ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 26, 2016

ವಿಡಂಬನೆ: ಸಾಹಿತ್ಯ ಗದ್ದುಗೆ ಹಾಗೂ ಮಣ್ಣಂಗಟ್ಟಿ ಸಾಹಿತ್ಯ!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

kannadaತರ್ಲೆಕ್ಯಾತನಳ್ಳಿ ಖ್ಯಾತ ಸಾಹಿತಿ ಅನಂತ ಜೋಷಿ ಮತ್ತು ತಾಲ್ಲೂಕ ಸಾಹಿತ್ಯ ಸಭೆಯ ನೂತನ ಅಧ್ಯಕ್ಷ ಗುದ್ಲಿಂಗ ಜಮಖಂಡಿ ಅವರ ಮಧ್ಯೆ ನಡೆದ ಫೋನ್ ಸಂಭಾಷಣೆ ಹೀಗಿದೆ:
‘ನಮಸ್ಕಾರ್ರೀ ! ನಾನ್ ಜಮಖಂಡಿ ಮಾತಾಡಕ್ ಹತ್ತೀನಿ’
‘ಓಹೋ! ಜಮಖಂಡಿ ಅವರು!ಏನ್ರಪ್ಪಾ! ಆರಾಮದೀರೇನು?’
‘ಹಾಂ! ಆರಾಮದೀನಿ..ವಿಷ್ಯ ತಿಳೀತೇನ್ರೀ ಎಪ್ಪಾ?’
‘ಯಾವ ವಿಷ್ಯ ಹೇಳಕ್ ಹತ್ತೀರಿ ನೀವು? ಕೊಶ್ನೆ ಪೇಪರ್ ಲೀಕಾಯ್ತಲ್ಲ ಅದಾ ? ಇಲ್ಲ ಯಡಿಯೂರಪ್ಪಗೆ ಅಧ್ಯಕ್ಷ ಪಟ್ಟ ಸಿಕ್ತಲ್ಲ ಅದಾ?’
‘ಏ ! ಅವೆಲ್ಲಾ ಹಳೇದಾತ್ ಬಿಡ್ರಿ, ಈಗ ನಂಗ್ ಸಾಹಿತ್ಯ ಸಭೆ ಅಧ್ಯಕ್ಷಗಿರಿ ಸಿಕ್ಕೈತೆ, ಮೊನ್ನೆ ಯುಗಾದಿ ಮುಂದ ಪೇಪರ್ನಾಗ್ ಬಂದಿತ್ತು, ನೀವು ನೋಡ್ಲಿಲ್ಲೇನು?’
‘ಅರೆ! ಹೌದಾ? ನಿಮ್ಗೆ ಅಧ್ಯಕ್ಷಗಿರಿ ಕಟ್ಯಾರಾ? ಅಂದ್ರೆ ಹಾರ ತುರಾಯಿ ಹಾಕಿಸ್ಕೊಳೋಕ್ ಕೊಳ್ ಚಾಚ್ಕಂಡ್ ಕುಂತ್ ಬಿಟ್ರಿ ಅನ್ನಿ, ಇಂದ್ರಾಬಾಯವ್ರು ನಮಗಾ ಒಂದ್ ಮಾತೂ ಕೇಳ್ದ, ಸಭೆನೂ ಕರೀದೆ ನಿಮ್ಮನ್ನ ಹೆಂಗ್ ಅಧ್ಯಕ್ಷ ಮಾಡಾರೆ?’
‘ನಿಮ್ಗೆ ಇದ್ ಕೇಳಿದ್ ಕೂಡ್ಲೆ ಹೊಟ್ಟೆನಾಗೆ ಮೆಣಸಿನಕಾಯ್ ಕಿವುಚಿದಂಗಾಗ್ತದೆ ಅಂತ ನಂಗೊತ್ತಿತ್ತು ಬಿಡ್ರಲಾ! ಅದೆಂಥ ಹೊಟ್ಟೆ ಉರೀನ್ರೀ ನಿಮ್ದು..! ಇನ್ನೊಬ್ರಿಗೆ ಒಳ್ಳೇದಾತು ಅಂದ್ರೆ ಸಹಿಸೋ ಮಂದಿ ಅಲ್ಲ ನೀವು’
‘ಹಂಗಲ್ರಪ್ಪ, ಇದು ಹೊಟ್ಟೆ ಉರಿ ಅಲ್ರಪಾ! ಹೊಟ್ಟೆಯೊಳಿಗಿನ ಸಂಕಟ ಐತಿ..ನಾ 30 ವರ್ಷದಿಂದ ಸಾಹಿತ್ಯ ಸಭಾಲಿ ಇದೀನಿ.. ಆ ಆರಾಧ್ಯರೊಟ್ಟಿಗೆ ಕಸ ಗುಡ್ಸೀನಿ.. ನಮ್ಗೆ ಕಿಮ್ಮತ್ತು ಇಲ್ಲ ಅಂದ್ರೆ ಎಂಗಪಾ?’
‘ಈಗೇನ್ ನಾವ್ ಕಸ ಗುಡ್ಸೋದು ಬೇಡ ಅಂದೇವೇನು? ನೀವು ಗಾಂಧಿವಾದಿಗಳು ಅಂತ ನಮ್ಗೆ ಗೊತ್ತದ.. ಕಸ ಏನ್ರಪಾ? ಬೇಕಾದ್ರೆ ಸಂಡಾಸ್/ಲ್ಯಾವೆಟ್ರಿ ಕೂಡ ನೀವೇ ತೊಳಿವ್ರಂತೆ..’
‘ಏನ್ರಪ? ಹಿಂಗ್ ಮರ್ಯಾದೆ ಇಲ್ದೆ ಮಾತಾಡಕ್ ಹತ್ತೀರಿ? ನಮ್ ಬಿಲ್‍ಹರಿ ಮಾಸ್ತರು ಅಧ್ಯಕ್ಷರಾಗಿದ್ದಾಗ ನಾವ್ ಶಹರದ ಮೂಲೆ ಮೂಲೆನಾಗ ಕವಿಗೋಷ್ಠಿ ಮಾಡಿದ್ವಿ.. ನಂದಾ ಕಿಸೆಯಾಗಿಂದ ಸಾವಿರಾರ್ ರೂಪಾಯ್ ಖರ್ಚಾಗಿತ್ತು. ನಾ ಒಲ್ಲೆ ಅಂದ್ರೂ ಮಾಸ್ತರು ನಮ್ದಾಯ್ತು, ನೀವೇ ನೆಕ್ಸ್ಟ್ ಅಂತ ಹೇಳಿದ್ರಪ್ಪ..’
‘ಅವರು ಹರೋಹರ ಅಂದಾಯ್ತಲ್ಲ. ಇನ್ ನೀವೇ ನೆಕ್ಟ್ಸ್ ಬಿಡ್ರಲಾ?
‘ಅಯ್ಯೋ! ನಾ ಆ ಅರ್ಥದಾಗ್ ಹೇಳ್ಳಿಲ್ರೀ..ಸಾಹಿತ್ಯ ಸಭಾ ಅಧ್ಯಕ್ಷಗಿರಿ ನಮ್ಗಾ ಕೊಡ್ಸೊದು ಅಂತ ಹೇಳಿದ್ರು’
‘ ಮತ್ ಯಾಕ್ ಕೊಡುಸ್ಲಿಲ್ಲ..”
‘ಅದು ರಾತ್ರೋ ರಾತ್ರಿ ರೋಮ್ ಸಿಂಹಾಸನದ ತರ ಹೈಜಾಕ್ ಆಗಿ ಅವರ್ದೇ ಕ್ಯಾಸ್ಟು ಬ್ರಹ್ಮಾನಂದ ಅವರ ಕೊಳ್ಳಿಗೆ ಬಿತ್ರೀ’
‘ ಮತ್ ನೀವೆಷ್ಟು ಬಕರಾ ಮಂದಿ ಅದೀರಿ ನೋಡಿ.. ಅವರ ಹಿಂದೆ ಮುಂದೆ ಓಡಾಡ್ಕೊಂಡ್ ಪಟ್ಟ ಕಟ್ಟುಸ್ಕೊಳೋದ್ ಬಿಟ್ ಈಗ ಗೋಳಾಡಕ್ ಹತ್ತಿದೀರಲ್ಲ..’
‘ಅದಾದ್ ಮೇಲೆ ನಾನು ಮಾರಪ್ಪನೋರ ಅಧ್ಯಕ್ಷತೆನಾಗೂ ಕೆಲಸ ಮಾಡೀನ್ರೀ. ಗಂಗಂ ಗೌಡ್ರ ಕಾಲ್ದಾಗೂ ಕೆಲಸ ಮಾಡೀನ್ರೀ.. ಒಂದ್ ಬಾರಿನೂ ನಂಗ್ ಅವಕಾಶ ಸಿಕ್ಲಿಲ್ರೀ.. ಅಧ್ಯಕ್ಷ ಮಾಡೋದಿರ್ಲಿ.. ನನ್ ಒಂದು ಜಂಟಿ ಸೆಕ್ರೆಟೀನೋ, ಕೋಶಾಧಿಕಾರಿನೋ ಮಾಡ್ಲಿಲ್ವಲ್ರೀ’
‘ಆಗ ನಿಮ್ದು ವಯಸ್ಸು ಚಿಕ್‍ದಿತ್ತು. ಅನುಭವ ಸಾಲ್ದು ಅಂತ ಮಾಡಿಲ್ರೀ’
‘ಸಾಕು ಸುಮ್ನೀರ್ರೀ!ಎಷ್ಟೋ ಮಂದಿಗೆ ಸಾಹಿತ್ಯ ಸಭಾ ಹಿಂದ ಮುಂದ ಗೊತ್ತಿಲ್ಲ. ಹೆಸರಾ ಕೇಳದ, ಅದ್ರೊಳಗೆ ಕೆಲಸ ಮಾಡದ ಎಪರ ತಪರಾ ಮಂದಿ ಏನೇನಾರ ಹುದ್ದೆ ಗಿಟ್ಸವ್ರೆ.. ಈಗ ನಿಮ್ದಾ ಉದಾಹರಣೆನೇ ತಗೊಳ್ರೀ! ನಿಮಗಾ ಏನ್ ಮಹಾ ಅನುಭವ ಅದೆ? ಎಷ್ಟು ಸಾಹಿತ್ಯ ಬರ್ದಿವ್ರಿ ನೀವು ? ಹಿಂದೆ ಯಾವ್ದಾರಾ ಸಾಹಿತ್ಯ ಸಂತೆನಾಗ ನೀವು ಇಚಾರ ಮಂಡಿಸಿದ್ರಾ? ಇಲ್ಲ ಕಾವ್ಯ ವಾಚನ ಮಾಡಿದ್ರಾ?’
‘ಹಂಗೆಲ್ಲಾ ನನ್ ಅಂಡರ್ ಎಸ್ಟಿಮೇಟ್ ಮಾಡ್‍ಬ್ಯಾಡ್ರೀ! ಈಗ ನಮ್ ರಾಜಕೀಯ ಮಂದಿ ಎಲೆಕ್ಸನ್ನಾಗ್ ಸೋತು ಮಂತ್ರಿಯಾಗಿ ಬೈ ಎಲೆಕ್ಷನ್ನಲಿ ಗೆಲ್ಲಲ್ಲೇನು? ನಾವೂ ಹಂಗ ಆಧ್ಯಕ್ಷರಾಗಿ ಆ ಮೇಲ್ ಸಾಹಿತ್ಯ ರಚನೆ ಮಾಡುದ್ರಾತಪ್ಪಾ..
‘ಆದ್ರ ನಾನ್ ಈಗ್ಲೇ ಎರಡು ಡಜನ್ ಪುಸ್ತಕ ಬರ್ದೀನಿ, ಅಕಾಡೆಮಿ, ಪ್ರಾಧಿಕಾರದ್ ಪ್ರಕಟಣೆನಾಗ್ ನನ್ ಲೇಖನ ಬಂದಾವ.. ನನ್ ಅಧ್ಯಕ್ಷ ಮಾಡಕ್ ಇನ್ನೆಂಥ ಕ್ವಾಲಿಫಿಕೇಶನ್ ಬೇಕ್ರೀ?’
‘ಅದ್ನೆಲ್ಲಾ ತಗೊಂಡೋಗಿ ಗುಜರಿಗ್ ಒಗೀರ್ರೀ.. ಏವಾನಿಗ್ರೀ ಬೇಕು ನಿಮ್ ನಗೆಚಾಟಕಿ ಸಾಹಿತ್ಯ.. ನೀವು ಒಂದ್ ದೇವರ್ ಬೈದೀರೇನ್? ಯಾವ್ದಾರ ಗೀತೆನೋ, ರಾಮಾಯಣನೋ ಸುಡ್ತೀನಿ ಅಂತ ಹೇಳೀರೇನ್? ರಾಮ ಒಬ್ ಹೆಂಡ್ರ ಗಂಡ ಅಲ್ಲ ಅಂತ ಬಾಂಬ್ ಹಾಕಿರೇನ್ ? ಇಲ್ವಲ್ಲ.. ನಿಮ್ದು ಯಾವ್ ಸಾಹಿತ್ಯರೀ ಮಣ್ಣಂಗಟ್ಟಿ..’
‘ಆದ್ರ ನಾ ಬೀದಿ ಬೀದಿಲಿ ಬಾಳಿಕಾಯಿ ಗಾಡಿನಾಗ್ ಪುಸ್ತಕ ಹೊತ್ತು ಮಾರೀನಿ..ಮನೆ ಮನೆಲಿ ಸಾಹಿತ್ಯ ಗೋಷ್ಠಿ ಮಾಡೀನ್ರೀ’
‘ಅಂಗ್ ಮಾಡ್ಬುಟ್ರೆ ನೀವು ಗಳಗನಾಥ್ ಆದ್ರಿ ಅಂದ್ಕೊಡ್ರೇನು? ನೀವು ಬರೀ ಗುಳಿಗೆನಾಥ ಅದೀರಿ.. ಪುಸ್ತಕ ಬರೆಯೋದು, ಮಾರೋದು ಇಲ್ ಲೆಕ್ಕಕ್ ಬರೂದಿಲ್ರೀ ಜೋಷಿ, ಈ ಸಾರಿ ನಾವ್ ಇಂದ್ರಾಬಾಯಿ ಅವರ ಕೂಡ ಓಡಾಡುದ್ವಿ. ಅವರ್ನಾ ಗೆಲ್ಲಿಸ್ಬೇಕು ಅಂತ ಎಷ್ಟು ಸರ್ಕಸ್ ಮಾಡೀವಿ.. ನೀವು ಅವರ್ಗಾ ಪ್ರಚಾರ ಮಾಡಿದ್ರಾ? ಅವರ ಊರಿಗೆ ಬಂದಾಗ ಹಾರ ತುರಾಯಿ ಹಾಕುದ್ರಾ? ಹೋಗ್ಲಿ ನಾಕ್ ಹೊಗಳಿಕೆ ಮಾತ್ ಆಡುದ್ರಾ? ನೀವು ಮನೇನಾಗ್ ಕತಿ ಬರ್ಕೊತಾ ಕುಂತ್ ಬಿಟ್ರೆ ಎಂಗ್ರೀ?’
‘ನೀವೇನ್ರೀ ಹಿಂಗ್ ಹೇಳಕ್ ಹತ್ತೀರಿ? ಪ್ರಚಾರ ಮಾಡಕ್ ಇದೇನ್ ರಾಜಕೀಯ ಪಕ್ಷ ಕೆಟ್ ಹೋತೇನ್ರಿ? ನಮ್ಗೆ ನಮ್ದೇ ಕೆಲಸ ಇರ್ತದ? ಮನೆ, ಮಠ, ಕೆಲಸ ಬಿಟ್ ಬಂದ್ ಪ್ರಚಾರ ಮಾಡಕ್ಕಾಗ್ತದಾ? ನಾವ್ ಬಾಯಮ್ನೋರ್ಗೆ ಓಟ್ ಹಾಕಿದೀವಲ್ಲ..’
‘ನಿಮ್ಮಂಗೆ ಸಾವಿರಾರ್ ಜನ ಓಟ್ ಹಾಕವ್ರೆ.. ಅವರ್ನೆಲ್ಲಾ ಅಧ್ಯಕ್ಷರನ್ ಮಾಡಕ್ಕಾಗ್ತದೇನ್ರೀ ? ನಿಮ್ಗ 50ವರ್ಷ ಆಗದ.. ಓಡಾಡೋದ್ ತ್ರಾಸಾ ಆಯ್ತದ’
‘ಇಂದ್ರಾಬಾಯಿಗೆ ಇನ್ನೂ ಹೆಚ್ಗೆ ಆಗದಲ್ರಪ್ಪ..ಅವರು ಜಿಲ್ಲೆಗೇ ಅಧ್ಯಕ್ಷರಾಗಿರಲ್ವಾ?’
‘ನೋಡ್ರಪ್ಪ, ಸುಮ್ನೆ ರೇಜಿಗೆ ಮಾಡ್‍ಬ್ಯಾಡಿ.. ನೀವು ರಾಜ ಆಗೋಕ್ ಆಗವಲ್ದು.. ನೀವ್ ಏನಿದ್ರೂ ರಾಜ ಪುರೊಹಿತ ಆಗ್ಲಿಕ್ಕೇ ಲಾಯಕ್ಕು..ಕಿಂಗ್ ಮೇಕರ್ ಆಗ್‍ಬೇಕ್ರಲೇ ನೀವು..’
‘ಅದಕ್ಕೂ ಪುರೋಹಿತಶಾಹಿ ಅಂತ ಇಂಕ್ ಎರುಚ್ತೀರಲ್ಲಪ್ಪ..’
‘ಸಾಹಿತ್ಯ ಸೇವೆ ಅಂದ್ರೆ ಎಲ್ಲಾ ಸಹಿಸಿಲಿಕ್ಕೇ ಬೇಕು.. ಎರಚುಸ್ಕೊಳ್ಳೂ ಬೇಕು, ಪರ್ಚುಸ್ಕೊಳ್ಳೂ ಬೇಕು.. ನಿಮ್ಗೆ ಯಾವ ಜಾತಿ ಬಲ ಇದೆ ? ವಿದ್ಯಾರಣ್ಯ, ಚಾಣುಕ್ಯ ರಾಜ್ಯ ಆಳ್ತೀನಿ ಅಂತ ಹೊಂಟೋರಲ್ಲ.. ಅವರು ಏನಿದ್ರೂ ಇನ್ನೊಬ್ರಿಗೆ ಪಟ್ಟ ಕಟ್ಟಿ ಜೈ ಅಂದೋರು.. ಹೇಗಿದ್ರೂ ಈ ಕಸ ಗಿಸ ಗುಡ್ಸೊದ್ ಇದ್ದೇ ಇರ್ತದ್ ಬಿಡ್ರೀ.. ನೀವು ಸ್ಮರಣಸಂಚಿಕೆ ಅಧ್ಯಕ್ಷರಾಗಕ್ಕಿದೆ.. ಅದರ ಕರಡು ನೀವೇ ತಿದ್ದೂವ್ರಂತ.. ಮತ್ತ ಈ ಗೆಸ್ಟ್ ಬಂದಾಗ ಊಟ ತಿಂಡಿ ವಗೈರೆ ವಗೈರೆ ವ್ಯವಸ್ಥಾ ಎಲ್ಲ ನಿಮ್ದೇ ಇರ್ತದ.. ನಮ್ಗೆ ಭಾಷ್ಣ ಬರ್ಕೊಡೋದು, ಜಾಹಿರಾತ್‍ಗೆ ದುಡ್ ಎತ್ತೋದು.. ವಂದನಾರ್ಪಣೆ ಮಾಡಾದು, ಮೈಕ್‍ಸೆಟ್, ಶಾಮಿಯಾನ ವ್ಯವಸ್ಥೆ ಮಾಡಾದು ಎಲ್ಲಾ ಇರ್ತದ.. ಅ ಜವಾಬ್ಧಾರಿ ಎಲ್ಲಾ ನಿಮ್ಗೆ ವಹಿಸ್ತೀವ್ರೀ.. ಮತ್ತ ಈ ಸಾರಿ ರಾಜಕೀಯ ಪಕ್ಷದಲ್ಲಿದ್ದಂಗ ಸಮಿತಿಲಿ ಎಲ್ಲಾ ಜಾತಿ/ಕೋಮ್‍ನೋರಿಗೆ ಪ್ರಾತಿನಿಧ್ಯ ಅದೆ.. ಅಲ್ಪಸಂಖ್ಯಾತರು ಅಂತ ನಿಮ್ಗೂ ಸಮಿತಿನಾಗ ಒಂದ್ ಜಾಗ ಕೊಡೋಣೇಳಿ..’
‘ಹೋಗಲಿ, ನಮ್ದು ಬಿಡ್ರೀ. ನಮ್ ಬೀಮೇಶ್ ಅವರ್ಗಾದ್ರೂ ಅವಕಾಶ ಕೊಡ್ಬೇಕಿತ್ತೋ ಬೇಡ’
‘ಅವರೇನ್ ಒಂದ್ ಊರ್ನಾಗೆ, ಕೇರಿನಾಗ್ ಇರೋ ಮಂದಿ ಏನು? ಕೇರಿ ಹಾವು, ಚೇಳು ಹಿಡ್ಕೊಂಡ್ ಹೊಂಟ್ರೆ ಸಾಹಿತ್ಯಸೇವೆ ಮಾಡಕ್ಕಾಯ್ತದಾ? ಬಗಲಾಗ ಬುಕ್ ಇಟ್ಕೊಂಡ್ರೇ ಮಂದಿ ಸತ್ತೇನೋ ಕೆಟ್ಟೆನೋ ಅಂತ ಓಡೋಗಾಕ್ ಹತ್ಯಾರ, ಇನ್ ಹಾವ್ ಇಟ್ಕೊಂಡ್ರೆ ಸುಮ್ನಿದ್ದಾರೇನ್ರಪ್ಪ’
‘ಏನ್ರೀ ಅವರನ್ ಹಿಂಗ್ ಅವಮಾನ ಮಾಡಕ್ ಹತ್ತೀರಿ ? ಪುಣ್ಯಾತ್ಮ ಎಷ್ಟೋ ಮಂದಿ ಜೀವ ಉಳಸ್ಯಾರ.. ನಾಟಕ, ಕುಣಿತ ಅಂತ ಊರೂರೂ ಸುತ್ಯಾರ.. ಸಾಹಿತ್ಯಲೋಕದ ಮಂದಿ ಒಡನಾಟ ಇಟ್ಕಂಡಾರ.. ಅವರಿಗೂ ಒಂದು ಚಾನ್ಸ್ ಕೊಡ್ಬೇಕಿತ್ತಲ್ವಾ?’
‘ನೋಡ್ರಪ್ಪ, ಸಾಹಿತ್ಯ ಸಂತಿ ಅಂದ್ರೆ ಅದು ಟೂರಿಂಗ್ ಟಾಕೀಸ್ ಅಲ್ರೀ. ಕನ್ನಡ ಜನ, ಕನ್ನಡ ಸಾಹಿತಿಗಳು ಎಂಗಾರಾ ಆಳಾಗೋಗ್ಲಿ, ಸ್ಮಾರಕದ್ ತರ ಕನ್ನಡ ಭವನ ಆಗ್ಬೇಕು.. ನಿಂತ್ ಕಡೆ ಬೇರ್ ಬಿಟ್ಕೊಂಡ್ ಕೆಲಸ ಮಾಡ್ಬೇಕ್ರೀ.. ನಿಮ್ ಮನಿನೋ, ಸೈಟೋ ಸಾಹಿತ್ಯ ಸಭೆಗೆ ಬರ್ಕೊಡ್ರಿ.. ಮುಂದಿನ ಸಾರಿ ನಿಮ್ಮನ್ನೇ ಅಧ್ಯಕ್ಷನ್ ಮಾಡೊಣಂತೆ..’
ಜೋಷಿ ಹಾವು ತುಳಿದವರಂತೆ ಬೆವರುತ್ತಾ ತಟ್ಟನೆ ಫೋನ್ ಕಟ್ ಮಾಡಿದರು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments