ವಿಷಯದ ವಿವರಗಳಿಗೆ ದಾಟಿರಿ

Archive for

29
ಡಿಸೆ

ಬಂಗುಡೆ ಫ್ರೈ ಮತ್ತು ಭಗವದ್ಗೀತೆ

– ರೋಹಿತ್ ಚಕ್ರತೀರ್ಥ

ದೇವನೂರು ಮಹಾದೇವವರ್ಷಕ್ಕೋ ಎರಡು ವರ್ಷಕ್ಕೋ ಒಂದು – ಎರಡಲ್ಲ, ಒಂದೇ – ಸಿನೆಮಾ ಕೊಡುತ್ತಿದ್ದ ಹಿಂದಿಯ ರಾಜ್‍ಕುಮಾರ್ ಮೇಲೆ, ನನ್ನ ತಂದೆಗೆ ಕುತೂಹಲ, ಪ್ರೀತಿ, ಹುಚ್ಚು ಅಭಿಮಾನ ಇದ್ದವು. ಹಾಗೆಯೇ, ಬಹುಕಾಲ ಮೌನವಾಗಿದ್ದು ವರ್ಷಕ್ಕೆ ಒಂದೆರಡು ಮಾತು, ಒಂದೆರಡು ಹಾಳೆ ಸಾಹಿತ್ಯ ಬರೆಯುವವರ ಬಗ್ಗೆ ಹೆಚ್ಚಾಗಿ ಜನರಿಗೆ ಕುತೂಹಲ ಇರುತ್ತದೆ. ಇಂಥವರು ಕಾವಿ ತೊಟ್ಟರೆ, ಮಾತಾಡದೆ ಕೂತರೂ ಜಗತ್ಪ್ರಸಿದ್ಧರಾಗುತ್ತಾರೆ! ಇಂತಹ ಮಿತಾಕ್ಷರಿಗಳ ಪಂಥಕ್ಕೆ ಸೇರಿದ ಕನ್ನಡದ ಸಾಹಿತಿ ದೇವನೂರ ಮಹಾದೇವ, ವರ್ಷಕ್ಕೆ ಒಂದು ಭಾಷಣ ಮಾಡಿದರೆ, ಅದರ ಹಿಂದೆ ಹಲವು ದಿನಗಳ ಚಿಂತನೆ ಇರುತ್ತದೆ; ಇರಬೇಕು ಎಂದು ನಾವೆಲ್ಲ ಬಯಸುತ್ತೇವೆ. ಹಾಗೆಯೇ, ಅವರ ಐನೂರು ಪದಗಳೊಂದು ಲೇಖನ ಪ್ರಕಟವಾದರೂ, ಅದರಲ್ಲೇನೋ ಗಹನವಾದ ಸೂತ್ರರೂಪೀ ಸಂಗತಿಗಳು ಅಡಕವಾಗಿರಬಹುದು ಎಂಬ ಪೂರ್ವಗ್ರಹದಿಂದ ಎರಡೆರಡು ಬಾರಿ ಓದಿನೋಡುವ ಸಾಹಿತ್ಯಪ್ರೇಮಿಗಳಿದ್ದಾರೆ. ಹಾಗಾಗಿ ದಿನಕ್ಕೆ ಸಾವಿರ ಪದಗಳನ್ನು ಕುಟ್ಟುವ ನನ್ನಂಥ ಕೈಬಡುಕರಿಗಿಂತ ದೇವನೂರರ ಮೇಲೆ ಹುಟ್ಟುವ ನಿರೀಕ್ಷೆ ದೊಡ್ಡದು. ಅದನ್ನು ನಿಜ ಮಾಡುವ ಆನೆಯಂಥ ಹೊಣೆಗಾರಿಕೆಯೂ ಅವರ ಹೆಗಲ ಮೇಲೆ ಕೂತಿರುತ್ತದೆ.

ಈ ವರ್ಷ, ನಿಯಮ ತಪ್ಪಿ, ದೇವನೂರ ಎರಡು ಸಲ ಮಾತಾಡಿದರು. ಒಮ್ಮೆ, ಪ್ರಶಸ್ತಿ ಯಾಕೆ ವಾಪಸು ಮಾಡುತ್ತಿದ್ದೇನೆ ಎಂದು ಹೇಳಲು ಪತ್ರ ಬರೆಯುವುದರ ಮೂಲಕ. ಇನ್ನೊಮ್ಮೆ, ಮಂಗಳೂರಲ್ಲಿ ನಡೆದ – ಸಾಹಿತ್ಯವೊಂದು ಬಿಟ್ಟು ಮಿಕ್ಕೆಲ್ಲ ಅಪಸವ್ಯಗಳೂ ಇದ್ದ – ಒಂದು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷಭಾಷಣ ಮಾಡುವ ಮೂಲಕ. ಪ್ರಶಸ್ತಿ ವಾಪಸು ಪ್ರಹಸನದ ನಿಜಬಣ್ಣ ಲೋಕಕ್ಕೇ ಗೊತ್ತಾಗಿರುವುದರಿಂದ, ಆ ಸಂದರ್ಭದ ಮಾತುಗಳನ್ನು ಮತ್ತೆ ಕೆದಕುವುದು ಬೇಡ. ನಕಲು ಸಮ್ಮೇಳನದಲ್ಲಿ ಅವರು ಏನು ಹೇಳಿದರು ಎನ್ನುವುದನ್ನು ಮಾತ್ರ ಈ ಲೇಖನದ ಸೀಮಿತ ಚೌಕಟ್ಟಿಗೆ ಎತ್ತಿಕೊಂಡಿದ್ದೇನೆ.

**
ಇತ್ತೀಚೆಗೆ ರಾಮಾಯಣ, ಮಹಾಭಾರತಗಳ ಕಡೆ ನಮ್ಮ ಸಮಕಾಲೀನ ಲೇಖಕರು ಮತ್ತೆಮತ್ತೆ ಹೊರಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚರ್ಚೆಯ ವಿಷಯವಾಗಿರುವುದರಿಂದ ದೇವನೂರ ಕೂಡ ಆ ಎರಡು ಗ್ರಂಥಗಳನ್ನು ಎತ್ತಿಕೊಂಡಿದ್ದಾರೆ. ಮಿದುಳಿಲ್ಲದ ಧ್ವನಿವರ್ಧಕದಂತೆ ತನ್ನನ್ನು ಬಿಂಬಿಸಿಕೊಂಡು ಪ್ರಚಾರ ಪಡೆದ ಭಗವಾನ್‍ಗಿಂತ ಭಿನ್ನ ಧಾಟಿಯಲ್ಲಿ ಮಾತಾಡಿದ್ದರಿಂದ ದೇವನೂರರ ಮಾತುಗಳು – ಒಪ್ಪುವ ಒಪ್ಪದಿರುವ ಪ್ರಶ್ನೆಗಿಂತ, ಕನಿಷ್ಠ ವಿಶ್ಲೇಷಣೆಗೊಳಪಡಿಸಲು ಅರ್ಹವಾಗಿವೆ. ದೇವನೂರ ಬಹುಶಃ ಮೂರು ಪೂರ್ವಗ್ರಹಗಳಿಂದ ತನ್ನ ಮಾತು-ಚಿಂತನೆಗಳನ್ನು ಶುರುಮಾಡುತ್ತಾರೆ ಎಂದು ಕಾಣುತ್ತದೆ. ಒಂದು – ಭಾರತದಲ್ಲಿ ಇಂದಿಗೂ ದೇವಸ್ಥಾನಗಳಿಗೆ ಪ್ರವೇಶ ಪಡೆಯುವುದೇ ದಲಿತರ ದೊಡ್ಡ ಸವಾಲಾಗಿದೆ. ಎರಡು – ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹಲವು ಭಾಗಗಳು ಸರಿಯಿಲ್ಲ, ಮತ್ತು ಈ ಗ್ರಂಥಗಳೇ ಇಂದಿಗೂ ನಮ್ಮನ್ನು ಸಾಮಾಜಿಕವಾಗಿ ಬೌದ್ಧಿಕವಾಗಿ ಆಳುತ್ತಿವೆ. ಮೂರು – ಜಾತಿ ವರ್ಗ ಕಳೆದು ಎಲ್ಲವೂ ಸಮಾನವಾದರೆ ದೇಶದಲ್ಲಿ ಸರ್ವೋದಯವಾಗುತ್ತದೆ. ನಾನು ನನ್ನ ಸುತ್ತಲಿನ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನಷ್ಟೆ ಹಿನ್ನೆಲೆಯಾಗಿಟ್ಟುಕೊಂಡು ದೇವನೂರರ ಮಾತುಗಳ ವಿಶ್ಲೇಷಣೆ ನಡೆಸುವುದು ಸಾಧ್ಯ. ಹಾಗಾಗಿ ಮುಂದಿನ ಎಲ್ಲ ಮಾತುಗಳನ್ನು ಓದುಗರು ತಂತಮ್ಮ ಜಗತ್ತಿನ ಹಿನ್ನೆಲೆಯಲ್ಲಿಟ್ಟು ತಾಳೆ ನೋಡುವುದಕ್ಕೆ ಸ್ವತಂತ್ರರು.
ಮತ್ತಷ್ಟು ಓದು »