– ಮು.ಅ ಶ್ರೀರಂಗ, ಬೆಂಗಳೂರು
ಈ ನನ್ನ ಬರಹ ತನ್ನ ಸ್ವರೂಪದಲ್ಲಿ ಸ್ವಲ್ಪ ಅಮೂರ್ತವಾಗಿರಬೇಕಾಗಿರುವುದು ಅನಿವಾರ್ಯವಾಗಿದೆ! ಹೀಗಾಗಿ ಇದನ್ನು ನೀವು ಸರಸರನೆ ಓದಲು ಸಾಧ್ಯವಾಗದೆ ಇರಬಹುದು. ಕೆಲವೊಂದು ವಿಷಯಗಳನ್ನು “ಮೂರ್ತ”ರೂಪದಲ್ಲಿ ಹೇಳಲು ಹೊರಟಾಗ ಅವು ತೀರಾ ತೆಳುವಾಗುತ್ತವೆ. ಅಭಿಮಾನ ಮತ್ತು ಆರಾಧನೆಯ ನಡುವಿನ ಗೆರೆಯೂ ಹೀಗೆ ತೆಳುವಾದದ್ದೇ. ಆ ಗೆರೆ ಅಳಿಸಿಹೋದಾಗ ಅಭಿಮಾನ + ಆರಾಧನೆ =ಅನಿವಾರ್ಯತೆ ಎಂಬ ಸರಳ ಸಮೀಕರಣ ರೂಪುಗೊಂಡು ಬಿಡುತ್ತದೆ.
“ಅಭಿಮಾನ” “ಆರಾಧನೆ” ಆಗುವುದಕ್ಕೆ ನಾವೆಲ್ಲರೂ ನೋಡಿರುವ ಒಂದು ಸಾಮಾನ್ಯ ದೃಶ್ಯವೆಂದರೆ ಸಿನಿಮಾ ಮಂದಿರಗಳ ಮುಂದೆ ತಮ್ಮ ಮೆಚ್ಚಿನ ನಾಯಕ ನಟನ ಸಿನಿಮಾ ಬಿಡುಗಡೆ ಆದಾಗ ನಡೆಯುವ ಲೀಟರುಗಟ್ಟಳೆ “ಕ್ಷೀರಾಭಿಷೇಕ”. ಆ ಮೂಲಕ ಸಿನಿಮಾ ನಟನನ್ನು ದೈವತ್ವಕ್ಕೆ ಏರಿಸುವುದು. ತಮಿಳುನಾಡಿನಲ್ಲಿ ಕೆಲವು ವರ್ಷಗಳ ಹಿಂದೆ ಸಿನಿಮಾ ನಟಿಯೊಬ್ಬರಿಗೆ ದೇವಸ್ಥಾನ ಕಟ್ಟಿದ್ದು ನಿಮಗೆಲ್ಲಾ ತಿಳಿದಿರಬಹುದು. ಅಭಿಮಾನ ಆರಾಧನೆಯಾಗಿದ್ದಕ್ಕೆ ಇದೊಂದು ಉತ್ತಮ ಉದಾಹರಣೆ. ನಂತರದಲ್ಲಿ ಆಕೆ ಮದುವೆಯಾಗಿದ್ದರಿಂದ ಆ ದೇವಸ್ಥಾನವನ್ನು “ಆ ಭಕ್ತಾದಿಗಳೇ”ಒಡೆದು ಹಾಕಿದರಂತೆ. ತಮ್ಮ ಆರಾಧ್ಯ ದೇವತೆ ಆಜೀವ ಪರ್ಯಂತ ಅವಿವಾಹಿತೆಯಾಗಿರಬೇಕು ಎಂಬುದು ಅವರ ಅಭಿಮಾನಿಗಳ ಆಸೆಯಾಗಿತ್ತೇನೋ?
ಸಿನಿಮಾಗಳ ಬಗ್ಗೆ ಜನಸಾಮಾನ್ಯರಿಗೆ ಮಾತ್ರ “craze” ಇಲ್ಲ. ನಮ್ಮ ಕೆಲವು ಬುದ್ಧಿಜೀವಿಗಳಿಗೆ,ಸಾಹಿತಿಗಳಿಗೆ ವಿಶೇಷ ವ್ಯಾಮೋಹವಿದೆ. ಕೆಲವರದ್ದು part time ; ಇನ್ನು ಕೆಲವರದು full time job ಆಗಿಹೋಗಿದೆ. ಅಂತಹ ಸಿನಿಮಾಗಳಿಗೆ “ಆರ್ಟ್ ಫಿಲ್ಮ್” ಅಥವಾ “ಪ್ರಯೋಗಾತ್ಮಕ”ಎಂಬ ಹೆಸರೂ ಉಂಟು. ಕನ್ನಡದಲ್ಲಿ ೧೯೭೦–೯೦ರ ನಡುವೆ ಇಂತಹ ಸಾಕಷ್ಟು ಸಿನಿಮಾಗಳು ಬಂದವು. ಈಗಲೂ ಆಗೊಂದು ಈಗೊಂದು ಅಂತಹ ಸಿನಿಮಾಗಳು ಬರುತ್ತಿರುತ್ತವೆ. ಸಾರ್ವಜನಿಕ ಪ್ರದರ್ಶನಕ್ಕಿಂತ ಮೊದಲೇ ಅಂತಹ ಸಿನಿಮಾಗಳಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಬಂದು ಬಿಡುತ್ತವೆ! ಇಂತಹ ಸಿನಿಮಾಗಳು ಜನರಲ್ಲಿ ವಾಸ್ತವದ ಬಗ್ಗೆ ಅರಿವು ಮೂಡಿಸುತ್ತವೆ ಎಂದು ಅವರುಗಳು ಹೇಳುತ್ತಾರೆ. ಆ ಸಿನಿಮಾಗಳು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾದರೆ ತಾನೇ ಜನಗಳು ನೋಡಿ ವಾಸ್ತವ ಅರಿಯುವುದು! ಒಂದು ವೇಳೆ ಚಿತ್ರ ಮಂದಿರಗಳು ಅಂತಹ ಚಿತ್ರಗಳ ಪ್ರದರ್ಶನಕ್ಕೆ ಸಿಕ್ಕರೂ ಒಂದು ವಾರ “ಓಡಿಸುತ್ತಾರೆ”. ನಂತರ ಅವಕ್ಕೆ ಬುದ್ಧಿಜೀವಿಗಳು, elite ವರ್ಗದವರು ಮಾಡಿಕೊಂಡಿರುವ film societyಗಳೇ ಆಶ್ರಯ ತಾಣ. ಇಲ್ಲವಾದರೆ ಯಾವುದಾರೊಂದು ಸಿನಿಮಾ ಕುರಿತ workshop ಅಥವಾ “ಕಮ್ಮಟಗಳು”. ಅಲ್ಲಿ ಎಳೆ ಎಳೆಗಳಾಗಿ ಮೊದಲಿನಿಂದ ಕೊನೆಯತನಕ ಅವುಗಳ ದೃಶ್ಯ,ಕತ್ತಲೆ,ಬೆಳಕು,ಬಣ್ಣ,ನಡೆ,ನುಡಿ ಇತ್ಯಾದಿಗಳ ಚರ್ಚೆ ನಡೆಯುತ್ತದೆ! ಇಂತಹ ಯಾವುದೇ ಭ್ರಮೆಗಳನ್ನು ಇಟ್ಟುಕೊಳ್ಳದ ಹಿಂದಿಯ ಖ್ಯಾತ ನಟ,ನಿರ್ಮಾಪಕ ಮತ್ತು ನಿರ್ದೇಶಕ ರಾಜ್ ಕಪೂರ್ ಒಂದೇ ಮಾತು ಹೇಳಿದ “ನಾನು ಕನಸುಗಳ ಮಾರಾಟಗಾರ”. ಈ ಆರ್ಟ್ ಫಿಲಂಗಳಿಂದ ಒಂದಷ್ಟು ಜನ ನಟ ನಟಿಯರು, ತಂತ್ರಜ್ಞರು ಬೆಳಕಿಗೆ ಬಂದು ಸಿನಿಮಾದ ಮುಖ್ಯವಾಹಿನಿಗೆ ಸೇರಿಕೊಂಡರು. ಇದನ್ನು ಮರೆಯಬಾರದು. ಇಂತಹ ಸಿನಿಮಾಗಳಿಲ್ಲದ್ದಿದ್ದರೆ ಅವರುಗಳು ಮುಖ್ಯವಾಹಿನಿಗೆ ನೇರವಾಗಿ ಸೇರುವುದು ಬಹುಶಃ ಆಗುತ್ತಿರಲ್ಲಿಲ್ಲವೇನೋ?!
ಈ ಅಭಿಮಾನ, ಆರಾಧನೆ ಕೇವಲ ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯ-ಕ್ರೀಡೆ-ಸಾಹಿತ್ಯ-ಸಂಗೀತ ಹೀಗೆ ನಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಇದೆ. ಆದರೆ ಅಭಿಮಾನ-ಆರಾಧನೆಯ ರೀತಿಗಳು ಬೇರೆ ಬೇರೆಯಾಗಿರುತ್ತವೆ. ಅಷ್ಟೇ ವ್ಯತ್ಯಾಸ. ಸದ್ಯದ ಸರ್ಕಾರ ತಮಗೆ ಅನುಕೂಲವಾಗಿರದ್ದಿದ್ದರೆ ಹಿಂದಿನದೇ ಚೆನ್ನಾಗಿತ್ತೆಂದು ಗೊಣಗುವುದು. ಅಥವಾ ಈ ಪಕ್ಷ/ಈ ರಾಜಕಾರಣಿ ಅಧಿಕಾರಕ್ಕೆ ಬಂದರೆ ಚೆನ್ನಾಗಿರುತ್ತದೆ ಎಂದು ಅವರಿಗೆ ಜೈಕಾರ ಹಾಕುವುದು. ಮತ್ತೊಮ್ಮೆ ಕನಸುಗಳನ್ನು ಕಟ್ಟುವುದು. ಹೊಸಬರೂ ಹಿಂದಿನವರಂತೆ ಆದರೆ ಆಗ ಒಬ್ಬ “ring master”ಇದ್ದರಷ್ಟೇ ನಾವುಗಳು ಕೆಲಸ ಮಾಡುವುದು. ಇಲ್ಲವಾದರೆ ನಾವುಗಳು ಸೋಮಾರಿಗಳಾಗಿ ಬಿಡುತ್ತೇವೆಂದು ಆ ring master ಎಂದು ಬರುತ್ತಾನೋ ಏನೋ ನೋಡೋಣ ಎಂದು ಇನ್ನೊಂದು ಕನಸನ್ನು ಕಾಣಲು ಹಾಸಿಗೆ ಹಾಸಿ ನಿದ್ದೆ ಮಾಡುವುದು.
ಸಾಹಿತ್ಯ ಕ್ಷೇತ್ರದಲ್ಲಿ ಅಭಿಮಾನ-ಆರಾಧನೆಗಳು ತೀರಾ ನಾಜೂಕಾಗಿ ನಡೆಯುತ್ತದೆ. ಸಾಹಿತಿ-ವಿಮರ್ಶಕರ wavelength ಪತ್ರಿಕೆಗಳ wavelengthಗಳಿಗೆ ಸರಿಯಾಗಿದ್ದರೆ ಅಲ್ಲಿ ಅಂತಹವರಿಗೆ ಪುಟಗಳ ಕಾಲದ ಮಿತಿಯಿಲ್ಲ. ಎಷ್ಟು ಬೇಕಾದರೂ ಬರೆಯಬಹುದು. ಇದರ ಜತೆಗೆ ಅವರವರ blood groupಗೆ ತಕ್ಕಂತೆ ಸಾಹಿತಿಗಳು-ವಿಮರ್ಶಕರುಗಳು-ಅವರ ಅಭಿಮಾನಿಗಳು ಸೇರಿಕೊಂಡು ತಮ್ಮದೇ ಹೊಸ “ಸಾಹಿತ್ಯ ಪತ್ರಿಕೆ” ತರಬಹುದು. ಈ ಅಭಿಮಾನ ಮತ್ತು ಆರಾಧನೆಗಳು ಸಾಹಿತ್ಯ ಕ್ಷೇತ್ರದಲ್ಲಿ ಜಾಸ್ತಿಯಾದಂತೆ ಇತರರನ್ನು ಸಾಮ-ಭೇದ-ದಂಡ ಹೀಗೆ ಯಾವ ರೀತಿಯಿಂದ ಆದರೂ ಸರಿ ದೂರವಿಡುವ ಅನಿವಾರ್ಯತೆ ಪ್ರಾರಂಭವಾಗುತ್ತದೆ. ಇತರರು ಈ ಗುಂಪುಗಳ ಸದಸ್ಯರುಗಳಿಗಿಂತ ಭಿನ್ನವಾಗಿರುವುದನ್ನು,ಮಹತ್ವವಾಗಿರುವುದನ್ನು ಬರೆದರೂ ಕಣ್ಣೆತ್ತಿ ನೋಡಲಾರದ ಮಟ್ಟಕ್ಕೆ ಹೋಗುತ್ತದೆ. “ಅವರ” ಮುಂದೆ “ಇವರು” ಯಾವ ಗಿಡದ ತೊಪ್ಪಲು ಎಂದು ಹೀಯಾಳಿಸುವ ಚಾಳಿ ಬೆಳೆಯುತ್ತದೆ. ಈ “ಚಾಳಿ”ಯನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸರಣಿ ಕಾರ್ಯಕ್ರಮಗಳು ಮತ್ತು ಅಭಿಯಾನಗಳು ನಡೆಯುತ್ತವೆ. ಹಿಂದಿನವರ ಮೆರವಣಿಗೆ ಸಾಗುತ್ತಾ ಹೋಗುತ್ತದೆ. “ಈಗ ಅವರಿರಬೇಕಾಗಿತ್ತು” ಎಂಬಂತಹ ಮತ್ತೊಂದು ಕನಸು ಕಾಣಲು ಆಶಿಸುತ್ತೇವೆ. ಈ ಅಭಿಮಾನ, ಆರಾಧನೆ ಮತ್ತು ಅನಿವಾರ್ಯತೆಗಳನ್ನು ಎಷ್ಟು ಬೇಗ ದಾಟಿದರೆ ಅಷ್ಟರಮಟ್ಟಿಗೆ ನಮ್ಮ ಬೌದ್ಧಿಕತೆಗೆ,ವಿಚಾರಶೀಲತೆಗೆ ಒಳ್ಳೆಯದು. ನಮ್ಮ ಸುತ್ತಲಿನ ಜನ-ಜೀವನ,ಸಮಾಜ,ದೇಶಕಾಲ,ಪರಿಸ್ಥಿತಿ ಇವೆಲ್ಲಾ ಹರಿಯುವ ನದಿ ಇದ್ದಂತೆ.
“ಹರಿಯುವ ನದಿಗೆ ಸಾವಿರಾರು ಕಾಲುಗಳು” ಎಂಬ ಕವಿವಾಣಿ ನಮ್ಮಲ್ಲಿ ಸದಾ ಅನುರಣಿಸುತ್ತಿರಲಿ.
ಮುಗಿಸುವ ಮುನ್ನ:- ಅಕ್ಕಿಯೊಳಗನ್ನವನು ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನಾರು
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ
ದಕ್ಕುವುದೇ ಜಸ ನಿನಗೆ ಮಂಕುತಿಮ್ಮ
—ಡಿವಿಜಿ
(ಅಕ್ಕರ =ಅಕ್ಷರ, ವಿದ್ಯೆ: ತನ್ನ + ಆದಿ = ತನ್ನಾದಿ= ತನ್ನ ಮೂಲ, ಮೊದಲ , ಕಾರಣ ದಕ್ಕುವುದೆ =ದೊರಕುವುದೆ ಜಸ =ಯಶಸ್ಸು,ಕೀರ್ತಿ)
ಚಿತ್ರ ಕೃಪೆ :depositphotos.com