ಲಿಫ್ಟ್ ಎಂಬ ಮಾಯಾ ಪೆಟ್ಟಿಗೆ
– ನಾಗೇಶ್ ಕುಮಾರ್ ಸಿ ಎಸ್,ಚೆನ್ನೈ
ನಮ್ಮ ಇಂದಿನ ನಾಗರೀಕತೆಯ ಕುರುಹಾಗಿ ಎಲ್ಲೆಲ್ಲೂ ಕಾಂಕ್ರೀಟ್ ಜಂಗಲ್ ಎಂಬ ತೆಗಳಿಕೆಗೆ ಗುರಿಯಾದ ಬಹು ಅಂತಸ್ತಿನ ಕಟ್ಟಡಗಳೊಂದಿಗೇ ಅವಶ್ಯಕವಾಗಿ ಒದಗಿಬಂದ ಸೌಕರ್ಯ: ಲಿಫ್ಟ್ ಅಥವಾ ಎಲಿವೇಟರ್ ಎಂಬ ಏರುವ, ಇಳಿಯುವ ಏಣಿ…ಮಿಂಚಿನ ವೇಗದಲ್ಲಿ ಹಿತವಾಗಿ ಸುಯ್ಯೆಂದು ನಮಗೆ ಹಲವು ಮಹಡಿಗಳನ್ನು ಶ್ರಮವಿಲ್ಲದೇ ಏರಿಸಿ ಇಳಿಸಿಬಲ್ಲ ಈ ಉಪಯುಕ್ತ ಸಾಧನ ಯಾರಿಗೆ ಬೇಡ?
ಬ್ರಿಟಿಷ್ ಇಂಗ್ಲೀಶಿನಲ್ಲಿ “ಲಿಫ್ಟ್” ಎಂದೂ, ಅಮೆರಿಕನ್ ಪರಿಭಾಷೆಯಲ್ಲಿ “ಎಲಿವೇಟರ್” ಎಂದೂ ಕರೆಯಲ್ಪಡುವ ಈ ಹಾರುವ ಪೆಟ್ಟಿಗೆಗೆ ಒಂದು ಅಂತಸ್ತಿನಿಂದ ಇನ್ನೊಂದಕ್ಕೆ ಕೇವಲ ಸಾಮಾನು ಸರಂಜಾಮು ಸಾಗಿಸಲು ಮಾತ್ರ ಬಳಸಿದರೆ “ ಡಂಬ್ ವೇಯ್ಟರ್”( ಮೂಕ ಮಾಣಿ?) ಎಂದೂ ಹೆಸರಿಸಿದ್ದಾರೆ.
“ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಮೆಟ್ಟಿಲೇರಿ..” ಎಂದು ನಿಮ್ಮ ವೈದ್ಯರು ಎಷ್ಟೇ ಬೋಧಿಸಿದರೂ. ಅದನ್ನು ಮನೆಯಲ್ಲೆ ಮರೆತು,, ಆ ಸಾಲು ಸಾಲು ಲಿಫ್ಟ್ಗಳನ್ನು ಬಹು ಅಂತಸ್ತಿನ ಕಚೇರಿಗಳಲ್ಲಿ ಕಂಡ ಒಡನೆಯೇ ಬಟನ್ ಪ್ರೆಸ್ ಮಾಡಿ ಅದರ ಸಂಖ್ಯೆಯನ್ನು ಕಾತರದಿಂದ ಶಬರಿಯಂತೆ ಕಾಯುತ್ತ ನಿಲ್ಲುವ ಪೀಳಿಗೆ ನಮ್ಮದು…