ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 12, 2014

2

ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೨

‍ನಿಲುಮೆ ಮೂಲಕ

– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ

Social Science Column Logoನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೧

ನವ ಸಾಮಾಜಿಕ ಚಳುವಳಿ ಸಿದ್ಧಾಂತಗಳು:
1960 ಹಾಗೂ 70ರ ದಶಕದಲ್ಲಿ ಪ್ರಾರಂಭವಾದ ನವ ಸಾಮಾಜಿಕ ಚಳುವಳಿ ಸಿದ್ಧಾಂತಗಳು ಮಾರ್ಕ್ಸ್ ವಾದಿ ನಿಲುವುಗಳಿಗಿಂತ ಭಿನ್ನವಾದ ನಿಲುವನ್ನು ಮುಂದಿಡಲು ಯಶಸ್ವಿಯಾದವು. ವರ್ಗಾದಾರಿತವಲ್ಲದ ಅಸ್ಮಿತೆಯ ರಾಜಕೀಯ ಕೇವಲ ಸಾಂಕೇತಿಕ ಎನ್ನುವ ಮಾರ್ಕ್ಸ್ ವಾದಿ ನಿಲುವನ್ನು ಇವು ಅಲ್ಲಗಳೆಯುತ್ತವೆ. ಈ ಸಿದ್ಧಾಂತವು ಅಸ್ಮಿತೆ ರಾಜಕೀಯವನ್ನು ಒಂದು ವಿಶಿಷ್ಟ ಬಗೆಯ ರಾಜಕೀಯ ಎಂದೇ ಪ್ರತಿಪಾದಿಸುತ್ತದೆ. ಅಸ್ಮಿತೆಯಾದಾರಿತ ಚಳುವಳಿಗಳನ್ನು ಆಧುನಿಕತೆಯ ಪರಿಣಾಮವಾಗಿ ಆರ್ಥಿಕ ಮತ್ತು ಸಾಮಾಜಿಕ ವಲಯದ ಉನ್ನತ ಸ್ಥರದಲ್ಲಿ ಆದ ರಾಚನಿಕ ಬದಲಾವಣೆ ಅಸ್ಮಿತೆ ರಾಜಕೀಯವನ್ನು ಹುಟ್ಟು ಹಾಕಿದೆ ಮತ್ತು ಇದೊಂದು ಐತಿಹಾಸಿಕವಾದ ಸಾಮೂಹಿಕ ಪ್ರತಿಕ್ರಿಯೆ ಎಂದು ಈ ಸಿದ್ಧಾಂತದ ಪ್ರತಿಪಾದನೆಯಾಗಿದೆ. ಕೆಲವು ವಿದ್ವಾಂಸರು ಹೇಳುವಂತೆ ಅಸ್ಮಿತೆ ರಾಜಕೀಯವು ಕೈಗಾರಿಕೋತ್ತರ ಸಮಾಜದಲ್ಲಾಗುತ್ತಿರುವ ಒಂದು ಬಗೆಯ ಸ್ಥಿತ್ಯಂತರ (ಟೌರಿನ್ 1981).  ಹಬರ್ಮಾಸ್ರವರ ಅಭಿಪ್ರಾಯದಲ್ಲಿ ಅಸ್ಮಿತೆ ಚಳುವಳಿಗಳು ಪ್ರಭುತ್ವದ ನಿಯಂತ್ರಣ ಹಾಗೂ ಅದರ ನಿರ್ಣಯಗಳ ಒತ್ತಡಕ್ಕೆ ಹೆಚ್ಚು ಹೆಚ್ಚಾಗಿ ಒಳಗಾಗುತ್ತಿರುವ ಸಮುದಾಯಗಳು ಅಂತಹ ಹಿಡಿತದಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ಫಲವಾಗಿವೆ (ಹಬರ್ಮಾಸ್ 1985).

ಆಧುನಿಕೋತ್ತರ, ರಾಚನಿಕೋತ್ತರವಾದದ ದೃಷ್ಟಿಕೋನ :
ಈ ದೃಷ್ಟಿಕೋನದ ಪ್ರಕಾರ ಅಸ್ಮಿತೆ ರಾಜಕೀಯವು ಭಿನ್ನತೆಗಳನ್ನು ಪುನರ್ ವ್ಯಾಖ್ಯಾನಿಸುವ ಉದ್ದೇಶವನ್ನು ಹೊಂದಿರುತ್ತಾವಾದರೂ ಹಾಗೆ ಪುನರ್ ವ್ಯಾಖ್ಯಾನಿಸುವ ಬದಲು ಅಂತಹ ಭಿನ್ನತೆಗಳನ್ನು ವಾಸ್ತವದಲ್ಲಿ ಮತ್ತಷ್ಟು ಗಟ್ಟಿ ಮಾಡುತ್ತವೆ. ಅಷ್ಟೇ ಅಲ್ಲ ಯಾವ ಅಸಮಾನತೆಯ ಆದಾರದ ಮೇಲೆ ಅವು ಅಸ್ತಿತ್ವಕ್ಕೆ ಬಂದಿವೆಯೋ ಅಂತಹ ಅಸಮಾನತೆಯನ್ನು  ಮುಂದುವರೆಯುವಂತೆ ಮಾಡುತ್ತವೆ. ಅಸ್ಮಿತೆ ರಾಜಕೀಯ ಒಂದು ಬಗೆಯ ಸಂಕುಚಿತವಾದ ಪ್ರಭುತ್ವ-ಕೇಂದ್ರಿತ ಕ್ರಿಯಾಶೀಲತೆ, ಹಾಗಾಗಿ ಅದು ಅಧಿಕರದ ಸಾಂಸ್ಕೃತಿಕ ತಳಹದಿಯನ್ನು ಅರ್ಥಮಾಡಿಕೊಳ್ಳಲು ವಿಫಲವಾಗುತ್ತದೆ (ವ್ಯೆಡ್ 1995).

ಸಮಗ್ರ ದೃಷ್ಟಿಕೋನ :
ಸಮಗ್ರ ದೃಷ್ಟಿಕೋನವು ಈ ಮೇಲಿನ ಎಲ್ಲ ವಾದಗಳನ್ನು ನಿರಾಕರಿಸುತ್ತದೆ. ಈ ದೃಷ್ಟಿಕೋನದ ಪ್ರಕಾರ ಎಲ್ಲ ಸಾಮಾಜಿಕ ಚಳುವಳಿಗಳಲ್ಲೂ ಅಸ್ಮಿತೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಅಸ್ಮಿತೆ ರಾಜಕೀಯ ಎನ್ನುವುದನ್ನು ಪ್ರತ್ಯೇಕವಾಗಿ ನೋಡಲು ಪ್ರಯತ್ನಿಸದೆ ಸಾಮಾಜಿಕ ಚಳುವಳಿಗಳಲ್ಲಿ ಅಸ್ಮಿತೆ ವಹಿಸುವ ಪಾತ್ರದ ಸ್ವರೂಪದ ಕಡೆಗೆ ನಾವು ಹೆಚ್ಚು ಗಮನ ಕೊಡಬೇಕಾಗುತ್ತದೆ. ಲೇಖನದ ಮುಂದಿನ ಭಾಗದಲ್ಲಿ ಅಸ್ಮಿತೆ ರಾಜಕೀಯದ ಚೌಕಟ್ಟಿನಲ್ಲಿ ಜಾತಿ ಸಂಘಟನೆಗಳನ್ನು ಗ್ರಹಿಸುವಲ್ಲಿ ಇರುವ ಸಮಸ್ಯೆಯನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.

ಅಸ್ಮಿತೆ ರಾಜಕೀಯ ಹಾಗೂ ಜಾತಿ ಸಂಘಟನೆಗಳು :
ಮೇಲಿನ ಈ ಎಲ್ಲ ವಾದಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಜಾತಿ ಸಂಘಟನೆಗಳ ರಾಜಕೀಯ ಭಾಗವಹಿಸುವಿಕೆಗೂ ಅಸ್ಮಿತೆ ರಾಜಕೀಯಕ್ಕೂ ನಡುವೆ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಎರಡನೇ ಭಾಗದಲ್ಲಿ ಮಾಡಲಾಗಿದೆ. ರಾಜಕೀಯ ವಲಯದಲ್ಲಿ ಕಂಡುಬರುವ ಜಾತಿ ಸಂಘಟನೆಗಳು ಸಾಂಸ್ಕೃತಿಕ ನೆಲೆಯಿಂದ ಹುಟ್ಟಿಕೊಂಡಿವೆ ಎಂದೇ ಭಾವಿಸಲಾಗಿದೆ. ಈ ವಿಶ್ಲೇಷಣೆ ಎಷ್ಟರ ಮಟ್ಟಿಗೆ ಸರಿ ಎಂದು ನೋಡಬೇಕಾದ ಅಗತ್ಯವಿದೆ. ಏಕೆಂದರೆ ಒಂದು ವೇಳೆ ಅಂತಹ ಸಾರ್ವಜನಿಕವಾಗಿ ಮಾನ್ಯವಾಗಿರುವ ಅಭಿಪ್ರಾಯ ತಪ್ಪು ಎಂದಾದರೆ ಜಾತಿ ಆದಾರಿತ ಚಳುವಳಿಗಳ ಘೊಷಿತ ಉದ್ದೇಶಗಳಿಗೂ ವಾಸ್ತವದ ಪರಿಣಾಮಗಳಿಗೂ ವ್ಯತ್ಯಾಸ ಕಾಣಲೇಬೇಕು. ಹಾಗೊಂದು ವೇಳೆ ವ್ಯತ್ಯಾಸವಿದೆ ಎಂದಾದರೆ ರಾಜಕೀಯದಲ್ಲಿ ಜಾತಿ ವಹಿಸುತ್ತಿರುವ ಪಾತ್ರವನ್ನು ಆಮೂಲಾಗ್ರವಾಗಿ ಪುನರ್ ಪರಿಶೀಲಿಸಬೇಕಾಗುತ್ತದೆ.

ಭಾರತದ ರಾಜಕೀಯ ವಲಯದಲ್ಲಿ ಜಾತಿಗಳ ಸಂಘಟನೆಗಳನ್ನು ಅಸ್ಮಿತೆ ರಾಜಕೀಯದ ಪರಿಕಲ್ಪನೆಯಡಿಯಲ್ಲಿ ಗುರುತಿಸುವುದು ಅಸಾಧ್ಯವಾದ ಸಂಗತಿಯೇ ಸರಿ. ಜಾತಿಗಳ ಜಾತಿ ಹಾಗೂ ಉಪಜಾತಿಗಳ ಸ್ವರೂಪದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅದಕ್ಕಿಂತಲೂ ಮಿಗಿಲಾಗಿ ಜಾತಿಗಳ ರಾಜಕೀಯ ಸಂಘಟನೆಗೂ ಸಮಾಜದಲ್ಲಿ ಅವು ಗುರುತಿಸಿಕೊಳ್ಳುವ ರೀತಿಗೂ ಯಾವುದೇ ಸಾಮ್ಯತೆ ಕಂಡುಬರುವುದಿಲ್ಲ.  ವಸಾಹತು ಕಾಲದ ಜನಾಂಗ ಅಧ್ಯಯನಕಾರರು ಭಾರತೀಯ ಸಮಾಜದ ವೈವಿಧ್ಯಮಯ ಜನಗುಂಪುಗಳನ್ನು ‘ಜಾತಿ’, ‘ಉಪ-ಜಾತಿ’, ಮತ್ತು ‘ಉಪ-ಉಪ-ಜಾತಿ’, ‘ಬುಡಕಟ್ಟು’, ‘ಮತ’, ‘ಪಂಥ’, ‘ಬಹಿಷ್ಕೃತ ಜಾತಿ’ ಎಂಬುದಾಗಿ ವರ್ಗೀಕರಣ ಮಾಡಿದರು. ಸಾಮಾಜಿಕ ವರ್ಗೀಕರಣದ ಬಗ್ಗೆ ಅಧ್ಯಯನಕಾರರು ಅನೇಕ ವಿವರಣೆಗಳನ್ನು ನೀಡಿದರು ಕೂಡ ಒಬ್ಬರ ವಿವರಣೆ ಇದ್ದಂತೆ ಇನ್ನೊಬ್ಬರ ವಿವರಣೆ ಇಲ್ಲ. ಅವರಲ್ಲಿಯೇ ಪರಸ್ಪರ ಭಿನ್ನಾಭಿಪ್ರಾಯಗಳಿದ್ದು ಈ ಕುರಿತು ತೀಕ್ಷ್ಣವಾದ ವಾದ-ವಿವಾದಗಳಿಗೆ ಎಡೆಮಾಡಿಕೊಟ್ಟಿವೆ.

ವಸಾಹತು ಕಾಲದ (ಜಾತಿ ಜನಗಣತಿ) ವರ್ಗೀಕರಣವನ್ನೇ ಆಧರಿಸಿ ಪ್ರಸ್ತುತ ಭಾರತೀಯ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದೆ ಮತ್ತು ರೂಪಿಸುತ್ತಿದೆ. ಶಾಲಾ ದಾಖಲಾತಿಗಳಲ್ಲಿ ಮತ್ತು ಇತರೆ ಸರ್ಕಾರಿ ದಾಖಲಾತಿಗಳಲ್ಲಿ ನಮೂದಿಸುವಾಗ ಜಾತಿ, ಉಪ-ಜಾತಿ ಬರಹದಡಿಯೇ ನಮೂದಿಸುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದರ ಜೊತೆಗೆ ಜಾತಿ ಸಂಘಟನೆಗಳು ನಾ ಮುಂದು ತಾ ಮುಂದು ಎಂದು ಜಾತಿ, ಉಪ-ಜಾತಿಗಳ ಸಂಘಗಳನ್ನು ಕಟ್ಟುವುದರಲ್ಲಿಯೇ ಮಗ್ನವಾಗಿವೆ. ಇದೆಲ್ಲ ಒಂದೆಡೆ ನಡೆಯುತ್ತಿದ್ದರೆ, ಅದೇ ಇನ್ನೊಂದೆಡೆ ಜನರ ‘ತಿಳುವಳಿಕೆ’ಯಲ್ಲಿ ‘ಜಾತಿ’ ಮತ್ತು ‘ಉಪ-ಜಾತಿ’ ಪರಿಕಲ್ಪನೆಗಳು ಸ್ಥಾನವನ್ನು ಪಡೆದಿಲ್ಲ್ಲ್ಲ. ಬದಲಿಗೆ ಜನರು ತಮ್ಮನ್ನು ತಾವು ಕುಲ ಎಂದೋ, ಒಕ್ಕಲು ಎಂದೋ ಅಥವಾ ಪಂಗಡ ಎಂದೋ ಗುರುತಿಸಿಕೊಳ್ಳುತ್ತಾರೆ. ಅದರ ಮೂಲಕ ತಮ್ಮ ಗುಂಪನ್ನು ವಿವರಿಸಿಕೊಳ್ಳುತ್ತಾರೆ. ಒಂದು ಪಕ್ಷ ಜಾತಿ ವರ್ಗೀಕರಣವು ಅಸ್ತಿತ್ವದಲ್ಲಿರುವುದೇ ಆಗಿದ್ದರೆ ಆಗ ಜನರು ಯಾವುದೇ ಅಡೆತಡೆಯಿಲ್ಲದೆ/ಗೊಂದಲವಿಲ್ಲದೇ ಜಾತಿ ವರ್ಗೀಕರಣದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕಾಗಿತ್ತು. ಆದರೆ ಏಕೆ ಗುರುತಿಸಿಕೊಳ್ಳುತ್ತಿಲ್ಲ? ಸರ್ಕಾರ ಹೇಳುವುದೆ ಒಂದು ರೀತಿಯಾಗಿದ್ದು ಜನರ ತಿಳುವಳಿಕೆಯು ಇನ್ನೊಂದು ರೀತಿಯಾಗಿದ್ದರೆ ವಾಸ್ತವ ಮತ್ತು ಸರ್ಕಾರಿ (ಸೈದ್ಧಾಂತಿಕ)ವಲಯದ ಮಧ್ಯೆ ಅಂತರವಿದೆಯಂದಾಯಿತು. ಅಂತರವಿದೆಯೆಂದಾದರೆ   ಜಾತಿ ವರ್ಗೀಕರಣವು ಅಸ್ಪಷ್ಟತೆಗಳಿಂದ ಕೂಡಿದೆ ಮತ್ತು ವೈಜ್ಞಾನಿಕ ಸಿದ್ಧಾಂತವನ್ನು ಹೊಂದಿಲ್ಲ ಎನ್ನುವುದು ಇದರಿಂದ ಕಂಡುಬರುತ್ತದೆ.

(ಮುಂದುವರೆಯುವುದು…)

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments