ಮಹಾತ್ಮಾ ಗಾಂಧಿಯವರ ಆಸೆಯನ್ನು ನೆರವೇರಿಸಲಿರುವ ಸೋನಿಯಾ!
– ನರೇಂದ್ರ ಕುಮಾರ್
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ, ಕಾಂಗ್ರೆಸ್ಸಿನ ನಾಯಕರ ಮುಂದೆ ಮಹಾತ್ಮಾ ಗಾಂಧಿಯವರು ತಮ್ಮ ಆಸೆಯೊಂದನ್ನು ಹೇಳಿದರು. ಅದೆಂದರೆ, “ಭಾರತಕ್ಕೆ ಸ್ವಾತಂತ್ರ್ಯ ಪಡೆಯುವುದು ಕಾಂಗ್ರೆಸ್ಸಿನ ಉದ್ದೇಶವಾಗಿತ್ತು. ಈಗ ಅದು ನೆರವೇರಿದೆ. ಹೀಗಾಗಿ, ಇನ್ಮುಂದೆ ಕಾಂಗ್ರೆಸ್ಸಿನ ಆವಶ್ಯಕತೆಯಿರುವುದಿಲ್ಲ. ಈಗ ಕಾಂಗ್ರೆಸ್ಸನ್ನು ವಿಸರ್ಜಿಸಿಬಿಡೋಣ. ನಿಮಗೆ ಅಗತ್ಯವೆನಿಸಿದರೆ ಹೊಸದೊಂದು ರಾಜಕೀಯ ಪಕ್ಷವನ್ನು ಕಟ್ಟಿಕೊಳ್ಳಿ”. ಇದಕ್ಕೆ ಸರ್ದಾರ್ ಪಟೇಲರ ಸಮ್ಮತಿಯೂ ಇತ್ತು. ಆದರೆ, ಸ್ವತಂತ್ರ ಭಾರತದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದ ಪಂಡಿತ್ ನೆಹರೂ ಅವರು ಇದಕ್ಕೆ ಒಪ್ಪಲಿಲ್ಲ. ಇಷ್ಟು ವರ್ಷಗಳ ಕಾಲ ಕಷ್ಟಪಟ್ಟ ನಂತರ, ಅದರ ಫಲವನ್ನು ಉಣ್ಣುವುದರಲ್ಲಿ ತಪ್ಪೇನಿದೆ ಎನ್ನುವುದು ಅವರ ವಾದವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರಿಂದ ಬಂದಿದ್ದ ಪ್ರಸಿದ್ಧಿಯನ್ನು ಅಧಿಕಾರದ ಖುರ್ಚಿಗೆ ಏರುವುದಕ್ಕೆ ಉಪಯೋಗಿಸಿಕೊಳ್ಳುವುದೇ ಸರಿ ಎಂದು ಅವರು ಹೇಳಿದರು. ಇದಾದ ಸ್ವಲ್ಪ ದಿನದಲ್ಲೇ ಗಾಂಧೀಜಿಯವರ ಕೊಲೆಯೂ ಆಗಿಹೋಯಿತು. ಗಾಂಧೀಜಿಯವರ ಆಸೆ ಹಾಗೆಯೇ ಉಳಿದು ಬಿಟ್ಟಿತ್ತು!
1947ರಲ್ಲಿ “ಸಂವಿಧಾನ ಸಭೆ” (Constituent Assembly) ಅಸ್ತಿತ್ವಕ್ಕೆ ಬಂದಿತು. ನೆಹರೂ ಪ್ರಧಾನಿಯಾದರು. ವಿವಿಧ ಪಕ್ಷಗಳಿಗೆ ಸೇರಿದವರಿಗೂ ಸರಕಾರದಲ್ಲಿ ಅವಕಾಶ ನೀಡಿದರು. ಆ ನಂತರ, ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಡಾ||ಅಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತದ ಸಂವಿಧಾನ ರಚನೆಯಾಯಿತು. 1951ರಲ್ಲಿ ಮೊದಲ ಚುನಾವಣೆಯಾಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 364 ಸ್ಥಾನಗಳು ಲಭಿಸಿದವು. ಮತ್ತಾವ ಪಕ್ಷವೂ ಮೂರಂಕಿ ಮುಟ್ಟಲಿಲ್ಲ. 1957ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸ್ಥಾನಗಳು 371 ಆದವು. ಈ ಬಾರಿಯೂ ಮತ್ತಾವ ಪಕ್ಷವೂ ಮೂರಂಕಿ ಮುಟ್ಟಲಿಲ್ಲ.
ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸಿದ ಸ್ಥಾನಗಳು ಕೆಳಗಿನ ಕೋಷ್ಟಕದಲ್ಲಿದೆ:
ಚುನಾವಣಾ ವರ್ಷ ಕಾಂಗ್ರೆಸ್ ಗಳಿಸಿದ ಸ್ಥಾನಗಳ ಸಂಖ್ಯೆ
1962 361
1967 283
1971 352
1977 153
1980 351
1984 404
1989 197
1991 244
1996 140
1998 141
1999 114
2004 145
2009 206
1971ರಲ್ಲಿ ಕಾಂಗ್ರೆಸ್ ಇಭ್ಭಾಗವಾಯಿತು. ಆದರೂ, ಅದು ಹಿಂದಿನ ಚುನಾವಣೆಗಿಂತ ಹೆಚ್ಚಿನ ಸ್ಥಾನ ಗಳಿಸಿತು. 1975ರಲ್ಲಿ ಚುನಾವಣಾ ಅಕ್ರಮಕ್ಕಾಗಿ ಜೈಲು ಸೇರಬೇಕಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸ್ವಾತಂತ್ರ್ಯದ ಉಸಿರು ಕಟ್ಟಿಸಲು ಪ್ರಯತ್ನಿಸಿದರು. ಆದರೆ, ಆರೆಸ್ಸೆಸ್ಸಿನ ಪ್ರಯತ್ನದ ಫಲವಾಗಿ ಜನತಾ ಪಕ್ಷ ಉದಯವಾಯಿತು. ಮತ್ತು 1977ರಲ್ಲಿ ನಡೆದ ಚುನಾವಣೆಯಲ್ಲಿ ಮೊತ್ತಮೊದಲ ಬಾರಿಗೆ ಕಾಂಗ್ರೆಸ್‌ನ ಸ್ಥಾನಗಳ ಸಂಖ್ಯೆ 200ಕ್ಕಿಂತ ಕೆಳಗಿಳಿಯಿತು ಮತ್ತು ಮೊತ್ತಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವೊಂದು ಮೂರಂಕಿ ದಾಟಿತು, ಮಾತ್ರವಲ್ಲ ಅಧಿಕಾರವನ್ನೂ ಹಿಡಿಯಿತು. ಆದರೆ, ಜನತಾ ಪಕ್ಷದಲ್ಲಿನ ಒಳಜಗಳದಿಂದ, ಕೇವಲ ಎರಡು ವರ್ಷದಲ್ಲಿಯೇ ಮತ್ತೊಮ್ಮೆ ಚುನಾವಣೆ ಬಂದಿತು ಮತ್ತು ಜನ ಮತ್ತೊಮ್ಮೆ ಕಾಂಗ್ರೆಸ್ಸನ್ನು ಅಧಿಕಾರಕ್ಕೇರಿಸಿದರು. ಅಧಿಕಾರದಲ್ಲಿದ್ದ ಜನತಾ ಪಕ್ಷ ಎರಡಂಕಿ ಸ್ಥಾನಗಳನ್ನಷ್ಟೇ ಹಿಡಿಯಲು ಶಕ್ಯವಾಯಿತು. 1984ರಲ್ಲಿ ಇಂದಿರಾ ಗಾಂಧಿಯವರ ಕೊಲೆಯಾಗಿ, ಅನುಕಂಪದ ಅಲೆಯಿಂದ ಕಾಂಗ್ರೆಸ್ ಹಿಂದೆಂದೂ ಗಳಿಸದಷ್ಟು ಸ್ಥಾನಗಳನ್ನು ಗಳಿಸಿತು. ಎರಡನೇ ಸ್ಥಾನಗಳಿಸಿದ್ದು 30 ಸಂಖ್ಯೆ ತಲುಪಿದ ತೆಲಗು ದೇಶಂ ಪಕ್ಷ! ಆದರೆ, ಆ ನಂತರ ಕಾಂಗ್ರೆಸ್ಸಿನ ಅವನತಿ ಪ್ರಾರಂಭವಾಯಿತು. ಪ್ರತಿಯೊಂದು ಚುನಾವಣೆಯಲ್ಲೂ ಕಾಂಗ್ರೆಸ್ಸಿನ ಸಂಖ್ಯೆ ಇಳಿಮುಖವಾಗುತ್ತಲೇ ಹೋಯಿತು.
ಆದರೆ, 2009ರ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಕಾಂಗ್ರೆಸ್ 206 ಸ್ಥಾನ ಗಳಿಸಿ ರಾಜಕೀಯ ವಿಶ್ಲೇಷಕರು ಹುಬ್ಬೇರಿಸುವಂತೆ ಮಾಡಿತು. ಆದರೆ, ಆ ನಂತರದಲ್ಲಿ ಕಾಂಗ್ರೆಸ್ ಎಡವಟ್ಟುಗಳನ್ನೇ ಮಾಡುತ್ತಾ ಹೋಯಿತು – ಒಂದು ಕಡೆ ಅಸಹಾಯಕರಾದ ಪ್ರಧಾನಿಗಳು, ಇನ್ನೊಂದು ಕಡೆ ಬ್ರಹ್ಮಾಂಡ ಭ್ರಷ್ಟಾಚಾರ. ಇದರ ಪರಿಣಾಮವಾಗಿ ಬೆಲೆಗಳು ಅನಿಯಂತ್ರಿತವಾಗಿ ಏರಿ, ಜನರು ರೋಸಿಹೋಗಿರುವರು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಯುಪಿಎ ಸರಕಾರ ವಿಫಲವಾಗಿಬಿಟ್ಟಿತು. ಇನ್ನೊಂದೆಡೆ, ಯುಪಿಎ ಸರಕಾರದ ವೈಫಲ್ಯವನ್ನೇ ದಾಳವನ್ನಾಗಿಸಿಕೊಂಡ ಗುಜರಾತು ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿಯವರು, ಕಾಂಗ್ರೆಸ್ಸಿನ ಮೇಲೆ ಸಮರವನ್ನೇ ಸಾರಿದರು. ಅವರು ಗುಜರಾತಿನಲ್ಲಿ ಮಾಡಿದ ಅಭೂತಪೂರ್ವ ಅಭಿವೃದ್ಧಿ ದೇಶದ ಎಲ್ಲ ಜನರ ಗಮನ ಸೆಳೆಯಿತು. ಯುಪಿಎ ವೈಫಲ್ಯದಿಂದ ಹತಾಶರಾಗಿದ್ದ ಜನರಿಗೆ ನರೇಂದ್ರ ಮೋದಿಯವರು ಏಕೈಕ ಆಶಾಕಿರಣವಾಗಿ ಕಂಡರು. ಭಾರತೀಯ ಜನತಾ ಪಕ್ಷವು ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಸ್ಥಾನದ ಅಭ್ಯರ್ಥಿಯಾಗಿ ಘೋಷಿಸಿದೆ. ಇಲ್ಲಿಯವರೆಗೂ ನಡೆದಿರುವ ಎಲ್ಲಾ ಚುನಾವಣಾಪೂರ್ವ ಸಮೀಕ್ಷೆಗಳೆಲ್ಲಾ ಭಾರತೀಯ ಜನತಾ ಪಕ್ಷವು 220 ಸ್ಥಾನಗಳಿಗೂ ಹೆಚ್ಚು ಸ್ಥಾನ ಗಳಿಸಬಹುದು ಮತ್ತು ಎನ್.ಡಿ.ಎ ಸರಕಾರ ರಚಿಸುವುದೆಂದು ಹೇಳಿವೆ. ಕಾಂಗ್ರೆಸ್ ಮೊತ್ತ ಮೊದಲ ಬಾರಿಗೆ ಮೂರಂಕಿ ದಾಟುವುದು ಅನುಮಾನವಾಗಿದೆ! ಕರ್ನಾಟಕವನ್ನುಳಿದು ಮತ್ತಾವ ರಾಜ್ಯದಲ್ಲೂ ಕಾಂಗ್ರೆಸ್ ಎರಡಂಕಿಯ ಸ್ಥಾನ ಗಳಿಸದೆಂದು ಸಮೀಕ್ಷೆಗಳು ತಿಳಿಸುತ್ತಿವೆ. ಇಂದೇ ಪ್ರಕಟವಾಗಿರುವ ಎನ್‌ಡಿಟಿವಿ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ 10 ಸ್ಥಾನಗಳಷ್ಟೇ ಲಭಿಸಬಹುದು. ಚುನಾವಣೆ ಹತ್ತಿರವಾದಂತೆ, ಮೋದಿ ಅಲೆ ಪ್ರವಾಹವಾಗಿ, ಕಾಂಗ್ರೆಸ್ ಯಾವ ರಾಜ್ಯದಲ್ಲೂ ಎರಡಂಕಿ ದಾಟದಂತಾದರೂ ಆಶ್ಚರ್ಯವಿಲ್ಲ.
ಚುನಾವಣೆಯಿಂದ ಚುನಾವಣೆಗೆ ಕುಗ್ಗುತ್ತಿರುವ ಕಾಂಗ್ರೆಸ್, ಇದೀಗ ಎರಡಂಕಿಗೇ ತೃಪ್ತಿ ಪಡುವಂತಾದರೆ, ಭಾರತದ ಚುನಾವಣಾ ಇತಿಹಾಸದಲ್ಲೇ ಇದು ಅಭೂತಪೂರ್ವ ದಾಖಲೆಯಾಗಲಿದೆ. ಭಾಜಪವೇನಾದರೂ ಪೂರ್ಣ ಬಹುಮತ ಗಳಿಸಲು ಸಾಧ್ಯವಾದರೆ, ಅದು ಕೂಡಾ ಹೊಸ ದಾಖಲೆಯೇ ಆಗಲಿದೆ – ಮೊತ್ತಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವೊಂದು ಸ್ವಂತ ಬಲದ ಮೇಲೆ ಸರಕಾರ ರಚಿಸುವುದು! ದಿನಗಳೆದಂತೆ ಚುನಾವಣಾ ಕಣ ರಂಗೇರುತ್ತಿದೆ. ಒಟ್ಟಿನಲ್ಲಿ ಒಂದಂತೂ ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಅವಸಾನದ ಹಾದಿಯಲ್ಲಿದೆ. ಕಾಂಗ್ರೆಸ್ ಏನಾದರೂ ಎರಡಂಕಿಯ ಸ್ಥಾನವಷ್ಟೇ ಗಳಿಸಲು ಸಾಧ್ಯವಾಗಿ, ಎರಡು ಚುನಾವಣೆಗಳಷ್ಟು ಸಮಯ ಅಧಿಕಾರದಿಂದ ಹೊರಗುಳಿದುಬಿಟ್ಟರೆ, ಅದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಡಬಹುದು. ಅದು ಪ್ರಾದೇಶಿಕ ಪಕ್ಷವಾಗುವುದೂ ಕಷ್ಟ – ಏಕೆಂದರೆ, ಯಾವ ರಾಜ್ಯದಲ್ಲೂ ಕಾಂಗ್ರೆಸ್ ಇಂದು ಸ್ವಂತ ಬಲದ ಮೇಲೆ ಸರಕಾರ ರಚಿಸುವ ಸ್ಥಿತಿಯಲ್ಲಿಲ್ಲ. ಒಟ್ಟಿನಲ್ಲಿ, ಗಾಂಧೀಜಿಯವರು ಆಶಿಸಿದ “ಕಾಂಗ್ರೆಸ್ ವಿಸರ್ಜನೆ” ಸೋನಿಯಾರಿಂದ ನೆರವೇರಬಹುದು ಎನಿಸುತ್ತಿದೆ!
ಚಿತ್ರ ಕೃಪೆ : http://www.abplive.in




