ಗೂಢಚರ್ಯದ ಅಂತ’ರಾ’ಳ
– ಸಂತೋಷ್ ತಮ್ಮಯ್ಯ
ಕಾಲೇಜು ದಿನಗಳ ರಸಪ್ರಶ್ನೆಯಲ್ಲಿ ಅದರ ಬಗ್ಗೆ ಪ್ರಶ್ನೆಗಳು ಬಂದಿರಬಹುದು. ಪತ್ರಿಕೆಗಳ ವರದಿಗಳು ಅವುಗಳ ಕುತೂಹಲವನ್ನು ಬೆಳೆಸಿರಬಹುದು. ಸಿನೆಮಾಗಳು ಆ ಕುತೂಹಲವನ್ನು ಕೆರಳಿಸಿರಬಹುದು. ದೇಶ ದ್ರೋಹಿ ISI ಪ್ರಸ್ಥಾಪವಾದಾಗಲೆಲ್ಲಾ ಅದು ನೆನಪಾಗಿರಬಹುದು, ಬಾಂಡ್ ಸಿನೆಮಾಗಳು ನೋಡುವಾಗಲೆಲ್ಲಾ ಅದು ನೆನಪಾಗಿರಬಹುದು. ಅದರ ಬಗ್ಗೆ ಹೆಮ್ಮೆ ಹುಟ್ಟಿರಬಹುದು. ಇಸ್ರೇಲಿನ ಮೊಸಾದ್‌ನಂತೆ, ಅಮೇರಿಕಾದ ಸಿಐಎನಂತೆ, ಇಂಗ್ಲೆಂಡಿನ MI-6 ನಂತೆ ನಮ್ಮ Research and Analysis Wing ಎಂದುಕೊಂಡಿರಲೂಬಹುದು.
ನಿಜ ಆ ಹೆಸರಲ್ಲಿ ಆಕರ್ಷಣೆಯಿದೆ. ಹಾಗಾಗಿ RAW ಎಂದರೆ ಎಲ್ಲರಿಗೂ ಗೊತ್ತಿದೆ. ಆ ಹೆಸರಿನೊಂದಿಗೆ ನಿಗೂಢತೆ ಮೆತ್ತಿಕೊಂಡಿದೆ. ಎಲ್ಲರಿಗೂ ಅದರ ಬಗ್ಗೆ ಕುತೂಹಲ ಇದ್ದೇ ಇದೆ. ಏಕೆಂದರೆ ಪ್ರತಿಯೊಬ್ಬ ಭಾರತೀಯನಿಗೂ RAW ಎಂದರೆ ಗೂಢಾಚಾರಿಕೆ ನೆನಪಾಗುತ್ತದೆ. ಪಾಕಿಸ್ಥಾನ ನೆನಪಾಗುತ್ತದೆ. ರೋಚಕ ಕಥೆಗಳು ನೆನಪಾಗುತ್ತವೆ. ಜೇಮ್ಸ್ ಬಾಂಡ್ ಸಿನೆಮಾಗಳಂತಹ ಸಾಹಸಗಳು ನೆನಪಾಗುತ್ತವೆ. ಶತ್ರು ದೇಶದೊಳಗೆ ನುಗ್ಗಿ ರಹಸ್ಯಗಳನ್ನು ಭೇದಿಸುವ ಪರಾಕ್ರಮಿ, ಯಾವುದೋ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಏಜೆಂಟ್ ನೆನಪಾಗುತ್ತದೆ. ಭಾರತದ ‘ರಾ’ ಅಂಥದ್ದು. ಸಿಕ್ಕಿ ಹಾಕಿಕೊಂಡು ವರ್ಷಾನುಗಟ್ಟಲೆ ಪಾಕಿಸ್ಥಾನದ ಜೈಲುಗಳಲ್ಲಿ ಕೊಳೆಯುವ ಅಥವಾ ಗಲ್ಲಿಗೇರಿಸಲ್ಪಡುವ ಆತನಿಗಾಗಿ ದೇಶ ಮರುಗಿದೆ. ದೇಶದ ರಹಸ್ಯಗಳು ಸೋರಿಕೆಯಾಗದಂತೆ ತಡೆಯುವುದು ಮತ್ತು ಶತ್ರುಗಳ ಆಗುಹೋಗುಗಳನ್ನು ಅರಿಯುವುದು ಈ ‘ರಾ‘ ದ ಕೆಲಸ.
ಆದರೆ ‘ರಾ’ ದ ಬಗ್ಗೆ ತಿಳಿಯಲು ಆಸಕ್ತರಾಗಿದ್ದರೂ ಅದರ ಬಗ್ಗೆ ಬಂದ ನಂಬಿಗಸ್ಥ ಪುಸ್ತಕಗಳು ಕಡಿಮೆ. ವಿಚಿತ್ರ ಎಂದರೆ ‘ರಾ’ ಬಗ್ಗೆ ಭಾರತೀಯರು ಬರೆದಿರುವುದಕ್ಕಿಂತಲೂ ಪಾಕ್ ನ ಐಎಸ್‌ಐ ಏಜೆಂಟರು, ಸಾಹಿತಿಗಳು ಬರೆದಿರುವುದೇ ಹೆಚ್ಚು! ನಿಂದಾಸ್ತುತಿಗಳಿಂದ ಕೂಡಿದ, ಸತ್ಯಕ್ಕೆ ದೂರವಾದ ಸಂಗತಿಗಳು ಮತ್ತು ಊಹೆಗಳಿಂದ ತುಂಬಿದ ಪಾಕಿಸ್ತಾನಿ ಪುಸ್ತಕಗಳು ತಮ್ಮ ಮೂಗಿನ ನೇರಕ್ಕೆ ‘ರಾ’ವನ್ನು ಚಿತ್ರಿಸಿವೆ. ಭಾರತದ ಕೆಲವು ಪುಸ್ತಕಗಳಲ್ಲಿ ಕೂಡ ಕೇವಲ ರೋಮಾಂಚಕಾರಿ ಕಥನಗಳಿಗೆ ಪ್ರೇಮವನ್ನು ತುರುಕಿ ಸತ್ಯವನ್ನು ಲಗಾಡಿ ಎಬ್ಬಿಸಿಲಾಗಿದೆ.ಒಟ್ಟು ‘ರಾ’ ವನ್ನು ಹೊರಗಿನಿಂದ ನೋಡಿ ಬರೆದವರೇ ಹೆಚ್ಚು. ಆದರೂ ಭಾರತೀಯ ಸಾಹಿತ್ಯದಲ್ಲಿ ಅಶೋಕ್ ರೈನಾ ಅವರ ಪುಸ್ತಕ ಮತ್ತು ‘ರಾ’ದ ಎಡಿಶನಲ್ ಸಕ್ರೇಟರಿಯಾಗಿದ್ದ ಬಿ. ರಾಮನ್ ಅವರ ಪುಸ್ತಕಗಳು ‘ರಾ’ ದ ನೈಜ ಮುಖವನ್ನು ಚಿತ್ರಿಸುತ್ತದೆ. ಹಾಗೆ ನೋಡಿದರೆ ಭಾರತದಲ್ಲಿ ‘ರಾ’ಬಗ್ಗೆ ಬರೆಯುವುದಕ್ಕಿಂತ ಸಿಐಎ ಬಗ್ಗೆ ಬರೆಯುವುದೇ ಸುಲಭ ಎಂಬಂತಹ ಪರಿಸ್ಥಿತಿ ಇದೆ. ಏಕೆಂದರೆ ಅವುಗಳ ಬಗ್ಗೆ ಅಧಿಕೃತ ವೆಬ್‌ಸೈಟುಗಳಿವೆ.ಅದರೆ ಭಾರತದಲ್ಲಿ ಇಲ್ಲ. ಜೊತೆಗೆ ಭಾರತದ ೧೯೨೩ರ ಭಾರತೀಯ ರಹಸ್ಯ ಕಾಯ್ದೆ ಸುರಕ್ಷತೆಯ ಹೆಸರಲ್ಲಿ ಕೆಲವು ಅಂಶಗಳನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ಭಾರತೀಯರಿಗೆ ‘ರಾ’ ಬಗ್ಗೆ ತಿಳಿಯಬೇಕೆಂದು ಹೊರಟಷ್ಟೂ ಪಾಕಿಸ್ತಾನದ RAW ಕಾಣುತ್ತಾ ಹೋಗುತ್ತದೆ.
ಮತ್ತಷ್ಟು ಓದು