ಈ ಯೋಧರು ತಮ್ಮ ಆಳುಗಳಿಗೆ ಕೊಟ್ಟ ಕೂಲಿ ಮುಖ್ಯಮಂತ್ರಿಯೂ ಕೊಡಲಾರ !
– ಸಂತೋಷ್ ತಮ್ಮಯ್ಯ
೧೯೯೯ರ ಜುಲೈ ತಿಂಗಳು. ದೇಶಾದ್ಯಂತ ಕಾರ್ಗಿಲ್ ಯುದ್ಧದ ಬಿಸಿ ವ್ಯಾಪಿಸುತ್ತಿತ್ತು. ಎಲ್ಲೆಲ್ಲೂ ಆಕ್ರೋಶ, ಯೋಧರ ಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದವು. ದೇಶದ ಮೂಲೆ ಮೂಲೆಗಳಿಂದ ನಿಧಿಸಂಗ್ರಹ, ಪಾಕ್ ಖಂಡನೆ, ಪ್ರತಿಭಟನೆ, ಬಲಿದಾನಿಗಳಿಗೆ ನಮನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಂಥ ಒಂದು ದಿನ ಕೊಡಗಿನ ಗೋಣಿಕೊಪ್ಪದಲ್ಲಿ ಕಾರ್ಗಿಲ್ ನಮನದ ಮೆರವಣಿಗೆ ನಡೆಯುತ್ತಿತ್ತು, ಜನ ಕಿಕ್ಕಿರಿದು ಸೇರಿದ್ದರು. ನಾಗರಿಕರು, ಮಾಜಿ ಯೋಧರು, ವರ್ತಕರು, ಸಂತೆಗೆ ಬಂದವರು, ವಿದ್ಯಾರ್ಥಿಗಳು ಸೇರಿದ್ದರು. ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಪಾಕ್ ವಿರುದ್ಧ ಕೆಂಡಾಮಂಡಲವಾಗಿ ಮಾತಾಡಿದರು. ಜಯಘೋಷಗಳೊಂದಿಗೆ ಮೆರವಣಿಗೆ ಹೊರಟಿತು. ಮುಶ್ರಫನ ಪ್ರತಿಕೃತಿ ದಹಿಸುವುದರೊಂದಿಗೆ ಮೆರವಣಿಗೆ ಮುಕ್ತಾಯವಾಗುತ್ತದೆ ಎಂದು ಘೋಷಿಸಲಾಯಿತು. ಹೀಗೆ ಮೆರವಣಿಗೆ ಸಾಗಿ ಬಸ್ ಸ್ಟಾಂಡಿಗೆ ಮುಟ್ಟಿ ಮುಶ್ರಫನ ಪ್ರತಿಕೃತಿಗೆ ಇನ್ನೇನು ಬೆಂಕಿ ಹಚ್ಚಬೇಕು, ಅಷ್ಟರಲ್ಲಿ ಪೊನ್ನಂಪೇಟೆ ಕಡೆಯಿಂದ ಅತಿ ವೇಗವಾಗಿ ಬಂದ ಕಾರೊಂದು ಮೆರವಣಿಗೆಯ ಮುಂದೆ ಬಂದು ಜಕ್ಕೆಂದು ನಿಂತಿತು. ಜನರು ಬೆಂಕಿ ಹಚ್ಚುವುದನ್ನು ಬಿಟ್ಟು ಆ ಕಾರನ್ನು ನೋಡತೊಡಗಿದರು. ನೋಡುತ್ತಿದ್ದಂತೆ ಆ ಕಾರಿಂದ ಬಿಳಿಯಾದ ಸುರುಳಿ ಮೀಸೆಯ ಮುದುಕರೊಬ್ಬರು ಇಳಿದರು. ಅವರ ಕೈ ನಡುಗುತ್ತಿತ್ತು. ಡಬಲ್ ಬ್ಯಾರಲ್ ಬಂದೂಕನ್ನು ಬೇರೆ ಹಿಡಿದಿದ್ದರು. ಒಂದು ಕ್ಷಣ ಆ ಸಾವಿರಾರು ಜನರು ಸ್ತಬ್ದರಾದರು. ಈ ಅಜ್ಜ ನೋಡನೋಡುತ್ತಲೇ ಕೋವಿಗೆ ಕಾಡತೂಸುಗಳನ್ನು ತುಂಬಿಸಿದರು. ಜೈ ಮಾಕಾಳಿ ಎನ್ನುತ್ತಲೇ ಮುಶರಫನ ಪ್ರತಿಕೃತಿಗೆ ಎರಡು ಗುಂಡುಗಳನ್ನು ಹಾರಿಸಿಯೇಬಿಟ್ಟರು! ಸಾವಿರಾರು ಜನ ಸೇರಿದ್ದ ಮೆರವಣಿಗೆ ಸನ್ನಿ ಹಿಡಿದವರಂತೆ ಜಯಘೋಷ ಮೊಳಗಿಸಿತು. ನಂತರ ಆ ಅಜ್ಜನನ್ನು ಪತ್ರಿಕೆಗಳು ಮಾತಾಡಿಸಿದವು. ಆ ಅಜ್ಜ ಹವಾಲ್ದಾರ್ ಮುದ್ದಪ್ಪ. ಬ್ರಿಟೀಷ್ ಕಾಲದಲ್ಲೇ ಆರ್ಮಿ ಸೇರಿ ಎರಡನೆ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ. ಅರವತ್ತೆರಡರ ಯುದ್ದದಲ್ಲಿ ಪಾಲ್ಗೊಂಡು ಚೀನಾದಲ್ಲಿ ಸೆರೆಯಾಳಗಿದ್ದ ವ್ಯಕ್ತಿ. ತಮ್ಮ ೮೫ನೇ ವಯಸ್ಸಿನಲ್ಲೂ ಅವರು “ನಾನು ಈಗಲೂ ಕಾರ್ಗಿಲ್ ಗೆ ಹೋಗಲು ಸಿದ್ಧ” ಎಂದು ಮೀಸೆ ತಿರುವಿ ವರದಿಗಾರರಿಗೆ ಹೇಳಿದ್ದರು. ಮತ್ತಷ್ಟು ಕೆದಕಿ ನೋಡಿದರೆ ಆ ಅಜ್ಜ ದಕ್ಷಿಣ ಕೊಡಗಿನಲ್ಲಿ ಅತಿ ದೊಡ್ಡ ಕಾಫಿ ತೋಟವನ್ನು ಹೊಂದಿದ್ದ ಟಾಪ್ ಹತ್ತು ಜನರಲ್ಲಿ ಒಬ್ಬರು. ಆ ಕಾಲದಲ್ಲೇ ಅವರ ಮಕ್ಕಳು ಹೆಲಿಕಾಫ್ಟರನ್ನು ಖರೀದಿಸಲು ಓಡಾಡುತ್ತಿದ್ದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಹಣಕ್ಕಾಗಿ ಮಿಲಿಟರಿ ಸೇರುತ್ತಾರೆ ಎಂದಾಡಿದ್ದು ಇಂಥವರ ಬಗ್ಗೆನಾ? ಅವರ ಎಲುಬಿಲ್ಲದ ನಾಲಗೆ ಮುದ್ದಪ್ಪಜ್ಜನ ನಿಷ್ಠೆಯನ್ನೂ ಪ್ರಶ್ನೆ ಮಾಡಿತೇ? ಸಲಹೆಗಾರರ ಹೇಳಿಕೆಯನ್ನು ಕೇಳಿ ಫೇಸ್ ಬುಕ್ಕಿನ ಹುಡುಗರು ಅವರ ತಲೆಗೆ ಮೊಟಕಿದರು. ಆದರೆ ಅದನ್ನು ಕೇಳಿದ ಕೊಡಗಿನ ಜನ ಮನಸಾರೆ ನಕ್ಕರು. ಏಕೆಂದರೆ ಇದೇ ಮುದ್ದಪ್ಪಜ್ಜ ತನ್ನ ತೋಟದ ರೈಟರ್‌ಗಳಿಗೆ ಕೊಡುವಷ್ಟು ಕೂಲಿಯನ್ನು ಈ ಸಲಹೆಗಾರನಿಗೆ ರಾಜ್ಯದ ಮುಖ್ಯಮಂತ್ರಿಯೂ ಕೊಡುವುದಿಲ್ಲ! ಅಂದು ಮುಶರಫ್ ಪ್ರತಿಕೃತಿಗೆ ಗುಂಡು ಹಾರಿಸಲು ಮುದ್ದಪ್ಪಜ್ಜ ಕರ್ಚುಮಾಡಿದ್ದು ಬರೋಬ್ಬರಿ ೨೦೦ ರೂಪಾಯಿಗಳ ಕಾಡತೂಸುಗಳನ್ನು. ಅದು ಈ ಸಲಹೆಗಾರನ ಎರಡು ಲೀಟರ್ ಪೆಟ್ರೋಲಿಗೆ ಸಮ! ಅಂಥಲ್ಲಿ ಹೇಗಾದರೂ ಆತನಿಗೆ ಅಂಥ ಮಾತಾಡಲು ಮನಸ್ಸು ಬಂತು? ದಶಕಗಳ ಕಾಲ ಅಂಕಣ ಬರೆದವರು, ಎಲ್ಲೋ ದೆಹಲಿಯಲ್ಲೂ ಇದ್ದರಂತೆ. ರಜಪೂತರ, ಜಾಟರ, ಸರ್ದಾರ್ಜಿಗಳ ಮನೆಗಳು ಹೇಗಿರುತ್ತವೆ ಎಂಬುದನ್ನಾದರೂ ಇವರು ಕಂಡಿಲ್ಲವೇ? ಅಥವಾ ಕೋವಿ ಹಿಡಿದ ಎಲ್ಲರೂ ಇವರಿಗೆ ನಕ್ಸಲರಂತೆಯೋ, ಬಾಡಿಗೆ ಹಂತಕರಂತೆಯೋ ಕಾಣುವರೊ? ಅಥವಾ ಬದುಕಿನುದ್ದಕ್ಕೂ ಅಂಥ ಸಂಸ್ಕೃತಿಯನ್ನೇ ಪಾಲಿಸಿಕೊಂಡು ಬಂದು ಮೌಲ್ಯಗಳು, ಆದರ್ಶಗಳು ಅವರಿಗೆ ಅರ್ಥವಾಗುವುದಿಲ್ಲವೋ? ಅದು ಅವರ ಮಟ್ಟ ಎಂದುಕೊಂಡರೂ ಇವರಿಗೆ ಸೇವೆ ಮತ್ತು ಕರ್ತವ್ಯಗಳ ನಡುವೆ ವ್ಯತ್ಯಾಸವಿದೆ ಎಂಬುದೇ ಗೊತ್ತಿಲ್ಲವಲ್ಲಾ ಎಂದು ವಿಷಾದವಾಗುತ್ತಿದೆ. ಸಾಮಾನ್ಯರಿಗೆ ಅದು ಗೊತ್ತಿರಲೇಬೇಕೆಂದಿಲ್ಲ, ಆದರೆ ದೊಡ್ಡವರಿಗೆ? ಸಲಹೆಗಾರರಿಗೆ?
ಮುದ್ದಪ್ಪಜ್ಜ ಮಾತ್ರ ಅಲ್ಲ. ಕೊಡಗಿನಲ್ಲಿಡೀ ಇಂಥ ಉದಾಹರಣೆಗಳು ಸಿಗುತ್ತವೆ. ಮಾನ್ಯ ಸಲಹೆಗಾರರು ಅದಕ್ಕೂ ಹಣದ ಆಸೆ ಎನ್ನುವರೋ? ತಾವು ಪತ್ರಿಕೆ ಬಿಟ್ಟು ವಿಧಾನಸೌಧ ಹತ್ತಿದ ಕಾರಣವನ್ನೇ ಸೈನಿಕರಿಗೂ ಕೊಟ್ಟರೆ ಹೇಗೆ?
ಬ್ರಿಟೀಷರು ದೇಶಬಿಟ್ಟು ಹೊರಟಾಗ ಭಾರತದ ಸೈನ್ಯದ ಸಂಖ್ಯೆಯನ್ನು ಕಡಿತಗೊಳಿಸಿದ್ದರಷ್ಟೆ. ಮುಂದೆ ಬ್ರಿಟೀಷರ ಕೆಲಸವನ್ನು ನೆಹರೂ ಮುಂದುವರಿಸಿದರು. ಶಾಂತಿಯುತ ದೇಶಕ್ಕೆ ಸೈನ್ಯದ ಆವಶ್ಯಕತೆ ಇಲ್ಲ ಎಂಬ ಅವರ ಧೋರಣೆ ಅರವತ್ತೆರಡರ ಸೋಲಿನ ನಂತರ ಸುಳ್ಳಾಯಿತು. ಪುನಃ ಸೇನೆಗೆ ನೇಮಕಾತಿಗಳು ನಡೆಯತೊಡಗಿದವು. ದೇಶದಲ್ಲಿ ಅಚ್ಚುಕಟ್ಟಾದ ಸೈನ್ಯದ ತುಕಡಿಗಳು ಆರಂಭವಾಗಿದ್ದು ಮತ್ತು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೈನ್ಯಕ್ಕೆ ಸೇರತೊಡಗಿದ್ದು ಆ ಹೊತ್ತಿನಲ್ಲಿ. ಕೊಡಗಿನ ಸಣ್ಣಪುಟ್ಟ ಪಟ್ಟಣಗಳಲ್ಲೂ ಆಗ ಸೇನಾ ನೇಮಕಾತಿಗಳು ನಡೆಯುತ್ತಿದ್ದವು. ಇಂದು ಕೊಡಗಿನ ಅತಿ ಹೆಚ್ಚು ಮಾಜಿ ಯೋಧರು ಆ ಹೊತ್ತಲ್ಲಿ ಸೈನ್ಯಕ್ಕೆ ಸೇರಿದವರು. ಅಂದರೆ ೬೫ರಿಂದ ೭೫ರ ಹೊತ್ತಿನಲ್ಲಿ. ಆ ಸಮಯದಲ್ಲಿ ಸಿಪಾಯಿಯೊಬ್ಬನಿಗೆ ಸೈನ್ಯ ನೀಡುತ್ತಿದ್ದ ಸಂಬಳ ೫೦ ರೂ, ೫೫ರೂ, ಮತ್ತು ೬೦ರೂಗಳು, ವಾಯುಪಡೆಗೆ ಸೇರ್ಪಡೆಗೊಂಡವರಿಗೆ ಉಳಿದವರಿಗಿಂತ ಸ್ವಲ್ಪ ಹೆಚ್ಚು ಸಂಬಳ ನೀಡಲಾಗುತ್ತಿತ್ತು. ಅಂದರೆ ಕಾರ್ಪೋರಲ್ ಗಳಿಗೆ ೬೩ರೂಗಳಿಂದ ೭೫ರೂಗಳನ್ನು ನೀಡಲಾಗುತ್ತಿತ್ತು. ಈ ಯೋಧರು ಸೈನ್ಯದಲ್ಲಿದ್ದಾಗ ಅವರ ಮನೆ ಜನರು ಇದ್ದಬದ್ದ ಅಲ್ಪಸ್ವಲ್ಪಜಾಗವನ್ನು ತೋಟವನ್ನಾಗಿ ಪರಿವರ್ತಿಸುತ್ತಿದ್ದರು. ಸೈನಿಕನ ಮನೆಯ ಆಳುಗಳು ದಿನಕ್ಕೆ ೧೦ ರೂ ಮತ್ತು ಒಂದು ಸೇರು ಅಕ್ಕಿಯನ್ನು ಕೂಲಿ ಪಡೆಯುತ್ತಿದ್ದರು! ಅಂದರೆ ಒಬ್ಬ ಯೋಧನಿಗೆ ತನ್ನ ಮನೆಯ ಕೂಲಿಯವನಷ್ಟೂ ಸಂಬಳ ಸಿಗುತ್ತಿರಲಿಲ್ಲ! ಇವೆಲ್ಲಾ ಮಹಾಮಹಾ ಸಿದ್ಧಾಂತಗಳನ್ನು ಬರೆಯುವ, ಸರಕಾರವನ್ನು ಟೀಕಿಸುವ ಹುಡುಗರ ಮೇಲೆ ಮೊಕದ್ದಮೆ ದಾಖಲಿಸುವ ಮಾಧ್ಯಮ ಸಲಹೆಗಾರರಿಗೆ ಗೊತ್ತೇ ಇಲ್ಲ.
ಮೊದಲ ಮಹಾದಂಡನಾಯಕ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಇಬ್ಬರೂ ಕೊಡವರ ಪ್ರತಿಷ್ಠಿತ ಕೊಡಂದೇರ ಮನೆತನದಲ್ಲಿ ಹುಟ್ಟಿದವರು. ಆಗರ್ಭ ಶ್ರೀಮಂತ ಮನೆತನ. ಇವರಿಬ್ಬರೂ ಹುಟ್ಟುತ್ತಲೇ ಶ್ರೀಮಂತಿಕೆಯನ್ನು ಅನುಭವಿಸಿದ್ದವರು. ಮೆಡ್ರಾಸಲ್ಲಿ ಓದಿದವರು. ಕಾರ್ಯಪ್ಪರ ಅಪ್ಪ ಬ್ರಿಟಿಷ್ ಆಡಳಿತದಲ್ಲಿ ತಹಶೀಲ್ದಾರ್ ಆಗಿದ್ದವರು. ಮಗನನ್ನು ಐಸಿಎಸ್ ಮಾಡಿಸಲು ಅವರು ಶಕ್ತರಿದ್ದವರು. ಆದರೆ ಮಗ ಕಾರ್ಯಪ್ಪ ಆಸೆ ಪಟ್ಟು ಮಿಲಿಟರಿಗೆ ಸೇರಿದ. ಕೊಳೆಯುವಷ್ಟು ಆಸ್ತಿ ಇತ್ತು. ಕಾರ್ಯಪ್ಪನವರು ಜನರಲ್ ಆಗಿದ್ದಾಗ ಕೂಡಾ ಮಡಿಕೇರಿಯಲ್ಲಿ ಅವರಿಗೆ ನಲ್ವತ್ತು ಎಕರೆ ಕಾಫಿ ತೋಟವಿತ್ತು. ಮಿಲಿಟರಿಯ ಕೆಲಸದ ನಡುವೆ ಇವರ ತೋಟ ಕಾಡುಬಿತ್ತು. ಕೊನೆಗೆ ಅದು ಕಾಡೇ ಆಯಿತು. ನಂತರ ಮಗ ಕೂಡಾ ಅದನ್ನು ತೋಟ ಮಾಡಲು ಆಸಕ್ತಿ ತೋರದೆ ಸೈನ್ಯಕ್ಕೆ ಹೊರಟುಹೋದ. ಈ ನಲ್ವತ್ತು ಎಕರೆಯ ಮುಂದೆ ಯಾವ ಉದ್ಯೋಗವೂ ಅವರಿಗೆ ಬೇಕಿರಲಿಲ್ಲ. ಮಡಿಕೇರಿಯಲ್ಲಿ ಹಾಯಾಗಿದಿದ್ದರೆ ಕಾರ್ಯಪ್ಪರ ಮಗ ನಂದಾ ಕಾರ್ಯಪ್ಪ ಯುದ್ಧ ಕೈದಿಯಾಗಿ ಪಾಕಿಸ್ಥಾನದಲ್ಲಿ ಒಣ ಚಪಾತಿ ತಿನ್ನಬೇಕಾಗಿರಲಿಲ್ಲ. ಕೊನೆಗೆ ನಿವೃತ್ತರಾದ ಕಾರ್ಯಪ್ಪನವರು ಮಡಿಕೇರಿಯಲ್ಲಿದ್ದಾಗ ಪಡೆಯುತ್ತಿದ್ದ ಪಿಂಚಣಿ ನಾಲ್ಕು ಸಾವಿರವೂ ಇರಲಿಲ್ಲ. ಅದು ಅವರ ಆಳುಗಳಿಗೂ ಸಾಕಾಗುತ್ತಿರಲಿಲ್ಲ. ಇನ್ನು ಜನರಲ್ ತಿಮ್ಮಯ್ಯನವರ ತಾಯಿ ಸೀತಮ್ಮ ಕೊಡಗಿನಲ್ಲಿ ಹೆಸರಾಂತ ಹೆಂಗಸು. ಕೊಡಗಿನ ರಾಜಮನೆತನಕ್ಕೆ ಆಪ್ತರಾಗಿದ್ದ ಚೆಪ್ಪುಡೀರ ಎಂಬ ಶ್ರೀಮಂತ ಕುಟುಂಬದಿಂದ ಬಂದವಳು. ಕೊಡುಗೈ ದಾನಿ. ಇಂದಿಗೂ ಕೊಡಗಿನಲ್ಲಿ ದಾನಕ್ಕೆ ಪರ್ಯಾಯ ಪದವಾಗಿ ‘ಚೆಪ್ಪುಡಿ ಚೀತವ್ವ’ ಎಂಬ ನಾನ್ನುಡಿಯೇ ಇದೆ. ಮನೆಗೆ ಹೋದ ಧೀನರಿಗೆ ಕುರಿ ಕಡಿಸಿ ಅಡುಗೆ ಬಡಿಸುತ್ತಿದ್ದ ಕುಳ ತಿಮ್ಮಯ್ಯನವರದ್ದು. ಅಂಥವರೇಕೆ ಸಂಪಾದನೆಗಾಗಿ ಆರ್ಮಿಗೆ ಹೋದರು? ಶೋಕಿಗಾಗಿ ಹೋದರು ಎಂದುಕೊಂಡರೂ ತನ್ನ ಜನರಲ್‌ಗಿರಿಯ ಶಿಷ್ಟಾಚಾರವನ್ನು ಬದಿಗೊತ್ತಿ ಆಪರೇಷನ್‌ಗಳಿಗೇಕೆ ಸ್ವತಃ ತೆರಳುತ್ತಿದ್ದರು? ಯಾವುದೋ ದೇಶದಲ್ಲಿ ಸ್ವತಃ ಹೆಣ ಹೊರುವ ದರ್ದು ಅವರಿಗೇನಿತ್ತು? ಜನರಲ್ ಕಾರ್ಯಪ್ಪನವರ ತಂಗಿಯ ಮಗ ಲೆ.ಜನರಲ್ ಬಿ.ಸಿ ನಂದ ಎಂಬ ಅಧಿಕಾರಿ ಕೂಡಾ ದೊಡ್ಡ ತೋಟಗಾರ. ಮನೆಯಲ್ಲಿ ತೋಟ ನೋಡಿಕೊಳ್ಳುವ ಅನಿವಾರ್ಯತೆಯಿದ್ದರೂ ಸೈನ್ಯಕ್ಕೆ ಸೇರಿದರು. ನಾರ್ದರ್ನ್ ಕಮಾಂಡಿನ ಮುಖ್ಯಸ್ಥರಾಗಿದ್ದ ಅವರು ೮೯ರಲ್ಲಿ ನಿವೃತ್ತಿಯಾದಾಗ ಅವರಿಗಿದ್ದ ಸಂಬಳ ಕೇವಲ ೮ ಸಾವಿರ ರೂಪಾಯಿಗಳು! ಇದಕ್ಕೇನನ್ನುವಿರಿ?
ಕೊಡವರ ಚೆಪ್ಪುಡೀರ ಕುಟುಂಬ ರಾಜರ ಕಾಲದಲ್ಲೇ ಅತ್ಯಂತ ಶ್ರೀಮಂತ ಕುಟುಂಬ. ದಕ್ಷಿಣ ಕೊಡಗಿನ ದೊಡ್ಡದೊಡ್ಡ ತೋಟಗಾರರು ಈ ಚೆಪ್ಪುಡೀರ ಕುಟುಂಬಸ್ಥರು. ಹತ್ತು ಏಕರೆಗಿಂತ ಕಡಿಮೆ ತೋಟ ಇರುವ ಯಾವುದೇ ಚೆಪ್ಪುಡೀರ ಮನುಷ್ಯನನ್ನು ಯಾರೂ ಕಂಡಿಲ್ಲ. ಅಂದರೆ ಎಲ್ಲರೂ ಕೊಟ್ಯಾಧೀಶರು. ಹಲವು ಕಾರುಗಳನ್ನು ಇಟ್ಟುಕೊಳ್ಳಲು ಸಾಮರ್ಥ್ಯವಿರುವವರು. ಆದರೆ ಈ ಕುಟುಂಬವನ್ನು ನೋಡಿದರೆ ಅದು ಭಾರತೀಯ ಸೈನ್ಯದ ಒಂದು ತುಕಡಿಯೇನೋ ಎನ್ನಿಸುತ್ತದೆ. ಹತ್ತಾರು ಬ್ರಿಗೇಡಿಯರುಗಳು, ಕರ್ನಲ್ ಗಳು, ಲೆಫ್ಟಿನೆಂಟ್ ಗಳು, ಸ್ಕ್ವಾಡ್ರನ್ ಲೀಡರುಗಳು, ಅದೆಷ್ಟೋ ಸಿಪಾಯಿಗಳು. ಇಂದಿಗೂ ಕೊಡಗಿನ ಮಾಜಿ ಯೋಧರು ‘ಪಾಕಿಸ್ಥಾನವನ್ನು ಮಟ್ಟಹಾಕಲು ಈ ಚೆಪ್ಪುಡೀರ ಕುಟುಂಬಸ್ಥರೇ ಸಾಕು’-ಎಂದು ತಮಾಷೆಯ ಮಾತನ್ನಾಡುತ್ತಾರೆ. ಆ ಕುಟುಂಬದ ಏರ್ ಮಾರ್ಷಲ್ ಸುಬ್ಬಯ್ಯ ಎಂಬ ಯೋಧ ಅದೆಷ್ಟೋ ಯುದ್ಧವಿಮಾನಗಳನ್ನು, ಅದೆಷ್ಟೋ ಗಂಟೆ ಹಾರಿಸಿದ ದಾಖಲೆ ಹೊಂದಿದ್ದವರು. ಜೊತೆಗೆ ವೀರಚಕ್ರ ಪುರಷ್ಕೃತರು. ಅವರಿಗಿದ್ದ ತೋಟ ಐವತ್ತು ಏಕರೆಗಿಂತಲೂ ಹೆಚ್ಚು! ಅವರೇನು ವಿಮಾನ ಹಾರಿಸುವ ಹುಚ್ಚಿನಿಂದ ಸೈನ್ಯಕ್ಕೆ ಸೇರಿದವರೇ?
ಲೆ.ಜ.(ನಿ.) ಅಪ್ಪಾರಂಡ ಅಯ್ಯಪ್ಪನವರು ಅಪ್ಪಾರಂಡ ತಿಮ್ಮಯ್ಯನವರ ಏಕೈಕ ಮಗ. ಈ ತಿಮ್ಮಯ್ಯನವರು ಸೈನ್ಯದ ಸಿಗ್ನಲ್ ಕೋರಿನ ಮೊಟ್ಟಮೊದಲ ಜನರಲ್ ಆಫಿಸರ್ ಕಮಾಂಡರ್ ಆಗಿದ್ದವರು. ನೂರು ಎಕರೆಗೂ ಹೆಚ್ಚು ತೋಟಗಾರರು. ಅಂಥವರು ತಮ್ಮ ಏಕೈಕ ಮಗನನ್ನು ಮಿಲಿಟರಿಗೆ ಕಳಿಸಿದ್ದು ದೇಶಭಕ್ತಿಯಿಂದಲ್ಲದೆ ಇನ್ನಾವ ಕಾರಣಕ್ಕೆ? ಮೇ.ಜ(ನಿ) ಬಾಚಮಂಡ ಕಾರ್ಯಪ್ಪನವರಿಗೂ ನೂರು ಎಕರೆ ತೋಟವಿದೆ. ಅದನ್ನು ಬಿಟ್ಟು ಅವರು ಎಷ್ಟೋ ವರ್ಷ ಗಡಿಯಲ್ಲೇ ಕಳೆದರು. ಸಲಹೆಗಾರರಂತೆ ಹಣವೊಂದೇ ಅವರ ತಲೆಯಲ್ಲಿದ್ದಿದ್ದರೆ ಆ ತೋಟ ಇಂದು ಇನ್ನೂರು ಎಕರೆಯಾಗಿರುತ್ತಿತ್ತು. ಮೇ.ಜ(ನಿ) ಕುಪ್ಪಂಡ ನಂಜಪ್ಪನವರಿಗೂ ನೂರಕ್ಕೂ ಹೆಚ್ಚು ಎಕರೆ ತೋಟವಿದೆ. ಆದರೂ ಅವರು ಸೈನ್ಯಕ್ಕೆ ಹೋದರು. ಲೆ.ಜ(ನಿ) ಕೋದಂಡ ಸೋಮಣ್ಣ ಕೂಡಾ ಅಷ್ಟೇ ಕಾಫಿ ತೋಟದ ಮಾಲಿಕರು. ಬೆಚ್ಚಗಿನ ಬದುಕನ್ನು ಅವರು ಬದುಕಬಹುದಿತ್ತು. ಕೈಕಾಲುಗಳಿಗೆ ಆಳುಗಳಿದ್ದರು. ಆದರೆ ಅವೆಲ್ಲವನ್ನೂ ಬಿಟ್ಟು ಅವರು ನಾಲ್ಕು ವರ್ಷ ಸಿಯಾಚಿನ್‌ನಲ್ಲೂ ಆರು ವರ್ಷ ಕಾರ್ಗಿಲ್‌ನಲ್ಲೂ ಉಸ್ತುವಾರಿಯನ್ನು ಹೊತ್ತಿದ್ದರು. ಸೇನಾ ಮುಖ್ಯಸ್ಥರ ವಿಶೇಷ ಅಧಿಕಾರಿಯಾಗಿ ಕರ್ತವ್ಯ ಮಾಡಿದರು. ಕೊಡಗಿನ ಇಂಥ ಎಷ್ಟೋ ಅಧಿಕಾರಿಗಳು, ಸಿಪಾಯಿಗಳು ಹಣಕ್ಕಾಗಿ ಆಸೆ ಪಡದೆ ಚಿಲ್ಲರೆ ಸಂಬಳಕ್ಕೆ ಚಳಿಯಲ್ಲಿ ನಡುಗಿದರು. ಬಿಸಿಲಲ್ಲಿ ಒಣಗಿದರು. ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ವಿಶ್ವಸಂಸ್ಥೆಯ ಪಡೆಗಳಲ್ಲಿ ಭಾಗವಹಿಸಿದರು. ಎಷ್ಟೋ ಜನ ಬಲಿದಾನಿಗಳಾದರು. ಇನ್ನು ತಮ್ಮ ದೇಹ ಕೂಡ ಮನೆಗೆ ಬರಲಾರದು ಎಂದು ತಿಳಿದೇ ಯುದ್ಧಕ್ಕೆ ಹೋದರು. ಮಿಲಿಟರಿಗೆ ಹೊರಟ ಮಗನನ್ನು ಕೊಡವ ಪದ್ದತಿಯಂತೆ ತಾಯಿಂದಿರು ‘ಪಡೆಪೊತ್ತ್ ಗೆದ್ದ್ ಬಾ’ (ಗೆದ್ದು ಬಾ) ಎಂದು ಆಶೀರ್ವದಿಸಿ ಕಳುಹಿಸಿದರು. ಅಂಥಾ ತಾಯಿಂದಿರ ಆಶೀರ್ವಾದಕ್ಕೆ, ತ್ಯಾಗಕ್ಕೆ ಆ ಬೋಳು ಮಂಡೆ ಎಲ್ಲಿ ಸಾಟಿ?
ಇಂದಿಗೂ ಆ ಭಾವನೆ ಕೊಡಗಿನಲ್ಲಿ ಮರೆಯಾಗಿಲ್ಲ. ವೀರಾಜಪೇಟೆಯ ಪಿ.ಪಿ ಕಾರ್ಯಪ್ಪಎಂಬ ಹುಡುಗ ೧೨ನೇ ತರಗತಿ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ.೯೪ ಅಂಕ ಪಡೆದು ಪಾಸಾಗಿದ್ದ. ಸಿಇಟಿಯಲ್ಲಿ ಎಂಜಿನಿಯರಿಂಗ್ ಸೀಟು ಗಿಟ್ಟಿಸಿ ಎಂಜಿನಿಯರಿಂಗ್ ಮುಗಿಸಿದ್ದ. ದೊಡ್ಡ ದೊಡ್ಡ ಸಂಬಳದ ಕೆಲಸಗಳು ಕೈಬೀಸಿ ಕರೆದವು. ಓದುತ್ತಿದ್ದಾಗಲೇ ಒಂದೂವರೆ ಲಕ್ಷದ ಕೆಲಸವೂ ಸಿಕ್ಕಿತ್ತು. ಆದರೆ ಕಾರ್ಯಪ್ಪ ಅದನ್ನು ಎಡಗಾಲಲ್ಲಿ ಒದ್ದು ಆರ್ಮಿಗೆ ಸೇರಿದ. ಮನೆಯಲ್ಲೂ ತೋಟವಿತ್ತು. ಅಣ್ಣ ಡೆಕ್ಮಾರ್ಕಿನಲ್ಲಿದ್ದ. ಅವನಿಗೇನು ಹುಚ್ಚು ಹಿಡಿದಿತ್ತೇ? ಇವನೂ ವಿದೇಶಕ್ಕೆ ಹಾರಬಹುದಿತ್ತು. ತಮ್ಮ ಮೂವರು ಮಕ್ಕಳು ಮತ್ತು ಗಂಡನನ್ನು ಊರಲ್ಲಿ ಬಿಟ್ಟು ದೂರದ ಗಡಿಯಲ್ಲಿ ೨೭ ವರ್ಷಗಳಿಂದ ಕರ್ತವ್ಯದಲ್ಲಿರುವ ಕರ್ನಲ್ ಬಿ.ಎಂ ಪಾರ್ವತಿ, ಕೆಲಸ ಎನ್ನುವುದು ಮಾಡುವುದಿದ್ದರೆ ಸೈನ್ಯದಲ್ಲೇ, ಮದುವೆ ಎನ್ನುವುದು ಆಗುವುದಿದ್ದರೆ ಸೈನಿಕರನ್ನೇ ಎಂದು ಹಠ ಹಿಡಿದು ಮದುವೆಯಾದ ಸ್ಕ್ವಾ.ಲೀ. ಎಂ.ಎಂ ವಿಲ್ಮಾ-ಮೇ.ಪಿ.ಎಸ್ ಭೀಮಯ್ಯ ದಂಪತಿಗಳು, ತಾನು ಮೆ.ಜನರಲ್ ಆಗಿದ್ದರೂ ತನ್ನ ಮಗನನ್ನು ಸೈನ್ಯಕ್ಕೆ ಸೇರಿಸಿದ ಮೂವೇರ ನಂಜಪ್ಪ- ಇವರೆಲ್ಲಾ ಕೋಟಿಗೆ ತೂಗುವ ಕುಳಗಳು. ಪ್ರತೀ ಕೊಡವನಿಗೂ ಆರ್ಮಿ ಎನ್ನುವುದು ಒಂದು ಕನಸ್ಸು, ಒಂದು ಹುಚ್ಚು. ವಯಸ್ಸಾಗುತ್ತಾ ಬಂದಂತೆ ಆತನಲ್ಲಾಗುವ ಚಡಪಡಿಕೆಯನ್ನು ಕಾಣೆ ಮೀನು ಬ್ರಾಂಡಿನ ಸಲಹೆಗಾರ ಹೇಗೆ ತಾನೇ ಅರ್ಥಮಾಡಿಕೊಳ್ಳಬಲ್ಲ?
ಮತ್ತೊಬ್ಬರಿಗೆ ಸಲಹೆ ಕೊಡುವವರು ಮೊದಲು ತಾವು ಸ್ವಲ್ಪವನ್ನಾದರೂ ತಿಳಿದುಕೊಂಡಿರಬೇಕು. ಮಂಗಳೂರಿಗೆ ಹೋದಾಗ ಕಾಣೆ ಮೀನಿನ ಹೊಟೆಲು ಹುಡುಕುವ ಬದಲು ಸಲಹೆಗಾರರು ಇದರ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶಗಳಿವೆ. ಕ. ಭಂಡಾರಿ, ಕೆ.ವಿ ಶೆಟ್ಟಿ, ಲೆ.ಕ. ಜಾನ್ ಸೆರಾವೋ, ಅವರ ಮಗ ದಿವಂಗತ ಫ್ಲೈ.ಲೆ. ಕೆವಿನ್ ಸೆರಾವೋ, ವಾರಂಟ್ ಆಫಿಸರ್ ಲಕ್ಷ್ಮಣ್, ಕಾರ್ಪೋರಲ್ ದೇರಣ್ಣ ಗೌಡ ಮೊದಲಾದ ಮಹಾಯೋಧರು ಮಂಗಳೂರಲ್ಲೇ ಇದ್ದಾರೆ. ಕಾಣೆ ಮೀನಿನ ಹೊಟೆಲು ಹುಡುಕುವ ಬದಲು ಇವರನ್ನೂ ಒಮ್ಮೆ ಹುಡುಕಿ ಮಾತಾಡಬಾರದೇ?
An eye opening article.