗಳಲ್ಲಿ ಸೋಲೆದುರಾಗುವುದು ಸಹಜ, ಆದರೆ ಎದೆಗುಂದದೆ, ಆತ್ಮವಿಶ್ವಾಸವನ್ನೂ ಕಳೆದುಕೊಳ್ಳದೆ ನಮ್ಮ ಯತ್ನದಲ್ಲಿರಬೇಕು. ಪ್ರಯತ್ನ ನಮ್ಮದು, ಫಲ ನಮ್ಮದಲ್ಲ ಎಂಬುವುದರ ಅರಿವು ಅತಿಮುಖ್ಯ. ಎಂತಹ ಕ್ಲಿಷ್ಟ ಪರಿಸ್ಥಿತಿ ಎದುರಾದಾಗಲೂ ಧೈರ್ಯದಿಂದ ಎದುರಿಸಿ ಗೆದ್ದ ಮಹಾನ್ ವ್ಯಕ್ತಿಗಳ ನಿದರ್ಶನದಿಂದ ನಾವು ಕಲಿಯಬೇಕು. “ನಾವು ಗೆಲ್ಲಲೇ ಬೇಕೆಂಬ ಸಂಕಲ್ಪದೊಂದಿಗೆ ಮಾಡುವುದೇ ಉತ್ತಮ ಪ್ರಯತ್ನಗಳು” ಎಂದಿದ್ದಾರೆ ಅಬ್ರಹಾಂ ಲಿಂಕನ್.

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥ್ಯೇ:ı
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ:ıı

ಇದೊಂದು ಪಂಚತಂತ್ರದ ವಾಕ್ಯ, ಇದರರ್ಥ: ನಾವು ಕಾರ್ಯದಲ್ಲಿ ತೊಡಗಿ ಮುಂದುವರೆದರೆ ಮಾತ್ರವೇ ಯಶಸ್ಸು ಸಿಗುವುದು, ಆಸೆ-ಆಕಾಂಕ್ಷೆಗಳಿಂದಷ್ಟೇ ಫಲ ದೊರೆಯದು, ತಾನು ಸುಮ್ಮನೆ ಮಲಗಿದ್ದರೆ ಸಿಂಹದ ಬಾಯಲ್ಲಿ ತಾವಾಗಿಯೇ ಪ್ರಾಣಿಗಳು ಬಂದು ಬೀಳುವುದಿಲ್ಲ, ಆಹಾರಕ್ಕಾಗಿ ಅದೂ ಪರಿಶ್ರಮಿಸಲೇಬೇಕಲ್ಲವೇ?

ತನ್ನ ಜೀವನದಲ್ಲಿ ಸೋಲು-ಗೆಲುವುಗಳ ಸರಮಾಲೆಗಳನ್ನೇ ಕಂಡರೂ ಪ್ರಯತ್ನಗಳನ್ನು ನಂಬಿದ್ದ ಅರ್ನೆಸ್ಟ್ ಹೆಮ್ಮಿಂಗ್‍ವೇ ಎಂಬ ಅಮೇರಿಕಾದ 20ನೆಯ ಶತಮಾನದ ನೋಬೆಲ್ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಬರಹಗಾರ ಹಾಗೂ ಪತ್ರಕರ್ತನು ಹೀಗೆ ಹೇಳಿದ್ದಾನೆ:
“Optimism can keep a fool from accepting failure.”
ಒಬ್ಬ ಮೂರ್ಖನಿಗೂ ಸೋಲುಗಳನ್ನೊಪ್ಪಿಕೊಳ್ಳದಂತೆ ತಡೆಯುವುದು ಭರವಸೆ.

ಇದಕ್ಕೆ ಪೂರಕವಾಗಿರುವ ಒಂದು ಹಳೆಯ ಸ್ಫೂರ್ತಿ ಕಥೆ. ಸೋಲನ್ನೇ ಅರಿಯದ ಸ್ಕಾಟ್‍ಲ್ಯಾಂಡ್‍ನ ದೊರೆ ರಾಬರ್ಟ್ ಬ್ರೂಸ್ ತನ್ನ ಸರಣಿ ಸೋಲುಗಳಿಂದ ಹಣ್ಣಾಗಿ ಒಮ್ಮೆ ಯುದ್ಧಭೂಮಿಯಿಂದ ಓಡಿಹೋಗಿ ಗುಹೆಯೊಂದರಲ್ಲಿ ಅವಿತಿದ್ದ. ಅಲ್ಲಿದ್ದ ಜೇಡರ ಹುಳವೊಂದು ಗುಹೆಯ ಒಂದು ಬದಿಯಿಂದಾ ಮತ್ತೊಂದು ಬದಿಯನ್ನು ಮುಟ್ಟುವ ಯತ್ನದಲ್ಲಿ ಕೆಳಗೆ ಬಿದ್ದರೂ ತನ್ನ ಪುಟ್ಟ ಬಲೆಗಳನ್ನು ನೇಯುತ್ತಾ ಏಳನೇ ಬಾರಿ ಯಶಸ್ವಿಯಾದದ್ದನ್ನು ಕಂಡು ತಾನೂ ಅಂತೆಯೇ ಆಗಬೇಕೆಂದು ನಿರ್ಧರಿಸಿ ಮತ್ತೆ ಯುದ್ಧದಲ್ಲಿ ಜಯಗಳಿಸಿದನು. ಸೋಲಿನ ಮೆಟ್ಟಿಲುಗಳನ್ನು ಗೆಲುವಿನ ಸೋಪಾನವಾಗಿ ಪರಿಗಣಿಸಿ ನಮ್ಮ ಯತ್ನ ಬಿಡಬಾರದು. ಇರುವೆಗಳು ತಮಗಿಂತಲೂ ಭಾರವಾದ ವಸ್ತುಗಳನ್ನು ಎಡಬಿಡದೆ ಹೊತ್ತೊಯ್ಯುವುದು ಸಫಲ ಪ್ರಯತ್ನವೇ!

ಚಿತ್ರ ಕೃಪೆ :http://www.pickthebrain.com

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments