ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 12, 2013

1

Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೨

‍ನಿಲುಮೆ ಮೂಲಕ

ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್

Jammu Kashmir- Debate on Article 370Artilce 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧

370ನೇ ವಿಧಿಯ ನಿಂದನೆ ಮತ್ತು ದುರ್ಬಳಕೆ

370ನೇ ವಿಧಿಯ ನಿಂದನೆ ಮತ್ತು ಪ್ರಜ್ಞಾಪೂರ್ವಕ ದುರುಪಯೋಗಗಳ ಮೇಲೆ ಗಮನಹರಿಸಿದರೆ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ ಸಂಘಾತ್ಮಕ ವಿಷಯಗಳ ಯಾದಿಯಲ್ಲಿ 99ರಲ್ಲಿ 6  ಮತ್ತು ಸಹವರ್ತಿ ಪಟ್ಟಿಯ 52ರಲ್ಲಿ 21 ವಿಷಯಗಳು ಇನ್ನೂ ಹೊರಪಟ್ಟಿರುವುದು ಗೋಚರವಾಗುತ್ತದೆ. ಜಮ್ಮು ಕಾಶ್ಮೀರದ ಪ್ರಮಾಣ ವಚನದ ಪಠ್ಯ ಉಳಿದವುಗಿಳಿಗಿಂತ ಭಿನ್ನವಾಗಿದೆ. ರಾಜ್ಯದ ಶಾಸನಸಭೆಯ ಕಾಲಾವಧಿ ಅರು ವರ್ಷ. ಜಮ್ಮು ಕಾಶ್ಮೀರ ರಾಜ್ಯದ ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಶಬ್ದಗಳಿಗೆ ಜಾಗವಿಲ್ಲ. ಬ್ರಷ್ಟಾಚಾರ ನಿಯಂತ್ರಣ ಕಾಯಿದೆ (Prevention of Corruption) 1988,  ಭಾರತೀಯ ದಂಡಸಂಹಿತೆ (Indian Penal Code), ಗೃಹೀಯ ಹಿಂಸಾ ಕಾಯಿದೆ(Domestic Violence Act), ಧಾರ್ಮಿಕ ಸಂಸ್ಥೆ (ದುರುಪಯೋಗ ನಿಯಂತ್ರಣ) ಕಾಯಿದೆ 1988, ಅರಣ್ಯ ಹಕ್ಕು ಕಾಯಿದೆ,ವನ್ಯಜೀವಿ ಸಂರಕ್ಷಣಾ ಕಾನೂನು, ನಗರ ಭೂ ಮಿತಿ ಕಾನೂನು ಇತ್ಯಾದಿಗಳು ಜಮ್ಮು ಕಾಶ್ಮೀರ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಜಮ್ಮು ಕಾಶ್ಮೀರದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐನ ಅಧಿಕಾರ ಸೀಮಿತವಾಗಿದೆ, ಅಂದರೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ದಾಖಲಾದ ದೂರಿನ ಮೇಲೆ ತನಿಖೆ ನಡೆಸಲು ಸಿಬಿಐ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ರಾಜ್ಯಕ್ಕೆ ಸಂಭಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಕಾನೂನು ವ್ಯಾಪ್ತಿ ಅಪೀಲಿಗೆ ಮಾತ್ರ ಸೀಮಿತವಾಗಿದೆ ಮತ್ತು ಫೆಡರಲ್ ಕೋರ್ಟ ಆಗಿ ಕಾರ್ಯನಿರ್ವಹಿಸುವ ಅಧಿಕಾರ ಮೊಟಕುಗೊಂಡಿದೆ.

ಕಡೆಯಪಕ್ಷ ರಾಜ್ಯದ ಜನತೆಗೆ 370ನೇ ವಿಧಿಯು ನಿಜವಾಗಿ ಹಿತಕಾರಿಯಾಗಿದೆಯೇ? ಎನ್ನುವುದನ್ನು ವಿಶ್ಲೇಷಿಸಿದರೆ, ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಜನ ಪ್ರತಿನಿಧಿ ಕಾಯಿದೆ (People representation act 1950) ರಾಜ್ಯಕ್ಕೆ ಅನ್ವಯವಾಗದೇ ಇರುವುದರಿಂದ ಚುನಾವಣಾ ಕ್ಷೇತ್ರಗಳ ಮರುವಿಂಗಡನೆಯನ್ನು ಜಾರಿಗೆ ತರುವ ಯಾವುದೇ ಅಧಿಕಾರ ಕೇಂದ್ರಕ್ಕೆ ಇರುವುದಿಲ್ಲ. 2002ರಲ್ಲಿ ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ಇಡೀ ದೇಶದಲ್ಲಿ ಕ್ಷೇತ್ರ ಪುನರ್ವಿಂಗಡನೆಯನ್ನು ಕೈಗೊಳ್ಳಲಾಯಿತು. ಕೆಲವು ಆಯ್ದ ಪ್ರದೇಶಗಳ ಹಿತಾಸಕ್ತಿಗನುಗುಣವಾಗಿ 370ನೇ ವಿಧಿಯ ದುರುಪಯೋಗ ನಡೆದಿದೆ.

 ಜಮ್ಮು ಪ್ರಾಂತದ ಜನಸಂಖ್ಯೆ, ಭೌಗೋಳಿಕ ವಿಸ್ತಾರ ಹಾಗೂ ಮತದಾರರ ಸಂಖ್ಯೆ ಹೆಚ್ಚಿದ್ದರೂ ಕಾಶ್ಮೀರದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಿವೆ. ಕಾಶ್ಮೀರ 47 ಸ್ಥಾನಗಳನ್ನು ಹೊಂದಿದ್ದರೆ ಜಮ್ಮು ಕೇವಲ 37 ಸ್ಥಾನಗಳನ್ನು ಹೊಂದಿದೆ. ಸರಿಯಾಗಿ ಕ್ಷೇತ್ರ ಪುನರ್ವಿಂಗಡನೆ ನಡೆದದ್ದೇ ಆದಲ್ಲಿ ಜಮ್ಮುವಿಗೆ 48-50 ಸ್ಥಾನಗಳು ಹಾಗೂ ಕಾಶ್ಮೀರಕ್ಕೆ 35-36 ಸ್ಥಾನಗಳು ದೊರೆಯುತ್ತಿದ್ದವು.

ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆಯ ಬಗ್ಗೆ ಯಾವುದೇ ದಾಖಲೆಗಳಿಲ್ಲ. ರಾಜ್ಯದಲ್ಲಿ ಮಂಡಲ ಆಯೋಗದ ವರದಿ ಜಾರಿಗೆ ಬಂದಿಲ್ಲ, ಹಾಗಾಗಿ ಹಿಂದುಳಿದ ವರ್ಗಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಮೀಸಲಾತಿ ಸೌಕರ್ಯಗಳು ದೊರೆಯುತ್ತಿಲ್ಲ. ಪರಿಷಿಷ್ಟ ಜಾತಿ/ಪಂಗಡ ಮುಂತಾದ ಸಮಾಜದ ವಂಚಿತ ವರ್ಗಗಳಿಗೆ 1991ರವರೆಗೂ ಯಾವುದೇ ಮೀಸಲಾತಿ ದೊರೆಯುತ್ತಿರಲಿಲ್ಲ.1991ರಿಂದ ಅವರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ದೊರೆತರೂ ರಾಜಕೀಯ ಮತ್ತು ರಾಜ್ಯ ಶಾಸನ ಸಭೆಯಲ್ಲಿ ಇನ್ನೂ ಆರಕ್ಷಣ ದೊರೆತಿಲ್ಲ. ದಲಿತ ಮತ್ತು ‘ಬಹುಜನ ಸಮಾಜ’ದ ಮುಖಂಡರುಗಳು ಈ ವಿಷಯದಲ್ಲಿ ಮೌನವಹಿಸಿರುವುದು ಅನಿರೀಕ್ಷಿತ.

ರಾಜ್ಯ ಸರ್ಕಾರ ಸಂವಿಧಾನದ 73ನೇ (ಪಂಚಾಯತಿ ರಾಜ 1993) ಮತ್ತು 74ನೇ (ಸ್ಥಳೀಯ ಸಂಸ್ಥೆ 1993) ತಿದ್ದುಪಡಿಯನ್ನು ಜಾರಿಗೆ ತರಲು ಕಾನೂನುಗಳನ್ನು ರೂಪಿಸಲು ಕೂಡ ನಿರಾಕರಿಸಿತು. ಆದ್ದರಿಂದ ಜಮ್ಮು ಕಾಶ್ಮೀರದಲ್ಲಿ ಜನಾಡಳಿತದ ವಿಕೇಂದ್ರೀಕರಣ ಮತ್ತು ಜನಸಾಮಾನ್ಯರಿಗೆ ಅಧಿಕಾರದ ಹಸ್ತಾಂತರ ಇದುವರೆಗೂ ನಡೆದಿಲ್ಲ. ಹಳೆಯ ಜಮ್ಮು ಕಾಶ್ಮೀರ ಪಂಚಾಯತಿ ರಾಜ್ ಕಾಯಿದೆ 1989ರ ಅನ್ವಯ ಪಂಚಾಯತಿಗಳಿಗೆ ಚುನಾವಣೆಗಳನ್ನು ನಡೆಸಲಾಗುತ್ತದೆ. ಜಮ್ಮು ಕಾಶ್ಮೀರ ಮಾಹಿತಿ ಹಕ್ಕು ಕಾಯಿದೆ ಮತ್ತು ಅದರ ತಿದ್ದುಪಡಿಗಳು ಕೇಂದ್ರದ ಕಾನೂನಿಗೆ ಯಾವ ಸಮದಲ್ಲೂ ಇಲ್ಲ. ಜಮ್ಮು ಕಾಶ್ಮೀರ ಮಾಹಿತಿ ಹಕ್ಕು ಕಾಯಿದೆಯು ಕೇಂದ್ರದ ಕಾನೂನು ಕೊಡುವುದಕ್ಕಿಂತ ಹೆಚ್ಚಿನ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತದೆ. ಗಮನಿಸಬೇಕಾದ ಇನ್ನೊಂದು ಬಹುಮುಖ್ಯ ಅಂಶವೆಂದರೆ ಜಮ್ಮು ಕಾಶ್ಮೀರ ರಾಜ್ಯಕ್ಕೆ ಕೊಡುವ ತಲಾ ಸಹಾಯಧನ ಪಶ್ಚಿಮ ಬಂಗಾಳ ರಾಜ್ಯದ ತಲಾ ಸಹಾಯಧನಕ್ಕಿಂತ 16 ಪಟ್ಟು ಹಾಗೂ ಬಿಹಾರದ ತಲಾ ಸಹಾಯಧನಕ್ಕಿಂತ 12 ಪಟ್ಟು ಜಾಸ್ತಿಯಾಗಿದೆ. ಅದರಲ್ಲೂ ಕಾಶ್ಮೀರ ಕಣಿವೆಗೆ ಸುಮಾರು 65-67% ಆರ್ಥಿಕ ಸಂಪನ್ಮೂಲಗಳು ನಿಗದಿಯಾದರೆ ಜಮ್ಮು ಮತ್ತು ಲಢಾಕ ಪ್ರಾಂತಗಳು ಸೇರಿ 31-35% ಪಾಲನ್ನು ಪಡೆಯುತ್ತವೆ. ಜಮ್ಮು ಕಾಶ್ಮೀರ ನಿಯತವಾಗಿ ವಿಶೇಷ ಆರ್ಥಿಕ ಪ್ಯಾಕೇಜುಗಳನ್ನು ಮತ್ತು ಪ್ರಧಾನಮಂತ್ರಿ ಪ್ಯಾಕೇಜುಗಳನ್ನು ಪಡೆದುಕೊಳ್ಳುತ್ತದೆ, ಆದರೆ ಇದ್ಯಾವುದಕ್ಕು ಲೆಕ್ಕ ಕೊಡುವ ಹೊಣೆಗಾರಿಕೆಯಿಂದ ಮುಕ್ತವಾಗಿದೆ,  ಏಕೆಂದರೆ ಎಂದೂ ಮಾಹಿತಿಯನ್ನು ಬಹಿರಂಗಗೊಳಿಸಲಾಗುವುದಿಲ್ಲ ಮತ್ತು ದುರ್ಬಲ ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲೂ ಪಡೆಯಲು ಸಾಧ್ಯವಾಗುವುದಿಲ್ಲ.

370ನೇ ವಿಧಿಯ ಮುಂದುವರಿಕೆಯನ್ನು ಪ್ರತಿಪಾದಿಸುವವರು ಮತ್ತು ಪ್ರತ್ಯೇಕತಾವಾದಿಗಳು 1947ರಲ್ಲಿ ಜಮ್ಮು ಕಾಶ್ಮೀರಕ್ಕೆ ಪಶ್ಚಿಮ ಪಾಕಿಸ್ತಾನಕ್ಕೆ ವಲಸೆ ಬಂದ ಅಲ್ಪಸಂಖ್ಯಕ ಸಿಖ್ ಮತ್ತು ಹಿಂದುಗಳ ಬಗ್ಗೆ  ಎಂದೂ ಸೊಲ್ಲನೆತ್ತುವುದಿಲ್ಲ. ಜಮ್ಮು ಕಾಶ್ಮೀರ ರಾಜ್ಯದ ಸಂವಿಧಾನದ 6ನೇ ವಿಧಿಯನ್ವಯ ಈ ಅಲ್ಪಸಂಖ್ಯಾತರನ್ನು ರಾಜ್ಯದ ನಾಗರಿಕರೆಂದು ಪರಿಗಣಿಸಲಾಗುವುದಿಲ್ಲ, ಕಾರಣ ಅವರು ಅವಿಭಜಿತ ಜಮ್ಮು ಕಾಶ್ಮೀರ ರಾಜ್ಯದ ಹೊರಗಿನಿಂದ ಬಂದವರು. ಇದಕ್ಕೆ ವ್ಯತಿರಿಕ್ತವಾಗಿ ಜಮ್ಮು ಕಾಶ್ಮೀರ ಪುನರ್ವಸತಿ ಕಾಯಿದೆ (Jammu and Kashmir Resettlement Act, 1982)ಯು ವಿಭಜನೆಯ ಸಂದರ್ಭದಲ್ಲಿ ಸ್ವ ಇಚ್ಛೆಯಿಂದ ಪಾಕಿಸ್ತಾನಕ್ಕೆ ವಲಸೆ ಹೋದವರ ಆಧಿಕಾರಗಳನ್ನು ಖಾತ್ರಿಪಡಿಸುತ್ತದೆ. ಈ ಕಾಯಿದೆಯಂತೆ ಅಂತಹ ವಲಸೆ ಹೋದವರು ಪುನಃ ವಾಪಾಸು ಬರಬಹುದು, ತಮ್ಮ ಆಸ್ತಿಗಳನ್ನು ಮರಳಿ ಪಡೆಯಬಹುದು ಅಥವಾ ತಕ್ಕ ಪರಿಹಾರವನ್ನು ಪಡೆದುಕೊಳ್ಳಬಹುದು.

ಇದೇ ಜಮ್ಮು ಕಾಶ್ಮೀರ ಸರ್ಕಾರ 65 ವರ್ಷಗಳಿಂದ ಟೆಂಟುಗಳಲ್ಲಿ ವಾಸವಾಗಿರುವ, ನ್ಯಾಯಸಮ್ಮತವಾಗಿ ಭಾರತದ ನಾಗರಿಕರಾಗಿರುವ ನಿರಾಶ್ರಿತರನ್ನು ಪುನರ್ವಸತಿಗೊಳಿಸಲು ನಿರಾಕರಿಸುತ್ತದೆ!

ಪಶ್ಚಿಮ ಪಾಕಿಸ್ತಾನದಿಂದ ವಲಸೆ ಬಂದ ಸುಮಾರು ಎರಡೂವರೆ ಲಕ್ಷ ನಿರಾಶ್ರಿತರಿಗೆ ರಾಜ್ಯದ ನಾಗರಿಕತ್ವವನ್ನು ಕೊಡುವುದರಿಂದ ರಾಜ್ಯದ ಜನಸಂಖ್ಯಾ ಲಕ್ಷಣವನ್ನು ಏರುಪೇರುಗೊಳಿಸುವುದು ಎನ್ನುವುದು ಒಂದು ಅಸಂಬದ್ಧ ತರ್ಕ.

2001ರ ಜನಗಣತಿಯಂತೆ ಜಮ್ಮು ಕಾಶ್ಮೀರದ ಜನಸಂಖ್ಯೆ 10 ದಶಲಕ್ಷ, ಆದ್ದರಿಂದ 1947ಕ್ಕೂ ಮುಂಚೆ, ಅಂದರೆ ರಾಜ್ಯ ಸಂವಿಧಾನದ ಕರಡು ಪ್ರತಿ ತಯಾರಾಗಿ ಜಾರಿಗೆ ಬರುವ ಮೊದಲೇ ವಲಸೆ ಬಂದವರನ್ನು ಪರಿಗಣಿಸುವುದರಿಂದ ರಾಜ್ಯದ ಜನಸಂಖ್ಯಾ ಹರವಿನಲ್ಲಿ ಯಾವ ಏರುಪೇರು ಆಗುವುದಿಲ್ಲ. ಇದೇ ತರಹದ ಅನ್ಯಾಯವನ್ನು ಪಂಜಾಬದಿಂದ ವಲಸೆ ಬಂದ ವಾಲ್ಮೀಕಿ ಸಮಾಜದವರ ಮೇಲೂ ನಡೆಸಲಾಗಿದೆ. ನಗರ ಮುನ್ಸೀಪಾಲಿಟಿ ಮತ್ತು ಸ್ವಚ್ಛತಾ ಕೆಲಸಗಳಿಗಾಗಿ 1956ರಲ್ಲಿ ಪಂಜಾಬದಿಂದ ವಾಲ್ಮೀಕಿ ಸಮಾಜದ ಸುಮಾರು 150 ಕುಟುಂಬಗಳನ್ನು ಕರೆತರಲಾಯಿತು ಮತ್ತು ಅವರಿಗೆ ರಾಜ್ಯ ನಾಗರಿಕರ(state subject-ship) ಹಕ್ಕುಗಳನ್ನು ನೀಡುವ ಆಶ್ವಾಸನೆಯನ್ನು ನೀಡಲಾಗಿತ್ತು. ತದನಂತರ ಭಂಗಿ/ ಜಾಢಮಾಲಿ ಉದ್ಯೋಗದಲ್ಲಿದ್ದವರಿಗೆ ಮಾತ್ರ ಸ್ಟೇಟ್ ಸಬ್ಜೆಕ್ಟ್ ಹಕ್ಕುಗಳನ್ನು ನೀಡಲಾಯಿತು.

ರಾಜ್ಯದಲ್ಲಿ ಪ್ರಸ್ತುತ ವಾಲ್ಮೀಕಿ ಸಮಾಜದ ಸುಮಾರು 600 ಕುಟುಂಬಗಳಿವೆ ಆದರೆ ಇದುವರೆಗೂ ಅವರ ವಸತಿ ಕೇರಿಗಳನ್ನು ಜಮ್ಮು ಕಾಶ್ಮೀರ ಸರ್ಕಾರ ಸಕ್ರಮಮಾಡಿಲ್ಲ. ಕಾಶ್ಮೀರಕ್ಕೆ ಸಂಭಂಧಿಸಿದ ಚರ್ಚೆಗಳ ಅವ್ಯವಸ್ಥ ರಾಶಿಗಳಲ್ಲಿ ಅಲ್ಪಸಂಖ್ಯಾತ ಸಿಖ್ ಮತ್ತು ಹಿಂದೂಗಳ ಹಕ್ಕು ಅಧಿಕಾರಗಳ ವಂಚನೆಯ ವಿಷಯ ಸದಾ ನಿರ್ಲಕ್ಷೆಗೆ ಒಳಗಾಗಿದೆ. ಈ ವಿಷಯ ಜಮ್ಮು ಕಾಶ್ಮೀರದ “ವಿಶೇಷತೆ”ಯನ್ನು ರಕ್ಷಿಸುವ ದೃಷ್ಟಿಯಿಂದ “ರಾಜಕೀಯವಾಗಿ ಅಪಥ್ಯ”ವಾಗಿದೆ. ಭಾರತ ಸರ್ಕಾರದ ಸಂಧಾನಕಾರರ ವರದಿಯೂ ಕೂಡ ಅಲ್ಪಸಂಖ್ಯಾತ ಸಿಖ್ ಮತ್ತು ಹಿಂದೂಗಳ ಸ್ಟೇಟ್ ಸಬ್ಜೆಕ್ಟ್ ವಿಷಯವನ್ನು ಎತ್ತುವಲ್ಲಿ ವಿಫಲವಾಗಿದೆ.

ಅಂತರರಾಷ್ಟ್ರೀಯ ಮಾನವ ಹಕ್ಕು ಕಾಯಿದೆಯೂ ಸಹ “ಜಸ್ ಸಾಂಗೈನ್” (jus sanguine) ಅಂದರೆ ಮಾತಪಿತೃರ ರಾಷ್ಟ್ರೀಯತೆಯನ್ನು ಆಧರಿಸಿ ನಾಗರಿಕತೆಯನ್ನು ನೀಡುವ ವಿಧಾನವನ್ನು ಸ್ಫಷ್ಟವಾಗಿ ವಿರೋಧಿಸುತ್ತದೆ. ಸಂಯುಕ್ತ ರಾಷ್ಟ್ರ ಸಂಘ ಮಾನವ ಹಕ್ಕು ಸಮಿತಿ (UN Human Rights Committee) ಮತ್ತು ಜನಾಂಗೀಯ ತಾರತಮ್ಯ ನಿವಾರಣಾ ಸಮಿತಿ(UN Committee on the Elimination of Racial Discrimination)ಗಳು “ಜಸ ಸಾಂಗೈನ್” ಆಧಾರದ ಮೇಲೆ ನಾಗರಿಕತೆಯನ್ನು ಗುರುತಿಸಿದ್ದಕ್ಕಾಗಿ ಜರ್ಮನಿ, ಜಪಾನ್ ಮತ್ತು ಕಾಂಬೋಡಿಯ ದೇಶಗಳನ್ನು ಖಂಡಿಸಿದೆ. ಅದರಂತೇ ಅನೇಕ ರಾಷ್ಟ್ರಗಳು ತಮ್ಮ ನಾಗರಿಕ ಕಾನೂನುಗಳನ್ನು ಬದಲಾಯಿಸಿವೆ.

ಮಾನವ ಹಕ್ಕು ರಕ್ಷಣೆಯ ಚಾಂಪಿಯನ್ಗಳು ಪೋಲಿಸ್ ಕಸ್ಟಡಿಯಲ್ಲಿನ ಸಾವು ಅಥವಾ ನಕಲಿ ಎನ್ಕೌಂಟರ್ನ ಕೆಲವು ಪ್ರಕರಣಗಳನ್ನು ಹಿಡಿದು ಗದ್ದಲ ಎಬ್ಬಿಸುವುದನ್ನು ನಮ್ಮ ದೇಶದಲ್ಲಿ ನಾವು ಆಗಾಗ ನೋಡುತ್ತಿರುತ್ತೇವೆ. ಆದರೆ ಅದೇ ಮಾನವ ಹಕ್ಕು ಹೋರಾಟಗಾರರು 1993 ಮಾನವ ಹಕ್ಕು ಕಾಯಿದೆಯು (‘Protection of Human Rights Act, 1993’) ಜಮ್ಮು ಕಾಶ್ಮೀರಕ್ಕೆ ಅನ್ವಯವಾಗದೇ ಇರುವ ಬಗ್ಗೆ ಚಕಾರವನ್ನು ಎತ್ತುತ್ತಿಲ್ಲ. ಜೊತೆಗೆ 1997ರ ಜಮ್ಮು ಕಾಶ್ಮೀರ ಮಾನವ ಹಕ್ಕು ಕಾಯಿದೆಯನ್ನು ಕೂಡ 2002ರಲ್ಲಿ ತಿದ್ದುಪಡಿ ಮಾಡಿ ತಾಂತ್ರಿಕ ಸಿಬ್ಬಂದಿಗಳನ್ನು ನೇಮಕಮಾಡುವ ರಾಜ್ಯ ಮಾನವ ಹಕ್ಕು ಆಯೋಗದ ಅಧಿಕಾರವನ್ನು ಮೊಟಕುಗೊಳಿಸಿದೆ.

ನಿಜವಾಗಿ ಮಾನವ ಹಕ್ಕು ಉಲ್ಲಂಘನೆಯಾದ ಅನೇಕ ಪ್ರಕರಣಗಳು ಇನ್ನೂ ವಿಚಾರಣೆಗಾಗಿ ಕಾದಿವೆ. ಒಂದು ಪ್ರಕರಣದಲ್ಲಿ ಮೋಹನ ಲಾಲ್ ಎಂಬ ಪಂಜಾಬಿನ ನಿವಾಸಿಯನ್ನು 2003ರಲ್ಲಿ ಅಮೃತಸರ್ನಿಂದ ಎತ್ತಿಕೊಂಡು ಬರಲಾಗಿತ್ತು. ಅಮಾನವೀಯ ಚಿತ್ರಹಿಂಸೆ ನೀಡಲಾಗಿ ಆತ ಕೊನೆಯುಸಿರೆಳೆದರು. ರಾಷ್ಟ್ರೀಯ ಮಾನವ ಹಕ್ಕು ಆಯೋಗ (National Human Rights Commission(NHRC)) ಮಧ್ಯಪ್ರವೇಶಿಸಿದಾಗ ಜಮ್ಮು ಕಾಶ್ಮೀರ ಸರ್ಕಾರ 370ನೇ ವಿಧಿಯ ಅಡಿಯಲ್ಲಿ ವಿನಾಯತಿ ಪಡೆಯಲು ಪ್ರಯತ್ನಿಸಿತು. NHRC ಯು ಜಮ್ಮು ಕಾಶ್ಮಿರ ಸರ್ಕಾರದ ವಾದವನ್ನು ತಳ್ಳಿಹಾಕಿತಾದರೂ, ಇದೊಂದ ಕಳವಳಕಾರಿ ಪ್ರಕರಣವ ಮತ್ತು 370ನೇ ವಿಧಿಯ ದುರ್ಬಳಕೆಯ ಇನ್ನೊಂದು ನಿದರ್ಶನ.

ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಶಾಸನ ಸಭೆಯ ಸದಸ್ಯನ ಮೇಲೆ ಕ್ರಮ ಜರುಗಿಸಲು ಅವಕಾಶ ಕೊಡುವ ಪಕ್ಷಾಂತರ ವಿರೋಧಿ ಕಾಯಿದೆಯನ್ನು ಕೂಡ ಜಮ್ಮು ಕಾಶ್ಮೀರದಲ್ಲಿ ತೀರ ದುರ್ಬಲಗೊಳಿಸಲಾಗಿದೆ. ರಾಜ್ಯದ ಕಾನೂನಿನಲ್ಲಿ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಶಾಸನ ಸಭಾಧ್ಯಕ್ಷರ ಬದಲಾಗಿ ಪಕ್ಷದ ನಾಯಕನಿಗೆ ನೀಡಲಾಗಿದೆ. ಮಾಧ್ಯಮಗಳಿಗೆ ಶಾಸನ ಸಭೆಯ ಆಗುಹೋಗು ವಿಚಾರಗಳನ್ನು ವರದಿ ಮಾಡಲು ವಿನಾಯತಿ ಮತ್ತು ರಕ್ಷಣೆ ನೀಡುವ ಸಂವಿಧಾನದ 361A  ವಿಧಿಯನ್ನು ಕೂಡ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಜಾರಿಗೆ ತರಲಾಗಿಲ್ಲ. ಶಿಕ್ಷಣ, ಉದ್ಯೋಗ ಇತ್ಯಾದಿ ವಿವಿಧ ಅವಕಾಶಗಳಲ್ಲಿ ಮಂತ್ರಿಗಳ ಕೋಟಾ ದೇಶದ ಇತರೇ ಭಾಗದಲ್ಲಿ 15% ಇದ್ದರೆ ಜಮ್ಮು ಕಾಶ್ಮೀರದಲ್ಲಿ 30% ಇದೆ. ಇಂತಹ ಕಾನೂನುಗಳ ಫಲಾನುಭವಿಗಳು ಕಳೆದ 65 ವರ್ಷಗಳಿಂದ ರಾಜ್ಯವನ್ನಾಳಿದ ಆಯ್ದ ಕೆಲವೇ ಕೆವಲರಲ್ಲದೇ ಇನ್ನು ಯಾರಾಗಲು ಸಾಧ್ಯ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments