ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 17, 2015

20

ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೧

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಬ್ರಾಹ್ಮಣ!

ಬ್ರಾಹ್ಮಣಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಇತ್ತೋ ಇಲ್ಲವೋ ಗೊತ್ತಿಲ್ಲ; ಆದರೆ ಕಳೆದ ಹತ್ತು-ಹದಿನೈದು ವರ್ಷಗಳಿಂದ ಇದೊಂದು ಶಬ್ದ ಬಹಳ ಶಬ್ದ ಮಾಡುತ್ತಿದೆ! ಸೊಳ್ಳೆ ಕಡಿದು ಕಾಲು ಕೆಂಪಾಯಿತು ಎನ್ನುವುದರಿಂದ ಹಿಡಿದು ಗ್ರೀಸ್ ದೇಶದ ದಿವಾಳಿತನದವರೆಗೆ ಈ ಜಗತ್ತಿನಲ್ಲಿ ನಡೆದುಹೋದ ಯಾವ ಸಮಸ್ಯೆಯ ಬಗ್ಗೆ ನಮ್ಮ ಬುದ್ಧಿಜೀವಿಗಳನ್ನು ಕೇಳಿದರೂ, ಅವರ ಉತ್ತರ ಶುರುವಾಗುವುದು ಹೀಗೆ: “ಹಸಿವು! ಈ ದೇಶದ ಶೋಷಿತ ಸಮುದಾಯದ ಹಸಿವನ್ನು ತುಳಿದು ಅವರ ಬೆವರ ಹನಿಗಳ ಮೇಲೆ ಅರಮನೆ ಕಟ್ಟಿಕೊಂಡವರು ವೈದಿಕರು. ಇವರ ಉದರದ ಉರಿ ಇಂದುನಿನ್ನೆಯದಲ್ಲ! ಆಳದಲ್ಲಿ ಅಡಗಿ ಸಿಂಬೆ ಸುತ್ತಿಕೊಂಡು ಮಲಗಿರುವ ಈ ಅಸಹನೆಯ ದಂತಗಳಲ್ಲಿ ಪುರಾತನ ಕಾಲದ ವಿಷವಿದೆ. ನೊಂದವನ, ಹಸಿದವನ, ಕೆಳಗೆ ಬಿದ್ದು ಧೂಳಾದವನ ಗೋಳಿಗೆ ಕರಗದೆ ನುಲಿಯದೆ ಸೆಟೆದು ಬಿದ್ದ ಆರ್ಯಪುತ್ರರ ಕರುಳುಗಳಲ್ಲಿ ಕ್ರೌರ್ಯವಿದೆ…” ಈ ಮಾತುಗಳನ್ನು ಹಾಗೇ ಒಂದು ಸಿನೆಮಾದೃಶ್ಯದಂತೆ ಕಲ್ಪಿಸಿನೋಡಿ. ನಿಮಗೆ ಕಾಣುವುದೇನು? ಒಬ್ಬ ಬಳಲಿ ಬೆಂಡಾದ, ಕಡಿದುಹಾಕಿದ ಬಾಳೆಗಿಡದಂತೆ ನೆಲಕ್ಕೆ ಚೆಲ್ಲಿಬಿದ್ದ “ಶೋಷಿತ” ಮತ್ತು ಅವನನ್ನು ಹಿಗ್ಗಾಮುಗ್ಗಾ ಥಳಿಸುವ; ಒದೆಯುವ; ತುಚ್ಛಮಾತುಗಳಿಂದ ಹೀಯಾಳಿಸುವ ರಾಕ್ಷಸರೂಪೀ ಘೋರ “ಆರ್ಯಪುತ್ರ”! ಆ ದಲಿತ ಜೀವ ಉಳಿಸೆಂದು ದಯನೀಯವಾಗಿ ಬೇಡಿಕೊಳ್ಳುತ್ತಿದ್ದಾನೆ; ಆದರೆ ಅವನ ಜೀವ ತೆಗೆದೇ ಸಿದ್ಧ ಎಂದು ಶಪಥ ಹಾಕಿದಂತೆ ಈ ಬ್ರಾಹ್ಮಣ ಅವನಿಗೆ ಬಾರಿಸುತ್ತಿದ್ದಾನೆ! ಜನಿವಾರದ ಈ ಹಾರುವನಿಗೆ ಹುಲಿಗಿರುವಂತಹ ವಿಕಾರ ಕೋರೆಹಲ್ಲುಗಳು! ಅದರಂಚಿನಿಂದ ಕೀವಿನಂತೆ ಒಸರುತ್ತಿರುವ ಅಸಹನೆಯ ವಿಷ! ಅಬ್ಬಾ!

ಈಗ ಆ ವಿವರಗಳನ್ನು ಬದಿಗಿಟ್ಟು ಜಗತ್ತನ್ನು ನೋಡಿ. ಸಿನೆಮ, ಕತೆ-ಕಾದಂಬರಿ ಮತ್ತು ಬುದ್ಧಿಜೀವಿಗಳ ಬುದ್ಧಿವಂತ ಲೇಖನಗಳನ್ನು ಹೊರತುಪಡಿಸಿದರೆ ನಿಮಗೆ ಇಂತಹ ಕೋರೆಹಲ್ಲಿನ ಬ್ರಾಹ್ಮಣ ಎಲ್ಲಾದರೂ ಕಾಣಸಿಗುತ್ತಾನೆಯೇ? ಬೇರೆಯವರ ವಿಷಯ ಎತ್ತುವುದೇನೂ ಬೇಡ; ನಾನು ನನ್ನದೇ ಬಾಲ್ಯದ ಕತೆಯನ್ನು ವಿವರಿಸುತ್ತೇನೆ ಕೇಳಿ. ಅದೊಂದು – ಹೆಚ್ಚೆಂದರೆ ಮೂವತ್ತು ಮನೆಗಳಿದ್ದ; ಪ್ರತಿ ಮನೆಗೆ ಮೂರ್ನಾಲ್ಕು ಜನರಿದ್ದ ಹಳ್ಳಿ. ಬಡಭಾರತದ ಯಾವುದೇ ಹಳ್ಳಿಯನ್ನು ಪ್ರತಿನಿಧಿಸಬಹುದಾಗಿದ್ದ ಗ್ರಾಮೀಣ ಪರಿಸರ. ಅಲ್ಲಿ ಬ್ರಾಹ್ಮಣರವು ಐದಾರು, ಬಿಲ್ಲವ, ಮೊಗವೀರ, ಬಂಟ ಇತ್ಯಾದಿ ಸಮುದಾಯಗಳ ಜನರ ಐದಾರು ಮನೆಗಳಿದ್ದವು. ಒಂದು ಕ್ರಿಶ್ಚಿಯನ್ ಕುಟುಂಬ ಇತ್ತು. ಒಂದು ಮುಸ್ಲಿಮ್ ಕುಟುಂಬ ಇತ್ತು. ಎರಡು-ಮೂರು ಕೊರಗ ಮನೆಗಳಿದ್ದವು. ನೆರೆಯಲ್ಲಿದ್ದ ಬಿಲ್ಲವರ ಮನೆಯವರು ದಿನಾ ಮುಂಜಾನೆ ಮತ್ತು ಸಂಜೆ ನಮ್ಮ ಮನೆಯ ಬಾವಿಯಿಂದ ನೀರು ಸೇದಿಕೊಂಡು ಹೋಗುತ್ತಿದ್ದರು. ಅವರ ಮನೆಯ ಹಿತ್ತಲಲ್ಲಿ ತೋಡಿದ್ದ ಬಾವಿಯಲ್ಲಿ, ಐದಾರು ಮುಂಡು ಇಳಿದ ಮೇಲೆ ಪಾದೆಕಲ್ಲು ಸಿಕ್ಕಿದ್ದರಿಂದ ಮತ್ತೆ ತೋಡಿಕೊಂಡು ಆಳಕ್ಕಿಳಿಯುವ ಸಾಹಸ ಮಾಡುವಂತಿರಲಿಲ್ಲ. ಹಾಗಾಗಿ ಇಡೀ ಕುಟುಂಬ ನಮ್ಮ ಮನೆಯ ಬಾವಿ ನೀರನ್ನೇ ಆಶ್ರಯಿಸಿತ್ತು. ಬೇಸಿಗೆಯಲ್ಲಿ ನಮ್ಮ ಬಾವಿಯಲ್ಲಿ ನೀರು ತಳಕಂಡು, ಕೊಡಪಾನ ಕೂಡ ಮುಳುಗದಷ್ಟು ತತ್ವಾರ ಬಂದರೂ, ನಮ್ಮೆರಡೂ ಮನೆಗಳವರು ನೀರನ್ನು ಸೂಕ್ಷ್ಮವಾಗಿ ಬಳಸಿ ಹೇಗೋ ದಿನ ನೂಕುತ್ತಿದ್ದೆವೇ ಶಿವಾಯಿ ತನ್ನ ಇಡೀ ಜೀವಮಾನದಲ್ಲಿ ಒಮ್ಮೆಯೂ ಮನೆಯ ಹಿರಿಯನಾದ ನನ್ನಜ್ಜನಾಗಲೀ ಉಳಿದವರಾಗಲೀ “ಇನ್ನು ನೀರು ಸೇದಬೇಡಿ” ಎಂದು ಆ ಕುಟುಂಬಕ್ಕೆ ಹೇಳಿದ್ದಿಲ್ಲ.

ಊರಲ್ಲಿ ಹಲವು ಸಂಸಾರಗಳು ಬೀಡಿ ಕಟ್ಟುತ್ತಿದ್ದವು. ಸಂಜೆ ಒಂದೇಳೆಂಟು ಹೆಂಗಸರು ಜೊತೆಯಾಗಿ ಎರಡು ಮೈಲಿ ನಡೆದುಕೊಂಡು ಹೋಗಿ ಕಟ್ಟಿದ ಬೀಡಿ ಕೊಟ್ಟು, ಹೊಸದಾಗಿ ಎಲೆ, ಹೊಗೆಸೊಪ್ಪು ತೆಗೆದುಕೊಂಡು ಬರುತ್ತಿದ್ದರು. ಬಹುಶಃ ಪ್ರತಿ ಹೆಂಗಸು ಇಪ್ಪತ್ತರಿಂದ ಮೂವತ್ತು ರುಪಾಯಿ ದುಡಿಯುತ್ತಿದ್ದರು ಅಂತ ಕಾಣುತ್ತದೆ. ಗಂಡಸರು ಹೊಲದ ಕೆಲಸ ಮಾಡುತ್ತಿದ್ದರು. ಇಂಥಾದ್ದೇ ಕೆಲಸ ಎನ್ನುವ ಕಟ್ಟುಪಾಡೇನಿರಲಿಲ್ಲ. ಹೊಲದಲ್ಲಿ ಬದು ಕಟ್ಟುವುದರಿಂದ ಹಿಡಿದು ಮನೆಗೆ ಮಾಡು ಹೊದೆಸುವುದು, ಕಾಡಲ್ಲಿ ಸೌದೆ ಕಡಿಯುವುದು, ಗೇರುಬೀಜ – ಮಾವಿನ ಹಣ್ಣು ಇತ್ಯಾದಿ ಸಂಗ್ರಹಿಸಿ ಟೌನಿನವರಿಗೆ ಮಾರುವುದು, ಮೇಸ್ತ್ರಿ ಕೆಲಸಕ್ಕೆ ಹೋಗುವುದು, ಗುಡ್ಡೆಗಳಲ್ಲಿ ಕೆಂಪುಕಲ್ಲು ಒಡೆಯುವುದು, ಹೀಗೆ ಅವರು ಮಾಡದ ಕೆಲಸವಿರಲಿಲ್ಲ. ಒಂದು ರೀತಿಯಲ್ಲಿ ಸಕಲ ಕಲಾ ವಲ್ಲಭರೆಂದರೆ ಅವರೇ! ಇನ್ನು, ಊರಲ್ಲಿದ್ದ ಬ್ರಾಹ್ಮಣರ ಕೆಲಸಗಳೂ ತರಹೇವಾರಿ. ತೆಂಗಿನ ತೋಟ, ಹೊಲದಲ್ಲಿ ಭತ್ತ, ಅಡಿಕೆ, ಹಣ್ಣುಹಂಪಲು ಬೆಳೆವ ತೋಟಗಾರಿಕೆ, ಅಡಿಗೆ, ಟೌನಲ್ಲಿ ಚಾದಂಗಡಿ, ಶಾಲೆಯಲ್ಲಿ ಮಾಸ್ತರಿಕೆ ಹೀಗೆ ಅವರದೊಂದಷ್ಟು ಉದ್ಯೋಗಗಳಿದ್ದವು. ಅವನ್ನು ಬಿಟ್ಟರೆ ಊರಿನವರ ಜಾತಕ ನೋಡುವುದು, ತಾಯಿತ ಕಟ್ಟುವುದು, ಒಳ್ಳೆಯ ಕೆಲಸಗಳಿಗೆ ಪಂಚಾಂಗ ಓದಿ ದಿನ ನಿಶ್ಚಯಿಸುವುದು, ನಾಗತನು ಹಾಕುವುದು, ವಿಶೇಷ ಸಮಾರಂಭಗಳಿಗೆ ಪೌರೋಹಿತ್ಯ ಮಾಡುವುದು, ಊರ ದೇವಸ್ಥಾನದಲ್ಲಿ ಅರ್ಚಕನ ಕೆಲಸ ಇವೆಲ್ಲ ಇದ್ದವು. ಯಾರಿಗೂ ಯಾವ ಕೆಲಸದಲ್ಲೂ ನಾಚಿಕೆ, ದುಃಖಗಳಿರಲಿಲ್ಲ. ಭಟ್ರ ಮನೆಗೆ ಮಳೆಗಾಲಕ್ಕೆ ಮೊದಲು, ಒಡೆದ ಹೆಂಚುಗಳನ್ನು ತೆಗೆದು ಹೊಸದಾಗಿ ಮಾಡು ಹೊದೆಸಿದ ದಿನೇಶ, ಊರಲ್ಲಿ ಅದನ್ನೊಂದು ಹೆಮ್ಮೆಯ ವಿಷಯವೆನ್ನುವಂತೆ ಹೇಳಿಕೊಳ್ಳುತ್ತಿದ್ದ. ಮನೆಯಲ್ಲಿ ಮಾಡಿದ ಗಣಹೋಮದ ಪಂಚಕಜ್ಜಾಯ ಪ್ರಸಾದವನ್ನು ನಮ್ಮಜ್ಜ ಪೊಟ್ಟಣಗಳಲ್ಲಿ ಕಟ್ಟಿಕೊಂಡು ಊರಿನ ಸಕಲರಿಗೂ ಮುಟ್ಟಿಸಿಬರುತ್ತಿದ್ದರು. ಇವ ಬ್ರಾಹ್ಮಣ ಅವ ಶೂದ್ರ ಎಂಬ ಭೇದಭಾವ ಆಗ ಅವರಲ್ಲಿ ಇಣುಕಿದ್ದನ್ನು ನಾ ಕಾಣೆ. ಮಳೆಗಾಲದಲ್ಲಿ ನಾಗದೇವರ ತನು ಹಾಕಲು ನಮ್ಮ ಮನೆಗೆ ಸುತ್ತಲೂರಿನ ಹತ್ತು ಹದಿನೈದು ಕುಟುಂಬಗಳು ಬರುತ್ತಿದ್ದವು. ಅವರು ತಂದ ಹಣ್ಣುಕಾಯಿ ಒಡೆದು, ಪೂಜೆ ಮಾಡಿ ಆರತಿ-ಪ್ರಸಾದ ಕೊಟ್ಟರೆ ತಟ್ಟೆಗೆ ಬೀಳುತ್ತಿದ್ದದ್ದು ಎಂಟಾಣೆ, ಒಂದು ರುಪಾಯಿಯ ನಾಣ್ಯಗಳು. ಅದು ಬೇರೆಯವರಿಂದ ಎತ್ತಿದ ಭಿಕ್ಷೆ ಎಂಬ ಭಾವನೆ ಪೂಜೆ ಮಾಡಿದ ಅರ್ಚಕನಿಗಿರುತ್ತಿರಲಿಲ್ಲ. ಭಟ್ಟನಿಗೆ ಭಿಕ್ಷೆ ಹಾಕಿದೆವು ಎಂಬ ಭಾವ ಕೊಟ್ಟ ಶೂದ್ರನಿಗೂ ಇರುತ್ತಿರಲಿಲ್ಲ. ತೀರ್ಥ-ಪ್ರಸಾದ ಕೊಡುವಾಗ ದೇವರ ಮುಡಿಯಿಂದ ಅಜ್ಜಯ್ಯ, ಪಿಂಗಾರವನ್ನೋ ಮಲ್ಲಿಗೆಯನ್ನೋ ಎತ್ತಿ ತೆಗೆದು ಕಣ್ಮುಚ್ಚಿ ಧ್ಯಾನಿಸಿ “ಈ ವರ್ಷವಾದರೂ ನಮ್ಮ ಈ ಹುಡುಗಿಗೆ ಒಳ್ಳೇ ಗಂಡು ಸಿಕ್ಕಿ ಮದುವೆಯಾಗಬೇಕು” ಎಂದು ಹೇಳಿ ಅಂಜಲಿ ಹಿಡಿದ ಕೈಗಳಿಗೆ ಹಾಕುವಾಗ, ಹಾಗೆ ಪ್ರಸಾದ ಪಡೆವ ಹುಡುಗಿ ಮತ್ತವಳ ಹೆತ್ತವರ ಕಣ್ಣುಗಳು ಹನಿಗೂಡುತ್ತಿದ್ದವು. ಜಾತಿಧರ್ಮಗಳ ಎಲ್ಲ ಕಟ್ಟುಗಳನ್ನೂ ಮೀರಿನಿಂತ ಅಂತಹ ನೂರೆಂಟು ಅದ್ಭುತ ಕ್ಷಣಗಳು ನಮ್ಮ ಹಳ್ಳಿಯ ದೈನಂದಿನದಲ್ಲಿ ಸಹಜವೆನ್ನುವಂತೆ ನಡೆದುಹೋಗುತ್ತಿದ್ದವು.

ಇನ್ನು ನಮ್ಮೂರಲ್ಲಿದ್ದ ಕ್ರಿಶ್ಚಿಯನ್ ಕುಟುಂಬದ ವಿಷಯ ಹೇಳಬೇಕು. ಆಕೆಯ ಹೆಸರು ಬಾಯಮ್ಮ. ಬ್ರಾಹ್ಮಣ ವಟುವನ್ನು ಮಾಣಿ ಎಂದ ಹಾಗೆ, ಕ್ರಿಶ್ಚಿಯನ್ ಹೆಂಗಸರನ್ನು ಬಾಯಮ್ಮ ಎನ್ನುವುದು ನಮ್ಮಕಡೆ ವಾಡಿಕೆ. ಈ ಬಾಯಮ್ಮ ಮತ್ತು ನನ್ನ ಅಜ್ಜಿ ಸಮಾನವಯಸ್ಕರು. ಸಮಾನ ಮನಸ್ಕರು ಕೂಡ. ನಮ್ಮ ಮನೆಯಲ್ಲಿದ್ದ ಎರಡು ದನಗಳು ನೀಗಿಕೊಂಡ ಮೇಲೆ; ಇನ್ನೊಂದನ್ನು ಹಾಲಿಗಾಗಿ ತಂದು ಉಪಚಾರ ಮಾಡಲು ನನ್ನಜ್ಜಿಗೂ ಆಗದಿದ್ದಮೇಲೆ ನಮಗೆ ಆಸರೆಯಾಗಿದ್ದು ಈ ಬಾಯಮ್ಮನ ಕುಟುಂಬವೇ. ನಮ್ಮ ಮನೆಯಲ್ಲಿ ಬಂದುಹೋದವರಿಗೆಲ್ಲ ಚಾ ಸಮಾರಾಧನೆ ನಡೆಯುತ್ತಿದ್ದದ್ದು, ಸಾಲಿಗ್ರಾಮ ಸಹಿತ ಎಲ್ಲ ದೇವರುಗಳಿಗೂ ಬೆಳಗ್ಗೆ ಸ್ನಾನಾದಿ ಉಪಚಾರಗಳು ನಡೆಯುತ್ತಿದ್ದದ್ದು ಈ ಬಾಯಮ್ಮನ ಕೊಟ್ಟಿಗೆಯಿಂದ ಬರುತ್ತಿದ್ದ ಹಾಲಿನಿಂದಲೇ! ಆಕೆಯ ಮನೆಗೆ ಹಾಲು ತರಲು ಹೋಗುತ್ತಿದ್ದ ನಾನು, ಕೆಲವೊಮ್ಮೆ ಆಕೆ ಇನ್ನೂ ಹಸು ಬಂದಿಲ್ಲ ಎಂದೋ ಹಾಲು ಕರೆದಾಗಿಲ್ಲ ಎಂದೋ ಕೂರಿಸಿದರೆ ಅವರ ಮನೆಯೊಳಹೊರಗೆಲ್ಲ ಓಡಾಡಿಕೊಂಡಿರುತ್ತಿದ್ದೆ. ಎಷ್ಟೋ ಸಲ ಆಕೆ ನನ್ನನ್ನು ಹುಡುಕುತ್ತ ಬಂದವಳು, ಕೊನೆಗೆ ನಾನು ಏಸುವಿನ ಪಟದ ಎದುರು ಕೂತದ್ದನ್ನು ಕಂಡು “ಅಯ್ಯಯ್ಯೊ ಈ ಮಾಣಿ ಬೈಬಲ್ ಓದ್ತಾ ಉಂಟಲ್ಲ!” ಎಂದು ಆಶ್ಚರ್ಯದಿಂದ ಬಾಯಿಕಳೆದು ನಿಲ್ಲುತ್ತಿದ್ದಳು. ಬಾಯಮ್ಮ ಸತ್ತಾಗ ನನ್ನಜ್ಜಿ, ದೇವರಿಗೆ ತುಪ್ಪದ ದೀಪ ಹಚ್ಚಿಟ್ಟು ಕಣ್ಣೀರು ಹಾಕಿದ್ದು ನನಗೆ ನೆನಪಿದೆ.

ನಮ್ಮೂರಲ್ಲಿದ್ದ ಮುಸ್ಲಿಮ್ ಕುಟುಂಬದ್ದು ಇನ್ನೊಂದು ವಿಚಿತ್ರ ಕತೆ. ಅದೊಂದು ವಾದ್ಯಗಾರರ ಕುಟುಂಬ. ನಮ್ಮ ಊರಲ್ಲಿ ವಾದ್ಯ ನುಡಿಸುವವರು ಅಂತ ಅಧಿಕೃತವಾಗಿದ್ದ ಕಲಾವಿದರ ಕುಟುಂಬ ಅದೊಂದೆ. ಭೂತಕೋಲ ಇರಲಿ, ದೇವಸ್ಥಾನದ ಜಾತ್ರೆ ಇರಲಿ, ಊರಲ್ಲಿ ಯಾವುದೇ ಜಾತಿಯವರ ಮದುವೆಯೇ ಇರಲಿ, ಅಲ್ಲಿ ಇರಲೇಬೇಕಾಗಿದ್ದ ಒಂದು ವಿಶೇಷ ಎಂದರೆ ಹುಸೇನ ಸಾಯ್ಬರ ವಾದ್ಯ. ನಮ್ಮ ಮನೆಯ ಎಲ್ಲಾ ಮದುವೆಗಳಿಗೂ ವಾದ್ಯ ನುಡಿಸಿ, ನವದಂಪತಿಗಳನ್ನು ಹರಸಿ, ಮದುವೆಯ ಊಟವನ್ನು ಮನಸಾರೆ ಉಂಡುಹೋದವರು ಹುಸೇನ್ ಮತ್ತು ಅವರ ಮನೆಯವರು. ನಮ್ಮೂರ ಅತ್ಯಂತ ಪವಿತ್ರ ದೇವಾಲಯಗಳಲ್ಲೂ ಜಾತ್ರೆಗೆ ಈ ಸಾಯ್ಬರ ತಂಡ ವಾದ್ಯ ಊದುತ್ತಿತ್ತು ಎನ್ನುವುದು ಹೊರಗಿನ ಜಗತ್ತಿಗೆ ವಿಶೇಷವಾಗಿ ಕಾಣಬಹುದಾದರೂ ನಮ್ಮಲ್ಲಿ ಅದೇನೂ ಅಂತಹ ವಿಚಿತ್ರ ಸಂಗತಿಯಾಗಿರಲಿಲ್ಲ. ಸೇವೆ ಮುಗಿದ ಮೇಲೆ, ಬಗಲಿಗೆ ವಾದ್ಯ ಸಿಕ್ಕಿಸಿಕೊಂಡು ತಲೆಬಾಗಿ ಬೊಗಸೆಯೊಡ್ಡಿ ನಿಂತ ಸಾಯ್ಬರಿಗೆ ಅರ್ಚಕರು ದೇವಸ್ಥಾನದ ಪ್ರಸಾದ, ಸಂಭಾವನೆಗಳನ್ನು ಕೊಡುತ್ತಿದ್ದರು. ಅದು ಲಾಗಾಯ್ತಿನಿಂದ ಬಂದ ನಡಾವಳಿ. ಹುಸೇನ್ ಸಾಯ್ಬರು ಇನ್ನೊಂದು ಕೋಮಿನ ವ್ಯಕ್ತಿ ಎನ್ನುವ ಚಿಂತನೆ ಅಲ್ಲಿದ್ದ ಯಾರೆಂದರೆ ಯಾರಿಗೂ ಬರುತ್ತಿರಲಿಲ್ಲ ಎನ್ನುವುದೊಂದು ಅಚ್ಚರಿಯ ಸಂಗತಿ!

ಇರಲಿ, ಊರ ಕತೆ ಹೇಳಿಕೊಂಡು ಎಲ್ಲಿಗೋ ಹೋಗಿಬಿಟ್ಟೆ. ಆದರೆ ಮುಖ್ಯವಾಗಿ ನಾನು ಹೇಳಬೇಕಾದ್ದು – ಇಷ್ಟೆಲ್ಲ ವೈವಿಧ್ಯವಿದ್ದ ಆ ಪುಟ್ಟ ಹಳ್ಳಿ, ಅದೊಂದು ಕಾರಣಕ್ಕೆ ಗಿನ್ನೆಸ್ ಪುಸ್ತಕದಲ್ಲಿ ಸೇರಬೇಕಾದ ಹಳ್ಳಿಯೇನಲ್ಲ! ನಾನು ಕಂಡರಿತದ್ದು ಬ್ರಾಹ್ಮಣನಾಗಿ ಅನ್ನುವುದನ್ನು ಬಿಟ್ಟರೆ ಈ ಕತೆಯನ್ನು ಇನ್ನೊಬ್ಬ ಹೇಳಿದ್ದರೂ ಬಹುಶಃ ಹೀಗೆಯೇ ಇರುತ್ತಿತ್ತೆಂದು ನನ್ನೆಣಿಕೆ. ಅಲ್ಲಿ ಬ್ರಾಹ್ಮಣನಿಗೂ ಶೂದ್ರನಿಗೂ ಜಗಳ ಆಗುತ್ತಿರಲಿಲ್ಲವೆ? ಖಂಡಿತಾ ಆಗುತ್ತಿತ್ತು. ಬ್ರಾಹ್ಮಣನ ದನ ಶೂದ್ರನ ಗುಡ್ಡೆಗೆ ನುಗ್ಗಿತೆಂದೋ, ಶೂದ್ರನ ಮನೆಯ ಹುಡುಗ ಸಕಾಲಕ್ಕೆ ತೆಂಗಿನ ಕಾಯಿ ಕೊಯ್ಯಲಿಕ್ಕೆ ಬರದೆ ಅವೆಲ್ಲ ಮರದಲ್ಲೇ ಸುರುಟಿ ಹೋಗುತ್ತಿವೆಯೆಂದೋ ಮಾತು, ಜಗಳಗಳೆಲ್ಲ ಇದ್ದದ್ದೇ. ಆದರೆ, ಈತ ಬ್ರಾಹ್ಮಣ, ಆತ ಶೂದ್ರನೆನ್ನುವ ಕಾರಣವನ್ನಿಟ್ಟುಕೊಂಡು ಆ ಜಗಳವನ್ನು ಯಾರೂ ಆಡುತ್ತಿರಲಿಲ್ಲ. ಅಷ್ಟೆಲ್ಲ ಯಾಕೆ, ಇಬ್ಬರು ಶೂದ್ರರ ನಡುವೆಯೋ ಇಬ್ಬರು ಬ್ರಾಹ್ಮಣರ ನಡುವೆಯೋ ಅದಕ್ಕಿಂತ ಭೀಕರವಾದ ಮಹಾಯುದ್ಧಗಳೇ ನಡೆದುಹೋಗುತ್ತಿದ್ದವು. ಬೇಲಿಯಲ್ಲಿ ಎದ್ದುನಿಂತ ಒಂದು ಮರದ ಗೇರುಬೀಜಗಳು ಯಾರಿಗೆ ಸೇರಬೇಕೆನ್ನುವ ವಿಷಯಕ್ಕೇ ಇಬ್ಬರು ಬ್ರಾಹ್ಮಣ ಹೆಂಗಸರು ತಾರಾಮಾರ ಜಗಳಾಡಿದ್ದನ್ನೂ ನನ್ನೂರು ಕಂಡುಂಡು ಬೆಳೆದಿತ್ತು. ಬದುಕಿನ ಬಹುಪಾಲನ್ನು ಕಾಡಲ್ಲಿ ಕಳೆಯುತ್ತಿದ್ದ ದಲಿತರ ಬದುಕು ಬ್ರಾಹ್ಮಣನಾದ ನನಗೆ ಆಗಲೂ ಒಂದಷ್ಟು ನಿಗೂಢವೇ ಆಗಿತ್ತೆನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಹಾಗಂತ ಅವರೇನೂ ನಮಗೆ ಬಹಿಷ್ಕೃತರಾಗಿರಲಿಲ್ಲ. ಕಾಡಿನ ಜೇನು ಹಿಂಡಿ ತರುತ್ತಿದ್ದದ್ದು, ಬಿದಿರಿನ ಬುಟ್ಟಿ ಹೆಣೆದುಕೊಡುತ್ತಿದ್ದದ್ದು, ಕರಡಿಯ ಕೂದಲು, ಹುಲಿಯ ಉಗುರು, ಚಂದನದ ತುಂಡು ಎನ್ನುತ್ತ ನಾವು ಹುಡುಗರು ಆಸೆಯಿಂದ ಕೇಳಿದ್ದನ್ನೆಲ್ಲ ಗುಟ್ಟಾಗಿ ತಂದುಕೊಡುತ್ತಿದ್ದವನು ನಮ್ಮೂರ ಕೊರಗ ಜನಾಂಗದ ತನಿಯ. ಹಳ್ಳಿಯಲ್ಲಿ ಭೂತಕೋಲಕ್ಕೆ ಅಣಿ ಕಟ್ಟುತ್ತಿದ್ದವನು ತನಿಯನ ಅಣ್ಣ ಬೋಜ. ಭೂತ, ಈ ಬೋಜನ ಮೂಲಕ ಊರಿನ ಸುಖಕಷ್ಟ ವಿಚಾರಿಸುತ್ತದೆ ಎನ್ನುವ ನಂಬಿಕೆ ಇತ್ತು. ಭೂತಕ್ಕೆ ಆವೇಶ ಭರಿಸಲು ಹುಸೇನ್ ಸಾಯ್ಬರು ಜೀವವೇ ಕೊರಳಾದಂತೆ ತನ್ಮಯರಾಗಿ ವಾದ್ಯ ನುಡಿಸುತ್ತಿದ್ದರು. ಭೂತದಲ್ಲಿ ಪರಿಹಾರ ಕೇಳಲು ಸಾಲುಗಟ್ಟಿ ನಿಲ್ಲುವವರಲ್ಲಿ ಜಾತಿಭೇದಗಳು ಇರಲು ಸಾಧ್ಯವಿತ್ತೆಂಬ ಯೋಚನೆ ಕೂಡ ಬಾಲಿಶವಾಗುತ್ತದೆ! ಜಾತಿಗಳ ನಡುವೆ ಕಿಚ್ಚು ಹತ್ತುವುದೇ ಆಗಿದ್ದರೆ ಒಬ್ಬಂಟಿ ಬಾಯಮ್ಮನನ್ನೋ ಹುಸೇನ್ ಸಾಯ್ಬರ ಅವಿಭಕ್ತ ಸಂಸಾರವನ್ನೋ ಬಹುಸಂಖ್ಯಾತ ಹಿಂದೂಗಳು ಮೊದಲು ಓಡಿಸಬೇಕಾಗಿತ್ತಲ್ಲ? ಮನುಸ್ಮೃತಿಯನ್ನು ಪಾರಾಯಣ ಮಾಡಿದ ಬ್ರಾಹ್ಮಣರು ಗುಟ್ಟಾಗಿ ಸೀಸದ ದಾಸ್ತಾನು ಇಟ್ಟುಕೊಳ್ಳಬೇಕಿತ್ತಲ್ಲ? ಅಬ್ರಾಹ್ಮಣರಿಗೆ ಅನ್ನವಿಕ್ರಯ ಮಾಡಲು ಜನಿವಾರದವರು ಹಿಂದೇಟು ಹಾಕಬೇಕಿತ್ತಲ್ಲ? ಬಾಯಮ್ಮ ಬೆಳೆದ ಸೂಜಿಮಲ್ಲಿಗೆ ದೇವರ ಮುಡಿಗೇರುವುದನ್ನು ಕನಸಲ್ಲಾದರೂ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿತ್ತೆ?

-2-

ಬಾಲ್ಯದಲ್ಲಿ ಇಂತಹ ಹಳ್ಳಿಯ ಆಗುಹೋಗುಗಳನ್ನು ಹತ್ತಿರದಿಂದ ನೋಡಿ ಬೆಳೆದ ನನಗೆ ಮತ್ತು ನನ್ನಂಥ ಅನೇಕರಿಗೆ ಶಾಲೆಗಳಲ್ಲೂ ಎಂದಿಗೂ ಈ ಜಾತೀಯತೆಯ ಪ್ರಶ್ನೆ ಕಾಡಿದ್ದಿಲ್ಲ. ಗುರುಗಳು ಅಪ್ಪಿತಪ್ಪಿ ಕೂಡ ವಿದ್ಯಾರ್ಥಿಗಳನ್ನು ಅವರ ಜಾತಿಗೆ ಅನುಗುಣವಾಗಿ ಉಪಚಾರಗಳನ್ನು ಮಾಡಿದ್ದಿಲ್ಲ. ಕೋಮುದ್ವೇಷ, ದಲಿತ ದೌರ್ಜನ್ಯ, ಹಿಂದುಳಿದವರ ಶೋಷಣೆ ಮುಂತಾದ ಹತ್ತಾರು ಸಮಸ್ಯೆಗಳನ್ನು ನಾವು ಕಂಡದ್ದು ಅಕ್ಷರ ಕಲಿತು ನಮ್ಮ ದೇಶದ ಘನ ಬುದ್ಧಿಜೀವಿಗಳು ತಿದ್ದಿ ತೀಡಿ ನಿರ್ದೇಶಿಸಿ ರೂಪಿಸಿದ ಚರಿತ್ರೆಯ ಪುಸ್ತಕ ಓದಲು ಶುರುಮಾಡಿದ ಮೇಲೆ! ನಮ್ಮ ಬುದ್ಧಿಜೀವಿಗಳಿಗೆ ನಮ್ಮ ದೇಶದಲ್ಲಿ ಕೋಮುದಳ್ಳುರಿ ಬಾನೆತ್ತರಕ್ಕೆ ಹಾರುತ್ತಿರುವುದು ಕಾಣುತ್ತದೆ. ವೈದಿಕ ಜಾತಿವಾದಿಗಳು ಉಳಿದವರನ್ನೆಲ್ಲ ಕಪಿಮುಷ್ಠಿಯಲ್ಲಿಟ್ಟುಕೊಂಡಂತೆ ಇವರಿಗೆ ಕನಸು ಬೀಳುತ್ತದೆ. ದಲಿತರನ್ನು ಜನಿವಾರ ಹಾಕಿಕೊಂಡವರ ಪಡೆ ಅತಿಕ್ರೂರವಾಗಿ ಹಿಂಸಿಸಿದ್ದನ್ನು ಇವರು ತಮ್ಮ ದಿವ್ಯಚಕ್ಷುಗಳಿಂದ ಕಾಣುತ್ತಾರೆ. ಯಾಕೆ ಗೊತ್ತೆ? ಯಾಕೆಂದರೆ ನಮ್ಮಲ್ಲಿ ಬುದ್ಧಿಜೀವಿಗಳೆಂದು ಕರೆಸಿಕೊಳ್ಳುತ್ತಿರುವ 99% ವಿಧ್ವಂಸಕ ವಿದ್ವಾಂಸರಿಗೆ ಹಳ್ಳಿಯ ಬದುಕನ್ನು ಕಂಡುಂಡು ಗೊತ್ತಿಲ್ಲ. ಇನ್ನು, ಹಳ್ಳಿಯಿಂದ ಬಂದಿರಬಹುದಾದ ಉಳಿದೊಂದು ಪರ್ಸೆಂಟ್ ಜನಕ್ಕೆ ಒಂದೋ ತಾವು ಬೆಳೆದ ಹಳ್ಳಿಜೀವನದ ಬಗ್ಗೆ ಅಸಾಧ್ಯ ತಾತ್ಸಾರವಿದೆ ಇಲ್ಲವೇ ಸರಕಾರದ ಕೃಪೆಯ ಕಣ್ಣಿಗೆ ಬಿದ್ದು ಪಾವನರಾಗಲು ಅವರು ತಮ್ಮ ಪೂರ್ವಾಶ್ರಮದ ಕತೆಯನ್ನು ಮರೆಸಬೇಕಾಗಿದೆ. ನಮ್ಮ ಬುದ್ಧಿಜೀವಿಗಳು ಭಾರತದ ಸಮಸ್ಯೆಗಳನ್ನು ಕಂಡದ್ದು ವಿದೇಶೀ ಪುಸ್ತಕಗಳ ಕನ್ನಡಕದ ಮೂಲಕ. ಹಾಗಾಗಿ ಅವರ ವಾದ-ಮೀಮಾಂಸೆಗಳಲ್ಲಿ ವಸಾಹತುಕರಣ, ಪುರೋಹಿತಶಾಹಿ, ಬಲಪಂಥೀಯ, ಮೇಲ್ವರ್ಗ-ಕೆಳವರ್ಗ ಮುಂತಾದ ಐರೋಪ್ಯ ಜಗತ್ತಿನ ಪಾರಿಭಾಷಿಕ ಪದಪುಂಜಗಳು ಎರ್ರಾಬಿರ್ರಿ ಕುಣಿಯುತ್ತವೆ. ಯುರೋಪಿನಲ್ಲಿ ಚರ್ಚುಗಳು ಸಮಾಜದ ಮೇಲೆ ತಮ್ಮ ಪ್ರಭಾವ ಬೀರಿ ಏಕಸ್ವಾಮ್ಯವನ್ನು ಗಳಿಸಲು ಯತ್ನಿಸಿದ್ದನ್ನೇ ಭಾರತದ ಸಂದರ್ಭಕ್ಕೆ ಇಳಿಸಲು ಯತ್ನಿಸಿದ ಬುದ್ಧಿಜೀವಿಗಳಿಗೆ, ಇಲ್ಲಿ, ಚರ್ಚಿನ ಪಾದ್ರಿಗಳಿಗೆ ಪರ್ಯಾಯವಾಗಿ ಬ್ರಾಹ್ಮಣರು ಕಂಡರು!

ಯುರೋಪಿನ ಚರ್ಚುಗಳು ಅಲ್ಲಿ ಆಡಳಿತಗಾರರ ಮೇಲೆ ಪ್ರಭಾವ ಬೀರುತ್ತಿದ್ದವು. ನಗರ ಅಥವಾ ರಾಜ್ಯದ ಆಡಳಿತ ಹೇಗಿರಬೇಕು; ಯಾವ ಕಾನೂನು ಜಾರಿಗೆ ಬರಬೇಕು ಎಂಬೆಲ್ಲ ಅಂಶಗಳನ್ನೂ ನಿರ್ಧರಿಸುತ್ತಿದ್ದದ್ದು ಚರ್ಚುಗಳೇ. ಅಲ್ಲದೆ, ಪ್ರಜೆಗಳಿಂದ ಇಂತಿಷ್ಟು ಕಪ್ಪಕಾಣಿಕೆ ಬರಲೇಬೇಕೆಂದು ಚರ್ಚುಗಳ ಮುಖ್ಯಸ್ಥರು ಹುಕುಂ ಜಾರಿಮಾಡುತ್ತಿದ್ದರು. ಒಟ್ಟಲ್ಲಿ ಚರ್ಚೇ ಆಡಳಿತದ ಸರ್ವೋಚ್ಛಪೀಠ; ರಾಜನ ಕಿರೀಟವೇನಿದ್ದರೂ ಅದಕ್ಕಿಂತ ಒಂದು ಮೆಟ್ಟಿಲು ಕೆಳಗೆ ಎಂಬಂಥ ಪರಿಸ್ಥಿತಿ ಇತ್ತು. ಇದನ್ನು ನಮ್ಮ ದೇಶದ ದೇವಸ್ಥಾನಗಳ ವ್ಯವಸ್ಥೆಗೆ ಸಮೀಕರಿಸಬಹುದೇ ಎಂದು ಒಮ್ಮೆ ಕೇಳಿಕೊಳ್ಳಿ. ನಮ್ಮ ದೇಶದಲ್ಲಿ ದೇವಸ್ಥಾನಗಳು ರಾಜರನ್ನು ಕೈಗೊಂಬೆಯಾಗಿ ಕುಣಿಸಿದ್ದು ಯಾವಾಗ? ದೇವಸ್ಥಾನದ ವ್ಯವಹಾರಕ್ಕೆ ಸಂಬಂಧಪಟ್ಟಂತೆ ರಾಜರು ಅರ್ಚಕರ ಸಲಹೆ ಕೇಳುತ್ತಿದ್ದರೇ ಹೊರತು ರಾಜ್ಯಾಡಳಿತದ ಯಾವ ಸಂದರ್ಭದಲ್ಲಿ ದೇವಸ್ಥಾನದ ಭಟ್ಟನನ್ನು ಮಂತ್ರಿಯ ಸ್ಥಾನದಲ್ಲಿ ಕುಳ್ಳಿರಿಸಿ ಮಂತ್ರಾಲೋಚನೆ ನಡೆಸಿದ್ದಾರೆ? ರಾಜ ಕೊಟ್ಟ ಉಂಬಳಿಯ ಮೇಲೆ ದೇವಸ್ಥಾನದ ಆಗುಹೋಗು ನಡೆಯುತ್ತಿತ್ತೇ ಹೊರತು, ದೇವಸ್ಥಾನವೇ ಮುಂದೆ ನಿಂತು ಪ್ರಜೆಗಳಿಂದ ಎಂದು ತೆರಿಗೆ ಸುಲಿಗೆ ಮಾಡುತ್ತಿತ್ತು? ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ, ಊರಿನ ಮುಖಂಡರಲ್ಲೊಬ್ಬ ದೇವಸ್ಥಾನದ ಆಡಳಿತ ಮೋಕ್ತೇಸರನಾಗುವ ಕ್ರಮವುಂಟೇ ಹೊರತು ಅದು ಬ್ರಾಹ್ಮಣನೇ ಆಗಬೇಕೆಂಬ ಕಟ್ಟಳೆ ಎಲ್ಲಾದರೂ ಇದೆಯೇ? ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಯ ಪಟ್ಟ ತಮಗೆ ಸಿಗಬೇಕು ಎಂದು ಬ್ರಾಹ್ಮಣರು ಜಗಳ ಕಾಯ್ದ ಉದಾಹರಣೆ ಇತಿಹಾಸದಲ್ಲಿ ಯಾವತ್ತಾದರೂ ದಾಖಲಾದದ್ದುಂಟೆ? ನನಗೆ ಗೊತ್ತಿದ್ದ ಮಟ್ಟಿಗೆ ನಮ್ಮೂರ ಕಡೆಯಲ್ಲಿ ಬಹಳಷ್ಟು ದೇವಸ್ಥಾನಗಳ ಆಡಳಿತ ಮುಖ್ಯಸ್ಥರು ಬಂಟ ಅಥವಾ ಬಿಲ್ಲವ ಸಮುದಾಯಕ್ಕೆ ಸೇರಿದವರು. ಅದಕ್ಕೆ, ಆಡಳಿತದ ವಿಷಯದಲ್ಲಿ ಬ್ರಾಹ್ಮಣನ ಅನುಭವ ಕಡಿಮೆ ಎನ್ನುವುದು ಒಂದು ಕಾರಣ; ದೇವಸ್ಥಾನದ ದೇಖರೇಖಿ ನೋಡಿಕೊಳ್ಳುವಾಗ ಅಬ್ರಾಹ್ಮಣ ಸಮುದಾಯದೊಡನೆ ಹೆಜ್ಜೆಹೆಜ್ಜೆಗೂ ವ್ಯವಹರಿಸಬೇಕಾಗುತ್ತದೆ ಎನ್ನುವುದು ಎರಡನೆ ಕಾರಣ. ಇಲ್ಲಿ ಹಾಗಾದರೆ ಬುದ್ಧಿಜೀವಿಗಳು ಹೇಳುವ ಪುರೋಹಿತಶಾಹಿ ಯಾರು?

ದಲಿತರನ್ನು ಬ್ರಾಹ್ಮಣರು ಈ ದೇಶದಲ್ಲಿ ಹುಳುಗಳಂತೆ ಕಂಡರು; ಅವರ ಜೀವನವನ್ನು ಬರ್ಬಾದ್ ಮಾಡಿದರು; ತಮ್ಮ ಉಗುರಿಂದ ಪರಚಿದರು, ವಿಷಯುಕ್ತ ಕೋರೆಹಲ್ಲುಗಳಿಂದ ಕಚ್ಚಿದರು, ರಕ್ತ ಹೀರಿದರು ಎಂಬ ದೊಡ್ಡ ಮಹಾಕಾವ್ಯವನ್ನೇ ಬುದ್ಧಿಜೀವಿಗಳು ಬರೆದಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಿಂದ ಈ ಕಾವ್ಯದ ಸಾಲುಗಳನ್ನೇ ಪಠ್ಯಪುಸ್ತಕಗಳಲ್ಲಿ ತುಂಬಿ ದೇಶದ ಯುವಪೀಳಿಗೆ ಅದನ್ನು ನಂಬುವಂತೆ ಮಾಡಲಾಗಿದೆ. ಇದರ ಹಿಂದಿದ್ದ ಪರಮೋದ್ಧೇಶಗಳು ಸ್ಪಷ್ಟ. ದಲಿತರನ್ನು ಸತಾಯಿಸಿದ ಎಲ್ಲರನ್ನೂ ಎದುರು ಹಾಕಿಕೊಳ್ಳುವುದು ಆಗದ ಮಾತು. ದೇಶದ ಮುಕ್ಕಾಲು ಪಾಲು ಜನರಿಗೆ “ನೀವು ಇದುವರೆಗೆ ಮಾಡಿದ್ದು ತಪ್ಪು” ಎಂದರೆ, ಅವರೆಲ್ಲ ಸೇರಿ ಬುದ್ಧಿಜೀವಿಗಳ ಹಲ್ಲುದುರಿಸಿ ಮೂಳೆ ಮುರಿದು ಮೂಲೆಯಲ್ಲಿ ಕೂರಿಸಿಯಾರು! ಹಾಗಾಗಿ, ಸಾಫ್ಟ್ ಟಾರ್ಗೆಟ್ ಆಗಿರುವವನು ಬ್ರಾಹ್ಮಣ ಮಾತ್ರ! ದೇಶದಲ್ಲಿ ಹುಡುಕಿದರೆ ಸಿಗುವುದು ಎರಡೋ ಮೂರೋ ಪರ್ಸೆಂಟ್ ಹಾರುವರು. ದಲಿತರನ್ನು ಈ ಅಲ್ಪಸಂಖ್ಯಾತ ನಾಮಧಾರಿಗಳ ವಿರುದ್ಧ ಎತ್ತಿಕಟ್ಟಿದರೆ ತಮ್ಮ ಬೇಳೆಯನ್ನು ಸುಲಭವಾಗಿ ಬೇಯಿಸಿಕೊಳ್ಳಬಹುದು. ಒಡೆದು ಆಳುವ ಈ ನೀತಿಯಿಂದಾಗಿ ಉಳಿದವರ ಬೆಂಬಲ ಬ್ರಾಹ್ಮಣರಿಗೆ ಸಿಗದೆ ಇರುವಂತೆಯೂ ಮಾಡಬಹುದು! ಆ ಮೂಲಕ ಇತರರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ತಮ್ಮ ಅಜೆಂಡಾವನ್ನು ಅವರ ತಲೆಯಲ್ಲಿ ತುಂಬಿಸಬಹುದು. ಒಂದೇ ಕಲ್ಲಿಗೆ ಹಲವು ಹಣ್ಣುಗಳನ್ನು ಹೊಡೆದುರುಳಿಸಲು ಸುವರ್ಣ ಅವಕಾಶ! ದಲಿತರ ಕಿವಿಗೆ ಸೀಸ ಸುರಿದ ಒಬ್ಬನೇ ಒಬ್ಬ ಖಳನಾಯಕನನ್ನು ತೋರಿಸಿ ಎಂದರೆ ನಮ್ಮ ಬುದ್ಧಿಜೀವಿಗಳು ಗ್ರಾಮಾಫೋನಿನ ಪ್ಲೇಟ್ ತಿರುಗಿಸಿಹಾಕಿ “ಹಸಿವು! ಶೋಷಣೆ! ಮನುಸ್ಮೃತಿ! ದೌರ್ಜನ್ಯ!” ಎಂದು ಮತ್ತೆ ಹಳೇರಾಗ ಹಾಡಲು ಶುರುಮಾಡುತ್ತಾರೆ. ಏಳು ದಶಕಗಳಿಂದ ಬಿಡುತ್ತಾ ಬಂದಿರುವ ಬಿಟ್ಟಿ ಬುರುಡೆ ಇದು. ನಿದ್ದೆಯಲ್ಲಿ ಕೇಳಿದರೂ ಈ ಶೋಷಿತರ ರಾಷ್ಟ್ರಗೀತೆಯನ್ನು ಅವರು ಕ್ರಮಬದ್ಧವಾಗಿ ಹಾಡಬಲ್ಲರು.

ಉಳಿದವರ ವಿಚಾರ ಹೇಗೋ ಗೊತ್ತಿಲ್ಲ; ಆದರೆ, ನಾನು ಶಾಲೆ ಕಲಿಯುವಾಗ ನನ್ನ ಅಕ್ಕಪಕ್ಕದ ಹುಡುಗರ ಜಾತಿ ಅಪ್ಪನಾಣೆ ನನಗೆ ಗೊತ್ತಿರಲಿಲ್ಲ! ದಲಿತ, ಶೂದ್ರ, ಬಂಟ, ಬ್ರಾಹ್ಮಣ ಎನ್ನುತ್ತ ಶ್ರೇಣೀಕೃತ ವ್ಯವಸ್ಥೆಯ ಪ್ರಕಾರ ಹುಡುಗರನ್ನು ಕೂರಿಸುವ ಪದ್ಧತಿ ಇರಲಿಲ್ಲ. ಜಾತಿ ಎನ್ನುವುದು ಶಾಲೆಯ ಪ್ರವೇಶ ಅರ್ಜಿಗಷ್ಟೆ ಸೀಮಿತವಾಗಿದ್ದ ಸಂಗತಿ. ಎಲ್ಲರೊಂದಿಗೆ ಕೂತು ಪಾಠ ಕೇಳುವಾಗ, ಆಟೋಟಗಳಲ್ಲಿ ಮನದಣಿಯೆ ಕಳೆದುಹೋಗುವಾಗ, ಹೋಟೇಲಿನಲ್ಲಿ ಒಟ್ಟೊಟ್ಟಿಗೆ ಕೂತು ಇಡ್ಲಿದೋಸೆ ತಿನ್ನುವಾಗ, ಮಧ್ಯಾಹ್ನದ ಲಂಚ್‍ಬ್ರೇಕ್‍ನಲ್ಲಿ ವೃತ್ತಾಕಾರವಾಗಿ ಕೂತು ಒಬ್ಬರ ಬುತ್ತಿಯನ್ನು ಇನ್ನೊಬ್ಬರು ಹಕ್ಕಿಂದ ಹಂಚಿಕೊಳ್ಳುವಾಗ ನಮಗೆ ಜಾತಿ ಒಂದು ಪ್ರಶ್ನೆಯಾಗಲೀ ಸಮಸ್ಯೆಯಾಗಲೀ ಆಗಿರಲಿಲ್ಲ. ಇದು ಬಹುಶಃ ನನ್ನ ಓರಗೆಯ ಬೇರೆಲ್ಲ ಜಾತಿಯ ಹುಡುಗರ ಅನುಭವವಾಗಿತ್ತೆಂದು ನನ್ನ ನಂಬಿಕೆ. ಇನ್ನು ದೇವಸ್ಥಾನಕ್ಕೆ ಪ್ರವೇಶ ದಕ್ಕಿಸುವುದು ನಮ್ಮೂರ ಯಾರಿಗೂ ಸವಾಲಿನ ಪ್ರಶ್ನೆಯಾಗಿರಲಿಲ್ಲ. ಕೇರಿಗೊಂದು ಗುಡಿಗುಂಡಾರವಿದ್ದ ಆ ಊರಿನಲ್ಲಿ ಯಾವ ದಲಿತ ಬೇಕಾದರೂ ಸಲೀಸಾಗಿ ದೇವರ ದರ್ಶನ ಮಾಡಿಕೊಂಡು ಬರಬಹುದಾಗಿತ್ತು. ದೇಗುಲ ಪ್ರವೇಶವೇ ನಮ್ಮ ಕಾಲದ ಅತಿದೊಡ್ಡ ರಾಷ್ಟ್ರೀಯ ಸಮಸ್ಯೆಯಾಗಿದೆ ಎಂದು ನನಗೆ ಗೊತ್ತಾದದ್ದು ಪದವಿ-ಗಿದವಿ ಎಲ್ಲ ಮುಗಿದು ಕೆಲಸಕ್ಕೆ ಸೇರಿದ ಮೇಲೆ; ಕೆಲಸಕ್ಕೆ ಬಾರದ ಬುದ್ಧಿಜೀವಿಗಳ ಬುದ್ಧಿವಂತ ಥೀಸೀಸುಗಳನ್ನು ಓದಿದ ಮೇಲೆ!

ತೀರ ಇತ್ತೀಚೆಗೆ, ತನ್ನನ್ನು ತಾನು ಮಹಾಚಿಂತಕ ಎಂದು ಭ್ರಮಿಸಿಕೊಂಡ ವೃದ್ಧರೊಬ್ಬರು, “ಹಿಂದಿನ ಕಾಲದಲ್ಲಿ ಬ್ರಾಹ್ಮಣರು ದಲಿತರ ಮೇಲೆ ಮಾಡಿರುವ ಅತ್ಯಾಚಾರಕ್ಕೆ ಈಗ ನಾವೆಲ್ಲ ನಾಚಿಕೆ ಪಡಬೇಕು; ಪಶ್ಚಾತ್ತಾಪ ಪಡಬೇಕು” ಎಂದು ಅಪ್ಪಣೆ ಕೊಡಿಸಿದರು. ನಮ್ಮ ಇತಿಹಾಸವನ್ನು ಸ್ವಲ್ಪ ತೆರೆದು ನೋಡಿದರೆ ನಮಗೆ ನಮ್ಮ ಕಾಲದ ಇಬ್ಬರು ಮಹಾನ್ ಅತ್ಯಾಚಾರಿಗಳು ಮುಘಲರು ಮತ್ತು ಬ್ರಿಟಿಷರು ಎನ್ನುವುದು ಗೊತ್ತಾಗುತ್ತದೆ. ಘಜ್ನಿಯಿಂದ ಹಿಡಿದು ಔರಂಗಜೇಬನವರೆಗೆ ಮುಘಲ್ ಸಂತತಿ ನಮ್ಮ ದೇಶದ ಎಷ್ಟೊಂದು ಜನರ ಮೇಲೆ ಎಂತೆಂಥಾ ವಿಧಗಳಲ್ಲಿ ಅತ್ಯಾಚಾರ ಮಾಡಿತೆನ್ನುವುದನ್ನು ಇತಿಹಾಸಕಾರರು ಬರೆದಿಟ್ಟಿದ್ದಾರೆ. ಈ ಘೋರಚರಿತ್ರೆಯನ್ನು ನೆನೆದು ಮುಘಲರ ಮೊಮ್ಮಕ್ಕಳು, ಮರಿಮಕ್ಕಳು ಈ ದೇಶದಲ್ಲಿ ಎಂದಾದರೂ ಕಣ್ಣೀರು ಹಾಕಿದ್ದನ್ನು ಕಂಡಿದ್ದೀರಾ, ಕೇಳಿದ್ದೀರಾ? ಬ್ರಿಟಿಷರು ಈ ದೇಶವನ್ನು ನಾಲ್ಕುನೂರು ವರ್ಷಗಳ ಕಾಲ ದೋಚಿ ಬರಿದಾಗಿಸಿದರು ಎಂದು ಯಾವ ಚರ್ಚಿನಲ್ಲಾದರೂ ಸಾಮೂಹಿಕ ವಿಷಾದಗೀತೆ ನುಡಿಸಿದ ಉದಾಹರಣೆ ಇದೆಯೆ? ಇಲ್ಲ, ಇಲ್ಲ! ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಈ ದೇಶಕ್ಕೆ ಎಂತೆಂಥಾ ಕೊಡುಗೆ ಕೊಟ್ಟರು! ಪಾಪ, ಅದನ್ನು ಬರೆಯಲು ನೆಹರೂಜೀಗೆ ಒಂದು ಇತಿಹಾಸ ಪುಸ್ತಕ ಸಾಕಾಗಲಿಲ್ಲ!

ಗುಜರಾತಿನ ಸೋಮನಾಥ ದೇವಾಲಯವನ್ನು ಉಳಿಸಿಕೊಳ್ಳಲು ಆ ಊರಿನ ಬ್ರಾಹ್ಮಣರು ಒಗ್ಗಟ್ಟಾಗಿ ಬಂದು ಘಜನಿಗೆ ಬಹುದೊಡ್ಡ ಮೊತ್ತದ ಕಾಣಿಕೆ ಅರ್ಪಿಸುವ ಪ್ರಸ್ತಾವನೆ ಇಟ್ಟಾಗ ಆತ “ಸತ್ತು ಸ್ವರ್ಗಕ್ಕೆ ಹೋದಾಗ ಸರ್ವಶಕ್ತ ದೇವರು ನನಗೆ – ಕಾಣಿಕೆಯ ಆಸೆಗಾಗಿ ಮೂರ್ತಿಪೂಜೆ ಮಾಡುವ ಪ್ರಾರ್ಥನಾಸ್ಥಳವನ್ನು ಭಂಗಿಸದೆ ಬಿಟ್ಟುಬಂದ ಕಾಫಿರ ನೀನು – ಅಂದಾನು” ಎಂದು ಹೇಳಿ ಪ್ರಸ್ತಾವನೆಯನ್ನು ತಿರಸ್ಕರಿಸಿ ದೇಗುಲದ ನಾಶಕ್ಕೆ ಮುಂದಡಿಯಿಡುತ್ತಾನೆ. ನೆಹರೂ ಎಂಬ ಬುದ್ಧಿಜೀವಿಗಳ ಮಹಾಗುರು, ಈ ಸತ್ಯವನ್ನು ಮರೆಮಾಚಿ “ತನ್ನ ರಾಜ್ಯವನ್ನು ಭವ್ಯವಾಗಿ ಕಟ್ಟುವ ಸಲುವಾಗಿ ಘಜನಿ ಗುಜರಾತನ್ನು ಸೂರೆ ಹೊಡೆದ” ಎಂದು ಬರೆಯುತ್ತಾರೆ. ಗುಜರಾತ, ಅಷ್ಟೆ! ಸೋಮನಾಥ ದೇಗುಲವನ್ನು ಲೂಟಿ ಹೊಡೆದದ್ದು, ಅಲ್ಲಿದ್ದ ಲಿಂಗವನ್ನು ತಾನಾಗಿ ಪುಡಿಗುಟ್ಟಿ ಅದನ್ನು ತನ್ನ ರಾಜ್ಯದಲ್ಲಿ ಮಸೀದಿ ಕಟ್ಟಲು ಒಯ್ದದ್ದು – ಇವುಗಳ ಸುದ್ದಿಯೇ “ಡಿಸ್ಕವರಿ ಆಫ್ ಇಂಡಿಯಾ”ದಲ್ಲಿ ಬರುವುದಿಲ್ಲ. ಎಲ್ಲಕ್ಕಿಂತ ಮೇಲಾಗಿ, ಇಡೀ ರಾಜ್ಯದ ಪ್ರಜಾಕೋಟಿ ಘಜನಿಯ ದಾಳಿಗೆ ಸಿಕ್ಕಿ ಬೆನ್ನು ಮುರಿದು ಬಿದ್ದಿರುವಾಗ, ದೇವಸ್ಥಾನವನ್ನು ಉಳಿಸಲು ಒಂದಾಗಿ ಮುಂದೆ ಬಂದುನಿಲ್ಲುವ ಬ್ರಾಹ್ಮಣರ ಪ್ರಸ್ತಾಪ ಆ ಪುಸ್ತಕದ ಯಾವ ಪುಟದಲ್ಲೂ ಇಲ್ಲ. ಅಲ್ಲಿಂದ ಶುರುವಾದ ವಿಪ್ರತಾತ್ಸಾರ, ಭತ್ರ್ಸನೆ, ಟೀಕೆಗಳು ಇಂದಿನವರೆಗೂ ಎಗ್ಗಿಲ್ಲದೆ ಮುಂದುವರಿದಿದೆ. ನೆಹರೂ ಹಾಕಿದ ಅಡಿಪಾಯದ ಮೇಲೆ ಅರಮನೆ ಕಟ್ಟಿದ ನಮ್ಮ ದೇಶದ ಬುದ್ಧಿಜೀವಿ ಸಮುದಾಯ ಬರೆದ ಚರಿತ್ರೆಯಲ್ಲಿ ಅರ್ಧಸತ್ಯಗಳು, ಅಸತ್ಯಗಳದ್ದೇ ಮೆರವಣಿಗೆ. ಈ ದೇಶವನ್ನು ಮುನ್ನೂರು ವರ್ಷಗಳ ಕಾಲ ತಿಗಣೆಯಂತೆ ಹೀರಿದ ಮುಘಲ್ ಸಾಮ್ರಾಜ್ಯದ ದೊರೆಗಳನ್ನು “ದಿ ಗ್ರೇಟ್” ಎಂಬ ಉಪಾಧಿ ಕೊಟ್ಟು ಪಠ್ಯಪುಸ್ತಕಗಳಲ್ಲಿ ಪುಟಗಟ್ಟಲೆ ಹೊಗಳಲಾಯಿತು. ಆದರೆ, ಮುಘಲರನ್ನು ಬಗ್ಗುಬಡಿಯಲು ಎದೆ ಸೆಟೆಸಿನಿಂತ ಶುದ್ಧ ಭಾರತೀಯ ರಕ್ತದ ಪೇಶ್ವೆಗಳನ್ನು ಮಾತ್ರ ಕಳ್ಳರು, ಹೇಡಿಗಳೆಂಬಂತೆ ತೋರಿಸಲಾಯಿತು. ಭಾರತದಲ್ಲಿ ಆಳಿದಷ್ಟು ಕಾಲವೂ ರಾಜ್ಯದಲ್ಲಿ ಬಾಳುವ ಹೆಂಗಸರಿಗೆ ದುಃಸ್ವಪ್ನವಾಗಿದ್ದ ಮುಸ್ಲಿಮ್ ದೊರೆಗಳ ಅತ್ಯಾಚಾರಗಳನ್ನು ಮರೆಸಿ, ಅವರಿಂದಾಗಿ ತಲೆಬೋಳಿಸಿಕೊಳ್ಳಬೇಕಾಗಿ ಬಂದ ಹಿಂದೂ ಹೆಂಗಸರ ದುಃಸ್ಥಿತಿಯನ್ನು ಮನುಸ್ಮೃತಿಯ ಪುಟಗಳಿಗೆ ಗಂಟುಹಾಕಲಾಯಿತು. ಮನುಸ್ಮೃತಿಯಲ್ಲಿ ಉಲ್ಲೇಖವಾಗಿದೆ ಎಂಬ ಕಾದ ಸೀಸದ ಪ್ರಸಂಗ ಕಳೆದ ಎಪ್ಪತ್ತು ವರ್ಷಗಳಲ್ಲಿ ಎಷ್ಟು ಪುಸ್ತಕಗಳಲ್ಲಿ, ಸರಕಾರೀ ಕೃಪಾಪೋಷಿತ ಸೆಮಿನಾರುಗಳ ಪೇಪರುಗಳಲ್ಲಿ ಬಂದುಹೋಗಿದೆಯೋ ಲೆಕ್ಕವಿಟ್ಟವರಿಲ್ಲ. ಆದರೆ, ಕಾದ ಸೀಸ ಸುರಿದ ಒಬ್ಬನೇ ಒಬ್ಬ ಬ್ರಾಹ್ಮಣನಾಗಲೀ ಸುರಿಸಿಕೊಂಡ ಒಬ್ಬನೇ ಒಬ್ಬ ದಲಿತನಾಗಲೀ ಇದುವರೆಗೆ ಯಾವ ಸಾಹಿತ್ಯ, ಚರಿತ್ರೆ, ಐತಿಹಾಸಿಕ ದಾಖಲೆಗಳಲ್ಲೂ ಸಿಕ್ಕಿಲ್ಲವೆನ್ನುವುದೊಂದು ಚೋದ್ಯ. ದಾಖಲೆ ಇಲ್ಲದಿದ್ದರೇನಂತೆ; ಹೇಳಿದ್ದನ್ನೇ ನೂರು ಅಥವಾ ಸಾವಿರ ಸಲ ಹೇಳುತ್ತಾಹೋದರೆ ಕಾಲಕ್ರಮೇಣ ಅವೇ ಕಲ್ಲಲ್ಲಿ ಕೊರೆದಿಟ್ಟ ಸತ್ಯಗಳಾಗುತ್ತವೆ ಎನ್ನುವುದು ಬುದ್ಧಿಜೀವಿಗಳ ವರಸೆ!

ಹಾಗಾದರೆ ಬ್ರಾಹ್ಮಣ ಯಾವ ಶೋಷಣೆಯನ್ನೂ ಮಾಡಿಲ್ಲವೆ ಎಂದು ಕೇಳಬಹುದು. ಇದಕ್ಕೆ “ಇಲ್ಲ” ಎನ್ನುವುದು ಖಂಡಿತ ಉಡಾಫೆಯಾಗುತ್ತದೆ. ಆದರೆ ಪ್ರಶ್ನೆ ಇರುವುದು, ಜಗತ್ತು ಮಾಡಿರುವ ಎಲ್ಲ ತಪ್ಪುಗಳ ಮೊತ್ತಕ್ಕೆ ಬ್ರಾಹ್ಮಣನೊಬ್ಬನೇ ಹೇಗೆ ಬಾಧ್ಯಸ್ಥನಾಗುತ್ತಾನೆ ಎನ್ನುವುದು. ಎರಡೂವರೆ-ಮೂರು ಸಾವಿರ ವರ್ಷಗಳಿಂದ ದಲಿತನನ್ನು ಅರೆಹೊಟ್ಟೆಯಲ್ಲಿ ಅತ್ತ ಸಾಯಲಿಕ್ಕಲ್ಲದೆ ಇತ್ತ ಬದುಕಲಿಕ್ಕಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ಇಟ್ಟಿದ್ದರೆ ಅವನು ಪ್ರತಿಭಟಿಸಿ ಸಿಡಿದೇಳುವುದಕ್ಕಾಗಿ ಅಂಬೇಡ್ಕರ್ ಬರುವವರೆಗೆ ಕಾಯಬೇಕಿರಲಿಲ್ಲ. ನಾನು ಲೇಖನದ ಮೊದಲಿಗೆ ಬರೆದಂತೆ ಇಡೀ ಹಳ್ಳಿಯೇ ಒಂದು ಸಮುದಾಯದಂತೆ ಬದುಕುತ್ತಿದ್ದಾಗ ಯಾರನ್ನಾದರೂ ಗುರಿಯಾಗಿಸಿ ಶೋಷಿಸಿ ಉಳಿದವರು ಪಡೆಯಬೇಕಾದ್ದು ಏನೂ ಇರಲಿಲ್ಲ. ಈ ಸರಪಳಿಯಲ್ಲಿ ಯಾವ ಕೊಂಡಿ ಕಳಚಿದರೂ ಅಪಾಯ ಎಂಬ ಅರಿವು, ಎಚ್ಚರ ಹಳ್ಳಿಯ ಜನಕ್ಕೆ ಇರಲಿಲ್ಲ ಎನ್ನುವುದು ಜಾಣರೆಂದುಕೊಂಡವರ ಮೂರ್ಖತನವಾಗುತ್ತದೆ. ಇತಿಹಾಸದ ಎಲ್ಲ ಕತೆಗಳಲ್ಲೂ ಬಡಬ್ರಾಹ್ಮಣ ಎನ್ನುವುದು ದ್ವಿರುಕ್ತಿಯಾಗಿದ್ದ ಸಂದರ್ಭದಲ್ಲಿ ಅವನು ಇಡೀ ಊರನ್ನು ತನ್ನ ಅಂಕೆಯಲ್ಲಿಟ್ಟುಕೊಂಡ; ದಲಿತರನ್ನು ಶೋಷಿಸಿದ ಎನ್ನುವುದು ಹಾಸ್ಯಾಸ್ಪದ. ಮತ್ತು ಹಾಗೊಂದುವೇಳೆ ನಡೆದಿದ್ದರೂ, ಆಗ ಆಗಿಹೋದ ತಪ್ಪುಗಳಿಗಾಗಿ ಈಗಿನ ಬ್ರಾಹ್ಮಣ ಪಶ್ಚಾತ್ತಾಪ ಪಡಬೇಕು ಎನ್ನುವುದು ಇನ್ನಷ್ಟು ಹಾಸ್ಯಾಸ್ಪದ, ಶೊಚನೀಯ ನಗೆಹನಿ!

ಮುಂದುವರಿಯುವುದು…

ಚಿತ್ರಕೃಪೆ : blog.onlineprasad.com

20 ಟಿಪ್ಪಣಿಗಳು Post a comment
  1. ravi kashikar
    ಆಗಸ್ಟ್ 17 2015

    rohitji,start writing “rediscovery of india”.Fantastic article,hope, many more will come

    ಉತ್ತರ
  2. ನವೀನ ಗಂಗೋತ್ರಿ
    ಆಗಸ್ಟ್ 17 2015

    ರೋಹಿತ್, ತುಂಬ ಸಮಂಜಸವಾದ ವಿಷಯ ಎತ್ತಿದ್ದೀರಿ. ನನ್ನೂರಿನಲ್ಲಿ ಒಟ್ಟೊಟ್ಟಿಗೇ ಬದುಕುತ್ತಿರುವ ಸಿದ್ಧಿ ಜನಾಂಗದ ಕಥೆಯೂ ನೆನಪಾಯ್ತು ನನಗೆ. ಇವತ್ತಿಗೂ ಮನೆಗೆ ಹೋದರೆ ಅಗೋ ಆ ದೂರದಿಂದ ನನ್ನ ಹೆಸರಿಡಿದು ಕೂಗುತ್ತ ಬರುವ, ನನ್ನ ಕೋರಿಕೆಗೆ ನಮ್ಮದೇ ಮನೆಯ ತೆಂಗಿನ ಮರದ ಎಳೆನೀರು ಇಳಿಸಿಕೊಟ್ಟು ನಮ್ಮನೆಯಲ್ಲಿ ಚಾ ಕುಡಿದು ಹೋಗುವ ಸಿದ್ಧಿ ರಾಮನಿಗೂ, ನನ್ನಂಧ ’ಹಾರುವ ಪಿಳ್ಳೆ’ಗಳಿಗೂ ಜಾತಿಯ ಜಗಳ ಎಂದಿಗೂ ಆಗಿಲ್ಲ.

    ಅತಿ ಬುದ್ಧಿವಂತ ಕಥೆಯೊಂದನ್ನು ಬರೆದು ಬ್ರಾಹ್ಮಣರನ್ನು ಊರ ವಿನಾಶದ ರೂವಾರಿಗಳೆಂದು ಬಿಂಬಿಸಿದ್ದ ಹನುಮಂತ ಹಾಲಿಗೇರಿಯೆಂಬ ಬರಹಗಾರನನ್ನು ಬನ್ನಿ ನಮ್ಮನೆಗೆ, ನಮ್ಮೂರಿಗೆ, ನಾಲ್ಕು ದಿನ ಉಳಿದು ಎಲ್ಲ ನೋಡಿ ಹೋಗುವಿರಂತೆ ಅಂತ ಕರೆದಿದ್ದೆ. ಪುಣ್ಯಾತ್ಮ ಮತ್ತೆ ಯಾವ ರಿಪ್ಲೆ ಕೂಡ ಮಾಡಲಿಲ್ಲ. ಮೊನ್ನೆ ಮೊನ್ನೆ ಇದೇ ಮಾತನ್ನ ಪ್ರಭಾ ಬೆಳವಂಗಲರಿಗೂ ಹೇಳಿದ್ದೆ, ಆಸಾಮಿ ಸುದ್ದಿಯಿಲ್ಲ. ಪರೀಕ್ಷೆಗೆದುರಾಗಲು ಹೆದರುವ ಇವರ ಚಿಂತನೆಗಳ ಬಗ್ಗೆ ಹೇಸಿಗೆಯಾಗುತ್ತದೆ.

    ಹೌದು, ಹಳ್ಳಿಗಳು ಚೆನ್ನಾಗಿಯೇ ಇವೆ. ಬ್ರಾಹ್ಮಣರಿದ್ದಾರೆಂದೂ ಅಲ್ಲ, ಹೊಲೆಯರಿದ್ದಾರೆಂದೂ ಅಲ್ಲ- ಅವರಿಬ್ಬರ ಮಧ್ಯೆ ಜಾತಿಯ ಹಂಗಿಲ್ಲದ ಸೌಹಾರ್ದ ಇದೆ ಎನ್ನುವ ಕಾರಣಕ್ಕೆ.

    ಉತ್ತರ
  3. valavi
    ಆಗಸ್ಟ್ 17 2015

    ಬಿಜಾಪೂರದಿಂದ ಕೆಲವೇ ಕಿಲೋ ಮೀಟರುಗಳ ದೂರದಲ್ಲಿ ಕೋಲಾರ ಎಂಬ ಊರಿದೆ. ಅಲ್ಲಿ ಕೃಷ್ಣೆ ಹರಿದಿದ್ದಾಳೆ. ಆ ಊರಿಗೆ ಅತಿ ಉದ್ದವಾದ ಸೇತುವೆ ಕಟ್ತಿ ಊರಿನ ಹೆಸರು ಎಲ್ಲರೂ ಕೇಳುವಂತಾಗಿದೆ. ಇರಲಿ, ವಿಶೇಷವೇನಂದರೆ ಈ ಊರಿನಲ್ಲಿ ಈಗ್ಗೆ ಸುಮಾರು 50/60 ವರ್ಷಗಳ ಹಿಂದೆ ಕೃಷ್ಣೆಗೆ ಕೋಲಾರದಿಂದ ಹೋಗಲು ಎರಡು ದಾರಿಗಳಿದ್ದವಂತೆ. ಒಂದು ಹಾರುರ ಹೊಳಿ(ನದಿ) ದಾರಿ. ಇನ್ನೊಂದು ಎಲ್ಲಾರ ಹೊಳಿ ದಾರಿ. ಈ ಹಾರೂರ ಹೊಳೆ ದಾರಿ ಊರಿನಿಂದ ಬಹಳ ದೂರ ಮತ್ತು ದುರ್ಗಮ(ಅಡ್ಡಾಡಲು ಸಲೀಸಲ್ಲದ್ದು ಕಲ್ಲು ಮುಳ್ಳುಗಳಿಂದ ಕೂಡಿದ್ದು) ವಾಗಿತ್ತಂತೆ. ಎಲ್ಲಾರ ಹೊಳಿ ದಾರಿ ಸಮೀಪ ಮತ್ತು ಸಲೀಸಾಗಿತ್ತಂತೆ ಆದರೂ ಈ ದಾರಿಯಲ್ಲಿ ಬ್ರಾಹ್ಮಣರು ನೀರು ತರುತ್ತಿರಲಿಲ್ಲವಂತೆ. ಏಕೆಂದರೆ ಅವರು ಪೂಜೆಗಾಗಿ ಮಡಿಯಿಂದ ನೀರು ತರುತ್ತಿರಬೇಕಾದರೆ ಅವರನ್ನು ಬೇಕೆಂದೇ ಮುಟ್ತಿ ಕೆಲವರು ಕಾಡಿಸುತ್ತಿದ್ದರಂತೆ. ಅದಕ್ಕಾಗಿ ಅವರು ಇಂಥ ದುರ್ಗಮ ದಾರಿಯಿಂದಲೇ ನೀರು ತರುತ್ತಿದ್ದರಂತೆ. ಈಗ ಹೇಳಿ ಯಾರ ಶೋಷಣೆ ಯಾರಿಂದ ಆಗುತ್ತಿತ್ತು??? ಬೇಕಿದ್ದರೆ ಹಳೆಯ ವ್ಯಕ್ತಿಗಳನ್ನು( ಕೋಲಾರದ) ಕೇಳಿ ನೀವು ನಿಜಾಂಶವನ್ನು ಪರಾಮರ್ಶಿಸಿ ನೋಡಬಹುದು. ಇನ್ನು ನನ್ನೂರಿನಲ್ಲಿ ಬ್ರಾಹ್ಮಣ ಕೇರಿಯಲ್ಲಿದ್ದ ಸವುಳು ನೀರಿನಿಂದಲೇ ದೇವತಾರ್ಚನೆ ಮಾಡುತ್ತಿದ್ದೆವು. ಯಾಕೆಂದರೆ ನಮ್ಮೂರಿನಲ್ಲೂ ಮಡಿಯಿಂದ ನೀರು ತರುತ್ತಿದ್ದೇನೆಂದರೆ ಬೇಕೆಂದೇ ಮುಟ್ಟುವವರಿದ್ದರು. ಹೀಗೆ ಮಾಡುತ್ತಿದ್ದವರು ದಲಿತರಲ್ಲಾ. ಇನ್ನುಳಿದ ಊರಲ್ಲಿರುವ ಮುಂದುವರಿದ ಜಾತಿಗಳವರು. ಹೀಗಾಗೇ ಬಿಜಾಪೂರ ಜಿಲ್ಲೆಯ 90% ಹಳ್ಳಿಗಳಲ್ಲಿ ಬ್ರಾಹ್ಮಣ ಕುಟುಂಬಗಳೇ ಇಲ್ಲ. ವಲಸೆ ಹೋಗಿದ್ದಾರೆ. ಹಳ್ಲಿಗಳಲ್ಲಿನ ದಲಿತ ಕುಟುಂಬಗಳಿಗೆ ಕೇಳಿ ಯಾರು ಅವರಿಗೆ ಕಿರುಕುಳ ಕೊಡುತ್ತಾರೆಂದು?? ಅವರು ಬ್ರಾಹ್ಮಣರೊಬ್ಬರ ಹೆಸರು ಹೇಳುತ್ತಾರಾ? ಪರೀಕ್ಷಿಸಿ. ಆಗ ಬ್ರಾಹ್ಮಣ ಶೋಷಣೆ ಕುರಿತು ಮಾತಾಡಿ. ಇದನ್ನು ಬುದ್ದಿಜೀವಿಗಳೆಂದುಕೊಂಡಿರುವವರಿಗೆ ಹೇಳುವರಾರು?? ಇನ್ನೊಂದು ವಿಷಯ ಗೊತ್ತಾ? ಈ ಬುಜಿಗಳಲ್ಲಿ ಬ್ರಾಹ್ಮಣರ ಶೋಷಣೆಯ ಕಥೆ ಕಟ್ಟುವವರಲ್ಲಿ 99% ಬ್ರಾಹ್ಮಣರೇ ಇದ್ದಾರೆನ್ನುವದು ಕೂಡ ಸತ್ಯವೇ ಆಗಿದೆ. ಉಳಿದೆಲ್ಲಾ ಜಾತಿಗಳವರು ತಮ್ಮ ಜಾತಿಯ ಅಸ್ಮಿತೆಗಾಗಿ ಹೋರಾಡಿದರೆ ಇವರು (ಬ್ರಾಹ್ಮಣ ಬುಜಿಗಳು) ಜಾತಿ ನಾಶಕ್ಕೆ ಹೋರಾಡುತ್ತಿದ್ದಾರೆ. ಇದು ಚೋದ್ಯವಾದರೂ ಸತ್ಯಸ್ಯ ಸತ್ಯವಾಗಿದೆ.

    ಉತ್ತರ
  4. ನಾವಿಕ
    ಆಗಸ್ಟ್ 17 2015

    Reblogged this on ದೂರತೀರ and commented:
    ಬುಜೀಗಳ ಥಿಯರಿಯ ಬೆನ್ನು ಹತ್ತುತ್ತಾ…

    ಉತ್ತರ
  5. ಆಗಸ್ಟ್ 17 2015

    I too experienced the same in small village. Two Brahmins houses were there. One is mine and another one is my uncle. My father was a scholar in Sanskrit and an astrologer also. We have small land for cultivation. To my house all kinds of people used to come for some astrological suggestions to my father never used to take money. We that all kinds and different casts and different groups of people used to play together and sometime used to study together. One or two year back I went to my native place and sutiation there was horrible. No cultivation no animal husbandry. Peoples were divided themselves on the basis of cast and political party and there was hating every where. For an astonishment, now there are no Brahmins family at all. Can great thinker give reason for it.

    ಉತ್ತರ
  6. ಆಗಸ್ಟ್ 17 2015

    Brilliant writing!! Take a bow!

    ಉತ್ತರ
  7. UDAY SIMHA
    ಆಗಸ್ಟ್ 18 2015

    satya darshana !!!!

    ಉತ್ತರ
  8. ಆಗಸ್ಟ್ 18 2015

    Reblogged this on karthikbhat.

    ಉತ್ತರ
  9. datta deshpande
    ಆಗಸ್ಟ್ 18 2015

    buddijivigalella brahmanara against baredu famous adavaru.avarige bere jati bagge bareyuva dhairya illa.

    ಉತ್ತರ
  10. Shashank Bhat
    ಆಗಸ್ಟ್ 18 2015

    Very well written article. eega brahmanare shoshitaru.

    ಉತ್ತರ
  11. R R Bhat
    ಆಗಸ್ಟ್ 19 2015

    ಬಹಳ ಸಾಚಾತನದ ಬರವಣಿಗೆ . ನಾನು ಸಣ್ಣವನಿದ್ದಾಗ ಇಂತಹ ಬಹಳ ಸನ್ನಿವೇಶಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದು ಬನ್ದಿತ್ತು. ಮಗ್ಗಿ ಬಾಯಿ , ಉತ್ತಿಂ ಬ್ಯಾರಿ , ಬೀಜದ (ಗೇರು ಬೀಜ) ಸಾಯ್ಬೆರು , ಬಾಡಿಗೆ ಕಾರಿನ ಇನಾಸೆ . ಎಷ್ಟೊಂದು ಅವಿನಾಭಾವ ಸಂಭಂದ .

    ಉತ್ತರ
  12. krishna raj herle
    ಆಗಸ್ಟ್ 19 2015

    Yaavude kaaranakko nammannu naavu soft target endu baavisa bhaaradhu. Soft aadhare kaadalli adhara mele dhaali jaasthi. Sahane enbudhu namma daurbalya aaga baaradu. Navabauddharige ninne monne yaavudo marada kelage gnyanodaya aagi visha kaaralu prarabisive.adannu kelikondu avugalige udhaaharane sametha naavu jaathyatheetharu endu niroopisuva agathyave ella. Naavu jaathyaatheetha kodangi aaguva avashyakatheye illa. Endhigu naavu vydhika sampradaayavannu bidabaaradu. Naavu bhraamhana aagabeke vinaha bhramhins aagabaaradu. Antharjaathiya vivaahavannu bhhishkarisa beku.
    Navendhigu pukkalu thrishaku bhavane ittukolla bhaaradu.

    Thyaaraaagi samaya bhadhide

    ಉತ್ತರ
  13. ಸತೀಶ್ ಜೋಷಿ
    ಆಗಸ್ಟ್ 20 2015

    ನನ್ನ ಅನಿಸಿಕೆಯೇನೂ ಭಿನ್ನವಿಲ್ಲ, ನಿಮ್ಮ ಶಾಲೆಯ, ಊರಿನ ಉದಾಹರಣೆಗಳು, ನನಗೂ ಸಹ ಅನ್ವಯ. ಹಾಗೇನೆ ನಾನೂ ಬ್ರಾಹ್ಮಣ ಎನ್ನುವ ಕಾರಣದಿಂದ ಶಾಲೆಯ ಇತರ ಮಕ್ಕಳಿಂದ ಬಹಳ ಕಿರುಕುಳ ಅನುಭವಿಸಿದ್ದೇನೆ, ಆದರೆ, ಅವೆಲ್ಲ ಮಕ್ಕಳ ಆಟ ಇರಬಹುದೇನೋ, ಕೆಲವೊಮ್ಮೆ, ಟೀಚರ್ ಗಳಿಂದ partiality ಆಗಿ ನನಗೆ ಮೋಸ ಆಗಿದ್ದೂ ಇದೆ. ಇದೆಲ್ಲ ಈಗ ಯಾರಿಂದ ಯಾರ ಶೋಷಣೆ ಆಗುತ್ತಿದೆ ಎನ್ನುವುದರ ಉದಾಹರಣೆಗಳಾಗಬಹುದೇನೋ. ಆದರೂ, ಈ ಎಲ್ಲ ಚರ್ಚೆಗಳ ಫಲ ಸೇರಿ ಬರೀ ಬ್ರಾಹ್ಮಣಪರ ಮಾತ್ರವಲ್ಲ, ಒಟ್ಟಾರೆ ರಿಸರ್ವೇಶನ್ ವಿರುದ್ಧದ ದನಿಯಾಗಲಿ, ಒಂದು ಸಮುದಾಯದ ಉದ್ಧಾರಕ್ಕಾಗಿ ಇನ್ನೊಂದು ಸಮುದಾಯದ ತುಳಿತ ನಿಲ್ಲಲಿ, ನಿಜವಾದ ಸಮಾನತೆ ಮೂಡುವತ್ತ ಗಮನ ಹರಿಸುವುದು ಅವಶ್ಯಕ

    ಉತ್ತರ
  14. ಅನಾರ್ಸನಿಕ
    ಆಗಸ್ಟ್ 21 2015

    “…ನಿಮಗೆ ಇಂತಹ ಕೋರೆಹಲ್ಲಿನ ಬ್ರಾಹ್ಮಣ ಎಲ್ಲಾದರೂ ಕಾಣಸಿಗುತ್ತಾನೆಯೇ..” ಎಂದು ಇತ್ಯಾದಿಯಾಗಿ ಕೇಳಿದ್ದಾರೆ. ಇವರಿಗೆ ಕಂಡಿಲ್ಲದಿರಬಹುದು, ಹಾಗಂತ ಬ್ರಾಹ್ಮಣರಿಂದ ಜಾತ್ಯಾಧಾರಿತ ಶೋಷಣೆ ಅನ್ನುವುದು ಇಡೀ ಭಾರತದೇಶದಲ್ಲೇ ನಡೆಯದ ವಿದ್ಯಮಾನ ಅಂತಲೋ, ಯಾವತ್ತೋ ನಡೆದಿರಬಹುದಾದ ಇವತ್ತು ನಿನ್ನೆ ಮೊನ್ನೆಯ ಹೊತ್ತಿಗೆ ಕಾಣಸಿಗದಂತಾದ ವಿದ್ಯಮಾನ ಅಂತಲೋ ಹೇಳುವುದು ‘ಶುದ್ಧ ಉಡಾಫೆ’ಯೇ ಅಗುತ್ತೆ.

    ಇವರು ಅದೆಲ್ಲಿ ಅವಸವಸರವಾಗಿ ಓದಿಕೊಂಡರೋ ಗೊತ್ತಿಲ್ಲ. ಕಥೆಕಟ್ಟಿದ್ದಲ್ಲ, ಪೊಳ್ಳುಥಿಯರಿಗಳನ್ನು ತೂರಿದ್ದಲ್ಲ, ಭಾರತದಲ್ಲಿ ಶೋಷಣೆಗಳು ‘ವರದಿ’ಯಾಗಿರುವುದು, ಆಗುತ್ತಿರುವುದು ಬಹಳವಿದೆ. ಆ ವರದಿಗಳು ಸುಳ್ಳು ಅಂತಲೋ ಅಥವಾ ತಪ್ಪಾಗಿ ಅರ್ಥೈಸಿದವು ಅಂತಲೋ ಹೇಳುವುದಾದರೆ ಅಂತಹಾ ಒಂದೊಂದನ್ನೂ ಪ್ರತ್ಯೇಕವಾಗಿ ವಿಶ್ಲೇಶಿಸಿ ವಾದ ಮಾಡಬೇಕಾಗುತ್ತೆ. ಅದನ್ನು ಮಾಡದೇ “ನಮ್ಮ ಬುದ್ಧಿಜೀವಿಗಳಿಗೆ ನಮ್ಮ ದೇಶದಲ್ಲಿ ಕೋಮುದಳ್ಳುರಿ ಬಾನೆತ್ತರಕ್ಕೆ……ಚರ್ಚಿನ ಪಾದ್ರಿಗಳಿಗೆ ಪರ್ಯಾಯವಾಗಿ ಬ್ರಾಹ್ಮಣರು ಕಂಡರು” ಎಂಬಿತ್ಯಾದಿಯಾಗಿ ಹಳಹಳಿಸುತ್ತಾ ಸಾರಸಗಟಾಗಿ ತಿಪ್ಪೆಸಾರಿಸುವುದನ್ನು ಒಪ್ಪಿಕೊಳ್ಳಲಾಗದು.

    ಹಾಗೆ ಹೇಳುವುದಾದರೆ ಬ್ರಾಹ್ಮಣರು ಜಾತಿ ಆಧಾರಿತವಾಗಿ ತಾರತಮ್ಯ ಮಾಡಿದ್ದು, ಶೋಷಣೆ ಮಾಡಿದ್ದು ನಾನಂತೂ ಕಂಡಿದ್ದೇನೆ. ನಮ್ಮ ಬಂಧುವರ್ಗದಲ್ಲಿ ಕೂಡ ಕೆಲವರು ಅಂಥವರಿದ್ದರು, ಈಗ ಬದಲಾಗುತ್ತಿದ್ದಾರೆ ಏನೋ. ಜಾತ್ಯಾಧಾರಿತ ಶೋಷಣೆ ಮಾಡುವ ಗೌಡರೇತ್ಯಾದಿ ಇತರ ಮೇಲ್ಜಾತಿಯವರೂ ಬೇಕಾದಷ್ಟಿರುವುದನ್ನೂ ನೋಡಿದ್ದೇನೆ. ಅಷ್ಟೇ ಅಲ್ಲ, ಇವರು ವಿವರಿಸಿದಂತೆ ಸಹಬಾಳ್ವೆಯ ಆದರ್ಶಕ್ಕೆ ಹತ್ತಿರವಾದ ಊರುಗಳಿರುವುದನ್ನೂ ಹತ್ತಿಪ್ಪತ್ತು ವರ್ಷಗಳ ಹಿಂದಿನಿಂದ ಸಹಾ ಕಂಡಿದ್ದೇನೆ. ಎಲ್ಲರೂ ಕ್ರಮೇಣ ಸುಧಾರಿಸುತಿದ್ದಾರೆ ಅನ್ನುವುದು ನನ್ನ ಅನುಭವ ಮತ್ತು ಅನಿಸಿಕೆಯಾಗಿತ್ತು. ಆದರೆ ಇತ್ತೀಚೆಗೆ ಆ ಊರುಗಳಲ್ಲಿ ಅಂಥ ಸೌಹಾರ್ದವನ್ನು ಕದಡುವ ರಾಜಕೀಯ ಪ್ರೇರಿತ ವಿದ್ಯಮಾನಗಳು ಹೆಚ್ಚುತ್ತಿವೆ..

    ಉತ್ತರ
  15. Rajaram Hegde
    ಆಗಸ್ಟ್ 26 2015

    “ಇವರು ಅದೆಲ್ಲಿ ಅವಸವಸರವಾಗಿ ಓದಿಕೊಂಡರೋ ಗೊತ್ತಿಲ್ಲ. ಕಥೆಕಟ್ಟಿದ್ದಲ್ಲ, ಪೊಳ್ಳುಥಿಯರಿಗಳನ್ನು ತೂರಿದ್ದಲ್ಲ, ಭಾರತದಲ್ಲಿ ಶೋಷಣೆಗಳು ‘ವರದಿ’ಯಾಗಿರುವುದು, ಆಗುತ್ತಿರುವುದು ಬಹಳವಿದೆ. ಆ ವರದಿಗಳು ಸುಳ್ಳು ಅಂತಲೋ ಅಥವಾ ತಪ್ಪಾಗಿ ಅರ್ಥೈಸಿದವು ಅಂತಲೋ ಹೇಳುವುದಾದರೆ ಅಂತಹಾ ಒಂದೊಂದನ್ನೂ ಪ್ರತ್ಯೇಕವಾಗಿ ವಿಶ್ಲೇಶಿಸಿ ವಾದ ಮಾಡಬೇಕಾಗುತ್ತೆ.”
    ಬ್ರಾಹ್ಮಣರ ಶೋಷಣೆಯ ಕುರಿತು ವಾದಮಾಡುವವರು ತಿಳಿಸುವ ಇಂಥಆಧಾರಗಳ ಕುರಿತೇ ನನಗಿನ್ನೂ ಸಂದೇಹ ನಿವಾರಣೆಯಾಗಿಲ್ಲ. ನಾನಂತೂ ನಮ್ಮ ಮಾಧ್ಯಮಗಳ್ಲಲಿ ಅಥವಾ ದಿನಪತ್ರಿಕೆಗಳಲ್ಲಿ ಬ್ರಾಹ್ಮಣರು ನಡೆಸಿದಅಂತಹ ಯಾವ ವರದಿಗಳನ್ನೂ ಕಾಣುತ್ತಿಲ್ಲ. ಬದಲಾಗಿ ಬೇರೆ ಬೇರೆ ಇತರ ಜಾತಿಗಳು ದಲಿತರಿಗೆ ಮಲ ತಿನ್ನಿಸುವುದು, ದೇವಾಲಯ ಪ್ರವೇಶ ಮಾಡಿದವರನ್ನು ಕೊಲ್ಲುವುದು, ದಲಿತರಿಗೆ ಬೆಂಕಿ ಹಚ್ಚಿ ಸುಡುವುದು, ನೀರು ಒಡನಾಟ ನಿರಾಕರಿಸಿ ಬಹಿಷ್ಕರಿಸುವುದು, ಹೀಗೆಇಂಥ ಹಿಂಸಾತ್ಮಕ ಘಟನೆಗಳನ್ನು ಆಗಾಗ್ಗೆ ಕೇಳಿದ್ದೇನೆ. ಹಾಗಾಗಿ ಅನಾರ್ಸನಿಕರವರೇ ಬ್ರಾಹ್ಮಣರಿಂದ ನಡೆದ ಇಂಥ ದೌರ್ಜನ್ಯದ ವರದಿಗಳು ಯಾವ ಪತ್ರಿಕೆಗಳಲ್ಲಿ ಎಷ್ಟೆಷ್ಟು ಪ್ರಕಟವಾಗಿವೆ ಎಂಬುದನ್ನು ಪಟ್ಟಿಮಾಡಿ ನಮಗೆ ತಿಳಿಸುವ ಕೃಪೆ ಮಾಡಿ. ಅಷ್ಟರ ನಂತರ ಅದನ್ನು ಪ್ರತ್ಯೇಕವಾಗಿ ವಿಶ್ಲೇಷಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಬಹುದು.

    ಉತ್ತರ
    • shripad
      ಆಕ್ಟೋ 4 2015

      ಹೆಗಡೆಯವರೇ ನಿಮ್ಮ ಪ್ರಶ್ನೆಗೆ ಇನ್ನೆರಡು ಶತಮಾನವಾದರೂ ಯಾರೂ ಉತ್ತರಿಸುವುದಿಲ್ಲ, ಆದರೆ ಮತ್ತೆ ಮತ್ತೆ ಅದೇ ಹಳಸಲು ಮಾತು ಹೇಳುವುದನ್ನು ಮಾತ್ರ ನಿಲ್ಲಿಸುವುದಿಲ್ಲ!
      ಕೋಮುವಾದ ಎಂಬುದು ಬೆಳೆದಿದ್ದೇ ಬ್ರಿಟಿಷರ ಒಡೆದು ಆಳುವ ನೀತಿಯ ಫಲವಾಗಿ. ೧೮೫೭ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದ ಅನಂತರ ಬ್ರಿಟಿಷರ ಜಂಘಾಬಲವೇ ಉಡುಗಿತ್ತು. ಅಷ್ಟರಲ್ಲಿ ಮದ್ರಾಸು, ಕಲ್ಕತಾ ಮತ್ತು ದೆಹಲಿಗಳಲ್ಲಿ ಆಧುನಿಕ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯಲಗಳು ಅಸ್ತಿತ್ವಕ್ಕೆ ಬಂದು ಅವರೇ ರೂಪಿಸಿದ ಪಠ್ಯಗಳು, ಇತಿಹಾಸ, ಸಿದ್ಧಾಂತಗಳು ಬೋಧನೆಯಾಗತೊಡಗಿದವು. ಅದನ್ನು ಕಲಿತವರು ಅದನ್ನೇ ಮುಂದಿನವರಿಗೆ ಹೇಳುತ್ತ ಬಂದರು, ಇಂದಿಗೂ ಅದೇ ಇತಿಹಾಸವಾಗಿದೆ, ನಮ್ಮ ಸಮಾಜದ ಕಥೆಯಾಗಿದೆ. ತಿರುಚಿದ ಸತ್ಯವನ್ನು ಇತಿಹಾಸವೆಂದು ಹೇಳುತ್ತಿರುವವರೆಗೂ ನಮ್ಮಲ್ಲಿ ಕೋಮುವಾದ ನಾಶವಾಗದೆಂದು ಗಾಂಧೀಜಿ ಹೇಳಿದ್ದೂ ಇದಕ್ಕೇ ಇರಬೇಕು. ಬಿಪಿನ್ ಚಂದ್ರ ಕೋಮುವಾದದ ಹುಟ್ಟು ಮತ್ತು ಬೆಳವಣಿಗೆಗೆ ನಮ್ಮ ಸಮಾಜದ ಒಡಕಿಗೆ ಬ್ರಿಟಿಷರೇ ಕಾರಣ ಎಂದು ಆಧುನಿಕ ಭಾರತದ ಇತಿಹಾಸದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ-ತಮಗೆ ತಿಳಿದಿದೆ. ನಾನು ಹೇಳುತ್ತಿರುವುದು ತಪ್ಪು ಗ್ರಹಿಕೆಯುಳ್ಳ, ಇಂದಿಗೂ ಅವರ ಇತಿಹಾಸ ಓದಿ ನಮ್ಮ ಸಮಾಜ ನೋಡುವ ಜನರಿಗೆ!
      ಬಿಪಿನ್ ಅವರ ವಾದವನ್ನು ನಿಖರವಾಗಿ ಎಳೆ ಎಳೆಯಾಗಿ ಬಿಡಿಸಿಡುವ ಕೆಲಸವನ್ನು ಬಾಲು ಮಾಡಿದ್ದಾರೆ. ಏನು ಮಾಡುವುದು? ಇದನ್ನೆಲ್ಲ ಓದದೇ, ಕಣ್ಣೆತ್ತಿಯೂ ನೋಡದೇ ನಮ್ಮ “ಭಯಂಕರ ಇತಿಹಾಸ”ದ ಬಗ್ಗೆ ಹೊಡೆದೇ ಹೊಡೆಯುತ್ತಾರೆ!!

      ಉತ್ತರ
  16. MADHU
    ಸೆಪ್ಟೆಂ 14 2015

    ANISHTAKKELLA SHANESWARANE KARANA

    ಉತ್ತರ
  17. ಡಿಸೆ 4 2019

    ನೀವು ಹೇಳಿದ್ದು ಪೂರಾ ಸತ್ಯ….
    ಹೌದು…
    ಆದರೆ ನೀವು ಹೇಳಿದ್ದು ಮಾತ್ರ ಸತ್ಯ ಅಲ್ಲ…. ಇವುಗಳ ಬಗ್ಗೆ ಪ್ರತಿಕ್ರಿಯಿಸಲು ಭಾರತದ ಇತಿಹಾಸದ ಬಗ್ಗೆ ಸಮಗ್ರ ಅಧ್ಯಯನ ಬೇಕು..
    ಹಾಗಾಗಿ ನಾನು ಸೋಷಿಯಲ್ ಮೀಡಿಯದಲ್ಲಿ ಇಂತಹ ವಿಷಯಗಳ ಕುರಿತು ಮಾತನಾಡಲಾರೆ
    ನಿಮ್ಮ ಲೇಖನ ಮಾಹಿತಿ ಪೂರ್ಣ ವಾಗಿದೆ ಅರ್ಥಪೂರ್ಣ ವೂ ಇದೆ.. ಮೆಚ್ಚಿದೆ..

    ಉತ್ತರ

Trackbacks & Pingbacks

  1. ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೨ | ನಿಲುಮೆ
  2. ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೨ – ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments