ಇಂಧನ ಸಮಸ್ಯೆಯ ಪರಿಹಾರಕ್ಕಾಗಿ ನಡೆಯುತ್ತಿರುವ ಸಂಶೋಧನೆಗಳ ಮತ್ತೊಂದು ಮುಖ…
– ಶ್ರೀವತ್ಸ ಭಟ್
ಒಮ್ಮೆ ಊಹಿಸಿಕೊಳ್ಳಿ ನಮ್ಮ ಮನೆಯ ಬಲ್ಬುಗಳು ವಿದ್ಯುತ್ತಿಲ್ಲದೆಯೇ ಉರಿಯತೊಡಗಿದರೆ,ಮನೆಯಂಗಳದಲ್ಲಿರುವ ಗಿಡಗಳು ಬೆಳಕನ್ನು ಹೊರಸೂಸತೊಡಗಿದರೆ ಹೇಗಿರುತ್ತದೆ ಅಲ್ಲವೇ..! ಹೌದು ಬಲ್ಬುಗಳೇ ಬೆಳಕನ್ನು ಉತ್ಪಾದಿಸಿ ಬೆಳಗುವ,ಸಸ್ಯಗಳು ಬೆಳಕನ್ನು ಸೂಸುವ ಅದ್ಭುತ ಸಂಶೋಧನೆಯೊಂದು ಬಹುತೇಕ ಯಶಸ್ಸಿನ ಹಂತದಲ್ಲಿದೆ.ನೀವು ಮಿಣುಕುಹುಳುಗಳನ್ನು ನೋಡಿರಬಹುದು. ಕತ್ತಲಿನಲ್ಲಿ ಬೆಳಕನ್ನು ಹೊರಸೂಸುತ್ತಾ ಹಾರುವ ಜೀವಜಗತ್ತಿನ ವಿಸ್ಮಯ ಜೀವಿಗಳು. ಹೀಗೆ ಜೀವಿಗಳು ಬೆಳಕನ್ನು ಹೊರಸೂಸುವ ಈ ಪ್ರಕ್ರಿಯೆಗೆ ಜೈವದೀಪ್ತತೆ ಎಂದು ಹೆಸರು.ಇಂಗ್ಲಿಷಿನಲ್ಲಿ ಇದಕ್ಕೆ Bio luminescence ಎಂದು ಕರೆಯುತ್ತಾರೆ.
ಜೈವದೀಪ್ತತೆ ಮನುಷ್ಯನ ಕುತೂಹಲ ಕೆರಳಿಸಿದ್ದು ಇವತ್ತು ನಿನ್ನೆಯ ವಿಷಯವಲ್ಲ. ಮೈಕೆಲೆಂಜಲೋ ಮೆರಿಜಿ (Michelangelo Merisi da Caravaggio) ಎಂಬ ಇಟಲಿಯ ಪ್ರಸಿದ್ಧ ಚಿತ್ರಕಾರನೊಬ್ಬ ಇದೇ ಹುಳುಗಳ ಒಣಗಿದ ಪುಡಿಯನ್ನು ಬಳಸಿಕೊಂಡು ತನ್ನ ಪೇಂಟಿಂಗ್ ಹೊಳೆಯುವಂತೆ ಮಾಡುತ್ತಿದ್ದನಂತೆ. ಇಂತಹ ಬಹುತೇಕ ಜೀವಿಗಳು ಕಾಣಸಿಗುವುದು ಸಮುದ್ರದಲ್ಲಿ. ವಿಶ್ವವಿಖ್ಯಾತ ಜೀವಶಾಸ್ತ್ರಜ್ಞ ಚಾರ್ಲ್ಸ್ ಡಾರ್ವಿನ್ ತನ್ನ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾನೆ…“ ವಿಶಾಲ ಸಾಗರದಲ್ಲಿ ಪಯಣಿಸುತ್ತಿದ್ದೆ, ರಾತ್ರಿಯ ಸಮಯವದು, ತಂಪಾದ ಗಾಳಿ ಬೀಸುತ್ತಿತ್ತು, ಹಗಲಿನಲ್ಲಿ ಸಮುದ್ರದ ಮೇಲೆ ನೊರೆಯಂತೆ ಕಾಣುತ್ತಿದ್ದ ವಸ್ತುಗಳು ರಾತ್ರಿಯ ಸಮಯದಲ್ಲಿ ಹೊಳೆಯುತ್ತಿದ್ದವು.”