ಶ್ವೇತಭವನ ತಲುಪಿದ ಜಯದೇವದ ಸಾಧನೆ ನಮ್ಮ ಸರ್ಕಾರಗಳಿಗೇಕೆ ಗೋಚರಿಸುತ್ತಿಲ್ಲ…
– ಗೋಪಾಲ ಕೃಷ್ಣ
‘ಹೀಗೆ ಮೂರು ವರ್ಷಗಳ ಹಿಂದೆ ಕ್ರಿಸ್ ಎಂಬ ಅಮೇರಿಕಾ ಪ್ರಜೆಯೊಬ್ಬರು ಕೆಲ ದಿನಗಳಿಗಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಒಂದು ತಡರಾತ್ರಿಯಲ್ಲಿ ಹೃದಯದ ನೋವು ಕಾಣಿಸಿದ್ದರಿಂದ, ವೈದ್ಯರೊಬ್ಬರ ಸಲಹೆಯ ಮೇರೆಗೆ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಿದ್ದಾರೆ. ತಡರಾತ್ರಿಯಾದ್ದರಿಂದ ಆಸ್ಪತ್ರೆಯಲ್ಲಿ ಕೇಳುವವರು ಇರುವರೋ ಇಲ್ಲವೋ ಎಂಬ ಅನುಮಾನದಿಂದಲೇ ದಾಖಲಾದವರಿಗೆ ಜಯದೇವದಲ್ಲಿ ಆಶ್ಚರ್ಯ ಕಾದಿತ್ತು. ಖುದ್ದು ಹೃದಯ ತಜ್ಞರಿಂದಲೇ ಚಿಕಿತ್ಸೆ ಪಡೆದು ದಾಖಲಾದ ಒಂದು ಗಂಟೆಯೊಳಗಾಗಿ ಮನೆಗೆ ಮರಳಿದ್ದಾರೆ. ಅವರು ಚಿಕಿತ್ಸೆಗೆ ಭರಿಸಿದ್ದು 92 ರೂಪಾಯಿ.’
ನಮ್ಮ ಮನೆಯ ಅಥವಾ ನೆರೆಹೊರೆಯವರ ಅನುಭವಗಳನ್ನು ಕೇಳಿ ನೋಡಿ. ತಡರಾತ್ರಿಯಲ್ಲಿ ಸಾರ್ವಜನಿಕ ಅಥವಾ ಖಾಸಗಿ ಆಸ್ಪತ್ರೆಗೆ ಹೋದರೆ ಒಂದು ಗಂಟೆಯೊಳಗಾಗಿ ಚಿಕಿತ್ಸೆ ಪಡೆಯಲು ಸಾಧ್ಯವೇ? ಇಸಿಜಿ, ರಕ್ತ ಪರಿಕ್ಷೆ, ತಜ್ಞ ವೈದ್ಯರಿಂದ ತಪಾಸಣೆಗೊಳಪಟ್ಟರೆ ಮೂರರಿಂದ ಐದು ಸಾವಿರಕ್ಕಿಂತ ಕಡಿಮೆಯಂತೂ ಬಿಲ್ ಮಾಡುವುದಿಲ್ಲ. ಇಷ್ಟೆಲ್ಲವನ್ನೂ 92 ರೂಪಾಯಿಗೆ ನೀಡಲು ಹೇಗೆ ಸಾಧ್ಯವಾಯಿತು? ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿಯೂ ಇಂತಹ ಆಸ್ಪತ್ರೆಗಳನ್ನು ಮುನ್ನಡೆಸಬಹುದು ಎಂದ ಮೇಲೆ, ಆರೋಗ್ಯದ ಸಮಸ್ಯೆಗಳು ಉಲ್ಭಣಿಸಲು ಜನಪ್ರತಿನಿಧಿಗಳು/ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯಿಲ್ಲದಿರುವುದೇ ಕಾರಣವಲ್ಲವೇ?
ಇಂತಹ ಗೊಂದಲಗಳೇ ಕ್ರಿಸ್ ಅವರನ್ನು ಕಾಡಿದ್ದು. ಸುಮಾರು ಮೂವತ್ತು ಕೋಟಿ ಜನಸಂಖ್ಯೆ ಹೊಂದಿರುವ ಅಮೇರಿಕಾದಲ್ಲಿ ಇಷ್ಟು ಸುವ್ಯವಸ್ಥಿತವಾದ ಸೌಲಭ್ಯಗಳೇಕೆ ದೊರೆಯುತ್ತಿಲ್ಲ ಎಂದು ಅಮೇರಿಕಾದ ಅಧ್ಯಕ್ಷರಿಗೂ, ಅಲ್ಲಿನ ಕಾಂಗ್ರೆಸ್‍ಗೂ ಇಮೇಲ್ ಮೂಲಕ ಪ್ರಶ್ನಿಸಿದ್ದಾರೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಒಂದು ವಾರದೊಳಗೇ ಪ್ರತಿಕ್ರಿಯಿಸಿರುವ ಅಧ್ಯಕ್ಷ ಬರಾಕ್ ಒಬಾಮಾ ಜಯದೇವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಇದರ ಜೊತೆಗೆ ಭಾರತದಲ್ಲಿನ ವಿಶ್ವದರ್ಜೆಯ ವೈದ್ಯರಿಂದ ನಾಲ್ಕು ಕೈ, ನಾಲ್ಕು ಕಾಲುಗಳಿರುವ ಬಾಲಕಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿದ್ದು ಎಲ್ಲವೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೊಂದು ಗೌರವ ತಂದುಕೊಡುತ್ತವೆ. ಜೊತೆಜೊತೆಗೆ ಆರ್ಥಿಕವಾಗಿ ಲಾಭ ತಂದುಕೊಡುವ ‘ಮೆಡಿಕಲ್ ಟೂರಿಸಂ’ಗೂ ಸಹಕಾರಿಯಾಗುತ್ತವೆ.ಇದೆಲ್ಲಾ ಸಾಧ್ಯವಾಗುತ್ತಿರುವುದು ಕೆಲವೇ ಕೆಲವು ವ್ಯಕ್ತಿಗಳ ಇಚ್ಛಾಶಕ್ತಿಯಿಂದ ಮಾತ್ರ. ಜಯದೇವ ಸಂಸ್ಥೆಯ ಕಾರ್ಯಗಳು ಶ್ವೇತಭವನ ತಲುಪಲು ಮುಖ್ಯ ಕಾರಣ ಡಾ|| ಮಂಜುನಾಥ್ ಅವರ ಶ್ರಮ.
ಸರ್ಕಾರಿ ಆಸ್ಪತ್ರೆಗಳೆಂದರೆ ಮೊದಲು ಕಣ್ಣಿಗೆ ಕಾಣುವುದು ಎಲ್ಲೆಂದರಲ್ಲಿ ಉಗುಳುವುದು, ಬೇಡದ ಪದಾರ್ಥಗಳನ್ನು ಎಸೆಯುವುದು ಸರ್ವೇಸಾಮಾನ್ಯ. ಆಸ್ಪತ್ರೆಗಳಿಗೆ ಹೋದಾಗ ಅಂಟಿಕೊಂಡಿರುವ ಕಾಯಿಲೆ ಗುಣವಾಗುವುದಿರಲಿ, ಮತ್ತ್ಯಾವುದೋ ಕಾಯಿಲೆ ಬಾರದಿದ್ದರೆ ಪುಣ್ಯ. ಡಾ|| ಮಂಜುನಾಥ್ ಅವರು ಏಳೂವರೆ ವರ್ಷಗಳ ಹಿಂದೆ ಜಯದೇವದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಾಗಲೂ ಇದೇ ಪರಿಸ್ಥಿತಿ ಇತ್ತು. ಸರಿಯಾದ ನಾಮಫಲಕವೂ ಇರಲಿಲ್ಲ; ಕೆಲವರಿಗೆ ಇಸ್ಪೀಟ್ ಅಡ್ಡೆಯೂ ಆಗಿತ್ತು. ಡಾ|| ಮಂಜುನಾಥ್ ಮೊದಲು ಮಾಡಿದ ಕೆಲಸ ಗೋಡೆಗೆ ಮೂರು ಅಡಿ ಎತ್ತರದವರೆಗೆ ಅಲಂಕೃತ ಗ್ಲಾಸ್‍ಗಳನ್ನು ಜೋಡಿಸಿದ್ದು. ಅಲ್ಲಿ ಉಗುಳುವುದಿರಲಿ ಒರಗಿ ನಿಂತರೂ ನಮ್ಮ ಬಗ್ಗೆ ನಾವೇ ಬೇಸರಪಟ್ಟುಕೊಳ್ಳಬೇಕಾಗುತ್ತದೆ. ಕಟ್ಟಡದ ಒಳಗೆ ಉಳಿಕೆ ಜಾಗದಲ್ಲಿ ಅಲಂಕೃತ ಹೂ ಗಿಡಗಳನ್ನಿಟ್ಟು ಪ್ಲಾಸ್ಟಿಕ್ ಹೊದಿಕೆ ಹಾಕಿಸಿದ್ದಾರೆ. ಕಸ ಎಸೆಯಲು ಯಾರಿಗೂ ಮನಸ್ಸು ಬರುವುದಿಲ್ಲ. ಹಣವಂತರಿಗೆ ವಿಶೇಷ ವಾರ್ಡ್, ಉಳಿದವರಿಗೆ ಸಾಮಾನ್ಯ ವಾರ್ಡ್ ನೀಡುವುದು ಎಲ್ಲೆಡೆ ಕಂಡು ಬರುತ್ತದೆ. ಜಯದೇವದಲ್ಲಿ ಸಾಮಾನ್ಯರಿಗೂ ವಿಶೇಷ ವಾರ್ಡ್‍ನ ಸೌಲಭ್ಯಗಳು ಸಿಗುತ್ತವೆ. ಇನ್ನು ವಿಶೇಷ ವಾರ್ಡ್ ನೋಡಿದರಂತೂ ಯಾವುದೋ ಬೆಲೆಬಾಳುವ ಅಪಾರ್ಟ್‍ಮೆಂಟ್‍ನ ಕೊಠಡಿಯಂತೆ ಕಾಣುತ್ತದೆ. ಕಟ್ಟಡದ ಒಳಗೆ ಸಾರ್ವಜನಿಕರಿಗೊಂದು ಗ್ರಂಥಾಲಯ, ಸಿಬ್ಬಂದಿಗೊಂದು ಗ್ರಂಥಾಲಯ. ರೆಸ್ಟೋರೆಂಟ್ ರೀತಿಯಲ್ಲಿ ಕಾಣುವ ಹೋಟೆಲ್. ಹೊರಗಿನಿಂದ ತರುವ ಊಟ-ತಿಂಡಿ ತಿನ್ನಲು ಪ್ರತ್ಯೇಕ ವ್ಯವಸ್ಥೆ. ಲೋಕೋಪಯೋಗಿ ಇಲಾಖೆಯ ಕಚೇರಿ ಹಾಗೂ ಬ್ಯಾಂಕ್. ಕಟ್ಟಡದ ಪ್ರತಿ ಕೊಠಡಿಗೂ ಆಧುನಿಕ ಸ್ಪರ್ಶ ನೀಡಿರುವುದು. ಇವೆಲ್ಲವೂ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಜಯದೇವದ ಒಂದೇ ಕಟ್ಟಡದಲ್ಲಿ ಲಭ್ಯ. ಡಾ|| ಮಂಜುನಾಥ್ ಅವರು ಇದೆಲ್ಲವನ್ನೂ ಸರ್ಕಾರದ ಅನುದಾನದಿಂದಲೇ ಸಾಧಿಸುತ್ತೇನೆಂದು ಹೊರಟಿದ್ದರೆ ಅದು ಕನಸಾಗಿಯೇ ಉಳಿಯುತ್ತಿತ್ತು. ಅವಶ್ಯವಿರುವುದನ್ನು ಕೊಳ್ಳಲು ಟೆಂಡರ್ ಕರೆದು, ಆರೇಳು ತಿಂಗಳು ಕಾದು, ಗುಣಮಟ್ಟವಿರಲಿ, ಇಲ್ಲದಿರಲಿ ಯಾರದೋ ಶಿಫಾರಸ್ಸಿನ ಮೇರೆಗೆ ಕೊಳ್ಳಬೇಕಾಗುತ್ತಿತ್ತು.
ಸರ್ಕಾರದ ಅನುದಾನಕ್ಕೆ ಕಾದು ಕುಳಿತಿರದೆ, ಸಮಾಜ ಸೇವೆ ಮಾಡಬೇಕೆಂಬ ತುಡಿತವಿರುವ ಕೆಲವರನ್ನು ಸಂಪರ್ಕಿಸಿದರು. ನಾಮಫಲಕದಿಂದ ಹಿಡಿದು ರೋಗಿಯ ಖರ್ಚನ್ನು ಭರಿಸುವವರೆಗೂ ದಾನಿಗಳು/ಕೊಡುಗೆಗಳ ಸಹಾಯ ಪಡೆದರು. ಸಂಸ್ಥೆಗೆ ಕೊಡುಗೆ ನೀಡಿದವರ ಹೆಸರನ್ನು ಅಚ್ಚು ಹಾಕಿಸಿದರು. ಒಬ್ಬ ರೋಗಿಯ ಖರ್ಚನ್ನು ಐದಾರು ದಾನಿಗಳಿಂದ ಭರಿಸಿದರು. ಸಂಸ್ಥೆಗೆ ಹಣ ನೀಡಿದವರಿಗೂ ಹಲವು ರೋಗಿಗಳಿಗೆ ತಮ್ಮ ಹಣ ತಲುಪಿದೆ ಎಂಬ ತೃಪ್ತಿ ಸಿಗುವಂತೆ ಮಾಡಿದರು. ಇತ್ತ ಬಡರೋಗಿಯ ಆರೋಗ್ಯ ಸಮಸ್ಯೆಯ ಆರ್ಥಿಕ ಹೊರೆಯೂ ತಪ್ಪಿದಂತಾಯಿತು.
ನಮ್ಮ ಜನಪ್ರತಿನಿಧಿಗಳು ಈಗಿರುವ ನೂರು ಹಾಸಿಗೆಗಳ ಆಸ್ಪತ್ರೆಯನ್ನು ಇನ್ನೂರು ಹಾಸಿಗೆಗಳಿಗೆ, ಇನ್ನೂರು ಹಾಸಿಗೆಗಳ ಆಸ್ಪತ್ರೆಯನ್ನು ಮುನ್ನೂರು ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುತ್ತೆವೆಂದು ಹೇಳುತ್ತಲೇ ಇರುತ್ತಾರೆ. ಡಾ|| ಮಂಜುನಾಥ್ ಅವರು ಹೇಳುವ ಪ್ರಕಾರ ಹಾಸಿಗೆ ಹೆಚ್ಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾವುದೇ ಸಮಯದಲ್ಲೂ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಸರಿಯಾಗಿ ಜಾರಿಯಾಗಬೇಕು ಎನ್ನುತ್ತಾರೆ. ಹಾಗೆ ಪ್ರಾಮಾಣಿಕತೆಯೊಂದಿದ್ದರೆ ಸಾಲದು, ಸಕಾರಾತ್ಮಕ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸುವ ಮನಸ್ಸಿರಬೇಕು ಎಂಬುದು ಡಾ|| ಮಂಜುನಾಥ್ ಅವರ ಧ್ಯೇಯ.
ಇದನ್ನೇ ಕ್ರಿಸ್ ಅವರು ಬರಾಕ್ ಒಬಾಮಾಗೂ, ಅಮೇರಿಕಾದ ಕಾಂಗ್ರೆಸ್‍ಗೂ ತಲುಪಿಸಿದ್ದು. ಜಯದೇವ ಆಸ್ಪತ್ರೆಯೊಂದರ ಆಧಾರದಲ್ಲಿ ಇಡೀ ಭಾರತದ ಆರೋಗ್ಯ ವ್ಯವಸ್ಥೆ ಹೀಗೇ ಇದೆ ಎಂದು ಕ್ರಿಸ್ ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಗುಣಮಟ್ಟದಲ್ಲಿ ಖಾಸಗಿ ಆಸ್ಪತ್ರೆಗಳನ್ನೂ ಮೀರಿಸುವ ಜಯದೇವ, ಜನರ ತೆರಿಗೆ ಹಣದಿಂದಲೇ ಬದುಕುತ್ತಿದ್ದರೂ ವೈದ್ಯರ ಹಾಗೂ ಸಿಬ್ಬಂದಿಗಳ ದರ್ಪವನ್ನು ಹೊಂದಿರುವ ಕಳಪೆ ಗುಣಮಟ್ಟದ ಸಾರ್ವಜನಿಕ ಆಸ್ಪತ್ರೆಗಳು, ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಹಣ ಸುಲಿಗೆಗೆ ನಿಂತಿರುವ ಖಾಸಗಿ ಆಸ್ಪತ್ರೆಗಳ ನಡುವೇ ಅಜಗಜಾಂತರ ವ್ಯತ್ಯಾಸವೇ ಇದೆ.
ಸ್ವಾತಂತ್ರ್ಯ ಬಂದು ಅರವತ್ತಾರು ವರ್ಷಗಳು ಕಳೆದರೂ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆ ಕಾಪಾಡುವ ಕ್ರಮಗಳು ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಜನರ ಆರೋಗ್ಯ ಉತ್ತಮವಾಗಿದ್ದರೆ ಮಾನವ ಸಂಪನ್ಮೂಲ ಸೃಷ್ಟಿಯಾಗುತ್ತದೆ. ಜನರ ಆರೋಗ್ಯವೇ ‘ದೇಶದ ಸಂಪತ್ತು.’ ಜನಿಸುವ ಪ್ರತಿ ಮಗುವೂ ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಸಹಕಾರಿಯಾಗುವಂತಿರಬೇಕು. ಪೌಷ್ಠಿಕತೆಯನ್ನು ಹೆಚ್ಚಿಸಿ, ಜನರ ಜೀವನಮಟ್ಟವನ್ನು ಸುಧಾರಿಸುವುದು ಪ್ರಾಥಮಿಕ ಕರ್ತವ್ಯ ಎಂದು ಸಂವಿಧಾನವೇ ಹೇಳಿದೆ. ಸ್ವಾತಂತ್ರ್ಯಾನಂತರದಲ್ಲಿ 1983ರಲ್ಲಿ ಹಾಗೂ 2002ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಆರೋಗ್ಯ ನೀತಿಯ ಜಾರಿಯೂ ಸಮಪರ್ಕವಾಗಿಲ್ಲ.
ವೈದ್ಯರು, ವೃತ್ತಿಪರರು ಖಾಸಗಿ ಆಸ್ಪತ್ರೆಗಳತ್ತಲೋ, ವಿದೇಶಗಳತ್ತಲೋ ಮುಖ ಮಾಡುತ್ತಿದ್ದರೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸದ್ಯ ಇರುವ ವೈದ್ಯರು ಹಾಗೂ ಸಿಬ್ಬಂದಿಯ ದರ್ಪದ ವರ್ತನೆ, ಲಂಚಗುಳಿತನ ಸರ್ಕಾರಿ ಆಸ್ಪತ್ರೆಯೆಂದರೆ ಹೇಸಿಗೆ ಹುಟ್ಟಿಸುವಷ್ಟು ಕಳಪೆಯಾಗಿದೆ. ಇದೇ ಜನರನ್ನು ದುಬಾರಿಯಾದರೂ ಖಾಸಗಿ ಆಸ್ಪತ್ರೆಗಳತ್ತ ತಿರುಗಿಸಿದೆ. ಇಂತಹ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಖಾಸಗಿ ಆಸ್ಪತ್ರೆಗಳು ತಮ್ಮಿಚ್ಛೆಯಂತೆ ಹಣ ವಸೂಲಿಗೆ ನಿಂತಿವೆ. ದೇಶದಲ್ಲಿ ಬೆರಳೆಣಿಕೆಯಷ್ಟು ಸಾರ್ವಜನಿಕ ಆಸ್ಪತ್ರೆಗಳು ಮಾತ್ರ ಜನರ ತೆರಿಗೆ ಹಣವನ್ನು ಸದ್ವಿನಿಯೋಗಿಸಿ, ಗುಣಮಟ್ಟದ ಚಿಕಿತ್ಸೆ ನೀಡುತ್ತಿವೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮೀಣ ಮಟ್ಟದಲ್ಲಿ ಲಭ್ಯವಿದ್ದರೂ ಅಲ್ಲಿ ಸಾಮಾನ್ಯ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ. ಅದು ದುಬಾರಿಯಾದುದೇನಲ್ಲ. ದ್ವಿತೀಯ ಹಂತದ ಆರೋಗ್ಯ ಕೇಂದ್ರಗಳು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿವೆ. ಆದರೆ ತೃತೀಯ ಹಂತದ ಆರೋಗ್ಯ ಕೇಂದ್ರಗಳು, ತುರ್ತು ಚಿಕಿತ್ಸೆಯ ಸುಸಜ್ಜಿತ ಆಸ್ಪತ್ರೆಗಳು ಕೆಲವೆಡೆಗಳಲ್ಲಿ ಮಾತ್ರ ಇವೆ. ರಾಜ್ಯದ 30 ಜಿಲ್ಲೆಗಳಲ್ಲೂ ಸುಸಜ್ಜಿತವಾದ ಆಸ್ಪತ್ರೆಗಳನ್ನು ನಿರ್ಮಿಸಿ ಅದಕ್ಕೆ ಬೇಕಾದ ವೈದ್ಯರು, ಸಿಬ್ಬಂದಿಗಳನ್ನು ಹಾಗೂ ಅನುದಾನವನ್ನು ಸರಿಯಾಗಿ ಒದಗಿಸಿಕೊಟ್ಟರೆ ತುರ್ತು ಆರೋಗ್ಯ ಸೇವೆಗಳನ್ನು ಹತ್ತಿರದಲ್ಲೇ ನೀಡಬಹುದು. 108 ಆಂಬ್ಯುಲೆನ್ಸ್ ಸೇವೆಯನ್ನು ರಾಜ್ಯದ ಮೂಲೆಮೂಲೆಗೂ ನೀಡುತ್ತಿದ್ದೇವೆಂದು ಬಡಾಯಿ ಕೊಚ್ಚಿಕೊಳ್ಳುವುದಕ್ಕಿಂತ, ಆಯಾ ಭಾಗದಲ್ಲೇ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಒಳಿತು. ದಡಾರ, ಪೋಲಿಯೋ ವಿರುದ್ಧ ಸಮರ ಸಾರಿದಂತೆ ಮಲೇರಿಯಾ, ಟೈಫಾಯ್ಡ್, ಡಯಾಬಿಟಿಸ್, ಹೆಪಾಟೈಟಿಸ್ ಸಾಂಕ್ರಾಮಿಕ ರೋಗಗಳನ್ನು ಹಂತಹಂತವಾಗಿ ತಡೆಗಟ್ಟುವ ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ.
ಆದರೆ ಸರ್ಕಾರಗಳು ಜನರ ಆರೋಗ್ಯದ ಬಗ್ಗೆ ಅಷ್ಟಾಗಿ ಮುತುವರ್ಜಿ ವಹಿಸಿದಂತೆ ಕಾಣುವುದಿಲ್ಲ. 2013-14ರ ಬಜೆಟ್‍ನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್‍ಗೆ 21,239 ಕೋಟಿ ಮೀಸಲಿಡಲಾಗಿದೆ. ಇದು ದೇಶದ ಜಿಡಿಪಿಯ ಶೇ.1ರಷ್ಟು ಸಹ ಇಲ್ಲ. ಜನರ ಜೀವನ ಮಟ್ಟ ಸುಧಾರಿಸಲು ಮೊದಲ ಪ್ರಾಶಸ್ತ್ಯ ನೀಡಬೇಕು ಎಂಬುದು ಸಂವಿಧಾನದಲ್ಲೇ ಉಲ್ಲೇಖವಾಗಿದೆ. ಜೀವನ ಮಟ್ಟ ಸುಧಾರಣೆಯಲ್ಲಿ ಉತ್ತಮ ಆರೋಗ್ಯವೂ ಬಹುಮುಖ್ಯವಾದುದು. 187 ದೇಶಗಳ ಮಾನವ ಅಭಿವೃದ್ಧಿ ರ್ಯಾಂಕಿಂಗ್‍ನಲ್ಲಿ ಭಾರತದ ಸ್ಥಾನ 134. ಭಾರತದಲ್ಲಿನ ಸಾರ್ವಜನಿಕ ಆಸ್ಪತ್ರೆಗಳನ್ನು ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ತೀರಾ ಕೆಳ ಮಟ್ಟದ್ದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಅವರೇ ಒಪ್ಪಿಕೊಂಡಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ನಿರೀಕ್ಷಿಸುವುದಕ್ಕಿಂತಲೂ, ಜಯದೇವದ ಡಾ|| ಮಂಜುನಾಥ್ ಹಾದಿಯಲ್ಲಿ ಸಣ್ಣಪುಟ್ಟ ಹೆಜ್ಜೆಗಳನ್ನಿಡುತ್ತಾ ಹೋದರೆ ಮುಂದೊಂದು ದಿನ ಬದಲಾವಣೆಯ ಕ್ರಾಂತಿಯೊಂದು ಘಟಿಸುತ್ತದೆ. ಗ್ರಾಮೀಣ ಮಟ್ಟದಿಂದ ದೇಶದ ಅತ್ಯುನ್ನತ ಆರೋಗ್ಯ ಸಂಸ್ಥೆಗಳ ನೇತೃತ್ವವಹಿಸುವವರು ಇಚ್ಛಾಶಕ್ತಿ ತೋರಿದಲ್ಲಿ ಬದಲಾವಣೆ ದೊಡ್ಡ ವಿಷಯವೇ ಅಲ್ಲ. ಅಧಿಕಾರ ವಹಿಸಿಕೊಂಡ ಏಳೂವರೆ ವರ್ಷಗಳಲ್ಲಿ ಜಯದೇವವನ್ನು ವಿಶ್ವದ ದೊಡ್ಡಣ್ಣನ ಶ್ವೇತಭವನಕ್ಕೂ ಕೊಂಡೊಯ್ದಿದ್ದಾರೆ ಡಾ|| ಮಂಜುನಾಥ್. ನವೆಂಬರ್ ಕನ್ನಡಿಗರಾಗಿ ಪರಿವರ್ತಿತರಾಗುತ್ತಿರುವ ನಾವು ಈಗಲಾದರೂ ಎಲೆ ಮರೆಯ ಕಾಯಿಯಂತೆ ಜನಪರ ಕಾರ್ಯಗಳಲ್ಲಿ ತೊಡಗಿರುವ ಕನ್ನಡಿಗರನ್ನು ನೆನೆಯೋಣ. ಸರ್ಕಾರಿ ಸ್ವಾಯತ್ತ ಸಂಸ್ಥೆಯನ್ನು ಯಾವ ಖಾಸಗಿ ಸಂಸ್ಥೆಗೂ ಕಡಿಮೆಯಿಲ್ಲದಂತೆ ಬೆಳೆಸಿರುವ ಡಾ|| ಮಂಜುನಾಥ್ ಅವರ ಕಾರ್ಯ ನಮ್ಮನ್ನಾಳುವ ಶ್ವೇತವಸ್ತ್ರಧಾರಿಗಳನ್ನು ತಲುಪದಿರುವುದೇ ವಿಪರ್ಯಾಸ.
ಚಿತ್ರ ಕೃಪೆ : http://www.jayadevacardiology.com/





Good work, Please keep it up Majunath sir
ಡಾ.ಮಂಜುನಾಥ ಅವರ ಹೃದಯಕ್ಕೆ ಮಿಡಿತವಿದೆ .ಬಡ ಜನರ ಬಗ್ಗೆ ಪ್ರೀತಿ ಇದೆ.ಅದಕ್ಕೆ ಎಲ್ಲವನ್ನೂ ಮಾಡಲು ಅವರಿಗೆ ಸಾಧ್ಯವಾಯಿತು ಅದಿಲ್ಲ ಇದಿಲ್ಲ ಎಂದು ನೆಪ ಹೂಡಿ ಇರುವುದನ್ನೂ ಸದ್ಭಳಕೆ ಮಾಡದವರ ನಡುವೆ ಒಂದು ಆಶಾ ಕಿರಣವಾಗಿರುವ ಡಾ.ಮಂಜುನಾಥ ಅವರಿಗೆ ಹೃತ್ಪೂರ್ವಕ ಅಭಿನಂದನೆ ಗಳು .ಅವರನ್ನು ಗುರುತಿಸಲು ಕೂಡಾ ಉದಾರ ಮನಸ್ಸು ಇರಬೇಕಲ್ಲ ?!
Hats off to Dr.Manjunath, we are proud to have people like Dr.Manjunath & his services to humanity.
The same Obama had commented Americans need not go to India or Mexico for cheap medical treatments. The fact is there are hundreds of good hospitals in India with good doctors and latest infra and Americans come down to India even for dental treatments, especially the non-insured people.
ಡಾಕ್ಟರ್ ಮಂಜುನಾಥ್ರವರಿಗೆ ಹೃತ್ಪೂರ್ವಕ ವಂದನೆಗಳು. ರೋಗಿಗಳು ಮತ್ತು ಆಸ್ಪತ್ರೆಯ ಬಗ್ಗೆ ಇರುವ ಖಾಳಜಿ ಪ್ರಶಂಸನೀಯವಾದುದು. ಮಾನವೀಯ ಸೇವಾಬಾವದ ಮಂಜುನಾಥರವರು ಎಲ್ಲಾ ಸರ್ಕಾರಿ ವೈದ್ಯರಿಗೆ ಮಾದರಿಯಾಗಿದ್ದಾರೆ ಹಾಗೂ ಲಕ್ಷಾಂತರ ಜನರ ಆಶಾಕಿರಣವಾಗಿದ್ದಾರೆ.
some thing better than nothing.haage nimma seve haats of Manjunaath sir.pls keep it always.
ಹೃದಯವಂತ ಹೃದಯದ ವೈದ್ಯರು ಶ್ರೀ ಮಂಜುನಾಥನವರು, ಅವರಂತವರ ಸಂತಾನ ಸಾವಿರವಾಗಿ ನಮ್ಮ ದೇಶ ಪ್ರಕಾಶಿಸಲಿ. ಅಭಿನಂದನೆಗಳು, ತಮ್ಮನ್ನು ದೇವರು ಸಾವಿರ ವರ್ಷ ಸುಖವಾಗಿಟ್ಟಿರಲಿ.
Dr. ಮಂಜುನಾಥ್ ಅವರಿಗೆ ಅಭಿನಂದನೆಗಳು. ನಿಮ್ಮ ಈ ಕೆಲಸ ನಿರಂತರವಾಗಿ ಸಾಗಲಿ.
Definitely, Dr Manjunath is doing yeoman service in the JAYADEVA-he requires people’s and Govt support/encouragement . One (Mr) Dr B.Ramesh s/o Er B.Basavappa ( Basvapatna-worked in HECP,KEB-Jogfalls) is also devoted person , joining his hands in this regard to uplift the image of JAYADEVA., The doctors and supporting staff of Jayadeva deserves honours from the Public especially to inspire and encourage them in the larger interest. SERVICE TO THE MANKIND IS SERVICE TO THE GOD. I bow my head and salute to all concerned in JAYADEVA……….
Dr.manjunath avarntha rastra premigaliro varegu bavya barathada bavishya ujwalavagi vishwakke pasarisali.danyvadagalondige
ಡಾಕ್ಟರ್ ಮಂಜುನಾಥ್ರವರಿಗೆ ಹೃತ್ಪೂರ್ವಕ ವಂದನೆಗಳು
ಡಾಕ್ಟರ್ ಮಂಜುನಾಥ್ರವರಿಗೆ ಹೃತ್ಪೂರ್ವಕ ವಂದನೆಗಳು… We are proud of YOU doctor…
we are very glad to have people like you sir 🙂
i know about this person he is a great person congrats sir DR.manjunath i pray to god to get more and more power to you to help people…..
ಜನ ಸೇವೆಯೆ ಜನಾರ್ದನ ಸೇವೆ ಎಂದು ತಿಳಿದವರು ನೀವು . ನಿಮಗೆ ಕೋಟಿ ನಮನ
we are very glad to have people like you sir
Hats off drmanju