ಮತ್ತೆ ಮತ್ತೆ ಹೆಮ್ಮಿಂಗ್ವೆ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಹತ್ತಾರು ಎತ್ತಿನಬಂಡಿಗಳು,ಲಾರಿಗಳು ಓಡಾಡುತ್ತಿದ್ದ ಸೇತುವೆಯ ತುದಿಯಲ್ಲಿ ಆ ವೃದ್ಧ ಕುಳಿತಿದ್ದ.ತೀರ ಕೊಳಕಾದ ಉಡುಪುಗಳನ್ನು ತೊಟ್ಟಿದ್ದ ಆತ ಸಾಧಾರಣ ಗುಣಮಟ್ಟದ ಚಾಳೀಸೊಂದನ್ನು ಧರಿಸಿದ್ದ. ಸೇತುವೆಯ ಒಂದು ತುದಿಯಲ್ಲಿ ಮಣಭಾರದ ಮೂಟೆಗಳನ್ನು ಹೊತ್ತು ನಡೆಯಲಾಗದೇ ನಿಂತಿದ್ದ ಹೇಸರಗತ್ತೆಗಳನ್ನು ಸೈನಿಕರು ಕಷ್ಟಪಟ್ಟು ಮುಂದೆ ತಳ್ಳುತ್ತಿದ್ದರು.ಹೆಂಗಸರು ತಮ್ಮ ಮಕ್ಕಳೊಂದಿಗೆ ಸಂಕವನ್ನು ಅವಸರದಲ್ಲಿ ದಾಟಿಕೊಂಡು ಮತ್ತೊಂದು ತುದಿಯನ್ನು ತಲುಪಿಕೊಳ್ಳುವ ಧಾವಂತದಲ್ಲಿದ್ದರೂ ಮುದುಕ ಮಾತ್ರ ಸುಮ್ಮನೇ ಕುಳಿತುಕೊಂಡಿದ್ದ.ಮೈಲುಗಟ್ಟಲೆ ನಡೆದು ಬಂದ ಆತನ ಮುಖದಲ್ಲಿ ಸುಸ್ತು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆತ ಅದಾಗಲೇ ಸೇತುವೆಯನ್ನು ದಾಟಿ ಬಂದಿದ್ದರಿಂದಲೋ ಏನೋ, ಮುಂದೆ ನಡೆಯಲಾರೆನೆನ್ನುವ ಭಾವ ಆತನ ನಿತ್ರಾಣಗೊಂಡ ಮೊಗದಲ್ಲಿ ಕಾಣಿಸುತ್ತಿತ್ತು.ಸೇತುವೆಯ ಮತ್ತೊಂದು ತುದಿಯನ್ನು ದಾಟಿ ಶತ್ರುಗಳ ಚಲನವಲನವನ್ನು ಗಮನಿಸುವ ಜವಾಬ್ದಾರಿ ನನ್ನ ಮೇಲಿತ್ತು.ನಾನು ಸೇತುವೆಯನ್ನೊಮ್ಮೆ ದಾಟಿ ಎಚ್ಚರಿಕೆಯಿಂದ ಅಲ್ಲಿನ ಪರಿಸರವನ್ನು ಗಮನಿಸಿದೆ.ಶತ್ರುಗಳ ಭಯದಿಂದ ಸೇತುವೆಯನ್ನು ದಾಟಿ ಸುರಕ್ಷಿತ ತಾಣವನ್ನು ಸೇರಿಕೊಳ್ಳಲು ನಡೆದುಬರುತ್ತಿದ್ದ ಜನರ ಸಂಖ್ಯೆಯೂ ವಿರಳವಾಗತೊಡಗಿತ್ತು. ಹೆಚ್ಚಿನವರು ಸೇತುವೆಯ ಸುರಕ್ಷಿತ ಪಕ್ಕವನ್ನು ಸೇರಿಕೊಂಡಾಗಿತ್ತು.ಶತ್ರುಗಳು ತೀರ ಸೇತುವೆಯನ್ನು ಸಮೀಪಿಸಿಲ್ಲವೆನ್ನುವದು ಖಚಿತಪಡಿಸಿಕೊಂಡು ನಾನು ಹಿಂತಿರುಗಿ ಬಂದ ನಂತರವೂ ವೃದ್ಧ ಸೇತುವೆಯ ಪಕ್ಕದಲ್ಲಿಯೇ ಕುಳಿತಿದ್ದ.
“ನಿನ್ನ ಊರಾವುದು ತಾತ..”? ಎಂದು ನಾನು ಆ ವೃದ್ಧನನ್ನು ಕೇಳಿದೆ.”ಸಾನ್ ಕಾರ್ಲೋಸ್” ಎಂದ ವೃದ್ಧನ ಮುಖದಲ್ಲಿ ಸಣ್ಣದೊಂದು ಔಪಚಾರಿಕ ಮಂದಹಾಸ.ನಾನು ಕೇಳದಿದ್ದರೂ”ಅಲ್ಲಿ ನಾನು ಕೆಲವು ಸಾಕುಪ್ರಾಣಿಗಳ ಮೇಲ್ಚಿಚಾರಕನಾಗಿ ಕೆಲಸ ಮಾಡುತ್ತಿದ್ದೆ”ಎಂದು ನುಡಿದನಾತ.”ಹೌದಾ..”ಎನ್ನುವ ಉದ್ಗಾರವೊಂದು ನನ್ನ ಬಾಯಿಂದ ಹೊರಬಿದ್ದದ್ದೇನೋ ನಿಜ.ಆದರೆ ಪ್ರಾಣಿಗಳ ಮೇಲ್ವಿಚಾರಣೆ ಎನ್ನುವ ಆತನ ಮಾತುಗಳು ನನಗೆ ಅರ್ಥವಾಗಲಿಲ್ಲ.”ಮ್ಮ್,ನಾನು ಕೆಲವು ಪ್ರಾಣಿಗಳನ್ನು ಸಾಕಿಕೊಂಡು ಜೀವನವನ್ನು ನಡೆಸುತ್ತಿದ್ದೆ.ಯುದ್ಧ ಭೀತಿಗೆ ನನ್ನೂರಿನ ಹೆಚ್ಚಿನ ಜನ ಊರನ್ನು ತೊರೆದು ಸೇತುವೆಯನ್ನು ದಾಟಿ ಬಂದುಬಿಟ್ಟರು,ಕದನಭಯದ ನಡುವೆಯೂ ಹುಟ್ಟೂರಿನೆಡೆಗಿನ ನನ್ನ ಭಾವುಕತೆ ನನ್ನನ್ನು ಇಷ್ಟು ದಿನ ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿತ್ತು,ಸಾನ್ ಕಾರ್ಲೋಸ್ ಬಿಟ್ಟ ಕೊನೆಯ ಕೆಲವು ನಾಗರಿಕರಲ್ಲಿ ನಾನೂ ಒಬ್ಬ”ಎನ್ನುತ್ತ ಮಾತು ಮುಂದುವರೆಸಿದ ವೃದ್ಧ.
ಮತ್ತಷ್ಟು ಓದು