ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ: ಪರ ಮತ್ತು ವಿರೋಧ
-ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟೆ
ವೃತ್ತಿಪರ ಕೋರ್ಸುಗಳ ಏಕರೂಪ ಅರ್ಹತಾ ಪ್ರವೇಶ ಪರೀಕ್ಷೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ವಿಷಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಪರ ಮತ್ತು ವಿರೋಧವಾಗಿ ಮಾತುಗಳು ಕೇಳಿ ಬರುತ್ತಿವೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಈ ಯೋಜನೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿವೆ. ಭಾರತದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ವಿಶೇಷವಾಗಿ ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಅನೇಕ ಪ್ರಕಾರದ ಅರ್ಹತಾ ಪರೀಕ್ಷೆಗಳು ಚಾಲ್ತಿಯಲ್ಲಿವೆ. ಪ್ರತಿ ರಾಜ್ಯಗಳಲ್ಲಿ ಆಯಾ ಸರ್ಕಾರ ವೈದ್ಯಕೀಯ ಕೋರ್ಸಿನ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಜೊತೆಗೆ ಖಾಸಗಿ ಕಾಲೇಜುಗಳಲ್ಲಿನ ಮ್ಯಾನೆಜಮೆಂಟ್ ಸೀಟುಗಳಿಗಾಗಿ, ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯವೆಂದು ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳಿಗಾಗಿ ಎಂದು ಹೀಗೆ ಒಂದೇ ರಾಜ್ಯದಲ್ಲಿ ಅನೇಕ ಪ್ರಕಾರದ ಅರ್ಹತಾ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಯೊಬ್ಬ ಒಂದಕ್ಕಿಂತ ಹೆಚ್ಚಿನ ಅರ್ಹತಾ ಪ್ರವೇಶ ಪರೀಕ್ಷೆಗಳನ್ನು ಬರೆಯುವ ಸಂದಿಗ್ಧತೆಗೆ ಒಳಗಾಗುತ್ತಾನೆ. ಅಲ್ಲದೆ ಪ್ರತಿಯೊಂದು ಪ್ರವೇಶ ಪರೀಕ್ಷೆಯ ಶುಲ್ಕ ಅತ್ಯಂತ ದುಬಾರಿಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಇದು ಹೊರೆಯಾಗುತ್ತಿದೆ.
ಇಂಥದ್ದೊಂದು ಸಮಸ್ಯೆಯನ್ನು ನಿವಾರಿಸಲು ಭಾರತೀಯ ವೈದ್ಯಕೀಯ ಮಂಡಳಿ ಇಡೀ ದೇಶದಾದ್ಯಂತ ಒಂದೇ ಅರ್ಹತಾ ಪ್ರವೇಶ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿದೆ. ಈ ಪ್ರವೇಶ ಪರೀಕ್ಷೆಯನ್ನು ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ’ ಎಂದು ಹೆಸರಿಸಿದ್ದು ಭಾರತದಲ್ಲಿರುವ ಒಟ್ಟು 271 ವೈದ್ಯಕೀಯ ಕಾಲೇಜುಗಳಲ್ಲಿನ 31000 ವೈದ್ಯಕೀಯ ಸೀಟುಗಳನ್ನು ಈ ಪ್ರವೇಶ ಪರೀಕ್ಷೆಯ ಕಕ್ಷೆಯಡಿ ಸೇರ್ಪಡೆಗೊಳಿಸಲಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ವೈದ್ಯಕೀಯ ಕೋರ್ಸಿನ ಪ್ರವೇಶಕ್ಕಾಗಿ ಸುಮಾರು 25 ಪ್ರಕಾರದ ಪ್ರವೇಶ ಪರೀಕ್ಷೆಗಳು ಚಾಲ್ತಿಯಲ್ಲಿವೆ. ಪ್ರತಿಯೊಬ್ಬ ವಿದ್ಯಾರ್ಥಿ ಸರಾಸರಿ 7 ರಿಂದ 9 ಪರೀಕ್ಷೆಗಳನ್ನು ಬರೆಯುತ್ತಿರುವನು. ಈ ಪರೀಕ್ಷೆಗಳ ಪ್ರವೇಶ ಶುಲ್ಕ ಮತ್ತು ಪಠ್ಯಕ್ರಮ ಬೇರೆ ಬೇರೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆಯ ಜೊತೆಗೆ ಅವರು ಅನೇಕ ಪ್ರಕಾರದ ಪಠ್ಯಕ್ರಮಗಳನ್ನು ಅಭ್ಯಸಿಸಬೇಕಾಗುತ್ತದೆ. ಭಾರತೀಯ ವೈದ್ಯಕೀಯ ಮಂಡಳಿ ಈ ಸಮಸ್ಯೆಗೆ ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ’ ಒಂದೇ ಪರಿಹಾರ ಎಂದು ತನ್ನ ವಾದವನ್ನು ಸಮರ್ಥಿಸಿಕೊಳ್ಳುತ್ತಿದೆ. ಜೊತೆಗೆ ತನ್ನ ಸಮರ್ಥನೆಗೆ ಪೂರಕವಾಗುವ ಕೆಲವು ಉತ್ತಮ ಅಂಶಗಳನ್ನು ಸಹ ಪಟ್ಟಿ ಮಾಡಿದೆ.
1. ದೇಶದ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯಕೀಯ ಸೀಟುಗಳಿಗಾಗಿ ಒಂದೇ ಸಾಮಾನ್ಯ ಪರೀಕ್ಷೆ.
2. ವಿದ್ಯಾರ್ಥಿಯೊಬ್ಬ ಅನೇಕ ಪರೀಕ್ಷೆಗಳನ್ನು ಬರೆಯುವ ಅವಶ್ಯಕತೆ ಎದುರಾಗದು.
3. ವಿದ್ಯಾರ್ಥಿ ವಿಭಿನ್ನ ಪ್ರಕಾರದ ಪಠ್ಯಕ್ರಮಕ್ಕನುಗುಣವಾಗಿ ಪರೀಕ್ಷಾ ತಯ್ಯಾರಿ ನಡೆಸುವ ಪರಿಸ್ಥಿತಿ ಎದುರಾಗದು.
4. ಎರಡು ಇಲ್ಲವೇ ಮೂರು ತಿಂಗಳುಗಳ ಅವಧಿಯಲ್ಲಿ ಅನೇಕ ಪ್ರವೇಶ ಪರೀಕ್ಷೆಗಳನ್ನು ಎದುರಿಸುವ
ಸಂದರ್ಭ ಎದುರಾದಾಗ ಆಗ ಸಹಜವಾಗಿಯೇ ವಿದ್ಯಾರ್ಥಿಯ ಮೇಲೆ ಮಾನಸಿಕ ಒತ್ತಡ ಉಂಟಾಗುತ್ತದೆ.
ಇಂಥದ್ದೊಂದು ಸಮಸ್ಯೆಯನ್ನು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಿಂದ ಹೋಗಲಾಡಿಸಬಹುದು.
5. ಈ ಪರೀಕ್ಷಾ ಯೋಜನೆಯು ಪಾಲಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಇಂಥದ್ದೊಂದು ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿರುವ ವಿಚಾರ ವ್ಯಕ್ತಪಡಿಸಿದಾಗ ಆಗ ವಿವಿಧ ರಾಜ್ಯ ಸರ್ಕಾರಗಳಿಂದ ಪ್ರತಿರೋಧ ವ್ಯಕ್ತವಾಯಿತು. ಆಯಾ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಕೇಂದ್ರ ಸರ್ಕಾರದ ಮುಂದಿಟ್ಟ ಪ್ರಶ್ನೆ ಎಂದರೆ ‘ಈ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ ಪೂರಕವಾಗಿರುವ ಪಠ್ಯಕ್ರಮ ಯಾವುದು ? ಏಕೆಂದರೆ ಭಾರತ ಒಂದು ವೈವಿಧ್ಯಮಯ ರಾಷ್ಟ್ರ. ಅದನ್ನು ನಾವು ನಮ್ಮ ದೇಶದ ಶಿಕ್ಷಣ ಕ್ಷೇತ್ರದಲ್ಲೂ ಕಾಣಬಹುದು. ಕೇಂದ್ರ ಪಠ್ಯಕ್ರಮ ಮತ್ತು ರಾಜ್ಯ ಪಠ್ಯಕ್ರಮ ಎಂದು ಎರಡು ಪ್ರಕಾರದ ಪಠ್ಯಕ್ರಮದ ಅಭ್ಯಾಸಕ್ಕೆ ಆಯಾ ರಾಜ್ಯದಲ್ಲಿ ಅವಕಾಶಮಾಡಿಕೊಡಲಾಗಿದೆ. ಹೀಗಿದ್ದಾಗ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಯಾವ ಪಠ್ಯಕ್ರಮದ ಆಧಾರದ ಮೇಲೆ ರಚಿಸಬೇಕು ಎನ್ನುವುದು ಅನೇಕ ರಾಜ್ಯಗಳ ಮುಖ್ಯ ಪ್ರಶ್ನೆಯಾಗಿತ್ತು. ಅದಕ್ಕೆ ಪರಿಹಾರವನ್ನೂ ಆಯಾ ರಾಜ್ಯಗಳೇ ಕಂಡುಕೊಂಡಿದ್ದು ಇಲ್ಲಿ ಉಲ್ಲೇಖಿಸಲೇ ಬೇಕಾದ ಗಮನಾರ್ಹ ಸಂಗತಿಯದು. ಈ ವಿಷಯವಾಗಿ ರಾಜ್ಯ ಸರ್ಕಾರಗಳು ಎರಡು ವರ್ಷಗಳ ಸಮಯಾವಧಿಯನ್ನು ತೆಗೆದುಕೊಂಡು ತಮ್ಮ ರಾಜ್ಯ ಪಠ್ಯಕ್ರಮವನ್ನು ಕೇಂದ್ರ ಪಠ್ಯಕ್ರಮವಾಗಿ ಪರಿವರ್ತಿಸಿ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ ಸಿದ್ದಗೊಳಿಸುವುದಾಗಿ ಹೇಳಿದ್ದವು. ಅದೇರೀತಿಯಾಗಿ ಈಗ ಪಠ್ಯಕ್ರಮವನ್ನು ವಿಶೇಷವಾಗಿ ಪಿಯುಸಿ ವಿಜ್ಞಾನದ ಪಠ್ಯಕ್ರಮವನ್ನು ಕೇಂದ್ರ ಪಠ್ಯಕ್ರಮದ ಮಾದರಿಯಲ್ಲಿ ರೂಪಿಸಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಒಂದೇ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತಂದಾಗಲೂ ಆಯಾ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಈಗಿರುವ ಸೀಟು ಹಂಚಿಕೆ ವಿಧಾನವನ್ನೇ ಮುಂದುವರೆಸಿಕೊಂಡು ಹೋಗಲಾಗುವುದೆಂದು ಕೇಂದ್ರ ಸರ್ಕಾರ ಹೇಳಿದೆ. ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ರ್ಯಾಂಕ್‍ಗಳೆಂದು ಎರಡು ಪ್ರಕಾರದ ಫಲಿತಾಂಶ ನೀಡಿ ಆಯಾ ರಾಜ್ಯದ ವಿದ್ಯಾರ್ಥಿ ಆಯಾ ರಾಜ್ಯದಲ್ಲೇ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡುವ ಭರವಸೆ ನೀಡಿದೆ. ಒಟ್ಟಿನಲ್ಲಿ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕೆನ್ನುವುದು ಕೇಂದ್ರ ಸರ್ಕಾರದ ನಿಲುವಾಗಿದೆ.
ಪರಿಸ್ಥಿತಿ ಹೀಗಿರುವಾಗ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯವರು ಕೇಂದ್ರ ಸರ್ಕಾರದ ಈ ಯೋಜನೆ ಜಾರಿಗೆ ಬರದಂತೆ ವಿರೋಧಿಸುತ್ತಿರುವರು. ಈ ಪ್ರತಿರೋಧ ವಿಶೇಷವಾಗಿ ಕರ್ನಾಟಕ, ತಮಿಳು ನಾಡು, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ವ್ಯಾಪಕವಾಗಿದೆ. ಯಾವತ್ತೂ ತನ್ನ ಪ್ರಾದೇಶಿಕ ನೆಲೆಯಲ್ಲೇ ಚಿಂತಿಸುವ ತಮಿಳು ನಾಡು ಸರ್ಕಾರ ಈ ವಿಷಯವಾಗಿ ಹೈಕೋರ್ಟ್ ಮತ್ತು ಸುಪ್ರಿಮ್ ಕೋರ್ಟ್ ಮೊರೆ ಹೋಗಿದೆ. ಕರ್ನಾಟಕದಲ್ಲೂ ಅಂಥದ್ದೊಂದು ಪ್ರತಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಸ್ವಲ್ಪ ಹಿಂದೆ ಹೋಗೋಣ. ಅದು 1992-93 ರ ಅವಧಿ. ಈ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಅಂದಿನ ಕಾಂಗ್ರೆಸ್ ಸರ್ಕಾರ ವೃತ್ತಿಪರ ಕೋರ್ಸುಗಳ ಪ್ರವೇಶದಲ್ಲಿ ಪಾರದರ್ಶಕತೆಯನ್ನು ತರಲು ಮಹತ್ವದ ನಿರ್ಧಾರ ತೆಗೆದುಕೊಂಡಿತು. ಈ ಮೊದಲು ರಾಜ್ಯದಲ್ಲಿ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳು ಆಯಾ ಕಾಲೇಜುಗಳು ನಿಗದಿ ಪಡಿಸಿದ ಶುಲ್ಕವನ್ನು ಡೊನೆಶನ್ ರೂಪದಲ್ಲಿ ಪಾವತಿಸಬೇಕಿತ್ತು. ಪರಿಣಾಮವಾಗಿ ಹಿಂದುಳಿದ ವರ್ಗದ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಎನ್ನುವುದು ಮರೀಚಿಕೆಯಾಗಿತ್ತು. ಕೇವಲ ಆರ್ಥಿಕವಾಗಿ ಸಬಲರಾದ ಕುಟುಂಬದಿಂದ ಬಂದ ಮಕ್ಕಳು ಮಾತ್ರ ವೈದ್ಯರು ಮತ್ತು ಇಂಜಿನಿಯರ್‍ರಾಗುವ ವಾತಾವರಣ ರಾಜ್ಯದಲ್ಲಿ ಮನೆಮಾಡಿತ್ತು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗುತ್ತಿರುವ ಈ ಅನ್ಯಾಯವನ್ನು ಸರಿಪಡಿಸಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರಪ್ಪ ಮೊಯ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ‘ಸಾಮಾನ್ಯ ಪ್ರವೇಶ ಪರೀಕ್ಷೆ’ಯನ್ನು ಪರಿಚಯಿಸಿದರು. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಐ.ಎ.ಎಸ್ ಅಧಿಕಾರಿ ಶ್ರೀ ಹರೀಶ ಗೌಡರ ಪರಿಶ್ರಮ ಮತ್ತು ಪ್ರಯತ್ನ ಶ್ಲಾಘನೀಯ. ಒಂದು ಪ್ರಾಮಾಣಿಕ ಪ್ರಯತ್ನದ ಪರಿಣಾಮವಾಗಿ ‘ಸಾಮಾನ್ಯ ಪ್ರವೇಶ ಪರೀಕ್ಷೆ’ ಜಾರಿಗೆ ಬಂದು ಆರ್ಥಿಕವಾಗಿ ಹಿಂದುಳಿದ ಮತ್ತು ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳೂ ಕೂಡ ವೃತ್ತಿಪರ ಕೋರ್ಸುಗಳಿಗೆ ಮೆರಿಟ್ ಅನ್ವಯ ಸುಲಭವಾಗಿ ಪ್ರವೇಶ ಪಡೆಯಲು ಸಾಧ್ಯವಾಯಿತು. ಪ್ರಾರಂಭದ ದಿನಗಳಲ್ಲಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಪ್ರತಿಶತ 15 ರಷ್ಟು ಸೀಟುಗಳನ್ನು ಮೀಸಲಾಗಿರಿಸಿ ಉಳಿದವುಗಳನ್ನು ಪ್ರವೇಶ ಪರೀಕ್ಷೆಯ ಮೂಲಕವೇ ಭರ್ತಿ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. ನಂತರದ ದಿನಗಳಲ್ಲಿ ಖಾಸಗಿ ಆಡಳಿತ ಮಂಡಳಿಗಳು ಸರ್ಕಾರದ ಮೆಲೆ ಒತ್ತಡ ತಂದು ಹೆಚ್ಚಿನ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದವು. ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕವನ್ನು ಡೊನೆಶನ್ ಹೆಸರಿನಲ್ಲಿ ವಸೂಲಿ ಮಾಡುತ್ತಿವೆ ಎನ್ನುವ ತಕರಾರು ಎದುರಾಯಿತು. ಆಗ ಆಡಳಿತ ಮಂಡಳಿಗಳು ಒಟ್ಟಾಗಿ ಮ್ಯಾನೆಜಮೆಂಟ್ ಸೀಟುಗಳಲ್ಲಿ ಒಂದಿಷ್ಟನ್ನು ಕಾಮೆಡ್-ಕೆ ಪ್ರವೇಶ ಪರೀಕ್ಷೆಯ ಮೂಲಕವೂ ಕೆಲವನ್ನು ನೇರವಾಗಿ ಭರ್ತಿ ಮಾಡಿಕೊಳ್ಳುವ ಹೊಸ ಯೋಜನೆ ಜಾರಿಗೆ ತಂದವು. ಈ ನಡುವೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಪ್ರತ್ಯೇಕ ಗುಂಪಾಗಿ ತಮ್ಮದೇ ಸಾಮಾನ್ಯ ಪ್ರವೇಶ ಪರೀಕ್ಷೆಯ ವಿಧಾನವನ್ನು ಬಳಕೆಗೆ ತಂದವು. ಜೊತೆಗೆ ಇನ್ನೊಂದು ಕಳವಳಕಾರಿ ಸಂಗತಿ ಎಂದರೆ ರಾಜ್ಯದಲ್ಲಿನ ಹಲವು ವೈದ್ಯಕೀಯ ಕಾಲೇಜುಗಳು ಡೀಮ್ಡ್ ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ಪಡೆದು ರಾಜ್ಯ ಸರ್ಕಾರದ ಹಿಡಿತದಿಂದ ಸಂಪೂರ್ಣವಾಗಿ ಹೊರಬಂದು ಆಯಾ ಕಾಲೇಜುಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲಾರಂಭಿಸಿದವು. ಸಧ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಒಬ್ಬ ವಿದ್ಯಾರ್ಥಿಯು ರಾಜ್ಯದಲ್ಲಿನ ವೈದ್ಯಕೀಯ ಕೋರ್ಸಿನ ಪ್ರವೇಶಕ್ಕಾಗಿ ರಾಷ್ಟ್ರೀಯ ಪ್ರವೇಶ ಪರೀಕ್ಷೆ (ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರತಿಶತ 15 ರಷ್ಟು ಸೀಟುಗಳಿಗಾಗಿ), ರಾಜ್ಯ ಸರ್ಕಾರದ ಸಾಮಾನ್ಯ ಪ್ರವೇಶ ಪರೀಕ್ಷೆ, ಕಾಮೆಡ್-ಕೆ ಪ್ರವೇಶ ಪರೀಕ್ಷೆ, ಅಲ್ಪಸಂಖ್ಯಾತ ಕಾಲೇಜುಗಳ ಪ್ರವೇಶ ಪರೀಕ್ಷೆ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ ಎಂದು ಐದು ಬೇರೆ ಬೇರೆ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗಾಗುತ್ತಿದ್ದ ಅನ್ಯಾಯವನ್ನು ತಡೆಗಟ್ಟಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ 1992 ರಲ್ಲಿ ಜಾರಿಗೆ ಬಂದ ‘ಸಾಮಾನ್ಯ ಪ್ರವೇಶ ಪರೀಕ್ಷೆ’ ಕಾಲಾನಂತರದಲ್ಲಿ ಅನೇಕ ವ್ಯವಸ್ಥೆಗಳಲ್ಲಿ ಹರಿದು ಹಂಚಿಹೋಯಿತು.
ಈಗ ನಾನು ಮತ್ತೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ವಿಷಯಕ್ಕೆ ಬರುತ್ತೇನೆ. ಈ ಯೋಜನೆಯನ್ನು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ವಿರೋಧಿಸುತ್ತಿರುವ ಈ ಸಂದರ್ಭದಲ್ಲೇ ವಿದ್ಯಾರ್ಥಿಗಳು ಇದನ್ನು ಸ್ವಾಗತಿಸುತ್ತಿರುವರು. ಅದಕ್ಕೆ ಕಾರಣವೇನೆಂದು ವಿಚಾರಿಸಿದಾಗ ವಿದ್ಯಾರ್ಥಿಗಳೇ ಹೇಳುವಂತೆ ಈ ಯೋಜನೆಯ ಪರಿಣಾಮ ಖಾಸಗಿ ಕಾಲೇಜುಗಳಿಗೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳುವ ಅವಕಾಶವೊಂದು ಶಾಶ್ವತವಾಗಿ ಮುಚ್ಚಿಹೋಗಲಿದೆ. ಏಕೆಂದರೆ ರಾಜ್ಯ ಸರ್ಕಾರದ ಸಾಮಾನ್ಯ ಪ್ರವೇಶ ಪರೀಕ್ಷೆ ಹೊರತುಪಡಿಸಿ ಉಳಿದ ಅರ್ಹತಾ ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಇಲ್ಲ. ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಂದ ಹಣ ಪಡೆದು ಅವರುಗಳ ರ್ಯಾಂಕ್ ನಿರ್ಧರಿಸಲಾಗುತ್ತದೆ ಎನ್ನುವ ಆಪಾದನೆ ಎಲ್ಲ ಕಡೆಗಳಿಂದಲೂ ಕೇಳಿಬರುತ್ತಿದೆ. ಜೊತೆಗೆ ಇನ್ನೊಂದು ಆತಂಕದ ಸಂಗತಿ ಎಂದರೆ ಒಬ್ಬ ವಿದ್ಯಾರ್ಥಿ ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಹೊಂದಿ ಕಾಲೇಜೊಂದರಲ್ಲಿ ಪ್ರವೇಶ ಪಡೆದು ಒಂದಿಷ್ಟು ಅವಧಿಯ ನಂತರ ಪ್ರವೇಶವನ್ನು ಹಿಂಪಡೆದರೆ ಮುಂದೆ ಅದು ಮ್ಯಾನೆಜಮೆಂಟ್ ಸೀಟಾಗಿ ಬದಲಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಕೆಲವು ವಿದ್ಯಾರ್ಥಿಗಳು ಪ್ರತಿವರ್ಷ ಸಿಇಟಿ ಬರೆಯುವುದು ಮತ್ತು ಪ್ರವೇಶ ಪಡೆದು ತಮ್ಮ ದಾಖಲಾತಿಯನ್ನು ಹಿಂಪಡೆಯುವುದನ್ನೇ ಮುಖ್ಯ ಉದ್ಯೋಗವಾಗಿ ಮಾಡಿಕೊಂಡಿರುವರು. ಈ ವಿಷಯವಾಗಿ ಖಾಸಗಿ ಸಂಸ್ಥೆಗಳೊಂದಿಗೆ ವ್ಯಾಪಾರಕ್ಕಿಳಿಯುವ ಅವರು ಲಕ್ಷಾಂತರ ರೂಪಾಯಿಗಳ ಲಾಭ ಮಾಡಿಕೊಳ್ಳುತ್ತಿರುವರು. ಇನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳಿಗಾಗಿ ಸೀಟುಗಳನ್ನು ಮೀಸಲಾಗಿಟ್ಟರೂ ಅವುಗಳನ್ನು ಭರ್ತಿ ಮಾಡಿಕೊಳ್ಳದೆ ಮ್ಯಾನೆಜಮೆಂಟ್ ಸೀಟುಗಳಾಗಿ ಮಾರ್ಪಡಿಸಿಕೊಳ್ಳುತ್ತಿರುವರು. ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳು ನಡೆಸುವ ಪ್ರವೇಶ ಪರೀಕ್ಷೆ ಅದು ಕೇವಲ ಔಪಚಾರಿಕ ಎನ್ನುವಂತಾಗಿದೆ. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಜಾರಿಗೆ ಬಂದಲ್ಲಿ ಆಡಳಿತ ಮಂಡಳಿಗಳಿಗೆ ಈ ಮೇಲಿನ ಎಲ್ಲ ಅವಕಾಶಗಳ ಬಾಗಿಲುಗಳು ಮುಚ್ಚಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಅದಕ್ಕೆಂದೇ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ಕೇಂದ್ರ ಸರ್ಕಾರದ ಈ ಯೋಜನೆಯನ್ನು ವಿರೋಧಿಸುತ್ತಿದ್ದರೆ ಅದೇ ಹೊತ್ತಿನಲ್ಲಿ ವಿದ್ಯಾರ್ಥಿಗಳು ಈ ಯೋಜನೆ ಬಹುಬೇಗನೇ ಜಾರಿಗೆ ಬರಲೆಂದು ಸ್ವಾಗತಿಸುತ್ತಿರುವರು.
ಚಿತ್ರ ಕೃಪೆ :- ಕನ್ನಡಪ್ರಭ
Very informative and in depth analysis
ಗಂಭೀರವಾದ ವಿಷಯಮಂಡನೆ ಮಾಡಿದ್ದೀರಿ.ಶಿಕ್ಷಣವನ್ನು ವ್ಯಾಪಾರ ಮಾಡಿಕೊಂಡಿರುವ ಜನರೇ ಅಧಿಕಾರದ ಭಾಗವಾಗಿರುವಾಗ ಬಡವರ ಮಕ್ಕಳ ಕೂಗು ಯಾರಿಗೇ ಕೇಳಿಸೀತು. ಕೇಂದ್ರ ಸರ್ಕಾರದ ಈ ನಡೆ ಶ್ಲಾಘನೀಯ