– ವಿಜಯ್ ಹೆರಗು
ಭಾರತ ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಇಲ್ಲಿ ವಾಹನ ಚಲಾಯಿಸಲು ಪರವಾನಗಿ ಇಲ್ಲದಿದ್ದರೂ ಪರವಾಗಿಲ್ಲ, ಪೋಲಿಸಪ್ಪನ ಕೈಗೆ ನೂರರ ನೋಟು ತುರುಕಿ ಬಚಾವಾಗಬಹುದು. ಆದರೆ ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ಬೇಕು. ಇಲ್ಲದಿದ್ದರೆ ಹೆಂಗಸರು, ಮಕ್ಕಳೆಂಬ ಭೇದ ತೋರದೆ ಸದೆಬಡಿಯುತ್ತಾರೆ. ಸಾಮಾನ್ಯ ಜನರು ಏನೂ ಮಾಡಲಾಗದ ಹಂತ ತಲುಪಿದ್ದಾರೆ. ತಾವೇ ಆರಿಸಿಕಳಿಸಿದ ಮಂದಿ ತಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ನೋಡುವ ಅಸಹಾಯಕ ಸ್ಥಿತಿ ಯಾವುದೇ ದೇಶದ ಜನರಿಗೂ ಬರಬಾರದು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯು.ಪಿ.ಎ ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸುತ್ತಾ ಸಾಗಿದೆ. ಜನರು ಶಾಂತಿಯುತ ಪ್ರತಿಭಟನೆಗೆ ಮುಂದಾದರೆ ರಾತ್ರೋರಾತ್ರಿ ಪೋಲಿಸ್ ದಾಳಿಗಳಾಗುತ್ತವೆ. ಇದನ್ನು ಪ್ರಧಾನಿ ದುರದೃಷ್ಟಕರ ಎಂದರೆ ಅವರದೇ ಸಂಪುಟದ ಸಚಿವರು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಒಂದು ಸರ್ಕಾರವನ್ನು ಆರಿಸಿ ಕಳಿಸಿದ್ದು ನಮ್ಮ ದುರದೃಷ್ಟ ಎಂದೇ ಹೇಳಬೇಕು.
ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾಜಪ ಸರ್ಕಾರ ನಮ್ಮ ನಾಡು ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿ ಯಡಿಯೂರಪ್ಪನವರೇ ಸರ್ವಸ್ವ. ಅವರು ಹೇಳಿದ್ದಕ್ಕೆ ಎಲ್ಲರೂ ಅಸ್ತು ಎನ್ನಲೇಬೇಕು, ಇಲ್ಲದಿದ್ದರೆ ಅವರಿಗೆ ಉಳಿಗಾಲವಿಲ್ಲ. ತಮ್ಮ ಕುಯುಕ್ತಿಯಿಂದ ಹೈಕಮಾನ್ದನ್ನೇ ಅಲುಗಾಡಿಸಬಲ್ಲ ಶಕ್ತಿ ಯಡಿಯೂರಪ್ಪನವರಿಗಿದೆ.
ದೇಶದ ಇಂಥ ಸ್ಥಿತಿಗೆ ಕಾರಣವೇನು ಎಂದು ಯೋಚಿಸಿದರೆ ಅದು ಸುತ್ತಿ ಬಳಸಿ ನಮ್ಮತ್ತಲೇ ಬೊಟ್ಟು ಮಾಡಿ ತೋರಿಸುತ್ತದೆ. ಹಿರಿಯ ನ್ಯಾಯವಾದಿಗಳಾದ ಎ.ಜಿ. ನೂರಾನಿ ಅವರು ” Its an illusion that India is a multi-party democracy. There is really only one party” ಎಂದು ಒಂದೆರಡು ವರ್ಷದ ಹಿಂದೆ ತಮ್ಮ ಲೇಖನವೊಂದರಲ್ಲಿ ಹೇಳಿದ್ದರು ಇಂದಿನ ಪರಿಸ್ಥಿತಿಗೆ ಈ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತದೆ. ಹೌದು, ನಾವು ಭ್ರಮೆಯಲ್ಲಿದ್ದೇವೆ. ಇಲ್ಲಿ ಇರುವುದು ಒಂದೇ ಪಕ್ಷ. ಇಲ್ಲಿ ಆಡಳಿತ ಪಕ್ಷ ಏನು ಮಾಡುತ್ತದೋ, ಏನು ಹೇಳುತ್ತದೋ ಅದೇ ಸರಿ. ವಿರೋಧಪಕ್ಷ ಹೆಸರಿಗೆ ಮಾತ್ರ ಇದೆ. ಅದಕ್ಕೆ ಕವಡೆ ಕಿಮ್ಮತ್ತಿಲ್ಲ.
ಉದಾಹರಣೆಗೆ, ಇದೀಗ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಕಪ್ಪುಹಣದ ವಿಷಯವನ್ನೇ ತೆಗೆದುಕೊಂಡರೆ ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಭಾಜಪ ” ಕಪ್ಪುಹಣವನ್ನು ಕೂಡಲೇ ವಾಪಸ್ ತನ್ನಿ ” ಎಂದರೆ ” ನೀವು ಆಡಳಿತದಲ್ಲಿದ್ದಾಗ ಏಕೆ ಕಪ್ಪುಹಣವನ್ನು ವಾಪಸ್ ತರಲಿಲ್ಲ, ಈಗೇಕೆ ಬೊಬ್ಬೆ ಹಾಕುತ್ತೀರಿ” ಎಂದು ಕೇಂದ್ರ ಸರ್ಕಾರವು ‘ಭಾಜಪ’ದ ಬಾಯಿ ಮುಚ್ಚಿಸುತ್ತದೆ. ಇನ್ನು ರಾಜ್ಯಸರ್ಕಾರದ ವಿಷಯಕ್ಕೆ ಬಂದರೆ ಭೂಹಗರಣ, ಗಣಿಹಗರಣ ಇನ್ನಿತರ ಯಾವುದೇ ವಿಷಯ ಚರ್ಚೆಗೆ ಬಂದರೂ ವಿರೋಧ ಪಕ್ಷಗಳ ಮೇಲೆ ಹರಿಹಾಯುವ ನಮ್ಮ ಮುಖ್ಯಮಂತ್ರಿಗಳು “ನಿಮ್ಮ ಆಡಳಿತದ ಅವಧಿಯಲ್ಲಿ ನೀವು ಮಾಡಿದ್ದೇನು? ನೀವು ಲೂಟಿ ಮಾಡಿಲ್ಲವೇ, ನಾವು ಮಾಡಿದರೆ ತಪ್ಪೇನು? “ಎಂಬ ಧೋರಣೆಯ ಹೇಳಿಕೆ ನೀಡುತ್ತಾರೆ.
ಇವೆಲ್ಲವನ್ನೂ ನೋಡಿದಾಗ ಒಮ್ಮೊಮ್ಮೆ ಮನಸ್ಸಿಗೆ ಆಘಾತವಾಗುತ್ತದೆ. ನಾವು ಮತದಾರರು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಏಳುತ್ತದೆ. ಚುನಾವಣಾ ಸಮಯದಲ್ಲಿ ಮತ ಕೇಳಲು ಬರುವ ಪಕ್ಷಗಳ ಪ್ರಣಾಳಿಕೆಗಳು ವಿಭಿನ್ನವಾಗಿರುತ್ತವೆ ಹೊರತು ಆಡಳಿತದಲ್ಲಿ ಅಂತಹದ್ದೇನೂ ವ್ಯತ್ಯಾಸ ಇರುವುದಿಲ್ಲ. ಹಿಂದಿನ ಸರ್ಕಾರಗಳು ಕೈಗೊಂಡ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿ, ಹೊಸ ಹೆಸರು ನೀಡಿ ” ಹೊಸ ಬಾಟಲಿಯಲ್ಲಿ ಹಳೆಯ ಮದ್ಯ” ಎಂಬಂತೆ ಆಡಳಿತ ನಡೆಸುತ್ತಾರೆ.
ಕೆಟ್ಟದ್ದಕ್ಕೆಲ್ಲಾ ಹಿಂದಿನ ಸರ್ಕಾರವನ್ನು ದೂಷಿಸುತ್ತಾ,ಒಳ್ಳೆಯದ್ದಕ್ಕೆಲ್ಲಾ ತಮ್ಮಿಂದಲೇ ಆದದ್ದು ಎಂದು ಬೀಗುತ್ತಾ, ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಾ ಇದನ್ನೇ ‘ಆಡಳಿತ’ ಎಂದು ತಿಳಿದಿರುವುದು ಇಂದಿನ ರಾಜಕಾರಣಿಗಳ ಬೌದ್ದಿಕ ದಾರಿದ್ರ್ಯದ ಪರಮಾವಧಿ ಎನ್ನದೆ ವಿಧಿಯಿಲ್ಲ.
ಒಟ್ಟಾರೆಯಾಗಿ ನಾನು ಹೇಳಬಯಸುವುದೇನೆಂದರೆ ನಮ್ಮ ದೇಶದಲ್ಲಿಯೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಕುರಿತಾಗಿ ಸಾರ್ವಜನಿಕ ಚರ್ಚೆಗಳಾಗಬೇಕಿದೆ. ಈ ಪದ್ಧತಿ ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿದ್ದು ಇಲ್ಲಿಯೂ ಇಂತಹ ಚರ್ಚೆ ನಡೆದರೆ ಮತದಾರನನ್ನು ಜಾಗೃತನಾಗಿಸಲು ನೆರವಾಗುತ್ತದೆ.
**********
travelpod.com
ವಿದ್ಯಾವ೦ತರ ನಿರ್ಲಿಪ್ತತೆಯೇ ಈ ಎಲ್ಲ ಅನಿಷ್ಟಗಳಿಗೂ ಕಾರಣ ಎ೦ದು ನನ್ನ ಅಭಿಪ್ರಾಯ. ಮತದಾನದ ದಿನ ತಮ್ಮ ಜವಾಬ್ಧಾರಿ ನಿರ್ವಹಿಸದೆ ಮುಸುಕು ಹೊದ್ದು ಮಲಗುವವರು, ಕ್ಯಾಬ್ ಬುಕ್ ಮಾಡಿ ಯಾತ್ರೆ ಹೋಗಿ ಮಜಾ ಮಾಡುವವರು ಈಗಲಾದರೂ ಎಚ್ಚೆತ್ತು ದೇಶದ ಆಗುಹೋಗುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ. ಮು೦ದಿನ ಚುನಾವಣೆಗಳಲ್ಲಿಯಾದರೂ ತಮ್ಮ ಪರದೆಯಿ೦ದ ಹೊರ ಬ೦ದು ಮತ ಚಲಾಯಿಸಿ ಅತ್ಯ೦ತ ಕಡಿಮೆ ಭ್ರಷ್ಟರನ್ನು ಆಯ್ಕೆ ಮಾಡಬೇಕಿದೆ. ಆಗಲಾದರೂ ಪರಿಸ್ಥಿತಿ ಸುಧಾರಿಸಬಹುದೇನೋ>??
100% Right
ನಿಮ್ಮ ಮಾತು ಅಕ್ಷರಶಃ ಸತ್ಯ ಮಂಜು. ವಿದ್ಯಾವಂತರು ಮತದಾನದಲ್ಲಿ ಸಕ್ರಿಯರಾಗಬೇಕಿದೆ. ಭಾರತೀಯ ಜನತಾ ಪಕ್ಷ ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ “ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ನೂರು ದಿನದಲ್ಲಿ ಕಪ್ಪುಹಣವನ್ನು ವಾಪಸ್ ತರಲಾಗುತ್ತದೆ” ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ನೂರು ದಿನದಲ್ಲಿ ಕಪ್ಪುಹಣ ವಾಪಸ್ ತರುವುದು ಸಾಧ್ಯವೇ? ಸಾಧ್ಯವಾಗುವುದಾದರೆ ಹೇಗೆ? ಅನುಸರಿಸಬೇಕಾದ ಕ್ರಮಗಳೇನು? ಎಂಬ ಬಗ್ಗೆ ವಿಸ್ತೃತ ಚರ್ಚೆಯಾಗಬೇಕಿತ್ತು. ಹೀಗೆ ಯಾವುದೇ ಪಕ್ಷದ ಪ್ರಣಾಳಿಕೆಯ ಕುರಿತು ಚರ್ಚಿಸಿ, ಚಿಂತನೆ ನಡೆಸಿ ಮತದಾನ ಮಾಡಿದಾಗ ಮಾತ್ರ ಉತ್ತಮ ಸರ್ಕಾರ ರಚನೆ ಸಾಧ್ಯ.
Citizens get the government which they deserve.
ಈ ಅಭಿಪ್ರಾಯ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ನಮ್ಮಂಥ ವಿಧ್ಯಾವಂತರದ್ದು. ಎಲ್ಲಿಯವರೆಗೆ ನಮ್ಮ ಹಳ್ಳಿಗಳಲ್ಲಿ ಅರಿವಿನ ಮತ್ತು ವಿವೇಚನೆಯ ದೀಪ ಹಚ್ಚುವ ಅಕ್ಷರ ಜ್ಞಾನ ಕಾರ್ಯ ನಡೆಯುವುದಿಲ್ಲವೋ ನಮ್ಮ ದೇಶದಲ್ಲಿ ಇನ್ನಷ್ಟು ಇಂಥಹ ಭೀಕರ ವರ್ತಮಾನಗಳನ್ನು ನಾವು ನೋಡುತ್ತಲೇ ಇರುತ್ತೇವೆ. ತುಕ್ಕು ಹಿಡಿದ ಸಮಾಜದ ಬದಲಾವಣೆ ಹೇಗೆ ಸಾಧ್ಯ ಅಂದರೆ ವಿವೇಚನಾಯುಕ್ತರಲ್ಲಿ ಒಗ್ಗಟ್ಟು ಇರಬೇಕು. ಅಲ್ಲಿಯವರೆಗೆ ನಾವೇ ರಚಿಸಿಕೊಂಡಿರುವ ಕಾರ್ಯಾಂಗ , ನ್ಯಾಯಾಂಗ ಮತ್ತು ರಕ್ಷಣಾಂಗಗಳ ಬಗ್ಗೆ ನಂಬಿಕೆ ಇಡಲು ಅಸಾಧ್ಯ. ನಿಮ್ಮ ಲೇಖನಕ್ಕೆ ಧನ್ಯವಾದಗಳು ಮಾನ್ಯ ವಿಜಯ್ ಅವರೇ.
ಹೌದು ರವಿ, ವ್ಯವಸ್ಥೆಯ ಕುರಿತು ಅನಕ್ಷರಸ್ಥರಲ್ಲಿ, ಅವಿದ್ಯಾವಂತರಲ್ಲಿ ಅರಿವು ಮೂಡಿಸಬೇಕಿದೆ. ಇಲ್ಲವಾದಲ್ಲಿ ಬದಲಾವಣೆ ಅಸಾಧ್ಯ.
ಅರಿವು ಬರಬೇಕಿರುವುದು ವಿದ್ಯಾವಂತರಿಗೋ? ಅವಿದ್ಯಾವಂತರಿಗೋ? ಬಹುತೇಕ ಕಾನೂನುಗಳನ್ನು ಮುರಿಯುತ್ತಿರುವವರು, ಅಸಂವಿಧಾನಾತ್ಮಕ ನಡೆಗಳು, ವಿದ್ಯಾವಂತರಿಂದಲೇ ನಡೆಯುತ್ತಿರುವುದು. ಇದೊಂದು ಕಾರಣ ಅಷ್ಟೆ ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣವೆಂಬ ಹಾಗೆ. ಸಮಸ್ಯೆಗಳ ಆಗರ ಇರುವುದೇ ವಿದ್ಯಾವಂತರಲ್ಲಿ ವಿದ್ಯಾವಂತರಿಂದ.
ವಿದ್ಯಾವಂತರು ಮತದಾನ ಮಾಡುವುದಿಲ್ಲ, ಹಾಗಾಗಿ ಈ ಪರಿಸ್ಥಿತಿ ಇದೆ, ಅನ್ನುವುದು ಈಗ “ಫ್ಯಾಶನ್” ಆದಂತಿದೆ.
ಚುನಾವಣಾ ಕಣದಲ್ಲಿ ವಿದ್ಯಾವಂತ ಅಭ್ಯರ್ಥಿಗಳೇ ಇರ್ತಾರಲ್ಲಾ ಸ್ವಾಮಿ, ಅವರು ಕಲಿತ ವಿದ್ಯೆ ಎಲ್ಲಿಗೆ ಹೋಗಿದೆ? ವಿದ್ಯಾವಂತರೆಲ್ಲಾ ವಿವೇಕಶೀಲರೆನ್ನುವುದಾದರೆ, ವಿದ್ಯಾವಂತ ರಾಜಕಾರಣಿಗಳ್ಯಾಕೆ ಮೂರ್ಖರಂತೆ ವರ್ತಿಸುತ್ತಿದ್ದಾರೆ?
ಈಗಿನ ಹೆಚ್ಚಿನೆಲ್ಲಾ ರಾಜಕಾರಣಿಗಳು ವಿದ್ಯಾವಂತರೇ ಆಗಿದ್ದಾರೆ. ಪದವೀಧರರೇ ಆಗಿದ್ದಾರೆ.
ವಿದೇಶಗಳಲ್ಲಿ ಕಲಿತು, ವಿದೇಶೀ ಟೊಪ್ಪಿ ಹಾಕಿಕೊಳ್ಳುವ ಶೋಕೀ ಮನುಷ್ಯ, ನಮ್ಮ ರಾಜ್ಯದ ಮಾಜೀ ಮುಖ್ಯಮಂತ್ರಿ ಹಾಗೂ ರಾಮಾಯಣವನ್ನೇ ಅರಿದು ಕುಡಿದು ಮತ್ತೊಂದು ಶೀರಾಮಾನ್ವೇಷಣೆ ಬರೆದ, ನಮ್ಮ ರಾಜ್ಯದ ಮಹಾ ಬುದ್ಧಿವಂತ ಮಾಜೀ ಮುಖ್ಯಮಂತ್ರಿ, ಇವರೀರ್ವರ ವಿವೇಕ, ಇಂಗ್ಲಂಡೀನ ಮಾಜೀ ಬಾರ್ ನೌಕರಳೊರ್ವಳ ಮುಂದೆ ಕೈಕಟ್ಟಿ ನಿಲ್ಲುವಾಗ ಯಾಕೆ ಕೆಲ್ಸ ಮಾಡುವುದಿಲ್ಲ? ವಿದ್ಯಾವಂತರ ಕೊರತೆ ಇಲ್ಲ. ವಿವೇಕಶೀಲರ ಕೊರತೆ ಇದೆ ನಮ್ಮ ನಾಡಿನಲ್ಲಿ.
Each & every citizen has to read a small article in todays(1oth June) New indian express written by the one & the only Kochouseph Chittilapally, the CMD of VGuard.Its our corrupt mindset that need s a crucial change. But how… needs to be pondered at.
@Narasinga Rao: I read it and I feel that Mr. Kochouseph Chittilapally has not said anything new in his opinion!
Listing the problem everyone does. But, none has a solution to any of the problems!
ಯಾವುದೊ ಅನಾಗರಿಕ ದೇಶದಲ್ಲಿ ನೋಡ್ತಾ ಇದ್ದದ್ದು, ಇವತ್ತು ಒಂದೊಂದಾಗಿ ನಮ್ಮದೇ ಮಣ್ಣಿನಲ್ಲಿ ನೋಡ್ತಾ ತೆಪ್ಪಗೆ ಕುಳಿತುಕೊಳ್ಳೋ ಅಸಹಾಯಕ ಸ್ಥಿತಿ ನಮ್ಮದಾಗಿದೆ.