ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 26, 2015

“ನುಡಿಸಿರಿ” ಮತ್ತು ಮೊಸರಲ್ಲಿ ಕಲ್ಲು ಹುಡುಕುವ ಮನಸ್ಥಿತಿ

‍ನಿಲುಮೆ ಮೂಲಕ

– ಗುರುಪ್ರಸಾದ್ ಆಚಾರ್ಯ

ಆಳ್ವಾಸ್ ನುಡಿಸಿರಿ೨೦೧೫” ಆಳ್ವಾಸ್ ನುಡಿಸಿರಿ ” ಮತ್ತು ” ಆಳ್ವಾಸ್ ವಿರಾಸತ್ ” ಈ ಎರಡು ಸಾಂಸ್ಕೃತಿಕ ಹಬ್ಬಗಳ ಹೆಸರು ಕೇಳದ ಜನರು ತೀರಾ ವಿರಳ ಅಂತನೇ ಹೇಳಬೇಕು, ಆ ಮಟ್ಟಿಗೆ ಅದು ಜನರ ಗಮನ ಸೆಳೆದಿದೆ. ಬರಿಯ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟಕ್ಕೂ ತನ್ನ ಖ್ಯಾತಿಯನ್ನ ವಿಸ್ತರಿಸಿ ಅದರಾಚೆಗೂ ತನ್ನ ಛಾಪು ಮೂಡಿಸಿದೆಯೆಂದರೆ ಅದರ ಸ್ವರೂಪ, ವೈಶಿಷ್ಟ್ಯತೆ ಹೇಗಿದ್ದರಬೇಡ. ಇವೆರಡರ ಕಲ್ಪನೆಯೇ ವಿಶಿಷ್ಟವಾದದ್ದು ” ನುಡಿಸಿರಿ ” ಅನ್ನೋದು ನಮ್ಮ ನಾಡಿನ ನುಡಿಗಾಗಿ ಮೀಸಲಿಟ್ಟ ಕಾರ್ಯಕ್ರಮವಾದರೆ ” ವಿರಾಸತ್ ” ನಮ್ಮ ಸಾಂಸ್ಕೃತಿಕ ವೈಭವಕ್ಕೆ ಹಿಡಿದ ಕೈಗನ್ನಡಿ. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಭಾಷೆ ಇವೆರಡರ ಕಬಂಧ ಬಾಹುಗಳ ಬಂಧನದಲ್ಲಿರೋ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಈ ಎರಡೂ ಕಾರ್ಯಕ್ರಮಗಳೇ ಆಶಾಕಿರಣ. ಅಷ್ಟಾಗಿದ್ದೂ ಈ ನುಡಿಸಿರಿಯ ಬಗ್ಗೆ ಅಪಸ್ವರ ಏಳುತ್ತಿದೆ ಅಂದರೆ ಅದನ್ನ ದುರಂತವೆನ್ನದೆ ಇನ್ನೇನನ್ನಲಿ…??

ಬಹುಶಃ ಕಳೆದ ಬಾರಿಯೇ ಇದ್ದಿರಬೇಕು…. ತೀರಾ ಹಿಂದುಳಿದ ವರ್ಗದ ಸಾಂಸ್ಕೃತಿಕ ಕಲಾಪ್ರಕಾರವೊಂದನ್ನ ಅಳವಡಿಸಿಕೊಂಡಿದ್ದಕ್ಕೆ ಅಪಸ್ವರವೊಂದು ಕೇಳಿ ಬಂದಿತ್ತು. ಕಾರಣ ಆ ಕಲಾವಿದರು ತಮ್ಮ ಮೈ ಮತ್ತು ಮುಖಕ್ಕೆ  ಪೂರ್ತಿ ಕಪ್ಪು ಬಣ್ಣ ಬಳಿದುಕೊಂಡಿದ್ದರು.ಭಾರತದಲ್ಲಿ ಕಲಾ ಪ್ರಕಾರಗಳು ಲೆಕ್ಕವಿಲ್ಲದಷ್ಟಿದೆ ಅನ್ನೋದು ನಮಗೆಲ್ಲಾ ಗೊತ್ತಿದ್ದ ವಿಷಯವೇ.ಪ್ರತಿಯೊಂದು ಜನಾಂಗಕ್ಕೂ ಅದರದೇ ಆದ ಸಾಂಸ್ಕೃತಿಕ ಆಚರಣೆಗಳಿರುತ್ತದೆ.ಆ ಜನಾಂಗಕ್ಕೆ ಆ ಕಲಾ ಪ್ರಕಾರದ ಕುರಿತು ಅಭಿಮಾನವಿದ್ದೇ ಇರುತ್ತದೆ, ಇಂಥಾದ್ದರಲ್ಲಿ ಆ ಕಲಾ ಪ್ರಕಾರ ಉಳಿಯಲಿ ಅನ್ನುವ ನಿಟ್ಟಿನಲ್ಲಿ ಅಂತಾ ಕಲಾವಿದರನ್ನ ಕರೆದು ಅವರಿಗೊಂದು ವೇದಿಕೆ ಕಲ್ಪಿಸಿಕೊಟ್ಟು ಆ ಕಲೆಯನ್ನೂ ಉಳಿಸುವ ಪ್ರಯತ್ನ ಪಟ್ಟ ಮೋಹನ್ ಆಳ್ವಾರವರು ಟೀಕೆಗೊಳಪಡುತ್ತಾರೆ.ಅದು ಆ ಜನಾಂಗದ ನಿಂದನೆ ಎಂಬಂತೆ ಲೇಖನ ಬರೆಯುತ್ತಾರೆ.ವಾಸ್ತವದಲ್ಲಿ ” ಜನಾಂಗೀಯ ನಿಂದನೆ ” ಅನ್ನೋ ಆರೋಪ ಹೊರಿಸಿದವರ್ಯಾರು ಆ ಕಲಾವಿದರನ್ನ ಮಾತಾಡಿಸಿ ಅವರ ಮನದ ಮಾತನ್ನ ತಮ್ಮ ಬರಹದ ಮೂಲಕ ಹೇಳಿದ್ದಲ್ಲ. ತಮಗೆ ತಾವೇ ಅದು ಜನಾಂಗೀಯ ಅವಹೇಳನ ಅನ್ನುವ ನಿರ್ಧಾರ ತೆಗೆದುಕೊಂಡು ಡಂಗುರ ಸಾರಿಬಿಟ್ಟಿದ್ದರು. ಆದರೆ ಅದೇ ಕಲಾ ಪ್ರಕಾರವನ್ನ ಖುದ್ದು ರಾಜ್ಯಸರ್ಕಾರವೇ ಒಮ್ಮೆ ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲೋ ಅಥವಾ ದಸರಾ ಉತ್ಸವದಲ್ಲೂ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿತ್ತು. ಆವಾಗ ಏನೂ ಮಾತನಾಡದವರು ಆಳ್ವಾಸ್ ನುಡಿಸಿರಿಯಲ್ಲಿ ಇದನ್ನ ಕಂಡೊಂಡನೆ ಕೆಂಡ ತುಳಿದವರಂತೆ ಆಡತೊಡಗಿದ್ದಾದರೂ ಯಾಕೆ…? ಕಲಾವಿದರಿಗೆ ಮುನಿಸಿಲ್ಲ, ಕಲೆಯನ್ನ ಪೋಷಿಸೋರಿಗೂ ಕೀಳಾಗಿ ಕಾಣಿಸುವ ಯೋಚನೆ ಇಲ್ಲದಿರುವಾಗ ಮೂರನೆ ವ್ಯಕ್ತಿಗಳಿಂದ ಅಪಸ್ವರ ಬರುತ್ತಿರುವುದು  ಯಾಕೆ…?

ಕಳೆದ ಬಾರಿಯದ್ದು ಹಳತಾಯಿತು ಬಿಡಿ ಈ ಬಾರಿಯೂ ಹೊಸ ಅಪಸ್ವರ ಏಳುತ್ತಿದೆಯಂತೆ.ಒಂದಷ್ಟು ಜನರ ಪ್ರಕಾರ ಆ ಕಾರ್ಯಕ್ರಮದಲ್ಲಿ ಬಲಪಂಥೀಯ ವಿಚಾರಧಾರೆಗೆ ಮನ್ನಣೆ ಸಿಗುತ್ತದೆ ಅನ್ನುತಿದ್ದಾರೆ.ನುಡಿಯ ಕುರಿತಾದ ಕಾರ್ಯಕ್ರಮದಲ್ಲಿ ಪಂಥಗಳೆಲ್ಲಿಂದ ಬಂತು…? ಎನ್ನುತ್ತಾ ಈ ಬಾರಿಯ ಆಹ್ವಾನ ಪತ್ರಿಕೆ ನೋಡಿದೆ.ಉದ್ಘಾಟನ ಸಮಾರಂಭಕ್ಕೆ ವೇದಿಕೆ ಏರಲಿರುವವರಲ್ಲಿ ಐದು ಜನ ಕಾಂಗ್ರೆಸ್ ಪಕ್ಷದ ನಾಯಕರು… ಮೂವರು ಬಿಜೆಪಿಯ ನಾಯಕರು ಹಾಗಾದರೆ ಕಾಂಗ್ರೆಸ್ ನಾಯಕರು ಬಲಪಂಥೀಯ ವಿಚಾರಧಾರೆಯವರೇ….???? ಕಾರ್ಯಕ್ರಮದ ಅಧ್ಯಕ್ಷರು ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಇವರು ಬಲಪಂಥೀಯರೇ…? ಸರಿ ಹಾಗಿದ್ದರೆ ಕಾರ್ಯಕ್ರಮದಲ್ಲಿ ಬಲಪಂಥೀಯ ವಿಚಾರಧಾರೆಗೆ ಒತ್ತುಕೊಡುವ ಅಂಶಗಳೇನಾದರೂ ಇದೆಯಾ ಎಂದು ಹುಡುಕಿದರೆ… ಅಲ್ಲಿ ಕಂಡಿದ್ದು ಕನ್ನಡ ನುಡಿಯ ಏಳಿಗೆಗೆ ಮತ್ತು ಕರ್ನಾಟಕದ ಹಲವಾರು ಸಮಸ್ಯೆಗಳ ಕುರಿತಾದ ಚಿಂತನ, ಮಂಥನ… ಅದರಲ್ಲೂ ” ಸಾಮಾಜಿಕ ನ್ಯಾಯ – ಹೊಸತನದ ಹುಡುಕಾಟ ” ಇದರ ಕುರಿತಾಗಿ ಉಪಾನ್ಯಾಸ ಕೊಡೋದಿಕ್ಕೆ ಆಹ್ವಾನಿಸಲ್ಪಟ್ಟವರು ” ಡಾ.ಬಂಜಗೆರೆ ಜಯಪ್ರಕಾಶ್ ”  ಅವರು ಬಲಪಂಥೀಯರೇ…??? ಹಾಗೇನಾದರು ಅಂದರೆ ಅದು ಅವರ ಜೊತೆಗಾರರೇ ಅವರಿಗೆ ಮಾಡುವ ಅವಮಾನವಾದೀತು ಅಲ್ವಾ…

ಇನ್ನೊಂದು ಅಪಸ್ವರ ಎದ್ದಿದ್ದು…. ಮೋಹನ್ ಆಳ್ವಾರವರು,  ಕಲ್ಬುರ್ಗಿಯವರ ಹತ್ಯೆಯ ಕುರಿತಾಗಿ ಏನೂ ಪತ್ರಿಕಾ ಹೇಳಿಕೆ ಕೊಡಲೇ ಇಲ್ಲ…. ಹಾಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಕೂಡದು. ಎಂಥಾ ಅರ್ಥಹೀನ ಮಾತು. ಮಾತನಾಡಿಲ್ಲ , ಅಂದ ಮಾತ್ರಕ್ಕೆ ಅವರು ಕೊಲೆಗಾರರಿಗೆ ಬೆಂಬಲವಾಗಿರೋರು ಅಂತ ಅರ್ಥವೇ…? ಹಾಗಿದ್ದರೆ ಆ ಪ್ರಕರಣದ ಕುರಿತು ಮಾತನಾಡಿದವರು ಕಡಿಮೆ, ಮಾತನಾಡದವರೇ ಹೆಚ್ಚು. ಇದರರ್ಥ ಏನಾಯಿತು…? ತುಂಬಾ ಜನರು ಕಲ್ಬುರ್ಗಿಯವರ ಸಾವನ್ನ ಬಯಸಿದ್ದರು ಅಂತಲೇ….? ಒಂದುವೇಳೆ ಮೋಹನ್ ಆಳ್ವರಿಗೆ ಆ ತೆರನಾದ ಮನಸ್ಸು ಇತ್ತು ಅಂದಿದ್ದರೆ ” ನಾಡೋಜ ಡಾ. ಎಮ್.ಎಮ್. ಕಲ್ಬುರ್ಗಿ ನೆನಪು ” ಅನ್ನೋ ಕಾರ್ಯಕ್ರಮವನ್ನೇಕೆ ಈ ಬಾರಿಯ ನುಡಿಸಿರಿಯಲ್ಲಿ ಹಮ್ಮಿಕೊಂಡಿದ್ದು…? ಅವರ ನೆನಪು ಉಳಿಯಲಿ ಅನ್ನುವ ಕುರಿತಾದ ಕಾಳಜಿ ಮೋಹನ್ ಆಳ್ವಾರಿಗೆ ಇದೆಯಲ್ಲಾ ಇದು ಏನನ್ನ ಸೂಚಿಸುತ್ತದೆ…? ಯಾವುದಾದರೊಂದು ಹೇಳಿಕೆಗೆ ಇಂಥಾದ್ದೆ ಅರ್ಥ ಅಂತಿರುತ್ತದೆ, ಆದರೆ ಏನೂ ಹೇಳದೆ ಇರುವುದಕ್ಕೆ ನಕಾರಾತ್ಮಕ ಅರ್ಥವನ್ನೇ ಹುಡುಕುವವರು…. ನಕಾರಾತ್ಮಕ ವ್ಯಕ್ತಿತ್ವ ಉಳ್ಳವರು ಅಂತಲೇ ಅರ್ಥವಲ್ಲವೇ… ಅದಕ್ಕೆ ಹೇಳಿದ್ದು ಇಂಥವರೆಲ್ಲಾ ಮೊಸರಲ್ಲಿ ಕಲ್ಲು ಹುಡುಕುವವರು ಎಂದು.

ಅಷ್ಟಕ್ಕೂ ನಾವು ನಾಡಿನ ನುಡಿಯ ಕುರಿತಾದ ಕಾರ್ಯಕ್ರಮಗಳಲ್ಲಿ ಪಂಥವನ್ನ ಯಾಕೆ ಹುಡುಕುತ್ತಿದ್ದೇವೆ….? ನುಡಿಸಿರಿಯಲ್ಲಿ ಆಯೋಜನೆಗೊಂಡಿರುವ ವಿಷಯಗಳನ್ನ ನೋಡಿ ಒಟ್ಟು ಎಂಟು ವಿಶೇಷೋಪನ್ಯಾಸಗಳು ಸಾಮಾಜಿಕ ನ್ಯಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಚಳವಳಿ, ಸಾಮರಸ್ಯ, ಜಾನಪದ, ಪರಿಸರ ಕಾಳಜಿ, ಕೃಷಿ, ಪ್ರದರ್ಶನ ಮತ್ತು ಕಲೆ.ಒಟ್ಟು ಐದು ವಿಚಾರಗೋಷ್ಠಿಗಳಿವೆ ಪ್ರಾಚೀನ ಕನ್ನಡ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯ, ಮಾಧ್ಯಮ, ಶಿಕ್ಷಣ, ನೀರಿನ ಬಳಕೆ ಮತ್ತು ಹಂಚಿಕೆ. ಇವುಗಳ ನಡುವೆ ನಮ್ಮ ಕಲಾಪ್ರಕಾರಗಳ ಪ್ರದರ್ಶನ.ಯಾವುದೇ ರೀತಿಯ ಧರ್ಮಾಧಾರಿತ ವಿಚಾರಗಳ ಸುಳಿವೇ ಇಲ್ಲ. ಇಂಥಾ ಒಂದೊಳ್ಳೆಯ ಕಾರ್ಯಕ್ರಮಕ್ಕೆ ಅಪಸ್ವರವೇ…? ಅಷ್ಟಕ್ಕೂ ಇವರು ಈ ಸಮಾರಂಭ  ಬಲಪಂಥದ ಪರ ಅಂಥ ಯಾಕೆ ಹೇಳುತ್ತಾರೋ ಗೊತ್ತಾಗುತ್ತಿಲ್ಲ, ಯಾಕೆ ಈ ಮಾತನ್ನ ಹೇಳುತ್ತಿದ್ದೇನೆ ಗೊತ್ತಾ?ಇದೇ ಸಮಾರಂಭದಲ್ಲಿ ಪ್ರದರ್ಶನಗೊಳ್ಳಲಿಕ್ಕಿರುವ ನಾಟಕ ಯಾವುದು ಗೊತ್ತಾ…? ” ಸಂಸ್ಕಾರ ” ಅದೂ ಡಾ. ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ ನಾಟಕ.ಬಲಪಂಥೀಯ ಧೋರಣೆಯ ಕಾರ್ಯಕ್ರಮ ಇದಾಗಿದ್ದಿದ್ದರೆ ಈ ನಾಟಕದ ಪ್ರದರ್ಶನ ನಡೆಯುತ್ತಿತ್ತೇ…? ಇರಲಿ ಇದರಲ್ಲಿ ಭಾಗವಹಿಸುವ ಕಲಾವಿದರಲ್ಲಿ ಉಸ್ತಾದ್ ಫಯಾಜ್ ಖಾನ್ ಅವರೂ ಇದ್ದಾರೆ ಸೈಯದ್ ಸಲ್ಲಾವುದ್ದೀನ್ ಪಾಷಾ ಅವರೂ ಇದ್ದಾರೆ ಯಾಕೆ ಗೊತ್ತಾ ಇದೊಂದು ಜಾತಿ ಪಂಥ ಮತಗಳನ್ನು ಮೀರಿದ ನಾಡಿನ ಹಬ್ಬ…

ಇದರಲ್ಲೂ ಕೊಂಕನ್ನು ಹುಡುಕುವುದೆಂದರೆ ಅದು ಒಬ್ಬ ವ್ಯಕ್ತಿ ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತಾನೆ ಅನ್ನುವುದನ್ನ ಬಿಂಬಿಸುತ್ತದೆ. ಅಂದರೆ ನೀವು ಕನ್ನಡ ನಾಡು ನುಡಿಯ ಕುರಿತಾದ ಕಾರ್ಯಕ್ರಮ ಅನ್ನುವ ದೃಷ್ಟಿಕೋನದಲ್ಲಿ ನೋಡಿದಾಗ ಇಲ್ಲಿ ತಾಯಿ ಭುವನೇಶ್ವರಿಯ ಆರಾಧನೆ ಮಾತ್ರ ಕಾಣಿಸುತ್ತದೆ ಅದೇ ಯಾವುದೋ ಸಿದ್ಧಾಂತದ ಕನ್ನಡಕ ಹಾಕಿ ನೋಡಿದರೆ ಮೊಸರಲ್ಲೂ ಕಲ್ಲು ಸಿಕ್ಕೀತು.ಆದರೆ ಅಲ್ಲಿ ಸ್ಪಷ್ಟವಾಗೋದು ಒಂದೇ ಕಲ್ಲು ಹುಡುಕುವುದೇ ಇಂಥವರ ಕಾಯಕ ಅನ್ನುವುದು ಅಲ್ವೇ.ಸಿದ್ಧಾಂತಗಳು ಇರುವುದು ತಪ್ಪಲ್ಲ ಎಡವಿರಲಿ, ಬಲವಿರಲಿ ಆದರೆ ಎಲ್ಲಿ ನಮ್ಮ ಸಿದ್ಧಾಂತದ ಉಪಯೋಗ ಆಗಬೇಕು…? ಅನ್ನುವ ಪ್ರಜ್ಞೆ ಇರದೇ ಇದ್ದರೆ ಆ ಸಿದ್ಧಾಂತಗಳೇ ವ್ಯಕ್ತಿಯ ಮಾನ ಹರಾಜು ಹಾಕೀತು ಅಲ್ವಾ… ಇಂತಹ ಅದ್ಭುತ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ, ಸಮಯಕ್ಕೆ ಸರಿಯಾಗಿ ನಡೆಸಿಕೊಂಡು ಬರುತ್ತಿರುವ ಮೋಹನ್ ಆಳ್ವ ಮತ್ತವರ ತಂಡಕ್ಕೆ ಸಾಧ್ಯವಾದಲ್ಲಿ ನಾವು ಬೆನ್ನು ತಟ್ಟ ಬೇಕು… ಅವರ ಜೊತೆಗೂಡಿ ನಾವು ಒಂದಿಷ್ಟು ತಾಯಿ ಭುವನೇಶ್ವರಿ ಸೇವೆ ಮಾಡೋಣ ಎನ್ನುವ ನಿರ್ಮಲ ಮನಸ್ಸಿನಿಂದ ಜೊತೆಗೂಡಬೇಕು ಆಗ್ಲೇ ನಮ್ಮ ನಾಡು ನುಡಿ ಉಳಿದು ಬೆಳೆಯುತ್ತದೆ.

ಇಂಥಾ ಮನಸ್ಥಿತಿಯವರನ್ನ ನೋಡುವಾಗ ಒಂದು ಕಥೆ ನೆನಪಾಗುತ್ತಿದೆ.ಯುರೋಪಿನ ಒಬ್ಬ ಆಗರ್ಭ ಶ್ರೀಮಂತ ತನ್ನ ಪುಟ್ಟ ಮಗನ ಹುಟ್ಟು ಹಬ್ಬದ ದಿನ ಎರಡು ಪ್ರತಿಷ್ಠಿತ ಪುಟ್ಬಾಲ್ ಕ್ಲಬ್ಬಿನ ನಡುವೆ ಪುಟ್ಬಾಲ್ ಪಂದ್ಯವನ್ನಿಟ್ಟು ಉಚಿತವಾಗಿ ಜನರಿಗೆ ಇದರ ವೀಕ್ಷಣೆ ಮಾಡಲು ಅನುವು ಮಾಡುತ್ತಾನೆ.ಇಡಿಯ ಪ್ರೇಕ್ಷಕ ವೃಂದ ಆನಂದದಿಂದ ಈ ಪಂದ್ಯದ ಸವಿ ಸವಿಯುತ್ತಿರಲು ಶ್ರೀಮಂತನ ಮಗ ಮಾತ್ರ ಸಪ್ಪಗಿದ್ದನಂತೆ… ” ಯಾಕಪ್ಪಾ ಸಪ್ಪಗಿದ್ದಿ…?  ಪಂದ್ಯ ಖುಷಿ ಕೊಡುತ್ತಿಲ್ಲವೇ…? ” ಎಂದಿದ್ದಕ್ಕೆ,ಆ ಮಗ ಉತ್ತರಿಸಿದನಂತೆ…. ” ಅಪ್ಪಾ ನಮ್ಮ ಬಳಿ ಅಷ್ಟೊಂದು ಹಣ ಇದೆ ಪ್ರತಿಯೊಬ್ಬರಿಗೂ ಒಂದೊಂದು ಚೆಂಡು ಕೊಟ್ಟಿದ್ದರೆ…..? ಎಲ್ಲರೂ ಸಂತೋಷದಿಂದ ಆಡುತ್ತಿದ್ದರು ಆದರೆ ಈಗ ನೋಡು ಒಂದು ಚೆಂಡಿಗಾಗಿ ಅಷ್ಟೊಂದು ಜನ ಹೇಗೆ ಜಗಳವಾಡುತ್ತಿದ್ದಾರೆ….”! ನೋಡುವ ದೃಷ್ಟಿಕೋನದಲ್ಲಿ ಎಷ್ಟೊಂದು ವ್ಯತ್ಯಾಸ…. ಇಂಥವರಿಂದಲೇ ಇಂದು ನುಡಿಸಿರಿಯಂಥಾ ಕಾರ್ಯಕ್ರಮಕ್ಕೆ ಅಪಚಾರವಾಗುತ್ತಿರೋದು… ಇರಲಿ ಬಿಡಿ, ನಮ್ಮ ಪಾಲಿಗಂತೂ ನುಡಿಸಿರಿ ಅನ್ನೋದು ಹೆಮ್ಮೆಯ ಪ್ರತೀಕ. ತಾಯಿ ಭುವನೇಶ್ವರಿಯ ಬಗ್ಗೆ ಅಬಿಮಾನ ಇರುವವರು ಬರಲಿ ಸಾಕು…. ನಾಡು ನುಡಿಯ ಸೇವೆಗಿಂತಲೂ ತಮ್ಮ ವೈಯಕ್ತಿಕ ಸಿದ್ದಾಂತವೇ ಮಿಗಿಲು ಅನ್ನುವವರು ಬಾರದಿದ್ದರೇನೇ ಒಳ್ಳೆಯದು ಅಲ್ವೇ….?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments