ನೂರರ ಹೊಸ್ತಿಲಲ್ಲಿ ಕನ್ನಡ ಸಾಹಿತ್ಯ ಪರಿಷತ್ತು
– ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಕನ್ನಡ ಸಾಹಿತ್ಯ ಪರಿಷತ್ತು ಈಗ ನೂರರ ಹೊಸ್ತಿಲಲ್ಲಿ ನಿಂತಿದೆ. 1915 ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಏಳು ಬೀಳುಗಳ ನಡುವೆಯೂ ನೂರು ವರ್ಷಗಳನ್ನು ಪೂರೈಸುತ್ತಿರುವುದು ಕನ್ನಡಿಗರಾದ ನಮಗೆಲ್ಲ ಅಭಿಮಾನದ ಸಂಗತಿಯಿದು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗಾಗಿ ಅಂದಿನ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಆದತ್ಯೆ ನೀಡಿದರು. ಇಂಥದ್ದೊಂದು ಕನ್ನಡ ಸಂಸ್ಥೆಯ ಸ್ಥಾಪನೆಗೆ ಆ ದಿನಗಳ ಅನೇಕ ಸಾಹಿತಿಗಳ ಬೇಡಿಕೆಯೂ ಇತ್ತು. ಸರ್ ಎಮ್.ವಿಶ್ವೇಶ್ವರಯ್ಯ ಮತ್ತು ಕರ್ಪೂರ ಶ್ರೀನಿವಾಸರಾವ್ ಕನ್ನಡ ಸಾಹಿತ್ಯದ ರಕ್ಷಣೆಗಾಗಿ ಪರಿಷತ್ತನ್ನು ಸ್ಥಾಪಿಸಲು ಕಂಕಣಬದ್ಧರಾಗಿ ದುಡಿದರು. ಒಟ್ಟಾರೆ ಎಲ್ಲರ ಪ್ರಯತ್ನ ಮತ್ತು ಆಸೆಯಂತೆ 05.05.1915 ರಂದು ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿತು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿನ ಸಣ್ಣ ಕೊಠಡಿಯೊಂದರಲ್ಲಿ ಸ್ಥಾಪನೆಯಾದ ಪರಿಷತ್ತಿಗೆ ನಂತರದ ದಿನಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ, ಉತ್ತಂಗಿ ಚೆನ್ನಪ್ಪ, ಹಂ.ಪಾ.ನಾಗರಾಜಯ್ಯ, ಮೂರ್ತಿರಾವ್, ವೆಂಕಟಸುಬ್ಬಯ್ಯ, ಗೊರುಚ, ಚಂಪಾ ಅವರಂಥ ಖ್ಯಾತನಾಮ ಸಾಹಿತಿಗಳ ಅಧ್ಯಕ್ಷತೆ ಲಭ್ಯವಾಯಿತು. ಸಣ್ಣ ಕೊಠಡಿಯಿಂದ ಸ್ವತಂತ್ರ ಕಟ್ಟಡಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳಾಂತರಗೊಂಡು ಕನ್ನಡ ಸಾಹಿತ್ಯದ ಮತ್ತು ನಾಡಿನ ರಕ್ಷಣೆಯ ಕೆಲಸದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿತು. ಪುಸ್ತಕಗಳ ಪ್ರಕಟಣೆ, ಸಾಹಿತ್ಯ ಸಮ್ಮೇಳನದ ಏರ್ಪಾಡು, ದತ್ತಿ ಉಪನ್ಯಾಸ ಇತ್ಯಾದಿ ಚಟುವಟಿಕೆಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಬಹುಬೇಗ ಜನರಿಗೆ ಹತ್ತಿರವಾಯಿತು. ಪ್ರಾರಂಭದ ದಿನಗಳಲ್ಲಿ ದೊರೆತ ಸಾಹಿತ್ಯಾಸಕ್ತರ ನೆರವು ಮತ್ತು ಅವರುಗಳ ಪ್ರಾಮಾಣಿಕ ದುಡಿಮೆಯ ಪರಿಣಾಮ ಕನ್ನಡ ಸಾಹಿತ್ಯ ಪರಿಷತ್ತು ಬಹಳಷ್ಟು ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟಿಸಲು ಹಾಗೂ ಯಶಸ್ಸನ್ನು ಕಾಣಲು ಸಾಧ್ಯವಾಯಿತು.