ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವ ಹಾಗೂ ಪ್ರತಿನಿಧಿಗಳು- ಭಾಗ:2
-ಶ್ರೀ. ಆಯನೂರು ಮಂಜುನಾಥ್, ರಾಜ್ಯಸಭಾ ಸದಸ್ಯರು (-ಅಕ್ಷರಕ್ಕೆ ಇಳಿಸಿದವರು: ಸಂತೋಷ ಈ. ಕುವೆಂಪು.ವಿ.ವಿ, ಶಂಕರಘಟ್ಟ)-ಭಾಗ 1
ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕ ಪಾಠ ಮಾಡುವಾಗ ಒಂದು ಹುಡಗಿಯ ಹೆಗಲ ಮೇಲೆ ಕೈ ಹಾಕಿಕೊಂಡು ಪಾಠ ಮಾಡಿದ್ದಾನೆ. ಇದರ ಪರಿಣಾಮ ದೊಡ್ಡ ಗಲಾಟೆಯಾಗಿ ನಾನು ಹೋಗಬೇಕಾಯಿತು. ಆದ್ದರಿಂದ ನಾನು ಹೋದೆ, ಡಿಡಿಪಿಐಗೆ ಹೇಳಿ ಅಮಾನತು ಮಾಡಿಸಿದೆ. ಆದರೆ ಗ್ರಹಚಾರಕ್ಕೆ ಅವನು ನನ್ನ ಜಾತಿಯವನು ಆಗಿದ್ದ, ಹಾಗಾಗಿ ನನ್ನ ಜಾತಿಯವರು ಎಲ್ಲಾ ಬಂದರು. ಯಾರು ಈ ರೀತಿಯ ಕೆಲಸ ಮಾಡಿಲ್ಲವೇನು? ಏನೋ ಹುಡುಗ ತಪ್ಪು ಮಾಡಿದ್ದಾನೆ. ಕಪಾಳಕ್ಕೆ ಹೊಡೆದು ಬುದ್ಧಿ ಹೇಳ್ತಿವಿ ಬಿಡು. ನೀನು ನಮ್ಮವನಾಗಿ ಹೀಗೆನಾ ಮಾಡೋದು? ಅಂತ ಮಾತನಾಡಿದ್ದರು. ಅದಕ್ಕೆ ನಾನು ಹೇಳಿದೆ ಅವನು ನನ್ನ ಮಗಳ ಮೇಲೆ, ನಿನ್ನ ಮಗಳ ಮೇಲೆ ಕೈ ಹಾಕಿಲ್ಲ ಹಾಗಾಗಿ ನಿನಗೆ ಏನೂ ಅನಿಸುತ್ತಿಲ್ಲ. ಅಕಸ್ಮಾತ್ ಅವನು ನಿನ್ನ ಮಗಳ ಮೇಲೆ ಕೈ ಹಾಕಿದ್ದರೆ? ಎಂದು ಕೇಳಿದೆ. ಅದಕ್ಕೆ ಅವರು ನನ್ನ ಮೇಲೆ ಕೋಪಗೊಂಡು ಹೋದರು. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಇಂಜಿನಿಯರನ ಅಮಾನತು ಮಾಡಿಸಿದೆ. ಅವನು ನನ್ನ ಜಾತಿಯವನೆ ಆಗಿದ್ದ. ಅದಕ್ಕೆ ನಮ್ಮ ಜಾತಿಯವರೆಲ್ಲ ಸೇರಿ ನಮ್ಮ ಜಾತಿಯ ವಿರುದ್ಧ ಇದ್ದಾನೆ ಎಂದು ಹಣೆಪಟ್ಟಿ ಕಟ್ಟುತ್ತಾರೆ. ಈ ರೀತಿಯ ಜನರ ಮಧ್ಯೆ ಹೇಗೆ ರಾಜಕಾರಣ ಮಾಡುವುದು? ಹೇಗೆ ಅಭಿವೃಧ್ಧಿ ರಾಜಕಾರಣ ಮಾಡುವುದು? ನಮ್ಮ ನಿಲವುಗಳನ್ನು ಹೇಗೆ ಪ್ರಕಟ ಮಾಡುವುದು? ನಾವು ನಂಬಿರುವ ಸಿದ್ಧಾಂತಗಳನ್ನು ಓರೆ ಹಚ್ಚಿ ಎಲ್ಲಿ ನೋಡಣ? ಒಂದು ರೀತಿಯಲ್ಲಿ ಶಾಸಕರಾದ ಮೇಲೆ ಸಂಸದರಾದ ಮೇಲೆ ನಮ್ಮ ವ್ಯಕ್ತಿತ್ವ ಎಲ್ಲಿ ಕರಿಗಿ ಹೋಗುತ್ತಿದೆಯೋ ಎಂಬ ಭಯ ನಮ್ಮಗಿದೆ.
ಇವತ್ತು ಮತದಾರರ ನಿರೀಕ್ಷೆ ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಜನರು ತಮ್ಮ ಖಾಸಗಿ ಜೀವನದ ಕೆಲವು ಕಾರ್ಯಕ್ರಮಗಳಿಗೆ ಹಣವನ್ನು ರಾಜಕಾರಣಿಗಳಿಂದ ನೀರಿಕ್ಷಿಸುತ್ತಾರೆ. ಉದಾ:- ಮದುವೆ, ಆಸ್ಪತ್ರೆ ಖರ್ಚು, ಸಾವುಗಳಿಗೆ. ಜೊತೆಗೆ ಜಾತಿಯ ನಿರೀಕ್ಷೆ, ಏರಿಯಾ ಮನೆ ಮುಂದೆ ರಸ್ತೆ ಮಾಡಿಕೊಡಿ. ಹೊಸ ಚರಂಡಿ ಮಾಡಿಸಿ ಎನ್ನುವ ಮೂಲಕ ಅವರಲ್ಲಿ ವ್ಯಕ್ತಿಗತವಾಗಿ ತಮ್ಮ ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸುತ್ತಾರೆಯೇ ಹೊರತು ಕ್ಷೇತ್ರದ ಮತದಾರನಾಗಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರ ನಿರೀಕ್ಷೆ ಇರುವುದಿಲ್ಲ. ಅವರ ನಿರೀಕ್ಷೆಗಳು ಯಾವ ಸ್ವರೂಪದಲ್ಲಿ ಇರುತ್ತವೆ ಎಂದರೆ, ನಮಗೆ ಓಟ್ ಬೇಕು ಅಂದರೆ ಅವರು ಕೇಳುವ ಕಾಲೇಜಿನಲ್ಲಿ ಸೀಟು ಕೊಡಿಸಬೇಕು. ಅವರ ಮಕ್ಕಳಿಗೆ ಕೆಲಸ ಕೊಡಿಸಬೇಕು. ಆಸ್ಪತ್ರೆಗೆ ಹೋದರೆ ಡಾಕ್ಟರಿಗೆ ಪೋನ್ ಮಾಡಿ ಹೇಳಬೇಕು. ಅವರ ಮಕ್ಕಳು ತಪ್ಪು ಮಾಡಿದರೆ ಅವರನ್ನು ಪೋಲಿಸ್ ಠಾಣೆಯಿಂದ ಬಿಡಿಸಬೇಕು. ಅರ್ಹತೆಯಿಲ್ಲದವನಿಗೆ ಸೀಟು ಮತ್ತು ಕೆಲಸ ಕೊಡಿಸಬೇಕು. ಎಲ್ಲಿಂದ ಎಲ್ಲಿಗೆ ನಿರೀಕ್ಷೆ ಅರ್ಥವಾಗುವುದಿಲ್ಲ. ಈ ರೀತಿಯ ವ್ಯವಸ್ಥೆಯ ಮಧ್ಯೆ ರಾಜಕಾರಣಿಗಳಿಗೆ ನಿತ್ಯ ಸವಾಲುಗಳಿವೆ.
ಪ್ರಸ್ತುತದಲ್ಲಿ ಭ್ರಷ್ಟಚಾರ ಮಾಡುವುದೇ ರಾಜಕಾರಣಿಗಳು ಎಂಬ ಮಾತು ಇದೆ. ಹೌದು ಅ ಮಾತು ನಿಜವಾಗಿರಬಹುದು. ರಾಜಕಾರಣಿಗಳು ಕೋಟಿಗಟ್ಟಲೆ ಹಣ ಮಾಡಿರಬಹುದು. ಆದರೆ ಭ್ರಷ್ಟಚಾರವನ್ನು ಏಕೆ ಕೇವಲ ಹಣಕ್ಕೆ ಮಾತ್ರ ಸೀಮಿತಗೊಳಿಸುತ್ತಿರ. ಭ್ರಷ್ಟಚಾರವನ್ನ ಕೇವಲ ಲಂಚವನ್ನು ಕೊಡುವ ಮತ್ತು ತೆಗೆದುಕೊಳ್ಳುವುದಕ್ಕೆ ಮಾತ್ರ ಸೀಮಿತಗೊಳಿಸಿತ್ತಿರುವುದರಲ್ಲಿ ಅತ್ಯಂತ ಬುದ್ದಿವಂತಿಕೆ ಇದೆ. ಆದರೆ ಭ್ರಷ್ಟಚಾರವೆಂದರೆ ಸಮಾಜ ವಿರೋಧಿಯಾದ ಎಲ್ಲಾ ಆಚರಣೆಗಳು ಭ್ರಷ್ಟಚಾರವಾಗಬೇಕಲ್ವ? ಓಟ್ಗೆ ಹಣ ಕೇಳುವುದು ಭ್ರಷ್ಟಚಾರವಾಗುವುದಿಲ್ಲವ? ವಿಶ್ವವಿದ್ಯಾನಿಲಯಗಳ ಪ್ರೊಫೆಸರ್ಗಳು ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡದೇ ಸಂಬಳವನ್ನು ತೆಗೆದುಕೊಂಡರೆ ಅದು ಭ್ರಷ್ಟಚಾರ ಆಗುವುದಿಲ್ಲವ? ಅಂದರೆ ನಮ್ಮ ಸೇವೆಗೆ ಕೊಡುವ ಹಣವನ್ನು ಸೇವೆಯೇ ಮಾಡದೆ ತೆಗೆದುಕೊಂಡರೆ ಅದು ಭ್ರಷ್ಟಚಾರ ಆಗುವುದಿಲ್ಲವ? ಒಬ್ಬ ಡಾಕ್ಟರ್ ಒಬ್ಬ ರೋಗಿಯ ಮೇಲೆ ಮಾನವೀಯತೆ ತೋರದೆ ಹಣಕ್ಕೆ ಪ್ರಾಧಾನ್ಯತೆ ಕೊಟ್ಟರೆ ಅದು ಭ್ರಷ್ಟ ಆಚರಣೆ ಅಲ್ಲವ? ಜನರಿಗೆ ಆಧ್ಯಾತ್ಮಿಕ ಮತ್ತು ಸನ್ಮಾರ್ಗಗಳನ್ನು ಹೇಳವುದನ್ನು ಬಿಟ್ಟು ಬರೀ ಶಿಕ್ಷಣ ಸಂಸ್ಥೆಗಳನ್ನು ತೆರದು ಹಣ ಮಾಡಿಕೊಳ್ಳುತ್ತಿದ್ದರೆ ಅದು ಭ್ರಷ್ಟ ಆಚರಣೆ ಅಲ್ಲವ? ನಮ್ಮ ನಮ್ಮ ಮನಸ್ಸುಗಳನ್ನು ನಮ್ಮ ವ್ಯವಸ್ಥೆಯಲ್ಲಿ ನೋಡುವುದಾದರೆ ನಮ್ಮ ಭ್ರಷ್ಟಚಾರದ ವಿವಿಧ ರೂಪಗಳನ್ನು ನೋಡಬಹುದಾಗಿದೆ. ನಮ್ಮ ಮನೆಮಂದಿಯೆಲ್ಲ ಬಸ್ಸಿನಲ್ಲಿ ಹೋಗುತ್ತಿರುವಾಗ ಕಂಡಕ್ಟರ್ ಮರೆತು 10 ರೂ ಹೆಚ್ಚಾಗಿ ಕೊಟ್ಟುಬಿಟ್ಟರೆ ನಾವು ಅದಕ್ಕೆ ಖುಷಿ ಪಡೆತ್ತಿವೆಯೇ ಹೊರತು ಅದನ್ನು ವಾಪಸು ಕೊಡುವುದಿಲ್ಲ. ಇದು ಭ್ರಷ್ಟಚಾರವಲ್ಲವೇ? ಈ ತರಹದಲ್ಲಿ ಇಡೀ ವ್ಯವಸ್ಥೆ ಒಂದಲ್ಲೊಂದು ರೂಪದಲ್ಲಿ (ಕೇವಲ ಹಣ ಮಾಧ್ಯಮ ಮಾತ್ರವಲ್ಲ) ಭ್ರಷ್ಟಚಾರವಾಗುತ್ತಿರುವುದು ಕಾಣಬಹುದಾಗಿದೆ. ಇವತ್ತು ನ್ಯಾಯದೀಶರು ಭ್ರಷ್ಟರಾಗುತ್ತಿದ್ದಾರೆ. ಇವತ್ತು ರಾಜ್ಯದಲ್ಲಿ ಲೋಕಯುಕ್ತನನ್ನು ಮಾಡಲಿಕ್ಕೆ ಒಳ್ಳೆಯ ನ್ಯಾಯದೀಶ ಸಿಗಲಿಲ್ಲ. ಇವತ್ತು ದಿನನಿತ್ಯ ಪಾಠ ಮಾಡುವ ಮಾಧ್ಯಮಗಳು ಭ್ರಷ್ಟಚಾರದಿಂದ ಮುಕ್ತರಾಗಿದ್ದಾರ? ಇವತ್ತು ಭ್ರಷ್ಟಚಾರ ಎಲ್ಲಿ ಇಲ್ಲ? ಇವತ್ತು ಹಿಪೋಕ್ರಟಿಕ್ ವರ್ತನೆಯ ವ್ಯವಸ್ಥೆಯ ನಡುವೆ ರಾಜಕಾರಣ ಮಾಡುವ ಬಹಳ ದೊಡ್ಡ ಸವಾಲು ಪ್ರಮಾಣಿಕ ರಾಜಕಾರಣಿಗೆ ಇದೆ.
ಇವತ್ತು ವಿದ್ಯಾವಂತರು ಹೆಚ್ಚು ಭ್ರಷ್ಟರಾಗಿದ್ದಾರೆ ಅಂತ ಅನಿಸುತ್ತದೆ. ಏಕೆಂದರೆ ಚುನಾವಣೆ ಸಮಯದಲ್ಲಿ ಸರ್ಕಾರಿ ನೌಕರರು ಮತ್ತು ವಿದ್ಯಾವಂತರು ಸಹ ಓಟ್ಗಾಗಿ ಹಣವನ್ನು ಕೇಳುತ್ತಿದ್ದಾರೆ. ಒಬ್ಬ ಅವಿದ್ಯಾವಂತ ಅಥವಾ ಕೂಲಿ ಕಾರ್ಮಿಕನಿಗೆ ರಾಜಕಾರಣಿಗಳು ಹಣವನ್ನು ಕೊಟ್ಟ ಓಟನ್ನು ಕೊಂಡುಕೊಳ್ಳುತ್ತಿದ್ದಾರೆ. ಆ ಕೂಲಿ ಕಾರ್ಮಿಕ ಓಟಿಗೆ ಎಲ್ಲಾ ಪಕ್ಷಗಳ ಬಳಿ ಹಣವನ್ನು ಪಡೆದಿದ್ದರು ಯಾವುದೋ ಒಂದು ಪಕ್ಷಕ್ಕೆ ಓಟನ್ನು ಹಾಕಿ ತನ್ನ ಋಣವನ್ನು ತೀರಿಸುತ್ತಾನೆ. ಆದರೆ ವಿದ್ಯಾವಂತರು ಮತ್ತು ಸರ್ಕಾರಿ ನೌಕರ ಹಣವನ್ನು ಪಡೆಯುವುದಲ್ಲದೆ ಓಟನ್ನು ಮಾಡದೆ ಮನೆಯಲ್ಲೇ ಕಾಲ ಕಳೆಯುತ್ತಾನೆ. ಇದು ಭ್ರಷ್ಟಚಾರ ಅಲ್ಲವೇನು?
ಇವತ್ತು ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿ ಉಪಕುಲಪತಿಗಳನ್ನು ಮಾಡುತ್ತಿರುವುದು ಯಾರು? ನಾವೇ ರಾಜಕಾರಣಿಗಳು. ಅವರಿಗೆ ಅರ್ಹತೆ ಇರಲಿ, ಇಲ್ಲದೇ ಹೋಗಲಿ ಅವರಿಗೆ ವಿಶ್ವ ವಿದ್ಯಾನಿಲಯಗಳಲ್ಲಿ ದೊಡ್ಡ ಸ್ಥಾನಮಾನವನ್ನು ಕೊಡಿಸಬೇಕು. ಅಮೇಲೆ ಬೇರೆ ಬೇರೆ ಸಮಾರಂಭಗಳಲ್ಲಿ ರಾಜಕಾರಣಿಗಳಿಗೆ ನೈತಿಕತೆ ಪಾಠ ಮಾಡುತ್ತಾರೆ ಮತ್ತು ಸಿಕ್ಕ ಸಿಕ್ಕ ಕಡೆ ಬಯ್ಯುತ್ತಾರೆ. ಇನ್ನೂ ಪದ್ಮಶ್ರೀ ಸುಮ್ಮನೆ ಬಂದುಬಿಡುತ್ತದೆಯೇ? ಅದನ್ನು ನಾವೇ ಕೊಡಿಸಬೇಕು. ಪದ್ಮಶ್ರೀ ಬಂದ ಮೇಲೆ ಆ ವ್ಯಕ್ತಿಗಳು ಸಿಕ್ಕ ಸಿಕ್ಕ ಕಡೆ ಬಹಳ ಗಂಭೀರವಾಗಿ ಚೀ ಥೂ ಅಂತ ರಾಜಕಾರಣಿಗಳಿಗೆ ಉಗಿಯುತ್ತಾರೆ. ಆದರೆ ಅವರೇ ಪದ್ಮಶ್ರೀ ಶಿಪ್ಪಾರಸ್ಸಿಗೆ ಅದೇ ರಾಜಕಾರಣಿಗಳ ಮನೆ ಬಾಗಿಲಿಗೆ ಬರುತ್ತಾರೆ. ಎಲ್ಲಾರಿಗೂ ಈ ರೀತಿ ಬರುತ್ತದೆ ಎಂದು ನಾನು ಹೇಳುವುದಿಲ್ಲ. ಕೆಲವರು ತಮ್ಮ ಅರ್ಹತೆ ಮೇರೆಗೆ ಪಡೆದುಕೊಳ್ಳತ್ತಾರೆ. ಇನ್ನೂ ಕೆಲವರು ನಮ್ಮ ಮೂಲಕ ಪಡೆದುಕೊಂಡಿರುತ್ತಾರೆ. ಒಳ್ಳೆಯದಕ್ಕೂ ನಾವೇ, ಕೆಟ್ಟದಕ್ಕೂ ನಾವೇ, ರಾಜಕಾರಣಿಗಳು ಕಾರಣವಾಗುತ್ತೇವೆ.
ಒಂದು ಕಾಲದಲ್ಲಿ ಡಿ.ವಿ ಅರಸುರವರು ನಮ್ಮ ಕುಲಪತಿಗಳು ಆಗಿದ್ದರು. ಅವರ ಮೇಲೆ ಭ್ರಷ್ಟಚಾರದ ಒಂದು ಸಣ್ಣ ಅರೋಪ ಬಂತು. ಇಡೀ ವಿಶ್ವವಿದ್ಯಾನಿಲಯ ತಿಂಗಳಗಟ್ಟಲೆ ನಡೆಯಲಿಲ್ಲ. ಈಗ ಆ ರೀತಿಯ ಪ್ರತಿಭಟನೆಯನ್ನ ನಾವು ನೋಡಬಹುದ? ಇಲ್ಲ. ಅಂದರೆ, ವ್ಯವಸ್ಥೆ ಕೆಟ್ಟುಹೋಗಿರುವ ಭಾಗವಾಗಿ ನಾವು ಇದ್ದೇವೆ. ನಾವೇನು ವೈಯಕ್ತಿಕವಾಗಿ ಕೆಟ್ಟುಹೋಗಿಲ್ಲ. ವ್ಯವಸ್ಥಯೊಳಗೆ ನಾವು ಕೆಟ್ಟು ಹೋಗಿದ್ದೆವೆ. ಜ್ಞಾನದೇಗಲ ಎಂದು ಕರೆಸಿಕೊಳ್ಳುವ ವಿಶ್ವವಿದ್ಯಾನಿಲಯಗಳಲ್ಲಿ ಇಂದು ರಾಜಕಾರಣ ಬಂದಿದೆ. ಅದಕ್ಕೆ ಕಾರಣ ಯಾರು? ನಾವೇ ರಾಜಕಾರಣಿಗಳು. ಅಂದರೆ ರಾಜಕಾರಣ ಪ್ರವೇಶ ಮಾಡದೇ ಇರುವಂತಹ ಜಾಗ ಯಾವುದು ಇಲ್ಲವಾದರೆ ಅದಕ್ಕೆ ಸಮಾಜ, ವ್ಯವಸ್ಥೆ. ಜನ. ಮತ್ತು ರಾಜಕಾರಣಿಗಳಾದ ನಾವು ಯೋಚಿಸಬೇಕಾಗುತ್ತದೆ. ನಮ್ಮ ಎಲ್ಲೆ ಯಾವುದು? ನಮ್ಮ ಇತಿಮಿತಿ ಯಾವುದು? ನಾವು ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು ರಾಜಕಾರಣಿಗಳಿಗೆ ಸಾರ್ವಜನಿಕ ಲಜ್ಜೆ ಇರಬೇಕು. ಆದರೆ ಇವತ್ತು ನಾವು ಅದನ್ನು ಕಳೆದುಕೊಂಡಿದ್ದೇವೆ. ಇವತ್ತು ರಾಜಕಾರಣಿಗಳಲ್ಲಿ ಸಾರ್ವಜನಿಕ ಲಜ್ಜೆ ಮಾಯವಾಗುತ್ತಿದೆ.
ಇನ್ನೂ ಜಾತಿ ಪ್ರಶ್ನೆ ಬಂದಾಗ ನಮ್ಮನ್ನು ಅ ದೇವರೇ ಕಾಪಾಡಬೇಕು. ಏಕೆಂದರೆ ನಾವು ಅಭಿವೃದ್ಧಿ ಕೆಲಸದಲ್ಲಿ ಅಧಿಕಾರಗಳು ವಿಳಂಬ ಮಾಡಿದಾಗ ಒಬ್ಬ ರಾಜ್ಯಸಭಾ ಸದ್ಯಸನಾಗಿ ಅವನನ್ನು ತರಾಟೆಗೆ ತೆಗೆದುಕೊಳ್ಳಬೇಕಾಗುತ್ತದೆ. ನನ್ನ ಕೆಲಸ ನಾನು ಮಾಡಿದರೆ ಅದಕ್ಕೆ ಜಾತಿ ಬಣ್ಣ. ಮೂರು ನಾಲ್ಕು ದಿನಗಳ ಹಿಂದೆ ಕಮೀಷನರಿಗೆ ಇದೇ ರೀತಿ ತರಾಟೆ ತೆಗೆದುಕೊಂಡೆ. ನಿನ್ನೆ ಕೆಲವರು ನಮ್ಮ ಜಾತಿಗೆ ಅವಮಾನ ಮಾಡಿದ್ದಾರೆ ಎಂದು ನನ್ನ ವಿರುದ್ಧ ಪ್ರತಿಭಟನೆ ಮಾಡಿದರು. ಇಲ್ಲಿ ಪ್ರತಿಯೊಬ್ಬ ಅಧಿಕಾರಿ ಒಂದಲ್ಲೊಂದು ಜಾತಿಗೆ ಸೇರಿದವರಾಗಿರುತ್ತಾರೆ. ಹಾಗಾದರೆ ನಾವು ಯಾವ ಅಧಿಕಾರಿಗೂ ಅವನು ಏಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಲಿಕ್ಕೆ ಆಗುವುದಿಲ್ಲ. ಅಧಿಕಾರಿಯೂ ಸಹ ರಾಜಕಾರಣ ಮಾಡುತ್ತಾನೆ. ತನ್ನನ್ನು ಉಳಿಸುಕೊಳ್ಳವುದಕ್ಕೆ ತನ್ನ ಜನಾಂಗವನ್ನು ಎತ್ತಿಕಟ್ಟುತ್ತಾನೆ. ಹಾಗದರೆ ಒಬ್ಬ ಪ್ರತಿನಿಧಿ ಯಾವ ಯಾವ ತರಹದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಪ್ರಾಮಾಣಿಕ ರಾಜಕಾರಣಿಯಾದ ನನಗೆ ಕೆಲವೊಂದು ಬಾರಿ ನಾವು ಪಕ್ಷದೊಳಗೆ ಪ್ರಾಮಾಣಿಕ ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮದೆ ಸರ್ಕಾರ ಇದ್ದ ಸಮಯದಲ್ಲಿ ಕಾರ್ಮಿಕ ಕ್ಷೇತ್ರದಿಂದ ಬಂದಂತಹ ನನಗೆ ಕಾರ್ಮಿಕ ಕ್ಷೇತ್ರದ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾರ್ಮಿಕರಿಗೆ ಅನ್ಯಾಯವಾಗುತ್ತದೆ ಎಂಬ ಅಂಶ ತಿಳಿದುಬಂತು. ಕೆ. ಎಸ್. ಅರ್. ಟಿ. ಸಿ. ಸಂಸ್ಥೆಗೆ ಸಂಬಂಧಿಸಿದಂತೆ 1 ಲಕ್ಷ 8 ಸಾವಿರ ನೌಕರರಿಗೆ ಅನ್ಯಾಯವಾಗುತ್ತದೆ ಎಂಬುದು ತಿಳಿದು ಬಂತು. ಅದನ್ನು ಸರ್ಕಾರಕ್ಕೆ ಗಮನಕ್ಕೆ ತಂದೆ. ಅದಕ್ಕೆ ಅವರು ಕೇರ್ ಮಾಡಲಿಲ್ಲ. ಆಗಾ ನಾನು ಒಂದು ಪ್ರೆಸ್ಸ್ ಮೀಟ್ ಮಾಡಿ ಇದು ಕಾರ್ಮಿಕರಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದೆ. ಆಗ ಪಕ್ಷದ ವಕ್ತಾರನಾಗಿದ್ದೆ. ತಕ್ಷಣವೆ ನನ್ನನ್ನು ಪಕ್ಷದ ವಕ್ತಾರ ಸ್ಥಾನದಿಂದ ತೆಗೆದು ಹಾಕಿದ್ದರು. ಒಬ್ಬ ಪ್ರತಿನಿಧಿಯಾಗಿ ಪಕ್ಷದೊಳಗೆ ಮಾತನಾಡುವುದಕ್ಕೆ ಆಗುವುದಿಲ್ಲ.
ಸಂಸತ್ತಿನಲ್ಲಿ ಕಾಯಿದೆ ಸಂಬಂಧಿಸಿದಂತೆ ಒಬ್ಬ ಪ್ರತಿನಿಧಿಯಾಗಿ ನಮ್ಮ ಅಭಿಪ್ರಾಯವನ್ನು ಹೇಳಲಿಕ್ಕೆ ಸಾಧ್ಯವಾಗುವುದಿಲ್ಲ. ಪಕ್ಷ ವಿಪ್ ಜಾರಿ ಮಾಡಿದ್ದಾರೆ ಅವರು ಹೇಳಿದಾಗೆ ನಾವು ಮಾಡಬೇಕಾಗುತ್ತದೆ. ಅವರು ಕೈ ಎತ್ತು ಅಂದರೆ ಎತ್ತಬೇಕು. ಇಳಿಸು ಅಂದರೆ ಇಳಿಸಬೇಕು. ಹಾಗೆ ಹೊರಗಡೆ ಸಾರ್ವಜನಿಕವಾಗಿ ಜನರಿಗೆ ಖುಷಿಯಾಗಿ ಮಾತನಾಡಬೇಕು. ಇನ್ನೂ ವರದಿಗಳ ಬಗ್ಗೆ ನಮ್ಮ ನಿಲುವು ತಿಳಿಸುವುದಕ್ಕು ಸಾಧ್ಯವಿಲ್ಲ. ಕಸ್ತೂರಿ ರಂಗನ್ ವರದಿ ಸರಿ ಇದೆ ಎಂದು ನಮ್ಮ ನಿಲುವು ಪ್ರಕಟಿಸಿದರೆ ಒಂದು ವರ್ಗ ಖುಷಿಯ ಜೈಕಾರ ಹಾಕುತ್ತದೆ. ಇನ್ನೂಂದು ವರ್ಗ ಜಾಡಿಸಿ ಒದೆಯುತ್ತದೆ. ಹಾಗಾಗಿ ಒಂದು ವರದಿ ಬಗ್ಗೆ ಒಬ್ಬ ಪ್ರತಿನಿಧಿ ತನ್ನ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತ ಮಾಡಲಿಕ್ಕೆ ಆಗುವುದಿಲ್ಲ. ಇಂತವರ ಮಧ್ಯೆ ನಮಗೆ ನಿತ್ಯ ಸವಾಲುಗಳು ಎದರಾಗುತ್ತದೆ.
ನಮಗೆ ಸ್ವಾತಂತ್ರ್ಯ ಬಂದಾಗ ರಾಷ್ಟ್ರದ ಪ್ರಗತಿ ಮುಖ್ಯವಾಗಿತ್ತು. ಹಾಗಾಗಿ ರಾಜಕಾರಣಿ ಇರಲಿ, ಜನ ಇರಲಿ, ಮಾಧ್ಯಮ ಇರಲಿ, ದೇಶದ ಬಗ್ಗೆ ಯೋಚಿಸುತ್ತಿದ್ದರು. ಆದರೆ 1970 ನಂತರ ಅದು ಮಾಯಾವಾಗಿದೆ. ನಾವು ಯಾವುದೋ ಒಂದು ಐಡಿಯಾಲಾಜಿ ನಂಬಿ ರಾಜಕಾರಣಕ್ಕೆ ಬಂದವರು. ಅದು ಸರೀಯೋ, ತಪ್ಪೋ, ಆ ಐಡಿಯಾಲಾಜಿ ಅನುಗುಣವಾಗಿ ರಾಜಕಾರಣ ಮಾಡುತ್ತಿದ್ದೀವಿ. ಆದರೆ ಈಗ ಯಾವುದೇ ಐಡಿಯಾಲಾಜಿ ರಹಿತವಾದ ಸಮಾಜ ನಿರ್ಮಾಣವಾಗುತ್ತಿದೆ. ಅದರ ಮಧ್ಯೆ ರಾಜಕಾರಣ ಮಾಡುತ್ತಿದ್ದೇವೆ. ಹಾಗಾಗಿ ರಾಜಕಾರಣಕ್ಕೆ ಎಲ್ಲೆ ಇಲ್ಲದಂತೆ ಆಗಿದೆ.
ಭಾರತದಲ್ಲಿ ಎಲ್ಲಾ ಮಹನೀಯರು ಒಂದು ಐಡಿಯಾಲಾಜಿಯನ್ನು ಇಟ್ಟುಕೊಂಡು ದೇಶವನ್ನು ಕಟ್ಟಿದ್ದರು. ಗಾಂಧಿಜೀ ಕಾಂಗ್ರೇಸ್ಸನ್ನು ಬಲಪಡಿಸಿ ಬ್ರಿಟೀಷರ ವಿರುದ್ಧ ದೇಶವನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡಿದ್ದರು. ಸ್ವಾತಂತ್ರ್ಯ ಬಂದ ಮೇಲೆ ಅದು ರಾಜಕೀಯ ಪಕ್ಷವಾಯಿತು. 1974 ರಲ್ಲಿ ದೇಶದ ಅತೀ ದೊಡ್ಡ ಜೆ.ಪಿ ಚಳುವಳಿ ನಡೆಯಿತು. ನಂತರದಲ್ಲಿ ಅದು ಜನತಾ ರಾಜಕೀಯ ಪಕ್ಷಗಳಾಗಿ ಹೋಯಿತು. ಇವತ್ತು ಅಣ್ಣಾ ಹಜಾರೆ ಮಾಡಿದಂತಹ ಭ್ರಷ್ಟಚಾರ ವಿರುದ್ಧ ಮಾಡಿದಂತಹ ಚಳುವಳಿಯಿಂದ ಹುಟ್ಟಿದಂತಹ ಕ್ರೇಜಿವಾಲ್ ಪಕ್ಷ ನೋಡಬಹುದು. ದೆಹಲಿಯಲ್ಲಿ ಜನ ಕ್ರೇಜಿವಾಲ್ಗೆ ಓಟ್ ಕೊಡಲಿಲ್ಲ. ಅಲ್ಲಿನ ಜನ ಅವನಿಗೆ ಓಟ್ ಕೊಟ್ಟಿದ್ದು ಭ್ರಷ್ಟಚಾರ ಎಂಬ ವಿಷಯಧಾರಿತ ವಾದಕ್ಕೆ ಹೊರತು ಕ್ರೇಜಿವಾಲ್ಗೆ ಅಲ್ಲ. ಇಲ್ಲಿ ಅಣ್ಣಾ ಹಜಾರೆ ಹೋರಾಟ ಒಂದು ಒತ್ತಡ ಗುಂಪಾಗಿ ಕೆಲಸ ಮಾಡಿದೆ. ನಮ್ಮಲ್ಲಿ ರೈತ ಸಂಘ, 1980ರಲ್ಲಿ ಬಹಳ ದೊಡ್ಡ ಒತ್ತಡ ಗುಂಪು, ಯಾವಗ ಅವರು ರಾಜಕೀಯಕ್ಕೆ ಬಂದರೋ, ವಿಭಾಗವಾಯಿತು. ಇವತ್ತು ಎಷ್ಟು ರೈತ ಸಂಘವಿದೆ ಗೊತ್ತಿಲ್ಲ. ದಲಿತ ಚಳುವಳಿ ಅದು ಸಹ ಇದೇ ಹಾದಿ ಹಿಡಿಯಿತು. ಅಷ್ಟೇ ಏಕೆ ಅಹಿಂದ ಚಳುವಳಿಯನ್ನು ಸಿದ್ದರಾಮಯ್ಯನವರು ರಾಜಕೀಯಗೊಳಿಸಿದ್ದರಿಂದ ಅದು ಸಹ ಒಡೆದುಹೋಗಿದೆ. ಆಂದೋಲನಗಳು ಈ ಸಮಾಜದಲ್ಲಿ ಇರಬೇಕು. ಆಂದೋಲನಗಳು ರಾಜಕೀಯ ಪ್ರೇರಿತವಾಗಿರದೆ ಸರ್ಕಾರವನ್ನು ಎಚ್ಚರಿಸುವ ಚಾಟಿ ಇಟ್ಟುಕೊಂಡಿರುವಂತಹ ಕಾವಲುಗಾರರಾಗಿರಬೇಕು. ಅದು ಇಲ್ಲದೆ ಇರುವುದರಿಂದ ರಾಜಕಾರಣಿಗಳು ಹಾದಿ ತಪ್ಪುತ್ತಿರುವುದು. ನಮಗೆ ಅಂಕುಶ ಇಲ್ಲದೆ ಇರುವ ಸ್ಥಿತಿ ಬಂದೊದಗಿದೆ. ಹಾಗಾಗಿ ಅಂದೋಲನಗಳು ಹಾದಿಯನ್ನು ತಪ್ಪಾಬಾರದು.
ಇವತ್ತು ರಾಜಕಾರಣಕ್ಕೆ ಯಾರ್ಯಾರೋ ಬರುತ್ತಿದ್ದಾರೆ. ಇವತ್ತು ಪಾರ್ಲಿಮೆಂಟ್ಗೆ ಮಲ್ಯನಂತವರು, ಅಂಬಾನಿಗಳು ರಾಜ್ಯಸಭೆಗೆ ಸಾವಿರಾರು ಕೋಟಿ ವೆಚ್ಚ ಮಾಡಿ ಬರುತ್ತಿದ್ದಾರೆ. ಅವರು ಹಣಕಾಸಿನ ಮಂತ್ರಿ ಬಳಿ ಕುಳಿತು ತಮಗೆ ಏನುಬೇಕು ಅದನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇವತ್ತು ನಮ್ಮ ಆರ್ಥಿಕ ನೀತಿಯ ಮೇಲೆ ಅವರ ಪ್ರಭಾವವಿದೆ. ಬಜೆಟ್ನ ಮೇಲೆ ಆತನ ಪ್ರಭಾವವಿದೆ. ಕೈಗಾರಿಕೆ ನೀತಿಗಳ ಮೇಲೆ ಆತನ ಪ್ರಭಾವವಿದೆ. ರಪ್ತು ಮತ್ತು ಅಮದುಗಳು ಮೇಲೆ ಪ್ರಭಾವವಿದೆ. ಅವರೆಲ್ಲ ತಮ್ಮ ತಮ್ಮ ಹಿತವನ್ನು ಕಾಯುತ್ತಿದ್ದಾರೆ. ಹಾಗಾದರೆ ಆಡಳಿತ ಹಿಡಿತ ಯಾರ ಬಳಿ ಹೋಗುತ್ತಿದೆ ಎಂಬುದನ್ನು ನಾವು ಮನಗಾಣಬೇಕಾಗುತ್ತದೆ. ಇವತ್ತು ರಾಜಕಾರಣಿಗಳ ಮುಖ್ಯ ಕೆಲಸ ದೇಶದಲ್ಲಿ ಎಲ್ಲ ವ್ಯಕ್ತಿಗಳು ಸ್ವಾವಲಂಬಿಯಾಗಿ ಬದುಕುವ ಹಾಗೆ ಮಾಡಬೇಕು. ಆದರೆ ರಾಜಕಾರಣಿಗಳು ನಾವು ಏನು ಮಾಡುತ್ತಿದ್ದೆವೆ. ಜನರು ಸಂಪೂರ್ಣಣವಾಗಿ ರಾಜಕಾರಣಿಗಳ ಮೇಲೆ ಅಥವಾ ಸರ್ಕಾರದ ಮೇಲೆ ಅವಲಂಬನೆ ಆಗುವಂತೆ ಕಾನೂನು ಕಾಯ್ದೆ ಜಾರಿಗೆ ತರುತ್ತಿದ್ದೇವೆ. ನಾವು ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಕನಸುಗಳನ್ನು ಮಾರುತ್ತೇವೆ. ಜನರು ಎಲ್ಲಿಯವರೆಗೂ ಪ್ರಣಾಳಿಕೆ ಆಧಾರಿತವಾಗಿ ಕೆಲಸ ಮಾಡುವ ಪಕ್ಷಗಳಿಗೆ ಓಟ್ ಕೊಡವುದಿಲ್ಲವೋ ಅಲ್ಲಿಯವರೆಗೂ ನಾವು ನಿಮಗೆ ಬಣ್ಣ ಬಣ್ಣದ ಕನಸುಗಳ ಲಾಟರಿ ಟಿಕೆಟ್ ಗಳನ್ನು ಮಾರುತ್ತಿರುತ್ತೇವೆ.
ಇಂತಹ ಅಪ್ರಾಮಾಣಿಕ ರಾಜಕಾರಣಿಗಳ ನಡುವೆ ಪ್ರಾಮಾಣಿಕ ರಾಜಕಾರಣಿಗಳು ಇದ್ದಾರೆ. ಅವರು ಸಹ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ರಾಜಕಾರಣಿಗಳನ್ನು ಕಳ್ಳರು, ಸುಳ್ಳುರು, ಅಪ್ರಾಮಾಣಿಕರು ಎಂದು ಕರೆಯುತ್ತಿರಿ ಒಪ್ಪಿಕೊಳ್ಳಣ. ಆದರೆ, ಅದಕ್ಕಿಂತ ಮುಂಚೆ ನಾವು ಹೀಗೆ ಆಗಲಿಕ್ಕೆ ನಿಮ್ಮ ಪಾಲು ಎಷ್ಟು ಎಂದು ಯೋಚನೆ ಮಾಡಿದ್ದೀರ?
ನಾವು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿಮಾಡಬೇಕಾಗುತ್ತದೆ. ಹಾಗಾಗಿ ನಾವು ನಿಷ್ಟುರ ಮತ್ತು ನ್ಯಾಯಯುತವಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ಪ್ರಜಾಪ್ರಭುತ್ವದ ಬಸ್ ಚನ್ನಾಗಿದೆ. ಕೆಲವು ನೂನ್ಯತೆಗಳ ಮಧ್ಯೆ ಒಪ್ಪಿಕೊಳ್ಳಬಹುದಾದಂತಹ ಒಂದು ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಕೂಡ ಏನು ಬೇಕಾದರೂ ಆಗಬಹುದು. ನಮ್ಮ ಹರದನಳ್ಳಿ ಗೌಡ್ರು ಲುಂಗಿಪಂಚೆ ಕಟ್ಟಿಕೊಂಡು ಹೋಗಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸುವುದಕ್ಕೆ ಎಷ್ಟು ಕೋಟಿ ಖರ್ಚು ಮಾಡುದ್ರೂ ಸಾಧ್ಯವಾಗಲ್ಲ. ಈ ಪ್ರಜಾಪ್ರಭುತ್ವದಲ್ಲಿ ಮಾತ್ರ ಸಾಧ್ಯವಾಗುತ್ತದೆ. ನನ್ನಂತವನು ಸಹ ಎರಡು ಸಾರಿ ಸಂಸತ್ತಿಗೆ ಆಯ್ಕೆಯಾಗಿ ಲೋಕಸಭೆ, ರಾಜ್ಯಸಭೆ ಹೋಗುತ್ತಿನಿ ಅಂದರೆ, ಸಾವಿರಾರು ಕೋಟ್ಯಾದೀಶ ಒಳಗಡೆ ಬರುವುದಕ್ಕೆ ಆಗುವುದಿಲ್ಲ. ಎಷ್ಟು ಕೋಟಿ ಇದ್ದರೆ ಏನು? ಟಾಟ, ಬಿರ್ಲಾ ಸಂಸತ್ತಿನ ಹಾಲ್ ಒಳಗೆ ಬರುವುದಕ್ಕೆ ಆಗುವುದಿಲ್ಲ. ನನ್ನಂತಹ ಸಾಮಾನ್ಯ ಪ್ರಜೆ ಹೋಗಬಹುದು. ಪ್ರಜಾಪ್ರಭುತ್ವದ ಬ್ಯೂಟಿ ಅದು. ಎಲ್ಲಿಂದ ಯಾರು ಎಲ್ಲಿಯಬೇಕಾದರು ಹೋಗಬಹುದು. ನಮ್ಮನ್ನು ನಾವು ಆಳಿಕೊಳ್ಳುವ ಈ ವ್ಯವಸ್ಥೆಯ ಪ್ರಜಾ ಪ್ರಭುತ್ವದ ಬಸ್ ಚನ್ನಾಗಿದೆ.
ಒಂದ್ ಸಾರಿ ಒಂದು ಬಸ್ಸಿನ ತುಂಬ ಜನ ಒಂದೇ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೊರಟಿದ್ದರು. ಬಸ್ ಯಾಕೋ ಸ್ಟಾರ್ಟ್ ಆಗುತ್ತಿರಲಿಲ್ಲ. ಡ್ರೈವರು ಜನರಲ್ಲಿ ವಿನಂತಿ ಮಾಡಿಕೊಳ್ಳತ್ತಾನೆ, ಸ್ವಲ್ಪ ಇಳಿದು ಎಲ್ಲರು ಕೈ ಹಾಕಿ ತಳ್ಳಿದರೆ ಬಸ್ ಸ್ಟಾರ್ಟ್ ಆಗುತ್ತದೆ ಹೊರಟುಬಿಡೋಣ ಅಂತ. ಎಲ್ಲಾರಿಗೂ ಬೆಂಗಳೂರಿಗೆ ಹೋಗುವುದು ಅನಿವಾರ್ಯವಾಗಿದ್ದರಿಂದ ಎಲ್ಲಾರು ಬಸ್ನಿಂದ ಇಳಿದು ತಳ್ಳುವುದಕ್ಕೆ ಪ್ರಾರಂಭ ಮಾಡಿದ್ದರು. ಬಸ್ ಅಲುಗಾಡಲೇ ಇಲ್ಲ. ಎಲ್ಲಾರು ಪ್ರಾಮಾಣಿಕವಾಗಿ ತಳ್ಳುತ್ತಿದ್ದರು ಬಸ್ ಅಲುಗಾಡುತ್ತಲೇ ಇಲ್ಲ. ಅವಾಗ ಯಾರೋ ಒಬ್ಬ ಅಣ್ಣ ಡ್ರೈವರಣ್ಣ ಬ್ರೇಕ್ ಮೇಲ್ ಇಟ್ಟಿರುವ ಕಾಲು ತಕ್ಕೋಳಣ್ಣ ಎಂದ. ಅದಕ್ಕೆ ಡ್ರೈವರು ನಾನು ಬ್ರೇಕ್ ಮೇಲೆ ಕಾಲೇ ಇಟ್ಟಿಲ್ಲ ಅಂದ. ಪ್ರಯಾಣಿಕರಿಗೆ ತಲೆ ಕೆಟ್ಟು ಹೋಯಿತು. ನಾವು ನೂರಾರು ಜನ ತಳ್ಳುತ್ತಿದ್ದರೂ ಬಸ್ ಏಕೆ ಮುಂದೆ ಹೋಗುತ್ತಿಲ್ಲವಲ್ಲ ಯೋಚಿಸಿ ಬಸ್ಸಿನ ಚಕ್ರಕ್ಕೆ ಯಾರಾದರೂ ಕಲ್ಲುಗಿಲ್ಲು ಕೊಟ್ಟಿದ್ದಾರ ಎಂದು ಚಕ್ರದ ಕೆಳಗೆ ನೋಡುತ್ತಾರೆ. ಚಕ್ರದ ಕೆಳಗೆ ಕಲ್ಲು ಕೊಟ್ಟಿಲ್ಲ. ಎಲ್ಲರೂ ಬೆವರು ಸುರಿಸಿ ಅಯಾಸಗೊಂಡರೂ ಕೂಡ ಬಸ್ ಒಂದು ಇಂಚು ಮುಂದೆ ಹೋಗಲೇ ಇಲ್ಲ. ಕೊನೆಗೆ ಡ್ರೈವರು ಯಾಕೆ ಬಸ್ ಮುಂದೆ ಹೋಗುತ್ತಿಲ್ಲ ಅಂತ ಕೆಳೆಗೆ ಇಳಿದು ಬಂದು ನೋಡಿ ಅವರಿಗೆ ಹೇಳಿದನಂತೆ ಅಣ್ಣ ದಯವಿಟ್ಟು ಎಲ್ಲಾರು ಬಂದು ಒಂದು ಕಡೆಗೆ ತಳ್ರಣ್ಣ ಅಂತ ಹೇಳಿದ. ಏಕೆಂದರೆ ಪ್ರಯಾಣಿಕರು ಪ್ರಾಮಾಣಿಕರಾಗಿ ಬಸ್ಸನ್ನು ನಾಲ್ಕು ಕಡೆಯಿಂದ ತಳ್ಳುತ್ತಿದ್ದರು. ಹಾಗೆ ಈ ಪ್ರಜಾಪ್ರಭುತ್ವದ ಬಸ್ಸನ್ನು ನಮಗೆ ಹೇಗೆ ಬೇಕೋ ಹಾಗೆ ನಾಲ್ಕು ಕಡೆಯಿಂದ ತಳ್ಳುತ್ತ ಇದ್ದೇವೆ. ಅದಕ್ಕೆ ಈ ರೀತಿ ಆಗುತ್ತಿದೆ. ಹಾಗಾಗಿ ನಾವೆಲ್ಲರೂ ಒಂದು ದೇಶ, ಒಂದು ಉದ್ದೇಶ ಅಂತ ಇಟ್ಟುಕೊಂಡರೆ ಭವಿಷ್ಯ ಈ ವೇಗವಾಗಿ ಬಸ್ಸನ್ನು ಗುರಿ ಮುಟ್ಟಿಸಬಹುದು.






ಮಂಜುನಾಥರೆ ಪ್ರಾಮಾಣಿಕತೆಯಿಂದ ರಾಜಕೀಯದ ಓರೆ ಕೋರೆಗಳನ್ನೆಲ್ಲ ಚನ್ನಾಗಿ ತಿಳಿಸಿದ್ದೀರಿ. ನಿಮಗೆ ನನ್ನ ಸಲಾಂ