ಎತ್ತ ಸಾಗುತ್ತಿದೆ ಕನ್ನಡದ ಬೌದ್ಧಿಕ ಜಗತ್ತು..?
– ಡಾ. ಪ್ರವೀಣ ಟಿ. ಎಲ್
ಉಪನ್ಯಾಸಕರು
ಕುವೆಂಪು ವಿಶ್ವವಿದ್ಯಾನಿಲಯ
ಬೌದ್ಧಿಕವಲಯದಲ್ಲಿ ಮುಕ್ತ ಸಂವಾದಗಳು ಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮುಖ್ಯ. ಅವುಗಳು ಹೆಚ್ಚೆಚ್ಚು ನಡೆಯಲೆಂದೇ ಯುಜಿಸಿಯಂತಹ ಸಂಸ್ಥೆಗಳು, ಸರ್ಕಾರಗಳು ಕೋಟಿಗಟ್ಟಲೇ ಹಣವನ್ನು ನೀಡುತ್ತವೆ. ವಿದ್ಯಾರ್ಥಿಗಳ ನಡುವೆ, ಚಿಂತಕರ ನಡುವೆ ಸಂವಾದಗಳು, ಚರ್ಚೆಗಳು ನಡೆದರೆ ಮಾತ್ರವೇ ತಮ್ಮ ತಿಳುವಳಿಕೆಯ ಮಿತಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಹೊಸ ಹೊಸ ಚಿಂತನೆಯ ಉಗಮಕ್ಕೆ ದಾರಿಯಾಗಲಿವೆ. ಆಗ ಅಲ್ಲಿನ ಬೌದ್ಧಿಕ ವಲಯವು ಹೆಚ್ಚು ಕ್ರಿಯಾಶೀಲವಾಗಿದೆ ಎಂದು ತೀರ್ಮಾನಿಸಬಹುದು. ಕರ್ನಾಟಕದ ಸಂದರ್ಭದಲ್ಲಿ ಬುದ್ಧಿಜೀವಿಗಳೆಂದರೆ ಸಾಹಿತಿಗಳು ಎಂಬಂತಾಗಿದೆ. ಕನ್ನಡ ಬೌದ್ಧಿಕ ವಲಯದಲ್ಲಿ ಇಂತಹ ಸಂವಾದಗಳು ನಡೆಯುತ್ತಿವೆಯೇ? ಎಂಬ ಮುಖ್ಯ ಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕಾದ ಸುಸಂದರ್ಭದಲ್ಲಿದ್ದೇವೆ.
ತಮ್ಮ ವಿಚಾರಸರಣಿಗೆ ಹೊಂದಿಕೆಯಾಗದ ಅಥವಾ ಅಪಾಯ ತಂದೊಡ್ಡಬಲ್ಲ ಸಂಶೋಧನೆಯನ್ನು ಹಾಗೂ ಸಂಶೋಧನಾ ಕೇಂದ್ರವನ್ನು ಮುಚ್ಚಿಸಲು ನಡೆಸಿದ ಪ್ರಯತ್ನಗಳು ಹಾಗೂ ಅದರಲ್ಲಿ ಯಶಸ್ವಿಯಾಗಿರುವುದು ಈಗ ಇತಿಹಾಸ. ಆದರೆ ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸೋಣ.
೧) ಶ್ರಿಂಗೇರಿ ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಭಾಷಣವನ್ನು ಏರ್ಪಡಿಸಲಾಗಿತ್ತು. ಆದರೆ ಅವರನ್ನು ಬಾರದಂತೆ ಮತ್ತೊಂದು ವಿದ್ಯಾರ್ಥಿ ಸಂಘಟನೆಯು ಒತ್ತಡ ಹೇರಿದ್ದಲ್ಲದೇ, ಕಾರ್ಯಕ್ರಮ ಆಯೋಜಿಸಿದ ಕೆಲ ಹುಡುಗರ ಮೇಲೆ ಕೇಸು ದಾಖಲಿಸಿದ್ದರಿಂದ ಅವರಲ್ಲೊಬ್ಬ ಅಭಿಷೇಕ್ ಎಂಬ ವಿದ್ಯಾರ್ಥಿಯ ಸಾವಿಗೆ ಕಾರಣವಾಯಿತು. ಈ ಘಟನೆಯ ಹಿಂದೆ ಎಷ್ಟು ಜನ ಅಧ್ಯಾಪಕರು, ಚಿಂತಕರು ಹಗಲು ರಾತ್ರಿ ಶ್ರಮಿಸಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢ.
೨) ಮೊನ್ನೆ ಧಾರವಾಢ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಬುರ್ಗಿಯವರ ಸಾವಿನ ಕುರಿತ ತನಿಖಾ ಸಂಸ್ಥೆಗಳ ವರದಿಯನ್ನು ಉಲ್ಲೇಖಿಸಿದ ಕಾರಣಕ್ಕೆ, ಹಲವು ಮುಖ್ಯ ವಾಹಿನಿಯ ಸಾಹಿತಿಗಳು ಅವರಿಗೆ ಥಳಿಸುವ ಮಟ್ಟಿಗೆ ಹೋದದ್ದು, ಅವರಲ್ಲೊಬ್ಬರು ಚಪ್ಪಲಿ ಸೇವೆಗೆ ಮುಂದಾಗಿದ್ದರು ಎಂಬುದು ಗೊತ್ತಿರುವ ವಿಷಯ. ಅಷ್ಟೇ ಅಲ್ಲದೇ ಅವರನ್ನು ವೇದಿಕೆ ಇಂದಲೇ ಉಚ್ಚಾಟಿಸಲಾಯಿತು ಎಂದೂ ವರದಿಯಾಗಿದ್ದನ್ನು ಗಮನಿಸಿದ್ದೇವೆ.
೩) ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಜನಪ್ರಿಯ ಸಾಹಿತಿ ಎಸ್, ಎಲ್ ಭೈರಪ್ಪನವರನ್ನು ಆಹ್ವಾನಿಸಲಾಗಿತ್ತು. ತಕ್ಷಣ ಹಾವು ಬಿಟ್ಟವರಂತೆ ಆಡಿದ ಶಿವಮೊಗ್ಗದ ಸಾಹಿತಿಗಳಲ್ಲಿ ಕೆಲವರು ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ಮುಂದಾದರೆ, ಇನ್ನು ಕೆಲವರು ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲವೆಂಬ ಬೆದರಿಕೆ ಹಾಕಿದರು. ಅಷ್ಟಕ್ಕೇ ನಿಲ್ಲದೆ, ಮತ್ತೆ ಕೆಲವು ಘನ ಪಂಡಿತರು ‘ತಾವೇಕೆ ಭೈರಪ್ಪನವರನ್ನು ಕರೆಸಬಾರದು?’ ಎಂಬುದಕ್ಕೆ ಮಾರುತ್ತರ ನೀಡಿದರು. ಅವರ ಸಾರಾಂಶ ಹೀಗಿದೆ: “ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಮಾನವೀಯತೆಯನ್ನು ಕಾಪಾಡುವ ಗುರುತರ ಜವಾಬ್ದಾರಿಯನ್ನು ನಮ್ಮ ಹೆಗಲಿಗೆ ಹಾಕಿದೆ. ಭೈರಪ್ಪನವರು ಮಾನವೀಯತೆ ವಿರೋಧಿ ಧೋರಣೆಯುಳ್ಳವರು. ಹಾಗಾಗಿ ಅವರು ಸಮ್ಮೇಳನವನ್ನು ಉದ್ಘಾಟಿಸುವುದನ್ನು ನಾವೆಲ್ಲರೂ ವಿರೋಧಿಸುತ್ತಿದ್ದೇವೆ”.
ಬೈರಪ್ಪನವರು ಶಿವಮೊಗ್ಗಕ್ಕೆ ಬರಲಿಲ್ಲವೆಂಬ ಬೇಜಾರಾಗಲೀ, ಅವರು ಬಂದಿದ್ದರೆ ನಮ್ಮ ಜ್ಞಾನಭಂಡಾರದಲ್ಲಿ ಹೊಸಕ್ರಾಂತಿ ನಡೆಯುತ್ತಿತ್ತು ಎಂಬ ಭ್ರಮೆಯಾಗಲೀ ನನ್ನಲಿಲ್ಲ. ಆದರೆ ಭಿನ್ನಪಂಥದ ಚಿಂತಕರನ್ನು ಹೇಗೆ ನಡೆಸಿಕೊಳ್ಳಬಲ್ಲರು ಎಂಬ ಬಗ್ಗೆ ಮರುಕವಿದೆ.
ಈ ಎಲ್ಲಾ ಸಂದರ್ಭಗಳಲ್ಲಿಯೂ ಬಹುಮುಖ್ಯ ಪಾತ್ರವಹಿಸಿದವರೆಂದರೆ ಅಧ್ಯಾಪಕ ವೃತ್ತಿಯಲ್ಲಿದ್ದವರೇ ಆಗಿದ್ದಾರೆ. ವಿಚಾರಬೇಧದ ಕಾರಣಕ್ಕಾಗಿ ವಿರೋಧಿಗಳನ್ನು ಹಣಿಯಲು ಪ್ರಯತ್ನಿಸಿದವರಲ್ಲಿ ಬಹುತೇಕರು ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದವರೇ ಆಗಿರುವುದು ದುರಂತ.
ಶಿಕ್ಷಕ/ ಅಧ್ಯಾಪಕರಾಗಿ ನಿರ್ವಹಿಸಬೇಕಾಗಿರುವ ಪ್ರಾಥಮಿಕ ಜವಾಬ್ದಾರಿಯನ್ನೇ ಅರಿಯದ ಇವರುಗಳಿಂದ ನಮ್ಮ ಭೌದ್ಧಿಕ ವಲಯವು ಏನನ್ನು ನಿರೀಕ್ಷಿಸಲು ಸಾಧ್ಯ? ಅಧ್ಯಾಪಕರಾಗಿ ಸಮಾಜದ ಕುರಿತು ಇರುವ ಸಿದ್ಧಾಂತಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಪರಿಚಯಿಸಬೇಕು. ಅಲ್ಲದೇ ಆ ಕುರಿತು ಮುಕ್ತವಾಗಿ ಚರ್ಚಿಸಲು, ಚಿಂತಿಸಲು ಅವಕಾಶಗಳನ್ನು ಮಾಡಿಕೊಡಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ, ಓದುಗರಲ್ಲಿ ಜ್ಞಾನದ ಹಸಿವನ್ನು ಹೆಚ್ಚಿಸಬೇಕು. ಅದರ ಬದಲಿಗೆ ಇವರುಗಳು ತಮ್ಮ ವಿಚಾರಕ್ಕೆ ವಿರೋಧವೆನಿಸುವ ಪ್ರಶ್ನೆಗಳನ್ನು, ಚರ್ಚೆಗಳನ್ನು ಹತ್ತಿಕ್ಕುವಲ್ಲಿಯೇ ಇವರ ಬಹುಪಾಲು ಶ್ರಮ ವ್ಯಯವಾಗುತ್ತಿದೆ. ಸಾರ್ವಜನಿಕ ಸಮ್ಮೇಳನಗಳಲ್ಲಿಯೇ ಭಂಡತನವನ್ನು ಪ್ರದರ್ಶಿಸುವವರು ತರಗತಿಗಳಲ್ಲಿ ಅಥವಾ ಕಾಲೇಜು, ವಿ.ವಿಗಳಲ್ಲಿ ನಡೆಯುವ ಸಮ್ಮೇಳನಗಳಲ್ಲಿ ಮುಕ್ತವಾದ ಚರ್ಚೆಗೆ ಅವಕಾಶ ನೀಡುವರೇ? ತಮ್ಮ ವಿಚಾರಧಾರೆಗೆ ವಿರುದ್ಧವಾಗಿರುವ ಚಿಂತನೆಗಳನ್ನು ಹತ್ತಿಕ್ಕುವ ಇವರುಗಳೇ ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ-ಘನತೆಯ ಬಗ್ಗೆ ಗುತ್ತಿಗೆ ಪಡೆದವರಂತೆ ಮಾತನಾಡುತ್ತಾರೆ. ಅಲ್ಲದೇ ಬೀದಿಗೆ ಬಂದು ಪ್ರತಿಭಟನೆಯನ್ನು ನಡೆಸುತ್ತಾರೆ ಎಂಬುದು ಸೋಜಿಗದ ಸಂಗತಿ. ಕಳೆದ ಬಾರಿ ಕಲ್ಬುರ್ಗಿಯವರ ಹತ್ಯೆಯ ಸಂದರ್ಭದಲ್ಲಿ ದೇಶಾದ್ಯಂತ ಗುಲ್ಲೆಬ್ಬಿಸಿ, ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿದ್ದೇವೆ.
ಇಂದು ನಮ್ಮ ಚಿಂತನಾ ವಲಯವು ಸೈದ್ದಾಂತಿಕ ಚರ್ಚೆಯಿಂದ ವಿಮುಖವಾಗಿ ಐಡಿಯಾಲಜಿ ಕೇಂದ್ರಿತ ಚಿಂತನೆಗೆ ಕಟ್ಟುಬಿದ್ದಿರುವುದರ ಪರಿಣಾಮವೇ ಮೇಲಿನ ಎಲ್ಲಾ ಅನಾಹುತಗಳಿಗೆ ಕಾರಣ. ಸಿದ್ಧಾಂತ (theory) ಮತ್ತು ಐಡಿಯಾಲಜಿಗಳ ನಡುವೆ ತುಂಬಾ ವ್ಯತ್ಯಾಸವಿದೆ. ಸೈದ್ಧಾಂತಿಕವಾಗಿದ್ದರೆ ಚರ್ಚೆಗಳಿಗೆ, ಹೊಸ ಪ್ರಶ್ನೆಗಳಿಗೆ ಮುಕ್ತವಾದ ಅವಕಾಶಗಳಿರುತ್ತವೆ. ಏಕೆಂದರೆ ಸಿದ್ಧಾಂತಗಳಿಗೆ ನಮ್ಮ ಪ್ರತಿಪಾದನೆಗಳೇ ಅಂತಿಮ ಸತ್ಯಗಳು ಎಂಬ ಧೋರಣೆ ಇರುವುದಿಲ್ಲ. ಹಾಗಾಗಿ ಎದುರಾಗುವ ಹೊಸ ಪ್ರಶ್ನೆಗಳನ್ನು, ವಿರೋಧಿ ಚಿಂತನೆಗಳನ್ನು ಸವಾಲುಗಳಾಗಿ ಪರಿಗಣಿಸಲಾಗುವುದು. ಅಲ್ಲದೇ ಅವುಗಳಿಗೆ ಸೂಕ್ತ ಉತ್ತರವನ್ನು ನೀಡುವ, ಹುಡುಕುವ ಪ್ರಾಮಾಣಿಕ ಪ್ರಯತ್ನಕ್ಕೆ ಅವಕಾಶ ಮಾಡಿಕೊಡುತ್ತದೆ. ಆದರೆ ಐಡಿಯಾಲಜಿಗಳು ತಾವು ಹೇಳುತ್ತಿರುವುದೇ ಸತ್ಯ, ನಮ್ಮಿಂದ ಮಾತ್ರವೇ ಪ್ರಪಂಚಕ್ಕೆ ಒಳಿತಾಗಲು ಸಾಧ್ಯ. ಉಳಿದ ಚಿಂತನೆಗಳೆಲ್ಲಾ ಮಾನವ ವಿರೋಧಿ, ಜೀವ ವಿರೋಧಿ, ಧೋಷಯುತವಾದುದು ಎಂಬ ತೀರ್ಮಾನ ಮೊದಲೇ ಸಿದ್ಧವಾಗಿರುತ್ತದೆ. ಹಾಗಾಗಿಯೇ ಎದುರಾಗುವ ಹೊಸ ಪ್ರಶ್ನೆಗಳನ್ನು, ವ್ಯತಿರಿಕ್ತ ಚಿಂತನೆಗಳನ್ನು ಒಳಗೊಳ್ಳುವುದಕ್ಕೆ ಐಡಿಯಾಲಜಿಯು ಅವಕಾಶವನ್ನು ನೀಡುವುದಿಲ್ಲ. ಹಾಗಾಗಿ ಉಳಿದಿರುವ ಒಂದೇ ಮಾರ್ಗವೆಂದರೆ ಭಿನ್ನ ವಿಚಾರಧಾರೆಗಳು ಎದುರಾಗದಂತೆ ಶತಾಯಗತಾಯ ತಡೆಯುವುದು. ತಡೆಯಲು ಸಾಧ್ಯವೇ ಆಗಿಲ್ಲ, ನಮ್ಮ ಚಿಂತನೆ ಬುಡಮೇಲಾಗುವ ಸಂಭವವಿದೆ ಎಂದಾದಾಗ, ಎದುರಾಳಿಗಳನ್ನು ಮಾನವೀಯತೆ ವಿರೋಧಿ, ದಲಿತವಿರೋಧಿ, ಸ್ತ್ರೀವಿರೋಧಿ, ಜೀವವಿರೋದಿ ಎನ್ನುವ ಮೂಲಕ ಅವರನ್ನು ಅನೈತಿಕರನ್ನಾಗಿಸುವುದು (demoralise).
ಹೀಗೆ ಐಡಿಯಾಲಜಿಯನ್ನೇ ಹೊತ್ತು ತಿರುಗುವ ಚಿಂತಕರಿಂದ ಎಂತಹ ಜ್ಞಾನವನ್ನು ನಿರೀಕ್ಷಿಸಲು ಸಾಧ್ಯ? ಹಾಗಾಗಿಯೇ ಮುಕ್ತ ಸಂವಾದ ಎಂಬುದು ಮರೀಚಿಕೆಯಾಗಿದೆ. ನಾವು ಗಮನಿಸುವಂತೆ ಎಲ್ಲಾ ಸಾಹಿತ್ಯಿಕ, ಶೈಕ್ಷಣಿಕ ಸಮ್ಮೇಳನಗಳು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಸ್ಥಿತಿಗೆ ತಲುಪಿವೆ. ಅವರು ಇವರಿಗೆ, ಇವರು ಅವರಿಗೆ ಶಹಬ್ಬಾಸ್ ಗಿರಿ ಕೊಡುವುದಲ್ಲದೇ ಬೇರೆ ಎನು ನಡೆಯಲು ಸಾಧ್ಯ? ಅದುವೇ ಇವರ ಪ್ರಕಾರ ಮುಕ್ತ ಸಂವಾದ. ಈ ಕಾರಣಕ್ಕಾಗಿಯೇ, ನಮ್ಮಲ್ಲಿ ಜ್ಞಾನದ ಬೆಳವಣಿಗೆ ನಿಂತು ಅದೆಷ್ಟೋ ವರುಷಗಳಾಗಿವೆ. ಇಂದಿಗೂ ವಸಾಹತುಗಳು ಕಟ್ಟಿಕೊಟ್ಟ ಚಿತ್ರಣಗಳನ್ನೇ ತಿರುಗಿಸಿ, ಮುರುಗಿಸಿ ಪ್ರಚಾರಕ್ಕಿಡುತ್ತಿದ್ದಾರೆ.
ಒಟ್ಟಾರೆಯಾಗಿ ಇತ್ತೀಚಿನ ಸಾಹಿತಿಗಳು ಯಾವುದೇ ಸೈದ್ಧಾಂತಿಕ ಚರ್ಚೆಗಳನ್ನು ನಡೆಸದೇ, ಕೇವಲ ತಮ್ಮ ಐಡಿಯಾಲಜಿಯನ್ನು ಸಮರ್ಥಿಸುವ, ಹರಡುವ ಘನಕಾರ್ಯದಲ್ಲಿ ತೊಡಗಿದ್ದಾರೆ. ಹೀಗಿದ್ದರೂ ಎಲ್ಲಾ ಸಾಮಾಜಿಕ, ಶೈಕ್ಷಣಿಕ ತೀರ್ಮಾನಗಳ ಹಿಂದೆ ಇವರ ಪಾತ್ರ ಹಿರಿದು. ಶಾಲಾ ಪಠ್ಯಪುಸ್ತಕಗಳನ್ನು ಸಂಪಾದಿಸುವವರೂ ಇವರೇ, ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ರಚನೆ ಮಾಡುವವರೂ ಇವರೇ ಆಗಿದ್ದಾರೆ. ವಸಾಹತು ಕಾಲಘಟ್ಟದ ವಿಚಾರಧಾರೆಗೆ ಜೋತುಬಿದ್ದಿರುವ ಇವರು ಪಠ್ಯಪುಸ್ತಕಗಳನ್ನು, ಕಾಯಿದೆಗಳನ್ನು ರಚಿಸಿದರೆ ಮಕ್ಕಳ ಭವಿಷ್ಯ, ನಾಡಿನ ಕಥೆ ಏನಾಗುತ್ತದೆ ಎಂದು ಯೋಚಿಸದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಮುಕ್ತ ಸಂವಾದಗಳು, ಚರ್ಚೆಗಳನ್ನೇ ಸಹಿಸದ ಸಂಕುಚಿತ ಮನೋಭಾವಗಳು ಬೌದ್ಧಿಕವಲಯದ ನೇತಾರರಾಗಿರುವುದು ದುರಂತವೇ ಸರಿ.
ಹೇಳಿಕೆಗಷ್ಟೇ ಇದು ‘ಬೌದ್ಧಿಕ ಜಗತ್ತು’. ತಮ್ಮ ಐಡಿಯಾಲಜಿಯನ್ನು ಪ್ರಶ್ನಿಸುವ ಜನರಿಗೆ ಇವರ ಉತ್ತರ ಬೌದ್ಧಿಕ ರೂಪದ್ದಲ್ಲ, ದೈಹಿಕ ರೂಪದ್ದು! ಇದು ಎಡ ಮತ್ತು ಬಲ ಎನ್ನಲಾಗುವ ಎರಡೂ ವರ್ಗದ ಜನರಿಗೆ ಸಮ. ಅವರು ಮಾಡುತ್ತಾರೆಂದು ಇವರು, ಇವರು ಮಾಡುತ್ತಾರೆಂದು ಅವರು! ಒಟ್ಟಿನಲ್ಲಿ ಚರ್ಚೆ ಇಬ್ಬರಿಗೂ ಬೇಕಿಲ್ಲ, ಬೇಕಿರುವುದು ತಮ್ಮ ತಮ್ಮ ಐಡಿಯಾಲಜಿ ಒಪ್ಪುವ ಸದಸ್ಯರು ಮಾತ್ರ!
It’s no surprise that all human rights moments in the world are inspired by Marxist ideology. Ask why.
ಮಕ್ಕಳ ಭವಿಷ್ಯ……ವಾ! ಈಗಾಗಲೇ ಅದು ಹಾಳಾಗಿದೆ. ಅದಕ್ಕೆ ಕುಟುಂಬಗಳಲ್ಲಿ ದೊಡ್ಡವರು, ಚಿಕ್ಕವರ ನಡುವೆ, ಗುರುಶಿಷ್ಯ ಗಳ ನಡುವೆ ಯಾವುದೇ ಹಳೆ ಕಾಲದ ಬಂಧ ಕಾಣುತ್ತಿಲ್ಲ.