ಸೇವಾ ಮನೋಭಾವನೆ ಮತ್ತು ಯುವಕ ಮಂಡಲ
– ಶ್ರೀ ಸಿದ್ಧಕೃಷ್ಣ, ಶ್ರೀ ಸಂತೋಷ್ ಹೆಚ್, ಶ್ರೀ ವಿಶ್ವನಾಥ ಆಚಾರ್ಯ
ಭಾರತ ಗ್ರಾಮಗಳ ದೇಶ, ಸರಿ ಸುಮಾರು ಆರು ಸಾವಿರಕ್ಕಿಂತಲೂ ಹೆಚ್ಚು ಹಳ್ಳಿಗಳಿವೆ, ಭಾರತದ ಹೃದಯ ಗ್ರಾಮಗಳಲ್ಲಿದೆ. ಇಂತಹ ಗ್ರಾಮಗಳಲ್ಲೊಂದು ವೈಶಿಷ್ಟ್ಯ ಗ್ರಾಮವೇ ಎಲ್ಲೂರು. ‘ದಕ್ಷಿಣದ ಕಾಶಿ’ ಎಂದೇ ಪ್ರಸಿದ್ದಿ ಪಡೆದಿರುವ ಮಹತೋಭಾರ ಶ್ರೀ ವಿಶ್ವನಾಥ ದೇವಾಲಯವಿರುವ ಗ್ರಾಮ ಇದಾಗಿದೆ. ನಿಸರ್ಗ ಸೌಂದರ್ಯದ ಮಡಿಲಿನಲ್ಲಿ ಸಾಂಸ್ಕೃತಿಕ ಮೆರುಗಿನೊಂದಿಗೆ ತನ್ನದೇ ಛಾಪನ್ನು ಉಡುಪಿ ಜಿಲ್ಲೆಯಲ್ಲಿ ಮೂಡಿಸಿದೆ. ಕರ್ನಾಟಕದಲ್ಲಿ ಕರಾವಳಿಯು ಮಾನವ ಸಂಪನ್ಮೂಲದಲ್ಲಿ ತನ್ನದೇ ಶ್ರೇಷ್ಠತೆ ಹೊಂದಿರುವಂತೆಯೇ ಎಲ್ಲೂರು ಗ್ರಾಮವೂ ಈ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಐವತ್ತು ವರ್ಷ ಪೂರ್ಣಗೊಳಿಸಿರುವ ಇಲ್ಲಿನ ಯುವಕ ಮಂಡಲವೇ ಸಾಕ್ಷಿ. ಎಲ್ಲೂರು ಯುವಕ ಮಂಡಲವು ಸಾಮಾಜಿಕ; ದಾರ್ಮಿಕ ಕಾರ್ಯಗಳ ಸೇವೆಯೊಂದಿಗೆ ವಿಶಿಷ್ಟ ಸಂಘಟನೆಯಾಗಿ ತನ್ನದೇ ಆದ ಒಂದು ಹೊಸ ಮಾದರಿಯನ್ನೇ ಹುಟ್ಟು ಹಾಕಿದೆ ಎಂದರೇ ಅತಿಶಯೋಕ್ತಿಯಲ್ಲ.





