ಇದು ಹೆಣ್ಣಿನ ಕಥೆ
– ಗೀತಾ ಹೆಗ್ಡೆ
ಅವಳಿಗೆ ಕೇವಲ ಹದಿಮೂರು ವರ್ಷ. ಹುಟ್ಟೂರು ಪುತ್ತೂರು, ಉಡುಪಿ ತಾಲ್ಲೂಕು. ಅವಳಿಗೆ ಮದುವೆ ಗಂಡು ಗೊತ್ತಾಯಿತು. ಅವನಿಗೆ ವಯಸ್ಸು ಮೂವತ್ತೆರಡು. ಅವನ ಊರು ಉತ್ತರ ಕನ್ನಡದ ಒಂದು ಚಿಕ್ಕ ಹಳ್ಳಿ. ಆಗ ಮದುವೆಗೆ ಹೆಣ್ಣಿನ ಬರ. ತಿರಾ ಕೊಟ್ಟು(ವಧು ದಕ್ಷಿಣೆ ) ಹೆಣ್ಣನ್ನು ಮದುವೆ ಆಗುತ್ತಿದ್ದರಂತೆ. ಇನ್ನೂ ದೊಡ್ಡವಳಾಗಿಲ್ಲ; ಆಗಲೇ ಮದುವೆ ಮಾಡಿದರು. ಮೈ ತುಂಬಾ ಒಡವೆ ಗೆಜ್ಜೆಟಿಕ್ಕಿ, ತೋಳಬಂಧಿ, ಸೊಂಟಕ್ಕೆ ಬೆಳ್ಳಿ ಡಾಬು, ಕಿವಿ ಓಲೆ ಬುಗುಡಿ, ಕೈ ತುಂಬಾ ಬಳೆಗಳು ಇನ್ನೂ ಮುಂತಾದ ಆಭರಣ ಸುಂದರಿ. ದಕ್ಷಿಣದಿಂದ ಉತ್ತರಕ್ಕೆ ಅವಳ ಪಯಣ. ಗೊತ್ತಿಲ್ಲದ ಊರು. ಶಾಸ್ತ್ರ ಸಂಪ್ರದಾಯದ ಮನೆ. ಒಟ್ಟು ಕುಟುಂಬ. ಗಂಡನ ಮನೆ ಸೇರಿದಳು ವರ್ಷ ಹದಿನಾಲ್ಕಕ್ಕೆ ದೊಡ್ಡವಳಾಗಿ. ಅವಳ ಭಾಷೆ ತುಳು. ಶಿವಳ್ಳಿ ಬ್ರಾಹ್ಮಣ ಕುಟುಂಬದವಳು. ನಿಧಾನವಾಗಿ ಕನ್ನಡ ಭಾಷೆ ಕಲಿತಳು. ಹದಿನಾರರ ವಯಸ್ಸಿನಲ್ಲಿ ಗಂಡು ಮಗುವಿನ ಜನನ. ಮಗಳು ಬಾಳಂತನ ಮುಗಿಸಿಕೊಂಡು ಗಂಡನ ಮನೆ ಸೇರಿದಳು.
ಗಂಡನಿಗೆ ಆರೋಗ್ಯದಲ್ಲಿ ತೊಂದರೆ ಶುರುವಾಯಿತು. ಆಗ ನಾಟಿ ವೈದ್ಯ ಪದ್ದತಿ. ಆಗಿದ್ದು ರಕ್ತ ಹೊಟ್ಬ್ಯಾನೆ. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇಹ ಲೋಕ ತ್ಯಜಿಸಿದರು. ಮಗನಿಗಿನ್ನೂ ಆರು ತಿಂಗಳು. ಸುದ್ದಿ ತಿಳಿದು ಅವಳಪ್ಪ ಓಡಿ ಬಂದರು. ಸಂಪ್ರದಾಯದ ಶರತ್ತಿಗೆ ಬಲಿಯಾದಳು ಅವಳು. ಅವಳಪ್ಪ ತಡೆದರೂ ತಲೆ ಬೋಳಿಸಿ, ಕೈ ಬಳೆ ತೆಗೆದು, ಕೆಂಪು ಸೀರೆ ಉಡಿಸಿ ಯೌವನ ವಿಕಾರ ಮಾಡಲಾಯಿತು. “ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ” ಹೇಳಿ ಬಾಯಿ ಮುಚ್ಚಿಸಿದರು. ಅಪ್ಪ ಸ್ವಲ್ಪ ತಿಂಗಳು ಇದ್ದು ಊರಿಗೆ ಹೋದರು.
ಶುರುವಾಯಿತು ಅವಳ ಜೀತದ ಬದುಕು. ಗಂಡನ ದಾಯವಾದಿ ಅಣ್ಣನ ಯಜಮಾನಿಕೆ. ಆಗಿನ ಕಾಲದಲ್ಲಿ ವಿಧವೆ ಹೆಣ್ಣು ಎಲ್ಲ ಕಾರ್ಯಕ್ಕೂ ನಿಷಿದ್ದ. ಹೊರಗಡೆ ಕೆಲಸ ಮಾಡಿಕೊಂಡಿರಬೇಕು. ಕೊಟ್ಟಿಗೆ ಕೆಲಸ, ತೋಟದ ಕೆಲಸ, ಪಾತ್ರೆ ತೊಳೆಯೋದು, ಸಗಣಿ ಹಾಕಿ ಮನೆ ಸಾರಿಸೋದು, ಹಸು ಎಮ್ಮೆ ಮೇಯಿಸೋದು ಇತ್ಯಾದಿ. ಪಂಕ್ತಿಯಲ್ಲಿ ಯಾರ ಜೊತೆಗೂ ಊಟಕ್ಕೆ ಕುಳಿತು ಕೊಳ್ಳುವ ಹಾಗಿಲ್ಲ. ಯಾವ ಮಂಗಲ ಕಾರ್ಯಕ್ಕೆ ಹೋಗುವ ಹಾಗಿಲ್ಲ. ಆದಷ್ಟು ಮನೆ ಹಿತ್ತಲ ಕಡೆ ವಾಸವಾಗಿರಬೇಕು. ಎಲ್ಲಾದರು ಮನೆ ಮಂದಿ ಹೊರಟರೆ ಅಥವಾ ದಾರಿಯಲ್ಲಿ ವಿಧವೆ ಎದುರಾದರೆ ಅಪಶಕುನ ಅಂತ ಬಾವಿಸುತ್ತಿದ್ದ ಕಾಲವದು.
ಮಗನು ಶಾಲೆಗೆ ಹೋಗುವ ವಯಸ್ಸು. ಹತ್ತಿರದಲ್ಲಿರೊ ಶಾಲೆ ನಾಲ್ಕನೇ ಕ್ಲಾಸಿಗೆ ಮುಗಿಯಿತು ಅವನ ವಿದ್ಯಾಭ್ಯಾಸ. ಕಾರಣ ಮುಂದಿನ ಈಯತ್ತೆ ಇಲ್ಲ, ಹಳ್ಳಿ ಶಾಲೆ. ಮನೆ ಕೆಲಸ ತೋಟದ ಕೆಲಸ ಕಲಿ ಅನ್ನುವ ಶರತ್ತು ದೊಡ್ಡಪ್ಪನದು. ಹದಿನೆಂಟರ ಹುಡುಗಿಯೊಂದಿಗೆ ಮಗ ಇಪ್ಪತ್ತೆರಡಕ್ಕೆ ಕಾಲಿಟ್ಟಾಗ ಮದುವೆ ಮಾಡಿದಳು ಆ ಸಾಧ್ವಿ. ಸೊಸೆಯ ಕಡೆ ಒಡಹುಟ್ಟಿದವರು ಮುಂದೆ ನಿಂತು ಪಿತ್ರಾಜಿ೯ತ ಆಸ್ತಿಯಲ್ಲಿ ಭಾಗ ಮಾಡಿಸಿ ಹಂಗಿನ ಮನೆಯಿಂದ ಬಿಡುಗಡೆ ಗೊಳಿಸಿದರು. ಸುಮಾರು ಅವಳ ಮೂವತ್ತೆಂಟರ ವಯಸ್ಸಿಗೆ ಸೊಸೆ ಮಗನ ಜೊತೆ ಸುಃಖದ ಸಂಸಾರ ಕಂಡಳು.
ಮನೆಯ ಜವಾಬ್ದಾರಿ ಹೊತ್ತು ಪ್ರತಿಯೊಂದನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಜಾಣೆ ಅವಳಾಗಿದ್ದಳು. ಸೊಸೆಗೆ ಅಡುಗೆ ಮನೆ ಜವಾಬ್ದಾರಿ ಮಕ್ಕಳನ್ನು ನೋಡಿಕೊಳ್ಳುವುದಷ್ಟೆ. ಹಸು ಕಟ್ಟಿ ಹಾಲು ವ್ಯಾಪಾರ, ಅಡಿಕೆ ತೋಟದ ವ್ಯವಸಾಯ ಪದ್ದತಿ ನಡೆಸಿಕೊಂಡು ಹೋಗುವ ಜಾಣ್ಮೆ ಯಾರಾದರೂ ಮೆಚ್ಚಬೇಕು. ಮಗನನ್ನು ಮುಂದಿಟ್ಟುಕೊಂಡು ತನ್ನೆಲ್ಲ ಒಡವೆ ದಾರೆ ಎರೆದು ಸುಂದರವಾದ ಮನೆ ಕಟ್ಟಿಸಿದಳು. ಮೊಮ್ಮಕ್ಕಳಿಗೆ ಬದುಕು ನಡೆಸುವ ಪಾಠ ಹೇಳಿಕೊಟ್ಟಳು. ಮಗನನ್ನು ವ್ಯವಹಾರದಲ್ಲಿ ಪಳಗಿಸಿದಳು. ಊರಲ್ಲಿ ದಿಟ್ಟ ಹೆಣ್ಣಾಗಿ ಮೆರೆದಳು. ವಿದ್ಯಾಭ್ಯಾಸ ಕಲಿತವಳಲ್ಲ. ಆದರೂ ಎಲ್ಲ ಗೋಡೆಯ ಮೇಲೆ ಗೀಟಾಕಿ, ಹುಂಡು(point)ಹಾಕಿ ಎಣಿಸುವವಳು. ಉಲ್ಟಾ ಸೀದಾ ಮಗ್ಗಿ ಸರಾಗವಾಗಿ ಹೇಳುವಷ್ಟು ಬುದ್ಧಿವಂತೆ. ಯಕ್ಷಗಾನ ಪ್ರಿಯೆ. ಊರಿಂದೂರಿಗೆ ಯಕ್ಷಗಾನ ನೋಡಲು ಚಪ್ಪಲಿಯಿಲ್ಲದೆ ಕಾಲ್ನಡಿಗೆಯಲ್ಲಿ ಮೈಲಿಗಟ್ಟಲೆ ಹೋಗಿ ಬರುವ ಉತ್ಸಾಹ.
ಆದರೆ ಈ ಸಂತೋಷದ ದಿನಗಳು ಕೊನೆಗಾಲದಲ್ಲಿ ದೇವರು ಕಿತ್ತುಕೊಂಡ. ಪ್ರಾರಬ್ಧ ಕರ್ಮ ಮನುಷ್ಯ ಅನುಭವಿಸಿಯೇ ಸಾಯಬೇಕು. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಪೆರಾಲಿಸಸ್ ಆಗಿ ನಾಲ್ಕು ವರ್ಷ ಮಲಗಿದಲ್ಲೇ. ಮಾತು ನಿಂತಿತು. ಬರಿ “ಪಾಂಡು” ಅನ್ನುವುದೊಂದೇ ಮಾತು ಬಾಯಲ್ಲಿ. ಎಷ್ಟು ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗಲಿಲ್ಲ. ಇದೇ ಖಾಯಿಲೆಯಲ್ಲಿ ಕೊನೆಯುಸಿರೆಳೆದಳು.
ಇಷ್ಟು ಹೊತ್ತು ಓದಿರೋದು ಕಥೆಯಲ್ಲ.
ಇವಳು ನನ್ನಜ್ಜಿ. ನಿಜವಾಗಿ ನಡೆದಿರೋದು. ಯಾವ ರೀತಿ ಬದುಕು;ನಿಜಕ್ಕೂ ಊಹಿಸಲೂ ಸಾಧ್ಯವಾಗುವುದಿಲ್ಲ. ಅವಳು ಕಾಲವಾಗಿ ಇಪ್ಪತ್ತಾರು ವರ್ಷಗಳಾಯಿತು. ಈಗ ಬದುಕಿದ್ದರೆ ನೂರರ ಗಡಿ ದಾಟುತ್ತಿದ್ದಳು. ಮಗನಿಗೆ ಈಗ ಎಂಬತ್ತೇಳು ವರ್ಷ. ಸೊಸೆ ಅವಳ ಕಣ್ಣೆದುರೆ ಅವಳ ಐವತ್ತೆರಡು ವರ್ಷಕ್ಕೆ ಕಾಲವಾದಳು. ಊಹಿಸಿ ಅವಳ, ತಾಳ್ಮೆ, ಜಾಣ್ಮೆ ಬದುಕಿದ ರೀತಿ.
ಅಜ್ಜಿಗೊಂದು ಸಾಷ್ಟಾಂಗ ನಮಸ್ಕಾರ.
Just touched my heart.