ಬೌದ್ಧಿಕ ಅಸಹಿಷ್ಣು ಪಾಕಿಸ್ತಾನ ಕರ್ನಾಟಕಕ್ಕಿಂತ ವಾಸಿ!
– ಪ್ರೇಮಶೇಖರ
ಎರಡು ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ (ಸಿಎಸ್‌ಎಲ್‌ಸಿ) ವಚನಸಾಹಿತ್ಯದ ಬಗ್ಗೆ ಇದುವರೆಗೂ ಪೋಷಿಸಿಕೊಂಡು ಬಂದಿರುವ ತಪ್ಪುಕಲ್ಪನೆಗಳನ್ನು ದೂರಮಾಡಲು ನಿಖರ ಸಂಶೋಧನೆಯ ಮಾರ್ಗ ಹಿಡಿದಾಗ ಕಂಗೆಟ್ಟ ನಮ್ಮ ಪಟ್ಟಭದ್ರ ವಿಚಾರವಾದಿಗಳು ಸಂಸ್ಥೆಯ ವಿರುದ್ಧ ವೈಚಾರಿಕ ಗೂಂಡಾಗಿರಿ ನಡೆಸಿದ್ದು, ಅವರ ಉಗ್ರ ಬೌದ್ಧಿಕ ಅಸಹಿಷ್ಣುತೆಗೆ ಪ್ರಮುಖ ಕನ್ನಡ ದೈನಿಕವೊಂದು ವೇದಿಕೆಯಾಗಿ ಪತ್ರಿಕಾಧರ್ಮವನ್ನು ಗಾಳಿಗೆ ತೂರಿದ್ದು, ಕೊನೆಗೆ ಇವರೆಲ್ಲರ ಪಿತೂರಿಯಿಂದ ರಾಜ್ಯದ ಪರಮ ಸೆಕ್ಯೂಲರ್ ಕಾಂಗ್ರೆಸ್ ಸರ್ಕಾರ ಸಂಶೋಧನಾ ಕೇಂದ್ರವನ್ನು ಮುಚ್ಚಿದ್ದು ನೆನಪಿದೆಯೇ? ಇದಕ್ಕಿಂತ ಸ್ವಲ್ಪ ಕಡಿಮೆ ಅಸಹ್ಯಕರ ಹಾಗೂ ಪ್ರತಿಗಾಮಿ ಘಟನೆ ಇದೇ ಡಿಸೆಂಬರ್ 3ರಂದು ಪಾಕಿಸ್ತಾನದಲ್ಲಿ ಘಟಿಸಿದೆ. ಅಂದು ಇಸ್ಲಾಮಾಬಾದ್‌ನ ಕಾಯದ್- ಎಫ್ ಆಜಂ ವಿಶ್ವವಿದ್ಯಾಲಯದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹಿಸ್ಟಾರಿಕಲ್ ಆಂಡ್ ಕಲ್ಚರಲ್ ರೀಸರ್ಚ್ (ಎನ್‌ಐಎಚ್‌ಸಿಆರ್) ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಯೀದ್ ವಖಾರ್ ಅಲಿ ಶಾ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಯಿತು.
ಅವರು ಮಾಡಿದ ಅಪರಾಧ ಇಷ್ಟೇ- ನವೆಂಬರ್ 25ರಂದು ಸಿಂಧ್ ಪ್ರಾಂತ್ಯದ ಖಾಯರ್ಪುರ್‌ನಲ್ಲಿರುವ ಶಾ ಅಬ್ದುಲ್ ಲತೀಫ್ ವಿಶ್ವವಿದ್ಯಾಲಯ ಮತ್ತು ಎನ್‌ಐಎಚ್ಸಿಆರ್ ಜಂಟಿಯಾಗಿ ‘ಸಿಂಧ್: ಇತಿಹಾಸ ಮತ್ತು ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ವಿಚಾರಸಂಕಿರಣವೊಂದನ್ನು ಆಯೋಜಿಸಿದವು. ಅಲ್ಲಿ ತಮ್ಮ ಪ್ರಬಂಧ ಮಂಡಿಸುತ್ತ ಪ್ರೊ. ಶಾ, ಪಾಕಿಸ್ತಾನದ ಅಧಿಕೃತ ಇತಿಹಾಸದಲ್ಲಿ ದಾಖಲಾಗಿಲ್ಲದ ಹಲವು ಹೆಸರುಗಳನ್ನು ಪ್ರಸ್ತಾಪಿಸಿದರು. ಭಗತ್ ಸಿಂಗ್‌ರಂತಹ ಸ್ವಾತಂತ್ರ್ಯ ಹೋರಾಟಗಾರರು, ಜಿ. ಎಂ. ಸಯೀದ್, ಬಚ್ಚಾ ಖಾನ್, ವಲೀ ಖಾನ್ ಮುಂತಾದ ಸ್ವಾತಂತ್ಯ್ರೋತ್ತರ ಪಾಕಿಸ್ತಾನದ ಪ್ರಾಂತೀಯ ನಾಯಕರೂ ಪಾಕಿಸ್ತಾನದ ಇತಿಹಾಸದ ಪುಸ್ತಕಗಳಲ್ಲಿ ಸ್ಥಾನ ಪಡೆಯಬೇಕು ಎಂದು ವಾದಿಸಿದರು. ಅವರ ಮಾತುಗಳು ಪಠ್ಯಕ್ರಮಗಳ ಮೇಲೆ ನಿಗಾ ವಹಿಸುವುದಕ್ಕೆಂದೇ ಇರುವ ಸರ್ಕಾರದ ಉನ್ನತ ಶಿಕ್ಷಣ ಆಯೋಗದ ಕೆಂಗಣ್ಣಿಗೆ ಗುರಿಯಾದವು.