ವಿಷಯದ ವಿವರಗಳಿಗೆ ದಾಟಿರಿ

Archive for

25
ಏಪ್ರಿಲ್

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 1

ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ

Social Science Column Logo

ಇಂದಿನ ಪ್ರತಿನಿಧಿತ್ವದ ಬಗ್ಗೆ ವಿಚಾರಮಾಡಬೇಕಾದಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಎದುರಿಸುತ್ತಿರುವಂತಹ ಸವಾಲುಗಳೇನು ಎಂದು ಆಲೋಚಿಸಬೇಕಿದೆ. ಸಹಸ್ರಾರು ವರ್ಷಗಳ ಇತಿಹಾಸವಿರುವಂತಹ ನಮ್ಮ ದೇಶದಲ್ಲಿ ಈ ರೀತಿಯ ಶೋಷಣೆ, ತಾರತಮ್ಯ ಎನ್ನುವಂತದ್ದು ಹಾಸುಹೊಕ್ಕಾಗಿ ಬಂದು, ಅದೊಂದು ಜೀವನ ವಿಧಾನ ಎನ್ನುವ ರೀತಿಯಲ್ಲಿ ಅಂಗೀಕಾರ ಮಾಡಿರುವಂತಹ ದೇಶಗಳಲ್ಲಿ ನಮ್ಮದು ಕೂಡ ಒಂದು. ಅದರ ವಿರುದ್ಧ ಈ ದೇಶದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಅದರಿಂದಾಗಿ ಇಡೀ ಪ್ರಪಂಚಕ್ಕೆ ಬೆಳಕು ಸಿಕ್ಕಿದೆ. ಆದರೆ ಭಾರತಕ್ಕೆ ಎಷ್ಟು ಸಿಕ್ಕಿದೆ ಎನ್ನುವುದು ಗೊತ್ತಿಲ್ಲ. ಅದು ಬುದ್ಧ ಇರಬಹುದು, ಬಸವೇಶ್ವರರು, ಸ್ವಾಮಿ ವಿವೇಕಾನಂದ, ಪರಹಂಸರು, ಮಹಾತ್ಮ ಗಾಂಧಿ ಇರಬಹುದು, ರಾಜಾರಾಮ್ ಮೋಹನ್ ರಾಯ್, ಲೋಹಿಯಾ, ಅಂಬೇಡ್ಕರ್ ಇಂತವರು ಅನೇಕ ಜನ ಅಥವಾ ಅನೇಕ ವಿಚಾರಧಾರೆಗಳು ಬರಲಿಕ್ಕೆ ಸಾಧ್ಯ ಆಗಿದೆ. ಆದರೆ ಇಲ್ಲಿ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿಕ್ಕೆ ಸಹಾಯ ಆಗಿದೆ ಎನ್ನುವುದನ್ನು ಹೇಳಲಿಕ್ಕೆ ಸಾಧ್ಯ ಆಗುವುದಿಲ್ಲ. ಆದರೆ, ಆಗಬೇಕಾದಂತಹ ಕೆಲಸ ಬಹಳಷ್ಟಿದೆ. ಅಂದರೆ ಇವೆಲ್ಲವೂ ಕೂಡಾ ಕಾನೂನುಗಳ ಮುಖಾಂತರವೇ ಆಗುವುದಿಲ್ಲ ಎನ್ನುವುದು ಕೂಡಾ ನಮ್ಮ ಅನುಭವಕ್ಕೆ ಬಂದಿರುವ ವಿಚಾರ. ಕಾನೂನುಗಳ ಕೊರತೆಯಿಂದ ಈ ದೇಶದಲ್ಲಿ ಜಾತೀಯತೆ ಇದೆ, ಭ್ರ್ರಷ್ಟಾಚಾರ ಇದೆ, ಸ್ವಜನ ಪಕ್ಷಪಾತ ಇದೆ ಎಂದೇನೂ ಅಲ್ಲ. ಕಾನೂನಿನ ಕೊರತೆಯೇನಿಲ್ಲ. ಬ್ರಿಟಿಷರ ಕಾಲದಲ್ಲೇ ಆಗಬೇಕಾದಂತಹ ಕಾನೂನುಗಳೆಲ್ಲಾ ಆಗಿಹೋಗಿವೆ. ಇನ್ನುಳಿದಿರುವಂತಹ ಕೆಲವನ್ನು ಈ ನಾವು ಮಾಡುತ್ತಿದ್ದೇವೆ.

ಆದರೆ ಕಾನೂನಿನ ಪರಿಪಾಲನೆ ಮಾಡುವುದರಿಂದ ಏನು ಪರಿಣಾಮವಾಗುವುದಿಲ್ಲ ಎನ್ನುವುದು ನಮ್ಮ ಜನರಿಗೆ ಗೊತ್ತಿರುವುದರಿಂದ ಸಮಸ್ಯೆಗಳು ಇನ್ನೂ ಕೂಡಾ ಉಳಿದುಕೊಂಡಿರುವುದು ದೊಡ್ಡ ಸಮಸ್ಯೆ. ನಾವು ಯಾವುದನ್ನು ಮಾದರಿ ಪ್ರಜಾಪ್ರಭುತ್ವ ಎಂದು ಹೇಳುತ್ತೇವೆ? ಅದು ಬ್ರಿಟನ್ ಮತ್ತು ಅಮೇರಿಕ. ಅಮೇರಿಕದಲ್ಲೂ ಕೂಡಾ ಸಂವಿಧಾನ ರಚನೆಯಾಗಿ 140 ವರ್ಷಗಳ ಕಾಲ ಅಲ್ಲಿ ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕನ್ನೇ ನೀಡಿರಲಿಲ್ಲ. ಹಾಗೆಯೇ ಬ್ರಿಟನ್ ನನ್ನು ನಾವು ಕಾರ್ಬನ್ ಕಾಪಿ ಮಾಡಿಕೊಂಡು ಅನುಸರಿಸುತ್ತಿದ್ದರೂ ಸಹ ಅಲ್ಲಿಯೂ ಕೂಡಾ ಸಂವಿಧಾನ ರಚನೆಯಾಗಿ 110 ವರ್ಷಗಳ ಕಾಲ ಮಹಿಳೆಯರಿಗೆ ಮತದಾನದ ಹಕ್ಕನ್ನೇ ನೀಡಿರಲಿಲ್ಲ. ಸ್ವೀಡನ್ ದೇಶದಲ್ಲಿ ಇತ್ತೀಚಿನವರೆಗೂ ಕೂಡಾ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟಿರಲಿಲ್ಲ. ಆ ದೃಷ್ಟಿಯಿಂದ ಭಾರತ ದೇಶದಲ್ಲಿ ಬಡವರು ಮತ್ತು ಮಹಿಳೆಯರು ಎಲ್ಲರಿಗೂ ಮತದಾನದ ಹಕ್ಕನ್ನು ನೀಡಲಾಗಿದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಎಲ್ಲರೂ ಕೃತಜ್ಞತೆಯನ್ನು ಅರ್ಪಿಸಲೇಬೇಕು. ಮತ್ತಷ್ಟು ಓದು »

25
ಏಪ್ರಿಲ್

ನಿನ್ನೆಗೆ ನನ್ನ ಮಾತು – ಭಾಗ ೫

– ಮು ಅ ಶ್ರೀರಂಗ ಬೆಂಗಳೂರು

ನಿನ್ನೆಗೆ ನನ್ನ ಮಾತು – ಭಾಗ ೧ನೆನಪುಗಳು
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩
ನಿನ್ನೆಗೆ ನನ್ನ ಮಾತು – ಭಾಗ ೪

ನಿಲುಮೆಯಲ್ಲಿ ಇದು ನಾನು ಬರೆಯುತ್ತಿರುವ ಇಪ್ಪತ್ತೈದನೇ ಲೇಖನ. ಆಗಸ್ಟ್ ೨೦೧೩ರ ಕೊನೆಯ ವಾರದಲ್ಲಿ ನಾನು ಮೊದಲನೇ ಲೇಖನ ಈ ಬ್ಲಾಗಿನಲ್ಲಿ ಬರೆದಿದ್ದು. ಇಲ್ಲಿಯ ತನಕದ ನನ್ನ ಲೇಖನಗಳನ್ನು ಪ್ರಕಟಿಸಿದ “ನಿಲುಮೆ”ಯ ಮುಖ್ಯಸ್ಥರಿಗೆ, ಸಂಪಾದಕವರ್ಗದವರಿಗೆ ನಾನು ಆಭಾರಿಯಾಗಿದ್ದೇನೆ. ಜತೆಗೆ ನನ್ನ ಬರಹಗಳನ್ನು ಓದಿದ,ಪ್ರತಿಕ್ರ್ರಿಯಿಸಿದ ಮತ್ತು ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲಾ ಓದುಗರಿಗೆ ವಂದನೆಗಳು. ಓದುಗರೊಡನೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತು ನನ್ನ ಬರಹಗಳಿಗೆ ಬಂದ ಪ್ರತಿಕ್ರಿಯೆಗಳಿಂದ   ನಾನು ಆಯಾ ಲೇಖನಗಳನ್ನು ಬರೆಯುವಾಗ ಹೊಳೆಯದೇ ಇದ್ದ ಇನ್ನೊಂದು ಮುಖದ ದರ್ಶನವಾಗಿದೆ. ಎಲ್ಲವನ್ನೂ ಪ್ರತಿಕ್ರಿಯೆಗಳ ಮೂಲಕವೇ  ಹೇಳಲು ಸಾಧ್ಯವಾಗದೇ ಇದ್ದಾಗ ಆ ವಿಷಯ ಕುರಿತಂತೆ ಹೊಸ ಲೇಖನವನ್ನೇ ಬರೆಯುವಂತೆ  ಆ  ಚರ್ಚೆಗಳು ನನಗೆ ಪ್ರೇರಣೆ ಒದಗಿಸಿವೆ.  ಹೀಗಾಗಿ ಆ ಚರ್ಚೆಗಳು ನನ್ನ ಬರವಣಿಗೆ ಹಾಗೂ ಬೆಳವಣಿಗೆಗೆ ಪೋಷಕವಾಗಿವೆ.  ನನ್ನ  ಲೇಖನಗಳ ಬಗ್ಗೆ ಅಥವಾ ಇತರರ ಲೇಖನಗಳ ಬಗ್ಗೆ ನಾನು ಚರ್ಚೆಯಲ್ಲಿ ಪಾಲ್ಗೊಂಡಾಗ ಆಯಾ ಲೇಖನಗಳ  ವ್ಯಾಪ್ತಿಯನ್ನು ಮೀರಿ ಮಾತಾಡಿಲ್ಲ ಎಂದು ಭಾವಿಸಿದ್ದೇನೆ. ಒಂದೆರೆಡು ಸಂದರ್ಭಗಳಲ್ಲಿ ನಾನು ಆ ರೀತಿ ಪ್ರತಿಕ್ರಿಯಿಸಬಾರದಿತ್ತು ಎಂದು ಅನಿಸಿದ ಕೂಡಲೇ ‘ನಿಲುಮೆ’ಯಲ್ಲೇ ವಿಷಾದ ಸೂಚಿಸಿದ್ದೇನೆ. ಜತೆಗೆ ‘ತಾಂತ್ರಿಕವಾಗಿ’ ಸಾಧ್ಯವಾದಾಗ ಸಂಬಂಧಪಟ್ಟವರಿಗೆ ನೇರವಾಗಿ ನನ್ನ ವಿಷಾದ ಸೂಚಿಸಿದ್ದೇನೆ.

ಯಾವುದೇ ವಾದ,ಇಸಂ ಮತ್ತು ತತ್ವಗಳಿಗೆ ಬದ್ಧವಾಗದೆ ಎಲ್ಲ ರೀತಿಯ ಬರವಣಿಗೆಗೆ  ಮುಕ್ತ ಅವಕಾಶವಿರುವ ‘ನಿಲುಮೆ’ಯಿಂದ ಸಾಹಿತ್ಯ-ಸಂಸ್ಕೃತಿ-ರಾಜಕೀಯ ಇವುಗಳ ಬಗ್ಗೆ ಹವ್ಯಾಸಿ ಮಟ್ಟದಲ್ಲಿ ಆಸಕ್ತಿ ಮತ್ತು ಕುತೂಹಲವಿರುವ ನನಗೆ ಅಪಾರವಾದ ಸಹಾಯವಾಗಿದೆ. ನನ್ನಂತಹ ಹವ್ಯಾಸಿಗಳ ಬರವಣಿಗೆಗಳಿಗೆ  ರಾಜ್ಯವ್ಯಾಪಿ ಪ್ರಸಾರದ ಪತ್ರಿಕೆಗಳಲ್ಲಿ ಮತ್ತು ಸಾಹಿತ್ಯಿಕ ಪತ್ರಿಕೆಗಳಲ್ಲಿ ಅವಕಾಶ ಸಿಗುವುದು ಕಷ್ಟ. ಅದಕ್ಕೆ ಕಾರಣಗಳು ಹತ್ತು ಹಲವು. ಇವೆಲ್ಲಾ ಓದುಗರಿಗೆ ತಿಳಿದಿರುವ ವಿಷಯವೇ ಆಗಿದೆ. ಅದೇ ರೀತಿ ಪತ್ರಿಕೆಗಳ ಮತ್ತು ಸಾಹಿತ್ಯಿಕ ಪತ್ರಿಕೆಗಳ ವಾಚಕರ ಪತ್ರಗಳು ಹಾಗು ಪ್ರತಿಕ್ರಿಯೆಗಳ ಕಾಲಂ ಸಹ ಹವ್ಯಾಸಿ ಬರಹಗಾರರಿಗೆ ಅರ್ಧ ತೆರೆದ ಬಾಗಿಲು. ನಾನು ಪ್ರತಿ ದಿನ ‘ನಿಲುಮೆ’ಯೂ ಸೇರಿದಂತೆ ಕನ್ನಡದ ಇತರ ನಾಲ್ಕೈದು ಬ್ಲಾಗುಗಳನ್ನು ನೋಡುತ್ತಿರುತ್ತೇನೆ.  ಆ ಎಲ್ಲಾ ಬ್ಲಾಗುಗಳೂ ಓದುಗರ ಪ್ರತಿಕ್ರಿಯೆಗಳಿಗೆ ‘ಮುಕ್ತ’ ಅವಕಾಶ ಕಲ್ಪಿಸಿಲ್ಲ. ‘ನಿಲುಮೆ’ ಸೇರಿದಂತೆ ಇನ್ನೊಂದೆರೆಡು ಬ್ಲಾಗುಗಳಲ್ಲಿ ನಾವುಗಳು ಬರೆದ ಪ್ರತಿಕ್ರಿಯೆ ಕೂಡಲೇ ಪ್ರಕಟವಾಗುತ್ತವೆ. ಮಿಕ್ಕವುಗಳಲ್ಲಿ ‘your comment is awaiting moderation’ /’your comment visible after approval’ ಎಂಬ ಸಂದೇಶ ಬರುತ್ತದೆ. ಆ ಬ್ಲಾಗಿನ moderatorಗಳ ಧ್ಯೇಯ, ಧೋರಣೆ ಹಾಗು ಬದ್ಧತೆಗಳನ್ನು ಅನುಸರಿಸಿ ನಮ್ಮ ಪ್ರತಿಕ್ರಿಯೆಗಳು ಬೆಳಕು ಕಾಣಬಹುದು ; ಕಾಣದೆಯೂ ಇರಬಹುದು. ಮೋಜಿನ ಸಂಗತಿ ಎಂದರೆ  ಅಂತಹ  ಬ್ಲಾಗುಗಳೇ  ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮೂರು ಹೊತ್ತೂ ಹರಿಕಥೆ ಮಾಡುತ್ತಿರುತ್ತವೆ. ತಮ್ಮನ್ನು ಬಿಟ್ಟು ಇತರರೆಲ್ಲರೂ ಫ್ಯಾಸಿಸ್ಟ್ ಮನೋಭಾವದವರೆಂದು ಅವಕಾಶ ಸಿಕ್ಕಾಗೆಲ್ಲಾ ದೂರುತ್ತಿರುತ್ತಾರೆ. “ಮೇರಾ ಕರ್ನಾಟಕ್  ಮಹಾನ್ ಹೈ !!!”

ಮತ್ತಷ್ಟು ಓದು »