ಭವಿಷ್ಯನಿಧಿಯ ಮೇಲೆ ವರ್ತಮಾನದ ಕಣ್ಣೇಕೆ?
– ರಾಘವೇಂದ್ರ ಸುಬ್ರಹ್ಮಣ್ಯ
ನಿನ್ನೆ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ನೂತನ ಭವಿಷ್ಯ ನಿಧಿ ನೀತಿ ವಿರೋಧಿಸಿ ನಡೆದ ಪ್ರತಿಭಟನೆ ಮತ್ತದರ ಪರಿಣಾಮಗಳು ಇನ್ನೂ ನಮ್ಮಮುಂದೆಯೇ ಹೊಗೆಸೂಸುತ್ತ ನಿಂತಿವೆ. ಪ್ರತಿಭಟನೆಗೆ ಇಳಿದವರಲ್ಲಿ ಎಷ್ಟು ಜನಕ್ಕೆ ನೂತನ ಭವಿಷ್ಯ ನಿಧಿ(ಪಿಎಫ್) ನೀತಿ ಅಂದರೇನು, ಏನು ಬದಲಾವಣೆ ಆಗಿದೆ? ಅನ್ನೋದು ಹೋಗ್ಲಿ ಪಿಎಫ್ ಅಂದರೆ ಏನು ಅಂತಲೂ ಮಾಹಿತಿಯಿತ್ತೋ ಇಲ್ಲವೋ ಅನ್ನುವಷ್ಟು ಗೊಂದಲ ಶುರುವಾಗಿದೆ. ಪಿಎಫ್ ಯಾಕೆ ಬೇಕು? ಸರ್ಕಾರದ ನೀತಿಯೇನು ಮತ್ತದು ಹೇಗೆ ಬದಲಾಗ್ತಿದೆ ಅಂತಾ ನೋಡುವ ಪ್ರಯತ್ನವೇ ಈ ಲೇಖನ. ಇಲ್ಲಿರುವ ಎಲ್ಲಾ ಅಭಿಪ್ರಾಯ ನನ್ನದು ಮತ್ತು ನನ್ನದು ಮಾತ್ರ. ನಿಲುಮೆ ಇದನ್ನು ಬೆಂಬಲಿಸುತ್ತಿದೆಯೇ ಎಂಬುದು ಪ್ರಶ್ನೆಯೇ ಆಗಬಾರದು.
ಏನಿದು ಪಿಎಫ್?
ದೇಶ ಸ್ವತ್ರಂತ್ರವಾದ ದಿನಗಳಲ್ಲಿ, ಶ್ರಮಿಕ ಕಾರ್ಮಿಕರೇ ಹೆಚ್ಚಾಗಿದ ಭಾರತದ ಉದ್ಯೋಗೀ ಜನಸಂಖ್ಯೆಗೆ, ಉದ್ಯೋಗ ನಿಂತು ಹೋದಮೇಲೆ ಏನು? ಎಂಬ ಪ್ರಶ್ನೆಗೆ ಉತ್ತರಿಸಲು 1952ರಲ್ಲಿ ಸರ್ಕಾರ ಪಿಎಫ್ ಆಕ್ಟ್ ಅನ್ನು ಜಾರಿಗೆ ತಂದು, ಫ್ಯಾಕ್ಟರೀಸ್ ಆಕ್ಟ್ ಹಾಗೂ ಶಾಪ್ಸ್ ಅಂಡ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ ಅಡಿಯಲ್ಲಿ ನೋಂದಾಯಿತ ಎಲ್ಲಾ ಕಂಪನಿಗಳಿಗೆ ಅನ್ವಯವಾಗುವಂತೆ ಸೂಚಿಸಿತು. ಈ ಭವಿಷ್ಯ ನಿಧಿಯಲ್ಲಿ ಮೂಲಸಂಬಳದ (Basic Salary) ಶೇ.12 ರಷ್ಟು ಹಣವನ್ನು ಕಂಪೆನಿ ದೇಣಿಗೆ ನೀಡಿದರೆ, ಶೇ. 12 ರಷ್ಟು ಹಣವನ್ನು ಉದ್ಯೋಗಿ ದೇಣಿಗೆಯಾಗಿ ನೀಡುತ್ತಾನೆ. ಕಂಪೆನಿ ಹಾಕುವ ಶೇ.12ರಷ್ಟು ಹಣದಲ್ಲಿ ಶೇ.8.33ರಷ್ಟು ಹಣ ಪಿಂಚಣಿ ನಿಧಿಗೆ (Pension Fund) ಸೇರಿದರೆ ಶೇ. 3.67ರಷ್ಟು ಹಣ ಭವಿಷ್ಯ ನಿಧಿಗೆ (Superannuation) ಹೋಗುತ್ತದೆ. ಇವೆರಡು ನಿಧಿಗಳ ಒಟ್ಟು ಮೊತ್ತವೇ ಪ್ರಾವಿಡೆಂಡ್ ಫಂಡ್. ಇದರ ಮೇಲೆ ಸರ್ಕಾರ ಬಡ್ಡಿಗಳಿಸಿ, ಉದ್ಯೋಗಿಯ ನಿವೃತ್ತಿಯಂಚಿನಲ್ಲಿ ಬಡ್ಡಿ ಸಮೇತ ಹಿಂದಿರುಗಿಸುತ್ತದೆ. ಆನಂತರ ಖಾಸಗೀ ಉದ್ಯೋಗಗಳು ಹೆಚ್ಚಾದ ಮೇಲೆ, ಜನ ಒಂದೇ ಕಂಪನಿಗೆ ಜೀವನಪೂರ್ತಿ ಅಂಟಿಕೊಳ್ಳೋದನ್ನು ಬಿಟ್ಟರು. ಕೆಲಸ ಬದಲಾಯಿಸಿದಾಗಲೆಲ್ಲಾ ಪಿಎಫ್ ಅನ್ನು ಹಿಂಪಡೆಯುವುದು, ಅಥವಾ ಪಿಎಫ್ ಅನ್ನು ಅಲ್ಲೇ ಆ ಕಂಪನಿಯಲ್ಲೇ ಬಿಡುವುದು, ಅಥವಾ ಹೊಸಕಂಪನಿಯಲ್ಲಿ ತೆರೆದ ಹೊಸಾ ಪಿಎಫ್ ಅಕೌಂಟಿಗೆ ವರ್ಗಾಯಿಸುವ ನಿರ್ಧಾರ ಉದ್ಯೋಗಿಗೆ ಬಿಟ್ಟದ್ದು. ಹಿಂಪಡೆಯುವುದಾದರೆ ಸ್ವಲ್ಪ ತೆರಿಗೆ ಕಟ್ಟಬೇಕಾಗುತ್ತದೆ. Provident ಅಂದರೆ ದೂರದೃಷ್ಟಿಯುಳ್ಳ/ವಿವೇಕಿ ಅನ್ನೋ ಅರ್ಥವಿದೆ. ಅಲ್ಲಿಗೆ ಸರ್ಕಾರ ಇಂತದೊಂದು ನಿಧಿಯ ಮೂಲ ಉದ್ಧೇಶ ನಿಮಗೆ ಮನವರಿಕೆಯಾಗಿರಬೇಕು.
ಉದ್ಯೋಗಿಗೆ 60 ದಿನಗಳವರೆಗೆ ಕೆಲಸ ಇಲ್ಲದಿದ್ದರೆ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಪಡೆಯಲು ಈ ಹಿಂದೆ ಅವಕಾಶ ಇತ್ತು. ಹೊಸ ನಿಯಮಗಳ ಪ್ರಕಾರ ಇಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಉದ್ಯೋಗಿಗೆ 58 ವರ್ಷ ವಯಸ್ಸಾಗುವವರೆಗೆ ತೆಗೆಯಲು ಅವಕಾಶ ಇಲ್ಲ. ಆದರೆ ಉದ್ಯೋಗಿಯು ತಾನು ನೀಡಿದ ದೇಣಿಗೆ ಮತ್ತು ಅದರ ಮೇಲಿನ ಬಡ್ಡಿಯನ್ನು 58 ವರ್ಷದ ಒಳಗಡೆ ತೆಗೆಯಲು ಅವಕಾಶ ನೀಡಲಾಗಿದೆ. ಕಂಪನಿಯ ದೇಣಿಗೆ ಹಾಗೂ ಅದರ ಮೇಲಿನ ಬಡ್ಡಿ ಖಾತೆಯಲ್ಲಿಯೇ ಉಳಿಯುತ್ತದೆ. ಅಂದರೆ 50% ತೆಗೆಯಲು ಅವಕಾಶ ಸದಾ ಇತ್ತು, ಈಗಲೂ ಇದೆ.
ಸರ್ಕಾರದ ಹೇಳುತ್ತಿರುವುದೇನೆಂದರೆ, ಪಿಂಚಣಿ ನಿಧಿ ಇರುವುದೇ ಉದ್ಯೋಗಿ ನಿವೃತ್ತಿಯ ನಂತರ ಪಿಂಚಣಿ ಪಡೆಯಲು. ಹೀಗಾಗಿ ಕಂಪೆನಿ ನೀಡುವ ದೇಣಿಗೆ ಹಣವನ್ನು ನಿವೃತ್ತಿಯ ನಂತರವೇ ಪಡೆದುಕೊಳ್ಳಬೇಕು. ನನ್ನ ಪ್ರಕಾರ ಈ ವಾದ ಸರಿ ಕೂಡಾ. ನಾವೆಷ್ಟೇ “ನನ್ನ ದುಡ್ಡನ್ನು ಹೆಂಗೆ ಸಂಭಾಳಿಸಬೇಕು ಅಂತಾ ನಮಗ್ಗೊತ್ತಿದೆ” ಅಂತಾ ಕೂಗಾಡಿದರೂ, ಸರ್ಕಾರ ಪ್ರಜೆಗಳ ಬಗ್ಗೆ ಆ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಪ್ರಜೆಗಳಿಗೆ ದಿನನಿತ್ಯದ ಜೀವನದಲ್ಲಿ ಹೇಗೆ ಸಾಧನಗಳನ್ನು ಒದಗಿಸುತ್ತದೆಯೋ, ನಿವೃತ್ತಿಯ ನಂತರವೂ ಎಲ್ಲಾ ಪ್ರಜೆಗಳು (ಕೆಲವೇ ವಾಣಿಜ್ಯ ಪಂಡಿತ ಪ್ರಜೆಗಳು ಮಾತ್ರವಲ್ಲ) ಕನಿಷ್ಟ ಗುಣಮಟ್ಟದ ಜೀವನವನ್ನು ಸಾಗಿಸಲು ಸಹಾಯ ಮಾಡುವುದು, ಅದಕ್ಕೆ ತಕ್ಕಂತೆ ನೀತಿನಿಯಮಗಳನ್ನ ರೂಪಿಸುವುದು ಸಹಾ ಸರ್ಕಾರದ ಕೆಲಸ. ಹದಿನೇಳು ವರ್ಷಗಳ ಕೆಳಗೆ ಮನೆಸಾಲ ನಿಯಮಗಳನ್ನು ಮರುರೂಪಿಸಿದ್ದರಿಂದಲೇ, ಇವತ್ತು ಭಾರತದ 53% ಜನ ತಮ್ಮ ಹೆಸರಲ್ಲಿ ಒಂದು ಸೂರುಕಟ್ಟಿಕೊಳ್ಳಲಿಕ್ಕಾಗಿದ್ದು. ಇಲ್ಲವಾದಲ್ಲಿ ಮನೆಮಾಲೀಕರ ಅಟ್ಟಹಾಸ ಎಂದಿಗೂ ಕೊನೆಗೊಳ್ಳುತ್ತಿರಲಿಲ್ಲ. ಎಲ್ಲಾ ನೀತಿನಿಯಮಗಳಲ್ಲಿ ನುಣುಚಿಕೊಳ್ಳುವ ದಾರಿ ಇದ್ದೇ ಇರುತ್ತದೆ. ಕೆಲವರು ನಾಲ್ಕು ಮನೆ ಕಟ್ಟಿದ್ದಾರೆ, ಇಂದಿಗೂ ಕೆಲವರು ಬಾಡಿಗೆ ಮನೆಯಲ್ಲೇ ಇದ್ದಾರೆ. ಆದರೆ ಸ್ವಂತದ್ದೊಂದು ಮನೆಕೊಳ್ಳಲು 1990ರಷ್ಟು ಇದ್ದ ರೆಡ್-ಟೇಪಿಸಂ ಈಗಿಲ್ಲ. ನಾವೆಲ್ಲರೂ ಆ ಸರ್ಕಾರಗಳಿಗೆ ಧನ್ಯವಾದ ಹೇಳಬೇಕು. ಇಲ್ಲಿ ಪಿಎಫ್ ವಿಚಾರದಲ್ಲಿಯೂ ಸರ್ಕಾರದ ನಿಯಮಗಳು ಸರಿಯಾಗಿಯೇ ಇವೆ ಎಂದು ನನ್ನ ಅಭಿಪ್ರಾಯ.
ಬರೇ ಭಾರತ ಮಾತ್ರವಲ್ಲ ಯೂರೋಪಿಯನ್ ದೇಶಗಳಲ್ಲಿಯೂ ಸಹ, ನಿಮ್ಮ ಸಂಬಳದ ಒಂದು ಭಾಗ ಸರ್ಕಾರ ನಿಮ್ಮ ನಿವೃತ್ತಿಯವರೆಗೂ ಜೋಪಾನವಾಗಿ ತೆಗೆದಿಟ್ಟು, ನಿವೃತ್ತಿಗೆ ಇನ್ನೇನು ಒಂದೆರಡು ವರ್ಷಗಳಿವೆ ಎಂದಾಗ ಕೊಡುತ್ತದೆ. ಆಸ್ಟ್ರೇಲಿಯದಲ್ಲಂತೂ ನಿವೃತ್ತಿಯಾದಮೇಲೂ ನಿಮಗೆ ಪೂರ್ತಿ ಇಡುಗಂಟನ್ನು ಕೊಡುವುದಿಲ್ಲ. ತಿಂಗಳಿಗೆ ಇಂತಿಷ್ಟು ಅಂತಾ ಸರ್ಕಾರವೇ ನಿಮ್ಮ ಅಕೌಟಿಗೆ ಹಾಕುತ್ತದೆ. ಅಮೇರಿಕಾದ 401K ನಿಯಮ ಕೂಡಾ ಹೀಗೆಯೇ ಇದೆ. ಆಯಾ ಸರ್ಕಾರಗಳು, ಪ್ರಜೆಗಳು ಸಾವಿರರೀತಿಯಲ್ಲಿ ದುಡ್ಡನ್ನು ಪೋಲು ಮಾಡದೇ ಮುಂದಿನ ದಿನಗಳಿಗೆ ಸಹಾಯವಾಗಲೀ ಎಂದು ಈ ನಿಯಮಗಳನ್ನು ಮಾಡಿವೆಯೇ ಹೊರತು, ತನ್ನ ಪ್ರಜೆಗಳು ಅವಿವೇಕಿಗಳು ಎಂಬ ಕಾರಣಕ್ಕಲ್ಲ.
ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಈ ನೀತಿ ಘೋಷಿಸಿದ ಕೆಲವೇದಿನಗಳಲ್ಲಿ ಅದನ್ನು ಸಡಿಲಿಸಿ, ಕಂಪೆನಿ ದೇಣಿಗೆ ನೀಡುವ ಶೇ.3.67ರಷ್ಟು ಹಣವನ್ನು ಮನೆ ನಿರ್ಮಾಣ, ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ, ಮದುವೆ ಕಾರ್ಯಕ್ರಮಗಳಿಗೆ ತೆಗೆಯಲು ಅನುಮತಿ ನೀಡಿದೆ.ಹಾಗೂ ಪಿಎಫ್ ಹಣ ಪಡೆಯಲು ಮಹಿಳೆಯರು ಕೆಲಸ ಬಿಟ್ಟು ಎರಡು ತಿಂಗಳು ಕಾಯುವ ಅಗತ್ಯ ಇಲ್ಲ. ಮದುವೆ, ಗರ್ಭಧಾರಣೆ ಅಥವಾ ಮಗು ಜನನದ ಕಾರಣಕ್ಕೆ ಮಹಿಳೆ ಕೆಲಸ ಬಿಟ್ಟಾಗ ತಕ್ಷಣವೇ ಪಿಎಫ್‍ನಲ್ಲಿರುವ ತಮ್ಮ ದೇಣಿಗೆ ಮತ್ತು ಅದರ ಮೇಲಿನ ಬಡ್ಡಿಯನ್ನು ಪಡೆದುಕೊಳ್ಳಬಹುದು. ಆದರೆ ಈ ನಿಯಮಗಳು ಅಗಸ್ಟ್ 1ಕ್ಕೆ ಜಾರಿಗೆ ಬರಲಿವೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಇಪಿಎಫ್ ಹಿಂಪಡೆಯುವ ವೇಳೆ ಶೇ.40ಕ್ಕೆ ತೆರಿಗೆ ವಿನಾಯಿತಿ. ಇನ್ನುಳಿದ ಶೇ.60ಕ್ಕೆ ತೆರಿಗೆ ನೀಡುವುದಾಗಿ ಪ್ರಕಟಿಸಿದ್ದರು.ಇದಕ್ಕೆ ಪ್ರತಿಪಕ್ಷಗಳಿಂದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಸ್ತಾಪದಿಂದಲೂ ಹಿಂದಕ್ಕೆ ಸರಿದಿದೆ. ಇಷ್ಟೆಲ್ಲಾ ಆದ ನಂತರವೂ ನಿನ್ನೆ ನಡೆದ ಗಲಭೆ ಯಾವ ಕಾರಣಕ್ಕೆ, ನಡೆಸಿದ್ದು ಯಾರು ಎಂಬುದೊಂದೂ ತಿಳಿಯದೇ, ಸಿದ್ರಾಮಯ್ಯನವರ ಸಡಿಲ ಸರ್ಕಾರೀ ಆಡಳಿತದ ಮುಖಕ್ಕೆ ಕನ್ನಡಿ ಹಿಡಿದಂತೆ ಯಥಾಪ್ರಕಾರ ಬಸ್ಸು ಜೀಪುಗಳು ಆಹುತಿಯಾದವು. ಲಾಠಿ ಪ್ರಹಾರವೂ ನಡೆಯಿತು.
ಪಿಎಫ್ ಅನ್ನೋದು ದೂರದೃಷ್ಟಿಯ ನಿಧಿ ಅನ್ನೋದು ಸರ್ಕಾರದ ನೀತಿ. ಜನತೆ ಅದನ್ನ ಹೇಗೆ ಸ್ವೀಕರಿಸಿದ್ದಾರೆ ಅನ್ನೋದು ಇನ್ನೂ ಚರ್ಚೆಯ ವಿಷಯ. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಇನ್ಸ್ಟಂಟ್ ಫಲ ಬೇಕು. ಯಾರಿಗೂ ಕಾಯುವ ತಾಳ್ಮೆಯಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಬೋರ್ವೆಲ್ ಕೊರೆದು, ಈಗ ಹನಿನೀರಿಗೂ ತತ್ವಾರವಾಗಿವುದನ್ನು ನೆನೆಸಿಕೊಂಡಾದರೂ ಜನ ವಯಸ್ಸು ಐವತ್ತಂಟಾಗುವವರೆಗೆ ಆ ಹಣದ ಬಗ್ಗೆ ಮರೆಯಲು ತಯಾರಿಲ್ಲ. ಮಾತೆತ್ತಿದರೆ, ಈಗ ಯಾರೂ ಅರವತ್ತರವರೆಗೆ ಬದುಕೊಲ್ಲ ಅಂತಾ ಹೇಳ್ತಾ ತಮ್ಮೆಲ್ಲಾ ಅರವತ್ತರ ಅಪ್ಪಂದರು ಸತ್ತೇ ಹೋಗಿದ್ದಾರೇನೋ, ಯಾರೂ ಅರವತ್ತರ ವಯೋಮಿನಿತಿನ್ನು ಮೀರಿ ಬದುಕುವುದೇ ಇಲ್ಲವೇನೋ ಎನ್ನುವಂತೆ ಹತಾಷೆಯ ಮಾತನ್ನಾಡುತ್ತಿದ್ದಾರೆ. ನಿಮ್ಮ ದುಡ್ಡ ನಿಮ್ಮ ನಿಯಂತ್ರಣ ಎಲ್ಲಾ ಸರಿ ಸ್ವಾಮಿ. ಸರ್ಕಾರೀ ಪಾಲಿಸಿಗಳು ಬರೀ “ನನ್ನ ಅಥವಾ ನಿಮಗಾಗಿ” ಮಾಡಿದ್ದಲ್ಲ. ಹಣಹೂಡಿಕೆಯೆಂದರೇನು ಅಂತಾ ಗೊತ್ತಿಲ್ಲದ ನಿರಕ್ಷರಕುಕ್ಷಿಗೂ ಸಹ ನಿವೃತ್ತಿ ನಂತರ ಬಿಕ್ಷೆಬೇಡದೆ ಬದುಕುವ ಹಕ್ಕಿದೆ ಹಾಗೂ ಆ ಹಕ್ಕಿಗಾಗಿಯೇ ಈ ನಿಧಿ ಮಾಡಿಟ್ಟಿರುವುದು. ಸರ್ಕಾರೀ ಪಾಲಿಸಿಗಳು ಒಬ್ಬಿಬ್ಬರಿಗಲ್ಲದೇ ಎಲ್ಲಾ ನೂರುಕೋಟೀ ಜನರಿಗೂ ಸೇರಿ ಮಾಡಿರುವುದಾಗಿರುತ್ತವೆ. ನಾವು ಕಷ್ಟದಲ್ಲಿದ್ದಾಗ ಸಣ್ಣ ತೊಂದರೆಗಳು ದೊಡ್ಡದಾಗಿ ಕಾಣುವುದಾದ್ದರಿಂದ, ಜನ ಕ್ಷುಲ್ಲಕ ವಿಚಾರಗಳಿಗೂ ಪಿಎಫ್ ಹಣವನ್ನು ಹೊರತೆಗೆದು ಖರ್ಚುಮಾಡುವ ಸಾಧ್ಯತೆಗಳಿರುತ್ತವೆ. ದೊಡ್ಡಮಟ್ಟದಲ್ಲಿ ಹಾಗೂ ದೂರದೃಷ್ಟಿಯಲ್ಲಿ ಯೋಚಿಸಬೇಕಾಗಿದೆ.
ನಾನು ನಿವೃತ್ತಿಯ ನಂತರದ ಜೀವನಕ್ಕೆ ಏನು ಮಾಡ್ಬೇಕೆಂದು ನನಗೆ ಗೊತ್ತಿದೆ ಅದಕ್ಕೆ ಬೇರೆ ಏನಾದ್ರೂ ಮಾಡುತೇನೆ, ಈಗ ನನ್ನದೊಂದು ಅಂಗಡಿ ಪ್ರಾರಂಭಿಸಲು, ಮಗಳನ್ನು ಯು.ಎಸ್ಸಿಗೆ ಕಳಿಸಲು ಪಿಎಪ್ ಹಣ ನನಗೆ ಬೇಕು ಎನ್ನುವ ಜನರನ್ನು Penni-wise pound-follishಗಳೆನ್ನಬಹುದು ಅಷ್ಟೇ. ಹೇಗಿದ್ದರೂ ನಿಮಗೆ ನಿವೃತ್ತಿಯ ನಂತರಕ್ಕೆ ಏನು ಮಾಡಬೇಕೆಂದು ಗೊತ್ತು ತಾನೇ! ಅದನ್ನೇ ಈ ವರ್ತಮಾನದ ತೊಂದರೆಗಳಿಗೆ ಅನ್ವಯಿಸಿ. ಅದಕ್ಕೂ ಸಾವಿರ ದಾರಿಗಳಿವೆ ಅಲ್ಲವೇ? ಭವಿಷ್ಯವನ್ನು ಅದರಷ್ಟಕ್ಕೇ ಬಿಡಿ. ಕರುಣಾಜನಕವಾದ ನಾಲ್ಕು ಕಾರಣಗಳನ್ನು ಕೊಟ್ತಕೂಡಲೇ ಒಂದು ನಿಯಮ ತಪ್ಪು ಅಂತಾ ನಿರ್ಧಾರವಾಗುವುದಿಲ್ಲ. ಈ ಕರುಣೆ ಕಣ್ಣಿರಿನಿಂದ ಹೊರನಿಂತು, ಉದ್ಯೋಗದ ವೃತ್ತಿಜೀವನ ಮುಗಿದ ಮೇಲೆ, ಪ್ರವೃತ್ತಿಯ ಹಿಂದೆ ನಡೆದು ಇನ್ನೊಂದು ಹೊಸಾ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡುವ ಈ ನಿಧಿಯನ್ನು, ಕ್ಷಣಿಕನಿರ್ಧಾರದಿಂದ ಜನರು ಹಾಳುಮಾಡಿಕೊಳ್ಳದಿರಲಿ ಎಂಬ ಆಶಯದ ಸದುದ್ದೇಶ ಎಲ್ಲರಿಗೂ ಅರ್ಥವಾಗಲೀ ಎಂಬುದೇ ನನ್ನ ಹಾರೈಕೆ.
PF duddu 10 varsha melpattare adu pensionge serkolluthalla… Ee pension annodu maha mosa swami… Pensionge meesalidalada duddu konege vapas sikkare, adannu bank nalli fixed deposit iduvaga thingalu thingalu siguva motha sarakara koduva pensionginthanu eshto jasthi aguthade… Idu anyaya alwa…
ವಾದ ಚೆನ್ನಾಗಿದೆ. ಆದರೆ ನಿವೃತ್ತಿಗೆ ೫೮ ವರ್ಷ ಏಕೆ? ಸ್ವಯಂ ನಿವೃತ್ತಿ ಪಡೆಯಲು ೫೮ ವರ್ಷ ಬೇಕಾಗಿಲ್ಲವಲ್ಲ. ಯಾವಾಗ ಬೇಕಾದರೂ ನಿವೃತ್ತಿ ಹೊಂದಬಹುದಲ್ಲವೇ?
ಪಿ ಎಫ್ ನಲ್ಲಿ ಒಬ್ಬ ವ್ಯಕ್ತಿ ಹೂಡಿದ ಹಣ ಬಹುತೇಕ ಮ್ಯುಚುವಲ್ ಫಂಡ್ ನಲ್ಲಿ ಹಣ ಹೂಡಿದಂತೆಯೆ ಆದರೂ ನಿಗದಿತ ಬಡ್ಡಿಖಚಿತ. ಹೀಗಾಗಿ ಹಣ ಹೂಡಿದ ವ್ಯಕ್ತಿ ಕೊಂಚಕಾಲವಾದರೂ – ಎಂದರೆ ಹತ್ತರಿಂದ ಹದಿನೈದು ವರ್ಷಗಳಾದರೂ – ತನ್ನ ಹಣವನ್ನು ಪಿ ಎಫ್ ನಿಧಿಯಲ್ಲಿ ಉಳಿಸಿದ್ದರೆ, ಆತನಿಗೆ/ ಆಕೆಗೆ ಬಡ್ಡಿ ಸಮೇತ ಹೆಚ್ಚು ಹಣ ಬರುತ್ತದೆ. ಭಾರತದಲ್ಲಿ ಸರಾಸರಿ ಆಯುರ್ಮಾನ ೬೬ ವರ್ಷಗಳು. ಹೀಗಾಗಿ ಹಣದುಬ್ಬರ (ಇನ್ಫ್ಲೇಷನ್) ಗೆ ಸಮನಾಗಿ ನಿವೃತ್ತಿಯ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಇರಬಹುದಾದ ಜೀವನಶೈಲಿಗೆ ಹೊಂದಿಕೊಳ್ಳುವಂತೆ ಕನಿಷ್ಠ ಎಂಟರಿಂದ ಹತ್ತು ವರ್ಷಗಳ ಕಾಲ ನಿಗದಿತ ವರಮಾನದ ಸಮವಾಗುವಷ್ಟು ಹಣ ದೊರೆಯಬೇಕೆಂದರೆ, ಐವತ್ತೆಂಟು ವರ್ಷಗಳ ನಿವೃತ್ತಿಯ ವಯಸ್ಸು ಸಮಂಜಸವೆನ್ನಿಸುತ್ತದೆ. ಸರಾಸರಿ ಆಯುರ್ಮಾನ ಜಾಸ್ತಿ ಇರುವ ದೇಶಗಳಲ್ಲಿ, ಇಂತಹ (ಪಿ ಎಫ್ ನಂತಹ) ನಿಧಿಯಿಂದ ಹಣ ತೆಗೆಯಬಹುದಾದ ವಯಸ್ಸೂ ಕೂಡ ಜಾಸ್ತಿ ಇರುತ್ತದೆ. ಉದಾ. ಯು ಎಸ್ ಎ – ಇಲ್ಲಿ 401 (k) ಪಿ ಎಫ್ ಗೆ ಸರಿ ಸಮನಾದ ನಿಧಿಯೊಂದರಿಂದ ಯಾವ ವಯಸ್ಸಿಗೇ ನಿವೃತ್ತರಾದರೂ, ೬೨ ವರ್ಷಗಳಿಗಿಂತ ಮೊದಲು ಹಣ ತೆಗೆಯುವಂತಿಲ್ಲ. ಹಣ ತೆಗೆಯಲೇ ಬೇಕಾದ ಪರಿಸ್ಥಿತಿ ಬಂದರೆ, ನಿಗದಿತ ಸಮಯದೊಳಗೆ ಬಡ್ಡಿ ಸಮೇತ ಅದನ್ನು ಕಟ್ಟಿದರೆ ಮಾತ್ರ ನಷ್ಟವಾಗುವುದನ್ನು ತಪ್ಪಿಸಬಹುದು.
ಇಂಥ ಲೇಖನಗಳಿಗೆ ಪ್ರತಿಕ್ರಿಯೆ ಬರೆಯಲು ನಾಗ’ಷಿಟ್ ಟಿ’ ಅಥವಾ “ಹರಾಮ್” ಬಾವಾನಿಗೆ ಹೇಳಿ, ಮಿಡ್ಲ್ ಸ್ಕೂಲ್ ಮಕ್ಕಳು ಹಸುವಿನ ಬಗ್ಗೆ ಪ್ರಬಂಧ ಬರೆದಂತೆ “ಭಡವ” ಧರ್ಮ, ಅಥವಾ “ವಾಂತಿ” ಧರ್ಮ ವನ್ನು ಎಳೆ ತರುತ್ತಾರೆ.