ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೩
-ಡಾ.ಶ್ರೀಪಾದ ಭಟ್, ತುಮಕೂರು
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨
ಸಾಹಿತ್ಯದ ಮಾರ್ಕೆಟಿಂಗ್!
ಇಂದು ಎಲ್ಲ ಕ್ಷೇತ್ರಕ್ಕೂ ಅನಿವಾರ್ಯವಾದ ಮಾರ್ಕೆಟಿಂಗ್ ಸಾಹಿತ್ಯವನ್ನು ಬಿಡುತ್ತದೆಯೇ? ಹೇಳಿಕೇಳಿ ಸಾಹಿತ್ಯ ಎಂಬುದು ಪುಸ್ತಕೋದ್ಯಮದ ಭಾಗವಾಗಿ ಹೋಗಿದೆ. ಉದ್ಯಮ ಎಂದ ಮೇಲೆ ಮುಗೀತು. ಆದರ್ಶಗಳು ಏನಿದ್ದರೂ ಅದನ್ನು ಹಿಂಬಾಲಿಸಬೇಕಷ್ಟೆ. ಸಾಹಿತಿಗಳೆನಿಸಿಕೊಂಡವರು ಈ ಉದ್ಯಮವನ್ನು ಹಿಂಬಾಲಿಸುತ್ತಿದ್ದಾರೆ. ಕೆಲವೊಮ್ಮೆ ಇದು ಉಲ್ಟಾ ಆಗಿ ತಮಾಷೆಗಳೂ ಆಗುವುದುಂಟು. ಕನ್ನಡದಲ್ಲಿ ಎಲ್ಲೂ ಹೆಸರೇ ಕೇಳಿರದ ಸಂಪತ್ತೈಯ್ಯಂಗಾರ್ ಎಂಬ ಎಪ್ಪತ್ತು ದಾಟಿದ ವೃದ್ಧರೊಬ್ಬರಿಗೆ ತಮ್ಮ ಅರುವತ್ತು ವರ್ಷದ ಪಾಕಶಾಸ್ತ್ರದ ಪ್ರಾವೀಣ್ಯವನ್ನು ಕನ್ನಡದಲ್ಲಿ ದಾಖಲಿಸಬೇಕೆಂಬ ಹಂಬಲ ಹುಟ್ಟಿತು. ಅನುಭವವನ್ನು ಬರೆದರು. ಒಂದಿಷ್ಟು ಪುಟಗಳಾದವು. ಆಸಕ್ತರಿಗೆ ಓದಲು ನೀಡಿ ಸಲಹೆ ಕೇಳಿದರು. ಅದರಂತೆ ತಿದ್ದಿ ತೀಡಿ ಮತ್ತೆ ಬರೆದು ಒಂದು ಪುಸ್ತಕವಾಗುವಷ್ಟು ಬರೆದರು. ಅಚ್ಚುಮಾಡಿಸಲು ಹೆಸರಾಂತ ಪ್ರಕಾಶಕರ ಅಂಗಡಿ ಮುಂದೆ ದಿನಗಟ್ಟಲೆ ನಿಂತರು. ಅವರು ಕಾಣದ ಪ್ರಕಾಶಕರಿಲ್ಲ. ಆದರೆ ಎಲ್ಲರದೂ ಒಂದೇ ಉತ್ತರ-ಆಗಲ್ಲ ಹೋಗಿ. ಪುಟ ತೆರೆದು ನೋಡುವ ವ್ಯವಧಾನವೂ ಪ್ರಕಾಶಕರಿಗಿಲ್ಲ. ಯಾಕೆಂದರೆ ಈ ಅಯ್ಯಂಗಾರರು ಹೆಸರಾಂತ ಸಾಹಿತಿಗಳ ಶಿಫಾರಸು ಇಟ್ಟುಕೊಂಡವರಲ್ಲ, ಈಗಾಗಲೇ ಪಾಕಶಾಸ್ತ್ರದಲ್ಲಿ ಮಾಧ್ಯಮಗಳಲ್ಲಿ ಹೆಸರು ಮಾಡಿದವರೂ ಅಲ್ಲ. ಬೇರೆ ದಾರಿ ಕಾಣದೇ ಅಯ್ಯಂಗಾರರು ಸ್ವತಃ ಅಚ್ಚು ಹಾಕಿಸಲು ಮುಂದಾದರು. ಸ್ವಂತ ಹಣವಿಲ್ಲ. ಯಾವುದೋ ಡಿಟಿಪಿ ಸೆಂಟರಿಗೆ ಹಸ್ತಪ್ರತಿ ಕೊಟ್ಟರು. ಮೂರ್ನಾಲ್ಕು ತಿಂಗಳು ಅಲೆಸಿದ ಅಂಗಡಿಯಾತ ಟೈಪು ಮಾಡುವುದಿರಲಿ, ಮೂಲ ಹಸ್ತಪ್ರತಿಯನ್ನೇ ಕಳೆದು ಕೈಝಾಡಿಸಿದ!