ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 1, 2016

ವೀಡಿಯೋ ಗೇಮ್ ಸಾಧಕ – ಬಾಧಕಗಳ ಒಂದು ವಿಶ್ಲೇಷಣೆ

‍ನಿಲುಮೆ ಮೂಲಕ

– ಶೈಲೇಶ್ ಕುಲ್ಕರ್ಣಿ

camp-pokemon-169-enವೀಡಿಯೊಗೇಮ್ ಗಳು ನಿಜಕ್ಕೂ ವ್ಯಕ್ತಿಯ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲಷ್ಟು ಪ್ರಭಾವಶಾಲಿಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡೇ ಪರ-ವಿರೋಧದ ಚರ್ಚೆ ಕಳೆದ ೩೦ವರ್ಷಗಳಿಂದಲೂ ವಿಶ್ವದಾದ್ಯಂತ ನಡೆದಿದೆ. ಸಿನೆಮಾ, ಕುಣಿತಗಳಿಂದ ತೊಡಗಿ ದೂರದರ್ಶನ, ಅಂತರ್ಜಾಲ, ಕಾದಂಬರಿಗಳಾದಿಯಾಗಿ ಬಹುಶಃ ಮನುಷ್ಯನ ಗಮನವನ್ನೆಲ್ಲಾ ತನ್ನಲ್ಲಿ ಹಿಡಿದಿಡಬಲ್ಲ ಸಾಧ್ಯತೆಯುಳ್ಳ ಎಲ್ಲಾ ಚಟುವಟಿಕೆಗಳೂ ಒಂದಲ್ಲ ಒಂದು ಸಾರಿ ಈ ರೀತಿಯ ಟೀಕೆಯನ್ನ ಎದುರಿಸಿಯೇ ಬಂದಿವೆ.

ಹೊಸದಾಗಿ ಬಂದಿರುವ ಪೋಕೆಮಾನ್ ಗೋ ಆಟದ ಗುಂಗುಹಿಡಿಸಿಕೊಂಡ ಕೆನಡಾದ ಯುವಕರು ತಮ್ಮ ದೇಶದ ಗಡಿದಾಟಿ ಪಕ್ಕದ ಅಮೇರಿಕಾ ಹೊಕ್ಕಿದ್ದು ವಿದೇಶಗಳಿಂದ ಬಂದ ಸುದ್ದಿಯಾದರೆ, ಇದೇ ಆಟದ ಪ್ರಭಾವಕ್ಕೆ ಸಿಕ್ಕ ಮುಂಬೈ ಹತ್ತಿರದ ಮುಳುಂದ್ ನಲ್ಲಿನ  ಹುಡುಗರು ತಮ್ಮ ಮೊಬೈಲ್ ಫೋನ್ ಗಳಲ್ಲಿನ ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಪೋಕೆಮಾನ್ ನ ಬೆನ್ನಟ್ಟಿ , ಉದ್ಯಾನ ಗಿಡಮರಗಳೆನ್ನದೇ, ಜನನಿಬಿಡ ಮುಖ್ಯಬೀದಿಗಳ ಲಕ್ಷವಿಲ್ಲದೆ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ರಸ್ತೆಗಿಳಿದರು. ಸುತ್ತ ಜಗತ್ತಿನ ಅರಿವಿಲ್ಲದವರಂತೆ ಹೊರಟ ತಮ್ಮ ಹುಡುಗರ ರಕ್ಷಣೆಗೆಂದೇ ಪಾಲಕರೂ ಅವರ ಹಿಂದುಹಿಂದೆಯೇ ಓಡಾಡುವಂತೆ ಆಗಿದ್ದು ನಮ್ಮದೇ ಊರುಗಳಿಂದ ತಿಳಿದ ಸುದ್ದಿ.

ಹೀಗೆ ವೀಡಿಯೊಗೇಮ್ ನ ಪಿತ್ಥ ನೆತ್ತಿಗೇರಿಸಿಕೊಂಡು ದಿನವೆಲ್ಲಾ ದೈಹಿಕ ಪರಿಶ್ರಮದ ಕೆಲಸವಿಲ್ಲದೇ ಬೊಜ್ಜುಬೆಳೆದು ಸಣ್ಣ ವಯಸ್ಸಿನಲ್ಲೇ ಗುಂಡಣ್ಣರಾದವರ, ಹೊಡಿಬಡಿ ವಿಷಯಾಧಾರಿತ ವೀಡಿಯೊ ಆಟಗಳಲ್ಲಿ ಬರುವ ವಿಪರೀತ ಹಿಂಸೆಯ ಅಂಶಗಳಿಂದಾಗಿ ಮಾನಸಿಕ ವ್ಯಗ್ರತೆಗೆ ಒಳಗಾದವರ, ಇಲ್ಲವೇ ಆಟದ ಭರದಲ್ಲಿ ದೇಹದ ಪರಿವೆಯಿಲ್ಲದೆ ಕೈಕಾಲು ತಲೆಯೆನ್ನದೇ ಗಾಯಮಾಡಿಕೊಂಡಿರುವವರ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಬರುತ್ತಲೇ ಇರುತ್ತದೆ. ವೀಡಿಯೊಗೇಮ್ ಗಳಿಗೆ ಸಂಬಂಧಪಟ್ಟ ಬಹುಪಾಲು ಸುದ್ದಿಗಳು ಅವುಗಳ ದುಷ್ಟ ಭಾವವನ್ನ ವರ್ಣಿಸಿಹೇಳುವ ಘಟನೆಗಳೇ ಆಗಿರುವದರಿಂದ ಸಹಜವಾಗಿಯೇ ಈ ಆಟಗಳಲ್ಲಿರುವ ಒಳ್ಳೆಯ ಅಂಶಗಳ ಕಡೆಗೆ ಗಮನಕೊಡುವ ಸುದ್ದಿಗಳಿಗಿಂತಲೂ ಹೆಚ್ಚಿನ ಪ್ರಚಾರಪಡೆಯುತ್ತವೆ.

ಹೌದು! ವೀಡಿಯೊ ಗೇಮ್ಗಳಲ್ಲೂ ಒಳ್ಳೆಯ ಅಂಶಗಳಿವೆ ಮತ್ತು ಈ ಅಂಶ ನಮ್ಮಲ್ಲನೇಕರ ಗಮನಕ್ಕೆ ಈ ಮೊದಲೇ ಬಂದಿರಲೂಬಹುದು. ವ್ಯಕ್ತಿಯ ಶಾರೀರಿಕ, ಮಾನಸಿಕ ಆರೋಗ್ಯಕ್ಕೆ ಲಾಭಗಳಿಸಿಕೊಡಬಲ್ಲ ಗುಣಗಳೂ ಈ ಆಟಗಳಲ್ಲಿದೇ ಅನ್ನುವದಕ್ಕೆ ಸಾಕಷ್ಟು ಪುರಾವೆ, ವೈಜ್ಞಾನಿಕ ಪ್ರಯೋಗಗಳ ಪ್ರಮಾಣ ಈಗ ಲಭ್ಯವಿದೆ. ಹೊಸ ಅಧ್ಯಯನಗಳ ಪ್ರಕಾರ ವೀಡಿಯೊಗೇಮ್ ಗಳನ್ನ ಚಿಕಿತ್ಸಾಕ್ಷೇತ್ರ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ದುಡಿಸಿಕೊಳ್ಳಬಹುದಾದ ಸಾಕಷ್ಟು ಸಾಧ್ಯತೆಗಳಿವೆ. ಈ ಅಧ್ಯಯನಗಳಲ್ಲಿ ಕಂಡುಕೊಂಡ ಅಂಶಗಳ ಪ್ರಕಾರ, ವೀಡಿಯೊಗೇಮ್ ಗಳ ಸೀಮಿತ ಬಳಕೆಯಿಂದ ಕೈ-ಕಣ್ಣುಗಳ ಸಮನ್ವಯತೆಯನ್ನು ಸುಧಾರಿಸುವದು ಸುಲಭವಾಗುತ್ತದೆ. ಖಭೌತ ಶಾಸ್ತ್ರ, ನಾಭಕೀಯ ಅಧ್ಯಯನ ಮುಂತಾದ ವಿಷಯಗಳಲ್ಲಿ ಬೇಕಾದ ಕಲ್ಪನಾವೃತ್ತಿಯನ್ನು ಉತ್ತೇಜಿಸುವಲ್ಲಿ ವೀಡಿಯೊ ಆಟಗಳು ಅತ್ಯಂತ ಪರಿಣಾಮಕಾರಿ. ವಸ್ತುವೊಂದರ ಎರಡು ಮೂರು ಅಥವಾ ಬಹುಆಯಾಮಿ ಚಿತ್ರಣಗಳು, ಅವುಗಳ ಸ್ಥಿರತೆ, ವಿವಿಧ ದಿಕ್ಕುಗಳಲ್ಲಿ ಚಲನೆ ಮುಂತಾದವುಗಳ ಕಲ್ಪನೆಯನ್ನು ತತ್ಸಂಬಂಧಿ ವೀಡಿಯೊಗೇಮ್ ಗಳ ಮುಖಾಂತರ ತುಂಬಾ ಸರಳವಾಗಿ ಮೂಡಿಸಲು ಸಾಧ್ಯ ಎಂಬುದು ಅಧ್ಯಯನಗಳು ಧೃಡಪಡಿಸಿರುವ ಸಂಗತಿ.

ಅಮೇರಿಕಾದ Proceedings of the National Academy of Sciences ಸಂಸ್ಥೆಯ ವಿಕ್ರಂ ಬೆಜ್ಜಂಕಿ ಮತ್ತವರ ತಂಡದ ಅಧ್ಯಯನದ ಪ್ರಕಾರ ಸಾಹಸ ಪ್ರಧಾನ ವೀಡಿಯೊಆಟಗಳನ್ನು ಆಡುವವರಲ್ಲಿ ಅಂತಹ ಆಟಗಳನ್ನು ಆಡದೇ ಇರುವವರಿಗಿಂತ ವಿಷಯಗಳನ್ನು ತ್ವರಿತವಾಗಿ ಗ್ರಹಿಸುವ ಸಾಮರ್ಥ್ಯ ಹೆಚ್ಚಿರುತ್ತದೆ. ಇದರರ್ಥ, ಸಂದರ್ಭವೊಂದನ್ನು ಗ್ರಹಿಸುವ ಮತ್ತು ಅದಕ್ಕನುಗುಣವಾಗಿ ಪ್ರತಿಕ್ರಿಯೆ ತೋರುವ ಕೌಶಲ್ಯ ಇದೆರಡೂ ಸಾಹಸಪ್ರಧಾನ ವೀಡಿಯೊ ಆಟಗಳನ್ನು ಆಡುವದರಿಂದ ನಿಶ್ಚಿತವಾಗಿಯೂ ಹೆಚ್ಚಿಸಿಕೊಳ್ಳಬಹುದು. ಈ ಅಧ್ಯಯನದ ಪ್ರಕಾರ ಸಾಹಸಪ್ರಧಾನ ವೀಡಿಯೊ ಆಟವೊಂದರಲ್ಲಿ ಸೀಮಿತ ಅವಧಿಗೆ ತರಬೇತಿ ಹೊಂದಿರುವ ವ್ಯಕ್ತಿಯಲ್ಲಿ ಕಂಡುಬರುವ ಅವಧಾನ ಮತ್ತು ಸಂವೇದನೆಗಳ ತೀವ್ರತೆಯು ಸಾಮಾನ್ಯರಿಗಿಂತ ಅಧಿಕವಾಗಿರುತ್ತದೆ. ೧೦ ರಿಂದ ೧೪ ಜನರ ತರಬೇತಿ ಹೊಂದಿದ ವೀಡಿಯೊ ಆಟಗಾರರ ತಂಡಗಳ ಮೇಲೆ ನಡೆಸಿದ ಸರಣಿ ಅಧ್ಯಯನಗಳಲ್ಲಿ ಕಂಡುಕೊಂಡ ಅಂಶದ ಪ್ರಕಾರ, ಊಹಾತ್ಮಕ ಸಮಸ್ಯೆಗಳನ್ನು ಬಿಡಿಸುವದು, ಮಾದರಿ ಸಮಸ್ಯೆಯೊಂದರ ಆಧಾರದ ಮೇಲೆ ಮುಂದಿನ ಸಮಸ್ಯೆ ಮತ್ತದರ ಸಮಾಧಾನವನ್ನು ಮೊದಲೇ ಕಂಡುಹಿಡಿಯುವ ತಂತ್ರಗಳು ಈ ಆಟಗಾರರಿಗೆ ತರಬೇತಿ ಹೊಂದದವರಿಗಿಂತ ಚೆನ್ನಾಗಿ ಸಿದ್ಧಿಸಿರುತ್ತದೆ.

ಕಲಿಕೆಯ ಸಂದರ್ಭದಲ್ಲಂತೂ ಇಂತಹ ಆಟಗಳಿಂದಾಗುವ ಸೌಲಭ್ಯ ಇನ್ನೂ ಹೆಚ್ಚು. ಇಂತಹ ಆಟಗಳ ಮುಖಾಂತರ ಕಲಿಕೆಯನ್ನು ಮೋಜಿನ, ಹಿತವಾದ ಅನುಭವವಾಗಿ ಮಾರ್ಪಡಿಸಬಹುದು. ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿಗಳ ಮಸ್ತಿಷ್ಕದ ನರಮಂಡಲಕ್ಕೆ ತಲುಪುವ ಈ ಆಟಗಳು ಅವರ ಗಮನವನ್ನ ಹೆಚ್ಚು ಹೊತ್ತು ತನ್ನತ್ತಲೇ ಸೆಳೆಯುವ ಮೂಲಕ, ವಿಷಯವೊಂದರಲ್ಲಿ ಅವರ ತಲ್ಲೀನತೆಯನ್ನು ಹೆಚ್ಚಿಸುವಲ್ಲಿ ಸಾಂಪ್ರದಾಯಿಕ ಕಲಿಕೆಯ ಪದ್ಧತಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ತರಗತಿಯ ಪಾಠಪ್ರವಚನಗಳಲ್ಲಿ ವಿದ್ಯಾರ್ಥಿಗಳ ತೊಡಗುವಿಕೆಯನ್ನು ಹುರಿದುಂಬಿಸುವಲ್ಲಿ ಸಹಾಯಕಗಳಾಗಿ ವೀಡಿಯೊ ಗೇಮ್ಗಳು ಈಗಾಗಲೇ ವಿಶ್ವದಾದ್ಯಂತ ಬಳಕೆಯಲ್ಲಿವೆ.

ಲಿಂಗ ತಾರತಮ್ಯವಿಲ್ಲದೇ, ಆಯಾ ವಯೋಮಾನದವರ ಅಭಿರುಚಿಗೆ ತಕ್ಕಂತೆ ಇವುಗಳನ್ನು ಬಳಕೆಯಲ್ಲಿ ತರುವದು ಸುಲಭವಾಗಿ ಸಾಧ್ಯವಿರುವದರಿಂದ ಸಾಮೂಹಿಕ ಕಲಿಕಾಪದ್ಧತಿಯಲ್ಲಿ ಇಂತಹ ಆಟಗಳ ಮಹತ್ವ ಇನ್ನೂ ಹೆಚ್ಚಾಗುತ್ತಲೇ ಇದೆ. ವಿಶೇಷ ಅವಧಾನವನ್ನು ಅಪೇಕ್ಷಿಸುವ ಚಟುವಟಿಕೆಗಳಾದ ವಿಮಾನ ಉಡ್ಡಯನ, ಅಂತರಿಕ್ಷ ನೌಕಾಚಾಲನೆಯಂತಹ ಪ್ರಸಂಗಗಳನ್ನು ಅನುಕರಿಸಲು ಸುಲಭವಾಗಿಸುವ ವೀಡಿಯೊ ಆಟಗಳು ಮಿಲಿಟರಿ ಪ್ರಶಿಕ್ಷಣ ವರ್ಗದಲ್ಲೇ ಅಲ್ಲದೆ ಸಾಮನ್ಯರಲ್ಲಿಯೂ ಈಗಾಗಲೇ ಅಪಾರ ಜನಪ್ರಿಯತೆಗಳಿಸಿವೆ. ಜನನಿಬಿಡ ಪ್ರದೇಶದಲ್ಲಿ ತಪ್ಪಿಲ್ಲದಂತೆ ವಾಹನಚಾಲನೆ ಮಾಡುವ ಅಥವಾ ಇಕ್ಕಟ್ಟಾದ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡುವ ಆಟಗಳು ಈಗ ಬರೀ ಮನೋರಂಜನೆಗೇ ಸೀಮಿತವಾಗಿರದೇ ನಮ್ಮ ಹತ್ತಿರದ RTO ಆಫಿಸುಗಳಲ್ಲಿಯೂ ಚಾಲಕರ ತರಬೇತಿಗೆ, ಪರೀಕ್ಷೆಗೆ ಬಳಕೆಯಾಗುವ ದಿನಗಳು ಶೀಘ್ರದಲ್ಲೇ ಬರಲಿವೆ.

ಅನೇಕ ಸಂಶೋಧನಾ ವರದಿಗಳ ಪ್ರಕಾರ ಫಿಜಿಯೋಥೆರಪಿಯಂತಹ ಚಿಕಿತ್ಸಾಪದ್ಧತಿಗಳಲ್ಲಿ ವೀಡಿಯೊಗೇಮ್ ಗಳನ್ನು ಉಪಯೋಗಿಸಿಕೊಂಡು ರೋಗಿಯ ದೈಹಿಕಚಲನೆ, ಅಂಗಾಂಗಗಳ ಸಂವೇದನೆ, ದೇಹದ ಭಾಗಗಳ ನಡುವೆ ಸಮನ್ವಯ ಹೆಚ್ಚಿಸಲು ಸಾಧ್ಯವಾಗಿದೆ. ಕಿಮೋಥೆರಪಿಗೆ ಒಳಗಾದ ಬಾಲಕರಲ್ಲಿ ನಡೆಸಿದ ಪ್ರಯೋಗಗಳ ಅಭಿಪ್ರಾಯದಲ್ಲಿ, ವೀಡಿಯೊ ಆಟವಾಡಿದ ನಂತರ ಚಿಕೆತ್ಸೆಗೆ ಒಳಗಾದ ಹುಡುಗರು ಆಟವಾಡದೇ ಚಿಕೆತ್ಸೆಗೆ ಒಳಗಾದವರಿಗಿಂತ ಕಡಿಮೆ ಪ್ರಮಾಣದ ನೋವುನಿವಾರಕ ಔಷಧಿಗಳನ್ನು ಬಳಸುತ್ತಾರೆ ಮತ್ತು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಾರೆ.

ವೀಡಿಯೊ ಗೇಮ್ಗಳ ಪ್ರಭಾವದ ಅಧ್ಯಯನ ವರದಿಗಳಲ್ಲಿ ಸಾಮಾನ್ಯವಾಗಿ ತಿಳಿಯುವ ಅಂಶವೆಂದರೆ, ಇಂತಹ ಆಟಗಳಿಂದಾಗುವ ವ್ಯತಿರಿಕ್ತ ಪರಿಣಾಮಗಳು ಅವುಗಳಲ್ಲಿ ಅತಿಯಾದ ಮೋಹಕ್ಕೊಳಗಾಗಿ ಅದರಲ್ಲೇ ಕಳೆದುಹೋದವರಲ್ಲೇ  ಹೆಚ್ಚಾಗಿ ಕಂಡುಬರುತ್ತವೆ. ಸೀಮಿತ ಅವಧಿಗೆ ತಮ್ಮನ್ನು ತೊಡಗಿಸಿಕೊಂಡವರಲ್ಲಿ ಈ ವೀಡಿಯೊ ಗೇಮ್ ಗಳ ಋಣಾತ್ಮಕ ಪ್ರಭಾವ ಕಾಣಸಿಗುವದಿಲ್ಲ. ಹೀಗಾಗಿ ‘ಅತಿ ಸರ್ವತ್ರ ವರ್ಜಯೇತ್’ ಎಂಬ ಸನಾತನ ಹಿತೋಕ್ತಿ ವೀಡಿಯೊ ಗೇಮ್ಗಳ ಸಂದರ್ಭದಲ್ಲೂ ಸರಿಯಾಗಿ ಹೊಂದುತ್ತದೆ. ವೀಡಿಯೊಗೇಮ್ ಆಟಗಾರನ ಆಸಕ್ತಿ ಮತ್ತು ಕುತೂಹಲಗಳನ್ನು ಕೆರಳಿಸಿ ದೀರ್ಘಾವಧಿಗೆ ತನ್ನಲ್ಲೇ ಹುದುಗಿರುವಂತೆ ಮಾಡಲು ಬಕ್ಷೀಸು ಕೊಡುವ ತಂತ್ರವನ್ನು ಬಳಸುತ್ತವೆ. ಆಟದ ಚಿಕ್ಕಚಿಕ್ಕ ಹಂತಗಳು ಅಥವಾ ಘಟ್ಟಗಳನ್ನು ಯಶಸ್ವಿಯಾಗಿ ಪಾರುಮಾಡಿದ ಆಟಗಾರನಿಗೆ ಬಹುಮಾನಕೊಟ್ಟು ಫುಸಲಾಯಿಸಿ ಮುಂದಿನ ಹಂತಕ್ಕೆ ಅಣಿಯಾಗಿಸುವ , ಮತ್ತೂ ಗೆಲ್ಲು ಇನ್ನೂ ಗೆಲ್ಲು ಎಂದು ಲೋಭವೊಡ್ಡಿ ಆಡಿಸಲೆಸಳುವ ತಂತ್ರ ಇವುಗಳದ್ದು. ಆಟದ ಹಂತವೊಂದರಲ್ಲಿ ಸೋತರೂ ಮುಂದಿನ ಬಾರಿ ಅದೇ ಹಂತಕ್ಕೆ ಬಂದಾಗ ಆಟಗಾರನಿಗೆ ಸಿಗುವ ಬಹುಮಾನದ ಆಸೆ ಮತ್ತು ಹಂತವನ್ನು ಪಾರುಮಾಡಿದ ರೋಮಾಂಚನ ಇವುಗಳ ಪುನರಾವರ್ತನೆಯಾದಂತೆ ಆಟದಲ್ಲಿ ಭಾಗಿಯಾಗುವದೂ ಮುಂದುವರೆಯುತ್ತಲೇ ಇರುತ್ತದೆ. ಕಣ್ಮನ ಸೂರೆಗೊಳ್ಳುವ ಬಣ್ಣಗಳು, ದೃಶ್ಯ ಸಂಯೋಜನೆ, ಆಟಗಾರನ ತರಬೇತಿಗೆ ತಕ್ಕಂತೆ ಹೊಂದಿಸಬಹುದಾದ ವೇಗ, ಕ್ಲಿಷ್ಟತೆ ಮತ್ತು ಅದರೊಟ್ಟಿಗೇ ಹರಿದುಬರುವ ಸಂಗೀತ ಇದೆಲ್ಲವೂ ಆಟದಲ್ಲೇ ತೊಡಗಿರುವಂತೆ ಮಾಡುವ ಕೆಲ ಇತರೇ ಅಂಶಗಳು. ಅಷ್ಟಕ್ಕೂ ನಮ್ಮಲ್ಲಿ ಕೆಲವರು ಅದರಲ್ಲೂ ವಿಶೇಷವಾಗಿ ಯುವಕರೇ ಹೆಚ್ಚಾಗಿ ವೀಡಿಯೊ ಗೇಮ್ಗಳನ್ನು ಗೀಳಿನಂತೆ ಅಂಟಿಸಿಕೊಳ್ಳುವದ್ಯಾಕೇ ಎಂಬ ಪ್ರಶ್ನೆಗೆ ಉತ್ತರ ನಮ್ಮ ಮಿದುಳಿನ ಕಾರ್ಯಪ್ರಣಾಳಿಯಲ್ಲೇ ಇದೆ..

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments