ಪೆಟ್ರೋಲ್ ದರ ಹೆಚ್ಚಳ ಮತ್ತು ನಾವು
– ಪ್ರಶಸ್ತಿ.ಪಿ,ಸಾಗರ
ಇದೇ ಏಪ್ರಿಲ್ ಒಂದರಲ್ಲಿ ೭೩.೫ ಇದ್ದ ಪೆಟ್ರೋಲು ಈಗ ೮೧.೭ ಮುಟ್ಟಿದೆ.ಒಂದೇ ತಿಂಗಳಲ್ಲಿ ಅಂದಾಜು ೭ ರೂ ಹೆಚ್ಚಳ! ಪ್ರತೀ ಬಾರಿ ಹೆಚ್ಚಾದಾಗ್ಲೂ ಕೇಂದ್ರ ಸರ್ಕಾರ ಏನ್ಮಾಡ್ತಾ ಇದೆ? ರಾಜ್ಯ ಸರ್ಕಾರ ಏಕೆ ಸುಮ್ನಿದೆ ಅಂತ ಬೊಬ್ಬೆ ಹಾಕೋದು, ಸೈಕಲ್ ಸವಾರಿ ಮಾಡ್ಬೇಕು ಇನ್ಮುಂದೆ, ನಟರಾಜ ಸರ್ವೀಸು ಮಾಡೋಣ ಅಂತ ಸುಮ್ನೆ ಉಡಾಫೆ ಮಾಡೋದೆ ಆಯ್ತು. ಯಾರೆಷ್ಟೇ ಪ್ರತಿಭಟನೆ ಮಾಡಿದ್ರೂ ಇವ್ರು ಬಗ್ಗೊಲ್ಲ ಅಂತ ಅವ್ರಿಗೆ ಹಿಡಿಶಾಪ ಹಾಕಿದ್ರೆ ಪರಿಸ್ಥಿತಿ ಸರಿ ಆಗತ್ಯೆ? ನಮ್ಮ ಭೂಮಿಯಲ್ಲಿರೋ ನವೀಕರಿಸಲಾಗದ (ಪೆಟ್ರೋಲು, ಡೀಸೆಲು ಮುಂತಾದ)ಇಂಧನ ಮೂಲಗಳನ್ನ ಹೀಗೆ ಉಪಯೋಗಿಸ್ತಾ ಹೋದ್ರೆ ಇನ್ನು ಅಂದಾಜು ಮೂವತ್ತು ವರ್ಷಗಳಲ್ಲಿ ಅವುಗಳೆಲ್ಲಾ ಖಾಲಿ ಆಗುತ್ತೆ ಅಂತ ಹೈಸ್ಕೂಲಿನಲ್ಲೇ ಓದಿದ ನೆನಪು . ಆದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ ಏಕೆ? ಸುಧಾರಣೆ ಆಗಲಿ, ಆದರೆ ಅದು ನಮ್ಮಿಂದ ಅಲ್ಲ, ಶಂಕರಾಚಾರ್ಯರು ಹುಟ್ಟಲಿ, ಆದರೆ ಪಕ್ಕದ ಮನೆಯಲ್ಲಿ ಎಂಬಂತ ಧೋರಣೆ ಏಕೆ?
ಕೆಲವೇ ವರ್ಷಗಳ ಹಿಂದೆ ಜತ್ರೋಪಾದಂತಹ ಗಿಡಗಳಿಂದ ಜೈವಿಕ ಇಂಧನ ತಯಾರಿಸೋ ಬಗ್ಗೆ ಚರ್ಚೆ ನಡೆದಿತ್ತು. ಅವುಗಳನ್ನು ಮರುಭೂಮಿಯಂತಹ ನೀರಿಲ್ಲದ ಕಡೆಯೂ ಬೆಳೆಸಬಹುದು ಎಂಬ ವದಂತಿಯೂ/ಸುದ್ದಿಯೂ ಹಬ್ಬಿತ್ತು. ನಮ್ಮ ಕಡೆಯೂ ಅದನ್ನ ಬೇಲಿ ಬದಿಯಲ್ಲಿ ಅದನ್ನು ಹಾಕಿದ್ದೆವು. ಆಮೇಲೆ ಅದರ ಬೀಜವನ್ನು ಖರೀದಿಸುವ ಬಗ್ಗೆಯಾಗಲಿ, ಎಣ್ಣೆ ಮಾಡುವ ಸುದ್ದಿಯಾಗಲಿ ಬರಲೇ ಇಲ್ಲ. ಇಂಥಹ ಪ್ರಯತ್ನಗಳೆಲ್ಲಾ ನಿರಂತರವಾಗಿರಬಾರದೇ? ಪೆಟ್ರೋಲ್ ದರ ಜಾಸ್ತಿ ಆದಾಗ ಮಾತ್ರ ಎಲ್ಲಿ ಜತ್ರೋಪಾದವರು ಎಂದು ಗುಟುರು ಹಾಕಬೇಕೇ ?
ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಐಟಿಪಿಲ್ ಕಡೆ ಎಷ್ಟೊಂದು ಬಸ್ಸುಗಳು ಸಂಚರಿಸುತ್ತದೆ, ಅದರಲ್ಲಿ ಎಷ್ಟೊಂದು ಓಲ್ವೋಗಳು ಬೇರೆ. ಆದರೂ ಯಾವುದೇ ಸಿಗ್ನಲ್ಲಲ್ಲಿ ನೋಡಿದರೂ ಸರಾಸರಿ ಒಂದು ಬಸ್ಸಿಗೆ ೧೫-೨೦ ಬೈಕು, ೭-೮ ಕಾರುಗಳು ನಿಂತಿರುತ್ತದೆ. ಅದೂ ಒಂದು ಕಾರಿನಲ್ಲಿ ನಾಲ್ಕು ಜನರು ಬರುವ “ಕಾರ್ ಪೂಲ್” ಪದ್ದತಿಯನ್ನಾದರೂ ಅನುಸರಿಸುತ್ತಿದ್ದೇವಾ ? ಅದೂ ಇಲ್ಲ. ಎಲ್ಲ ಕಾರಿನಲ್ಲೂ ಒಬ್ಬೊಬ್ಬರೇ!! ದಯವಿಟ್ಟು ಅನ್ಯಥಾ ಭಾವಿಸದಿರಿ. ಯಾರನ್ನೂ ದೂಷಿಸುತ್ತಿಲ್ಲ.ಈ ಮಾರ್ಗ ಒಂದೇ ಅಲ್ಲ. ಬಹಳಷ್ಟು ಕಡೆ ಇದೇ ಕಥೆ. ಸರಕಾರವನ್ನು ಅಥವಾ ಇನ್ಯಾರನ್ನೋ ಎಲ್ಲದಕ್ಕೂ ದೂಷಿಸುವ ನಾವು ಇರೋ ಪೆಟ್ರೋಲನ್ನು ಉಳಿಸುವತ್ತ ನಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸಿದ್ದೇವಾ ಎಂದರೆ ಇಂತಹ ನಿರಾಶಾದಾಯಕ ಉತ್ತರಗಳೇ ದುತ್ತೆಂದು ಎದುರಾಗುತ್ತವೆ. ಸೌರಶಕ್ತಿಯ ಬಳಕೆ ಇರಬಹುದು, ಕಾರ್ಪೂಲಿಂಗ್ ಇರಬಹುದು. ನವೀಕರಿಸಲಾಗದ ಶಕ್ತಿ ಮೂಲಗಳನ್ನು ಉಳಿಸಲು, ಸಮರ್ಪಕವಾಗಿ ಬಳಸಲು ತಂತ್ರಜ್ನಾನಗಳು ನೂರೆಂಟು ಇವೆ. ಅದರಲ್ಲಿ ನ್ಯೂನತೆಗಳೂ ಇರಬಹುದು. ಆದರೆ ಮನಸ್ಸಿದ್ದಲ್ಲಿ ಮಾರ್ಗ.ಅದನ್ನು ಬಿಟ್ಟು ಇನ್ಯಾರನ್ನೋ ಗೂಬೆ ಕೂರಿಸುತ್ತಾ ಕೂತರೆ ಪೆಟ್ರೋಲ್ ರೇಟು ತೊಂಬತ್ತಲ್ಲ , ಸದ್ಯದಲ್ಲೇ ನೂರೂ ದಾಟಬಹುದು. ಇನ್ನೂರೂ ದಾಟಬಹುದು
ಚಿತ್ರ ಕೃಪೆ : indiawires.com





ಪ್ರತಿದಿನ ಹೊಸದಾಗಿ ರಸ್ತೆಗೆ ಬರುತ್ತಿರುವ ವಾಹನಗಳ ಸಂಖ್ಯೆಯನ್ನು ಗಮನಿಸಿದರೆ ಪೆಟ್ರೋಲ್ ಬೆಲೆ ಹೆಚ್ಚುತ್ತಲೇ ಹೋಗಲಿದೆ. ನಾವು ಎಷ್ಟೇ ಬೊಬ್ಬೆ ಹಾಕಿದರೂ ಇದನ್ನು ತಡೆಯಲು ಸಾಧ್ಯವಿಲ್ಲ. ಯಾವ ಸರ್ಕಾರ ಬಂದರೂ ಅಷ್ಟೇ. ಬೇಡಿಕೆ ಹೆಚ್ಚಿದಂತೆ ಬೆಲೆ ಹೆಚ್ಚಾಗುವುದು ಸಹಜ. ಸಾಧ್ಯವಾದಷ್ಟೂ ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸುವುದು ಇದಕ್ಕೆ ಒಂದು ಪರಿಹಾರ. ಪ್ರತಿಷ್ಠೆ ಮೆರೆಸಲು ಅಗತ್ಯವಿಲ್ಲದಿದ್ದರೂ ದುಬಾರಿ ಬೆಲೆಯ ಏಳೆಂಟು ಜನ ಹಿಡಿಸುವ ಕಾರಿನಲ್ಲಿ ಒಬ್ಬರೇ ಕುಳಿತು ಪ್ರಯಾಣಿಸುವ ನಮ್ಮ ಶೋಕಿಯಿಂದ ಹೊರಬರದ ಹೊರತು ಇದಕ್ಕೆ ಬೇರೆ ಮಾರ್ಗವಿಲ್ಲ. ಆದರೆ ಪ್ರತಿಷ್ಠೆ ಹಾಗೂ ಅಹಂಕಾರದ ಮದ ಏರಿಸಿಕೊಂಡ ಮಾನವರಿಗೆ ಇದು ಅರ್ಥವಾಗಲಾರದು.
ಹು ಹೌದು.. ಒಣ ಶೋಕಿ, ಪ್ರತಿಷ್ಟೆಗಳಿಗಾಗಿಯೇ ಬಹಳಷ್ಟು ಇಂಧನ ಪೋಲಾಗುತ್ತಿದೆ. ಅದನ್ನು ಸಮರ್ಪಕವಾಗಿ ಬಳಸಿದಷ್ಟೂ ಈ ಬೆಲೆ ಏರಿಕೆಯನ್ನು ಸಾಧ್ಯವಾದಷ್ಟು ಮುಂದಕ್ಕೆ ಹಾಕಬಹುದು.
ಇನ್ನು ಮುಂದೆ ಪೆಟ್ರೋಲಿನ ದರ ಹೀಗೆ ಹೆಚ್ಚುತ್ತಲೆ ಇರಲಿದೆ.. ಕೊನೆಗೊಮ್ದು ದಿನ ಸೌರಶಕ್ತಿಯೇ ಗತಿ…..
ಖಂಡಿತ ಹೌದು 😦
ಹೌದು.. ಇದೇ ರೀತಿ ಮಿತಿಮೀರಿದ ಬಳಕೆಯಿಂದ ಪೆಟ್ರೋಲಂತೂ ಉಳಿಯುವುದಿಲ್ಲ. ಮುಂದೆ ಸೌರಶಕ್ತಿಯೋ, ಪವನಶಕ್ತಿಯೋ, ಜಲಜನಕ ಶಕ್ತಿಯೋ, ವಿಧಳನ ಶಕ್ತಿಯೋ ಅಥವಾ ಇನ್ಯಾವುದಾದರೂ ಹೊಸ ಶಕ್ತಿಯೋ ಆಗರವಾಗಬಹುದು. ಅದನ್ನು ಆದಷ್ಟು ಬೇಗ ಹುಡುಕಿಕೊಂಡಷ್ಟೂ ಮನುಕುಲಕ್ಕೆ ಒಳ್ಳೆಯದು
ಮಾನ್ಯರೇ, ರೂಪಾಯಿ ಮೌಲ್ಯ ಕಡಿಮೆಯಾಯಿತು. ಡಾಲರ್ ಮೌಲ್ಯ ಹೆಚ್ಚಾಯಿತು ಎಂಬ ಕಾರಣ ತೋರಿಸಿ, ದೈನಂದಿನ ಜೀವನದಲ್ಲಿ ಅತ್ಯಾವಶ್ಯಕವಾಗಿ ಉಪಯೋಗಿಸುವ ಇಂಧನದ ಬೆಲೆಯನ್ನು ಯಾವ ಮುಲಾಜು ಇಲ್ಲದೇ ಬೆಲೆ ಏರಿಸಿರುವುದು ಅನ್ಯಾಯವಾಗಿರುತ್ತದೆ. ಇದಕ್ಕೆ ವಿರೋಧ ಪಕ್ಷಗಳು ಪ್ರತಿಭಟಿಸಬೇಕು. ಹೀಗಾದರೆ ಬಡವರ ಗತಿ ಏನು? ವಾಹನ ಸವಾರರೆಲ್ಲಾ ಶ್ರೀಮಂತರೆಂದು ಕೇದ್ರ ಸರಕಾರದ ದೋರಣೆ ಇರಬಹುದು.
ಇದರಿಂದಾಗಿ ಸ್ವಯಂ ಚಾಲಿತವಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೇಳದೆ ಕೇಳದೆ ಏರುತ್ತವೆ. ಸಾರ್ವಜನಿಕರು ಪ್ರಶ್ನಿಸಿದರೆ, ಪೆಟ್ರೋಲ್ ದರದ ಕಡೆಗೆ ಬೆಟ್ಟು ಮಾಡುತ್ತಾರೆ. ಪರ್ಯಾಯ ಇಂಧನಗಳ ಬಗ್ಗೆ ಆಗಾಗ್ಗೆ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ನೋಡಿರುತ್ತೇವೆ. ಪ್ರೋತ್ಸಾಹವಿಲ್ಲದೆ ಅದು ಅಲ್ಲಿಗೆ ಮರೆಯಾಗುತ್ತವೆ. ಸರಕಾರವಾದರೂ ಈ ಬಗ್ಗೆ ಯೋಚನೆ ಮಾಡಬೇಕು. ಹೋಗಲಿ ರೂಪಾಯಿ ಮೌಲ್ಯ ಹೆಚ್ಚಾದ ನಂತರವಾದರೂ ಬೆಲೆ ಇಳಿಸುತ್ತಾರೋ ಏನೋ? ಕಾದು ನೋಡಬೇಕು ಅಲ್ಲವೆ? ವಂದನೆಗಳೊಡನೆ.
ಹೌದು.. ರೂಪಾಯಿ ಮೌಲ್ಯ ಆಗೊಮ್ಮೆ ಈಗೊಮ್ಮೆ ಏರುವುದೂ ಒಂಟು.ಆದರೆ ಇಲ್ಲಿಯವರೆಗೆ ರೂಪಾಯಿ ಮೌಲ್ಯ ಹೆಚ್ಚಿದಾಗ ಪೆಟ್ರೋಲ್ ದರ ಇಳಿಸಿದ ಉದಾಹರಣೆ ನೆನಪಾಗುತ್ತಿಲ್ಲ. ಪೆಟ್ರೋಲು, ಡೀಸೆಲು ಇವೆಲ್ಲಾ ನವೀಕರಿಸಲಾಗದ ಇಂಧನ ಮೂಲಗಳಲ್ಲವೇ? ಎಷ್ಟು ದಿನ ಅಂತ ತೋಡಲಾದೀತು. ಖರ್ಚಾಗುತ್ತಾ ಬಂದಂತೆ ಅಳಿದುಳಿದುದರ ಮೌಲ್ಯ ಏರೇ ಏರುತ್ತದೆ .. ಪ್ರತಿಕ್ರಿಯೆಗೆ ವಂದನೆಗಳು 🙂