ಸುಳ್ಸುದ್ದಿ : ಎಲ್ಲಾ ಡಿ-ದರ್ಜೆಯ ಹುದ್ದೆಗಳನ್ನು ರದ್ದು ಮಾಡಲು ಸರ್ಕಾರದ ಮಹತ್ವದ ನಿರ್ಧಾರ
– ರಾಘವೇಂದ್ರ ಸುಬ್ರಹ್ಮಣ್ಯ
ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಸಲಹೆಕಾರರು ಇತ್ತೀಚೆಗೆ ಕೊಟ್ಟ ಸಲಹೆಯೊಂದನ್ನು ಅಗತ್ಯಕ್ಕಿಂತ ಗಂಭೀರವಾಗಿ ಪರಿಗಣಿಸಿರುವ,ಘನಸರ್ಕಾರವು,ಎಲ್ಲಾ ಡಿ-ದರ್ಜೆಯ ಗುಮಾಸ್ತರ ಹುದ್ದೆಗಳನ್ನು ರದ್ದು ಮಾಡಲು ನಿರ್ಧರಿಸಿದ್ದಾರೆ.ಇತ್ತೀಚೆಗೆ ಸಮಾರಂಭವೊಂದರಲ್ಲಿ ಸಲಹೆಕಾರರು,”ಜಮೀನ್ದಾರರು ಹೆಚ್ಚಿನ ಜಮೀನಿನ ಹಿಡುವಳಿಯಿಟ್ಟುಕೊಂಡು, ಕೂಲಿ ಕಾರ್ಮಿಕರಿಲ್ಲ ಎಂದು ಗೋಳಾಡುವ ಬದಲು, ಎಷ್ಟೋ ಬೇಕೋ ಅಷ್ಟಿಟ್ಟುಕೊಂಡು, ಉಳಿದ ಹೆಚ್ಚಿನ ಜಮೀನಿದ್ದರೆ ಬಡವರಿಗೆ ಕೊಟ್ಟರೆ, ಕೂಲಿಕಾರ್ಮಿಕರ ಸಮಸ್ಯೆ ಬರುವುದಿಲ್ಲ. ಬಡವರು ಕೂಲಿ ಕೆಲಸಕ್ಕೆ ಬರಬೇಕೆಂಬ ಧೋರಣೆಯೇ ಅಮಾನುಷ ಮತ್ತು ಅಮಾನವೀಯವಾದದ್ದು” ಎಂದಿದ್ದರು.
ಈ ಸುದ್ಧಿಯನ್ನು ಕೇಳಿ, ಅದೇ ಮಟ್ಟದಲ್ಲಿ ಯೋಚಿಸುತ್ತಿದ್ದ ಮು.ಮಂಗಳಿಗೆ ಸದನದಲ್ಲಿ ತೂಕೂಡಿಸುತ್ತಿದ್ದಾಗ ಹೊಳೆದ ಆಲೋಚನೆಯ ಪ್ರಕಾರ, “ಸರ್ಕಾರ ಎಲ್ಲರನ್ನೂ ಸಮನಾಗಿ ನೋಡಬೇಕು. ಸಿ ದರ್ಜೆ, ಡಿ ದರ್ಜೆ ಎಂದು ವಿಂಗಡಿಸುವುದೇ ಅಮಾನುಷ ಹಾಗೂ ಅಮಾನವೀಯ. ಸರ್ಕಾರವೇ ಹೀಗೆ ಮಾಡಿದರೆ, ಪ್ರಜೆಗಳಿನ್ನೆಷ್ಟರ ಮಟ್ಟಿಗೆ ಅಮಾನವೀಯವಾಗಿ ವರ್ತಿಸಬಹುದು!? ಆದ್ದರಿಂದ ಎಲ್ಲಾ ಡಿ-ದರ್ಜೆಯ ನೌಕರರನ್ನೂ ತಕ್ಷಣವೇ ಸಿ-ದರ್ಜೆಗೆ, ಎಲ್ಲಾ ಸಿ-ದರ್ಜೆಯ ನೌಕರರನ್ನು ಬಿ-ದರ್ಜೆಗೆ, ಹಾಗೇ ಮುಂದುವರಿದು ಎಲ್ಲಾ ಸೂಪರಿಂಟೆಂಡೆಂಟುಗಳನ್ನು ಕೆ.ಎ.ಎಸ್ ದರ್ಜೆಗೆ ಏರಿಸುವ ಆಲೋಚನೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆಯೆಂದು, ಮು.ಮಂಗಳ ವಕ್ತಾರ ತಿಳಿಸಿದ್ದಾರೆ. ಇದರ ಪರಿಣಾಮವಾಗಿ, ಈ ವರ್ಷದಿಂದ ಡಿ-ದರ್ಜೆಯ ನೌಕರರೇ ಇಲ್ಲದಂತಾಗುತ್ತಾರೆ. ಸರ್ಕಾರ ಮತ್ತು ಸಮಾಜದಲ್ಲಿ ಜನರು ಒಂದು ಹೆಜ್ಜೆ ಮೇಲೇರಿದಂತಾಗುತ್ತದೆ. ಈ ಯೋಜನೆಯ ಮುಂದಿನ ಹಂತವಾಗಿ ಎಲ್ಲಾ ಸಿ-ದರ್ಜೆಯವರನ್ನು ಬಿ-ದರ್ಜೆಗೇರಿಸಿ, ಬಿ-ದರ್ಜೆಯನ್ನು ಎ-ದರ್ಜೆಗೇರಿಸಿ, ಕೊನೆಯ ಹಂತವಾದ ಕೆ.ಎ.ಎಸ್ ಅಧಿಕಾರಿಗಳನ್ನು ಐ.ಎ.ಎಸ್ ಅಧಿಕಾರಿಗಳನ್ನಾಗಿ ಮಾಡಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಅಡ್ಡಿಬಂದಲ್ಲಿ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿ, ಕೇಂದ್ರಸರ್ಕಾರವನ್ನೇ ಅಮಾನ್ಯಗೊಳಿಸುವ ಬಗ್ಗೆಯೂ, ಸರ್ಕಾರಿ ವಕೀಲರು ಅಸಂವಿಧಾನಾತ್ಮಕ ಮಾರ್ಗಗಳನ್ನು ಹುಡುತಿದ್ದಾರೆ. ಈ ರೀತಿ ಸಮಾಜದಲ್ಲಿನ ಎರಡು ಹಂತನ ಅಸಮಾನತೆಯನ್ನು ತೊಡೆದುಹಾಕಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸೇರಲಿದೆಯೆಂದು ವಕ್ತಾರರು ತಿಳಿಸಿದ್ದಾರೆ.”
ಮತ್ತಷ್ಟು ಓದು