ಶ್ವೇತಭವನ ತಲುಪಿದ ಜಯದೇವದ ಸಾಧನೆ ನಮ್ಮ ಸರ್ಕಾರಗಳಿಗೇಕೆ ಗೋಚರಿಸುತ್ತಿಲ್ಲ…
– ಗೋಪಾಲ ಕೃಷ್ಣ
‘ಹೀಗೆ ಮೂರು ವರ್ಷಗಳ ಹಿಂದೆ ಕ್ರಿಸ್ ಎಂಬ ಅಮೇರಿಕಾ ಪ್ರಜೆಯೊಬ್ಬರು ಕೆಲ ದಿನಗಳಿಗಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಒಂದು ತಡರಾತ್ರಿಯಲ್ಲಿ ಹೃದಯದ ನೋವು ಕಾಣಿಸಿದ್ದರಿಂದ, ವೈದ್ಯರೊಬ್ಬರ ಸಲಹೆಯ ಮೇರೆಗೆ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಿದ್ದಾರೆ. ತಡರಾತ್ರಿಯಾದ್ದರಿಂದ ಆಸ್ಪತ್ರೆಯಲ್ಲಿ ಕೇಳುವವರು ಇರುವರೋ ಇಲ್ಲವೋ ಎಂಬ ಅನುಮಾನದಿಂದಲೇ ದಾಖಲಾದವರಿಗೆ ಜಯದೇವದಲ್ಲಿ ಆಶ್ಚರ್ಯ ಕಾದಿತ್ತು. ಖುದ್ದು ಹೃದಯ ತಜ್ಞರಿಂದಲೇ ಚಿಕಿತ್ಸೆ ಪಡೆದು ದಾಖಲಾದ ಒಂದು ಗಂಟೆಯೊಳಗಾಗಿ ಮನೆಗೆ ಮರಳಿದ್ದಾರೆ. ಅವರು ಚಿಕಿತ್ಸೆಗೆ ಭರಿಸಿದ್ದು 92 ರೂಪಾಯಿ.’
ನಮ್ಮ ಮನೆಯ ಅಥವಾ ನೆರೆಹೊರೆಯವರ ಅನುಭವಗಳನ್ನು ಕೇಳಿ ನೋಡಿ. ತಡರಾತ್ರಿಯಲ್ಲಿ ಸಾರ್ವಜನಿಕ ಅಥವಾ ಖಾಸಗಿ ಆಸ್ಪತ್ರೆಗೆ ಹೋದರೆ ಒಂದು ಗಂಟೆಯೊಳಗಾಗಿ ಚಿಕಿತ್ಸೆ ಪಡೆಯಲು ಸಾಧ್ಯವೇ? ಇಸಿಜಿ, ರಕ್ತ ಪರಿಕ್ಷೆ, ತಜ್ಞ ವೈದ್ಯರಿಂದ ತಪಾಸಣೆಗೊಳಪಟ್ಟರೆ ಮೂರರಿಂದ ಐದು ಸಾವಿರಕ್ಕಿಂತ ಕಡಿಮೆಯಂತೂ ಬಿಲ್ ಮಾಡುವುದಿಲ್ಲ. ಇಷ್ಟೆಲ್ಲವನ್ನೂ 92 ರೂಪಾಯಿಗೆ ನೀಡಲು ಹೇಗೆ ಸಾಧ್ಯವಾಯಿತು? ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿಯೂ ಇಂತಹ ಆಸ್ಪತ್ರೆಗಳನ್ನು ಮುನ್ನಡೆಸಬಹುದು ಎಂದ ಮೇಲೆ, ಆರೋಗ್ಯದ ಸಮಸ್ಯೆಗಳು ಉಲ್ಭಣಿಸಲು ಜನಪ್ರತಿನಿಧಿಗಳು/ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯಿಲ್ಲದಿರುವುದೇ ಕಾರಣವಲ್ಲವೇ?