ವಿಷಯದ ವಿವರಗಳಿಗೆ ದಾಟಿರಿ

ಮೇ 31, 2012

11

ಸಾಮಾಜಿಕ ಕಳಕಳಿಯೆಂದರೆ…..

‍ನಿಲುಮೆ ಮೂಲಕ

-ಡಾ.ಅಶೋಕ್ ಕೆ.ಆರ್

ತೀರ ಗಂಗಾಧರ್ ಮೊದಲಿಯಾರ್ ಕೂಡ ಈ ರೀತಿಯಾಗಿ ಬರೆಯಬಲ್ಲರು ಎಂದು ನಿರೀಕ್ಷಿಸಿರಲಿಲ್ಲ! ಪ್ರಜಾವಾಣಿಯ ಸಿನಿಮಾರಂಜನೆಯ ಫಿಲಂ ಡೈರಿ ಅಂಕಣದಲ್ಲಿ ಅಮೀರ್ ಖಾನನ ಸತ್ಯಮೇವ ಜಯತೆಯ ಬಗ್ಗೆ ಬರೆದಿದ್ದಾರೆ. ‘ಬುರುಡೆ ಪುರಾಣ’ ಎಂಬ ಶೀರ್ಷಿಕೆಯೇ ಅಸಂಬದ್ಧವಾಗಿದೆ. ಅಮೀರ್ ಖಾನನ ಕೆಲಸವನ್ನು ಮೆಚ್ಚುತ್ತಲೇ ಅವನನ್ನು ತೆಗಳುತ್ತಾ ಹೋಗುತ್ತಾರೆ. ಭಾವನೆಗಳನ್ನು ಉದ್ರಿಕ್ತಗೊಳಿಸಿ ಹಣ ಮಾಡುವ ‘ದಂಧೆ’ ಎಂದುಬಿಡುತ್ತಾರೆ. ಅಮೀರ್ ಖಾನ್ ಹೋರಾಟಗಾರನಲ್ಲ, ಸಾಮಾಜಿಕ ಕಾರ್ಯಕರ್ತನೂ ಅಲ್ಲ; ಆತ ಒಬ್ಬ ನಟ, ನಿರ್ಮಾಪಕ, ನಿರ್ದೇಶಕ. ಹಣವಿಲ್ಲದೆ ಏನೂ ಮಾಡಲಾಗದ ಚಿತ್ರರಂಗದವನು. ಯಾವ ಕಾರ್ಯಕ್ರಮ ಮಾಡಿದರೂ ಅದರಿಂದ ಲಾಭ ಬರುವುದನ್ನು ಅವನು ಗಮನಿಸಲೇಬೇಕು. ‘ಏರ್ ಟೆಲ್ನಿಂದ ಮೇಸೇಜ್ ಮಾಡಿ, ಕೇವಲ ಒಂದು ರುಪಾಯಿ’ ಎಂದವನು ಕಾರ್ಯಕ್ರಮದ ಕೊನೆಯಲ್ಲಿ ಹೇಳುವುದು ಕೂಡ ಲಾಭದ ಒಂದು ಮುಖ. ಇವೆಲ್ಲವೂ ಸತ್ಯವೇ, ಆದರೆ….
ಪತ್ರಿಕೆಗಳಿರಬಹುದು, ಅಂತರ್ಜಾಲ ತಾಣಗಳಲ್ಲಿರಬಹುದು ಇಂದು ಅಮೀರ್ ಖಾನನ ಕಾರ್ಯಕ್ರಮವನ್ನು ಅಮಿತಾಭ್ ನಡೆಸಿಕೊಟ್ಟ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಹೋಲಿಸಿ ಮಾತನಾಡುತ್ತಾರೆ. ಕೋಟ್ಯಧಿಪತಿಗೆ ಹೆಚ್ಚು ಟಿ.ಆರ್.ಪಿ ಇತ್ತು ಎಂದು ಹೇಳುತ್ತಾರೆ. ಇವೆರಡೂ ಕಾರ್ಯಕ್ರಮಗಳನ್ನು ಹೋಲಿಸುವುದೇ ಹಾಸ್ಯಾಸ್ಪದ. ಎರಡರ ಉದ್ದಿಶ್ಯವೂ ಬೇರೆ. ‘ಪ್ರೈಮ್ ಟೈಮ್’ ಎಂದು ಕರೆಯಲ್ಪಡುವ ರಾತ್ರಿ ಎಂಟರ ಸಮಯವನ್ನು ಬಿಟ್ಟು ಅಮೀರ್ ಖಾನ್ ಭಾನುವಾರ ಬೆಳಿಗ್ಗೆ ಹನ್ನೊಂದರ ಸಮಯವನ್ಯಾಕೆ ಆರಿಸಿದ ಎಂಬುದನ್ನೂ ಗಮನಿಸಬೇಕಲ್ಲವೇ? ಹಣ ಮಾಡುವುದಷ್ಟೇ ಉದ್ದೇಶವಾಗಿದ್ದರೆ ಈ ‘ಮೂರ್ಖ’ ಕೆಲಸವನ್ಯಾಕೆ ಮಾಡಬೇಕಿತ್ತವನು?
ಇನ್ನು ಭಾವನೆಗಳ ದುರುಪಯೋಗದ ಬಗ್ಗೆ ಬರೆಯುವ ಗಂಗಾಧರ್ ಮೊದಲಿಯಾರರು ಕನ್ನಡದಲ್ಲೇ ಲಕ್ಷ್ಮಿ, ಮಾಳವಿಕ ಗಂಡ ಹೆಂಡಿರ ಜಗಳವನ್ನು ಬಿಡಿಸಿದ್ದಾರೆ , ಇಂಥ ಕಾರ್ಯಕ್ರಮವನ್ನು ಬೆಂಬಲಿಸಿ ಎಂದಿದ್ದಾರೆ! ಬಹುಶಃ ಅವರು ಆ ಕಾರ್ಯಕ್ರಮಗಳನ್ನು ಸರಿಯಾಗಿ ಗಮನಿಸಿದ ಹಾಗೆ ಕಾಣುವುದಿಲ್ಲ. ಮನೆಯೊಳಗಿನ ಜಗಳವನ್ನು ಟಿವಿ ಮುಂದೆ ತಂದು ಅಲ್ಲೇ ಅವರು ಬಡಿದಾಡುವುದನ್ನು ತೋರಿಸಿ ಹಣ ಮಾಡಿದ ಕಾರ್ಯಕ್ರಮಗಳನ್ನು ಸಮಾಜವನ್ನು ಕಾಡುತ್ತಿರುವ ವಿಷಯಗಳ ಬಗ್ಗೆ ಬೆಳಕು ಚೆಲ್ಲಲೆತ್ನಿಸುತ್ತಿರುವ ಸತ್ಯಮೇವ ಜಯತೆಗೆ ಹೋಲಿಸುವುದು ಎಷ್ಟರ ಮಟ್ಟಿಗೆ ಸರಿ?
‘ಪುನೀತ್ ಕೋಟ್ಯಧಿಪತೆಯನ್ನು ಸಮರ್ಥವಾಗೇ ನಿಭಾಯಿಸಬಹುದಾದರೆ ಅಮಿತಾಭ್ ರ ಕೌನ್ ಬನೇಗಾ ಕರೋಡ್ ಪತಿಯನ್ನು ಡಬ್ ಮಾಡಬೇಕೇಕೆ?’ ಎಂದು ಪ್ರಶ್ನಿಸುತ್ತಾರೆ. ಕನ್ನಡದ ಕೋಟ್ಯಧಿಪತಿ ಯಶಸ್ವಿ ಕಾರ್ಯಕ್ರಮ, ಪುನೀತ್ ಅದನ್ನು ಚೆನ್ನಾಗಿಯೇ ನಡೆಸಿಕೊಡುತ್ತಿದ್ದಾರೆ ಎಂಬುದು ನಿಜವಾದರೂ ಅದು ವರುಷಗಳ ಹಿಂದೆ ಬಂದ ಹಿಂದಿ ಕಾರ್ಯಕ್ರಮದ ಯಥಾವತ್ ರೀಮೇಕು ಎಂಬುದನ್ನು ಮರೆಯಬಾರದಲ್ಲವೇ? ಪುನೀತ್ ಸಾಮರ್ಥ್ಯ ರೀಮೇಕುಗಳಲ್ಲಿ ಕಳೆದುಹೋಗುವಷ್ಟು ಕನ್ನಡದ ಕ್ರಿಯಾತ್ಮಕ ಮನಸ್ಸುಗಳು ಜಡಗಟ್ಟಿ ಹೋಗಿದೆಯೇ?
‘ಸತ್ಯಮೇವ ಜಯತೆ’ ಹೊಸ ವಿಷಯಗಳನ್ನೂ ಹೇಳುತ್ತಿಲ್ಲ, ಆಂದೋಲನವೂ ಅಲ್ಲ, ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಅನೇಕ ವರದಿಗಳು ಈಗಾಗಲೇ ಬಂದಿವೆ ಎನ್ನುತ್ತಾರೆ. ಅದೇ ವಿಷಯಗಳನ್ನು ಇನ್ನೊಂದು ನೂರು ಜನಕ್ಕೆ ತಲುಪಿಸುತ್ತೀನಿ ಎಂದು ಖ್ಯಾತ ನಟನೊಬ್ಬ ಮುಂದೆ ಬಂದರೆ ಅದರಿಂದಾಗುವ ಅನಾಹುತವೇನು? ಐಶ್ವರ್ಯ ರೈಗೆ ಮಗುವಾಗಿದ್ದು, ಸಾನಿಯಾ ಮದುವೆಯಾಗಿದ್ದು, ಶಾರೂಖ್ ಗಲಾಟೆ ಮಾಡಿಕೊಂಡಿದ್ದು ಮುಖಪುಟ ಸುದ್ದಿಯಾಗುತ್ತದೆ, ಚಿತ್ರಗಳ ಪ್ರಚಾರಕ್ಕೆ ಬರುವವರ ರಂಗುರಂಗಿನ ಫೋಟೋ ಪ್ರಕಟವಾಗುತ್ತದೆ. ಎಲ್ಲೋ ಒಬ್ಬ ನಟ ಲಾಭದೊಟ್ಟಿಗೆ ಸಾಮಾಜಿಕ ಕಳಕಳಿಯನ್ನೂ ತೋರಿಸಿದರೆ ಈ ರೀತಿ ಟೀಕೆಗೆ ಒಳಗಾಗುತ್ತಾನೆ! ಬ್ಲಾಗುಗಳಲ್ಲಿ ಪುಕ್ಕಟೆ ಪ್ರಚಾರ ಕೊಡುತ್ತಿದ್ದಾರೆ ಎಂಬ ಗಂಭಿರ ಆರೋಪ ಮಾಡುತ್ತಾರೆ ಗಂಗಾಧರ್ ರವರು. ಹಳ್ಳಿ ಹುಡುಗರನ್ನು ಪೇಟೆಗೆ ಕರೆಸಿ ‘ಮಜಾ’ ತೆಗೆದುಕೊಳ್ಳುವ ಕಾರ್ಯಕ್ರಮವನ್ನೇನೂ ನಾವು ಬೆಂಬಲಿಸುತ್ತಿಲ್ಲ ಅಲ್ಲವೇ?
ಏರ್ ಟೆಲ್ ಮೆಸೇಜಿಗೆ ‘ಒಂದು ರುಪಾಯಿ’ ಎಂಬುದು ಲಾಭದ ಬಾಬತ್ತು, ಅನುಮಾನವಿಲ್ಲ. ಬೇರೆ ಕಾರ್ಯಕ್ರಮಗಳಲ್ಲಿ ಅದೇ ಒಂದು ಮೆಸೇಜು ಆರು ರುಪಾಯಿ ಬೆಲೆಬಾಳುತ್ತದೆ ಎಂಬುದನ್ನೂ ಮರೆಯಬಾರದಲ್ಲವೇ?!
ಕೊನೆಯದಾಗಿ ಲೇಖನ ಬರೆಯುವ ಅತ್ಯಾತುರದಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಉಳಿದುಕೊಂಡಿರುವ ಭಾರತೀಯರು ಅನುಭವಿಸುತ್ತಿರುವ ವೇದನೆ…. ಎಂದು ಬರೆದಿದ್ದಾರೆ. ಅದು ಪಾಕಿಸ್ತಾನದ ‘ಹಿಂದೂಗಳು’ ಎಂದಾಗಬೇಕಿತ್ತಲ್ಲವೇ? ಭಾರತದ ಮುಸ್ಲಿಮರನ್ನು ‘ಪಾಕಿಗಳು’ ಎಂದು ಹೇಳುವುದು ಎಷ್ಟು ತಪ್ಪೋ ಪಾಕಿಸ್ತಾನದ ಹಿಂದುಗಳನ್ನೂ ‘ಭಾರತೀಯರು’ ಎಂದು ಕರೆಯುವುದು ಅಷ್ಟೇ ತಪ್ಪಲ್ಲವೇ?
ಹಿಂಗ್ಯಾಕೆ : – ಅಮೀರ್ ಖಾನನ ‘ಸತ್ಯಮೇವ ಜಯತೆ’ ಕಾರ್ಯಕ್ರಮಗಳ ಬಗೆಗಿನ ಚರ್ಚೆ ಆ ಕಾರ್ಯಕ್ರಮದ ನಿರೂಪಕರು ಆಯ್ದುಕೊಂಡ ವಿಷಯಗಳಿಗೆ ಸಂಬಂಧಪಟ್ಟಂತೆ ಆಗಬೇಕಿತ್ತು. ಆದರೆ ಕಾರ್ಯಕ್ರಮದ ವಿಷಯಗಳನ್ನೊರತುಪಡಿಸಿ ಮತ್ತೆಲ್ಲ ಚರ್ಚೆಗಳೂ ನಡೆಯುತ್ತಿವೆ! [ಈ ಲೇಖನವನ್ನೂ ಒಳಗೊಂಡಂತೆ!]. ನಟನೊಬ್ಬ ಸಾಮಾಜಿಕ ಕಳಕಳಿ ತೋರಿಸದಿದ್ದರೂ ಮಾಧ್ಯಮಗಳು ಟೀಕಿಸುತ್ತವೆ. ತೋರಿಸಿದರೆ ಅನುಮಾನದಿಂದ ನೋಡುತ್ತವೆ. ಸ್ಟೇಡಿಯಂನಲ್ಲಿ ಸಿಗರೇಟು ಸೇದಿ ಭದ್ರತಾ ಸಿಬ್ಬಂದಿಯ ಜೊತೆಗೆ ಜಗಳ ತೆಗೆಯುವವರ ಬಗೆಗಿನ ಚರ್ಚೆಗಳೇ ಇಂದಿನ ಆಕರ್ಷಣೆಗಳಾಗಿಬಿಟ್ಟಿದೆಯಲ್ಲ! ಹಿಂಗ್ಯಾಕೆ?!
11 ಟಿಪ್ಪಣಿಗಳು Post a comment
  1. Bhairav Kodi's avatar
    Bhairav Kodi
    ಮೇ 31 2012

    ತುಂಬಾನೆ ಅರ್ಥಗರ್ಭಿತವಾಗಿ ವಿವರಿಸಿದ್ದೀರಿ ಅಶೋಕ್ ಸಾರ್ ಇಷ್ಟ ಆಯ್ತು ಹಂಚಿಕೊಂಡಿದ್ದೇನೆ. ಬಹುಶ: ಗಂಗಾಧರ್ ಮೊದಲಿಯಾರರಿಗೆ ವಯಸ್ಸಾಯ್ತು ಅರಳು-ಮರಳು ಮನಸ್ಥಿತಿ ಅನ್ನಿಸುತ್ತೆ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಖಂಡಿತ ಇದೆ.

    ಉತ್ತರ
  2. ashok kumar Valadur's avatar
    ashok kumar Valadur
    ಮೇ 31 2012

    ಅಮೀರ್ ಖಾನ್ ಮಾಡುತ್ತಿರುವ ಕೆಲಸ ಅದಕ್ಕೆ ಸಿಗುತ್ತಿರುವ ಪ್ರಚಾರ ಎಲ್ಲ ನೋಡಿದರೆ ಎಲ್ಲ ಹಣದ್ದೇ ಕಾರುಬಾರು ಕಾಣುತ್ತೆ. ಈ ಕೆಲಸವನ್ನು ಅದೆಷ್ಟೋ ಸಾಮಾಜಿಕ ಕಾರ್ಯಕರ್ತರು ಮಾಡುತಿದ್ದಾರೆ . ಆದರೆ ಅಂಥವರ ಬಗ್ಗೆ ಚರ್ಚೆ ಮಾಡುವವರೇ ಇಲ್ಲ. ಸಮಸ್ಯೆ ಏನು ಹೊಸತಲ್ಲ ಆದರೆ ಪ್ರಸ್ತುತ ಪಡಿಸುವ ವ್ಯಕ್ತಿ ಮಾತ್ರ ಒಬ್ಬ ಪ್ರಸಿದ್ಧ ಚಿತ್ರನಟ. ಅಷ್ಟೇ . ಅಮೀರ್ ಖಾನ್ ಗೆ ಸಾಮಾಜಿಕ ಕಳಕಳಿ ಇದೆ ನಿಜ. ಕಾರ್ಯಕ್ರಮ ಹೋಸ್ಟ್ ಮಾಡಿ ಅದನ್ನೆಲ್ಲಾ ತೋರಿಸುವ ಅಗತ್ಯ ವಿಲ್ಲ.

    ಉತ್ತರ
  3. Pramod's avatar
    ಮೇ 31 2012

    When you left with only hammer everything looks like nail.
    ಮಾಧ್ಯಮದ ಮ೦ದಿ ಯಾವ ತರಹ ಕೆಲಸ ಮಾಡಬೇಕೆ೦ದು ಅಮಿರ್ ಖಾನ್ ತೋರಿಸಿಕೊಟ್ಟಿದ್ದಾರೆ. ಅದರಲ್ಲಿ ಹುಳುಕು ಹುಡುಕುವ ಮ೦ದಿಯ ಅವರ ಅಧೋಗತಿಯನ್ನು ತೋರಿಸುತ್ತದೆ.

    ಉತ್ತರ
  4. Manu. H. S's avatar
    Manu. H. S
    ಮೇ 31 2012

    ಸರ್ ಚಿಲ್ಲಲೇ ಜನಗಳನ್ನ, ಚಿಲ್ಲಲೇ ಲೇಖನ ಗಳನ್ನ, ಮತ್ತೇನು ಅಂತಾ ವಿಚಾರಗಳನ್ನ ನಾವೆಲ್ಲ ಬಿಟ್ಟಾಕಿದಿವಿ.
    ನಾವು ಮಾತಾಡಲೇ ಬೇಕಾದ ಎಷ್ಟೋ ವಿಷ್ಯ ಗಳು ಇನ್ನೂ ಇದೆ ಅನ್ನೋ ಮನವರಿಕೆ ಆಗಿದೆ.
    ಸೊ ನೀವು ಇಂತವಿಶಗಳನ್ನೆಲ್ಲ ಗಮನಿಸೋಕೆ ಹೋಗಬೇಡಿ ಹಾಗು ಬೇರೆಯವರ ಗಮನಕ್ಕೂ ತರಬೇಡಿ.
    ಇಂತಾ ವನ್ನಾ ನಿರ್ಲಕ್ಷ ಮಾಡೋದೇ ಕ್ಷೇಮಾ ಅನ್ಸತ್ತೆ ಅಲ್ಲವಾ?

    ಉತ್ತರ
  5. Savitha Somayaji's avatar
    Savitha Somayaji
    ಜೂನ್ 1 2012

    ಒಳ್ಳೆಯ ಲೇಖನ… ಓದುಗರಿಗೆ ಸರಿಯಾದ ಮಾರ್ಗದರ್ಶನ ನೀಡಿದೆ…ಗಂಗಾಧರ್ ಮೊದಲಿಯಾರ್ ರವರೂ ಸಹ ಒಳ್ಳೆ ವಿಮರ್ಶಕರೆ… ಅದ್ಯಾಕೆ ಆ ರೀತಿ ಬರೆದರೋ… ಬಹುಶ: ಇತ್ತೀಚಿನ ವೃತ್ತಿ ಧರ್ಮ ಇರಬಹುದು… ಕೆಲವು ಜನರು ವಿರೋಧ ಪಕ್ಷದವರಂತೆ ವರ್ತಿಸುತ್ತಾರೆ… ಕೇವಲ ಟೀಕೆ ಮಾಡುವುದೇ ಉದ್ಯೋಗ ಮಾಡಿಕೊಂಡಿದ್ದಾರೆ…

    ಉತ್ತರ
  6. Vijay Kumar's avatar
    ಜೂನ್ 3 2012

    ಅರ್ಥ ಗರ್ಭಿತ ಲೇಖನ

    ಉತ್ತರ
  7. charles bricklayer's avatar
    charles bricklayer
    ಜೂನ್ 4 2012

    ದಯವಿಟ್ಟು ವರ್ತಮಾನ.ಕಾಂನಲ್ಲಿ ಈ ವಿಷಯದ ಬಗ್ಗೆ ಬಿ.ಶ್ರೀಪಾದ ಭಟ್ ಅವರು ಬರೆದಿರುವ ಲೇಖನವನ್ನು ಒಮ್ಮೆ ಓದಿ.

    ಉತ್ತರ
  8. ಹೆಮ್ಮೆಯ ಕನ್ನಡಿಗ's avatar
    ಹೆಮ್ಮೆಯ ಕನ್ನಡಿಗ
    ಜೂನ್ 6 2012

    ಸ್ವಾಮಿ ಅಶೋಕ್ ರವರೆ,

    ಕನ್ನಡದವರಿಗೆ ಯಾಕ್ರೀ ಇಷ್ಟು ಕೀಳರಿಮೆ

    “ಕನ್ನಡದ ಕೋಟ್ಯಧಿಪತಿ ಯಶಸ್ವಿ ಕಾರ್ಯಕ್ರಮ, ಪುನೀತ್ ಅದನ್ನು ಚೆನ್ನಾಗಿಯೇ ನಡೆಸಿಕೊಡುತ್ತಿದ್ದಾರೆ ಎಂಬುದು ನಿಜವಾದರೂ ಅದು ವರುಷಗಳ ಹಿಂದೆ ಬಂದ ಹಿಂದಿ ಕಾರ್ಯಕ್ರಮದ ಯಥಾವತ್ ರೀಮೇಕು ಎಂಬುದನ್ನು ಮರೆಯಬಾರದಲ್ಲವೇ? ಪುನೀತ್ ಸಾಮರ್ಥ್ಯ ರೀಮೇಕುಗಳಲ್ಲಿ ಕಳೆದುಹೋಗುವಷ್ಟು ಕನ್ನಡದ ಕ್ರಿಯಾತ್ಮಕ ಮನಸ್ಸುಗಳು ಜಡಗಟ್ಟಿ ಹೋಗಿದೆಯೇ?”

    ಅಂತ ಬರಯೋ ನೀವು, ಅಮಿತಾಭ್ ನಡಸ್ತಾ ಇದ್ದ ” Kaun Banega Karodpati” ಕೂಡ “Who Wants To Be A Millionaire” ಯಥಾವತ್ ರೀಮೇಕ್ ಅಂತ ಯಾಕ್ರೀ ಮರೀತೀರ ?. ಮೂರೂ ಕಾರ್ಯಕ್ರಮ ನಡಸ್ತಾ ಇರೋದು ಒಂದೇ ಕಂಪನಿ ಯವರೇ . ಮೂಲ ಕಾರ್ಯಕ್ರಮ ಇಂಗ್ಲಿಷ್ಣದ್ದು ಸುಮ್ನೆ ಹಿಂದಿದೇ ಮೂಲ ಕನ್ನಡದ್ದು ರಿಮೇಕು ಅಂತ ಯಾಕ್ರೀ ನೀವೂ ಬುರಡೆ ಬಿಡ್ತೀರ ?

    ಹೆಮ್ಮೆಯ ಕನ್ನಡಿಗ

    ಉತ್ತರ
  9. Sugel's avatar
    ಜೂನ್ 12 2012

    ಪತ್ರಿಕೆಗಳಿರಬಹುದು, ಅಂತರ್ಜಾಲ ತಾಣಗಳಲ್ಲಿರಬಹುದು ಇಂದು ಅಮೀರ್ ಖಾನನ ಕಾರ್ಯಕ್ರಮವನ್ನು ಅಮಿತಾಭ್ ನಡೆಸಿಕೊಟ್ಟ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಹೋಲಿಸಿ ಮಾತನಾಡುತ್ತಾರೆ. ಕೋಟ್ಯಧಿಪತಿಗೆ ಹೆಚ್ಚು ಟಿ.ಆರ್.ಪಿ ಇತ್ತು ಎಂದು ಹೇಳುತ್ತಾರೆ. ಇವೆರಡೂ ಕಾರ್ಯಕ್ರಮಗಳನ್ನು ಹೋಲಿಸುವುದೇ ಹಾಸ್ಯಾಸ್ಪದ. ಎರಡರ ಉದ್ದಿಶ್ಯವೂ ಬೇರೆ. ‘ಪ್ರೈಮ್ ಟೈಮ್’ ಎಂದು ಕರೆಯಲ್ಪಡುವ ರಾತ್ರಿ ಎಂಟರ ಸಮಯವನ್ನು ಬಿಟ್ಟು ಅಮೀರ್ ಖಾನ್ ಭಾನುವಾರ ಬೆಳಿಗ್ಗೆ ಹನ್ನೊಂದರ ಸಮಯವನ್ಯಾಕೆ ಆರಿಸಿದ ಎಂಬುದನ್ನೂ ಗಮನಿಸಬೇಕಲ್ಲವೇ? ಹಣ ಮಾಡುವುದಷ್ಟೇ ಉದ್ದೇಶವಾಗಿದ್ದರೆ ಈ ‘ಮೂರ್ಖ’ ಕೆಲಸವನ್ಯಾಕೆ ಮಾಡಬೇಕಿತ್ತವನು?

    ಉತ್ತರ
  10. ashok kr's avatar
    ಜೂನ್ 15 2012

    ಹೆಮ್ಮೆಯ ಕನ್ನಡಿಗರಿಗೆ,
    ನೀವು ಹೇಳಿದ್ದು ಅಕ್ಷರಶಃ ಸತ್ಯ, ಕೌನ್ ಬನೇಗಾ ಕರೋಡ್ ಪತಿ ಕೂಡ ಇಂಗ್ಲೀಷಿನ ರೀಮೇಕು! ನನಗದು ತಿಳಿದಿತ್ತು, ಬುರುಡೆ ಬಿಡೋದು ಖಂಡಿತ ನನ್ನ ಉದ್ದೇಶವಾಗಿರಲಿಲ್ಲ. ಹಿಂದಿಯಲ್ಲಿ ಆ ಕಾರ್ಯಕ್ರಮ ಯಶಸ್ವಿಯಾಗಿದ್ದಕ್ಕೆ ತಾನೇ ಇನ್ನಿತರೆ ಭಾಷೆಗಳಲ್ಲೂ ಅದರ ಪುನರಾವರ್ತನೆಯಾಗುತ್ತಿರುವುದು? ಈ ಲೇಖನದ ಉದ್ದೇಶ ಬೇರೆ ಕಾರ್ಯಕ್ರಮಗಳೊಡನೆ ಸತ್ಯಮೇವ ಜಯತೆಯನ್ನು ಹೋಲಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಪ್ರಶ್ನಿಸುವುದಾಗಿತ್ತಷ್ಟೇ.
    ಕನ್ನಡದ ಬಗ್ಗೆ ಖಂಡಿತವಾಗಿ ಕೀಳರಿಮೆ ಇಲ್ಲ. ನಮ್ಮ ನಟರ, ನಿರ್ದೇಶಕರ ನಿಜವಾದ ಸಾಮರ್ಥ್ಯ ಇಂಥ ರಿಮೇಕುಗಳಲ್ಲೇ ಕಳೆದುಹೋಗುತ್ತಿದೆಯಲ್ಲಾ ಎಂಬ ಬೇಸರ ಅಷ್ಟೇ.
    ಅದೇ ಪುನೀತ್ ರಾಜ್ ಕುಮಾರ್ ರ ಇತ್ತೀಚೆಗೆ ಸೆಟ್ಟೇರಿದ ಯಾರೇ ಕೂಗಾಡಲಿ ಕೂಡ ತಮಿಳು ಚಿತ್ರದ ರಿಮೇಕ್. ಬೇಸರವಾಗೋದು ಸಹಜವಲ್ಲವೇ?

    ಉತ್ತರ

Leave a reply to Bhairav Kodi ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments