ಬಡ್ಜೆಟ್ಟೆಂಬ ಬಕಾಸುರ
– ನಾಗೇಶ ಮೈಸೂರು
ಈಗ ನಾನು ಹೇಳ ಹೊರಟಿರುವುದು ವಾರ್ಷಿಕ ಬಡ್ಜೆಟ್ಟಿನ (ಆಯವ್ಯಯ ಲೆಕ್ಕಾಚಾರ) ಕುರಿತು. ಪ್ರತಿ ವರ್ಷದ ಫೆಬ್ರವರಿ ಕೊನೆಗೆ ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸುವ ದೇಶದ ಬಡ್ಜೆಟ್ಟಲ್ಲ ಬಿಡಿ. ಸ್ವಲ್ಪ ಪುಟ್ಟ ಮಟ್ಟದಲ್ಲಿ ಕಂಪನಿಗಳಲ್ಲಿ ನಡೆಯುವ ವಾರ್ಷಿಕ ಬಡ್ಜೆಟ್ಟಿನ ಕುರಿತು. ಕಂಪನಿ ಚಿಕ್ಕದೋ, ಮಧ್ಯಮ ಗಾತ್ರದ್ದೋ, ದೊಡ್ಡದೋ ಒಟ್ಟಾರೆ ಒಂದಲ್ಲಾ ಒಂದು ರೀತಿ ಆಯವ್ಯಯದ ಲೆಕ್ಕಾಚಾರ ನಡೆದೇ ನಡೆಯುತ್ತದೆ. ಆಯಾ ಸಂಸ್ಥೆಯ ವಾತಾವರಣಕ್ಕೆ ಸರಿ-ಸೂಕ್ತ ಮಟ್ಟದಲ್ಲಿ.
ತುಂಬ ಸರಳವಾಗಿ ಹೇಳುವುದಾದರೆ ಈ ಇಡೀ ವಾರ್ಷಿಕ ವ್ಯಾಯಾಮ ಎರಡು ಮುಖ್ಯ ಅಂಶಗಳ ಸುತ್ತ ಗಿರಕಿ ಹೊಡೆಯುವ ಪುನರಾವರ್ತನ ಚಕ್ರ. ಮೊದಲಿಗೆ ಸಂಸ್ಥೆಗೆ ಆ ವರ್ಷದಲ್ಲಿ ಏನೆಲ್ಲ ಮೂಲೆಗಳಿಂದ ಬರಬಹುದಾದ ಆದಾಯದ ಅಂದಾಜು ಮಾಡಿಟ್ಟುಕೊಳ್ಳುವುದು. ಮತ್ತೊಂದು ಕಡೆಯಿಂದ ಆ ಆದಾಯ ಮೂಲಕ್ಕೆ ಸಂವಾದಿಯಾಗಿ ಏನೆಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಾಗಿ ಬರುವುದೋ ಎಂದು ಅಂದಾಜು ಲೆಕ್ಕಾಚಾರ ಹಾಕುವುದು. ಇವೆರಡು ಅಂದಾಜುಗಳನ್ನು ಕ್ರೋಢಿಕರಿಸಿದರೆ ಒಟ್ಟಾರೆ ನಿವ್ವಳ ಲಾಭ, ನಷ್ಟಗಳ ಅಂದಾಜು ಸಿಗುತ್ತದೆ. ಜತೆಗೆ ಅದನ್ನು ನಿಭಾಯಿಸಲು ಬೇಕಾದ ಹಣ ಬಲ, ಜನ ಬಲ, ಯಂತ್ರ ಬಲ ಇತ್ಯಾದಿಗಳ ಸ್ಥೂಲ ಅಂದಾಜು ಸಿಗುತ್ತದೆ. ಇದನ್ನು ಗುರಿಯತ್ತ ನಡೆಸುವ ಆಧಾರವಾಗಿಟ್ಟುಕೊಂಡು ತಮ್ಮಲ್ಲಿನ ಹಣಕಾಸು ಮತ್ತಿತರ ಸಂಪನ್ಮೂಲಗಳನ್ನು ಸಮರ್ಥವಾಗಿ ಸರಿಯಾದ ಕಡೆ ವಿನಿಯೋಗಿಸಲು ಪ್ರಯತ್ನಿಸುವುದು ಇದರ ಮೂಲೋದ್ದೇಶ. ಹಣ ತುಟ್ಟಿಯಾದ ಕಾರಣ ಮತ್ತು ಹೇರಳವಾಗಿ ದೊರಕದ ಸಂಪನ್ಮೂಲವಾದ ಕಾರಣ ಇರುವಷ್ಟು ಹಣದ ಸೂಕ್ತ ಸದ್ವಿನಿಯೋಗ ಮಾಡಿಕೊಳ್ಳುವುದು ಅತಿ ಮುಖ್ಯವಾದ ಅಂಶ. ಆಯ ವ್ಯಯದ ಲೆಕ್ಕಾಚಾರ ಈ ದಿಸೆಯಲ್ಲಿ ನಡೆಯಲು ಸಹಕಾರಿಯಾಗುವ ಹೆಜ್ಜೆ ಮತ್ತು ನಿಭಾಯಿಸಿ ಸಂಭಾಳಿಸುವ ಆಯುಧ.
ಸಿದ್ದಾಂತ ಸರಳವಾದರೂ, ಇದಕ್ಕಾಗಿ ವ್ಯಯವಾಗುವ ಶ್ರಮ, ಸಮಯ, ಸಂಪನ್ಮೂಲಗಳನ್ನು ನೋಡಿದರೆ ಕೆಲವೊಮ್ಮೆ ಅಚ್ಚರಿಯಾಗುತ್ತದೆ. ಇಡಿ ಪ್ರಕ್ರಿಯೆಯೇ ಒಂದು ಮಟ್ಟದ ಅಂದಾಜಿನ ಮೇಲೆ ನಡೆಯುವ ಕಸರತ್ತಾದರೂ ‘ನಿಜಕ್ಕೂ ಹೀಗೆಯೆ’ ನಡೆಯಲಿದೆಯೆಂಬ ಅನಿಸಿಕೆಯೊಡನೆ ನಡೆಯುವ ಸಿದ್ದತೆ, ವಾದ-ವಿವಾದ, ವಾಗ್ವಾದಗಳನ್ನು ಗಮನಿಸಿದರೆ ಈ ನಂಬಿಕೆಗೆ ಇನ್ನಷ್ಟು ಪುಷ್ಟಿ ದೊರಕುತ್ತದೆ. ಆದರೆ ಹಿನ್ನಲೆಯಲ್ಲಿ ಸ್ವಲ್ಪ ಆಳಕ್ಕೆ ಹೊಕ್ಕು ನೋಡಿದರೆ ಗಮನಕ್ಕೆ ಬರುವ ಅಂಶವೆಂದರೆ ತಲೆಯಿಂದ ಬಾಲದ ತನಕ ಸರಪಳಿಯ ಕೊಂಡಿಯ ಹಾಗೆ ಒಂದರ ಆಧಾರದ ಮೇಲೆ ಇನ್ನೊಂದನ್ನು ಹೆಣೆಯುತ್ತ, ಪ್ರತಿ ಹಂತದಲ್ಲೂ ಸುರಕ್ಷತೆಯ ಮೆತ್ತೆಯನ್ನು ಸೇರಿಸುತ್ತ ಇಟ್ಟಿಗೆ ಮೇಲಿಟ್ಟಿಗೆ, ಗಾರೆ, ಸೀಮೆಂಟು ಹಾಕಿ ಗೋಡೆ ಕಟ್ಟಿದ ಹಾಗೆ ಈ ಆಯವ್ಯಯದ ಕಾಲ ಪುರುಷನ ಸೃಷ್ಟಿಯಾಗುತ್ತ ಹೋಗುತ್ತದೆ. ಎಲ್ಲಾ ವ್ಯಾಯಮ ಮುಗಿದು ನೌಕರನಿಂದ ಹಿಡಿದು ಅಗ್ರೇಸರರ ತನಕ ಹತ್ತಾರು ಬಾರಿ ಓಡಾಡಿ, ತಿದ್ದುಪಡಿಯಾಗಿ ಕೊನೆಗೊಮ್ಮೆ ಒಪ್ಪಿಗೆಯ ಮುದ್ರೆ ಬಿದ್ದರೆ ಆ ವರ್ಷದ ಮಟ್ಟಿಗೆ ನಿರಾಳ; ಮುಂದಿನದೇನಿದ್ದರೂ ಅದರಂತೆ ಹೆಜ್ಜೆಯಿಕ್ಕುತ್ತಾ ಹೋಗುವುದು, ತುಸು ಸಮಯದ ನಂತರ ನೈಜತೆಗೂ ಯೋಜನೆಗೂ ಇರುವ ಅಂತರ ಪರಿಗಣಿಸಿ ಮರು ತಿದ್ದುಪಡಿಗೆ ಪ್ರಯತ್ನಿಸುವುದು. ಹೀಗೆ ಇದೊಂದು ಸರಿ ತಪ್ಪಿನ ಬಗಲಲ್ಲಿ ಅಂದಾಜಿಸುತ್ತಲೇ ಸಾಗುವ ಯೋಜನಾ ರೂಪ.
ತಮಾಷೆಯೆಂದರೆ ಇದರಲ್ಲಿ ಅಂದಾಜು ಮಾಡುವವರಿಗೆ ತಾವು ಮಾಡುವ ಅಂದಾಜೆಷ್ಟು ನಿಖರವಾಗಿರುತ್ತದೆ ಎಂಬ ಗ್ಯಾರಂಟಿಯಿರುವುದಿಲ್ಲ. ಯಾವುದೋ ಗಟ್ಟಿ , ನಂಬಿಕಾರ್ಹ ಮೂಲದ ಮಾಹಿತಿ ಆಧರಿಸಿ ಕೆಲವು ಪ್ರಜ್ಞಾಪೂರ್ವಕ ತೀರ್ಮಾನಗಳನ್ನು ಮಾಡಿ ಅದಕ್ಕೊಂದಷ್ಟು ಬಲವಾದ ‘ಅನಿಸಿಕೆ’ಗಳ ಹೂರಣ ಸೇರಿಸಿ ಸಾಧ್ಯತೆಗಳ ಅಂದಾಜು ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ (ಉದಾಹರಣೆಗೆ ಆ ವರ್ಷ ಮತ್ತು ಮುಂದಿನ ಕೆಲ ವರ್ಷಗಳಲ್ಲಿ ಸಾಧ್ಯವಿರುವ ಮಾರಾಟ ವಹಿವಾಟು). ಇದರಲ್ಲಿ ಸಾಧಾರಣ ಆ ಸಂಸ್ಥೆಯ ಆ ವರ್ಷಗಳ ಅಪೇಕ್ಷೆ, ಅಭೀಷ್ಟೆಗಳು ಸೇರಿಕೊಂಡಿರುತ್ತವೆ (ಉದಾಹರಣೆಗೆ ವಾಣಿಜ್ಯ ವಹಿವಾಟು, ಕಳೆದ ವರ್ಷಕ್ಕಿಂತ ಶೇಕಡ ಐದರಷ್ಟು ಬೆಳೆಯಬೇಕು, ಲಾಭದ ಪ್ರಮಾಣ ಶೇಕಡ ಆರರಷ್ಟಾಗಬೇಕು ಇತ್ಯಾದಿ). ಮೇಲಿನವರಿಂದ ಬರುವ ಈ ಮೂಲಸರಕಿನ ಆದಾರದ ಮೇಲೆ ಪ್ರತಿ ವಿಭಾಗಗಳು ತಂತಮ್ಮ ಯಾದಿ ಪಟ್ಟಿ ತಯಾರಿಸುತ್ತವೆ – ಆ ಗುರಿ ಸಾಧನೆಗೆ ತಮಗೇನೇನು ಬೇಕು, ಏನಿದೆ, ಏನಿಲ್ಲ, ಇತ್ಯಾದಿ. ಹಾಗೆ ತಯಾರಿಸುವಾಗಲೇ ಯಥೇಚ್ಛವಾಗಿ ಪರಿಗಣಿತವಾಗುವ ಅಂಶವೆಂದರೆ ‘ಸುರಕ್ಷಾ ಮೆತ್ತೆ’; ಏನಾದರೂ ತಪ್ಪಾಗಿ ಎಡವಿದರೆ ಇಡೀ ಯೋಜನೆಯೇ ಬುಡಮೇಲಾಗಬಾರದಲ್ಲ? ಅದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಶಕ್ತಿ, ಸಮಾಧಾನಾನುಸಾರ ಸುರಕ್ಷ ಮೆತ್ತೆ ಸೇರಿಸುತ್ತಾ ಮುಂದಿನ ಹಂತಕ್ಕೆ ರವಾನಿಸುತ್ತಾರೆ.
ಹೀಗೆ ಎಲ್ಲಾ ಹಂತ ದಾಟಿ ಮುಕ್ತಾಯ ಹಂತಕ್ಕೆ ಬಂದ ಅಂದಾಜು ಆಯ ವ್ಯಯ ಲೆಕ್ಕ ತನ್ನ ಮೂಲ ಆಶಯಕ್ಕಿಂತ ಎಷ್ಟೊ ಪಟ್ಟು ಮೇಲ್ಹೊದಿಕೆಯ ಉಪಚಾರದೊಂದಿಗೆ ಅಂತಿಮ ಒಪ್ಪಿಗೆಯ ಮುದ್ರೆಗಾಗಿ ಉನ್ನತಾಧಿಕಾರಿಗಳತ್ತ ಬರುತ್ತದೆ. ಅದನ್ನು ನೋಡಿದಾಗ ಅವರಿಗೆ ‘ಶಾಕ್’ ಆಗುತ್ತದೆ ಅನ್ನುವುದಕ್ಕಿಂತ ಹೆಚ್ಚಾಗಿ, ನಿರೀಕ್ಷೆಗಿಂತ ಎಷ್ಟು ಪಟ್ಟು ಉಬ್ಬಿಸಲಾಗಿದೆ ಎಂಬ ಜಿಜ್ಞಾಸೆ. ಆದರೂ ಸಮಯದ ಒತ್ತಡ, ವಿವರಗಳಿಗಿಳಿದು ಪರಿಶೋಧಿಸಲಾಗದ ಅಸಹಾಯಕತೆಗಳೆಲ್ಲ ಸೇರಿ, ಯಾವುದೊ ಒಂದು ಆಧಾರದ ಮೇಲೆ ಆಯಾ ಮೊತ್ತವನ್ನು ಶೇಕಡಾವಾರು ರೀತಿಯಲ್ಲಿ ಕಡಿತಗೊಳಿಸಿಯೊ, ಕತ್ತರಿಸಿಯೊ ಮರು ರವಾನಿಸಿ ಪ್ರತಿಯೊಬ್ಬರ ಅಂದಾಜನ್ನು ಅದಕ್ಕೆ ಸೂಕ್ತವಾಗಿ ಹೊಂದಿಸಿಕೊಳ್ಳಲು ಆದೇಶ ಬರುತ್ತದೆ. ಈಗ ಅದಕ್ಕನುಸಾರ ತಂತಮ್ಮ ಗುಣಾಕಾರ, ಭಾಗಾಕಾರ ಹೊಂದಿಸುವ ಸರದಿ! ಅಂತೂ ಒಟ್ಟಾರೆ ಆಯವ್ಯಯದ ಅಂದಾಜು ಪ್ರಕ್ರಿಯೆ ಮುಗಿದಾಗ ಎಲ್ಲಾ ನಿಟ್ಟುಸಿರು ಬಿಡುತ್ತಾರೆ – ಮುಂದಿನೆಲ್ಲಾ ಕೆಲಸಗಳಿಗೂ ಆ ಆಧಾರದ ಮೇಲೆ ಚಾಲನೆ ಸಿಗುವ ಕಾರಣದಿಂದ. ಅಲ್ಲಿಯವರೆಗೂ ತಡೆದಿಟ್ಟಿದ್ದ ಹೊಸ ನೇಮಕಾತಿ, ಉದ್ಯೋಗ ಭರ್ತಿ, ಯಂತ್ರೋಪಕರಣದ ಬಂಡವಾಳ, ಖರ್ಚು-ವೆಚ್ಚಗಳೆಲ್ಲ ಒಂದೊಂದಾಗಿ ಒಪ್ಪಿಗೆ ಪಡೆದು ಕಾರ್ಯಗತಗೊಳ್ಳುತ್ತಾ ಬರುವುದು ಆಮೇಲಿಂದಲೇ.
ಇಷ್ಟೆಲ್ಲಾ ಅಂದಾಜಿನ ಕಸರತ್ತೆ ಆದರೂ ಸಾಮಾನ್ಯರಾಗಿ ಇದರಿಂದ ನಮಗೇನು ಪರಿಣಾಮವಿರದು ಎಂದು ಕಡೆಗಣಿಸುವಂತಿಲ್ಲ. ನಮಗರಿವಿಲ್ಲದಂತೆಯೆ ಇದು ಅನೇಕ ರೀತಿಯಲ್ಲಿ ಚುರುಕು ಮುಟ್ಟಿಸುವ ಕೆಲಸ ಮಾಡಿಸುತ್ತದೆ. ಉದಾಹರಣೆಗೆ, ತಾವಂದುಕೊಂಡ ಲಾಭದ ಮಟ್ಟ ಮುಟ್ಟಬೇಕೆಂದರೆ ಎಷ್ಟು ಬೆಲೆಯೇರಿಸಿದರೆ ಸಾಧ್ಯ ಎಂಬ ಅಂದಾಜು ಕೊಡುವುದು ಈ ಆಧಾರದ ಮೇಲೆ. ಆಧಾರವೇ ತಪ್ಪಿದ್ದರೆ ಲೆಕ್ಕಾಚಾರವೂ ತಪ್ಪಾಗಿರುವುದು ಸಹಜವಾದರೂ ಅದು ಗೊತ್ತಾಗುವ ಹಾಗಿದ್ದರೆ ತಾನೆ ತೊಡಕು? ಅದೇ ರೀತಿ ಸಂಬಳ ಏರಿಕೆ, ಇಳಿಕೆ, ಉದ್ಯೋಗ ಸೃಷ್ಟಿ-ಸ್ಥಿತಿ-ಲಯ, ಖರ್ಚು-ವೆಚ್ಚಗಳ ಮೇಲಿನ ಉದಾರ ನೀತಿ ಯಾ ಕಡಿವಾಣದ ಕೆಂಗಣ್ಣು – ಎಲ್ಲದರ ಹಿಂದೆಯೂ ಅಂತರಗಂಗೆಯಾಗಿ ಪ್ರಭಾವ ಬೀರುತ್ತದೆ ಈ ಬಡ್ಜೆಟ್ಟಿನ ಬ್ರಹ್ಮ ರಾಕ್ಷಸ. ಎಲ್ಲ ಬಡ್ಜೆಟ್ಟಿನನುಸಾರ ಹೋಗುತ್ತಿದೆಯೆಂದರೆ ಎಲ್ಲವೂ ಸುಸೂತ್ರ. ಅದು ತಪ್ಪಿ ಅಡ್ಡ ದಾರಿ ಹಿಡಿಯಿತೆಂದರೆ ವರ್ಷವಿಡೀ ಅದರ ಹೊಂದಾಣಿಕೆ, ತಿದ್ದುಪಡಿಯ ಸರ್ಕಸ್ಸಿನಲ್ಲಿ ಸಮಯ ಕಳೆಯಬೇಕಾದ ಅನಿವಾರ್ಯ. ಆ ಪ್ರಕ್ರಿಯೆಯಲ್ಲೇ ಗುರಿ ತಲುಪುವುದೊ ಇಲ್ಲವೊ ಎಂಬ ಆತಂಕ , ಒತ್ತಡ ಕೂಡ.
ಆ ಬಡ್ಜೆಟ್ಟಿನ ವಿಸ್ತಾರ ವ್ಯಾಪ್ತಿಗಳ ವಿಶ್ವರೂಪದ ಕೆಲವು ತುಣುಕುಗಳನ್ನು ಹಿಡಿದಿಡುವ ಯತ್ನ ಈ ಜೋಡಿ ಕವನಗಳದ್ದು 🙂
01. ಬಡ್ಜೆಟ್ಟಿನ ರಾಜನೀತಿ – ಸಿದ್ದತೆ
___________________________
ಪ್ರತಿ ವರ್ಷದ ವಿಸ್ಮಯ ಗೀತೆ
ಆಯವ್ಯಯ ಅಂದಾಜಿನ ಕಥೆ
ಎಷ್ಟೊಂದು ಶ್ರಮ ಲೆಕ್ಕಾಚಾರ
ಮುಂದಿನ ಸಾಲಿಗೆ ವ್ಯಾಪಾರ ||
ಹಳೆ ಚರಿತ್ರೆ ಜಾಲಾಡಿ ಪೂರ್ತಿ
ಭವಿಷ್ಯದ ಭವಿಷ್ಯಕೆ ಬಸಿರಾರ್ಥಿ
ಅನಿಸಿಕೆ ಆಕಾಂಕ್ಷೆಗಳ ಸಾರಥಿ
ಬೆರೆಸಿದ ಪ್ರಗತಿ ಪಥದ ಸರತಿ ||
ಎಷ್ಟೊಂದು ಲೆಕ್ಕಾಚಾರ ಬವಣೆ
ಮಾರಬಹುದೆಷ್ಟು ಹೇಗೊ ಕಾಣೆ
ಅನಿಸಿಕೆಗನಿಸಿಕೆ ಮೇಲಿಟ್ಟ ತೆನೆ
ಕಟ್ಟುತ ಅಂಕಿ ಅಂಶಗಳ ಗೊನೆ ||
ಸರಿಯೊ ತಪ್ಪೊ ಯಾರಿಗ್ಗೊತ್ತು
ಒಪ್ಪಿದರೆ ಸರಿ ಮೇಲಿನ ಸುತ್ತು
ಪಕ್ವ ಅಪಕ್ವ ಆ ವರ್ಷದ ತೀಟೆ
ದೊಡ್ಡದೊಂದಂಕಿಗೆ ಸದ್ಯ ಬೇಟೆ ||
ಎಲ್ಲರ ಕಸರತ್ತು ಕೊಡುತ ಒತ್ತು
ಸಾಕಷ್ಟು ಮೆತ್ತೆ ನಡು ತುಂಬಿತ್ತು
ಕ್ಷೇಮಕರ ಗುಣಾಕಾರ ಒಬ್ಬಟ್ಟು
ಹೂರ್ಣಕಿಂತ ಹೊದಿಕೆಗೆ ಜುಟ್ಟು ||
02. ಬಡ್ಜೆಟ್ಟಿನ ರಾಜನೀತಿ – ತದನಂತರ
________________________________
ಅಂತು ಅಂಕಗಣಿತದೆ ಜೂಟಾಟ
ಸಂಕಲನ ವ್ಯವಕಲನ ಆಟೋಟ
ಬಲಾಬಲಗಳ ಎಳೆದಾಡಿಸಿ ಗುಟ್ಟ
ಸೋತವರ ಸಂಕಟ ಗೆದ್ದ ಬಾಡೂಟ ||
ಮೇಲಿನವರದದೆ ನೀತಿ ಆಡಿಸುತ
ಕೊಟ್ಟಂಕೆ-ಶಂಕೆಗಳನೆತ್ತಿ ಜಾಡಿಸುತ
ವಿವರಣೆ ಉದ್ದೇಶಾ ಕೆಣಕಾಡಿಸುತ
ಕತ್ತರಿಸಿ ತಲೆಜುಟ್ಟು ತಡಕಾಡಿಸುತ ||
ಕೊನೆಗೊಂದು ಒಪ್ಪಿಗೆ ಮುದ್ರೆ ಬಿದ್ದರೆ
ಬಂದಂತೆ ಕೊನೆಗೆ ಸುಖದಾ ನಿದಿರೆ
ಹೆಚ್ಚು ಕಡಿಮೆ ಅನಾವರಣ ಸುಧಾರೆ
ಬರುವ ವರ್ಷದವರೆಗೆ ಸರಿಸಿ ಹೊರೆ ||
ತಲುಪಿದಂತೆ ವರ್ಷದ ಕೊನೆಗಾಲ
ಅಳಿದುಳಿದ ಹಣವ್ಯಯ ಹುರಿಗಾಳ
ಬೇಕಿರಲಿ ಬಿಡಲಿ ವ್ಯಯಿಸಿಬಿಟ್ಟ ತಳ
ಬಿಡೆ ಮತ್ತೆ ಸಿಗದಿರದಪಾಯ ಕಾಲ ||
ಅಪೂರ್ಣವೊ ಪರಿಪೂರ್ಣವೊ ಸರಿ
ಎಲ್ಲ ಆಧುನಿಕ ಜಗ ಜನದ ಸವಾರಿ
ವ್ಯವಹಾರವವಲಂಬಿಸಿದರ ಕುಸುರಿ
ನಂಬಲಿ ಬಿಡಲಿ ಓಡಿಸಬೇಕು ಸೇರಿ ||
ಚಿತ್ರ ಕೃಪೆ :- india.gov.in
BUDGET ನಲ್ಲಿ D is silent. ಅದನ್ನು ಬಜೆಟ್ ಎಂದು ಉಚ್ಛರಿಸಬೇಕು. ಬಡ್ಜೆಟ್ ಅಂತ ಅಲ್ಲ.
ಹಾಗೆಯೇ ಆಂಗ್ಲ ಅಕ್ಷರವಾದ H ಅನ್ನು ಹೆಚ್ ಎಂದು ಉಚ್ಛರಿಸಬಾರದು. ಅದನ್ನು ಎಚ್ ಎಂದು ಉಚ್ಛರಿಸಬೇಕು. L= ಎಲ್, M=ಎಂ, N=ಎನ್ F=ಎಫ಼್, S=ಎಸ್ ಈ ಅಕ್ಷರಗಳನ್ನು ಹೇಗೆ ಉಚ್ಛರಿಸುತ್ತೇವೆಯೋ ಹಾಗೆ H ಅನ್ನು ಎಚ್ ಎಂದು ಉಚ್ಛರಿಸಬೇಕು. H ಬೇರೆಯ ಅಕ್ಷರಗಳ ಜೊತೆ ಸೇರಿದಾಗ ಮಾತ್ರ ಉಚ್ಛಾರಣೆ ಬದಲಾವಣೆಯಾಗುತ್ತದೆ. ಉದಾಹರಣೆಗೆ: He=ಹಿ, ha=ಹ Hospital=ಹಾಸ್ಪಿಟಲ್, ಇತ್ಯಾದಿ. ಇದರ ಬಗ್ಗೆ ವಿವರ ತಿಳಿಯದವರು ತಮ್ಮ ಈ ತಪ್ಪನ್ನು ಬದಲಾಯಿಸಿಕೊಳ್ಳುವಂತೆ ಕೋರುತ್ತೇನೆ.
ಹೇಮಾಪತಿ ಸಾರ್, ತಪ್ಪು ತಿದ್ದಿದ್ದಕ್ಕೆ ಕೃತಜ್ಞತೆಗಳು. ನಾನು ಈ ಬರಹ ಪ್ರಕಟವಾಗಿದ್ದನ್ನು ಇವತ್ತಿನವರೆಗೂ ಗಮನಿಸಿರಲ್ಲಿಲ್ಲ , ಹೀಗಾಗಿ ಪ್ರತಿಕ್ರಿಯೆ ತಡವಾಯಿತು. 🙏👍😊
ಧನ್ಯವಾದಗಳು. ಜೀವಮಾನವಿಡೀ ನಾವೆಲ್ಲರೂ ವಿದ್ಯಾರ್ಥಿಗಳೇ. ಕಲಿಕೆ ನಿಲ್ಲುವುದೇ ಇಲ್ಲ. ತಮ್ಮ ಲೇಖನಗಳನ್ನು ನಾನು ವಾಚಿಸುತ್ತಿರುತ್ತೇನೆ. ಮುಂದುವರೆಸಿ. ಒಳ್ಳೆಯದಾಗಲಿ. ನಾನು ಮೈಸೂರಿನ ವಿದ್ಯಾರಣ್ಯಪುರದಲ್ಲಿ ಹುಟ್ಟಿ, ಬೆಳೆದವನು. ಹೊಟ್ಟೆಪಾಡಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದೇನೆ. ಈಗ ನಾನು ಹಿರಿಯ ನಾಗರೀಕನಾಗಿದ್ದೇನೆ.
ನಾನೂ ಕೂಡ ಮೈಸೂರಿನವನೆ – ಅಲ್ಲೇ ನಂಜುಮಳಿಗೆಯ ಆಸುಪಾಸಿನಲ್ಲಿ ಇದ್ದದ್ದು. ಅದೇ ಹೊಟ್ಟೆಪಾಡು ಸದ್ಯಕ್ಕೆ ವಿದೇಶದಲ್ಲಿ ಕೂರಿಸಿದೆ.. ದಯವಿಟ್ಟು ವಾಚಿಸಿದಾಗ ಕಂಡ ದೋಷಗಳನ್ನು ಹೀಗೆ ತಿದ್ದುತ್ತಾ ಇರಿ. ನಿಮ್ಮ ಮಾರ್ಗದರ್ಶನ ಹೀಗೆ ಇರಲಿ. ಧನ್ಯವಾದಗಳು. 🙏
ನನಗೆ ತಿಳಿದಿದ್ದನ್ನು ಬೇರೆಯವರ ಜೊತೆ ಹಂಚಿಕೊಳ್ಳುವ ಅಭ್ಯಾಸವಿದೆ. ಹಾಗೆಯೇ ನನಗೆ ತಿಳಿಯದ್ದನ್ನು ಅನ್ಯರಿಂದ ತಿಳಿದುಕೊಳ್ಳುವ ಹಂಬಲವೂ ಇದೆ. “ಈ ಲೋಕದಲ್ಲಿ ಯಾರೂ ಸಂಪೂರ್ಣರಲ್ಲ” ಎನ್ನುವುದು ನನಗೆ ತಿಳಿದಿದೆ. ಒಂದು ವರ್ಷದ ಹಿಂದೆ ತೇ.ನ.ಗೋಪಾಲಕೃಷ್ಣ ರಾವ್ ಎನ್ನುವ ಮಹಾ ಮುತ್ಸದ್ದಿಯೊಬ್ಬರ ಪರಿಚಯ ಅಚಾನಕ್ಕಾಗಿ ನನಗೆ ದೊರೆತಿತ್ತು. ಅವರು ಆಂಗ್ಲಭಾಷೆಯಲ್ಲಿ, ಕನ್ನಡದಲ್ಲಿ, ಸಂಸ್ಕೃತದಲ್ಲಿ, ಹಿಂದಿಯಲ್ಲಿ, ಎಂ.ಎ. ಪದವಿಗಳನ್ನು ಸಂಪಾದಿಸಿದ್ದರು. ಹಾಗೆಯೇ ಅಂತಹ ಪಂಡಿತರಿಗೆ ತಾನೇ ತಾನಾಗಿ ತಿಳಿಯದೇ ಬಂದೆರಗುವ ಒಣಜಂಭವೂ ಇತ್ತು. ನನ್ನ ಪರಿಚಯವಾದ ಕೆಲವು ದಿನಗಳ ನಂತರ ಅವರೇ ನನಗೆ ಹೇಳಿದರು. ಅವರಿಗೆ ಆಂಗ್ಲ ಪಠ್ಯ ಪುಸ್ತಕಕ್ಕೆ ಅಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ 4ನೇ ತರಗತಿಯಿಂದ 10 ನೇ ತರಗತಿಯ ಮಕ್ಕಳಿಗೆ ದ್ವಿಭಾಷಾ ಕೈಪಿಡಿಗಳನ್ನು ಬರೆಯುವ ಹವ್ಯಾಸವಿತ್ತು. ಆದರೆ ಅವರಿಗೆ ಸಮಾನಾಂತರವಾಗಿ ಪದಸಂಸ್ಕರಣ ಮಾಡುವಂತಹವರು ಸಿಕ್ಕದೇ ಕೈಕೈ ಹಿಸುಕಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ನಮ್ಮಿಬ್ಬರ ಪರಿಚಯವಾಗಿತ್ತು. “ಇಷ್ಟು ದಿವಸ ಎಲ್ಲಿದ್ರಪ್ಪಾ ನೀವು” ಅಂತ ಅಂದು ಸಾಕಷ್ಟು ಕೈಪಿಡಿಗಳನ್ನು ನನ್ನ ಕೈಯ್ಯಲ್ಲಿ ಪದಸಂಸ್ಕರಣ ಮಾಡಿಸಿಕೊಂಡರು. ಇತ್ತೀಚೆಗೆ ಅಷ್ಟೇ ಅಚಾನಕ್ಕಾಗಿ ಹೃದಯಾಘಾತವಾಗಿ ತೀರಿಕೊಂಡರು. ಅದಕ್ಕೆ ಕಾರಣ ಸುಮಾರು ವರ್ಷಗಳ ಹಿಂದೆ ಅವರಿಗಿದ್ದ ‘Chain Smoking’ ವ್ಯಾಮೋಹ. ಧೂಮಪಾನದ ದುರಭ್ಯಾಸದಿಂದಾಗಿ ಅವರ ಶ್ವಾಸಕೋಶ ಒಳೊಳಗೇ ನಲುಗಿಹೋಗಿತ್ತು. ಒಳ್ಳೆಯ ಸ್ನೇಹಿತರೊಬ್ಬರನ್ನು ನಾನು ಕಳೆದುಕೊಂಡೆ. ನನಗೇ ಅರಿವಿಲ್ಲದಂತೆ ನಾನೆಷ್ಟೋ ವಿಷಯಗಳನ್ನು ಅವರಿಂದ ಕಲಿತೆ. Sir, I am a student for life ಅಂತ ಅವರಿಗೆ ನಾನು ಹೇಳುತ್ತಿದ್ದೆ. ನನಗೆ ಕನ್ನಡವನ್ನು ಅರೆದು ಕುಡಿಸಿದವರು ನನ್ನ ಅಜ್ಜಿ. ಆಕೆ ಚಾಮುಂಡಿಪುರಂನಲ್ಲಿದ್ದ ವಿ.ಎಂ.ವಿ. ಬಾಲಬೋಧಿನಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಒಂದನೇ ತರಗತಿಯನ್ನು ಸಂಭಾಳಿಸುತ್ತಿದ್ದರು. ಕಚ್ಚಾ ಮಕ್ಕಳನ್ನು ಬುದ್ಧಿಶಾಲಿಗಳನ್ನಾಗಿ ಪಳಗಿಸುವುದರಲ್ಲಿ ಎತ್ತಿದ ಕೈ. ಅವರ ಕೈಯ್ಯಲ್ಲಿ ಪಳಗಿದ ಅತಿ ತುಂಟ ಮೊಮ್ಮಗ ನಾನು. ಆಂಗ್ಲ ಪದಗಳನ್ನು ಮೊಟ್ಟಮೊದಲಿಗೆ ನನಗೆ ಪರಿಚಯಿಸಿದವರೂ ಅವರೇ. ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಆಂಗ್ಲ ತರಗತಿಗೆ ಹೋದಾಗ ಡೋಲಾಯಮಾನ ಪರಿಸ್ಥಿತಿ ಉಂಟಾಗಿ, SNS Institute of commerce ನಲ್ಲಿ ನಾನು ಆಂಗ್ಲ ಮತ್ತು ಕನ್ನಡ ಬೆರಳಚ್ಚು ನಂತರ ಶೀಘ್ರಲಿಪಿ ಕಲಿತೆ. ನನಗೆ 18 ವರ್ಷ ನಡೆಯುತ್ತಿದ್ದಾಗಲೇ ಅರಣ್ಯ ಇಲಾಖೆಯಲ್ಲಿ ನನಗೆ ಕೆಲಸ ಸಿಕ್ಕಿತ್ತು. ನಂತರ ವಿಧಾನಸೌಧದಲ್ಲಿರುವ ಸಚಿವಾಲಯದಲ್ಲಿ ಕೆಲಸ ಸಿಕ್ಕಿದ್ದರಿಂದ ಬೆಂಗಳೂರಿಗೆ ಬರಬೇಕಾಯಿತು. 1989ರಲ್ಲಿ ಗಣಕಯಂತ್ರದ ತರಬೇತಿ ಪಡೆದ ಮೇಲೆ ನನ್ನ ಆಪ್ತ ಸಹಾಯಕ ವೃತ್ತಿಗೆ ಅದರಿಂದ ತುಂಬಾ ಸಹಾಯಕವಾಯಿತು. ಅಲ್ಲಿಂದ ಇಲ್ಲಿಯವರೆಗೂ ಗಣಕಯಂತ್ರವಿಲ್ಲವೆಂದರೆ ನಾನಿಲ್ಲ ಅನ್ನುವಂತಹ ಪರಿಸ್ಥಿತಿ ಉಂಟಾಯಿತು. ಅಲ್ಲಿ ಕೆಲಸ ಮಾಡುತ್ತಲೇ 1999 ರಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡೆ. ನಾನು ಆರ್ಥಿಕ ಇಲಾಖೆಯಲ್ಲೂ ಕಾರ್ಯ ನಿರ್ವಹಿಸಿರುವುದರಿಂದ ಬಜೆಟ್ಟಿನ ಬಗ್ಗೆ ನನಗೆ ಅರಿವಿದೆ. ಅದೊಂದು ಕಬ್ಬಿಣದ ಕಡಲೆ. ಅದು ಸಾಮಾನ್ಯ ಜನತೆಗೆ ಅರ್ಥವಾಗದ, ಅರ್ಥವಾದರೂ ಉಪಯೋಗಕ್ಕೆ ಬಾರದ ತಾರಮ್ಮಯ್ಯನ ವಿಷಯ.
ನಾನು ಬಹಳಷ್ಟು ಮೆಚ್ಚುವ ನಾಟಕಕಾರ ಮತ್ತು ಕನ್ನಡದ ಮಾಣಿಕ್ಯ ಎಂದರೆ ಅವರು ಟಿ.ಪಿ.ಕೈಲಾಸಂ.
Reblogged this on ಮನದಿಂಗಿತಗಳ ಸ್ವಗತ and commented:
ಬಜೆಟ್ಟಿನ ಕುರಿತಾದ ನಿಲುಮೆಯಲ್ಲಿ ಪ್ರಕಟವಾಗಿದ್ದ (೦೮.೦೪.೨೦೧೬) ಬರಹವೊಂದು ಇಲ್ಲಿದೆ. ಕಾಮೆಂಟಿನಲ್ಲಿ ಪ್ರತಿಕ್ರಿಯಿಸಿದ್ದ ಶ್ರೀಯುತ ಹೇಮಾಪತಿಯವರು ‘ಬಡ್ಜೆಟ್’ ಪದ ಪ್ರಯೋಗ ತಪ್ಪು, ‘ಬಜೆಟ್’ ಎಂದು ಉಚ್ಚರಿಸಬೇಕು ಎಂದು ತಿದ್ದಿದ್ದಾರೆ. ದಯವಿಟ್ಟು ಓದುವ ಹೊತ್ತಿನಲ್ಲಿ ಈ ಅಂಶವನ್ನು ಗಮನದಲ್ಲಿಟ್ಟುಕೊಂಡಿರಬೇಕು ಎಂದು ವಿನಂತಿ.