– ಮಯೂರಲಕ್ಷ್ಮಿ
ನಿಜವಾದ ಜ್ಞಾನವೆಂದರೆ ಓದಿ ತಿಳಿಯುವುದೋ? ಹಿರಿಯರ ಅನುಭವಗಳಿಂದ ಅರಿಯುವುದೋ? ಹೀಗೊಂದು ಜಿಜ್ಞಾಸೆ ಕಾಡುವುದುಂಟು. ಲಿಪಿಗಳ ಅನ್ವೇಷಣೆಯೇ ಇರದಿದ್ದ ಕಾಲದಲ್ಲಿ ಎಲ್ಲವನ್ನೂ ಅಸಾಮಾನ್ಯ ಸ್ಮರಣ ಶಕ್ತಿಯಿಂದ ಅರಿತು ಕಲಿಯುತ್ತಿದ್ದರು. ನಂತರ ಪುಸ್ತಕಗಳ ಸಹಾಯದಿಂದ ಓದಿ, ಬರೆದು ಕಲಿಯಲು ಸಮಯವೇನೋ ಹಿಡಿಯುತ್ತಿತ್ತು, ಆದರೆ ಅದು ಸಹಜವಾಗಿರುತ್ತಿತ್ತು. ಇಂದಿನ ನಮ್ಮ ಕಲಿಕಾ ರೀತಿಯಲ್ಲಿ ಆ ಸಹಜತೆಯನ್ನು ನಾವು ಕಾಣುತ್ತೇವೆಯೇ? ಒತ್ತಡವಿಲ್ಲದೆ ಕಲಿಯಲು ನಮ್ಮ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ನಮ್ಮ ಶಿಕ್ಷಣದಿಂದ ನಾವು ಗಳಿಸುವ ಪದವಿಗಳು ನಿಜವಾದ ಜ್ಞಾನವಾಗುವುದೇ? ನಮ್ಮ ಇಂದಿನ ವಿದ್ಯಾರ್ಥಿಗಳು ಮಾಹಿತಿಯನ್ನು ನಿಜವಾದ ಅಧ್ಯಯನದಿಂದ ಪಡೆಯುತ್ತಿದ್ದಾರೆಯೇ? ಇಲ್ಲ, ಓದಿ ಕಲಿಯುವ ತಾಳ್ಮೆ ಈಗಿಲ್ಲ. ಇಂದಿನ ಮಾಹಿತಿ ತಂತ್ರಜ್ಞಾನದ ಈ ವೇಗದ ಯುಗದಲ್ಲಿ ಎಲ್ಲವೂ ಕಣ್ಣ ಮುಂದೆ ಕೈಬೆರಳುಗಳ ಚಲನೆಯಿಂದಲೇ ಸಾಧ್ಯವಾಗುತ್ತಿದೆ.
ನಮ್ಮ ಬಹುತೇಕ ವಿದ್ಯಾರ್ಥಿಗಳು ಕೇವಲ ಮೂಲಕ ಮಾಹಿತಿಯನ್ನು ಕಲೆಹಾಕುತ್ತಾರೆ. ಅವುಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆಯೇ! ಉತ್ತಮ ಕೈಬರಹಕ್ಕೆ ವಿಶೇಷ ಅಂಕಗಳಿರುತ್ತಿದ್ದ ಕಾಲವೆಲ್ಲಿ? ಟೈಪ್ ಮಾಡುತ್ತಾ ಬರೆಯುವ ಅಭ್ಯಾಸವೇ ತಪ್ಪಿಹೋಗುತ್ತಿರುವ ಈ ಕಾಲವೆಲ್ಲಿ? ಈ ಎಲ್ಲಾ ‘ಶಾರ್ಟ್ ಕಟ್’ಗಳಿಂದಾಗಿ ಕೇಳುವ ಕೇಳಿದ್ದನ್ನು ಬರೆಯುವ ವ್ಯವಧಾನವೂ ಮರೆಯಾಗುತ್ತಿದೆ. ನಾವು ಕಲಿತ ಸಮಯವೆಷ್ಟು? ಅರ್ಥ ಮಾಡಿಕೊಂಡದ್ದೆಷ್ಟು? ಈ ವಿವೇಚನೆಯಿದೆಯೇ?