ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು………..
– ಸುಬ್ರಮಣ್ಯ ಮಾಚಿಕೊಪ್ಪ
ಭ್ರಷ್ಟಾಚಾರದ ವಿರುದ್ದ ಹೋರಾಡಲು ಒಂದು ಹರಿತ ಆಯುಧಕ್ಕಾಗಿ ಉಪವಾಸ ಸತ್ಯಾಗ್ರಹಗಳೆಲ್ಲಾ ನಡೆದುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇನ್ನು ಸಿದ್ದವಾಗಿ ಬರಲಿರುವ ಲೋಕಪಾಲ್ ಮಸೂದೆ ಎಷ್ಟು ಹರಿತವೋ ಎಂಬುದನ್ನು ಕಾಲವೇ ಹೇಳಬೇಕು. ಭ್ರಷ್ಟಾಚಾರದ ವಿರುದ್ದ ಹೋರಾಡಲು ಈಗಾಗಲೇ ಒಂದು (ಸಾಕಷ್ಟು ಹರಿತವಾದ) ಆಯುದವಿದೆಯೆಂದು ಎಷ್ಟು ಜನಕ್ಕೆ ಗೊತ್ತು?? ಆ ಆಯುದವನ್ನು ಉಪಯೋಗಿಸಿ“ಅಲ್ಲಿ ಎನು ನಡಿಯುತ್ತಿದೆ?” ಎಂದು ತಿಳಿದುಕೊಂಡು ಭ್ರಷ್ಟಾಚಾರದ ಆಳವನ್ನು ಕಾಣಬಹುದು ಎಂಬುದು ಎಷ್ಟು ಜನರಿಗೆ ಗೊತ್ತಿದೆ?? ಆ ಆಯುದದ ಹೆಸರು ನಿಮಗೆಲ್ಲಾ ಎಲ್ಲೋ ಕೇಳಿ ಗೊತ್ತಿರಬಹುದು. ನಿಮ್ಮಲ್ಲಿ ಕೆಲವರಾದರೂ ಅದನ್ನು ಉಪಯೋಗಿಸಿಯೂ ಉಪಯೋಗಿಸಿರಬಹುದು. (ಕಾಮೆಂಟ್ ನಲ್ಲಿ ನಿಮ್ಮ ಅನುಭವ ಹೇಳಬಹುದು).ಅದೇ ಮಾಹಿತಿ ಹಕ್ಕು ಎಂಬ ಕಾನೂನು!!! ಈ ಲೇಖನ ಓದಿದ ಮೇಲೆ ಒಂದಿಬ್ಬರು ಇದನ್ನು ಉಪಯೋಗಿಸಿ“ಅಲ್ಲಿ ಎನು ನಡಿಯುತ್ತಿದೆ” ಎಂದು ತಿಳಿದುಕೊಂಡು ಸಂಬಂದಪಟ್ಟವರಿಗೆ ದೂರು ಕೊಟ್ಟರೆ ಕಾಮಗಾರಿಗಳು ಸ್ವಲ್ಪವಾದರೂ ಸರಿಯಾಗುತ್ತದೆ ಎಂಬುದೇ ನನ್ನ ಆಶಯ ಹಾಗೂ ನನ್ನ ಅನುಭವ. (ಹಾಗೆಲ್ಲಾ ಕಾಟಾಚಾರಕ್ಕೆ ಏನೇನೋ ಮಾಡದಂತೆ ಸ್ವಲ್ಪವಾದರೂ ಸರಿಯಾಗಿ ಕೆಲಸಮಾಡುವಂತೆ ಚುರುಕು ಮುಟ್ಟಿಸುತ್ತದೆ).ನಮ್ಮೂರ ರಸ್ತೆಯೊಂದರ ಕಳಪೆ ಡಾಮರ್ ಕಾಮಗಾರಿ ನಡೆದಾಗ – ಈ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ – ಕಾಮಗಾರಿಯ ಎಸ್ಟಿಮೆಶನ್ ತರಿಸಿ – ದೂರು ಕೊಡುತ್ತೇವೆಂದಾಗ – ಜಿಲ್ಲಾಪಂಚಾಯತ್ ಇಂಜೀನಿಯರ್ ಮತ್ತು ರಸ್ತೆ ಕಂಟ್ರಾಕ್ಟರ್ ನಮ್ಮ ಮನೆಯವರೆಗೂ ಪಾದಬೆಳೆಸಿ – ತಪ್ಪಾಗಿದ್ದನ್ನು ಒಪ್ಪಿಕೊಂಡು – ರಸ್ತೆಗೆ ಹೊಸದಾಗಿ ಜಲ್ಲಿ ಟಾರಿನ ಒಂದು ಪದರ ಹಾಕಿದ ವಿಷಯವೇ ಈ ಬ್ಲಾಗಿನ ಬರಹ. ಮತ್ತಷ್ಟು ಓದು 
ಸೊರಗುತ್ತಿರುವ ಕನ್ನಡ ನುಡಿ; ಕೊರಗುತ್ತಿರುವ ಕನ್ನಡಿಗರು
-ರಶ್ಮಿ ಕಾಸರಗೋಡು
ರಾಜ್ಯೋತ್ಸವ…ರಾಜ್ಯದೆಲ್ಲೆಡೆ ಸಂಭ್ರಮದ ವಾತಾವರಣ. ‘ಜೈ ಕನ್ನಡಾಂಬೆ’ ಎನ್ನುವ ಘೋಷಣೆ, ಕನ್ನಡದ ಹೋರಾಟಗಾರರ ಭಾಷಣಗಳು, ಕನ್ನಡದ ಹಿರಿಯ ಕವಿಗಳ ಕಟೌಟ್ ಗಳಿಗೆ ಮಾಲಾರ್ಪಣೆ, ಅದ್ದೂರಿ ಆರ್ಕೆಸ್ಟ್ರಾಗಳು, ‘ಕನ್ನಡ ಉಳಿಸಿ, ಬೆಳೆಸಿ’ಎನ್ನುವ ಕೂಗುಗಳು, ಒಂದಷ್ಟು ಯೋಜನೆಗಳು , ಭರವಸೆಗಳು, ರಾಜ್ಯೋತ್ಸವ ಪ್ರಶಸ್ತಿಗಳು..ಹೀಗೆ ನವಂಬರ್ ತಿಂಗಳಿಡೀ ರಾಜ್ಯೋತ್ಸವ ಆಚರಣೆಯಲ್ಲಿ ಕಳೆದು ಹೋಗುತ್ತದೆ. ಮುಂದಿನ ವರ್ಷ ನವಂಬರ್ ತಿಂಗಳು ಬಂದಾಗ ಇದೇ ಆಚರಣೆ ಪುನರಾವತಿ೯ಸುತ್ತದೆ.
ಪ್ರತೀ ಸಲ ಕರ್ನಾಟಕ ರಾಜ್ಯೋತ್ಸವ ಆಚರಣೆಯ ವೇಳೆ ಕೇಳಿ ಬರುವ ಒಂದೇ ಕೂಗು “ಕನ್ನಡ ಭಾಷೆಯನ್ನು ಉಳಿಸಿ!” ಕರ್ನಾಟಕದ ಮಾತೃಭಾಷೆಯಾಗಿರುವ ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಿ ಎಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ಕನ್ನಡಿಗರದ್ದು.
ಹಾಗಾದರೆ ನಮ್ಮ ಭಾಷೆಯನ್ನು ಸಾಯಿಸುತ್ತಿರುವವರು ಯಾರು? ಜಾಗತೀಕರಣ, ವಾಣಿಜ್ಯೀಕರಣದಿಂದ ಪರಭಾಷೆಗಳು ಕನ್ನಡದ ಮೇಲೆ ಪ್ರಭಾವ ಬೀರಿರಬಹುದು. ಆದರೆ ಪ್ರಾಚೀನ ಹಾಗೂ ಸಮೃದ್ದ ವಾದ ಕನ್ನಡ ನುಡಿ ಇಷ್ಟೊಂದು ಕ್ಷೀಣವಾಗಲು ಕಾರಣಕತ೯ರು ನಾವೇ ಅಲ್ಲವೇ?ಎಂಬುದು ಚಿಂತಿಸಬೇಕಾದ ಸಂಗತಿ.
ಭಾಷೆ ಎನ್ನುವುದು ಸಂವಹನ ಮಾಧ್ಯಮ ಮಾತ್ರವಾಗಿರದೆ ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅಂತಹ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಕನ್ನಡ ನುಡಿ ಇಂದು ಕರ್ನಾಟಕದಲ್ಲಿ ಸೊರಗಿಹೋಗುತ್ತಿದೆ. ಒಂದು ಕಾಲದಲ್ಲಿ “ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ” ಎಂದು ಹಾಡಿದ್ದ ನಾವು ಇಂದು Sorry, I can’t speak kannada ಅನ್ನುತ್ತೇವೆ.
ಪರಭಾಷಾ ವ್ಯಾಮೋಹದಲ್ಲಿ ಕನ್ನಡ ಬಡವಾಯಿತೆ?
ಹೌದು. ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ಅನ್ನುವ ಹಾಗೆ ವಿದೇಶೀ ಸಂಸ್ಕೃತಿಯ ಅನುಕರಣೆ ನಮ್ಮ ಭಾಷೆಯನ್ನೂ ಬಲಿತೆಗೆದುಕೊಂಡಿದೆ. ಭೌಗೋಳಿಕ ಪ್ರದೇಶಕ್ಕನುಸಾರವಾಗಿ ನಮ್ಮ ಭಾಷೆಯ ಮೇಲೆ ಇತರ ಸಂಸ್ಕೃತಿ ಹಾಗೂ ಭಾಷೆಯ ಪ್ರಭಾವವಿದ್ದೇ ಇರುತ್ತದೆ. ಅದು ಮುಂದೆಯೂ ಇರುತ್ತದೆ. ಹಾಗಂತ ನಮ್ಮ ಮಾತೃಭಾಷೆಯನ್ನು ಕಡೆಗಣಿಸುವುದು ಎಷ್ಟು ಸರಿ? ಕಾಲ ಕಳೆದಂತೆ ಭಾಷೆ ಪ್ರಬುದ್ದತೆಯನ್ನು ಗಳಿಸುತ್ತದೆ ಎನ್ನುವುದಾದರೆ ಕನ್ನಡ ಭಾಷೆಗೆ ಈ ಸ್ಥಿತಿ ಯಾಕೆ ಬಂತು? ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಯಾಕೆ? ಅಂದ ಹಾಗೆ ಕನ್ನಡ ಅನ್ನ ಕೊಡದ ಭಾಷೆಯೆ? ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.




