ಸಾಗುವ ಹಾದಿ ದುರ್ಗಮವಾಗಿದ್ದರೇನು.. ಸಾಧಿಸುವ ಛಲವಿದ್ದಾಗ..!
– ಸುರೇಶ್ ಕುಮಾರ್ ಎಂ.ಆರ್
ಜಗತ್ತು ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ, ಟೆನಿಸ್ ಅಂಗಳಕ್ಕಿಳಿದರೆ ಸೋಲಿನ ಮುಖವನ್ನು ನೋಡಲೇಬಾರದು ಎಂಬಂತಹ ಆತ್ಮವಿಶ್ವಾಸ. ಎದುರಾಳಿ ಆಟಗಾರ್ತಿಯ ಬಿರುಸಿನ ಹೊಡೆತಗಳನ್ನು ಲೀಲಾಜಾಲವಾಗಿ ರಿಟರ್ನ್ ಮಾಡುವ ಈಕೆಯದು ಅಂತಿಂತಹ ಶೈಲಿಯಲ್ಲ. ಇವಳಿಗೆ ಇವಳೇ ಸಾಟಿ, ಇವಳ ಹೊಡೆತಗಳನ್ನು ಮಹಿಳಾ ಆಟಗಾರ್ತಿಯರ ಪೈಕಿ ಅತೀ ಬಲಿಷ್ಠ ಹೊಡೆತಗಳು ಎಂದು ಕರೆಯುವುದುಂಟು. ರಷ್ಯಾದ ಮಾರಿಯಾ ಶಾರಪೋವಳ ಹೊಡೆತಗಳಿಗೂ ಬಿರುಸಿನ ಹೊಡೆತಗಳಿವಳವು. ಇವಳ ಅಕ್ಕ ವೀನಸ್ ವಿಲಿಯಮ್ಸ್ ಕೂಡ ಅವಳ ಆಟಕ್ಕೆ ಸಾಟಿಯಲ್ಲ (ಸಾಂದರ್ಭಿಕ). ಅವಳೇ ಸೆರೆನಾ ಜಮೆಕಾ ವಿಲಿಯಮ್ಸ್. ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡ ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರಾಂಡ್ ಸ್ಲ್ಯಾಮ್ ಟೂರ್ನಿಯ ಮಹಿಳಾ ವಿಭಾಗದ ಜಯಶಾಲಿ ಈಕೆ, ಅದೂ ತನ್ನ ಅಕ್ಕನನ್ನೇ ಅಂತಿಮ ಹಂತದ ಪೈಪೋಟಿಯಲ್ಲಿ ಅತೀ ಸಲೀಸಾಗಿ ಸೋಲಿಸಿ 23ನೇ ಗ್ರಾಂಡ್ ಸ್ಲ್ಯಾಮ್ (ಮಹಿಳಾ ಸಿಂಗಲ್ಸ್ ವಿಭಾಗ) ಎತ್ತಿಹಿಡಿದ ಛಲಗಾರ್ತಿ.
23ನೇ ಗ್ರಾಂಡ್ ಸ್ಲ್ಯಾಮ್? ವಾವ್…. ಬೇರೆ ಯಾರೂ ಇಂತಹ ಸಾಧನೆ ಮಾಡಿಲ್ಲವೇ? ಮಾಡಿದ್ದಾರೆ..! ಆದರೆ ಅವರ ಕಾಲದ ಟೆನಿಸ್ ಆಟದ ಶೈಲಿಯೇ ಬೇರೆ.. ಇವಳು ಆಡುತ್ತಿರುವ ಟೆನಿಸ್ ಆಟದ ಶೈಲಿಯೇ ಬೇರೆ.. ಬಲಿಷ್ಠ ಹೊಡತಗಳಿಗಾಗಿಯೇ ರಾಕೆಟ್‌ಗಳನ್ನು ಬಳಸುವ ಕಾಲವಿದು. ಮಾರ್ಗರೇಟ್ ಕೋರ್ಟ್ ಎಂಬ ಸರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರ್ತಿ ಒಟ್ಟು 24 ಗ್ರಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಜಯಿಸಿ 1977ರಲ್ಲಿ ವೃತ್ತಿಪರ ಟೆನಿಸ್ನಿಂದ ನಿವೃತ್ತಿ ಘೋಷಿಸುವ ಹೊತ್ತಿಗೆ ಸೆರೆನಾ ಇನ್ನೂ ಹುಟ್ಟೇ ಇರಲಿಲ್ಲ. ಈಗ ಅದು ಇತಿಹಾಸ. 1981ರಲ್ಲಿ ಜನಿಸಿದ ಸೆರೆನಾಗೆ ಮಾರ್ಗರೇಟ್‌ರ ಮೈಲುಗಲ್ಲನ್ನು ಹಿಂದಿಕ್ಕಲು ಬೇಕಿರುವುದು ಕೇವಲ 2 ಸಿಂಗಲ್ಸ್ ಗ್ರಾಂಡ್ ಸ್ಲ್ಯಾಮ್ಗಳಷ್ಟೆ, ನಿಮಗೆಲ್ಲರಿಗೂ ತಿಳಿದಿರಲಿ ಈ ವರ್ಷ ಕಳೆಯುವ ಹೊತ್ತಿಗೆ ಇನ್ನೂ 3 ಗ್ರಾಂಡ್ ಸ್ಲ್ಯಾಮ್ ಟೂರ್ನಿಗಳು ಬಾಕಿ ಇವೆ, ಈ ಮೈಲುಗಲ್ಲನ್ನು ಈ ವರ್ಷದ ಗ್ರಾಂಡ್ ಸ್ಲ್ಯಾಮ್ ಟೂರ್ನಿಗಳ ಮುಕ್ತಾಯದ ಹೊತ್ತಿಗೆ ದಾಟುವುದು ಖಚಿತವೆಂಬುದು ಟೆನಿಸ್ ಪ್ರಿಯರ ವಿಶ್ವಾಸದ ನುಡಿ.
ಸೆರೆನಾ ಈ ಮಟ್ಟಕ್ಕೆ ಬೆಳೆಯಲು ಸವೆಸಿದ ಕಷ್ಟದ ಹಾದಿಗಳು ಎಷ್ಟೋ ಟೆನಿಸ್ ಪ್ರಿಯರಿಗೆ ತಿಳಿದಿಲ್ಲ. ಈಕೆ ಅಮೇರಿಕಾದ ಆಟಗಾರ್ತಿ, ವರ್ಣ ತಾರತಮ್ಯ ಆ ದೇಶದಲ್ಲಿ ಹೇಗೆಲ್ಲಾ ತಾಂಡವವಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆಯಲ್ಲವೇ? ಕರಿಯ ಜನಾಂಗದ ವ್ಯಕ್ತಿಯೊಬ್ಬ ಆ ದೇಶದ ಅಧ್ಯಕ್ಷನಾಗಲು 220 ವರ್ಷಗಳೇ ಬೇಕಾದವು. ಇನ್ನೊಂದು ಅಚ್ಚರಿಯೆಂದರೆ ಈ ಇತಿಹಾಸದಲ್ಲಿ ಮಹಿಳೆಯೊಬ್ಬಳು ಅಧ್ಯಕ್ಷ ಸ್ಥಾನಕ್ಕೇರಿಲ್ಲ. ಮೊನ್ನೆ ಮೊನ್ನೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಇನ್ನೇನು ಗೆದ್ದೇ ಬಿಟ್ಟರು ಎಂದುಕೊಂಡ ಹಿಲರೀ ಕ್ಲಿಂಟನ್ ಮಾತ್ರ ಆ ಸ್ಥಾನಕ್ಕೆ ಬಲಿಷ್ಠ ಪೈಪೋಟಿ ನೀಡಿದ ಮಹಿಳೆ. ಇಂತಹ ದೇಶದಲ್ಲಿ ಒಬ್ಬ ಹೆಣ್ಣು ಅದರಲ್ಲೂ ಕರಿಯ ಜನಾಂಗದವಳೆಂದು ಗುರುತಿಸಿಕೊಂಡ ಸೆರೆನಾ ಈ ಮಟ್ಟದ ಸಾಧನೆಗೈದಿರುವುದು ಸಾಮಾನ್ಯ ವಿಷಯವಲ್ಲ.
ಇವಳ ತಂದೆ ರಿಚರ್ಡ್ ವಿಲಿಯಮ್ಸ್ ವೃತ್ತಿಪರ ಟೆನಿಸ್ ತರಬೇತುದಾರ, ಒಂದು ದಿನ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ 12 ಗ್ರಾಂಡ್ ಸ್ಲ್ಯಾಮ್ ವಿಜೇತೆ ವರ್ಜಿನಿಯಾ ರುಝ್ಙಿಸಿಯ ಆಟವನ್ನು ಕಣ್ತುಂಬಿಕೊಂಡ ರಿಚರ್ಡ್ ತನ್ನ ಮಕ್ಕಳಾದ ವೀನಸ್ ಹಾಗೂ ಸೆರೆನಾರನ್ನು ಜಗತ್ತಿನ ಶ್ರೇಷ್ಠ ಟೆನಿಸ್ ಆಟಗಾರ್ತಿಯರನ್ನಾಗಿ ಮಾಡುವ ಮಹದುದ್ದೇಶವನ್ನಿಟ್ಟುಕೊಳ್ಳುತ್ತಾರೆ. ವೀನಸ್ ವಿಲಿಯಮ್ಸ್ ಗೆ ಆಗ ಇನ್ನೂ ನಾಲ್ಕುವರೆ ವರ್ಷ, ಸೆರನಾ ಮೂರು ವರ್ಷದ ಹಾಲುಗಲ್ಲದ ಮಗು, ಆಗಲೇ ಇವರಿಗೆ ಟೆನಿಸ ತರಬೇತಿ ಶುರುಮಾಡಿಬಿಡುತ್ತಾರೆ ರಿಚರ್ಡ್. 78 ಪುಟಗಳ ಟೆನಿಸ್ ತಂತ್ರಗಳನ್ನು ಬರೆದಿಟ್ಟುಕೊಂಡು ಮಕ್ಕಳಿಬ್ಬರನ್ನೂ ಆ ತಂತ್ರಗಾರಿಕೆಗೆ ತಕ್ಕಂತೆ ಟೆನಿಸ್ ಕಲಿಕೆಯನ್ನಾರಂಭಿಸುತ್ತಾರೆಂದರೆ ಅವರ ಲೆಕ್ಕಾಚಾರ ಎಷ್ಟರಮಟ್ಟಿಗಿದ್ದಿತು ನೀವೇ ಊಹಿಸಿ.
ಟಿನಿಸ್ ಕೂಸಾಗಿ ಬೆಳೆಯುತ್ತಿದ್ದ ಸೆರನಾ ಪ್ಲೋರಿಡಾದ 10ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 46-3ರಲ್ಲಿ ಜಯಿಸಿ ನಂಬರ್ ಒನ್ ಆಟಗಾರ್ತಿಯಾಗಿ ಗುರುತಿಸಿಕೊಳ್ಳುತ್ತಾರೆ. ಈ ಬೆಳವಣಿಗೆಯನ್ನು ಸಹಿಸದ ಅಲ್ಲಿನ ಬಿಳಿಯ ಜನಾಂಗ (ಬೇರೆ ಮಕ್ಕಳ ಬಿಳಿಯ ಪೋಷಕರು) ಅವಳನ್ನು ಅವಳ ದೇಹದ ಬಣ್ಣವನ್ನು ಗುರಿಯಾಗಿಟ್ಟುಕೊಂಡು ಹೀಯಾಳಿಸಲಾರಂಭಿಸುತ್ತಾರೆ. ಇದರಿಂದ ನೊಂದ ಸೆರೆನಾರ ತಂದೆ ಟೆನಿಸ್ ಅಕಾಡೆಮಿಯಿಂದ ತನ್ನ ಮಕ್ಕಳನ್ನು ದೂರವಿರಿಸುತ್ತಾರೆ. ತಾವೇ ಸ್ವತಃ ಟೆನಿಸ್ ತರಬೇತುದಾರರಾಗಿ ತನ್ನ ಹೆಣ್ಣು ಮಕ್ಕಳಿಗೆ ಟೆನಿಸ್ ಆಟದ ಅ-ಆ-ಇ-ಈ ಪ್ರಾರಂಭಿಸುತ್ತಾರೆ. ಸೆರೆನಾ ವೃತ್ತಿಪರ ಟೆನಿಸ್ಗೆ ತನ್ನನ್ನೊಡ್ಡಿಕೊಂಡಿದ್ದು 1995ರಲ್ಲಿ 14ವರ್ಷದ ಸೆರೆನಾ ಅಂಗಳಕ್ಕಿಳಿದಾಗ ಆಕೆಯನ್ನು ಗೌರವಿಸುವುದಕ್ಕಿಂತ ಛೇಡಿಸಿದವರೇ ಹೆಚ್ಟು. ವಯಸ್ಸಿನ ಲೆಕ್ಕಾಚಾರದಲ್ಲಿ ಆಕೆಯನ್ನೂ ವೃತ್ತಿಪರ ಟೆನಿಸ್ಗೆ ಅನುಮತಿ ನೀಡಬಾರದೆಂಬ ಕೂಗಿನ ನಡುವೆ ಆಕೆ ಪಾದಾರ್ಪಣೆ ಮಾಡುತ್ತಾಳೆ. ಆದರೆ ಪಾದಾರ್ಪಣೆ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿ ಹೊರಬೀಳುತ್ತಾಳೆ. ಅದಾದ ನಂತರ 1997ರಲ್ಲಿ ತನ್ನ ಅಕ್ಕ ವೀನಸ್ ವಿಲಿಯಮ್ಸ್ ಜೊತೆಗೂಡಿ ತನ್ನ ಮೈಲಿಗಲ್ಲಿನ ಮೊದಲ ಪುಟವನ್ನು ಪ್ರಾರಂಭಿಸುತ್ತಾರೆ. ಅಮೇರಿಟೆಕ್ ಕಪ್ ಚಿಕಾಗೋ ಟೂರ್ನಿಯಲ್ಲಿ 304ನೇ ರ್ಯಾಂಕಿಗಳಾಗಿ ಕಣಕ್ಕಿಳಿದ ಸೆರೆನಾ ಜಗತ್ತಿನ 7ನೇ ರ್ಯಾಂಕಿನ ಮೇರಿ ಪೈರ್ಸ್ ಹಾಗೂ 4ನೇ ರ್ಯಾಂಕಿನ ಮೊನಿಕಾ ಸೆಲೆಸ್ರನ್ನು ಸೋಲಿಸಿ ತಾನು ಮುಂದೊಂದು ದಿನ ಜಗತ್ತಿನ ಅತ್ಯಂತ ಯಶಸ್ವೀ ಟೆನಿಸ್ ಆಟಗಾರ್ತಿಯಾಗುವ ಎಲ್ಲಾ ಮುನ್ಸೂಚನೆಗಳನ್ನೂ ಜಗತ್ತಿಗೆ ನೀಡುತ್ತಾಳೆ. ಇಲ್ಲೋಂದು ಮುಖ್ಯ ವಿಷಯ ಹೇಳಲೇ ಬೇಕು, ವಿಲಿಯಮ್ಸ್ ಸಹೋದರಿಯರು ನಾವು ಪುರುಷರಿಗೂ ಸ್ಪರ್ಧೆಯೊಡ್ಡಬಲ್ಲೆವೂ ಎಂದು ಜಗತ್ತಿಗೆ ಸವಾಲೆಸೆಯುತ್ತಾರೆ. 1998ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗಳು ನಡೆಯುವ ಸಂದರ್ಭದಲ್ಲಿ ನಾವು 200ಕ್ಕಿಂದ ಹೆಚ್ಚಿನ ರ್ಯಾಂಕಿಗ್ ಪುರುಷ ಸ್ಪರ್ಧಿಯನ್ನು ಸೋಲಿಸಬಲ್ಲೆವು ಎಂಬ ಸವಾಲೆಸೆಯುತ್ತಾರೆ. ಈ ಸವಾಲನ್ನು ಸ್ವೀಕರಿಸಿದ ಜರ್ಮನ್ ಆಟಗಾರ ಕರ್ಸ್ಟಿನ್ ಬಾರ್ಷ್ ಪೈಪೋಟಿಯಲ್ಲಿ ವಿಲಿಯಂ ಸಹೋದರಿಯರನ್ನು ಸೋಲಿಸಿ “ನಿಮ್ಮದೇನಿದ್ದರೂ 500ನೇ ರ್ಯಾಂಕಿನ ಪುರುಷರ ಮೇಲೆ” ಎಂದು ತಿರುಗೇಟು ನೀಡುತ್ತಾನೆ. ಇವೆಲ್ಲವೂ ಈಗ ಇತಿಹಾಸ.. ಈಗ ಆಕೆ ಬೆಳೆದ ರೀತಿ ಆಕೆಯ ಸರ್ವ್ ಗಳಿಗೆ ನಂಬರ್ ಒನ್ ಆಟಗಾರರೇ ಸುಸ್ತು ಹೊಡೆಯುವುದರಲ್ಲಿ ಸಂಶಯವಿಲ್ಲ.
ಸೆರೆನಾ ತನ್ನ ಮೊದಲ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿಯಾದ ಅಮೇರಿಕನ್ ಒಪನ್ ಟೂರ್ನಿಯನ್ನು 1999ರಲ್ಲಿ ಅಂದಿನ ಕಾಲದ ನಂಬರ್ ಒನ್ ಆಟಗಾರ್ತಿ ಮಾರ್ಟೀನಾ ಹಿಂಗಿಸ್ ರನ್ನು ಸೋಲಿಸಿ ಗೆಲ್ಲುತ್ತಾಳೆ. ಅದೇ ವರ್ಷ ನಡೆದ ಸಿಡ್ನಿ ಒಲಂಪಿಕ್ಸ್ ನಲ್ಲಿ ತನ್ನ ಅಕ್ಕ ವೀನಸ್ ಜೊತೆಗೂಡಿ ಚಿನ್ನದ ಪದಕವನ್ನು ಗೆದ್ದ ಸಾಧನೆ ಮಾಡುತ್ತಾಳೆ. ಇಲ್ಲಿಂದ ಮುಂದಕ್ಕೆ ಸೆರೆನಾರದ್ದೆ ಟೆನಿಸ್ ಕಾರುಬಾರು. 5 ಆಸ್ಟ್ರೇಲಿಯನ್ ಓಪನ್, 6 ಪ್ರೆಂಚ್ ಓಪನ್, 7 ವಿಂಬಲ್ಡನ್ ಹಾಗೂ 5 ಅಮೆರಿಕನ್ ಓಪನ್ ಇದೂವರೆಗೂ ಸೆರೆನಾ ಗೆದ್ದ ಗ್ರ್ಯಾಂಡ್ಸ್ಲ್ಯಾಮ್ ಟೂರ್ನಿಗಳು. ತನ್ನ ಸುದೀರ್ಘ ಟೆನಿಸ್ ಪಯಣದಲ್ಲಿ 21ವರ್ಷಗಳನ್ನು ಪೂರೈಸಿರುವ ಸೆರೆನಾ ಅನೇಕ ಗಾಯದ ಸಮಸ್ಯೆಗಳಿಗೂ ಒಳಗಾಗಿದ್ದಾರೆ. ಟೆನಿಸ್ ಜಗತ್ತಿನ ಉತ್ತುಂಗದಲ್ಲಿದ್ದಾಗಲೇ ಗಾಯದ ಸಮಸ್ಯೆಗಳು ಆಕೆಯನ್ನು ಕಾಡಲಾರಂಭಿಸುತ್ತವೆ ಇಲ್ಲವಾದರೆ ಇಷ್ಟೊತ್ತಿಗಾಗಲೇ 30ಕ್ಕೂ ಹೆಚ್ಚು ಸಿಂಗಲ್ಸ್ ಗ್ರಾಂಡ್ ಸ್ಲ್ಯಾಮ್ ವಿಜೇತೆಯಾಗುತ್ತಿದ್ದಳು ಎಂದು ಸೆರೆನಾರ ತಂದೆ ಹಾಗೂ ಅಕ್ಕ ಸಂದರ್ಶನದಲ್ಲಿ ಹೇಳಿದ್ದುಂಟು. ಗ್ರಾಂಡ್ ಸ್ಲ್ಯಾಮ್ ಗಳಲ್ಲದೆ ಅನೇಕ ವೃತ್ತಿಪರ ಟೆನಿಸ್ ಟೂರ್ನಿಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. ಇದಾದರೂ ವಿವಾದಗಳು ಸೆರೆನಾರನ್ನು ಬಿಟ್ಟುಕೊಡಲಿಲ್ಲ. ಸಹೋದರಿಯರ ಸವಾಲಿಗೆ ಹೆಚ್ಚಿನ ಪ್ರಚಾರ ಸಿಗುತ್ತದೆನ್ನುವ ಕಾರಣಕ್ಕಾಗಿ ಬೇಕೆಂದೇ ಸೆರೆನಾ ಹಾಗೂ ವೀನಸ್ ರನ್ನು ಬೇರೆ ಬೇರೆ ಗುಂಪುಗಳಲ್ಲಿ ಆಡಿಸಿ ಅಂತಿಮ ಪಂದ್ಯದಲ್ಲಿ ಮುಖಾ-ಮುಖಿಯಾಗುವಂತೆ ಮಾಡಲಾಗುತ್ತಿದೆ ಎಂಬ ಗಾಳಿ ಸುದ್ದಿಗಳೂ ಅವರ ವಿರುದ್ಧವಾಗಿವೆ. ಅಂಗಳದಲ್ಲಿ ಅಂಪೈರ್ ಗಳ ವಿರುದ್ಧ ತಿರುಗಿಬಿದ್ದ ಅನೇಕ ಘಟನೆಗಳು ಹಾಗೂ ಎದುರಾಳಿಯನ್ನು ಬೇಕೆಂದೇ ಕೋಪಗೊಳ್ಳುವಂತೆ ಮಾಡುತ್ತಾರೆ ಎಂಬ ವಿವಾದಕ್ಕೀಡಾಗಿದ್ದಾರೆ ಸೆರೆನಾ.
ಟೆನಿಸ್ ಆಟಗಾರ್ತಿಯಷ್ಟೇ ಅಲ್ಲ, ತನ್ನ ಕೃಷ್ಣ ಸೌಂದರ್ಯದಿಂದಲೇ ಜನಪ್ರಿಯರಾಗಿರುವ ಸೆರೆನಾ ಮಾಡಲಿಂಗ್ ಜಗತ್ತಿನಲ್ಲೂ ವಿವಾದಗಳನ್ನೆಬ್ಬಿಸಿದ್ದಾರೆ. ESPN ಮ್ಯಾಗಝೀನ್ಗೆ ನೀಡಿದ ಬೆತ್ತಲೆ ಚಿತ್ರ 2009ರಲ್ಲಿ ಟೆನಿಸ್ ಜಗತ್ತಿನಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿತ್ತು. 2013ರಲ್ಲಿ ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ನೀಡಿದ ಹೇಳಿಕೆಯಿಂದಲೂ ಆಕೆ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಸಿನೆಮಾ ನಟಿಯಾಗಿ, ಬರಹಗಾರ್ತಿಯಾಗಿ ಸೆರೆನಾ ತನ್ನನ್ನು ಗುರುತಿಸಿಕೊಂಡಿದ್ದಾರೆ. ಸೆರೆನಾ ವಿಲಿಯಮ್ಸ್ ದತ್ತಿ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಇದೆಲ್ಲದರ ನಡುವೆಯೂ ಸೆರೆನಾರನ್ನು ದೂಷಿಸುವವರು ಇದ್ದೇ ಇದ್ದಾರೆ. ಅವರ ಪ್ರತಿಯೊಂದು ನಡೆಯನ್ನೂ ತೀಕ್ಷ್ಣವಾಗಿ ತಿರಸ್ಕರಿಸುವ ಕೆಲಮಂದಿ ಆಕೆಯನ್ನು ಹೆಣ್ಣಿನ ವೇಷದ ಗಂಡು ಎಂದು ಹೀಯಾಳಿಸಿದ್ದೂ ಇದೆ. ತನಗೆ ಬರುವ ಋಣಾತ್ಮಕ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಸೆರೆನಾ, ‘ಒಂದೊಮ್ಮೆ ನಾನೇನಾದರೂ ಈ ಮಾತುಗಳಿಗೆ ತಲೆಕೆಡಿಸಿಕೊಂಡಿದ್ದರೆ ಇಂದು ನಿಮ್ಮ ಮುಂದೆ ನಾ ಇರುತ್ತಿರಲಿಲ್ಲ’ ಎಂದು ಸಂದರ್ಶನದಲ್ಲಿ ಟೀಕಾಕಾರರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಸಾವಿರ ಕುಹಕ ಮಾತುಗಳ ನಡುವೆ ಒಂದೇ ಒಂದು ಸ್ಪೂರ್ತಿದಾಯಕ ಮಾತುಗಳು ಸಾಕು ಮತ್ತೆ ನಾ ಎದ್ದು ಬರಲು ಎಂದು ಹೇಳುವ ಸೆರೆನಾರ ಆತ್ಮವಿಶ್ವಾಸವೇ ಇಂದು ನಮ್ಮೆಲ್ಲರ ನಡುವೆ ಒಬ್ಬ ಕಪ್ಪು ಹೆಣ್ಣು ಅನೇಕ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ನಿಲ್ಲುತ್ತಾರೆ.
ಧನ್ಯವಾದಗಳು.
ಅತ್ಯುತ್ತಮ ಬರವಣಿಗೆ. ಮಾಹಿತಿಯು ಚನ್ನಾಗಿದೆ. Good job.. (Y)
ಅತ್ಯುತ್ತಮ ಬರವಣಿಗೆ. ಮಾಹಿತಿಯು ಚನ್ನಾಗಿದೆ. (Y)