ನಿಶ್ಯಬ್ದ …!
– ರಾಘವೇಂದ್ರ ಎಂ. ಸುಬ್ರಹ್ಮಣ್ಯ
ಕಲಾಸಿಪಾಳ್ಯ/ಕೆ.ಆರ್ ಮಾರ್ಕೆಟ್ ಕಡೆ ಹೋದವರಿಗೆ ಗೌಜು ಗದ್ದಲದ ನಿಜಾರ್ಥ ತಿಳಿದಿರುತ್ತೆ. ಹಾಗೆಯೇ ಕೊಡಚಾದ್ರಿ/ಕುಮಾರಪರ್ವತ ಚಾರಣಮಾಡಿದವರಿಗೆ ನಿಶ್ಯಬ್ದದ ಅನುಭವ ಆಗಿರುತ್ತೆ. ಈಗ ಪ್ರಶ್ನೆ ಏನಂದರೇ ಶಬ್ದಕ್ಕೆ ಮತ್ತಷ್ಟು ಶಬ್ದ ಸೇರಿಸಿ ಮತ್ತಷ್ಟು ಹೆಚ್ಚು ಶಬ್ದ ಮಾಡಬಹುದು. ಆದರೆ ನಿಶ್ಯಬ್ದವನ್ನು ಮತ್ತಷ್ಟು ಕಡಿಮೆ ಮಾಡಲು ಸಾಧ್ಯವೇ?
ಬೆಂಗಳೂರಿನ ನಾಲ್ಕು ರಸ್ತೆಗಳು ಸೇರುವಲ್ಲಿ ಗಣಪತಿ ಪೆಂಡಾಲ್ ಹಾಕಿ, ಸಂಜೆ ಕರ್ಣಭಯಂಕರ ಚಿತ್ರಗೀತೆಗಳನ್ನು ಹಾಕಿ, ಅದರ ಮೇಲೆ ಪಟಾಕಿ ಹೊಡೆದು, ಬೆಳಕಿಗಾಗಿ ಜನರೇಟರ್ ಇಟ್ಟು….ಹೇಗೆ ಶಬ್ದಕ್ಕೆ ಶಬ್ದಗಳನ್ನು ಸೇರಿಸುತ್ತಲೇ ಹೋಗಬಹುದು….ಶಬ್ದಮಾಲಿನ್ಯವನ್ನು ತಾರಕಕ್ಕೆ ತೆಗೆದುಕೊಂಡು ಹೋಗಬಹುದು. ಆದರೆ ಅದೇ ತರಹ ಅದರ ವಿರುದ್ದದೆಡೆಗೆ ಹೋಗುತ್ತಾ ಹೋದರೆ, ಅಂದರೆ ಗಣಪತಿ ಹಬ್ಬದ ಕೊನೆಯದಿನದ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ ರಾತ್ರಿ 2:35ಕ್ಕೆ ಪೂರ್ತಿ ನಿಶ್ಯಬ್ದವನ್ನು ನೋಡಬಹುದು. ಆದರೆ ಅದು ಪೂರ್ತಿ ನಿಶ್ಯಬ್ದವಲ್ಲವಷ್ಟೇ? ಎಲ್ಲೋ ಒಂದು ನಾಯಿ ಓಳಿಡುತ್ತಿರುತ್ತದೆ. ಆ ನಾಯಿಯನ್ನು ಓಡಿಸಿದರೆ….ಇನ್ನಷ್ಟೂ ನಿಶ್ಯಬ್ದ. ಆದರೆ ಇನ್ನೆಲ್ಲೋ ಒಂದು ಜೀರುಂಡೆ ಕಿರ್ರೆನ್ನುತ್ತಿರುತ್ತದೆ. ಆ ಶಬ್ಧವನ್ನೂ ಇಲ್ಲವಾಗಿಸಿದರೆ…..ಹೀಗೆ ನಾವು ಎಷ್ಟರಮಟ್ಟಿಗಿನ ನಿಶ್ಯಬ್ದವನ್ನು ಸಾಧಿಸಬಹುದು!? ಶಬ್ದ ಪರಿವಹನಕ್ಕೆ ಯಾವುದೇ ಮಾಧ್ಯಮವಿಲ್ಲ ಬಾಹ್ಯಾಕಾಶ ಹೇಗಿರಬಹುದು? ಎಷ್ಟು ನಿಶ್ಯಬ್ದವಾಗಿರಬಹುದು!?
ಮಿನ್ನೆಸೋಟಾದಲ್ಲಿರುವ ಒಂದು ಸಣ್ಣ ಕೋಣೆಯೊಂದನ್ನು ‘ಜಗತ್ತಿನ ಅತ್ಯಂತ ನಿಶ್ಯಬ್ದ ಪ್ರದೇಶ’ವೆಂದು ಘೋಷಿಸಲಾಗಿದೆ. ಈ ಕೋಣೆ ಹೊರಜಗತ್ತಿನ ಎಲ್ಲಾ ಶಬ್ದಗಳನ್ನು ಒಳಬರದಂತೆ ತಡೆಯುವುದೇ ಅಲ್ಲದೆ, ಇದರೊಳಗೆ ನಿರ್ಮಿತವಾದ ಎಲ್ಲಾ ಶಬ್ದಗಳನ್ನು ಕೂಡಾ ‘ಇಲ್ಲ’ವಾಗಿಸುತ್ತದೆ. ಇದರ ಗೋಡೆಗಳಲ್ಲಿ ಅಳವಡಿಸಿರುವ ವಿಶಿಷ್ಟ ‘ಅಪ್ರತಿಪಲನ ಪಲಕ’ಗಳು (non-reflective panels), ಶಬ್ದವನ್ನು ಪ್ರತಿಪಲಿಸದೇ ಅಥವಾ ಪ್ರತಿಧ್ವನಿಸದೇ ತಮ್ಮಲ್ಲೇ ಸಮ್ಮಿಳಿತಗೊಳಿಸುತ್ತವೆ. ಈ ಕೋಣೆಯ ಶಬ್ದಮಾಪನ -9.4 ಡೆಸಿಬೆಲ್ (ಸಾಮಾನ್ಯ ಮನುಷ್ಯನ ಕಿವಿ 0 ಡೆಸಿಬಲ್ ಇಂದ ಮೇಲಿನ ಎಲ್ಲಾ ಶಬ್ದಗಳನ್ನು ಕೇಳಬಲ್ಲದು).
ಆದರೆ ಇದಲ್ಲ ಅಚ್ಚರಿಯ ವಿಷಯ. ಆಶ್ಚರ್ಯವೇನೆಂದರೆ ಈ ಕೋಣೆಯಲ್ಲಿ ಇದುವರಿಗೂ ಒಬ್ಬ ವ್ಯಕ್ತಿ ಕಳೆಯಲು ಸಾಧ್ಯವಾದದ್ದು ಹೆಚ್ಚೆಂದರೆ ಬರೀ 43 ನಿಮಿಷವಷ್ಟೇ. ಅದೂ ಸಹ ಆತ ಹೊರಬಂದಾಗ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. 30 ನಿಮಿಷಕ್ಕಿಂತಾ ಹೆಚ್ಚು ಸಮಯ ಒಳಗಿದ್ದರೆ ನಿಮಗೆ ಹೊರಬರಲು ಗಾಲಿಕುರ್ಚಿಯೇ ಬೇಕು ಎಂದು ಈ ಕೊಣೆಯಲ್ಲಿ ಶಬ್ದ ಹಾಗೂ ರೇಡಿಯೋ ತರಂಗಗಳ ಅಧ್ಯಯನ ನಡೆಸುವ ಕಂಪನಿ ‘ಆರ್ಫೀಲ್ಡ್ ಲ್ಯಾಬ್ಸ್’ ಹೇಳುತ್ತದೆ.
ಇದರ ಒಳಗೆ ಹೋದಾಗ ನಿಮ್ಮ ಹಿಂದೆ ಬಾಗಿಲು ಹಾಕಿದ ಶಬ್ದವೂ ನಿಮಗೆ ಗೊತ್ತಾಗುವುದಿಲ್ಲ. ಬಾಗಿಲು ಹಾಕಿದೊಡನೆಯೇ ಹೊರಗಿನ ಶಬ್ದಗಳೆಲ್ಲಾ ಇದ್ದಕಿದ್ದಂತೇ ನಿಂತು ಹೋಗುವುದರಿಂದಷ್ಟೇ ಬಾಗಿಲು ಹಾಕಿದ್ದಾರೆಂದು ನಿಮಗೆ ತಿಳಿಯುವುದು. ರಪ್ಪೆಂದು ಮುಖಕ್ಕೆ ರಾಚುವ ನಿಶ್ಯಬ್ದ ಮೊದಲ ನಿಮಿಷ ಮುದ ನೀಡುತ್ತದೆ, ಎರಡನೇ ನಿಮಿಷದ ನಂತರ ನಿಮಗೆ ನಿಮ್ಮದೇ ಹೃದಯದ ಬಡಿತ, ನಿಮ್ಮದೇ ಶ್ವಾಸಕೋಶಗಳು ಹಿಗ್ಗುವ/ಕುಗ್ಗುವ ಸದ್ದು ಕೇಳುತ್ತವೆ (ನೀವು ಸ್ಕೂಬಾ ಡೈವಿಂಗ್ ಮಾಡಿದ್ದೀರಾದಲ್ಲಿ ನಿಮಗೆ ಈ ಅನುಭವ ಸ್ವಲ್ಪ ಆಗಿರುತ್ತದೆ). ಬೆಳಗ್ಗಿನ ತಿಂಡಿ ತಿಂದದ್ದು ಕಡಿಮೆಯಾಗಿದ್ದರೆ ನಿಮ್ಮ ಹೊಟ್ಟೆ ಗೊರಗೊರವೆಂದದ್ದು ನಿಮಗೇ ಬಹಳ ಜೋರಾಗಿ ಕೇಳುತ್ತದೆ, ವಿಚಿತ್ರವೆನ್ನಿಸುತ್ತದೆ. ಐದನೇ ನಿಮಿಷದ ನಂತರ ನಿಮಗೆ ಇಲ್ಲದೇ ಇರುವ ಶಬ್ದಗಳೆಲ್ಲಾ ಕೇಳಲು ಪ್ರಾರಂಭವಾಗುತ್ತದೆ. ಅಂದಿನವರೆಗೂ ನೀವು ಕೇಳಿದ, ನಿಮ್ಮ ಮೆದುಳಿನ ಮೂಲೆಯಲ್ಲೆಲ್ಲೋ ನಿಮಗೇ ಗೊತ್ತಿಲ್ಲದಂತೆ ಕದ್ದು ಕೂತಿರುವ ಶಬ್ದಗಳೆಲ್ಲಾ ನಿಮ್ಮನ್ನು ಕಾಡಲು ಪ್ರಾರಂಭಿಸುತ್ತವೆ. ಇದು ಮುಂದುವರೆದಂತೆಲ್ಲಾ ನಿಮ್ಮ ಮಾನಸಿಕ ಸ್ಥಿಮಿತ ಹದೆಗೆಡಲಾರಂಭಿಸುತ್ತದೆ. ನಿಮ್ಮೊಳಗಿನ ಪಿಸುಮಾತುಗಳು ನಿಮ್ಮನ್ನು ಕೊಲ್ಲಲಾರಂಭಿಸುತ್ತವೆ. ನಿಮ್ಮ ತಲೆಯಲ್ಲಿ ಯಾರ್ಯಾರೋ ಮಾತನಾಡಿದಂತಾಗಿ ನೀವು ನಿಮ್ಮ ತಲೆಕೂದಲುಗಳನ್ನು ಹಿಡಿದುಕೂರುತ್ತೀರಿ. ಅವನ್ನು ಮುಷ್ಟಿಕಟ್ಟಿ ಎಳೆಯಲಾರಂಭಿಸುತ್ತೀರಿ.ನಿಮ್ಮೊಳಗಿನ ‘ನೀವು’, ಹೊರಗಿನ ‘ನಿಮ್ಮನ್ನು’ ಇಂಚಿಂಚಾಗಿ ಹಿಂಡಿ ಕೊಲ್ಲಲು ಪ್ರಾರಂಭಿಸುತ್ತದೆ. ನೀವು ಜೋರಾಗಿ ಕೂಗುತ್ತೀರಿ….ಕೂಗುತ್ತಲೇ ಹೋಗುತ್ತೀರಿ….ಜೋರಾಗಿ ಕೂಗಿದಷ್ಟೂ ಅದು ನಿಮ್ಮ ಕಿವಿಯನ್ನು ಕಾದಸೀಸದಂತೆ ಸುಡುತ್ತದೆ. ಆದ್ದರಿಂದ ಕೂಗುವುದನ್ನು ನಿಲ್ಲಿಸುತ್ತೀರಿ….ಮತ್ತೆ ಅದೇ ತೆಲೆಯೊಳಗಿನ ಸದ್ದುಗಳು ತಮ್ಮ ಆಟವನ್ನು ಆರಂಭಿಸುತ್ತವೆ. ಈಗ ನೀವು ಕೂಗಲೂ ಹೆದರುತ್ತೀರಿ…….ಕೋಣೆಯಲ್ಲಿ ಯಾವುದೇ ಗಾಜಿನ ಗೋಡೆಗಳಿಲ್ಲವಾದ್ದರಿಂದ ನಿಮಗೆ ಹೊರಜಗತ್ತಿನ ಯಾವುದೇ ಅನುಭೂತಿಗಳಾಗುವುದಿಲ್ಲ. ಸಮಯ ನಿಂತಂತೆ, ಜಗತ್ತೇ ಇಲ್ಲವಾದಂತೆ ಅನುಭವ ಶುರುವಾಗುತ್ತದೆ. ಎಲ್ಲೋ ಅನಂತದಲ್ಲಿ ಆಕಾಶಗಂಗೆಯ ನಾಲ್ಕನೇ ಬಾಹುವಿನ ಮೂಲೆಯಲ್ಲಿ ಕುರ್ಚಿಹಾಕಿಕೊಂಡು ಒಬ್ಬಂಟಿಯಾಗಿ ಕೂತ ಅನುಭೂತಿ ನಿಮಗೆ ನಿಧಾನವಾಗಿ ನೀವೇ ಇಲ್ಲವೇನೋ, ನೀವು ಇನ್ಯಾರೋ ಎನ್ನುವ ಗೊಂದಲ ನಿಮ್ಮೊಳಗೆ ತುಂಬುತ್ತದೆ. ಎಲ್ಲ ಶಬ್ದಗಳನ್ನು ಕೊಂದು ನೀವೇ ಶಬ್ದವಾಗುವ ಅಸೀಮಿತ ಆನಂದ(!?) ನಿಮ್ಮದಾಗುತ್ತದೆ.
ನಿಮ್ಮೊಳಗಿನ ಶಬ್ದ ನಿಶ್ಯಬ್ದಗಳೇ ನಿಮ್ಮನ್ನು ಕೊಲ್ಲುವ ಈ ರೀತಿಯ ಕೋಣೆಗಳಿಗೆ ‘ಅಪ್ರತಿದ್ವನಿತ ಕೋಣೆಗಳು’ (Anechoic Chambers) ಎನ್ನುತ್ತಾರೆ. ಶಬ್ದ, ತರಂಗಗಳ ಅಧ್ಯಯನಕ್ಕೆಂದು ಬಳಸುವ ಈ ಕೋಣೆಗಳು ನಮ್ಮನ್ನು ನಮಗೇ ಗೊತ್ತಿಲ್ಲದ ನಮ್ಮದೇ ಇನ್ನೊಂದು ಮಗ್ಗುಲಿಗೆ ಎಳೆದೊಯ್ದು ಹಿಂಡಿ ಹಿಪ್ಪೆ ಮಾಡಿ ನಿಶ್ಯಬ್ದವೆನ್ನುವುದು ಮನುಷ್ಯನಿಗೆ ಅದೆಷ್ಟು ಅಸಹನೀಯ ಎಂಬುದನ್ನು ತೋರಿಸಿಕೊಡುತ್ತವೆ.
ನಾನೂ ಒಮ್ಮೆ ಕೂರಬೇಕು ಇಂಥಹ ಕೋಣೆಯೊಂದರಲ್ಲಿ…
ಹೆಚ್ಚಿನ ಮಾಹಿತಿ ಬೇಕಾದಲ್ಲಿ ‘Anechoic Chambers’ ಅಥವಾ ‘Quietest place on earth’ ಎಂದು ಗೂಗಲ್ಲಿನಲ್ಲಿ ಕೀಲಿಸಿ
ಚಿತ್ರ ಕೃಪೆ :medium.com
http://acousticengineering.wordpress.com/2013/07/22/does-an-anechoic-chamber-cause-hallucinations/ please check this link for further info
ಉತ್ತಮ ಲೇಖನ..ಧನ್ಯವಾದಗಳು. ಈ ಅನುಭವದ ಮುಂದೆ.ಬಹುಶ: .’ನಿನ್ನ ಮೌನ ನನ್ನನ್ನು ಕೊಲ್ಲುತ್ತಿದೆ’ ವಾಕ್ಯ ನಗಣ್ಯವಾಗಬಹುದು! 🙂
ಅಂದ ಹಾಗೆ.. ನಮ್ಮ ಮೌನ ಮೋಹನ ಸಿಂಗರು ಸೃಷ್ಟಿಸುವ ಮೌನ ಎಷ್ಟು ಡೆಸಿಬಲ್ ಗಳದ್ದಿರಬಹುದು?
ಅಲ್ಪಸಂಖ್ಯಾತರ ಆಕ್ರಂದನ, ದಲಿತರ ಹಾಹಾಕಾರ, ಉಳ್ಳವರ ಬ್ಯಾಂಡ್ ಬಾಜು, ಮೋದಿಯ ಅಬ್ಬರದ ಪ್ರಚಾರದ ಗದ್ದಲ..
ನಡುವಲ್ಲಿ ಸುಳ್ಳು ಬಿತ್ತಿ, ಕಂದಕ ಅಗಲ ಮಾಡಿ ಅನ್ನ ಸಂಪಾದಿಸುವ ಎಡ ಗಂಜಿ ಗಿರಾಕಿಗಳು ಮಾಡುವ ಸಾಮಾಜಿಕ ಮಾಲಿನ್ಯ!. ಅಂದ ಹಾಗೆ, ಸಾಹೇಬರೆ ನಿಮಗ್ಯಾವ ಅಕಾಡೆಮಿಯಲ್ಲಿ ಸದಸ್ಯ ಪಟ್ಟ ಸಿಗಲಿಲ್ಲವೆ? ಸರಕಾರ ನಿನ್ನೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ, ನಿಮ್ಮ ಗುಂಪಿನ ಸಾಕಷ್ಟು ಎಡಬಿಡಂಗಿಗಳಿಗೆ ಗಂಜಿ ವ್ಯವಸ್ಥೆಯಾಗಿದೆ..ಮಾಡಿದ ‘ಸಾಮಾಜಿಕ ಹೋರಾಟ’ ಕ್ಕೆ ಫಲ ಸಿಕ್ಕಿದೆ :).